ಗಾಂಧಿ ಬಂದರು ಸಂಭ್ರಮಕ್ಕೆ 85 ವರ್ಷಗಳು
Team Udayavani, Feb 24, 2019, 12:30 AM IST
ಮಹಾತ್ಮಾ ಗಾಂಧೀಜಿಯವರಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಕರ್ನಾಟಕಕ್ಕೆ ಗಾಂಧೀಜಿಯವರು ಮೊದಲ ಭೇಟಿ ಕೊಟ್ಟದ್ದು ಬೆಂಗಳೂರಿಗೆ 1915ರ ಮೇ 8ರಂದು. ಕರ್ನಾಟಕಕ್ಕೆ ಗಾಂಧೀಜಿಯ ಕೊನೆಯ ಭೇಟಿ 1937ರ ಎಪ್ರಿಲ್ 16ರಿಂದ 20ರವರೆಗೆ ನಡೆದಿತ್ತು. ಈ ಸಂದರ್ಭ ಅವರು ಬೆಳಗಾವಿ ಜಿಲ್ಲೆಯ ಹುದಲಿಗೆ ಭೇಟಿ ಕೊಟ್ಟಿದ್ದರು.
ಕರ್ನಾಟಕ ಕರಾವಳಿಯ ಮಂಗಳೂರಿಗೆ ಗಾಂಧೀ ಜಿಯ ಮೊದಲ ಭೇಟಿ 1920ರ ಆಗಸ್ಟ್ 19ರಂದು.ದಕ್ಷಿಣಕನ್ನಡ ಜಿಲ್ಲೆಗೆ ಗಾಂಧೀಜಿ ಕೊನೆಯ ಭೇಟಿ ನೀಡಿದ್ದು 1934ರ ಫೆ. 24ರಿಂದ 27ರ ತನಕ. ಈ ಭೇಟಿಯಾಗಿ ಈಗ 85 ವರ್ಷ ಸಂದಿದೆ. ಇದೇ ಗುತ್ಛಸಂಚಾರದಲ್ಲಿ ಮೈಸೂರಿನಿಂದ ಕರಾವಳಿ ಮಾರ್ಗವಾಗಿ ಉತ್ತರಕರ್ನಾಟಕದಲ್ಲಿ ಮತ್ತು ಜ. 4ರಿಂದ 9ರವರೆಗೆ ಮೈಸೂರು ಪ್ರಾಂತದಲ್ಲಿ ಪ್ರವಾಸ ನಡೆಸಿದರು.
ಇದು ಅಸ್ಪೃಶ್ಯತಾ ನಿವಾರಣೆಯ ಉದ್ದೇಶ ಹೊಂದಿದ ಪ್ರವಾಸವಾಗಿತ್ತು. ಈ ಉದ್ದೇಶಕ್ಕಾಗಿಯೇ ಅವರು ಭಾರತದಾದ್ಯಂತ 1933ರಿಂದ 1936ರವರೆಗೆ ಸಂಚರಿಸಿದರು. ಈ ಯಾತ್ರೆಯನ್ನು ಹರಿಜನ್ ಯಾತ್ರೆ ಎಂದು ಕರೆಯಲಾಗುತ್ತಿತ್ತು.
ಆತ್ಮಶುದ್ಧಿಯ ಚಳವಳಿ
ಗಾಂಧೀಜಿಯವರು ಸ್ವರಾಜ್ಯ ಮತ್ತು ಅರ್ಥಪೂರ್ಣವಾದ ಸ್ವಾತಂತ್ರ್ಯ ಪ್ರಾಪ್ತಿಯಾಗಬೇಕಾದರೆ ಅಸ್ಪೃಶ್ಯತೆಯ ನಿವಾರಣೆಯು ಮೊದಲಿಗೆ ಆಗಬೇಕೆಂದು ಮನಗಂಡಿದ್ದರು. ಸವರ್ಣೀಯರ ಹೃದಯಪರಿವರ್ತನೆಯ ಮೂಲಕ ಎಲ್ಲರನ್ನೂ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ನಮ್ಮವರೆಂದು ಒಳಗೊಳ್ಳುವಂತಹ ಆತ್ಮಶುದ್ಧಿಯ ಚಳವಳಿಯನ್ನು ಗಾಂಧೀಜಿ ಆರಂಭಿಸಿದರು.
