Gandhi Jayanti : ಕಡೆಗೂ ಗೆದ್ದ ಗಾಂಧಿಗಿರಿ!
ಮಾತಿಗೆ ಹೆದರದವರು, ಮೌನಕ್ಕೆ ಹೆದರಿದರು!
Team Udayavani, Oct 2, 2023, 11:07 AM IST
ಸಾಂದರ್ಭಿಕ ಚಿತ್ರ
ಮೌನವಾಗಿದ್ದುಕೊಂಡು ಪ್ರತಿಭಟಿಸಿಯೂ ನ್ಯಾಯ ಪಡೆಯಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ಅವರ ಮೌನಕ್ಕೆ ಇಂಗ್ಲಿಷರು ಮಾತ್ರವಲ್ಲ, ಜೊತೆಗಿದ್ದವರೂಹೆದರುತ್ತಿದ್ದರಂತೆ. ಆ ಗಾಂಧಿಗಿರಿಯನ್ನೇ ಅನುಸರಿಸಿ ಮೌನ ಹೋರಾಟದಿಂದ, ಸಮಯಪ್ರಜ್ಞೆಯ ನಡವಳಿಕೆಯಿಂದ ಅನ್ಯಾಯದ ವಿರುದ್ಧ, ವ್ಯವಸ್ಥೆಯ ವಿರುದ್ಧ ಗೆಲುವು ಕಂಡವರ ಅನುಭವದ ಕಥೆಗಳು ಇಲ್ಲಿವೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ “ಗಾಂಧಿ ಸ್ಮರಣೆಯ’ ವಿಶಿಷ್ಟ ಪ್ರಯತ್ನವಿದು…
ದೇವರಿಗೆ ದಾಸವಾಳ:
ಸರ್ಕಾರಿ ಉದ್ಯೋಗದಲ್ಲಿ ಅದು ನನ್ನ ಮೊದಲ ಬಡ್ತಿಯ ಸಮಯ. ಬಡ್ತಿಗೆ ಸಂಬಂಧಿಸಿದ ಅರ್ಹತೆ ನನಗಿದೆ ಎಂದು ಸಾಬೀತುಪಡಿಸುವ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಸುಮ್ಮನಿದ್ದಾಗ ಗೆಳೆಯರೊಬ್ಬರು, Follow up ಮಾಡದಿದ್ರೆ ಕೆಲಸ ಆಗುವುದಿಲ್ಲವೆಂದರು. ವಿಚಾರಿಸೋಣವೆಂದು ಆಡಳಿತ ಶಾಖೆಗೆ ಹೋಗಿ ನೋಡಿದರೆ, ನನ್ನ ಮನವಿ ನಿದ್ರಾವಸ್ಥೆಯಲ್ಲಿಯೇ ಇರುವುದು ಗೊತ್ತಾಯಿತು. ಅಂದಿನಿಂದ ನನ್ನ Follow up ಪಯಣ ಪ್ರಾರಂಭವಾಯಿತು. ಆದರೂ ಪ್ರಯೋಜನವಾಗಲಿಲ್ಲ. ಮತ್ತೆ Follow up ಐಡಿಯಾ ಕೊಟ್ಟಿದ್ದ ಸ್ನೇಹಿತರನ್ನು ಕೇಳಿದಾಗ Follow up ಅಂದರೆ, ಕಡತ ಹೊಯ್ತಾ, ಬಂತಾ ಎಂದು ವಿಚಾರಿಸುವುದಲ್ಲ. ಕಡತ ಕಳಿಸುವವರನ್ನು “ಚೆನ್ನಾಗಿ ನೋಡಿಕೊಳ್ಳುವುದು’ ಎಂದಾಗ, Follow up ನ ನಿಜವಾದ ಅರ್ಥದ ಅರಿವಾಗಿತ್ತು.
ಪ್ರಾಮಾಣಿಕತೆಯನ್ನೇ ನಂಬಿ ಬದುಕಿತ್ತಿದ್ದ ನನಗೆ ಈಗ ಪೇಚಾಡುವ ಪರಿಸ್ಥಿತಿ. ಇದುವರೆಗೂ ಕೊಟ್ಟೂ ಇಲ್ಲ, ತೆಗೆದುಕೊಂಡಿದ್ದೂ ಇಲ್ಲ. ಯೋಚಿಸಿ ತಲೆ ಗೊಬ್ಬರವಾಯಿತು. ಆಗ ನೆನಪಾಗಿದ್ದು ಗಾಂಧಿಗಿರಿ. ಮುನ್ನಾಭಾಯಿ ಮಾಡಿದಂತೆ ಮಾಡಲೇ ಎಂದನಿಸಿದ್ದು ನಿಜವಾದರೂ, ಹಾಗೆ ಮಾಡಲಿಲ್ಲ. ಏನನ್ನಾದರೂ ನಿರ್ಧರಿಸುವ ಮೊದಲು ಕಡತ ಕಳಿಸುವವರನ್ನು ಒಮ್ಮೆ ಭೇಟಿ ಮಾಡುವುದು ಸರಿಯೆನಿಸಿ ಅವರ ಕಚೇರಿಗೆ ಹೋದೆ. ಅವರು ಬಾಯ್ತುಂಬಾ ಮಾತನಾಡಿ, ಕಡತಕ್ಕೆ ಬೇಗ ಸಹಿ ಮಾಡಿಸಿ ಕೊಡುವುದಾಗಿ ಹೇಳಿದಾಗ, ಉಳಿದವರೆಲ್ಲ ಅವರ ಬಗ್ಗೆ ಹೇಳಿದ್ದು ತಪ್ಪೆನಿಸಿತ್ತು. ಆದರೆ ಆನಂತರ ಕೂಡ ಕಡತ ಕೋಮಾದಲ್ಲಿಯೇ ಇತ್ತು.
ಅವರ ಕಚೇರಿಯ ಮೂಲೆಯಲ್ಲಿ ದೇವರ ಪಟವಿಟ್ಟು, ಅಲಂಕರಿಸಿದ್ದನ್ನು ಗಮನಿಸಿದ್ದೆ. ಚಕ್ಕನೇ ಮೆದುಳಿನ ಬಲ್ಬ್ ಉರಿದಿತ್ತು. ಮರುದಿನ, ಮನೆಯ ಅಂಗಳದಲ್ಲರಳಿದ್ದ ದಾಸವಾಳದ ಹೂಗಳನ್ನು ಕೊಂಡೊಯ್ದೆ. ಅವರು ಬಂದ ಕೂಡಲೇ ಒಂದು ನಮಸ್ಕಾರ ಹಾಕಿ, ದೇವರಿಗೆ ಹೂ ತಂದಿದ್ದೇನೆ ಎನ್ನುತ್ತಾ, ಆ ಪಟಕ್ಕೆ ಹೂವಿಟ್ಟು ದೇವರಿಗೂ, ಅವರಿಗೂ ಕೈಮುಗಿದು ಹೊರಟು ಬಂದೆ. ಆನಂತರದ ಸುಮಾರು ಒಂದು ತಿಂಗಳು ದೇವರಿಗೆ ದಾಸವಾಳವಿಡುವ ಕಾರ್ಯಕ್ರಮ ನಿರಂತರವಾಗಿ ನಡೆಯಿತು. ಆದರೆ ಒಂದು ದಿನವೂ ನಾನು ಬಡ್ತಿಯ ಕಡತದ ಬಗ್ಗೆ ಕೇಳಲಿಲ್ಲ. ಒಂದು ದಿನ ಹೀಗೇ ಹೂವಿಡುವ ಕೆಲಸ ಮುಗಿಸಿ ಹೊರಡಬೇಕೆನ್ನುವಷ್ಟರಲ್ಲಿ, ಅವರೇ ಕರೆದು ಬಡ್ತಿಯ ಆದೇಶದ ಪ್ರತಿಯನ್ನು ಕೈಗಿಟ್ಟರು. ಈಗ ಆ ಶಾಖೆಯಲ್ಲಿ ಅವರಿಲ್ಲ. ಆದರೆ ದಾಸವಾಳ ಕಂಡರೆ ಈಗಲೂ ಅವರೇ ನೆನಪಾಗುತ್ತಾರೆ.
-ವೀಣಾ ಎಸ್. ಎನ್. ಬೆಂಗಳೂರು
**************************************************************************
ಕಾದು ನಿಂತು ಕೆಲಸ ಮಾಡಿಸಿಕೊಂಡೆ!:
ಈವರ್ಷದ ಮಾರ್ಚ್‌ನಲ್ಲಿ, ಬೆಂಗಳೂರಿನ ಕೃಷ್ಣರಾಜಪುರದ ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಬ್ಯಾಂಕ್ ಸಾಲದ ಸ್ವಾಧೀನತೆ ಹಕ್ಕನ್ನು ತೆಗೆಸಬೇಕಿತ್ತು. ಈ ಕೆಲಸಕ್ಕಾಗಿ ಯಾವುದೇ ಏಜೆಂಟರ ಮೂಲಕ ಹೋಗಬಾರದು ಮತ್ತು ಯಾರಿಗೂ ಲಂಚ ಕೊಡಬಾರದು ಎಂದು ನಿರ್ಧರಿಸಿದ್ದೆ. ಆಫೀಸ್‌ನ ಹೊರಗೆ ಏಜೆಂಟರು- “ಏನು ಕೆಲಸ ಆಗಬೇಕು ಸರ್?’ ಎಂದು ಕೇಳುತ್ತಿದ್ದರು. ನಾನು ಯಾರಿಗೂ ಉತ್ತರಿಸದೆ ಒಳಗೆ ಹೋದೆ. ಅಲ್ಲಿ ಯಾರೂ ಸರಿಯಾದ ಮಾಹಿತಿ ಕೊಡಲಿಲ್ಲ. ಬದಲಿಗೆ ಟೇಬಲ್‌ನಿಂದ ಟೇಬಲ್‌ಗೆ ಅಲೆದಾಡಿಸಿದರು. ಆದರೂ ಪಟ್ಟು ಬಿಡದೆ ಅವರಿವರನ್ನು ಕೇಳಿ ಚಲನ್ ಕಟ್ಟಿ, ಒಂದು ಟೇಬಲ್‌ನ ಬಳಿ ನಿಂತುಕೊಂಡೆ. ಇಡೀ ಆಫೀಸ್‌ನಲ್ಲಿ ಏಜೆಂಟರದ್ದೇ ಕಾರುಬಾರು. ಎಲ್ಲಾ ಸರ್ಕಾರಿ ನೌಕರರು ಏಜೆಂಟರಿಗಾಗಿ ಕೆಲಸ ಮಾಡುತ್ತಿದ್ದಂತೆ ತೋರುತ್ತಿತ್ತು. ಗುಮಾಸ್ತ ನನ್ನತ್ತ ತಿರುಗಿಯೂ ನೋಡದೆ ಏಜೆಂಟರ ಕೆಲಸ ಮಾಡಿಕೊಡುತ್ತಿದ್ದ. ಏಜೆಂಟರು, ನನ್ನನ್ನು ತಳ್ಳಿಕೊಂಡೇ ಹೋಗಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾನು ಟೇಬಲ್ಲನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಯೇ ನಿಂತಿದ್ದೆ.
ಮಧ್ಯಾಹ್ನವಾಯಿತು. ಆ ಗುಮಾಸ್ತ ಊಟಕ್ಕೆಂದು ಹೊರಟ. ಅವನ ಹಿಂದೆಯೇ ಏಜೆಂಟರೂ ಹೊರಟರು. ಒಂದು ಗಂಟೆಯ ನಂತರ ಬಂದ ಗುಮಾಸ್ತ, ನಾನು ಅಲ್ಲಿಯೇ ನಿಂತಿದ್ದುದನ್ನು ಕಂಡು- “ಹೋಗಿ ಊಟ ಮಾಡಿಕೊಂಡು ಬನ್ನಿ’ ಎಂದ.
ನಾನು- “ಕೆಲಸ ಆದಮೇಲೆ ನಾನು ಊಟ ಮಾಡುತ್ತೇನೆ’ ಎಂದೆ.
ಏನನ್ನಿಸಿತೋ; ಅವನು ನನ್ನ ಪೇಪರ್‌ಗಳನ್ನು ತೆಗೆದುಕೊಂಡು ಕೆಲಸ ಮಾಡತೊಡಗಿದ. ಒಬ್ಬ ಏಜೆಂಟ್‌ಗೆ ಇದನ್ನು ಸಹಿಸಲಾಗಲಿಲ್ಲ. ತನ್ನ ಕೆಲಸವನ್ನು ಮೊದಲು ಮಾಡುವಂತೆ ಅವನು ಜೋರು ಮಾಡಿದ. ಗುಮಾಸ್ತನೂ ಸಿಟ್ಟಿಗೆದ್ದು- “ಅವರು ಬೆಳಗ್ಗೆಯಿಂದ ಕಾದಿ¨ªಾರೆ. ಈಗ ಅವರ ಕೆಲಸಾನೇ ಮಾಡೋದು. ನೀನು 10 ನಿಮಿಷದ ನಂತರ ಬಾ’ ಎಂದು ಆವಾಜ್ ಬಿಟ್ಟ. ಅಂತೂ ನನ್ನ ಕೆಲಸವಾಯಿತು!
