ಗಾಂಧಿ ಆತ್ಮಕಥನದ ಅಂತರ್ಯಾಮಿ


Team Udayavani, Sep 16, 2018, 6:00 AM IST

mk.jpg

ಮಹಾತ್ಮ ಗಾಂಧಿಯವರ ಆತ್ಮಕಥನದ ವಿಶೇಷ ಆವೃತ್ತಿಯೊಂದು ಈಚೆಗೆ ಪ್ರಕಟವಾಗಿದೆ (ಪೆಂಗ್ವಿನ್‌ 2018). ಗಾಂಧಿಯವರ ಬದುಕು-ಬರಹಗಳ ಬಗ್ಗೆ ಮಹಣ್ತೀದ ಅಧ್ಯಯನ ಮಾಡಿರುವ ಮತ್ತು ಕೆಲಕಾಲ ಸಬರಮತಿ ಆಶ್ರಮದ ಮುಖ್ಯಸ್ಥರೂ ಆಗಿದ್ದ ತ್ರಿದೀಪ್‌ ಸುಹೃದ್‌ ಇದನ್ನು ಸಂಪಾದಿಸಿದ್ದಾರೆ. ಸುಮಾರು 800 ಪುಟಗಳ ಈ ಆವೃತ್ತಿಯು ಎರಡು ಹೊಸ ಕೆಲಸಗಳನ್ನು ಮಾಡಿದೆ. ಈ ಕೃತಿಯ ಗುಜರಾತಿ ಮೂಲಕ್ಕೂ ಮತ್ತು ಇಂಗ್ಲಿಷ್‌ ಅನುವಾದಕ್ಕೂ ನಡುವೆ (ಮತ್ತು ವಿಭಿನ್ನ ಆವೃತ್ತಿಗಳ ನಡುವೆ) ಇರುವ ವ್ಯತ್ಯಾಸಗಳನ್ನು ಎಡಬಲದ ಅಂಚುಗಳಲ್ಲಿ ಸಂಪಾದಕರು ಪಟ್ಟಿ ಮಾಡುತ್ತಹೋಗಿದ್ದಾರೆ; ಜತೆಗೆ, ಹೊಸ ಓದುಗರಿಗೆ ಅನುಕೂಲವಾಗುವಂತೆ ಪೂರಕ ಮಾಹಿತಿಗಳನ್ನು ಆಡಿಟಿಪ್ಪಣಿಗಳಾಗಿ ಕೊಟ್ಟಿದ್ದಾರೆ. 34 ಪುಟಗಳ ಪ್ರಸ್ತಾವನೆಯನ್ನು ಕೂಡಾ ಸಂಪಾದಕರು ಈ ಆವೃತ್ತಿಗೆ ಬರೆದಿದ್ದಾ
ರೆ.
  
