Ganesha Idol Industry: ಉಲ್ಲಾಸ ನೀಡದ ಉದ್ಯಮ
Team Udayavani, Sep 17, 2023, 12:01 PM IST
ಕಳೆದ ವರ್ಷ. ಹೆಚ್ಚುಕಮ್ಮಿ ಇದೇ ದಿನಗಳು. ಕೂಡ್ಲಿಗಿಯ ಹಳೆ ಲಕ್ಷ್ಮೀ ಬಜಾರ್‌ನಲ್ಲಿ ಹೋಗುತ್ತಿದ್ದೆ. ಅಲ್ಲಿದ್ದ ಹಳೇ ಮನೆಯ ಬಾಗಿಲ ಕಡೆಗೆ ದೃಷ್ಟಿ ಬಿತ್ತು. ಒಳಗೆ ಗಣಪನ ವಿಗ್ರಹ ಕಾಣಿಸಿತು! ಅರೆ, ಗಣೇಶೋತ್ಸವ ಮುಗಿದು ಹೆಚ್ಚು ಕಮ್ಮಿ ತಿಂಗಳು ಕಳೆದಿದೆ. ಹಾಗಿದ್ದೂ ಈ ಸುಂದರ ಗಣಪ ಮುಕ್ತಿ ಕಾಣದೇ ಅನಾಥವಾಗಿದೆಯಲ್ಲ? ಎಂಬ ಕುತೂಹಲದಿಂದ ಹತ್ತಿರ ಹೋದೆ. ಅಲ್ಲಿ ಗಣನಾಥನ ನೂರೆಂಟು ವಿಗ್ರಹಗಳಿದ್ದವು! ಒಂದಕ್ಕಿಂತ ಒಂದು ಅಂದವಾಗಿದ್ದವು. ಅವೆಲ್ಲ ಅಕ್ಷರಶಃ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿದ ಗಣಪಗಳು. ಈಗಿನ ಕಾಲದ ಜನರಿಗೆ ರುಚಿಸದೇ, ಹೀಗೆ ಮೂಲೆ ಸೇರಿ, ಧೂಳು ತಿನ್ನುತ್ತಿದ್ದವು. ಇಂತಹ ಗಣೇಶ ವಿಗ್ರಹಗಳನ್ನು ತಯಾರಿಸುವ ಕುಟುಂಬ ನಷ್ಟದಲ್ಲಿ ನಲುಗಿತ್ತು. ಇಂತಹ ಸಂಕಷ್ಟದಲ್ಲಿ ಸಾವಿರಾರು ಕುಟುಂಬಗಳು ರಾಜ್ಯದ ಮೂಲೆ ಮೂಲೆಗಳಲ್ಲಿವೆ.
ನೂರೆಂಟು “ವಿಘ್ನ’:
ತಲತಲಾಂತರದಿಂದ “ನಿರ್ವಿಘ್ನ’ ಗಣಪನ ಮೂರ್ತಿ ತಯಾರಿಸುವುದನ್ನೇ ಕಾಯಕ ಮಾಡಿಕೊಂಡಿರುವ ಅನೇಕ ಕುಟುಂಬಗಳಿಗೆ “ವಿಘ್ನ ‘ ಎದುರಾಗಿದೆ. ಅವರೆಲ್ಲ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಭಕ್ತರ ಇಚ್ಛೆಗೆ ತಕ್ಕಂತೆ ಅಥವಾ ಬದಲಾದ ಕಾಲಮಾನಕ್ಕೆ ತಕ್ಕಂತೆ ಇವರ ಮನಸ್ಸು ಸುತರಾಂ ಒಗ್ಗಿಕೊಳ್ಳುತ್ತಿಲ್ಲ. ಗಣೇಶ ಮೂರ್ತಿ ಅದರ ಮೂಲ ಸ್ವರೂಪದಲ್ಲಿದ್ದರೇ ಚೆನ್ನ. ಅದಕ್ಕೊಂದು ವಿಶಿಷ್ಟ ಹಿನ್ನೆಲೆ, ಮಹತ್ವ, ಪಾವಿತ್ರ್ಯತೆ ಇದೆ ಅನ್ನೋದು ಇವರ ವಾದ. ಗಣೇಶನ ರೂಪವೇ ರೂಪಾಂತರಗೊಂಡರೆ ಬಹುತೇಕರ ಶ್ರದ್ಧಾ ಭಕ್ತಿ, ದೇವರ ಕುರಿತು ಇರುವ ಭಯ,ಪ್ರೀತಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಳಲು ಇವರದ್ದು.