65ರ ಹರೆಯದಲ್ಲಿ ಮಿಂಚಿನ ಸಂಚಾರ
85 ವರ್ಷಗಳ ಹಿಂದೆ 65ರ ಹರೆಯದ ಗಾಂಧೀಜಿ ಸುಳ್ಯ, ಪುತ್ತೂರು, ಬಂಟ್ವಾಳ, ಮೂಲ್ಕಿ, ಉಡುಪಿ, ಕುಂದಾಪುರಗಳಿಗೆ ನೀಡಿದ್ದ ಮೊದಲ ಹಾಗೂ ಕೊನೆಯ ಭೇಟಿಯಾಗಿತ್ತು. ಮಂಗಳೂರಿಗೆ ಆ ಮೊದಲು 1920 ಮತ್ತು 1927ರಲ್ಲಿ ಭೇಟಿ ನೀಡಿದ್ದ ಕಾರಣ ದಕ್ಷಿಣಕನ್ನಡ ಜಿಲ್ಲೆಗೆ ಅವರ ಮೂರನೆಯ ಹಾಗೂ ಕೊನೆಯ ಭೇಟಿ.
1934ರ ಫೆ. 22ರಂದು ಗಾಂಧೀಜಿ ತಮಿಳುನಾಡಿನ ಪ್ರವಾಸ ಮುಗಿಸಿ ರೈಲಿನಲ್ಲಿ ಮೈಸೂರನ್ನು ತಲುಪಿ ಕೊಡಗಿಗೆ ಪ್ರಯಾಣ ಬೆಳೆಸಿದರು. ಕೊಡಗು ಯಾತ್ರೆಯನ್ನು ಪೂರೈಸಿಕೊಂಡು 24ರ ಬೆಳಗ್ಗೆ ಬೇಗ ಮಡಿಕೇರಿಯಿಂದ ದಕ್ಷಿಣ ಕನ್ನಡದ ಕಡೆಗೆ ಕಾರಿನಲ್ಲಿ ಹೊರಟರು. ದಕ್ಷಿಣಕನ್ನಡದ ವತಿಯಿಂದ ಸಂಪಾಜೆಯಲ್ಲಿ ಸ್ವಾಗತಿಸಲಾಯಿತು. ಸಂಪಾಜೆ, ಸುಳ್ಯದಲ್ಲಿ ಜನರಿಂದ ನಿಧಿಯನ್ನು ಸ್ವೀಕರಿಸಿ ಪುಟ್ಟ ಸಂದೇಶಗಳನ್ನು ನೀಡಿ ಪುತ್ತೂರನ್ನು ತಲುಪಿದರು. ಅಲ್ಲಿನ ಪ್ರಸಿದ್ಧ ವೈದ್ಯ ಡಾ| ಸುಂದರ ರಾಯರ ಮನೆಗೆ ಭೇಟಿ ನೀಡಿ ತುಸು ವಿಶ್ರಾಂತಿ ಪಡೆದರು. ಪುತ್ತೂರನ್ನು ಅರ್ಧಗಂಟೆ ಬೇಗ ತಲುಪಿದ್ದ ಕಾರಣ ಅವರು ಬೆಳಗ್ಗೆಯೇ ದಲಿತರ ಕೇರಿಯನ್ನೂ ಸಂದರ್ಶಿಸಿದರು. ಬಳಿಕ ಪ್ರವಾಸಿ ಬಂಗ್ಲೆಯ ಪರಿಸರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಜನರು ಇದ್ದರು. ಮಧ್ಯಾಹ್ನ 2.30ಕ್ಕೆ ಮಂಗಳೂರಿನತ್ತ ಪ್ರಯಾಣ ಮುಂದುವರೆಸಿದರು. ಬಂಟ್ವಾಳದಲ್ಲಿ ಸಂದೇಶವನ್ನಿತ್ತು ಮಂಗಳೂರು ತಲುಪಿದರು.
