ಗಬ್ಬೂರು ಗೋಪುರ ಗ್ರಾಮ,ಎರಡನೆಯ ಹಂಪಿ
Team Udayavani, Jul 21, 2019, 5:51 AM IST
ಬಬ್ರುವಾಹನನ ಮಣಿಪುರ, ಗೋಪುರಗಳ ನಾಡು, ಎರಡನೆಯ ಹಂಪೆ, ದೇವಾಲಯಗಳ ಬೀಡು ಎಂಬಿತ್ಯಾದಿ ಹೆಗ್ಗಳಿಕೆಗೆ ಹೆಸರಾದ ಪಾತ್ರವಾದ ರಾಯಚೂರಿನ ದೇವದುರ್ಗ ತಾಲ್ಲೂಕಿನ ಗಬ್ಬೂರಿನ ಇತಿಹಾಸದ ಬಗ್ಗೆ ಕೇಳಿದ್ದೆ; ಆದರೆ ಕಣ್ಣಾರೆ ನೋಡಿರಲಿಲ್ಲ. ಅಷ್ಟೇನೂ ಕುತೂಹಲವೂ ನನ್ನಲ್ಲಿರಲಿಲ್ಲ. ಗಬ್ಬೂರಿಗೆ ಎರಡು ಸಲ ಹೋಗಿದ್ದೆ.
ಆಗಲೇ ನನ್ನ ಚಿತ್ತ ಗಬ್ಬೂರಿನ ಗತವೈಭವ ಸಾರುವ ಸ್ಮಾರಕಗಳತ್ತ ನೆಟ್ಟಿದ್ದು. ಮೊದಲು ವಿದ್ಯಾರ್ಥಿಮಿತ್ರ ಮೌನೇಶನ ಮಲ್ಲೇ ದೇವರಗುಡ್ಡ ಗ್ರಾಮದ ಕ್ಷೇತ್ರಕಾರ್ಯವನ್ನು ಮುಗಿಸಿ ಊಟ ಮಾಡಿ ಕೊಂಡು ಮಧ್ಯಾಹ್ನ ಬರದ ನಾಡಿನ ಉರಿಬಿಸಿಲನ್ನು ಲೆಕ್ಕಿಸದೇ ಕ್ಷೇತ್ರ ಕಾರ್ಯಕ್ಕೆ ಗಬ್ಬೂರಿಗೆ ಕಾಲಿಟ್ಟೆ. ನನ್ನ ವಿದ್ಯಾರ್ಥಿ ವೆಂಕಟೇಶ ನನ್ನ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದ. ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವುಳ್ಳ ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠದ ಮಹಾದ್ವಾರದ ಮೂಲಕ ಗಬ್ಬೂರಿನ ಒಳಹೊಕ್ಕೆವು.
ಮೊದಲು ಮೇಲುಶಂಕರ ದೇವಸ್ಥಾನಕ್ಕೆ ತೆರಳಿದೆವು. ಅದು ಭೂಮಿಯಿಂದ ಮೇಲ್ಮಟ್ಟದಲ್ಲಿ ಬೃಹತ್ತಾದ ಕಲ್ಲುಗಳಿಂದ ಕಟ್ಟಿದ ದೇವಾಲಯ. ದಾಟಲು ಸಾಧ್ಯವಾಗದ ದೊಡ್ಡದಾದ ಕಲ್ಲಿನ ಹೊಸ್ತಿಲನ್ನು ಕಷ್ಟಪಟ್ಟು ದಾಟಿದೆವು. ಹುಲಿಮನೆ ಆಟವಾಡುತ್ತ ದೇವಸ್ಥಾನದ ಒಳಗಡೆ ಇದ್ದ ಜನ ನಮ್ಮನ್ನೇ ದಿಟ್ಟಿಸಿ ನೋಡಿ ಯಾರೋ ಹುಡುಗರು ಬಂದಿರಬೇಕು ಎಂದು ಸುಮ್ಮನಾದರು. ಅವರ ಆಟಕ್ಕೆ ನಾವು ಭಂಗವನ್ನುಂಟು ಮಾಡಲಿಲ್ಲ. ಗರ್ಭಗುಡಿಯ ಒಳ ಹೋಗಿ ಕತ್ತು ಮೇಲೆತ್ತಿ ನೋಡಿದೆ. ಭವ್ಯ ಆಕಾರದ ಛತ್ತನ್ನು ಕೆತ್ತಿದ ಶಿಲ್ಪಕಲೆಯನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದೇ ಕತ್ತು ಕೆಳಗಿಳಿಸಿ, ದೇವರಿಗೆ ಕೈಮುಗಿದು ಹೊರಬಂದೆ. ದೇವಸ್ಥಾನದ ಮುಂದಿರುವ ಕಪ್ಪು ಶಿಲೆಯ ಶಾಸನವನ್ನು ಸಾಲಾಗಿ ಜೋಡಿಸಿ ನಿಲ್ಲಿಸಿರುವ ಶಿಲ್ಪಗಳನ್ನು ಹಾಗೂ ನಕ್ಷತ್ರಾಕಾರದ ಗತಕಾಲದ ಬಾವಿಯನ್ನು ನೋಡಿ ಗಾಬರಿಯಾದೆ! ಊರ ಚರಂಡಿಯ ನೀರು ಬಾವಿಗೆ ಸೇರುವುದನ್ನು ಕೇಳಿ ಬೇಜಾರಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಏಳು ಬಾವಿ ಬಸವಣ್ಣ ದೇವಸ್ಥಾನದ ಕಡೆಗೆ ಬಂದೆವು. ಒಂದೆಡೆ ಕೂಡಿದ ಏಳುಬಾವಿಗಳನ್ನು ಹಾಗೂ ಅದರ ಪಕ್ಕದಲ್ಲಿಯೇ ಕಲ್ಲಿನಲ್ಲಿಯೇ ನಿರ್ಮಿಸಿದ ಹಲವಾರು ದೇವಾಲಯಗಳನ್ನು ದೇವಾಲಯದ ಪಕ್ಕದಲ್ಲಿಯೇ ಕಪ್ಪು ಶಿಲೆಯಲ್ಲಿ ಕೆತ್ತಿ ನಿಲ್ಲಿಸಿದ ಶಾಸನಗಳನ್ನು ಹಾಗೂ ಎಲ್ಲೆಂದರಲ್ಲಿ ರಕ್ಷಣೆ ಕಾಣದ ಅಪರೂಪದ ಮೂರ್ತಿಗಳನ್ನು ಕಂಡು, “ಇವೆಲ್ಲವುಗಳ ಸಂರಕ್ಷಣೆ ಯಾರ ಜವಾಬ್ದಾರಿ?’ ಎಂದು ಪಕ್ಕದಲ್ಲಿಯೇ ಇದ್ದ ವೆಂಕಟೇಶನನ್ನು ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ಉತ್ತರಿಸದೇ ಮೌನವಾಗಿ ಬಸವಣ್ಣ ದೇವಸ್ಥಾನದ ಒಳಗಡೆ ಬೃಹದಾಕಾರದ ಬಸವಣ್ಣನ ಮೂರ್ತಿಯ ಮುಂದೆ ನನ್ನನ್ನು ತಂದು ನಿಲ್ಲಿಸಿದರು. ಮೌನವಾಗಿಯೇ ಬಸವನಿಗೆ ಭಾರವಾದ ಮನಸ್ಸಿನಿಂದ ಕೈ ಮುಗಿದೆ.
ದೇವಾಲಯದ ಹಿಂಭಾಗದ ಗೋಡೆಯಲ್ಲಿ ಉಬ್ಬು ಶಿಲ್ಪದ ಪಟ್ಟಿಕೆಯಲ್ಲಿ ಗಜ ಪ್ರಸವಿಸುತ್ತಿರುವ ಉಬ್ಬು ಶಿಲ್ಪ ಕಣ್ಣಿಗೆ ಬಿತ್ತು. ತಾಯಿಯ ಗರ್ಭದಿಂದ ಹೊರಬರುತ್ತಿರುವ ಮರಿಯನ್ನು ಮತ್ತೂಂದು ಸಲಗ ಬಹು ಎಚ್ಚರಿಕೆಯಿಂದ ಕೆಳಗಿಳಿಸುತ್ತಿದೆ. ಪ್ರಸವದ ಬೇನೆಯಿಂದ ನರಳುತ್ತಿರುವ ತಾಯಿ ಸೊಂಡಿಲನ್ನು ಕಚ್ಚಿಕೊಂಡು ನಿಂತಿರುವ ದೃಶ್ಯ ಅದ್ಭುತ ಮತ್ತು ಅವರ್ಣನೀಯ.