ನಮಗೆಲ್ಲ ಗೊತ್ತಿರುವಂತೆ, ಗಾಂಧಿ ಈ ಆತ್ಮಕಥನವನ್ನು ಒಂದು “ಪುಸ್ತಕ’ವಾಗಿ ಬರೆದಿದ್ದಲ್ಲ; 1925ರಿಂದ 1929ರವರೆಗೆ 166 ಕಂತುಗಳಲ್ಲಿ ಯಂಗ್‌ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ “ಧಾರಾವಾಹಿ’ ಇದು. ಇವತ್ತಿನ ಹಲವು ಟಿವಿ ಧಾರಾವಾಹಿಗಳಿಗೂ ಮತ್ತು ಈ ಗಾಂಧಿ-ಧಾರಾವಾಹಿಗೂ ನಡುವೆ ಒಂದು ಕ್ಷುಲ್ಲಕ ಸಾಮ್ಯ ಇದೆ.  ನಮ್ಮ ಧಾರಾವಾಹಿಗಳಂತೆಯೇ ಗಾಂಧಿಯವರೂ ಈ ಕಂತುಗಳನ್ನು ಆವತ್ತವತ್ತು ಬರೆಯುತ್ತ ಹೋದರೆ ಹೊರತು, ಮುಂದೆ ಏನು ಬರೆಯಬೇಕೆಂಬುದನ್ನಾಗಲೀ, ಇಡಿಯ ಪುಸ್ತಕ ಹೇಗೆ ರೂಪುಗೊಳ್ಳಬೇಕು ಎಂಬುದನ್ನಾಗಲೀ ಮಾತ್ರವಲ್ಲ , ಈ ಕಥಾನಕವನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸಬೇಕು ಎಂಬುದನ್ನೂ ಯೋಜಿಸಿ ಬರೆಯಲಿಲ್ಲ.  ಆದರೆ, ಈಗ ಪ್ರಕಟವಾಗಿರುವ ಆ ಪುಸ್ತಕದ ಸರಿಸುಮಾರು ನಡುಭಾಗಕ್ಕೆ ಬರುತ್ತಿದ್ದಂತೆ ಗಾಂಧಿ, ಈ ಬರಹವನ್ನು ತಾನು ಬರೆಯುತ್ತಿರುವ ಕ್ರಮ ಯಾವುದು ಎಂಬ ಅನಿರೀಕ್ಷಿತ ಪ್ರಸ್ತಾಪವನ್ನು ಎತ್ತಿಕೊಂಡಿದ್ದಾರೆ.  

ಗೋರೂರು ರಾಮಸ್ವಾಮಿ ಅಯ್ಯಂಗಾರರು ಕನ್ನಡೀಕರಿಸಿದ ಆವೃತ್ತಿಯಿಂದ ಗಾಂಧಿ ಮಾತುಗಳನ್ನೇ ಉಲ್ಲೇ
ಖೀಸುವುದಾದರೆ-ಈ ಕಥೆ ವಾರವಾರವೂ ಹೇಗೆ ಬರೆಯಲ್ಪಡುತ್ತಿದೆ ಎಂಬುದನ್ನು ವಾಚಕರಿಗೆ ವಿವರಿಸುವ ಆವಶ್ಯಕತೆ, ಈ ಅಧ್ಯಾಯವನ್ನು ಬರೆಯುತ್ತ ಉಂಟಾಗಿದೆ.  ಇದನ್ನು ಬರೆಯಲು ಪ್ರಾರಂಭಿಸಿದಾಗ, ಇದನ್ನು ಹೇಗೆ ಬರೆಯಬೇಕೆಂಬ ವಿಷಯದಲ್ಲಿ ನನ್ನ ಮುಂದೆ ಯಾವ ಯೋಜನೆಯೂ ಇರಲಿಲ್ಲ. ನನ್ನಲ್ಲಿ, ಈ ಪ್ರಯೋಗಗಳ ಕಥೆಗೆ ಆಧಾರವಾದ ದಿನಚರಿಯಾಗಲೀ ಕಾಗದಪತ್ರಗಳಾಗಲೀ ಇಲ್ಲ.  ಬರೆಯಲು ಕುಳಿತಾಗ ಅಂತರಾತ್ಮ ಪ್ರೇರಿಸಿದಂತೆ ನಾನು ಬರೆದಿದ್ದೇನೆ.

