ಜಿ.ಬಿ. ಜೋಶಿ ಎಂಬ ಮನ್ವಂತರ ಪುರುಷ
Team Udayavani, Mar 15, 2020, 5:58 AM IST
ಕೀರ್ತಿನಾಥ ಕುರ್ತಕೋಟಿ, ದ. ರಾ. ಬೇಂದ್ರೆ ನಡುವೆ ಜಿ. ಬಿ. ಜೋಶಿ
ಒಂದು ಊರಿಗೆ, ಪ್ರದೇಶಕ್ಕೆ ಪ್ರಾಮುಖ್ಯ ಬರಲು ಅಲ್ಲಿಯ ಹವಾಮಾನ, ಪುರಾತನ ಕಟ್ಟಡಗಳು; ಕೃತಿಗಳು, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಥೆ ಮುಂತಾದುವು ಕಾರಣವಾಗಿರುತ್ತವೆ. ಧಾರವಾಡದ ಚರಿತ್ರೆಗೆ ಒಂದು ಅಕಲ್ಪನೀಯ ಗೌರವವನ್ನು ನೀಡಿದ ಮನೋಹರ ಗ್ರಂಥಮಾಲೆ ಎಂಬ ಅನ್ವರ್ಥಕ ಸಂಸ್ಥೆಯನ್ನು ಕಟ್ಟಿದವರು ಜಿ.ಬಿ. ಜೋಶಿ. ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿ ಇಲ್ಲಿಯ ಜನರ ಬಾಯಲ್ಲಿ ಜಿ.ಬಿ. ಜೋಶಿ ಆದರು. ನಮ್ಮಂತಹ ಆತ್ಮೀಯರ, ಗೆಳೆಯರ ಬಾಯಲ್ಲಿ ಇನ್ನಷ್ಟು ಸಂಕ್ಷಿಪ್ತವಾಗಿ ಕೇವಲ ಜೀಬಿಯಾದರು. ನಾಮದಲ್ಲಿ ಹೀಗೆ ಸಂಕ್ಷಿಪ್ತವಾಗುತ್ತ ಹೋಗಿದ್ದರೂ “ನಾಮೆ’ಯಲ್ಲಿ ಬೆಳೆದು ಅವರು ಗಳಿಸಿದ ಕೀರ್ತಿ-ಸ್ನೇಹಗಳು ಧಾರವಾಡದ ಮಟ್ಟಿಗೆ ದೀರ್ಘಕಾಲೀನ ಕೊಡುಗೆಗಳೇ.
ಸಾಹಿತ್ಯ, ರಂಗಭೂಮಿ, ಸಂಗೀತ, ಪತ್ರಿಕೆ, ಪ್ರಕಾಶನ, ಹರಟೆ, ಪ್ರವಾಸ, ಗೆಳೆತನ, ಔದಾರ್ಯ, ಸಾಹಸಗಳಿಗೆ ಅನಾಯಾಸವಾಗಿ ಹೊಸ ಅರ್ಥ, ಆಯಾಮಗಳನ್ನು ಸೃಜಿಸಿದ ಜೀಬಿಯನ್ನು ನೋಡುತ್ತಿದ್ದರೆ ಏಕಕಾಲಕ್ಕೆ ಒಂದು ಮಗು ಹಾಗೂ ಕುಸ್ತೀ ಪೈಲವಾನನನ್ನು ಲಕ್ಷಿಸಿದಂಥ ಆನಂದವಾಗುತ್ತಿತ್ತು. ವ್ಯಾವಹಾರಿಕತೆ, ವ್ಯಾಪಾರಗಳನ್ನು ಸಂಪೂರ್ಣ ಬದಿಗಿಟ್ಟು ಮುಗ್ಧತೆ, ಸರಳತೆಗಳನ್ನು ಅವರಂತೆ ಧಾರಾಳವಾಗಿ ಬಂಡವಾಳವಾಗಿಸಿದ ಬೇರೆಯವರನ್ನು ನಾನು ಕಂಡಿಲ್ಲ.