ಅಲ್ಲಿನ ದೇವಾಲಯಗಳ ಕಥೆಗಳು ಭಿನ್ನ. ಮಣ್ಣಿನಲ್ಲಿ ಹೂತು ಹೋದ, ಹೆಸರೇ ಗೊತ್ತಿಲ್ಲದ, ಬಾವಲಿಗಳು ಹಾರಾಡುವ ಕತ್ತಲಿನ ಗುಡಿಯ ಒಳಕ್ಕೆ ಹೋದೆವು. ನಿಧಾನವಾಗಿ, ಎದ್ದೇವು-ಬಿದ್ದೇವು ಎಂಬ ಭಯದಿಂದಲೇ ಒಳಹೊಕ್ಕೆವು. ನಿಶಾಚರಿ ಬಾವಲಿಗಳ ಕಾಟ, ಕತ್ತಲಿನ ಆರ್ಭಟಕ್ಕೆ ಹೆದರಿ ಅಲ್ಲಿಂದ ಹೊರಬಂದೆವು. ಕುತೂಹಲ ತಾಳಲಾರದೆ, “ಈ ದೇವಾಲಯ ಮಣ್ಣಲ್ಲಿ ಮುಳುಗಿದ್ದು ಹೇಗೆ?’ ಎಂದು ಪ್ರಶ್ನಿಸಿದೆ. “ಮುಸ್ಲಿಂ ಅರಸರು ದೇವಾಲಯಗಳನ್ನು ನಾಶ ಮಾಡುತ್ತಾರೆ ಎಂಬ ಕಾರಣದಿಂದ ಮಣ್ಣಲ್ಲಿ ಹೂತಿ¨ªಾರೆ’ ಎಂಬ ಉತ್ತರ ಬಂತು.
ಅಗಸಿಯನ್ನು ದಾಟಿ ಮುಂದೆ ಹನುಮಪ್ಪನ ಗುಡಿಗೆ ಕರೆದೊಯ್ದ. ಗುಡಿಯ ಮುಂದೆ ಭವ್ಯವಾದ ಗರುಡಗಂಭ. ಅದರ ಮುಂದೆ ನಾವು ಕುಬjರಾಗಿ ಕಂಡೆವು. ಈ ಗುಡಿಯ ಒಳಗೆ ಯಾರೂ ಹೋಗಲಾರರು ಎಂಬುದನ್ನು ಅರಿತು ಒಳಹೋಗದೇ ಹೊರಗೇ ನಿಂತೇ ಗುಡಿಯ ಹಾಗೂ ಹಾಲುಗಂಬದ ಫೊಟೋವನ್ನು ಕ್ಲಿಕ್ಕಿಸಿಕೊಂಡೆ. ಉರಿ ಬಿಸಿಲನ್ನು ತಾಳಲಾರದೆ ಬೇವಿನ ಕಟ್ಟೆಯ ಮರದ ನೆರಳಲ್ಲಿ ಕುಳಿತ ಜನ, ಇವರು ಯಾರಿರಬಹುದೆಂದು ಭೀರಿ ಭೀರಿ ನೋಡತೊಡಗಿದರು. “ಇವರು ನಿಧಿ ಕಳ್ಳರೇ!’ ಎಂಬ ಅನುಮಾನವೂ ಅವರಿಗೆ ಬಂದಿರಬೇಕು.
ಹಾಗೇ ಮುಂದೆ ಸಾಗುವಾಗ ಸಾಲು ಸಾಲು ಸಂರಕ್ಷಣೆ ಇಲ್ಲದೆ ನೆಲ ಕಚ್ಚುತ್ತಿರುವ ನಾಗರ, ವೇಸರ ಹಾಗೂ ದ್ರಾವಿಡ ಶೈಲಿಯ ಏಕಕೂಟ, ದ್ವಿಕೂಟ, ತ್ರಿಕೂಟ, ಪಂಚಕೂಟದಂತಹ ಅದೆಷ್ಟೋ ದೇವಾಲಯಗಳನ್ನು ನೋಡಿದೆವು. ಕೆಲವಷ್ಟು ದೇವಾಲಯಗಳು ಉತ್ತಮ ಸ್ಥಿತಿಯಲಿದ್ದರೆ, ಇನ್ನುಳಿದವುಗಳ ಅಳಿವಿನ ಸ್ಥಿತಿಯಲ್ಲಿ ದ್ದವು.