ಮೇಲಿನ ಕನ್ನಡ ಅನುವಾದಕ್ಕೂ ಮತ್ತು ಅದಕ್ಕೆ ಮೂಲವಾಗಿರಬಹುದಾದ ಮಹದೇವ ದೇಸಾಯಿಯವರ ಇಂಗ್ಲಿಶ್‌ ಅನುವಾದಕ್ಕೂ ಮತ್ತು ಗಾಂಧಿಯವರು ಗುಜರಾತಿಯಲ್ಲಿ ಬರೆದ ಆವೃತ್ತಿಗೂ ನಡುವೆ ಒಂದು ಮುಖ್ಯವಾದ ಪದವು ಬೇರೆಯಾಗಿದೆಯೆಂಬುದು ತ್ರಿದೀಪ್‌ ಸುಹೃದರ ಆವೃತ್ತಿಯನ್ನೋದುವಾಗ ನನ್ನ ಗಮನಕ್ಕೆ ಬಂತು. ಗೋರೂರರು “ಅಂತರಾತ್ಮ’ ಎಂದು ಕರೆದಿರುವುದನ್ನು ದೇಸಾಯಿಯವರು ಇಂಗ್ಲೀಷಿನಲ್ಲಿ “ಸ್ಪಿರಿಟ್‌’ ಎಂದು ಅನುವಾದಿಸಿದ್ದಾರೆ; ಮೂಲ ಗುಜರಾತಿಯಲ್ಲಿ ಗಾಂಧಿ “ಅಂತರ್ಯಾಮಿ’ ಎಂಬ ಪದವನ್ನು ಬಳಸಿದ್ದಾರೆ.  ಈ ಅಂತರ್ಯಾಮಿ ಎಂಬ ಪದವು ಗಾಂಧಿ ಕಥನದೊಳಗೆ ಮಾತ್ರವಲ್ಲ, ಗಾಂಧಿಯವರ ವ್ಯಕ್ತಿತ್ವದೊಳಗೇ ಮಹಣ್ತೀದ ಸ್ಥಾನ ಪಡೆಯುತ್ತದೆ ಎಂಬುದನ್ನು ತ್ರಿದೀಪ್‌ ಸುಹೃದ್‌ ಗುರುತಿಸಿದ್ದಾರೆ. ಉದಾಹರಣೆಗೆ, ಮೇಲಿನ ಉಲ್ಲೇಖದ  ಮುಂದಿನ ಸಾಲಿನಲ್ಲಿಯೇ ಗಾಂಧಿ- “”ನನ್ನ ಬಾಳಿನಲ್ಲಿ ನಾನು ಎಸಗಿದ ದೊಡ್ಡ ದೊಡ್ಡ ಕಾರ್ಯಗಳು ಮತ್ತು ಸಣ್ಣಸಣ್ಣ ಕಾರ್ಯಗಳು ನನ್ನ “ಅಂತರ್ಯಾಮಿ’ಯ ಪ್ರೇರಣೆಯಿಂದಲೇ ನಡೆದಿವೆಯೆಂದು ಹೇಳಿದರೆ ಅನುಚಿತವಾಗಲಾರದು”- ಎಂದು ಅಡಿಗೆರೆ ಹಾಕುವ ಮೂಲಕ ಈ ಪದವನ್ನು ಒಂದು ಅವರ ಕಾರ್ಯ-ಕೃತಿಗಳೆರಡರ ವಲಯಕ್ಕೂ ಸಲ್ಲುವ ಪಾರಿಭಾಷಿಕವಾಗಿ ನೋಡುವ ಸಾಧ್ಯತೆಯನ್ನು ತೆರೆಸಿದ್ದಾರೆ.

ಹಾಗಿದ್ದರೆ, ಆ “ಅಂತರ್ಯಾಮಿ’ ಎಂಬುದು ಯಾವುದು?  ಅದರ ವ್ಯಾಖ್ಯೆಯೇನು? ಈ ಪರಿಕಲ್ಪನೆಗೆ ಆಕರ ಯಾವುದು? ಮೊದಲಾದ ಪ್ರಶ್ನೆಗಳು ಏಳುತ್ತವೆ. ಮೇಲಿನ ಉಲ್ಲೇಖದ ಬಳಿಕ ಬರುವ ಸಾಲುಗಳಲ್ಲೇಗಾಂಧಿ ಹೇಳುತ್ತಾರೆ- “”ನಾನು ಪರಮಾತ್ಮನನ್ನು ನೋಡಿಲ್ಲ.  ತಿಳಿದೂ ಇಲ್ಲ. ಜಗತ್ತಿಗೆ ಆತನಲ್ಲಿರುವ ಶ್ರದ್ಧೆಯನ್ನು ನನ್ನದನ್ನಾಗಿ ಮಾಡಿಕೊಂಡಿದ್ದೇನೆ. ಈ ಶ್ರದ್ಧೆ ಎಂದಿಗೂ ಅಳಿಸಿಹೋಗುವುದಿಲ್ಲವಾಗಿ, ಇದನ್ನು ಶ್ರದ್ಧೆಯೆಂದು ಗ್ರಹಿಸುವುದರ ಬದಲಾಗಿ ಅದನ್ನೇ ನಾನು ಅನುಭವರೂಪದಲ್ಲಿ ಗುರುತಿಸುತ್ತೇನೆ”. ಅಂದರೆ, ಗಾಂಧಿ ಉಲ್ಲೇಖೀಸುವ ಅಂತರ್ಯಾಮಿಗೆ ಅವರ ಶ್ರದ್ಧೆಯ ಗ್ರಹಿಕೆ ಪ್ರಮಾಣವೇ ಹೊರತು ಬಾಹ್ಯ ಪ್ರಮಾಣಗಳಿಂದ ಅದನ್ನು ಗುರುತಿಸಲಾಗದು ಎಂಬ ಸೂಚನೆ ಈ ಮಾತುಗಳಲ್ಲಿ ಸಿಗುತ್ತದೆ.  

