H. S. Venkateshamurthy: ಎಚ್ಚೆಸ್ವಿ 80 ತುಂಬಿದ ಕಾವ್ಯತಪಸ್ವಿ
Team Udayavani, Jun 23, 2024, 11:29 AM IST
ಸಾಹಿತಿಗಳಲ್ಲಿ ಕೆಲವರು ತುಂಬಾ ಸೊಗಸಾಗಿ ಬರೆಯುತ್ತಾರೆ. ಆದರೆ, ಅವರ ಮಾತಿನಲ್ಲಿ ಸ್ವಾರಸ್ಯವಿರುವುದಿಲ್ಲ. ಇನ್ನು ಕೆಲವರ ಭಾಷಣ ಚೆನ್ನಾಗಿರುತ್ತದೆ. ಬರಹ ಕಳಪೆ. ಬರಹ ಮತ್ತು ಭಾಷಣ ಎರಡೂ ಉತ್ತಮವಾಗಿರುವವರು ಅಪರೂಪ. ಕೆಲವು ಸಾಹಿತಿಗಳು ನೂರಾರು ಕೃತಿಗಳನ್ನು ರಚಿಸಿರುತ್ತಾರೆ. ಆದರೆ, ಅವುಗಳಲ್ಲಿ ಯಾವುದೋ ನಾಲ್ಕಾರು ಕೃತಿಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವರು ಅದ್ಭುತ ಅನ್ನಿಸುವ ಕೃತಿಗಳನ್ನು ರಚಿಸುತ್ತಾರೆ. ಅವುಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಪುಸ್ತಕಗಳ ಸಂಖ್ಯೆ ಮತ್ತು ಸತ್ವ ಎರಡೂ ಚೆನ್ನಾಗಿರುವ ನಿದರ್ಶನಗಳು ಅಪರೂಪ. ಒಂದು ಸಾಕು ಎರಡು ಬೇಕು ಅನ್ನುವ ಕಾಲದಲ್ಲಿ ನಾಲ್ಕು ಮಕ್ಕಳ ತಂದೆಯಾದವರು, ತಂದೆಯಾದ ಮೇಲೆ ಕಾಲೇಜಿಗೆ ಸೇರಿ ಎಂ.ಎ. ಮಾಡಿದವರು ಅಪರೂಪ. ಇಂಥ ಹಲವು ವೈಶಿಷ್ಟ್ಯಗಳುಳ್ಳ ಅಪರೂಪದ ಸಾಹಿತಿ, ಎಚ್ಚೆಸ್ವಿ ಎಂದೇ ಸಾಹಿತ್ಯ ಪ್ರಿಯರ ನಾಲಿಗೆಯಲ್ಲಿ ನಿತ್ಯವೂ ನಲಿದಾಡುತ್ತಿರುವ ಡಾ.ಎಚ್. ಎಸ್. ವೆಂಕಟೇಶ ಮೂರ್ತಿ. ಅವರು ಇಂದು ಎಂಬತ್ತು ಮಳೆಗಾಲಗಳನ್ನು ಮುಗಿಸಿ ಎಂಬತ್ತೂಂದಕ್ಕೆ ಕೊಡೆ ಹಿಡಿಯುತ್ತಿದ್ದಾರೆ.
