ಹಡಗಲ್ಲಿ ಕಂಡ ತಿಪಟೂರು ರಜಾಕನ ಅರೆ ವೃತ್ತಾಂತ
Team Udayavani, Dec 15, 2019, 5:09 AM IST
ಇರುವ ಒಂದೇ ಜನ್ಮದಲ್ಲಿ ಹಲವು ಅವತಾರಗಳನ್ನು ತಳೆದು, ದಿನದ ಹಲವು ಪ್ರಹರಗಳಲ್ಲಿ ಅವೆಲ್ಲವನ್ನೂ ಒಂದು ತರಹದ ದಿವ್ಯ ಅನಾಸಕ್ತಿಯಿಂದ ಒಂದೊಂದಾಗಿ ಬದುಕುತ್ತ ಜೀವ ಸವೆಸುವ ಈ ದ್ವೀಪವಾಸಿಗಳ ದಿನಚಕ್ರ ನನಗಂತೂ ಒಂದು ರೀತಿಯ ಚೇತೋಹಾರಿ ವಿಷಯ. ಬೆಳಗಿನ ನಮಾಜಿನ ಬಾಂಗಿನ ಕೂಗಿಗೆ ಮೊದಲೇ ಎಚ್ಚರಗೊಂಡು ಶ್ವೇತವಸನಧಾರಿಯಾಗಿ ಸೈಕಲ್ಲು ಹೊಡೆದುಕೊಂಡು ಪ್ರಾರ್ಥನಾಲಯದ ಕಡೆಗೆ ಚಲಿಸುತ್ತಿರುವ ಅದೇ ಮನುಷ್ಯ ಸ್ವಲ್ಪ ಹೊತ್ತಲ್ಲೇ ಸೆಗಣಿ ಗಂಜಲ ಜಾನುವಾರು ಪರಿಮಳಗಳ ನಡುವೆ ಬರಿಮೈಯಲ್ಲಿ ಕುಕ್ಕರಿಸಿ ಕೂತು ಹಾಲು ಕರೆಯುವ ಗೋಪಾಲಕನಾಗಿರುತ್ತಾನೆ. ಇನ್ನು ಸ್ವಲ್ಪ ಹೊತ್ತಲ್ಲೇ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ತನ್ನ ಪೂರ್ವಿಕರ ಕಲ್ಪವೃಕ್ಷಗಳ ಕೆಳಗೆ ನಿಂತುಕೊಂಡು ಕಾಯಿಗಳನ್ನು ಕೀಳಿಸಿ ಅವುಗಳನ್ನು ಗುಡ್ಡೆಹಾಕುವ ನಾರೀಕೇಳ ಕೃಷಿಕನಾಗಿರುತ್ತಾನೆ. ಇನ್ನು ಇನಿತು ಹೊತ್ತಲ್ಲೇ ಒಂದೆರಡು ಆಡುಗಳನ್ನು ಸುತ್ತ ನಡೆಸಿಕೊಂಡು ಗಿಡಮರಗೆಲ್ಲುಗಳಿಂದ ಹಸಿರು ಸೊಪ್ಪುಗಳನ್ನು ತರಿದು ಅವುಗಳಿಗೆ ತಿನ್ನಿಸುವ ಅಜಗಾಹಿಯಾಗುತ್ತಾನೆ. ಸೂರ್ಯ ಮೇಲಕ್ಕೆ ಬಂದಂತೆ ಕಚೇರಿಯ ಕಾರಕೂನನ ವೇಷಧರಿಸಿ ಸೈಕಲ್ಲು ಹೊಡೆಯುತ್ತ ಕಾರ್ಯಸ್ಥಳದ ಕಡೆಗೆ ಚಲಿಸುತ್ತಾನೆ. ಮಧ್ಯಾಹ್ನದ ಬಿಡುವಿನ ಹೊತ್ತಲ್ಲಿ ಟೀ ಅಂಗಡಿಯ ಚರ್ಚೆಯಲ್ಲಿ ಅಪ್ಪಟ ರಾಜಕೀಯ ಕಾರ್ಯಕರ್ತನಂತೆ ಯಾವುದೋ ಅಂತರಾಷ್ಟ್ರೀಯ ಆಗುಹೋಗಿನ ಕುರಿತು ತನ್ನ ಅನಿಸಿಕೆಗಳನ್ನು ಖಚಿತವಾಗಿ ದೊಡ್ಡ ದನಿಯಲ್ಲಿ ಎತ್ತರಿಸಿ ಮಾತನಾಡುತ್ತಿರುತ್ತಾನೆ. ಸಂಜೆಗೂ ಮೊದಲು ಮಗುವನ್ನೋ ಮೊಮ್ಮಗುವನ್ನೋ ಸೈಕಲ್ಲಿನ ಬಾರಿನಲ್ಲಿ ಕೂರಿಸಿಕೊಂಡು ಶಾಲೆಯಿಂದ ಮರಳುತ್ತಿರುತ್ತಾನೆ. ಮರಳಿದವನು ಕಡಲ ದಡದಲ್ಲಿ ಮರಳನ್ನು ಬಗೆಯುತ್ತ ಇರುಳಿನ ಮತ್ಸ್ಯಬೇಟೆಗೆ ಎರೆಹುಳಗಳನ್ನು ಹೆಕ್ಕುತ್ತಾನೆ. ಇರುಳಾದಂತೆ ಯಾವುದೋ ಮನೆಯಿಂದ ಕೇಳಿಬರುವ ಮೌಲೂದ್ ಪಾರಾಯಣದಲ್ಲಿ ಒಬ್ಬ ನಿಷ್ಣಾತ ಹಾಡುಗಾರನಂತೆ ಅರಬಿ ಮಲಯಾಳದಲ್ಲಿರುವ ಧಾರ್ಮಿಕ ಕಾವ್ಯವನ್ನು ಹಾಡುತ್ತಿರುತ್ತಾನೆ ಅಥವಾ ದಫ್ ಬಾರಿಸುತ್ತ ಮೈದೂಗಿ ಧ್ಯಾನಿಸುತ್ತ ಧಿಕರ್ ಎಂಬ ಸೂಫಿ ಧ್ಯಾನದಲ್ಲಿ ತನ್ನನ್ನೇ ತಾನು ಮರೆತು ಧೇನಿಸುತ್ತಿರುತ್ತಾನೆ. ನಡು ಇರುಳು ಕಳೆದರೂ ಹಡಗು ಜೆಟ್ಟಿಯ ಸಿಮೆಂಟು ಕಟ್ಟೆಯ ಮೇಲೆ ಪದ್ಮಾಸನದಲ್ಲಿ ಗಾಳವೊಂದನ್ನು ಹಿಡಿದು ಮೀನು ಬೇಟೆಯಲ್ಲಿ ಧ್ಯಾನಮಗ್ನ ಋಷಿಯಂತೆ ಕುಳಿತಿರುತ್ತಾನೆ. ಒಬ್ಬನೇ ಮನುಷ್ಯ, ಒಂದೇ ಜನ್ಮ, ಹಲವು ಅವತಾರಗಳು.
ನನಗೂ ಈ ಮನುಷ್ಯರನ್ನು ಈ ಹಿಂದೆ ಇದೇ ದಿನದಲ್ಲಿ ಕಂಡದ್ದು ಯಾವ ಅವತಾರದಲ್ಲಿ ಎಂಬ ಗೊಂದಲವಾಗುತ್ತದೆ. ಹಾಗಾಗಿ, ಯಾರು ಎದುರಿಗೆ ಹಾದುಹೋದರೂ ಮುಖದಲ್ಲಿ ಒಂದು ಅಗಲವಾದ ನಿಷ್ಕಲ್ಮಶ ನಗುವೊಂದನ್ನು ತಂದುಕೊಂಡು ಒಂದು ಸಲಾಂ ಹೇಳುತ್ತೇನೆ. ಅವರೂ ಮರು ಸಲಾಂ ಹೇಳುತ್ತಾರೆ. ಸದಾಕಾಲ ಒಂದೇ ಅವತಾರದಲ್ಲಿ ಒಂದೇ ತರಹದ ದಿರಿಸಿನಲ್ಲಿ ಅದೇ ಸೈಕಲ್ಲಿನಲ್ಲಿ ಈ ದ್ವೀಪದ ತುಂಬ ಓಡಾಡುವ ನನ್ನ ಬದುಕು ಅವರ ಕಣ್ಣಿಗೆ ಎಷ್ಟು ನೀರಸವಾಗಿ ಕಾಣಿಸುತ್ತಿರಬಹುದು ಎಂದು ನನಗೆ ಆತಂಕವಾಗಲು ತೊಡಗುತ್ತದೆ. ಇದನ್ನು ತಪ್ಪಿಸಲು ನಾನೂ ಅವರಂತೆ ಹಲವು ಬಗೆಯ ಚಟುವಟಿಕೆಗಳಲ್ಲಿ ತೊಡಗಲು ಹೋದರೆ ಕೊಂಚ ಹಾಸ್ಯಾಸ್ಪದವಾಗಿ ಕಾಣಿಸಬಹುದು ಎಂಬ ಭಯವೂ ಆಗುತ್ತದೆ. ಹಾಗಾಗಿ ಬೇರೆ ಏನೂ ಮಾಡಲು ಹೋಗದೆ ಬಾಯಿತುಂಬ ಎಲೆ ಅಡಿಕೆಯ ಕವಳ ಹಾಕಿಕೊಂಡು ಸೈಕಲ್ಲು ಹೊಡೆಯುತ್ತಿರುತ್ತೇನೆ. ಕವಳ ಹಾಕುವ ನೆಪದಲ್ಲಿ ಒಂದಿಷ್ಟು ಮಾತು. ಇನ್ನಿಷ್ಟು ಕಥೆಗಳು, ಬಹಳಷ್ಟು ತಮಾಷೆಗಳೂ ನಡೆಯುತ್ತವೆ. ಕವಳದಿಂದಾದರೂ ನನ್ನ ಅನ್ಯಮುಖ ಅವರ ಮುಖಗಳಂತೆ ಕಾಣಿಸಬಹುದು ಅದರಿಂದಲಾದರೂ ಒಂದೇ ಜನ್ಮದಲ್ಲಿ ಹಲವು ಅವತಾರಗಳನ್ನು ತಳೆವ ಈ ದ್ವೀಪವಾಸಿಗಳ ಜನ್ಮ ಸುಕೃತ ನನ್ನದಾಗಬಹುದು ಎನ್ನುವ ಹುಚ್ಚು ಬಯಕೆ ನನ್ನದು. ಒಮ್ಮೊಮ್ಮೆ ಇದೂ ಒಂದು ತರಹದ ದಾರಿ ತಪ್ಪಿದ ಬಾಲಕನೊಬ್ಬನ ಹುಡುಗಾಟದಂತೆ ನನಗೇ ಅನಿಸಿ ನಗುವೂ ಬರುತ್ತದೆ.
ಹಾಗೆ ನೋಡಿದರೆ, ಲಕ್ಷದ್ವೀಪ ಸಮೂಹದ ಈ ಹತ್ತೂ ಹವಳಗುಡ್ಡೆಗಳು ಕಡಲ ನಡುವಲ್ಲಿ ಫಕೀರನೊಬ್ಬ ಬಿಸುಟ ಜಪಮಾಲೆಯ ಮಣಿಗಳು ತೇಲುತ್ತಿರುವುದು ಎಂದು ಸಮುದ್ರಯಾನದಲ್ಲಿ ಸಿಕ್ಕ ಅದೇ ಆಡು ಮಾಂಸ ಮಾರುವ ಮುದುಕ ನನಗೆ ಕಥೆಯೊಂದನ್ನು ಹೇಳಿದ್ದರು. ಬಹಳ ಬಹಳ ಶತಮಾನಗಳ ಹಿಂದೆ ನೂಹ್ ಪ್ರವಾದಿಯ ಕಾಲದಲ್ಲಿ ಹಿಂದೂ ದೇಶದ ಕಡೆಗೆ ಹೊರಟ ಹಾಯಿಹಡಗು ಕಡಲ ನಡುವೆ ಜಲಪ್ರಳಯಕ್ಕೆ ಸಿಲುಕಿ ನುಚ್ಚುನೂರಾಯಿತಂತೆ. ಹಲಗೆಯೊಂದನ್ನು ಹಿಡಿದು ಕಡಲಲ್ಲಿ ಬಿಸಿಲು ಮಳೆಯಲ್ಲಿ ತೇಲುತ್ತ ತೇಲುತ್ತ ಅವರು ತೀರಿಹೋಗುವುದೊಂದನ್ನು ಬಿಟ್ಟರೆ ಇನ್ನೇನೂ ಉಳಿದಿಲ್ಲ ಎಂದು ಜೀವದ ಆಸೆಯನ್ನೂ ಬಿಟ್ಟು ಆಕಾಶ ನೋಡುತ್ತ ಪ್ರಾರ್ಥಿಸುತ್ತಿದ್ದರಂತೆ. ಅಷ್ಟು ಹೊತ್ತಿಗೆ ಕಡಲ ನಡುವಲ್ಲಿ ಗೋಚರಿಸಿದ ಫಕೀರನೊಬ್ಬ ತನ್ನ ಕೈಯಲ್ಲಿದ್ದ ಜಪಮಾಲೆಯನ್ನು ಕಿತ್ತು ಕಡಲಿಗೆ ಬಿಸುಟನಂತೆ. ಹಾರುತ್ತ ಕಡಲಿಗೆ ಬಿದ್ದ ಜಪದ ಮಣಿಗಳು ದೂರದೂರಕ್ಕೆ ತೇಲುತ್ತ ಒಂದೊಂದು ಮಣಿಯೂ ಬಹಳ ಬಹಳ ದೂರದಲ್ಲಿ ಹವಳ ದ್ವೀಪಗಳಾಗಿ ಮಾರ್ಪಾಡಾಗಿ ಹಲಗೆಯಲ್ಲಿ ತೇಲುತ್ತಿದ್ದ ಆರ್ತ ಪಯಣಿಗರು ಹಾಗೇ ತೇಲುತ್ತ ತೇಲುತ್ತ ಒಂದೊಂದು ದ್ವೀಪಗಳನ್ನು ತಲುಪಿ ಅಲ್ಲಿ ನೆಲೆಗೊಂಡರಂತೆ ಎಂದು ಅವರು ಕಥೆ ಹೇಳಿದ್ದರು. ಹೇಳಿದ್ದು ಕಥೆಯಾದರೂ ಅದು ನನಗೆ ನಿಜವೆಂದು ತೋರಿತ್ತು. ಅವರು ಹೇಳುವ ಭಗವಂತನ ಸೃಷ್ಟಿಯಾದ ಈ ಭೂಲೋಕದ ಬೇರೆಲ್ಲೂ ಕಾಣದ ಮನೋಹರ ದ್ವೀಪಗಳು ಇವು. ಕೆಲವೊಮ್ಮೆ ಕೇವಲರಾದ ಮನುಷ್ಯರು ಇಲ್ಲಿ ಇರಲು ಅನರ್ಹರು ಎಂದೂ ಅನಿಸುವುದು. ನೀಲ ನೀಲ ರುದ್ರಮನೋಹರ ಕಡಲಿನ ನಡುವೆ ಇದ್ದಕ್ಕಿದ್ದಂತೆ ಗೋಚರಿಸುವ ಹವಳದ ಗೋಡೆಗಳು, ಆ ಗೋಡೆಗಳ ದಾಟಿದರೆ ಸಿಗುವ ನಿರಾಳವಾದ ಕಡಲಿಗಿಂತಲೂ ನೀಲವಾದ ಸ್ವತ್ಛ ಸ್ಫ³ಟಿಕ ಲಗೂನ್ ಸರೋವರಗಳು, ಆ ಸರೋವರ ದಾಟುವ ಮೊದಲೇ ಗೋಚರಿಸುವ ಹಸಿರು ತೆಂಗಿನ ತೋಪಿನ ಕೆಳಗೆ ಗೋಚರಿಸುವ ಬಿಳಿ ಮರಳಿನ ಕಿನಾರೆ. ಕಿನಾರೆಯ ತುಂಬ ಲಂಗರು ಹಾಕಿರುವ ದ್ವೀಪವಾಸಿಗಳ ಪುಟ್ಟ ಪುಟ್ಟ ಮೀನುದೋಣಿಗಳು. ಕಿನಾರೆ ದಾಟಿದರೆ ನೆಲದ ಫಲಭರಿತ ಮೃತ್ತಿಕೆ. ಅಲ್ಲಿ ಬೆಳೆದಿರುವ ಬೇರೆಲ್ಲೂ ಕಾಣಿಸದ ಹಸಿರು ಸಸ್ಯ ಸಮೂಹಗಳು. ಚಲಿಸುತ್ತಿರುವ ಮನುಷ್ಯರು, ಸದಾ ನಿದ್ದೆಯಲ್ಲಿರುವಂತೆ ಮಲಗಿರುವ ಮನೆಗಳು, ಅದಕ್ಕಿಂತಲೂ ಮೌನದಲ್ಲಿ ನಿಂತಿರುವ ಪ್ರಾರ್ಥನಾಲಯಗಳು, ಭಗವಂತನ ಪ್ರಾರ್ಥನೆಗಾಗಿ ಕರೆಯುವ ಕರೆಯ ನೀಳಸದ್ದು. ದ್ವೀಪವಾಸಿಗಳ ದೈನಂದಿನ ಗೋಳುಗಳು ಹೇಗಿದ್ದರೂ ಹೊಸತಾಗಿ ಬರುವ ನನ್ನಂಥ ಆಗುಂತಕನಿಗೆ ಗೋಚರಿಸುವುದು ಆತಂಕ ರಹಿತವಾದ ಒಂದು ಬಗೆಯ ನಿರಾಳತೆ. ವೇಗವಿಲ್ಲದ ಆವೇಶಗಳಿಲ್ಲದ ಥಟ್ಟನೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿಲ್ಲದ ಒಂದು ಅನೂಹ್ಯ ನಿಧಾನಗತಿಯ ಬದುಕು. ಒಂದು ಸಾಧಾರಣ ಗಾತ್ರದ ಮೀನೊಂದಕ್ಕಾಗಿ ತಾಸುಗಟ್ಟಲೆ ನಿದ್ದೆಯೂ ಇಲ್ಲದೆ ಧ್ಯಾನಸ್ಥ ಬಕದಂತೆ ಕುಳಿತುಕೊಳ್ಳಬಲ್ಲ ಆವೇಗವಿಲ್ಲದ ಮನುಷ್ಯರು. ಛೆ ! ನಾನೂ ಇವರಂತಾಗಬಾರದೇ ಎಂದೂ ಒಮ್ಮೊಮ್ಮೆ ಅನಿಸುವುದು!
ಆದರೆ, ತೀರ ಪ್ರದೇಶದಿಂದ ಬಂದ ನೀನು ಎಂದಿಗೂ ಇಲ್ಲಿನವನಾಗಲು ಕನಸಲ್ಲೂ ಯೋಚಿಸಬಾರದು. ಆಮೇಲೆ ಬಿಟ್ಟು ಹೊರಡಲು ನಿನಗೆ ಬಹಳ ಕ್ಲೇಶವಾಗುವುದು.ದ್ವೀಪವಾಸಿಗಳಾದ ನಮಗಾದರೋ ನೀನಿರುವ ತೀರದಲ್ಲಿ ನಾಲ್ಕು ಇರುಳು ಇದ್ದರೂ ನಿದ್ರೆ ಬಾರದೆ ಹೊರಳಾಡಬೇಕಾಗುವುದು. ಈ ಬಿಳಿ ಮರಳು, ಈ ಗಾಳಿ ಮತ್ತು ಪಡೆದವನು ಬೀರುವ ಈ ಕರುಣೆ ಬೇರೆಲ್ಲಿದ್ದರೂ ನಮಗೆ ಸಿಗದು. ನೀವು ನೀವೇ ನಾವು ನಾವೇ ಎಂದಿಗೂ ಅದು ಒಂದು ಎಂದು ಅಂದುಕೊಳ್ಳಬಾರದು. ಅವನ ಕಥೆಯನ್ನೇ ನೋಡು. ನನಗೂ ವಂಚಿಸಿ, ಬಾಯಿಬಾರದ ತನ್ನ ತಂಗಿಯನ್ನು ನನಗೆ ನಿಖಾ ಮಾಡಿ ದೇಶಾಂತರ ಹೋದವನು ಅಲ್ಲಿ ಏನೆಲ್ಲ ಪಾಡುಪಟ್ಟಿರಬಹುದು ಅವನು ಎಂದು ತಮ್ಮ ಮೊದಲನೆಯ ವಿವಾಹದ ಕತೆಯನ್ನು