ಅಂಥ ಒಂದು ಮಾರ್ಮಿಕ ಉದಾಹರಣೆಯನ್ನು ತ್ರಿದೀಪ್‌ ಸುಹೃದರ ಮುನ್ನುಡಿ ಉಲ್ಲೇಖೀಸುತ್ತದೆ. ಅದು 1933ರಲ್ಲಿ ಅವರು ಯರವಾಡಾ ಜೈಲಿನಲ್ಲಿದ್ದಾಗ, ಇದ್ದಕ್ಕಿದ್ದಂತೆ ಒಂದು ದಿನ, ತಾನು ಉಪವಾಸ ಮಾಡುವುದಾಗಿ ಘೋಷಿಸಿದ ಸಂದರ್ಭ. ಈ ನಿರ್ಧಾರಕ್ಕೆ ತನ್ನ ಅಂತರ್ಯಾಮಿಯ ಸೂಚನೆಯೇ ಕಾರಣವೆಂದೂ ಅದಕ್ಕೆ ತಾನು ಬೇರೆ ಕಾರಣ ಕೊಡಲಾರೆನೆಂದೂ ಹೇಳಿದ್ದು ಹಲವರಿಗೆ ತುಂಬ ಅಪಥ್ಯವಾಗಿ ಕಂಡಿತು. ಆದರೆ ಗಾಂಧಿ ಮಾತ್ರ, ಇದು ತನ್ನ ಅಂತರ್ಯಾಮಿಯು ತನಗೆ “ಸ್ಪಷ್ಟವಾದ ಮಾತುಗಳಲ್ಲಿ’ ಸೂಚಿಸಿದ ಒಂದು ನಡೆಯೆಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು-ಈ ಉಪವಾಸಕ್ಕೆ ನನಗೆ ಸ್ಫೂರ್ತಿ ದೊರಕಿದ ಆ ರಾತ್ರಿ, ನನ್ನೊಳಗೆ ಭೀಕರವಾದ ಒಳತೋಟಿ ಸಂಭವಿಸುತ್ತಿತ್ತು. ನನ್ನ ಮನಸ್ಸು ತಳಮಳಗೊಂಡಿತ್ತು. ಯಾವ ದಾರಿಯೂ ನನಗೆ ಕಾಣುತ್ತಿರಲಿಲ್ಲ.  