ಎಚ್ಚೆಸ್ವಿಯವರೊಂದಿಗೆ ನನ್ನದು ನಾಲ್ಕು ದಶಕಗಳ ಸ್ನೇಹ. ವಯಸ್ಸಿನಲ್ಲಿ ಅವರು ನನಗಿಂತ 12 ವರ್ಷ ಹಿರಿಯರು. ಸಾಹಿತಿಯಾಗಿಯೂ ಬಹಳ ಎತ್ತರದಲ್ಲಿ ಶೋಭಿಸುತ್ತಿರುವ ಮೂರ್ತಿ. ಖಂಡಕಾವ್ಯಗಳನ್ನು ಮತ್ತು “ಬುದ್ಧಚರಣ’ದಂಥ ಮಹಾಕಾವ್ಯವನ್ನು ಬರೆದ ಈ ದೊಡ್ಡ ಕವಿ ಕಿರುಗವನಗಳನ್ನು ಬರೆಯುವ ನನ್ನನ್ನೂ ಅವರ ಆತ್ಮೀಯ ಮಿತ್ರರ ಬಳಗದಲ್ಲಿ ಸೇರಿಸಿಕೊಂಡಿರುವುದು ನನಗೆ ಹೆಮ್ಮೆಯ ಸಂಗತಿ. ಗಂಭೀರ ಬರಹಗಳಿಗೆ ಹೆಸರಾದ ಅವರಲ್ಲಿ ಹಾಸ್ಯಪ್ರಜ್ಞೆಯೂ ಸಾಕಷ್ಟಿದೆ. ಅವರ ಅನಾತ್ಮಕಥನ, ಮಕ್ಕಳ ಕವಿತೆ ಹಾಗೂ ಕೆಲವು ಮಕ್ಕಳ ನಾಟಕಗಳಲ್ಲಿ ಅದನ್ನು ಕಾಣಬಹುದು. ಆತ್ಮೀಯರೊಂದಿಗಿನ ಅವರ ಮಾತುಕತೆಯಲ್ಲೂ ಹಾಸ್ಯ ಅಲ್ಲಲ್ಲಿ ಇಣುಕುತ್ತದೆ. ಹಾಸ್ಯಕ್ಕೆ ಮುಕ್ತವಾಗಿ ಪ್ರತಿಕ್ರಿಯಿಸುವ ಗುಣ ಅವರಲ್ಲಿದೆ. ಒಮ್ಮೆ ವೇದಿಕೆಯಲ್ಲಿ ಎಚ್ಚೆಸ್ವಿಯವರ ಪಕ್ಕದಲ್ಲಿ ಕುಳಿತಿದ್ದಾಗ-“ನಿಮ್ಮ ಹೊಸ ಜುಬ್ಟಾ ಚೆನ್ನಾಗಿದೆ’ ಅಂದೆ. “ಮಗ ಕೊಟ್ಟದ್ದು’ ಅಂದರು. “ಅದಕ್ಕೇ ಝಗ ಮಗಾ ಅಂತಿದೆ’ ಅಂದೆ. ಎಚ್ಚೆಸ್ವಿ ವೇದಿಕೆಯಲ್ಲಿದ್ದರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನನ್ನ ಪನ್ ಪ್ರಜ್ಞೆಯನ್ನು (ಶ್ಲೇಷೆ) ಮೆಚ್ಚಿ ಅವರು ನನಗೆ ನೀಡಿದ ಬಿರುದು “ಶ್ಲೇಷಶಾಯಿ’.
ಪತ್ರ ಮಿತ್ರರು ಮತ್ತು ಪತ್ರೊಡೆ ಮಿತ್ರರು!