ಮುಂದೆ, ಶ್ರೀ ಬೂದಿ ಬಸವೇಶ್ವರ ಮಠಕ್ಕೆ ಬಂದೆ ವು. ಲಿಂಗೈಕ್ಯ ಪೀಠಾಧಿಪತಿಗಳ ಗದ್ದುಗೆಗಳಿಗೆ ಕರ ಮುಗಿದು ಮಠದ ಒಳಕ್ಕೆ ಪ್ರವೇಶಿಸಿದೆವು. ಅತ್ಯಂತ ಉತ್ಸಾಹಿ ಹಾಗೂ ಸಾಮಾಜಿಕ ಕಳಕಳಿಯ ಮಾತೃ ಹೃದಯವುಳ್ಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯರು ಭಕ್ತರೊಂದಿಗೆ ಮಾತಾಡುತ್ತಿದ್ದರು. ನಮ್ಮನ್ನು ಸೌಮ್ಯವಾಗಿಯೇ ಮಾತಾಡಿಸಿದರು. ಗಬ್ಬೂರಿನ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಿದರು. ಅವರ ಅಪಾರ ಜ್ಞಾನ, ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಅವರಿಗಿದ್ದ ಅಪಾರ ಕಾಳಜಿ ಅವರ ಮಾತಿನ ಮೂಲಕ ವ್ಯಕ್ತವಾಗುತ್ತಿತ್ತು.
ಬೃಹದಾಕಾರದ ಹಲವಾರು ದೇವಾಲಯಗಳನ್ನು, ಬದುಕುಳಿದ ಅತೀ ಪುರಾತನ ಬಾವಿಗಳನ್ನು , ಕಪ್ಪು ಶಿಲೆಯಲ್ಲಿ ಕೆತ್ತಲ್ಪಟ್ಟ ಆಳೆತ್ತರದ ಶಿಲಾಶಾಸನಗಳನ್ನು ಬೂದಿ ಬಸವೇಶ್ವರ ಮಠ- ನಿಜಾಮರ ಆಡಳಿತದಲ್ಲಿ ನಿರ್ಮಾಣವಾದ ಪುರಾತನ ಕಾಲದ ಮನೆಗಳನ್ನು, ವಚನಕಾರ ಬಿಬ್ಬಿ ಬಾಚರಸರ ಹಾಗೂ ತತ್ವಪದಕಾರ ಹಪ್ಪಣ್ಣಪ್ಪ ಅವರ ಗದ್ದುಗೆಯನ್ನು, ಹಲವು ಸ್ಮಾರಕಗಳನ್ನು, ಕಲ್ಲಿನ ಮೇಲೆ ಕೊರೆದ ರೇಖಾ ಚಿತ್ರಗಳನ್ನು, ಕಿತ್ತು ಹೋದ ಕೋಟೆ ಗೋಡೆಯನ್ನು ಮೌನ ವಾಗಿ ನೋಡುತ್ತ ಮುಂದೆ ಸಾಗಿದೆವು.
ಹೊತ್ತು ಮುಳುಗುತ್ತಲಿತ್ತು, ಇನ್ನೂ ಸುತ್ತಾಡಬೇಕೆನಿಸಿದ ರೂ ಇನ್ನೊಂದು ಸಲ ಬಂದರಾಯಿತೆಂದು ಊರಿ ನತ್ತ ಪ್ರಯಾಣ ಬೆಳೆಸಿದೆ. ಎಂದಾದರೊಂದು ದಿನ ಹೋಗಿ ಬರುವೆ. ಅಲ್ಲಿಯ ಹಿಡಿ ಮಣ್ಣು ತರುವೆ ನನ್ನ ಅಂಗಳಕೆ ಎನ್ನುವ ವಿದ್ವಾಂಸರ ನುಡಿಯನ್ನು ಮನದಲ್ಲಿಯೇ ನೆನೆದೆ.ಕಣ್ಣ ತುಂಬ ದೇವಾಲಯ,ಶಾಸನ,ಸಮಾಧಿ,ಅಗ್ರಹಾರ,
ಬ್ರಹ್ಮಪುರಿ, ಬಾವಿ,ಕೋಟೆ,ಮಠ,ಪುಷ್ಕರಣಿ, ಮಸೀದಿ,ಈದ್ಗಾ ,ಭಕ್ತಿ,ಪ್ರೀತಿ,ಶಾಂತಿ,
ಸಹಬಾಳ್ವೆಯ ಗೋಪುರಗಳು !
-ಶಿವರಾಜ ಯತಗಲ್