ಮೊಬೈಲ್ ಸಿಕ್ಕಿತು!
Team Udayavani, Jul 14, 2019, 5:23 AM IST
ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್ ಓದುತ್ತಿರುವ ಮಗಳಿಗೆ ಪೋನ್ ಮಾಡೋಣ ಅಂತ ಮೊಬೈಲ್ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ ಸಿಗಲಿಲ್ಲ. ನಂತರ ಎಡ ಜೇಬು, ಅಲ್ಲಿ ಕೂಡ ಇಲ್ಲಾ , ಹಿಂದಿನ ಜೇಬು, ಷರಟಿನ ಜೇಬು ಎಲ್ಲಾ ತಡಕಾಡಿ ಮೊಬೈಲು ಸಿಗದೇ ಆತಂಕಕ್ಕೆ ಒಳಗಾದೆ. ಪುನಃ ಪುನಃ ತಡಕಾಡಿದೆ. ಇಲ್ಲ. ಅದೇನು ಸಣ್ಣ ವಸ್ತುವೇ ಇಷ್ಟೊಂದು ಪರದಾಡಲು!
ಮನೆಯಲ್ಲಿ ಎಲ್ಲಾದರೂ ಇಟ್ಟಿರಬಹುದೆಂದು ಟೇಬಲ್ಲಿನ ಡ್ರಾಯರನ್ನು , ಟಿ.ವಿ. ಮುಂದಿನ ರ್ಯಾಕಿನಲ್ಲಿ- ಹೀಗೆ ನನಗೆ ಅನುಮಾನ ಬಂದ ಕಡೆಯೆಲ್ಲ ಹುಡುಕಿದೆ. ಮೊಬೈಲು ಸಿಗಲೇ ಇಲ್ಲ. ಮನೆಯ ಮೂಲೆ ಮೂಲೆ ತಡಕಾಡಿದರೂ ಅದರ ಸುಳಿವು ಸಹ ಸಿಗಲಿಲ್ಲ. ದೊಡ್ಡ ಮಗಳು ಏನಾದ್ರೂ ತೆಗೆದುಕೊಂಡು ಕೆಲಸಕ್ಕೆ ಬರದ ಗೇಮು ಅಡುತ್ತಿರಬಹುದೆಂದು ನೋಡಿದರೆ ಅವಳು ಟಿ.ವಿ. ನೋಡುತ್ತಿದ್ದಾಳೆ. ಎಲ್ಲಿ ಕಳೆದು ಹೋಗಿರಬಹುದು ಮೊಬೈಲು ! ಬಿ.ಪಿ. ಹೆಚ್ಚಾಗತೊಡಗಿತು.
ನಾನು ಮೊಬೈಲು ನಾಪತ್ತೆ ಬಗ್ಗೆ ಪರದಾಡುತ್ತಿದ್ದರೆ ಇದ್ಯಾವುದರ ಪರಿವೆಯೇ ಇಲ್ಲದೆ ನನ್ನಾಕೆ ಮತ್ತು ಮಗಳು ಧಾರಾವಾಹಿಯಲ್ಲಿ ಮುಳುಗಿ ಹೋಗಿದ್ದರು. ಅವರನ್ನು ಎಚ್ಚರಿಸಲು ಸಾಧ್ಯವೇ ಇಲ್ಲ ಎಂಬಂತೆ ಅಷ್ಟೊಂದು ಆಸಕ್ತಿಯಿಂದ ಧಾರಾವಾಹಿ ವೀಕ್ಷಿಸುತ್ತಿದ್ದರು. ಇಂಥ ಆಸ ಕ್ತಿ ಯಿಂದ ನನ್ನ ಮಗಳು ಓದಿನ ಕಡೆಗೆ ಹರಿಸಿದ್ದಿದ್ದರೆ ಡಿಗ್ರಿಯಲ್ಲಿ ರ್‍ಯಾಂಕು ಪಡೆಯುತ್ತಿದ್ದಳೇನೋ ಗೊತ್ತಿಲ್ಲ. ನನ್ನ ಕೋಪ ನೆತ್ತಿಗೇರಿ ಟಿ.ವಿ.ಆಫ್ ಮಾಡಿದೆ. ಆಗ ಸ್ಫೋಟಗೊಂಡಿತು ನೋಡಿ. “”ಏನ್ರಿ ನೀವು ಅಪರೂಪಕ್ಕೆ ಒಮ್ಮೆ ಸೀರಿಯಲ್ ನೋಡುತ್ತಿದ್ದರೆ ಟಿ.ವಿ. ಆಫ್ ಮಾಡತ್ರಿ” ಅಂತ ನನ್ನ ಹೆಂಡತಿ ಹರಿ ಹಾಯ್ದಳು.