ಜೀಬಿ ಇದ್ದುದು ಮೆಣಸಿನಕಾಯಿಗಲ್ಲಿಯಲ್ಲಿ. ಅದರ ಪಕ್ಕದ್ದು ಬೇಂದ್ರೆ ಹುಟ್ಟಿದ ಪೋತ್ನಿಸ ಗಲ್ಲಿ. ಅದರ ಈಚೆ ಪಕ್ಕದ್ದು ನಾನಿದ್ದ ಬಾಳಿಕಾಯಿಗಲ್ಲಿ. ನಾವು ಆಗಾಗ ಸಂಧಿಸುತ್ತಿದ್ದುದು ಮಧ್ಯದ ರವಿವಾರಪೇಟೆಯಲ್ಲಿ. ಮಳೆ, ಬಿಸಿಲು, ನೆರಳು, ಬೆಳಗು, ಬೈಗು ಎಲ್ಲವೂ ಜೀಬಿಗೆ ಏಕರೂಪ, ಏಕಸಮಾನ. ತಲೆತುಂಬ ಬೆಳ್ಳಿಗೂದಲು, ಒಂದು ಕರೇ ಟೊಪ್ಪಿಗೆ, ಖಾದಿಯ ಧೋತರ, ಲಂಡಂಗಿ, ಕೊಡೆ-ಕೋಲು; ಥಂಡಿಯ ದಿನಗಳಲ್ಲಿ ಕೊರಳಲ್ಲಿ ಸುತ್ತಿದ ಒಂದು ಮಫ್ಲರ್, ಅರೆಸವೆದ ಕಾಲ್ಮರಿ ಜೀಬಿಯನ್ನು ಕಡೆತನಕ ಕಾಪಾಡಿದುವು. ಇಂಥ ಒಬ್ಬ ಸಾಮಾನ್ಯ ತನ್ನ ಕಣ್ಣಿಗೆ ಕಂಡ ಎಲ್ಲ ಓದುಗರನ್ನು, ಸಾಹಿತಿಗಳನ್ನು, ರಂಗಕಲಾವಿದರನ್ನು, ಸಂಗೀತಕಾರರನ್ನು ಅಸಾಮಾನ್ಯ ವೇದಿಕೆಯ ಮೇಲೆ ಕೂಡಿಸಿ ಸತ್ಕರಿಸಿದ್ದು ಪವಾಡವೇ.
ಮೊದಲ ದಿನಗಳಲ್ಲಿ ಆಲೂರ ವೆಂಕಟರಾವ, ಬೇಂದ್ರೆ, ಬೆಟಗೇರಿ, ಚುಳಕಿ, ಶಂ.ಬಾ. ಮುಂತಾದವರ ಪ್ರಾಯೋಗಿಕ ಗರಡಿಯಲ್ಲಿ, ಸೋಲು-ಗೆಲುವುಗಳ ಅವರದೇ ಅಖಾಡದಲ್ಲಿ ಕುಸ್ತಿ ಹಿಡಿದರು; ಅನಿವಾರ್ಯವಾಗಿ ಹತಾಶೆಯ ಕೈಗೋಲು ಹಿಡಿಯಬೇಕಾಗಿ ಬಂತು. ನಂತರದ ದಿನಗಳಲ್ಲಿ ಆ ಎಲ್ಲ ಹಿರಿಯರಿಗೇ ನೆರವಾದರು, ನೆರಳಾದರು. ತಮ್ಮ ಸ್ವಂತದ ಪ್ರಕಾಶನ ಮಾಲೆಯನ್ನು ಹುಟ್ಟುಹಾಕಿ ಹಗಲಿರುಳು ಶ್ರಮಿಸಿದರು. ನಾನು ಅವರನ್ನು ಮೊದಲ ಸಲ ಭೆಟ್ಟಿಯಾಗಿದ್ದು ಅವರ ಇಂಥ ಏರುದಿನಗಳಲ್ಲಿ.