ನನ್ನ ಮೇಲಿರುವ ಜವಾಬ್ದಾರಿಯ ಭಾರವು ನನ್ನನ್ನು ಹಿಚುಕುತ್ತಿತ್ತು.  ಆದರೆ ಆಗ ನಾನೊಂದು ದನಿ ಕೇಳಿದೆ- ದೂರದಲ್ಲಿದ್ದರೂ ಹತ್ತಿರವೆಂಬಂತೆ ಕೇಳಿದ ದನಿ ಅದು. ಯಾವ ಅನುಮಾನಕ್ಕೂ ಆಸ್ಪದವಿಲ್ಲದಂತೆ ನನ್ನನ್ನೇ ಉದ್ದೇಶಿಸಿ ಆಡಿದಂಥ ಮನುಷ್ಯಧ್ವನಿಯಂತಿದ್ದ ಆ ಮಾತನ್ನು ನಾನು ಕೇಳದೆ ಇರುವುದು ಅಸಾಧ್ಯವಾಗಿತ್ತು. ಈ ಧ್ವನಿಯನ್ನು ಕೇಳುವಾಗ ನಾನು ಕನಸು ಕಾಣುತ್ತಿರಲಿಲ್ಲ. ಇಂಥ ಧ್ವನಿಯೊಂದು ಕೇಳುವ ಮೊದಲು ನನ್ನೊಳಗೆ ಮನೋಸಂಘರ್ಷ ನಡೆದಿತ್ತು; ಆಗ ಇದ್ದಕ್ಕಿದ್ದಂತೆ ಆ ದನಿ ನನ್ನ ಮೇಲೆರೆಗಿ ಬಂತು. ನಾನದನ್ನು ಕೇಳಿದೆ, ಅದು ದನಿಯೆಂಬುದನ್ನು ಖಚಿತಪಡಿಸಿಕೊಂಡೆ; ಅಲ್ಲಿಗೆ ನನ್ನ ಒಳತೋಟಿ ಮುಕ್ತಾಯಗೊಂಡಿತು. ನಾನು ಸಮಾಧಾನಗೊಂಡಿದ್ದೆ.

ಗಾಂಧಿಯವರು ತಮ್ಮ ಬದುಕಿನ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ಕೇಳಿಸಿಕೊಂಡ ಇಂಥ ಅಂತರ್ಯಾಮಿಯ ಮಾತುಗಳು ಅವರ ಒಟ್ಟೂ ಚಿಂತನವಿಧಾನವನ್ನೇ ಕುರಿತು ಮಹಣ್ತೀದ ಸೂಚನೆಗಳನ್ನೇನಾದರೂ ನಮಗೆ ನೀಡುತ್ತವೆಯೆ?- ಎಂಬ ಪ್ರಶ್ನೆಗೆ ತ್ರಿದೀಪ್‌ ಸುಹೃದ್‌ ತಮ್ಮ ಪ್ರಸ್ತಾವನೆಯಲ್ಲಿ ಸೂಚಿಸುವ ಉತ್ತರ ಮತ್ತು ಆ ಉತ್ತರವು ಓದುಗನಾಗಿ ನನ್ನೊಳಗೆ ವಿಸ್ತರಣೆಗೊಂಡ ಕ್ರಮ- ಎರಡನ್ನೂ ಕೂಡಿಸಿ ಗಾಂಧಿ ಚಿಂತನೆಯ ವಿಧಾನವನ್ನು ಕುರಿತು ನಾನೀಗ ಒಂದು ಪ್ರಸ್ತಾಪವನ್ನು ಮುಂದಿಡುತ್ತೇನೆ. ಈ ಅಂತರ್ಯಾಮಿ ಎಂಬುದು ಗಾಂಧಿಯವರಿಗೆ ಮೊದಲು ಕೇಳಿಸಿದ ಹಲವು ಧ್ವನಿಗಳಲ್ಲೇ
ಒಂದೋ? ಅಥವಾ ಇವೆಲ್ಲಕ್ಕೂ ಮೇಲೆ ನಿಂತ ಇನ್ನೊಂದು ಹೊಸ ಧ್ವನಿಯೋ? ಅಥವಾ ಹಲವು ಧ್ವನಿಗಳ ನಡುವೆ ಸಂವಾದ ನಡೆಸುತ್ತ ಆಕಾರವನ್ನು ಪಡೆದ ವಿಶಿಷ್ಟ ಧ್ವನಿವಿಶೇಷವೋ? ನನ್ನ ಪ್ರಕಾರ, ಗಾಂಧಿ ಬಳಸಿದ ಗುಜರಾತಿ ಭಾಷೆಯ ಅಂತರ್ಯಾಮಿ ಎಂಬ ಪದವೇ ಅದನ್ನು ನಾನು ಮೇಲೆ ಸೂಚಿಸಿದ ಮೂರನೆಯ ಸಾಧ್ಯತೆಯ ಕಡೆಗೆ ಬೆರಳು ತೋರಿಸುವಂತಿದೆ; ಮತ್ತು, ಈ ದೃಷ್ಟಿಯಿಂದ ಇಂಗ್ಲಿಷ್‌ ಅನುವಾದದಲ್ಲಿ ಬಳಕೆಯಾದ “ಸ್ಪಿರಿಟ್‌’ ಎಂಬ ಪದವಾಗಲಿ ಅಥವಾ ಕನ್ನಡಾನುವಾದದಲ್ಲಿ ಕಾಣುವ “ಅಂತರಾತ್ಮ’ವಾಗಲಿ, ಇದಕ್ಕೆ ನಿಖರ ಪರ್ಯಾಯವಲ್ಲ; ಒಳಚಲನೆ ಅಥವಾ ಒಳಸಂವಾದದ ನಿಯಂತ್ರಕ – ಎಂಬ ಅರ್ಥಗಳನ್ನು ಸೂಚಿಸುವ ಅಂತರ್ಯಾಮಿ ಎಂಬ ಪದವೇ ಇದಕ್ಕೆ ಸೂಕ್ತವಾದ ಆಯ್ಕೆ.