ಹೇಳಿದ್ದರು. ಬಾಯಿಬಾರದ ತನ್ನ ಸ್ವಂತ ಒಡಹುಟ್ಟಿದ ತಂಗಿಯನ್ನು ಇವರಿಗೆ ದೂರದಿಂದಲೇ ತೋರಿಸಿ, ವಿವಾಹವನ್ನೂ ನಿಶ್ಚಯಿಸಿ, ಅದಾದ ವಾರದೊಳಗೆ ನಿಖಾವನ್ನೂ ಏರ್ಪಡಿಸಿ ನಿಜವನ್ನು ಹೇಳದೆ ವಂಚಿಸಿ ದೇಶಾಂತರ ಪರಾರಿಯಾದ ಮನುಷ್ಯ ನಾನು ಹುಡುಕಿಕೊಂಡು ಹೊರಟಿರುವ ಮಹಾನುಭಾವರೇ ಇರಬೇಕು ಎಂಬುದು ನನ್ನ ಬಲವಾದ ಊಹೆ. ಏಕೆಂದರೆ, ಅವರು ಅಲ್ಪಸ್ವಲ್ಪ ಹೇಳಿದ ಅವರ ಜೀವನ ವಿವರಗಳಿಗೂ ಈ ಆಡುಮಾಂಸದ ಮುದುಕ ಹೇಳುತ್ತಿರುವ ವಿವರಗಳಿಗೂ ಬಹಳ ತಾಳೆಯಾಗುತ್ತಿದೆ. ಜೊತೆಗೆ ಕಳೆದ ಹದಿನೈದು ದಿನಗಳ ನಾನು ಕಂಡುಬಂದ ಪಿಂಗಾಣಿ ಬಟ್ಟಲಿನ ಬಿರುಕಿನ ಪ್ರಸಂಗದ ಹಿಂದೆಯೂ ಮಹಾನುಭಾವರ ಪಾತ್ರವಿದೆ ಎಂದೂ ನನಗನಿಸುತ್ತದೆ.
ಯಾರ ಮನಸಿಗೂ ನೋವಾಗದ ಹಾಗೆ ಈ ವಿವರಗಳನ್ನು ಹೇಗೆ ಹೇಳುವುದು ಎಂಬುದು ಸದ್ಯದ ನನ್ನ ತಲೆಬಿಸಿಯಾಗಿದೆ.
ಈ ತಲೆಬಿಸಿಯಿಂದ ಸದ್ಯಕ್ಕೆ ತಪ್ಪಿಸಿಕೊಳ್ಳಲು ಈಗ ಇನ್ನೊಬ್ಬ ಮನುಷ್ಯನ ಕಥೆಯನ್ನು ಚುಟುಕಾಗಿ ಶುರುಮಾಡುವೆನು. ಈತನ ಹೆಸರನ್ನು ಅಬ್ದುಲ್ ರಜಾಕ್ ಎಂದಿಟ್ಟುಕೊಳ್ಳಿ. ಊರು ತಿಪಟೂರಿನ ಬಳಿಯ ಒಂದು ಹೋಬಳಿ ಕೇಂದ್ರ. ಕಳೆದ ಹತ್ತು ವರ್ಷಗಳಿಂದ ಈತ ಒಂಟಿಯಾಗಿ ಬದುಕುತ್ತಿರುವುದು ಇÇÉೇ ಮೂರು ಗಂಟೆಗಳ ಹಡಗು ಪಯಣದಿಂದ ತಲುಪಬಹುದಾದ ಇನ್ನೊಂದು ದ್ವೀಪದಲ್ಲಿ. ಈತನ ವೃತ್ತಿ ಏನೆಂದರೆ ಸೈಕಲ್ ರಿಪೇರಿ ಮಾಡುವುದು. ನಾನು ಈತನನ್ನು ಕಂಡಿದ್ದು ಮಂಗಳೂರಿಗೆ ತೆರಳುವ ಅಮೀನಿದೀವಿ ಎಂಬ ಹಡಗಿನಲ್ಲಿ. ಈತನಿಗೆ ಸಮುದ್ರಯಾನ ಎಂದರೆ ಜೀವಭಯ. ಹಡಗಿಗೆ ಹತ್ತಿದ ತಕ್ಷಣ ತಾನು ತೇಲುತ್ತಿರುವುದು