ಆರಂಭದಲ್ಲಿ ಹಿಂದೀ ಸಾಹಿತ್ಯದ ಕಡೆಗೆ ವಾಲುತ್ತಿದ್ದ ನನ್ನನ್ನು ಕನ್ನಡ ಸಾಹಿತ್ಯ, ಸಂಪರ್ಕಗಳ ರಕ್ಷಕ ಕೊಂಡಿಯಾಗಿ ಕಾಪಾಡಿದ್ದು 1964ರ ಮೊದಲಲ್ಲಿ ಪ್ರಕಟವಾದ ನನ್ನ ನೀನಾ ಕವನಸಂಗ್ರಹ. ಪತ್ರಿಕೆಗಳಲ್ಲಿ ಬಂದ ಪ್ರಶಂಸೆಗಳ ಜೊತೆಗೆ ಪ್ರಮುಖ ಲೇಖಕರು, ವಿಮರ್ಶಕರು ಬರೆದ ಪತ್ರಗಳು ನನ್ನನ್ನು ಹುರಿದುಂಬಿಸಿದ್ದುವು. ಈ ಸಂದರ್ಭದಲ್ಲಿ ಒಂದು ಸಂಜೆ ಧೈರ್ಯ ಮಾಡಿ ಮನೋಹರ ಅಟ್ಟದ ಮೆಟ್ಟಿಲು ಹತ್ತಿದೆ. ಬಾಗಿಲು ತೆರೆದೊಡನೆ ಎಡಬದಿಗೆ ಒಂದು ಕುರ್ಚಿಯಲ್ಲಿ ನಾನು ದಿನವೂ ನೋಡುತ್ತಿದ್ದ ಜೀಬಿ ಕುಳಿತಿದ್ದಾರೆ. ಅವರ ಎದುರುಗಡೆ, ಗೋಡೆಗೆ ಆತುಕೊಂಡು ಬಾಯಿತುಂಬ ಎಲೆಅಡಿಕೆ ಮೆಲ್ಲುತ್ತ ಆಡ್ಯತೆಯಿಂದ, ಎಲೆರಸ ಸಿಡಿಸುತ್ತ ಮಾತಾಡುತ್ತಲೇ ಇದ್ದ ಕೀರ್ತಿನಾಥ ಕುರ್ತಕೋಟಿ. ನನ್ನನ್ನು ನೋಡಿದೊಡನೆ ಜೀಬಿ, ಹಲವು ವರ್ಷಗಳಿಂದ ಬಲ್ಲವರಂತೆ, “”ಬರ್ರಿ ಪಟ್ಟಣಶೆಟ್ಟಿ. ನಿಮ್ಮ ನೀನಾ ಏನಂತಾಳು?” ಎಂದರು. ನನಗೆ ದಿಗಿಲು. ನೀನಾ ಇವರಿಗೆ ಹೇಗೆ ಗೊತ್ತು? ಕುರ್ತಕೋಟಿಯವರು ಮುಗುಳುನಗುತ್ತ ಎದ್ದರು, ಹೊರ-ತಗಡಿನ ಮೇಲೆ ತಾಂಬೂಲ ಉಗುಳಿ ಬಂದು, ನನ್ನ ಪಕ್ಕದಲ್ಲೇ ಕುಳಿತರು, ಹೆಗಲ ಮೇಲೆ ಕೈಯಿಡುತ್ತ, “”ಅವರು ಹಂಗ ಕೇಳೂ ಪದ್ಧತಿ ಅದು. ನಿಮ್ಮ ಪುಸ್ತಕ ಬಂದ—ದಲ್ಲ, ನೀನಾ ಅಂತ, ಅದರ ಮ್ಯಾಲ ಪ್ರೀತಿ ಮಾಮಾಗ” ಅಂದರು.