ಅಂದು ಮಂಗಳೂರಿನಲ್ಲಿಯೇ ತಂಗಿದ್ದರು. 25ರ ಬೆಳಗ್ಗೆ ದಲಿತರ ಕೇರಿಗೆ ಭೇಟಿ ನೀಡಿ ಅನಂತರ ಕೆನರಾ ಶಾಲೆಯಲ್ಲಿ ಸಾರ್ವಜನಿಕ ಕೃಷ್ಣಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ಗುರುಪುರ, ಬಜ್ಪೆ, ಎಕ್ಕಾರು, ಕಟೀಲು, ಕಿನ್ನಿಗೋಳಿ ಮಾರ್ಗವಾಗಿ ಮೂಲ್ಕಿಗೆ ತಲುಪಿ ಭಾಷಣ ಮಾಡಿದರು. ಭೋಜನ ಪೂರೈಸಿ ಪಡುಬಿದ್ರಿ, ಕಾಪು, ಉದ್ಯಾವರ, ಕಟಪಾಡಿ ಮಾರ್ಗವಾಗಿ ಉಡುಪಿ ತಲುಪಿದರು. ಉಡುಪಿಯ ಸಭೆಯ ಬಳಿಕ ಕಲ್ಯಾಣಪುರ, ಬ್ರಹ್ಮಾವರ ಮಾರ್ಗವಾಗಿ ಕುಂದಾಪುರ ತಲುಪಿ ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕುಂದಾಪುರದಲ್ಲಿ ಶಾಂತಿನಿಕೇತನ ಎಂಬ ಮನೆಯಲ್ಲಿ ವಾಸ್ತವ್ಯವಿದ್ದು ಅಲ್ಲೇ ಫೆ. 26ರಂದು ತಮ್ಮ ಸಾಪ್ತಾಹಿಕ ಮೌನವ್ರತ ಆಚರಿಸಿ ಫೆ. 27ರ ಬೆಳಗ್ಗೆ ದಯಾವತೀ ಎಂಬ ಹಡಗಿನಲ್ಲಿ ಕಾರವಾರಕ್ಕೆ ಹೋಗಿ ಉತ್ತರ ಕರ್ನಾಟಕ ಪ್ರವಾಸ ನಡೆಸಿದರು.
ಪುಟ್ಟಗೌರಿ “ಚಿನ್ನ ಗೌರಿ’ಯಾದಳು!
ಗಾಂಧೀಜಿ ಅವರು ಪುತ್ತೂರಿನ ಡಾ| ಸುಂದರ ರಾಯರ ಮನೆಗೆ ಬಂದು ತಂಗಿದಾಗ ಎಂದಿನಂತೆ ತಮ್ಮ ಯಾತ್ರೆಯ ಉದ್ದೇಶವನ್ನು ಹೇಳಿ ದೇಣಿಗೆ ಸಂಗ್ರಹಿಸುವ ಮಾತುಗಳನ್ನಾಡಿದ್ದರು. ಅಲ್ಲೇ ಇದ್ದ ಡಾ| ಸುಂದರ ರಾಯರ ಮಗಳು ಹದಿನಾಲ್ಕರ ಹರೆಯದ ಬಾಲಕಿ ಗೌರೀದೇವಿ ಮಾತುಗಳಿಂದ ಪ್ರೇರಿತಳಾಗಿ ತನ್ನ ಕೈಗಳಿಂದ ಚಿನ್ನದ ಬಳೆಗಳನ್ನು ತೆಗೆದು ಗಾಂಧೀಜಿಗೆ ಅರ್ಪಿಸಿದ್ದಳು.
ಗೌರೀದೇವಿ “ಚಿನ್ನ ಗೌರಿ’ ಎಂಬ ಹೆಸರಿನಿಂದ ಪ್ರಸಿದ್ಧಳಾದಳು.
ಈ ಅನಿರೀಕ್ಷಿತ ಪ್ರಸಂಗದಿಂದ ಹಿರಿಯರೆಲ್ಲರೂ ದಂಗಾಗಿದ್ದ ರಂತೆ. ಆ ಘಟನೆ ವೇಳೆ ಸುಂದರ ರಾಯರ ತಮ್ಮ, ನ್ಯಾಯವಾದಿ ಸದಾಶಿವ ರಾವ್, ಕೋಟ ಶಿವರಾಮ ಕಾರಂತ, ಸಹಕಾರಿ ಧುರೀಣ ಮೊಳಹಳ್ಳಿ ಶಿವರಾವ್ ಉಪಸ್ಥಿತರಿದ್ದರು. ಡಾ| ಸುಂದರ ರಾವ್ ಅವರು ಆ ಕಾಲದ ದೊಡ್ಡ ಮೊತ್ತ 101 ರೂ. ದೇಣಿಗೆಯನ್ನು ದಲಿತೋದ್ಧಾರದ ನಿಧಿಗೆ ನೀಡಿದರು.