ಹೀಗಾಗಿ ಪರಂಪರಾಗತವಾಗಿ ಭಾಗಶಃ ಏಕರೂಪ ಗಣಪನನ್ನೇ ಹೆಚ್ಚಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹಣ ಗಳಿಕೆಗಿಂತ ಪೂರ್ವಿಕರಿಂದ ಬಳುವಳಿಯಾಗಿ ಬಂದಂಥ ಕಲೆಯನ್ನು ಉಳಿಸಿಕೊಂಡು ಹೋಗಲು ಆಸೆಪಡುವ, ಆತ್ಮ ತೃಪ್ತಿಗಾಗಿ ದುಡಿಯುವ ವರ್ಗ ಇದು. ಇವರೆಲ್ಲ ಕೈ ಮತ್ತು ಚಿಕ್ಕಪುಟ್ಟ ಅಚ್ಚುಗಳನ್ನು ಬಳಸಿ, ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಾರೆ. ಆದರೆ, ಇದು ಇಂದಿನ ಪೀಳಿಗೆಗೆ ಒಗ್ಗುತ್ತಿಲ್ಲ!
ಕೊಳ್ಳುವವರಿಲ್ಲ, ಕೂರಿಸುವವರೇ ಎಲ್ಲ…
“ಮೊದ್ಲಿಗಿಂತ ಈಗ ಗಣೇಶ ಕುಳ್ಳಿಸೋರು ನೂರ್ ಪಟ್ಟು ಹೆಚ್ಚು ಆಗ್ಯಾರೆ. ಆದ್ರೆ ನಮ್ ಗಣೇಶ ಮೂರ್ತಿ ಕೊಳ್ಳೋರು ಮಾತ್ರ ಅಷ್ಟಕ್ಕಷ್ಟೆ. ಕೆಲವೊಂದಿಷ್ಟು ಸಂಪ್ರದಾಯಸ್ಥ ಕಾಯಂ ಗಿರಾಕಿಗಳಿ¨ªಾರೆ. ಅವರಿಂದಲೇ ನಮ್ ಕಲೆ ಉಳಿದೈತೆ..!’ ಕೂಡ್ಲಿಗಿಯ ಕೋಟೇಶ್ ಚಿತ್ರಗಾರ್ ಹೀಗೆ ಹೇಳುವಾಗ್ಗೆ ಅವರ ಪ್ರತಿ ಮಾತಿನಲ್ಲಿ ವೇದನೆ, ಅಸಮಾಧಾನ, ಆತಂಕ ಕಾಣುತ್ತಿತ್ತು. ಜೊತೆಗೆ ಪಿಓಪಿ, ಫ್ಯಾಕ್ಟರಿಯಲ್ಲಿ ತಯಾರಿಸಿದ ಗಣೇಶಗಳ ಹಾವಳಿಯಿಂದ, ತಿಂಗಳಾನುಗಟ್ಟಲೆ ಕಷ್ಟಪಟ್ಟು ಮಾಡಿದ ವಿಗ್ರಹಗಳಿಗೆ ಬೇಡಿಕೆ ಇಲ್ಲ ಎಂಬ ಸಂಕಟವಿತ್ತು.