ಭಯ-ಅಭಯಗಳು ಲಜ್ಜೆಲಾಳಿಯಾಡಿ ನನ್ನ ಹೊಸ ಕಾವ್ಯನಾಟಕಕ್ಕೆ ಮುನ್ನುಡಿ ಬರೆದಂತಿತ್ತು ಆ ಪ್ರಸಂಗ. ಎಷ್ಟೊಂದು ವಿಷಯಗಳು, ಮುಖಗಳು, ಆಪ್ತತೆಗಳು ಒಮ್ಮೆಲೇ ಮುಖವಾಡ ಕಿತ್ತೆಸೆದು ಅನುಬಂಧದ ಆಮಂತ್ರಣ ನೀಡಿದ್ದುವು. ಜೀಬಿಗೆ ಕೊಡಲೆೆಂದು ಹೆಸರು ಬರೆದು ತಂದಿದ್ದ ನೀನಾ ಬಗಲಚೀಲದಿಂದ ಹೊರತೆಗೆದೆ. ಕೊಟ್ಟೆ. ನಗುತ್ತ ಕೈ ಕುಲುಕಿದರು. ಕುರ್ತಕೋಟಿ ಅಲ್ಲಿರುವುದು ಮೊದಲು ತಿಳಿದಿರಲಿಲ್ಲ. ಬೇರೆ ಪ್ರತಿ ತೆಗೆಯತೊಡಗಿದೆ. “”ಬ್ಯಾಡ ಬ್ಯಾಡ. ಇದೊಂದ— ಸಾಕು. ಇದನ್ನ ಅಂವಾ ಮದಲ ಓದತಾನ, ನಾ ಆಮ್ಯಾಲ ಓದತೇನಿ” ಅಂದರು ಜೀಬಿ.
“”ಹಂಗೇನಿಲ್ಲ, ನೀನಾ ನನಗೂ ಬೇಕು” ಎಂದರು ಕೀರ್ತಿ. ನನ್ನನ್ನು ಹಲವು ಬಗೆಯ ರಜ್ಜುಬಂಧನದಲ್ಲಿ ಬಿಗಿದಂಥ ಅನಿರೀಕ್ಷಿತ ಬೆಳವಣಿಗೆ ಇದು. ಕೀರ್ತಿಯವರಿಗೂ ಕೊಟ್ಟೆ. ಆ ತೃಪ್ತಿ ಈಗಲೂ ಕೀರ್ತಿಪ್ರದವಾದ ಸ್ಮರಣವೇ.
ಈ ಮಧ್ಯೆ ಕೆಲಸದ ಹುಡುಗನಿಗೆ ಜೀಬಿ ಯಾವಾಗ ಹೇಳಿದ್ದರೋ ಗೊತ್ತಿಲ್ಲ, ನಮಗಾಗಿ ಅಮಿನಗಡ ಅಂಗಡಿಯಿಂದ ಹಚ್ಚಿದವಲಕ್ಕಿ, ಕಬ್ಬಿನಹಾಲು ಬಂದಿದ್ದುವು. ಇವೆರಡೂ ಜೀಬಿಯ ನಾಲಗೆ ಮತ್ತು ಎದೆಯ ಜೀವರಸಗಳಾಗಿದ್ದುವು. ನಂತರದ ದಿನಗಳಲ್ಲಿಯೂ ನಾನು ಇವುಗಳ ಸ್ವಾದ ಅನುಭವಿಸಿದ್ದೇನೆ. ಇಂಥ ನಿರ್ವಂಚಕ, ವಿರಳ ಆತಿಥ್ಯ, ಸ್ನೇಹ, ಪ್ರೇಮಸಂಬಂಧಗಳನ್ನು ಜೀಬಿ ಬದುಕಿರುವವರೆಗೂ ತಮ್ಮ ಮಕ್ಕಳಂತೆಯೇ ಪೋಷಿಸಿದರು.