ಕೃತಿ ಬಿಡುಗಡೆ, ಮುನ್ನುಡಿ, ಬೆನ್ನುಡಿಗಳ ಮೂಲಕ ಹೊಸ ಲೇಖಕರಿಗೆ ಇವರಷ್ಟು ಪ್ರೋತ್ಸಾಹ ನೀಡುವ ಇನ್ನೊಬ್ಬ ಸಾಹಿತಿಯನ್ನು ನಾನಂತೂ ನೋಡಿಲ್ಲ. 1992ರಲ್ಲಿ ನಾನು ನನ್ನ ಕವನ ಸಂಕಲನ “ನನ್ನ ಕವಿತೆ ನನ್ನ ಹಾಗೆ’ ಪ್ರಕಟಿಸಲು ಪ್ರಕಾಶಕರನ್ನು ಹುಡುಕುತ್ತಿದ್ದಾಗ ಎಚ್ಚೆಸ್ವಿಯವರು ಲಿಪಿ ಪ್ರಕಾಶನದ ಬಾಕಿನ ಅವರ ಮೂಲಕ ಅದು ಪ್ರಕಟವಾಗಲು ನೆರವಾದರು. ಆ ಸಂಕಲನಕ್ಕೆ ಮುನ್ನುಡಿ ಬರೆದದ್ದು ಮಾತ್ರವಲ್ಲದೆ ಜಿಎಸ್‌ಎಸ್ ಅವರ ಬೆನ್ನುಡಿಯ ಭಾಗ್ಯ ಸಿಗುವಂತೆ ಮಾಡಿದರು. ಇಷ್ಟೇ ಅಲ್ಲ. ನಾನಾಗ ಉದ್ಯೋಗ ನಿಮಿತ್ತ ಉಡುಪಿಯಲ್ಲಿದ್ದೆ. ನನ್ನ ಕೋರಿಕೆಯಂತೆ ಕವನ ಸಂಕಲನದ ಬಿಡುಗಡೆಗೆ ಲಕ್ಷ್ಮಣರಾವ್ ಜೊತೆಗೆ ಬೆಂಗಳೂರಿನಿಂದ ಉಡುಪಿಗೆ ಬಂದಿದ್ದರು. ಮಂಗಳೂರು, ಉಡುಪಿ, ಬೆಳಗಾವಿ, ಮುಂಬೈ ಅಂತ ನಾನು ಉದ್ಯೋಗದ ನಿಮಿತ್ತ ವಾಸವಾಗಿದ್ದ ಊರುಗಳಿಗೆ ಬಂದಾಗಲೆಲ್ಲ ಎಚ್ಚೆಸ್ವಿ ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಅವರಿಗೆ ನನ್ನ ಮಡದಿ ಭಾರತಿ ಮಾಡುವ ಕೆಸುವಿನ ಎಲೆಯ ಪತ್ರೊಡೆ ಮತ್ತು ಕೊಟ್ಟೆ ಕಡುಬು ತುಂಬಾ ಇಷ್ಟ. ನಾನು ಮತ್ತು ಎಚ್ಚೆಸ್ವಿ ಪತ್ರ ಮಿತ್ರರು. ಭಾರತಿ ಮತ್ತು ಎಚ್ಚೆಸ್ವಿ ಪತ್ರೊಡೆ ಮಿತ್ರರು!
ನಾನೂ ನಿಮ್ಮ ಮಿತ್ರನಲ್ಲವೆ?
2005ರಲ್ಲಿ ನಡೆದ ಒಂದು ಘಟನೆಯನ್ನು ನಾನು ಎಂದೂ ಮರೆಯಲಾರೆ. ಅಂದು ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ನನ್ನ ಅಂಕಣ ಬರಹಗಳ ಸಂಕಲನ “ಮಾತು ಕವಿತೆ’ ಪುಸ್ತಕದ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕೃತಿ ಬಿಡುಗಡೆ ಮಾಡಬೇಕಿದ್ದ ಹಿರಿಯ ಸಾಹಿತಿ ಅ.