ಎತ್ತರಕ್ಕೆ ಜೈ.. ಗುಣಮಟ್ಟಕ್ಕೆ ಬೈ!:
ಈಗ ಗಣೇಶನನ್ನು ಇಡುವವರ ಮಧ್ಯೆ ಪೈಪೋಟಿ ಬಿದ್ದಿದೆ. ಒಬ್ಬರಿಗಿಂತ ಒಬ್ಬರು ಬಹು ಎತ್ತರದ, ಬಗೆಬಗೆ ರೂಪದ, ಗಣಪನನ್ನ ಕೂರಿಸಲು ಹಾತೊರೆಯುತ್ತಾರೆ! ಹೀಗಾಗಿ ಡಿಸೈನ್ ಡಿಸೈನ್‌ನ ಗರಿಷ್ಠ ಎತ್ತರದ ಗಣಪತಿ ಮೂರ್ತಿಗಳಿಗೆ ಮಾರು ಹೋಗಿ, ಕೊಳ್ಳಲು ಮುಗಿ ಬೀಳುತ್ತಾರೆ. ಇಂತಹ ಜನರ ಮತ್ತು ಮಾರುಕಟ್ಟೆಯ ನಾಡಿಮಿಡಿತ ಅರಿತು, ಹಣ ಮಾಡಬೇಕೆನ್ನುವವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಗಣೇಶ ವಿಗ್ರಹದ ಗುಣಮಟ್ಟಕ್ಕಿಂತ ಅದರ ಎತ್ತರ, ಗಾತ್ರ, ನವನವೀನ ಡಿಸೈನ್ ಇತ್ಯಾದಿಗೇ ಜೈ ಎನ್ನುವವರೇ ಎಲ್ಲೆಡೆ ಕಾಣುತ್ತಾರೆ.
ಆದರೆ ಸಾಂಪ್ರದಾಯಿಕ ಗಣೇಶ ಮೂರ್ತಿಗಳ ತಯಾರಕರ ಮನಸ್ಸು ಮಾತ್ರ ಬದಲಾಗಿಲ್ಲ. ಜನ ಕೊಳ್ಳದಿದ್ದರೂ, ಇವರು ಮನಸ್ಸು ಬದಲಿಸಿಲ್ಲ. “ಗಣಪನ ಮೂರ್ತಿ ತಯಾರಿಕೆ ಈಗ ಬಲು ಈಜಿ. ಆದರೆ ಪರಿಸರಕ್ಕೆ ಅಷ್ಟೇ ಮಾರಕ. “ವಿಘ್ನ ನಿವಾರಕ’ ನಿಂದಲೇ ಪ್ರಕೃತಿಗೆ ವಿಘ್ನ ಒದಗಿದರೆ ಹೇಗೆ..? ಅದಕ್ಕೆ ಕಲಾವಿದನೇ ಕಾರಣನಾದರೆ? ಈ ನೈತಿಕತೆ, ಆತ್ಮಸಾಕ್ಷಿಯೇ ನಮ್ಮನ್ನು ಕಟ್ಟಿ ಹಾಕಿದೆ. ಇದನ್ನೊಂದೇ ನೆಚ್ಚಿಕೊಂಡರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬುದು ಅರ್ಥವಾಗಿದೆ. ಹಾಗಾಗಿ ರೊಟ್ಟಿಗಾಗಿ ಬೇರೆ ಕೆಲಸಗಳನ್ನು ಆಶ್ರಯಿಸಿದ್ದೇವೆ’ ಎನ್ನುತ್ತಾರೆ ಕೂಡ್ಲಿಗಿಯ ಮÇÉೇಶ್ ನಾರಾಯಣಪ್ಪ ಚಿತ್ರಗಾರ್.