ಮಗಳು ಕಣ್ಣು ಕೆಕ್ಕರಿಸಿ ನೋಡಿದಳು. ಅವರಿಬ್ಬರೂ ಧಾರಾವಾಹಿಯ ಕ್ಲೈಮಾಕ್ಸ್ ದೃಶ್ಯ ನೋಡುತ್ತಿದ್ದರು ಅಂತ ಕಾಣುತ್ತೆ. ನನ್ನ ಕೋಪಕ್ಕೆ ಪ್ರತಿಭಟನೆ ರೂಪದಲ್ಲಿ ಮಗಳು ಎದ್ದು ಬಂದು ಪುನಃ ಟಿ.ವಿ. ಆನ್ ಮಾಡಿದಳು. ತಾಳ್ಮೆ ಕಳೆದುಕೊಂಡು ನಾನು, “”ಏಯ್ ಕತ್ತೆಗಳಾ, ನಾನು ಮೊಬೈಲು ಕಾಣುತ್ತಿಲ್ಲ ಅಂತ ಮನೆ ತುಂಬಾ ಪರದಾಡುತ್ತಿದ್ದೇನೆ. ನನ್ನ ಅವಸ್ಥೆಯ ಪರಿವೆ ಇಲ್ಲದೆ ಟಿ.ವಿ. ನೋಡುತ್ತಿದ್ದೀರಿ’ ’ ಅಂತ ಹೇಳಿ ಪುನಃ ಟಿ.ವಿ.ಆಫ್ ಮಾಡಿದೆ. ಈಗ ತಾಯಿ- ಮಗಳಿಗೆ ವಾಸ್ತವದ ಅರಿವಾಗಿರಬೇಕು. “”ಸರಿ ಹೋಯ್ತು. ನೀವು ಮೊಬೈಲು ಕಳೆದು ಕೊಂಡಿರುವುದನ್ನು ನಮಗೆ ಹೇಳಿದ್ರೆ ತಾನೆ ಗೋತ್ತಾಗೋದು? ನಿಮ್ಮಷ್ಟಕ್ಕೆ ನೀವೇ ಹುಡು ಕು ತ್ತಿದ್ದರೆ ನಮಗೆ ತಿಳಿಯೋದು ಹೇಗೆ?” ಅಂತ ನನ್ನದೇ ತಪ್ಪು ಎಂಬಂತೆ ಆಕ್ಷೇಪಣೆ ಮಾಡುತ್ತ “”ಮೊನ್ನೆ ತಾನೇ ಸಣ್ಣ ಮಗಳು ಇಪ್ಪತ್ತು ಸಾವಿರದ ಮೊಬೈಲನ್ನು ಗೋಕರ್ಣದ ಬೀಚಿನಲ್ಲಿ ನೀರಿಗೆ ಬೀಳಿಸಿ ಹಾಳು ಮಾಡಿದಳು. ಈವೊತ್ತು ನೀವು ಸಣ್ಣ ಹುಡುಗರ ಹಾಗೆ ಮೊಬೈಲು ಕಳೆದುಕೊಂಡು ಮನೆ ತುಂಬಾ ಪರದಾಡುತ್ತಿದ್ದೀರಿ” ಎಂದು ನನ್ನನ್ನೇ ಬೈದಳು. ಮುಂದುವರಿದು “”ನಾನು ತರಕಾರಿಗೆ ನೂರು ರೂಪಾಯಿ ಕೇಳಿದ್ರೆ ಕೊಡಲ್ಲ. ಸಾವಿರಾರು ರೂಪಾಯಿ ಮೊಬೈಲು ಕೊಂಡಿದ್ದೀರಿ. ಅದನ್ನು ಕಳೆದೂ ಕೊಂಡಿದ್ದೀರಿ”ಅಂತ ವ್ಯಂಗ್ಯವಾಡಿದಳು.
ನನ್ನ ಮಗಳು ಮುಂದಿನ ಹೆಜ್ಜೆಯಾಗಿ ತನ್ನ ಮೊಬೈಲಿನಿಂದ ನನ್ನ ಮೊಬೈಲಿಗೆ ಕರೆ ಮಾಡಿದಳು. ಮೊಬೈಲು ರಿಂಗ್ ಆಗುತ್ತಿತ್ತು ಆದ್ರೆ ಯಾರೂ ಅದನ್ನು ರಿಸೀವ್ ಮಾಡುತ್ತಿಲ್ಲ. “”ಅಪ್ಪಾಜಿ… ನಿನ್ನ ಮೊಬೈಲಿನಲ್ಲಿ ಎಟಿಎಂ ಪಿನ್ ಬೇರೆ ಐತೆ. ಯಾರಿಗಾದ್ರೂ ಸಿಕ್ಕರೇ ಕಷ್ಟ” ಅಂತ ಹೇಳಿ ನನ್ನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದಳು. “”ಹೌದೇನೇ, ಎಟಿಎಂ ಪಿನ್ ಬಳಸಿಕೊಂಡು ಹಣ ಯಾರಾದ್ರೂ ಡ್ರಾ ಮಾಡಿದರೇ ಏನು ಗತಿ? ಅಯ್ಯೋ ಶಿವನೆ!” ಚಡಪಡಿಸಿದಳು ನನ್ನಾಕೆ. “”ಅಮ್ಮಾ ಸುಮ್ಮನಿರು. ಬರೀ ಪಿನ್‌ನಿಂದ ಹಣ ಡ್ರಾ ಮಾಡಲು ಸಾಧ್ಯವಿಲ್ಲ ಅದಕ್ಕೆ ಎಟಿಎಂ ಕಾರ್ಡು ಕೂಡ ಬೇಕು”. ಆತಂಕ ಸೃಷ್ಟಿಸಿದ ಮಗಳೇ ಸಮಾಧಾನ ಕೂಡ ಮಾಡಿದಳು.