ರಾ. ಮಿತ್ರರಿಗೆ ಅನಾರೋಗ್ಯದಿಂದ ಬರಲು ಸಾಧ್ಯವಾಗುತ್ತಿಲ್ಲವೆಂದು ಕೊನೆ ಘಳಿಗೆಯಲ್ಲಿ ಸುದ್ದಿ ಬಂತು. ಪ್ರೇಕ್ಷಕರಾಗಿ ಸಭಾಂಗಣದಲ್ಲಿ ಕೂತಿದ್ದ ಎಚ್ಚೆಸ್ವಿಯವರನ್ನು ಪುಸ್ತಕ ಬಿಡುಗಡೆ ಮಾಡವಂತೆ ಕೇಳಿಕೊಳ್ಳಿ ಎಂದು ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಸಲಹೆ ನೀಡಿದರು. ಎಚ್ಚೆಸ್ವಿಯವರಂಥ ಹಿರಿಯ ಸಾಹಿತಿಗಳ ಹತ್ತಿರ ಸ್ಟೆಪ್ನಿ ಆಗಿ ಅಂತ ಕೇಳಲು ನಾನು ಹಿಂದೇಟು ಹಾಕಿದೆ. ಆದರೆ, ಪ್ರಕಾಶ್ ಕಂಬ-ತ್ತಳ್ಳಿ ಒತ್ತಾಯದಿಂದ ನನ್ನನ್ನು ಎಚ್ಚೆಸ್ವಿ ಬಳಿಗೆ ತಳ್ಳಿದಾಗ, ವಿಧಿಯಿಲ್ಲದೆ ತುಂಬಾ ಸಂಕೋಚದಿಂದ ನನ್ನ ಕೋರಿಕೆಯನ್ನು ತಿಳಿಸಿದೆ. ಎಚ್ಚೆಸ್ವಿ ಯಾವ ಬಿಗುಮಾನವನ್ನೂ ತೋರದೆ ತತ್‌ಕ್ಷಣ “ಆಗಲಿ. ಆ ಮಿತ್ರರು ಬರದಿದ್ದರೇನಂತೆ? ನಾನೂ ನಿಮ್ಮ ಮಿತ್ರನಲ್ಲವೆ?’ ಎಂದು ಒಪ್ಪಿಕೊಂಡರು. ಕ್ರಿಕೆಟ್‌ನಲ್ಲಿ ಬದಲಿ ಆಟಗಾರನಾಗಿ ಬಂದ ಬ್ಯಾಟರ್ ಸೆಂಚುರಿ ಹೊಡೆದಂತೆ ನನ್ನ ಬಗ್ಗೆ ಮತ್ತು ನನ್ನ ಹನಿಗವನಗಳ ಬಗ್ಗೆ ಸೊಗಸಾದ ಭಾಷಣ ಮಾಡಿ ಸಭಿಕರನ್ನು ಸಂತೋಷಪಡಿಸಿ ದರು. ಅಂದಹಾಗೆ ಕ್ರಿಕೆಟ್ ಆಟದ ಬಗ್ಗೆ ಎಚ್ಚೆಸ್ವಿ ಅವರಿಗೆ ತುಂಬಾ ಆಸಕ್ತಿ ಇದೆ. ಅನಿಲ್ ಕುಂಬ್ಳೆ ಹತ್ತು ವಿಕೆಟ್ ಕಿತ್ತು ದಾಖಲೆ ಮಾಡಿದ ಟೆಸ್ಟ್ ಪಂದ್ಯವನ್ನು ಅವರ ಜೊತೆ ನಾನು ಶಿವಮೊಗ್ಗದ ಹೋಟೆಲ್ ಒಂದರಲ್ಲಿ ವೀಕ್ಷಿಸಿದ್ದೆ.
ಬೆನ್ನು ಬಿದ್ದು ಬರೆಸುತ್ತಾರೆ…
“ಕವಿಗೆ ಕವಿ ಮುನಿವಂ’ ಎಂಬ ಮಾತಿಗೆ ಒಂದು ಅಪವಾದದಂತೆ ಇರುವವರು ಎಚ್ಚೆಸ್ವಿ. ತಮಗಿಂತ ಹಿರಿಯ, ಕಿರಿಯ ಹಾಗೂ ಓರಗೆಯ ಸಾಹಿತಿಗಳ ಬಗ್ಗೆ ಅವರಷ್ಟು ವಿಫುಲವಾಗಿ ಬರೆದ ಇನ್ನೊಬ್ಬ ಕವಿಯನ್ನು ನಾನು ಕಂಡಿಲ್ಲ. ಅವರ “ಸುನೀತ ಭಾವ’ ಎಂಬ ಸಾನೆಟ್‌ಗಳ ಸಂಗ್ರಹದಲ್ಲಿ 70 ವ್ಯಕ್ತಿ ಚಿತ್ರಗಳಿವೆ. ಸಾ-ನೆಟ್ಟಿನ ಬಲೆಯಲ್ಲಿ ಅವರು ಹಿಡಿಯದ ಸಾಹಿತಿಗಳೇ ಇಲ್ಲ ಅನ್ನಬಹುದು. ಕೋವಿಡ್ ಕಾಲದಲ್ಲಿ ಯಾವುದೇ ಕಾರ್ಯಕ್ರಮ, ಅಂಕಣಗಳಿಲ್ಲದೆ ನಾನು ಸೋಮಾರಿಯಾಗಿ ಕಾಲ ಕಳೆಯುತ್ತಿದ್ದಾಗ ನಿಮ್ಮ ಮೊಮ್ಮಗಳ ಬಗ್ಗೆ ದಿನಕ್ಕೊಂದು ಮಕ್ಕಳ ಕವನ ಬರೆಯಿರಿ ಎಂದು ಸೂಚಿಸಿದವರು ಎಚ್ಚೆಸ್ವಿ.