ಕಲಾವಿದರಿಗೆ ಬೆಲೆ ಇಲ್ಲ…
ಪರಿಸರ ಸ್ನೇಹಿಯಾದ ಒಂದು ತಕ್ಕಮಟ್ಟಿನ ಎತ್ತರದ ಗಣೇಶ ಮಾಡಲು ವಾರಕ್ಕೂ ಹೆಚ್ಚು ಟೈಮ್ ಬೇಕು. ಅದು ಇರೋ ಬರೋ ಮನೆ ಮಂದಿಯಲ್ಲ ಸೇರಿದರೆ ಮಾತ್ರ. ಮಣ್ಣು, ಕಚ್ಚಾವಸ್ತು, ಕೂಲಿಗಾರರು.. ಇದೆಲ್ಲಾ ಸಿಕ್ಕಾಪಟ್ಟೆ ಹಣ ಬೇಡುತ್ತದೆ. ಆದರೆ ವಿಗ್ರಹ ಕೊಳ್ಳುವಾಗ್ಗೆ ಇದೇನನ್ನೂ ಯೋಚಿಸದ ಜನ ಚೌಕಾಸಿಗೆ ನಿಲ್ಲುತ್ತಾರೆ. ಅದೇ ಕಡಿಮೆ ಶ್ರಮ ಹಾಗೂ ಸಮಯದಲ್ಲಿ ಕೆಮಿಕಲ್ಸ…ಗಳನ್ನು ಹಾಕಿ ಮಾಡಿದ ರಂಗು ರಂಗಿನ ಗಣಪಗಳನ್ನು ಕೇಳಿದಷ್ಟು ಹಣ ತೆತ್ತು ಖರೀದಿಸುತ್ತಾರೆ. ಅಸಲಿ ಕಲೆಗೆ, ಕಲಾವಿದನಿಗೆ ಬೆಲೆ ಕೊಡುವ ಕಾಲ ಈಗಿಲ್ಲ. ಇದೆಲ್ಲದ್ದರಿಂದ ನಾವು ಜೀವನದಲ್ಲಿ ಆರಕ್ಕೇರುತ್ತಿಲ್ಲ, ಮೂರಕ್ಕೆ ಇಳಿಯುತ್ತಿಲ್ಲ’ ಎನ್ನುತ್ತಾರೆ ಹೊಸಪೇಟೆಯ ಮಾಲತಿ ವೀರೇಶ್ ಚಿತ್ರಗಾರ್.
ಕಾಗದದಲ್ಲೇ ಉಳಿದ ಕಾನೂನು!:
ದಶಕದ ಕೆಳಗೆ ಪಿಓಪಿ ಗಣೇಶಗಳ ಹಾವಳಿ ಮಿತಿ ಮೀರಿತ್ತು. ಇದರಿಂದ ವಂಶಪಾರಂಪರ್ಯವಾಗಿ ಗಣೇಶ ಮೂರ್ತಿ ಮಾಡಿಕೊಂಡು ಬಂದ ಕುಟುಂಬಗಳು ಕಂಗಾಲಾಗಿದ್ದವು. ತದನಂತರ ಪರಿಸರಕ್ಕೆ ಮಾರಕವಾದ ಇಂತಹ ಗಣೇಶಗಳನ್ನು ತಯಾರಿಸುವುದನ್ನು ನಿಲ್ಲಿಸಲು ಸರಕಾರ ನೀತಿ ನಿಯಮಗಳನ್ನು ರೂಪಿಸಿ, ಪರಿಸರ ಸ್ನೇಹಿ ಗಣಪಗಳನ್ನು ಬಳಸುವಂತೆ ಉತ್ತೇಜಿಸಿತು. ಆದರೆ ಈ ಆದೇಶ ಹಾಳೆಯಲ್ಲಷ್ಟೆ. ಇಂದಿಗೂ ಅನೇಕ ಫ್ಯಾಕ್ಟರಿಗಳು, ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಟೊಳ್ಳು ಗಣೇಶ ಪ್ರತಿಮೆಗಳಲ್ಲಿ ಭಾಗಶಃ ಪಿಓಪಿ ಮಿಶ್ರಣವಿದೆ. ಇದರ ಹಿಂದೆ ಹಣ, ಅಧಿಕಾರ, ರಾಜಕೀಯ ಪ್ರಭಾವ ಕೆಲಸ ಮಾಡುತ್ತಿದೆ. ಕಾರಣ ನಮ್ಮ ಪರಿಸ್ಥಿತಿ ಮೊದಲಿಗಿಂತ ಭಿನ್ನವಾಗಿಲ್ಲ. ಆಗುವುದಿಲ್ಲ ಬಿಡಿ..’ ಎನ್ನುತ್ತಾರೆ ಕೂಡ್ಲಿಗಿಯ ಸರಸ್ವತಿ ಚಿತ್ರಗಾರ್.