- ವಿಜಯ ಕುಮಾರ್ ಕೆ. ಎಸ್, ಬೆಂಗಳೂರು
**************************************************************************
ನಾನ ಕಸಾ ಚೆಲ್ಲತೇನಿ..
ನಮ್ಮ ಹೊಸ ಅಪಾರ್ಮೆಂಟ್ ಗೇಟಿಗೇ ಸುತ್ತಲಿನ ಮನೆಗಳ ಜನ ಮೊದಲಿನಿಂದಲೂ ಕಸ ಚೆಲ್ಲುವ ರೂಢಿ ಇಟ್ಟುಕೊಂಡಿದ್ದರು. ಏಕೆಂದರೆ ಅಲ್ಲಿ ಕೇಳುವವರು ಯಾರೂ ಇರಲಿಲ್ಲ. ಸುಂದರವಾದ ಕಟ್ಟಡ ಎದ್ದಾಗಲೂ ಜನರು ಆ ರೂಢಿಯನ್ನು ತಪ್ಪಿಸಲಿಲ್ಲ. ವಾಚ್‌ಮನ್ ವಿರೋಧಿಸಿದರೂ ಅವನಿಗೆ ಯಾರೂ ಸೊಪ್ಪು ಹಾಕಲಿಲ್ಲ. ಪರಿಣಾಮ, ಹೊಸ ಮನೆಯ ಗೇಟಿನ ಪಕ್ಕದಲ್ಲಿ ದೊಡ್ಡ ಕಸದ ರಾಶಿ ಎದ್ದುನಿಂತಿತು.
ಅಂದು ಬೆಳಿಗ್ಗೆಯೇ ವಾಚ್‌ಮನ್ ಹಾಗೂ ಓಣಿಯ ಮನುಷ್ಯನ ಮಧ್ಯೆ ಈ ಕಸ ಚೆಲ್ಲುವ ವಿಷಯದಲ್ಲಿ ವಾಕ್ಸಮರ ಪ್ರಾರಂಭವಾಗಿತ್ತು. ನಾನು ಅಟ್ಟದ ಮೇಲಿನಿಂದ ಇದನ್ನು ನೋಡಿ ಹೊರಗೆ ಬಂದಿದ್ದೆ. ವಾಚ್‌ಮನ್ – “ನೋಡ್ರೀ ಬಾಯಾರ, ಇಲ್ಲೆ ಕಸಾ ಚೆಲ್ಲಬ್ಯಾಡ್ರೀ ಅಂದ್ರೂ ಕೇಳಾಕತ್ತಿಲ್ತ್ರಿಇಲ್ಲೆ ಚೆಲ್ತಾವಾ.. ನೀ ಯಾರಲೇ ಹೇಳಾಕ ಅನ್ನಾಕತಾರ್ರೀ..’ ಎಂದು ದೂರು ಹೇಳಿದ್ದ. ನಾನೂ ಜಗಳಕ್ಕೆ ನಿಂತರೆ, ಇದು ವಿಕೋಪಕ್ಕೆ ಹೋಗಲೂ ಬಹುದು ಅನಿಸಿದ್ದರಿಂದ, ವಾಚ್‌ಮನ್‌ಗೆ ಸುಮ್ಮನಿರಲು ಹೇಳಿ, ಅವರನ್ನು ಮೆತ್ತಗಿನ ಮಾತಿನಲ್ಲಿ ಅವರ ಸಮಸ್ಯೆಯ ಬಗ್ಗೆ ವಿಚಾರಿಸಿದ್ದೆ. ಅವರು- “ನೋಡ್ರೀ ಮೇಡಂ, ನಮ್ಮನ್ಯಾಗ ನಾವಿಬ್ಬರೂ ನೌಕ್ರಿಗೆ ಹೋಗವ್ರು. ಈ ಕಸಾ ಚೆಲ್ಲೊದು ನನ್ನ ಕೆಲಸಾ… ತಿಪ್ಪೀಗುಂಡೀ ತನಕಾ ಹೋಗೋದು ನನಗ ಸಾಧ್ಯ ಇಲ್ಲಾ.. ಅಲ್ಲದ ಇಲ್ಲೆ ಕಸಾ ಚೆಲ್ತಾವಾ ನಾ ಒಬ್ಟಾಂವನ ಅಲ್ಲಾ… ನೀವು ಎಷ್ಟ ಮಂದಿಗರೆ ಹೇಳವ್ರು..?’ ಅಂತೆಲ್ಲಾ ಏನೇನೋ ಹೇಳುತ್ತ ನನಗೇ ಬುದ್ಧಿ ಹೇಳಿದ್ದರು. ನಾನು “ಸರ್, ನಿಮಗ ಇಲ್ಲೀತನಕಾ ಅಂತೂ ಬರಲಿಕ್ಕೆ ಆಗತದಲ್ಲ? ಒಂದ ಕೆಲಸಾ ಮಾಡ್ರಿ.. ಈ ನಿಮ್ಮ ಕಸದ ಡಬ್ಬೀ ಇಲ್ಲೀತನಕಾ ತೊಗೊಂ ಬರ್ರಿ. ಅದನ್ನ ನಾ ದಿನಾ ಅಲ್ಲಿರೋ ತಿಪ್ಪೀಗುಂಡೀ ತನಕಾ ಒಯ್ದು ಚೆಲ್ಲಿ ಬರತೇನಿ.. ಖಾಲೀ ಮಾಡಿ ತಿರಗಿ ಇಲ್ಲೇ ತಂದ ಇಡತೇನಿ..’ ಎನ್ನುತ್ತಲೇ ಅವರ ಕೈಯಲ್ಲಿಯ ಕಸದ ಡಬ್ಬಿಗೆ ಕೈ ಹಾಕಿದ್ದೆ.
ಅವರು, “ಛೇ.. ಛೇ ಬ್ಯಾಡ್ರೀ… ಮೇಡಂ, ನೀವ್ಯಾಕರೀ ನಮ್ಮ ಮನೀ ಕಸಾ ಚೆಲ್ಲತೀರಿ? ನಾನ ಚೆಲ್ಲತೇನಿ..’ ಎನ್ನುತ್ತ ಮರುಮಾತಿಲ್ಲದೇ ತಿಪ್ಪೆಗುಂಡಿಯತ್ತ ನಡೆದಿದ್ದರು. ಗಾಂಧಿಗಿರಿಯ ಮೂಲಕ ಕಡೆಗೂ ಹೀಗೆ ಸಮಸ್ಯೆಯ ಪರಿಹಾರವಾಗಿತ್ತು..!!
-ಮಾಲತಿ ಮುದಕವಿ, ಧಾರವಾಡ
**************************************************************************
ಮೌನ ಹೋರಾಟಕ್ಕೆ ಮಾತು ಬಂದಿತ್ತು!:
ಅದಾಗಲೇ ನಾಲ್ಕು ತಿಂಗಳು ಅಲೆದಿದ್ದೆ ಲೋನ್‌ಗಾಗಿ. ಕರೋನಾದಿಂದ ಆಗಷ್ಟೇ ಜಗತ್ತು ಹೊರಮುಖ ಮಾಡುತ್ತಿದ್ದ ಸಮಯ. ಎಲ್ಲವೂ ಆಗಿದ್ದವನನ್ನ ಇದೇ ಕೊರೋನಾಗೆ, ಕೊರೊನಾ ವಾರಿಯರ್ ಎಂಬ ಗೌರವಯುತ ಪಟ್ಟದೊಟ್ಟಿಗೆ ಕಳೆದುಕೊಂಡಿದ್ದೆ. ಕೊರೊನಾ ವಾರಿಯರ್ ಕುಟುಂಬಕ್ಕೆ ಬರಬೇಕಾದ ಪರಿಹಾರಕ್ಕೆ ಕಾಯುತ್ತ ಕೂರಲು ಮನೆಯಲ್ಲಿನ ದಿನಸಿ ಡಬ್ಬಗಳು, ಬಾಡಿಗೆ ಕೊಟ್ಟವರು, ಸಾಲ ಕೊಟ್ಟವರು ಕಾಯುವ ಸ್ಥಿತಿಯಲ್ಲಿ ಇರಲಿಲ್ಲ. ಅಪರೂಪದ ಕಲೆಯಾದ ಮಣ್ಣಿನ ಆಭರಣವನ್ನೇ ಬದುಕಾಗಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿ, ಅದನ್ನೇ ಮುಂದಿಟ್ಟುಕೊಂಡು ಸ್ವಾವಲಂಬಿ ಬದುಕನ್ನ ಕಟ್ಟಲು -ಲೋನ್‌ಗಾಗಿ ಅರ್ಜಿ ಸಲ್ಲಿಸಿ 4 ತಿಂಗಳು