ಬರೆದು ಕಳಿಸಿದಾಗ ತಕ್ಷಣ ಓದಿ, ಅಭಿಪ್ರಾಯ ತಿಳಿಸಿ, ಬರೆಯದಿದ್ದಾಗ ನೆನಪಿಸಿದ್ದರಿಂದ 2021ರಲ್ಲಿ ನನ್ನ “ಲಾಲಿ ಪಾಪು ಚೀಪು ಚೀಪು’ ಎಂಬ ಮಕ್ಕಳ ಕವನಗಳ ಸಂಕಲನ ಪ್ರಕಟವಾಯಿತು. ಎಚ್ಚೆಸ್ವಿಯವರು ಅವರ ಸಂಪಾದಕತ್ವದ “ವಸಂತ ಬಾಲ ಸಾಹಿತ್ಯ ಮಾಲೆ’ಗಾಗಿ ನನ್ನಿಂದ ಒಂದು ಮಕ್ಕಳ ನಾಟಕವನ್ನೂ ಬರೆಸಿದ್ದರು. ಎಚ್ಚೆಸ್ವಿ , ಅವರ ಆಪ್ತಮಿತ್ರ ಬಿ.ಆರ್. ಲಕ್ಷ್ಮಣರಾವ್ ಹಾಗೂ ನಾನು ಅನೇಕ ಕಾರ್ಯಕ್ರಮಗಳಿಗೆ ಕಾರಿನಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೇವೆ. ಲಕ್ಷ್ಮಣರಾವ್‌ಗೆ ಸಿಗರೇಟು ಸೇದಿ, ಕಾಫಿ ಕುಡಿಯಲು ಒಂದೆರಡು ಕಡೆ ಕಾರು ನಿಲ್ಲಿಸಿದರೆ ಸಾಕು. ಎಚ್ಚೆಸ್ವಿ ಅವರಿಗೆ ಹಾಗಲ್ಲ. ದಾರಿಯಲ್ಲಿ ಒಳ್ಳೆಯ ತರಕಾರಿ, ಸೊಪ್ಪು, ಹಣ್ಣು ಕಂಡರೆ ಕಾರು ನಿಲ್ಲಿಸಿ ಅದನ್ನು ಕೊಳ್ಳಬೇಕು. ಒಮ್ಮೆ ನಾವು ಮೂವರೂ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಲಕ್ಷ್ಮಣ ನನ್ನ ಹತ್ತಿರ ಪತ್ರಿಕೆಯ ಹಾಳೆಗಳಿಂದ ಕಾರಿನ ಕಿಟಕಿಯನ್ನು ಮುಚ್ಚಲು ಹೇಳಿದ. ಏಕೆ ಎಂದು ಕೇಳಿದ್ದಕ್ಕೆ ಅವನು ಕೊಟ್ಟ ಕಾರಣ- “ರಸ್ತೆ ಬದಿಯಲ್ಲಿ ಕಡಲೆ ಗಿಡ ಮಾರಾಟಕ್ಕೆ ಇಟ್ಟುಕೊಂಡಿದ್ದಾರೆ. ಎಚ್ಚೆಸ್ವಿ ಎದ್ದು ನೋಡಿದರೆ ಪುನಃ ಕಾರು ನಿಲ್ಲಿಸಿ ಅಂತಾನೆ. ತಡ ಆಗುತ್ತೆ…’