ಸ್ವತಃ ಲೇಖಕ, ವಿಮರ್ಶಕರಾಗಿದ್ದ ಜೀಬಿ ತಮ್ಮ ವ್ಯಕ್ತಿತ್ವದ ಈ ಭಾಗವನ್ನು ಎಂದೂ ಮುಂಚಾಚಲಿಲ್ಲ. ಶ್ರೀರಂಗ, ಮುಗಳಿ, ಬೇಂದ್ರೆ, ಗೋಕಾಕ, ಬೆಟಗೇರಿ, ಕಡೆಂಗೋಡ್ಲು ಶಂಕರಭಟ್ಟ, ದೇವುಡು, ರಾಜರತ್ನಂ, ಕೆ.ವಿ. ಅಯ್ಯರ್, ಮಧುರಚೆನ್ನ, ಚಿತ್ತಾಲ, ಶಾಂತಿನಾಥ, ಎಂ.ಕೆ. ಇಂದಿರಾ, ಕಾರ್ನಾಡ, ಕಂಬಾರ ಮುಂತಾದ ಅಸಂಖ್ಯ ಪಿಲ್ಲರ್‌ಗಳನ್ನು ತಮ್ಮ ಸ್ವಂತದ ಮನೋಹರ ಮೈದಾನದಲ್ಲಿಯೇ ಸ್ಥಾಪಿಸಿದ್ದರೂ, ಅವುಗಳ ಮೇಲೆ ತಮ್ಮ ಪ್ರತಿಷ್ಠೆಯ ಕಟ್ಟಡವನ್ನು ಕಟ್ಟಿಕೊಳ್ಳಲಿಲ್ಲ. ದೇಹದ ಸಾಮರ್ಥ್ಯದಂತೆಯೇ ಬರವಣಿಗೆಯ ಶಕ್ತಿಯೂ ಇತ್ತು, ಆದರೂ, ಅನಾಮಧೇಯ ಲೇಖಕರಾಗಿಯೇ ಉಳಿಯಬಯಸಿದರು. ಉಳಿದವರಿಗೆ ಅವರವರ ಕಟ್ಟಡಗಳು ಮೇಲೇಳಲು ಮಾತ್ರ ನಿಃಸಂಶಯ ವಾಗಿ ಸಹಕರಿಸಿದರು.
ಜಡಭರತನ ಮೌನ
ಜಡಭರತ ಎಂಬ ಹೆಸರಿನಲ್ಲಿ ಬರೆದಾಗಲೂ ನಾಟ್ಯಗೌರವ ತುಂಬಿದ ಅಂತರಾರ್ಥದ ಭರತಮುನಿಯೂ ಇದ್ದ, ಪ್ರಾಪಂಚಿಕ ಆಸಕ್ತಿಗಳಿಂದ ದೂರವಿರಬಯಸಿದ, ಭಾಗವತದಲ್ಲಿ ಉಲ್ಲೇಖೀತ ಒಬ್ಬ ಯೋಗಿಯೂ ಇದ್ದ; ನಿಶ್ಚೇತನ, ಕಿವುಡ, ಮೂಕ ಎಂಬ ದೂರಾರ್ಥಗಳೂ ಇದ್ದುವು. 89 ವರ್ಷ ಬದುಕಿದ್ದ ಜೀಬಿಯ 30-40 ವರ್ಷಗಳನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ನನ್ನ ಮೊದಲ ಭೆಟ್ಟಿಯ ನಂತರ ಅವರು ನನ್ನೊಂದಿಗೆ ಆತ್ಮೀಯತೆಯ ಏಕವಚನದ ಬಾಗಿಲನ್ನು ತೆರೆದಿಟ್ಟರು. ಆಗಲೆಲ್ಲ ಪ್ರತಿಯೊಂದು ಸಂದರ್ಭದಲ್ಲಿಯೂ ನಾನು ಕಂಡದ್ದು ಒಬ್ಬ ಶಾಂತಮೂರ್ತಿಯನ್ನು. ಯಾರ ಯಾವುದೇ ಪ್ರಶ್ನೆಗೂ, ಸಮಸ್ಯೆಗೂ ಅವರಲ್ಲಿದ್ದ ಉತ್ತರವೆಂದರೆ ಸಹಜದ ಮುಗುಳುನಗೆ ಮತ್ತು ನಿಷ್ಕಲಂಕ ಪ್ರೀತಿಪೂರ್ಣ ಆತಿಥ್ಯ ಮಾತ್ರ.