ಇಷ್ಟು ಯೋಚಿಸುತ್ತಿದ್ದಂತೆ, ಇನ್ನೂ ಕಷ್ಟದ ಪ್ರಶ್ನೆಯೊಂದು ನಮ್ಮೆದುರಿಗೆ ಎದ್ದು ನಿಲ್ಲುತ್ತದೆ- ಗಾಂಧಿಗೆ ಕೇಳಿದ ಹಲವು ಧ್ವನಿಗಳಲ್ಲಿ ನಿರ್ದಿಷ್ಟವಾದ ಒಂದು ಧ್ವನಿಯನ್ನೇ ಅವರು ಅಂತರ್ಯಾಮಿಯ ಧ್ವನಿಯೆಂದು ಗುರುತಿಸಿದ್ದು ಹೇಗೆ? ಈ ಪ್ರಶ್ನೆಗೆ ಗಾಂಧಿಯವರು ಕೊಡುವ ಉತ್ತರವೇ ಅವರನ್ನು ಅಪರೂಪದ ವ್ಯಕ್ತಿಯಾಗಿ ಮಾಡಿದೆಯೇ ಹೊರತು, ಅವರ ಯಾವುದೇ ಒಂದು ಉಪದೇಶವೂ ಅಲ್ಲ ಎಂಬುದು ನನ್ನ ನಂಬಿಕೆ. ಈ ಉತ್ತರವನ್ನು ತ್ರಿದೀಪ್‌ ಸುಹೃದ್‌ ಅವರ ಪ್ರಸ್ತಾವನೆ ತುಂಬ ನಿಖರವಾಗಿ ಗುರುತಿಸಿ ಹೇಳಿದೆ- ಅಂತರ್ಯಾಮಿಯ ಇಂಥ ಗುರುತಿಸುವಿಕೆ ಸಾಧ್ಯವಾಗುವುದು, ಗಾಂಧಿಯ ಪ್ರಕಾರ, ಕೇವಲ ಯೋಚನೆಯ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದರಿಂದ ಅಲ್ಲ; ಬದಲು, ಬ್ರಹ್ಮಚರ್ಯ, ಅಸ್ತೇಯ, ಅಪರಿಗ್ರಹ, ಅಸ್ವಾದ- ಇತ್ಯಾದಿ ಬಾಹ್ಯ ಶಿಸ್ತುಗಳನ್ನು ನಿರಂತರವಾಗಿ ರೂಢಿಸಿಕೊಳ್ಳುವ ಮೂಲಕ ಮಾತ್ರ. ಅವರದೇ ರೂಪಕದಲ್ಲಿ ಹೇಳುವುದಾದರೆ- “ಆಗ ಮಾತ್ರವೇ ಇದು ನಮ್ಮೊಳಗಿಂದ ಬರುತ್ತಿರುವ ರಾಮನ ಧ್ವನಿಯೋ ರಾವಣನ ಧ್ವನಿಯೋ ಎಂದು ಗುರುತಿಸುವುದು ಸಾಧ್ಯ’.  