ಜ್ಞಾನಪೀಠ ಬರಲಿ… ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್ಚೆಸ್ವಿಯವರ ಪ್ರಧಾನ ಆಸಕ್ತಿ ಕಾವ್ಯ. ನೀಳ್ಗವನ, ಮಹಾಕಾವ್ಯಗಳನ್ನು ಬರೆದಿರುವ ಅವರು ಸೊಗಸಾದ ಕಿರುಗವನಗಳನ್ನೂ ಬರೆದಿದ್ದಾರೆ. ಕ್ಯಾಬರೇ ನರ್ತಕಿ ಬಿಚ್ಚಿದಾಗ ಬಟ್ಟೆ; ಕಂಡದ್ದು ಕೇವಲ ಒಂದು ಹೊಟ್ಟೆ ಎಂಬ ಅವರ ಕಿರುಗವನವನ್ನು ನಾನು ಲೆಕ್ಕವಿಲ್ಲದಷ್ಟು ಸಲ ಉಲ್ಲೇಖೀಸಿದ್ದೇನೆ. 2020ರಲ್ಲಿ “ಬುದ್ಧಚರಣ’ ಎಂಬ ಮಹಾಕಾವ್ಯವನ್ನು ಬರೆದು ಪ್ರಕಟಿಸಿದ ಎಚ್ಚೆಸ್ವಿ ಅದರ ಮಾರನೆ ವರ್ಷ “ಮಳೆಹನಿ ಮುತ್ತು’ ಎಂಬ 200 ಮುಕ್ತಕಗಳ ಸಂಕಲನವನ್ನು ಪ್ರಕಟಿಸುವ ಮೂಲಕ ತಮಗೆ ಕಾವ್ಯದ ಎಲ್ಲಾ ರೂಪಗಳೂ ಪ್ರಿಯವೆಂಬುದನ್ನು ತೋರಿಸಿದ್ದಾರೆ. ಭಾವಗೀತೆಗಳಿಂದ ಅಪಾರ ಜನಪ್ರಿಯತೆ ಗಳಿಸಿರುವ ಎಚ್ಚೆಸ್ವಿ ವಿಮರ್ಶಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಎಚ್ಚೆಸ್ವಿಯವರು ತೀವ್ರ ಅನಾರೋಗ್ಯದಿಂದ ದೈಹಿಕವಾಗಿ ಬಳಲಿದ್ದಾರೆ. ಮಾನಸಿಕವಾಗಿಯೂ ನೋವು ಅನುಭವಿಸಿದ್ದಾರೆ. ಆದರೂ ಅವರ ಸಾಹಿತ್ಯ ಪ್ರೀತಿ ಮತ್ತು ಬದುಕಿನ ಬಗೆಗಿನ ಧನಾತ್ಮಕ ಧೋರಣೆ ಕಡಿಮೆಯಾಗದಿರು ವುದು ಕನ್ನಡಿಗರ ಭಾಗ್ಯ ಅನ್ನಬಹುದು. ನಮ್ಮೆಲ್ಲರ ನೆಚ್ಚಿನ ಕವಿ ಎಚ್ಚೆಸ್ವಿಯವರು ಅನಾರೋಗ್ಯದಿಂದ ಬೇಗ ಚೇತರಿಸಿ ಕೊಳ್ಳಲಿ. ಎಂಬತ್ತರಲ್ಲೂ ಬತ್ತದ ಅವರ ಸೃಜನಶೀಲತೆ ಯಿಂದ ಕನ್ನಡದ ಸಾಹಿತ್ಯಲೋಕ ಇನ್ನಷ್ಟು ಶ್ರೀಮಂತ ವಾಗಲಿ. ಕನ್ನಡಕ್ಕೆ ಒಂಬತ್ತನೆಯ ಜ್ಞಾನಪೀಠ ಅವರ ಮೂಲಕವೇ ಬರಲಿ ಎಂದು ಹಾರೈಸೋಣ.
–ಎಚ್. ಡುಂಡಿರಾಜ್, ಖ್ಯಾತ ಕವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.