ಒಮ್ಮೆ ಚಂಪಾ, ರಾಜಶೇಖರ ಕೋಟಿ, ಸಂಪಿಗೆ ತೋಂಟದಾರ್ಯ ಮೊದಲಾದ ಕೆಲವರು ಸೇರಿಕೊಂಡು ಜೀಬಿಯವರು ನಿರುತ್ತರರಾಗುವಂಥ ಒಂದು ತಥ್ಯವನ್ನು ಸಾರ್ವಜನಿಕಗೊಳಿಸಿದೆವು. ಒಂದು ನಿರ್ದಿಷ್ಟ ಜಾತಿ-ಧರ್ಮಕ್ಕೆ ಪ್ರಚಾರ, ಪ್ರಾಶಸ್ತ್ಯ, ಪ್ರಕಾಶನ ಕೃಪೆ ನೀಡಿದ ಸತ್ಯಾರೋಪ ಅದಾಗಿತ್ತು. ಆಗಿನ ಸಾಹಿತ್ಯಲೋಕದಲ್ಲಿ ಬಹುಚರ್ಚಿತವಾದ ಈ ವಿಷಯದ ಬಗ್ಗೆ ಜೀಬಿ ಅಕ್ಷರಶಃ ಜಡಭರತರಾಗಿಯೇ ಉಳಿದರು, ಅಂಥ ಮನಃಸ್ಥಿತಿಯಲ್ಲಿಯೂ ಅವರು ಮಿರ್ಚಿ, ಭಜಿ, ಚಾ ಫಳಾರ ತರಿಸಿ ನಮ್ಮ ಸಂದೇಹಗಳಿಗೆ ಮೌನವಾಗಿಯೇ ಅನಾಮಧೇಯನ ಕಡೆಗೆ ಬೊಟ್ಟು ಚಾಚಿದ್ದರು. ನುಡಿಯಹೋದವರು ಜಡಭರತನ ಬಂಧುಗಳಾಗಿದ್ದೆವು. ಆಗ ನಾನು ಕೇಳಿದೆ, “”ಇಷ್ಟು ಬಹಿರಂಗವಾಗಿ ಆಪಾದನೆ ಮಾಡಿದಾಗ ಯಾಕೆ ಸುಮ್ಮನ— ಅದೀರಿ?” ಜೀಬಿ ನಿರಾತಂಕವಾಗಿ ಹೇಳಿದರು, “”ಎಲ್ಲಾ ಮಾತು ನೀವ— ಕಸಗೊಂಡಾಗ, ನಾ ಬ್ಯಾರೆ ಏನ ಮಾತಾಡಬೇಕು ಹೇಳ?” ಇದಕ್ಕಿಂತ ಉದ್ದದ ಸಂವಾದಗಳನ್ನು ಬಹುಶಃ ತಮ್ಮ ನಾಟಕದ ಪಾತ್ರಗಳಲ್ಲಿ ಮಾತ್ರ ತುಂಬಿದ ಜೀಬಿ ಸ್ವಂತದ ಬದುಕಿನಲ್ಲಿ ಎಂದೂ ಹೆಚ್ಚು ಮಾತಾಡಲೇ ಇಲ್ಲ.
ಕದಡಿದ ನೀರು ಜೀಬಿಯ ಕೃತಿಚೌರ್ಯದ ನಾಟಕ ಎಂಬುದು ಇದಕ್ಕಿಂತ ಭಿನ್ನವಾದ ಮತ್ತೂಂದು ಪ್ರಸಂಗ. ಮುಂಬಯಿಯ ದಿನಪತ್ರಿಕೆಯಲ್ಲಿ ವಸಂತ ಕವಲಿ, ನಂತರ “ತರಂಗ’ದಲ್ಲಿ ಸುಮತೀಂದ್ರ ನಾಡಿಗ, ದಿವಸ್ಪತಿ ಹೆಗಡೆ, ಸಂತೋಷಕುಮಾರ ಗುಲ್ವಾಡಿ ಪ್ರಕಟಿಸಿದಾಗಲೂ ಕೀರ್ತಿ ಸಮೇತ ಜಡಭರತರು ತಮ್ಮ ಎಂದಿನ ಮಹಾಮೌನದೊಂದಿಗೆ ನಿಗೂಢವಾಗಿಯೇ ವರ್ತಿಸಿದರು.
ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ, ಜೀಬಿ, ನಾನು ಒಂದು ರವಿವಾರ ಬೆಳಗ್ಗೆ ಮನೋಹರ ಅಟ್ಟದಲ್ಲಿ ಮಾತಾಡುತ್ತ ಕುಳಿತಿದ್ದೆವು. ಚಾ-ಭಜಿ ಸಮಾರಾಧನೆಯ ನಡುವೆಯೇ ಸೂತ್ರಧಾರ ಜೀಬಿ, ಒಮ್ಮೆಲೇ ನಾಂದಿ ಹಾಡಿದರು.
“”ಕಾರಂತರ, ಅದು ಹೌದೋ ಅಲ್ಲೋ ಇಂವನ್ನ ಕೇಳಿ ಬಿಡಿರಿ” ಅಂದರು. ನನಗೆ ಗಾಬರಿ. ಏನೋ ಅಪರಾಧ ಮಾಡಿದ್ದಂಥ ಭಾವ. ಭಜಿ ಗಬಕ್ಕನೇ ನುಂಗಿದೆ, “”ಅಂಥಾದ್ದೇನ ಮಾಡೇನ್ರೀ ಜೀಬಿ?” “”ಹಂಗಲ್ಲೋ, ಆ ನಾಟಕಾ ನೀನ— ಕಲಿಸೀ ಅಂತ ನನ್ನ ಮಗಳ ಹೇಳಾಳ” ಅಂದರು. ಹಾಗಿದ್ದರೆ ಇದು ನಾನು ಭಾವಿಸಿದಂತಲ್ಲ, ನನಗೆ ಸ್ವಲ್ಪ ಜೀವ ಬಂತು. ಮನೋಹರ ಪ್ರಹಸನ ಆರಂಭವಾಗಿಬಿಟ್ಟಿತ್ತು¤. ನವರೂಪಕ. ದೃಶ್ಯ ಬದಲಾಯಿತು. ಕಾರಂತರು ಪ್ರವೇಶಿಸಿದರು, “”ನೀವು ಆಷಾಢ್ ಕಾ ಏಕ್ ದಿನ್ ಓದೀರೆಲ್ವಾ…” ಅಂದರು. ತಕ್ಷಣ ಜೀಬಿ, “”ಅಲ್ಲೋ, ಅಂವ ಕಲಿಸ್ಯಾನಂತ ನಾ ಹೇಳತೇನಿ—, ಓದೀಯನ— ಅಂತ ಕೇಳತೀರೆಲ್ಲ?”
ಈಗ ನನ್ನ ಎಂಟ್ರಿ. “”1958ರಲ್ಲಿ ಅದಕ್ಕ ಪ್ರಶಸ್ತಿ ಬಂದ ಕೂಡಲೆೇ ಓದಿದ್ದೆ. ಈಚೆಗೆ ಮೂರು ವರ್ಷ ವಿದ್ಯಾರ್ಥಿಗಳಿಗೆ ಕಲಿಸೇನಿ” ಅಂದೆ. ಕಾರಂತರು, “”ಈಗ ಅದರ ಅನುವಾದ ನೀವು ಮಾಡಬೇಕು. ನಾನು ರಾಕೇಶ್ ಅವರಿಗೆ ಹೇಳೀದೇನೆ. ಸುಬ್ಬಣ್ಣ ಅದನ್ನ ಹೆಗ್ಗೊàಡದಲ್ಲಿ ಸ್ಟೇಜ್ ಮಾಡಿಸೋದೂಂತ ಆಗಿದೆ” ಅಂದರು.