ಮಾಡುವವರು ವಿರಳ.. ಮಾರುವವರೇ ಹೇರಳ..!:
ಶ್ರಮ ಹಾಕಿ, ಏಕಾಗ್ರತೆಯಿಂದ ದಿನವಿಡೀ ಕುಳಿತು ಗಣಪನ ವಿಗ್ರಹಗಳನ್ನು ತಯಾರಿಸುವವರ ಸಂಖ್ಯೆ ಈಗ ಬೆರಳಣಿಕೆಯಷ್ಟು. ಮೊದಲೆಲ್ಲ ಚಿತ್ರಗಾರ್, ಜಿನಗಾರ್, ವಿಶ್ವಕರ್ಮ… ಹೀಗೆ ಒಂದಿಷ್ಟು ಮನೆತನದವರು ಮಾತ್ರ ಇದನ್ನು ಮಾಡುತ್ತಿದ್ದರು. ಅವರಲ್ಲಿಗೇ ಹೋಗಿ ಭಕ್ತರು ಧಾರ್ಮಿಕ ವಿಧಿ-ವಿಧಾನಗಳನ್ನು ಅನುಸರಿಸಿ, ತುಂಬಾ ಭಕ್ತಿ-ಭಾವದಿಂದ ಖರೀದಿಸಿ, ಕಲಾವಿದರಿಗೆ ಧನ್ಯತೆ ಅರ್ಪಿಸಿ ತರುತ್ತಿದ್ದರು. ಆದರೆ ಈಗ ರೆಡಿಮೇಡ್, ಮೋಲ್ಡಿಂಗ್ ಗಣಪಗಳಿಗೆ ಜನ ಮಾರು ಹೋಗಿರುವುದರಿಂದ ಹಳೆಯ ದಿನಗಳು ನೆನಪಾಗಿಯಷ್ಟೇ ಉಳಿದಿವೆ.
ಬಂಡವಾಳವೇ ದೊಡ್ಡಪ್ಪ..: “ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ..’ ಅನ್ನೋದು ಈಗ ಅಪ್ರಸ್ತುತ. “ದುಡ್ಡೇ ಎಲ್ಲಾ’ ಅನ್ನೋದನ್ನು ಗಣಪತಿ ಸೀಜನ್ ಸಹ ಪುಷ್ಟೀಕರಿಸುತ್ತದೆ. ಮೂರ್ತಿ ತಯಾರಿಕೆಗೆ ದೊಡ್ಡ ಮಟ್ಟದ ಬಂಡವಾಳ ಹೂಡಿ, ಅದನ್ನೊಂದು ಉದ್ಯಮ ಮಾಡಿಕೊಂಡವರು ಹಲವರಿದ್ದಾರೆ. ಹಬ್ಬವಿನ್ನೂ ಮೂರು ತಿಂಗಳ ದೂರದಲ್ಲಿದೆ ಅನ್ನುವಾಗಲೇ ಬಾಂಬೆ, ಕೋಲ್ಕತ್ತದಿಂದ ಕೆಲಸಗಾರರನ್ನು ಕರೆತಂದು ವಿವಿದೆಡೆ ತಿಂಗಳುಗಟ್ಟಲೆ ತಾತ್ಕಾಲಿಕವಾಗಿ ಕ್ಯಾಂಪ್ ಹಾಕುತ್ತಾರೆ. ಅಸಂಖ್ಯಾತ ಗಣೇಶ ವಿಗ್ರಹಗಳನ್ನು ತಯಾರಿಸುತ್ತಾರೆ. ಗಣೇಶ ಚತುರ್ಥಿ ಬರುತ್ತಿದ್ದಂತೆ ವಿವಿಧ ಊರುಗಳಿಗೆ, ಮನೆ ಮನೆ ಬಾಗಿಲಿಗೆ ಹೋಗಿ, ಸಂತೆಯಲ್ಲಿ ತರಕಾರಿ ಮಾರಿದಂತೆ ಗಣೇಶ ಮೂರ್ತಿಗಳನ್ನು ಮಾರುತ್ತಾರೆ! ಈ ಬೆಳವಣಿಗೆ ಸ್ಥಳೀಯ ಗಣೇಶ ಮೂರ್ತಿ ತಯಾರಕರ ವ್ಯಾಪಾರಕ್ಕೆ ದೊಡ್ಡ ಮಟ್ಟದಲ್ಲಿಯೇ ಪೆಟ್ಟು ಕೊಟ್ಟಿದೆ.
-ಸ್ವರೂಪಾನಂದ ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.