ಸಭೆಯಲ್ಲಿ ಗಾಂಧೀಜಿಯವರು ವೈಷ್ಣವ ಜನತೋ ಭಜನೆಯನ್ನು ಹಾಡುವಿರಾ ಎಂದು ಕೇಳಿದಾಗ ಯಾರೂ ಮುಂದೆ ಬರಲಿಲ್ಲ. ಕೂಡಲೇ ಗೌರೀದೇವಿ ಆ ಭಜನೆಯನ್ನು ಸುಶ್ರಾವ್ಯವಾಗಿ ಹಾಡಿ ಗಾಂಧೀಜಿಯ ಮೆಚ್ಚುಗೆಗೆ ಪಾತ್ರರಾದರು. ಗೌರಿಯವರಿಗೆ ಪಿಟೀಲು, ಹಾಡುಗಾರಿಕೆ ಬರುತ್ತಿತ್ತು. “ತಾಯಿಯವರ ಆದರ್ಶದ ಬಗ್ಗೆ ನಮಗೆ ಕೇಳಿ ಗೊತ್ತಿತ್ತೇ ವಿನಾ ಮಹತ್ವ ಗೊತ್ತಿರಲಿಲ್ಲ. ನಾನು ಹುಟ್ಟಿದ್ದು ಈ ಘಟನೆ ಅನಂತರ. 1946ರಲ್ಲಿ ಅವರು ಮೃತಪಟ್ಟರು. ಚಿಕ್ಕಪ್ರಾಯದಲ್ಲಿ ಕೇಳಿದ ವಿಚಾರಗಳನ್ನು ಈಗ ನನ್ನ ಚಿಕ್ಕತಾಯಿ ಲಕ್ಷ್ಮೀಯವರೂ ಸೇರಿದಂತೆ ಹಿರಿಯರಲ್ಲಿ ಕೇಳಿ ತಿಳಿದುಕೊಳ್ಳುತ್ತಿರುವೆ’ ಎನ್ನುತ್ತಾರೆ ಗೌರೀಯವರ ಪುತ್ರ ಡಾ| ಹೇಮಚಂದ್ರ ಹೊಳ್ಳ. ಅವರು ಭಾರತ- ಬಾಂಗ್ಲಾ ಯುದ್ಧದ ಸಮಯ ಲಡಾಕ್‌ನಲ್ಲಿ ಸೇನೆಯ ವೈದ್ಯರಾಗಿ ಸೇವೆಸಲ್ಲಿಸಿದ್ದಾರೆ.
ಲಕ್ಷ್ಮಿಯ ಸ್ವರ್ಣದಾನ ಗಾಂಧೀಜಿಯವರ ಪುತ್ತೂರಿನ ಸಭೆಯಲ್ಲಿ ಚಿನ್ನ ಅರ್ಪಿಸಿದ್ದ ಬಾಲಕ ಉಪ್ಪಿನಂಗಡಿಯ ಕುಶಲನಾಥ ರೈ ಇನ್ನೊಬ್ಬರು. ಇವರ ತಾಯಿ ಸ್ವಾತಂತ್ರ್ಯ ಹೋರಾಟಗಾರ್ತಿ ಲಕ್ಷ್ಮೀ ರೈ ನಾಲ್ಕು ವರ್ಷದ ಮಗನ ಕೈಯಲ್ಲಿದ್ದ ಚಿನ್ನವನ್ನು ಸಮರ್ಪಿಸಿದ್ದರು.
ನಿರುಪಮಾ ಆಭರಣ ದಾನ ಉಡುಪಿ ಅಜ್ಜರಕಾಡಿನಲ್ಲಿ ಫೆ. 25ರಂದು ನಡೆದ ಸಭೆಯಲ್ಲಿ ಪಾಂಗಾಳ ನಾಯಕ್ ಕುಟುಂಬಕ್ಕೆ ಸೇರಿದ 9-10 ವರ್ಷ ಪ್ರಾಯದ ನಿರುಪಮಾ ಮೈಮೇಲಿದ್ದ ಚಿನ್ನವನ್ನು ಸಮರ್ಪಿಸಿದ್ದರು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.