“”ಅದನ್ನು ರಂಗಕ್ಕೆ ತಂದ ಮೇಲೆ, ಪ್ರಕಟ ಮಾಡಬೇಕು ಅಂತನೂ ಅಂದುಕೊಂಡಿದ್ದೆೇನೆ” ಎಂದು ಸುಬ್ಬಣ್ಣ, ಮಂಗಳಾಚರಣ ಹೇಳುವಾಗ ಚಾ ಮುಗಿದಿತ್ತು. ಸೂತ್ರಧಾರರ ಮೌನ ನಗೆಯ ಹಿನ್ನೆಲೆಸಂಗೀತ ಸುಸೂತ್ರ ಸಾಗಿತ್ತು. ಮುಂದೆ, ನಾನು ಆಷಾಢದ ಒಂದು ದಿನ ಮಾಡಿಕೊಟ್ಟೆ. ಅದು ನನ್ನ ಮೊದಲ ಅನುವಾದ. ಅನುವಾದ ಕ್ಷೇತ್ರದಲ್ಲಿ ನನಗೆ ಮಹತ್ತರ ಎತ್ತರ ನೀಡಿದ ಕೃತಿ. ಅದಕ್ಕೆ ಕಾರಣರಾದ ಅಂದಿನ ಮೂವರು ಪ್ರಧಾನ ಪಾತ್ರಗಳನ್ನು ಮರೆಯಲಾರೆ.
ಜೀಬಿ ಕನಸುಣಿ ತಮ್ಮ ನೆನಪುಗಳನ್ನು, ಕನಸುಗಳನ್ನು ಕತೆಯಾಗಿಸುವ ಲೇಖಕ. ಪ್ರಭಾವಿ ಸಂಘಟಕ, ಹರಟೆಗಾರ. ಆದರೆ, ಒಳ್ಳೆಯ ಭಾಷಣಕಾರರಲ್ಲ. ಒಮ್ಮೆ ಕಲಬುರಗಿಯಲ್ಲಿ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ ಒಂದು ವಿಚಾರಸಂಕಿರಣಕ್ಕೆ ಇಬ್ಬರೂ ಕೂಡಿಯೇ ಹೋಗಿದ್ದೆವು. ಸೊಗಸು ಹರಟೆಗಾರ ಜೀಬಿ ಮರುದಿನದ ವಿಚಾರಗೋಷ್ಠಿಯಲ್ಲಿ 6-7 ನಿಮಿಷ ಮಾತ್ರ ಮಾತಾಡಿದ್ದು, ಅದೂ ಬರೆದು ತಂದಿದ್ದುದನ್ನು ಸಹ ಸರಿಯಾಗಿ ಓದದೆ, ತಡವರಿಸಿದಂತೆ ಮಾಡಿದ್ದು ಮಾತ್ರ ನನಗೆ ಬೇಸರವಾಗಿತ್ತು.
ಏನೇ ಆಗಿರಲಿ, ಜೀಬಿ ಅದ್ಭುತ ನೆನಪುಗಳ ಮಹಾ ಹಗೇವು. ಅವರನ್ನು ಕೇಳುತ್ತ, ಕೇಳಿಸಿಕೊಳ್ಳುತ್ತ ಬರೆದುಕೊಳ್ಳಲು ಸಾಧ್ಯವಾಗಿದ್ದರೆ ಎಷ್ಟೋ ಕಥಾಸಂಪುಟಗಳು ಖೋ ಕೊಟ್ಟು “ಹುತೂತು’ ಆಡಬಹುದಿತ್ತು. ಇಂಥ ಜೀಬಿಯನ್ನು ಪ್ರೀತಿಸುವುದು, ಅವರ ಪ್ರೀತಿಗೆ ಪಾತ್ರರಾಗುವುದು ಕೂಡ ಕಲಾಸಕ್ತರ ಭಾಗ್ಯಭಾಗವೇ.
ಸಿದ್ಧಲಿಂಗ ಪಟ್ಟಣಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.