“”ಎಲ್ಲಿ ಬಿಟ್ರಿ ನೆನೆಪು ಮಾಡಿ ಕೊಳ್ರಿ” ಅಂತ ನನ್ನನ್ನು ಮತ್ತೆ ತರಾಟೆಗೆ ತೆಗೆದುಕೊಳ್ಳತೊಡಗಿದಳು ಹೆಂಡತಿ.
“”ಆಫೀಸಿನಲ್ಲಿ ಬಿಟ್ಟು ಬಂದಿರಬಹುದು. ಅಲ್ಲಿನ ರಾತ್ರಿ ಸೆಕ್ಯೂರಿಟಿಯವರಿಗೆ ಫೋನ್ ಮಾಡಿ” ಅಂತ ಮಗಳು ಸಲಹೆಯನಿತ್ತಳು. ಸಲಹೆಯೇನೋ ಉತ್ತಮವಾದದ್ದೇ. ಆದರೆ, ಸೆಕ್ಯೂರಿಟಿಯವರ ಫೋನ್ ನಂಬರು ಕೂಡ ಮೊಬೈಲಿನಲ್ಲೇ ಇದೆ. ಮೊದಲಿನ ಹಾಗೆ ಫೋನು ನಂಬರುಗಳು ನೆನಪಿನಲ್ಲಿ ಇರುತ್ತವೆಯೆ? ಮೊದಲು ನಾನು ಕನಿಷ್ಟ ಇಪ್ಪತ್ತು ನಂಬರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆ. ಆದರೆ, ಈಗ ಎರಡು ಗಂಟೆಯ ಮೊದಲು ನಡೆ ದ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಾನೇನು ಎಲ್ಲರಂತೆ ಮೊಬೈಲು ಹುಚ್ಚನೇನು ಅಲ್ಲ. ನಾನಾಗಿಯೇ ಯಾರಿಗೂ ಕಾಲು-ಮೆಸೇಜು ಮಾಡುವುದಿಲ್ಲ.ಗದಗಿನಲ್ಲಿ ಮೆಡಿಕಲ್ ಓದುತ್ತಿರುವ ಚಿಕ್ಕ ಮಗಳಿಗೆ ಮಾತ್ರ ಪ್ರತಿದಿನ ರಾತ್ರಿ ತಪ್ಪದೇ ಫೋನು ಮಾಡುತ್ತೇನೆ. ಅಷ್ಟೆ ? ನಾನು ಮತ್ತು ನನ್ನಾಕೆ ಇದುವರೆಗೂ ಒಟ್ಟು ಮಾಡಿದರೆ ಫೋನಿನಲ್ಲಿ ಎರಡು ಗಂಟೆ ಸಹ ಮಾತನಾಡಿಲ್ಲ.
ಬೆಳಗ್ಗೆಯಿಂದ ಸಂಜೆಯವ ರೆಗೆ ನಾನು ಯಾರ ಯಾರ ಬಳಿ ಮಾತಾಡಿದೆ ಎಂಬುದನ್ನು ನೆನಪು ಮಾಡಿಕೊಳ್ಳತೊಡಗಿದೆ. ಮೊಬೈಲು ಯಾವ ಸಂದರ್ಭದಲ್ಲಿ ನನ್ನ ಜೇಬಿನಿಂದ ಜಾರಿತೋ ಗೊತ್ತಾಗಲೇ ಇಲ್ಲ. ಆಫೀಸಿನಲ್ಲಿ ಬಿಟ್ಟಿರಬಹುದೆಂದು ಸ್ಕೂಟರ್ ಏರಿ ಆಫೀಸು ಬಳಿ ಬಂದೆ. ನನ್ನ ಕಂಡು ಸೆಕ್ಯೂರಿಟಿ “”ಏನ್ ಸಾರ್ ಪುನಃ ಬಂದ್ರಿ?” ಎಂದ. ನಾನು, ನನ್ನ ಮೊಬೈಲು ಕಳೆದುಹೋದ ವಿಚಾರ ತಿಳಿಸಿ ಕಚೇರಿಯಲ್ಲೆಲ್ಲ ಕಡೆ ಹುಡುಕಿದೆವು. ಸಿಗಲಿಲ್ಲ ಯಾರಿಗೋ ಸಿಕ್ಕಿರಬೇಕು ಅಂತ ಅನ್ನಿಸಿತು. ಸರಿ, ಮೊಬೈಲು ಆಫೀಸಿನಲ್ಲಿ ಇಲ್ಲ ಹಾಗೂ ಮನೆಯಲ್ಲಿ ಕೂಡ ಇಲ್ಲ ಅಂದರೆ ಅದು ಆಫೀಸಿನಿಂದ ಮನೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದು ಹೋಗಿರಬೇಕು, ಅಷ್ಟೆ. ಮನೆಗೆ ತೆರಳಿದೆ.