ಅಲೆದಿದ್ದೆ. ಎಲ್ಲಾ ತಪಾಸಣೆಗಳ ನಂತರ ಬಹುಶಃ ಯಾವ ಆಸ್ತಿಯಿಲ್ಲದ, ಆಗಷ್ಟೇ ಗಂಡನನ್ನು ಕಳೆದುಕೊಂಡಿದ್ದ ಒಬ್ಬಂಟಿ ಹೆಣ್ಣಿಗೆ ಸಾಲ ಕೊಡೋದಕ್ಕೆ ಹಿಂದೆ ಮುಂದೆ ನೋಡಿದರಾ ಅಥವಾ ಮಧ್ಯವರ್ತಿ ಇಲ್ಲದೆ ನೇರವಾಗಿ ಸಾಲ ಬಯಸಿದ್ದು ಕಾರಣವಾ ಸ್ಪಷ್ಟವಿಲ್ಲ. ಮೊದಲಿಗೆ ನಾನು ಮಣ್ಣಿನ ಆಭರಣ ಮಾಡುವುದನ್ನೇ ಸಂಶಯಪಟ್ಟವರು, ಕಡೆಗೆ ನಾ ಬದುಕಿದ ರೀತಿಯನ್ನೇ ಅಣಕವಾಡಿ, ಸಾಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು. ಅಂದು ಅವಮಾನದಿಂದ ನೇರ ಮನೆಗೆ ಬಂದವಳು ರಾತ್ರಿಯಿಡೀ ಯೋಚಿಸಿ, ನಿರ್ಧಾರ ಮಾಡಿದೆ.
ಮರುದಿನ, ಅದೇ ಬ್ಯಾಂಕ್‌ನ ಒಳಹೊಕ್ಕವಳು, ಸಾಲ ಕೊಡಲಾಗದ್ದಕ್ಕೆ ಅವರು ಹಿಂದಿನ ದಿನ ನೀಡಿದ ಎಲ್ಲಾ ಕಾರಣಗಳನ್ನ ಬರಹ ರೂಪದಲ್ಲಿ ನೀಡಬೇಕಾಗಿ ಬೇಡಿಕೆ ಇಟ್ಟು, ನನಗಾದ ಅವಮಾನಕ್ಕೆ ಉತ್ತರ ಬೇಕೆಂದು ಫಲಕವಿಡಿದು ಬ್ಯಾಂಕ್ ಮುಂದೆ ಒಬ್ಬಳೇ ಕುಳಿತೆ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಎಲ್ಲೆಡೆ ಸುದ್ದಿ ಹಬ್ಬಿತು. ಧರಣಿ ಕುಳಿತ ಎರಡೇ ತಾಸಿಗೆ ಬ್ಯಾಂಕ್‌ನ ಮೇಲಧಿಕಾರಿಗಳು ಸ್ಥಳಕ್ಕೆ ಬಂದರು. ಹಿಂದಿನ ದಿನ ಅವಮಾನಿಸಿದ ಅದೇ ಅಧಿಕಾರಿಗಳ ಎದುರು ಕೂರಿಸಿದರು. ಮೌನವಾಗಿ ಹೋರಾಟಕ್ಕೆ ಕುಳಿತವಳಿಗೆ ಮಾತಾಡುವ ಅವಕಾಶ ಸಿಕ್ಕಿತ್ತು. ಹಿಂದಿನ ದಿನ ನನ್ನ ಕಡತವೇ ಬಂದಿಲ್ಲ ಎಂದು ವಾದ ಮಾಡಿದ್ದ ಅಧಿಕಾರಿ ಖುದ್ದು ತಾನೇ ಕುಡಿಯಲು ನೀರು ಕೊಟ್ಟು ಉಪಚರಿಸಿದ್ದ. ನ್ಯಾಯಕ್ಕಾಗಿ ಹಠ ಹಿಡಿದು ಕುಳಿತದ್ದರ ಫಲ ಇದು. ಒಂದೇ ತಿಂಗಳಲ್ಲಿ ನನ್ನ ಸಾಲ ಮಂಜೂರಾಯಿತು.
-ನೀಲಿ ಲೋಹಿತ್, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.