ಇವತ್ತಿನ ಕಾಲದ ನನ್ನಂಥ ಒಬ್ಬ ಮನುಷ್ಯನಿಗೆ ಗಾಂಧಿ ಆತ್ಯಂತಿಕವಾಗಿ ಉಪಯುಕ್ತವಾಗುವುದು ಈ ಕಾರಣಕ್ಕೆ ಎಂಬ ನಂಬಿಕೆಯಿಂದ ಈ ಅಂತರ್ಯಾಮಿಯ ಆವಿಷ್ಕಾರದ ಕಥನವನ್ನು ನಾನಿಲ್ಲಿ ಕಟ್ಟಿದ್ದೇನೆ. ಇವತ್ತು ನಾವಿರುವ ಮಾರುಕಟ್ಟೆಯ ಕಾಲದಲ್ಲಿ “ನಮ್ಮ ಮನಸ್ಸು’ ಎಂದು ನಾವು ತಿಳಿದುಕೊಂಡಿರುವ ಸಂಗತಿಯು ನಿಜವಾಗಿ ಬಹುಪಾಲು ನಮ್ಮದಲ್ಲ; ಅದು ಜಾಹೀರಾತು ಮತ್ತು ಐಡಿಯಾಲಜಿ ಮೊದಲಾದವುಗಳಿಂದ ರೂಪಿತವಾದದ್ದು. ಮತ್ತು, ನಮ್ಮದೆಂಬ ಮನಸ್ಸು ಅಷ್ಟಿಷ್ಟು ಇರುವಾಗಲೂ ಅದನ್ನು ನಮ್ಮದಲ್ಲದ ಮನಸ್ಸಿನಿಂದ ಬೇರ್ಪಡಿಸುವ ಕೌಶಲವಾಗಲೀ, ಅಂಥ ಕೌಶಲಕ್ಕೆ ಅಗತ್ಯವಾಗುವ ಶಿಸ್ತಾಗಲೀ ನಮಗೆ ಇಲ್ಲದಿರುವುದರಿಂದ, ಗಾಂಧಿಯೂ ಸೇರಿದಂತೆ ಎಲ್ಲ ಮಹಾನುಭಾವರೂ ನಮಗೆ ಸಂದೇಶವಾಹಕರು; ಉಪದೇಶಕರು. ನಮ್ಮ ಮಾರುಕಟ್ಟೆ ಯುಗಧರ್ಮಕ್ಕೆ ತಕ್ಕಂತೆ ನಾವು ಅಂಥ ಮಹಾನುಭಾವರು ಮಾಡಿರುವ ಉಪದೇಶಗಳನ್ನೋ ಅಥವಾ ಸಿದ್ಧಾಂತಗಳನ್ನೋ ಬಳಸಲು ಒದ್ದಾಡುವ ಉಪಭೋಗಜೀವಿಗಳು. ಹಾಗಾಗಿ, ಸಿದ್ಧ ಆಲೋಚನೆಗಳ ಬಳಕೆಯನ್ನು ಮಾತ್ರ ನಾವು ಮಾಡಬಲ್ಲೆವಾಗಿ ಸ್ವತಃ ಆಲೋಚಿಸುವುದನ್ನು ಮರೆತಿರುವ ವಿಚಿತ್ರ ವಿಪರ್ಯಾಸವೊಂದು ಇವತ್ತು ಉದ್ಭವವಾಗಿದೆಯೆಂದು ನನ್ನ ತಿಳುವಳಿಕೆ.

– ಅಕ್ಷರ ಕೆ. ವಿ. 

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.