ಗೇಟಿನಲ್ಲೇ ನನ್ನ ಬರುವಿಕೆಗೆ ಕಾಯುತ್ತಿದ್ದ ನನ್ನಾಕೆ, “”ಏನ್ರಿ ಮೊಬೈಲ್ ಸಿಕ್ತಾ?” ಎಂದು ನನ್ನನ್ನು ತಿವಿ ಯು ವಂತೆ ಪ್ರಶ್ನೆ ಮಾಡಿದಳು. ನಾನು ಉತ್ತರಿಸಲಿಲ್ಲ.
“”ಅಪ್ಪಾಜಿ, ಆಫೀಸಿನಿಂದ ಮನೆಗೆ ಬಂದ ನೀವು ಮನೆ ಒಳಗೆ ಬರಲೇ ಇಲ್ಲ. ನೀರು ತರಲು ಕ್ಯಾನ್ ತೆಗೆದುಕೊಂಡು ಹೋದ್ರಿ. ನೀರು ತರೋ ಹೊತ್ತಿಗೆ ಶೈಲ ಬಂದ. ಅವನ ಜೊತೆ ಕಾರು ಡ್ರೈವಿಂಗ್ ಕಲಿಯಲು ಹೋದ್ರಿ” ಅಂತ ಮಗಳು ಜ್ಞಾಪಿಸಿದಳು.
ನನ್ನ ಮಗಳ ತಲೆ ನನಗಿಂತ ತ್ವರಿತಗತಿಯಲ್ಲಿ ಪತ್ತೇದಾರಿಕೆ ಕೆಲಸ ಮಾಡತೊಡಗಿತು. ಅವಳು ತರ್ಕಿಸುತ್ತ ನನ್ನನ್ನು ಪೊಲೀಸರಂತೆ ಪ್ರಶ್ನೆ ಮಾಡತೊಡಗಿದಳು.
“”ಅಪ್ಪಾಜಿ, ಈವೊತ್ತು ಕೊನೆಯದಾಗಿ ಯಾರ ಜೊತೆಗೆ ಮಾತಾಡಿದ್ರಿ”
“”ಕಾರು ಓಡಿಸುವಾಗ ಯಾವುದಾದ್ರೂ ಪೋನ್ ಬಂದಿತ್ತ?”
ನಾನು ಏನೋ ನೆನ ಪಾ ದ ವ ನಂತೆ, “”ಹೌದೌದು… ಮೈಲಾರಪ್ಪ ಫೋನ್ ಮಾಡಿದ್ದರು” ಎಂದೆ.
ಮಗಳು ಕುಣಿದು ಕುಪ್ಪಳಿಸಿ ಕೀ ತೆಗೆದುಕೊಂಡು ಕಾರಿನ ಬಳಿ ಓಡಿದಳು. ಕಾರು ಡೋರ್ ತೆರೆದು ನೋಡಿದಾಗ ಮುಂಭಾಗದ ಗಣಪತಿ ವಿಗ್ರಹದ ಬಳಿ ರಿಂಗ್ ಆಗುತ್ತಿದ್ದ ಮೊಬೈಲ್‌ನ್ನು ನೋಡಿ,””ಅಪ್ಪಾಜಿ, ಮೊಬೈಲು ಕಾರಲ್ಲೇ ಇದೆ” ಅಂತ ಜೋರಾಗಿ ಕಿರುಚಿದಳು.
“ಎಲ್ಲೆಲ್ಲಿ ಬಿಟ್ಟು ಬಂದು ನಮ್ಮ ಜೀವ ತಿಂತೀರಿ’ ಅಂತ ಹೆಂಡತಿ ಬೈಯುತ್ತಿರುವುದು ಕೇಳಿಸುತ್ತಿತ್ತು.
ಪ. ಚಂದ್ರಕುಮಾರ ಗೌನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.