ತಳವೇ ಸಿಗದ ಕಡಲಿನ ಮೇಲೆ ಒಂದು ಎಲೆಯಂತೆ ತೇಲುವ ಹಲಗೆಯ ಮೇಲೆ ಎಂದು ಅನಿಸಲು ತೊಡಗಿ ಜೀವವೆಲ್ಲ ಕಂಗಾಲಾಗಿ, ತಿಂದಿರುವುದೆಲ್ಲ ಹೊಟ್ಟೆ ತೊಳಸಿ ಖಾಲಿಯಾಗಿ ಈತನಿಗೆ ಒಂದೊಂದು ಸಲದ ಕಡಲಯಾನವೂ ನರಕದ ಸೇತುವೆಯ ಮೇಲೆ ನಡೆದಂತಾಗುತ್ತದೆ. ಹಾಗಾಗಿ, ಹಡಗು ಹತ್ತಿದ ತತ್‌ಕ್ಷಣ ಒಂದು ಕಂಬಳಿ ಹೊದ್ದುಕೊಂಡು ಲೋಕವನ್ನೆಲ್ಲ ಕತ್ತಲುಮಾಡಿ ಹಡಗಿನ ಒಂದು ಕತ್ತಲ ಮೂಲೆಯಲ್ಲಿ ಜೀವತ್ಛವವಾಗಿ ಬಿದ್ದುಕೊಂಡಿರುತ್ತಾನೆ.ಹದಿನಾರು ತಾಸು ಕಳೆದು ಮಂಗಳೂರಿನ ಹಳೆಯ ಬಂದರಿನ ಉಪ್ಪುಧಕ್ಕೆಗೆ ಹಡಗು ತಲುಪಿದಾಗ ಬದುಕಿದ್ದೇನೆ ಎಂದು ಖಾತರಿಮಾಡಿಕೊಂಡು ಹಡಗಿಂದ ಹಾರಿ ಇಳಿದು ಮಂಗಳೂರೆಂಬ ಮಹಾನಗರಿಯೊಳಕ್ಕೆ ಮಾಯವಾಗುತ್ತಾನೆ. ಅಲ್ಲಿಂದ ಬಿ. ಸಿ. ರೋಡಿನ ಬಸ್ಸು ಹತ್ತಿ ತನ್ನ ಹೆಂಡತಿ ಮಕ್ಕಳನ್ನು ಸೇರಿಕೊಳ್ಳುತ್ತಾನೆ. ಈತನ ಈ ವಾರ್ಷಿಕ ಜೀವತ್ಛವ ಯಾತ್ರೆ ಕಳೆದ ಹತ್ತು ವರ್ಷಗಳಿಂದ ನಡೆದೇ ಇದೆ. ತಿಪಟೂರಿನ ಹಳ್ಳಿಯ ಅಬ್ದುಲ್ ರಜಾಕ್ ಬಸ್ಸು ಹತ್ತಿ ಬಿ. ಸಿ. ರೋಡಿಗೆ ಹೋಗುವುದು ಯಾಕೆ ಮತ್ತು ಈತ ಲಕ್ಷದ್ವೀಪಕ್ಕೆ ಬಂದು ತಲುಪಿದುದಾದರೂ ಹೇಗೆ ಎಂಬ ಕುತೂಹಲ ನಿಮಗಿರಬಹುದು. ತಮಾಷೆ ಇರುವುದು ಇಲ್ಲಿಯೇ. ಬದುಕು ಎಂಬುದು ಬಹಳ ಆಕಸ್ಮಿಕಗಳಿಂದ ಕೂಡಿದ ಬಹುದೊಡ್ಡ ತಮಾಷೆ ಎನಿಸುವುದು ನನಗೆ ಇಂತಹ ನೈಜ ಸಂಗತಿಗಳಿಂದಲೇ.
ಇಲ್ಲದಿದ್ದರೆ ಕನ್ನಡದ ಲಡಾಸು ಬರಹಗಾರರಲ್ಲಿ ಒಬ್ಬನಾದ ನಾನು ನನ್ನ ಪ್ರೇಮ ಜೀವನದಲ್ಲಿ ಘಟಿಸಿದ ಆಕಸ್ಮಿಕ ಮರಣವೊಂದರ ಕಾರಣದಿಂದಾಗಿ ಸಾವಿರ ಸಾವಿರ ಕಡಲ ಹರದಾರಿ ದೂರದ ಹವಳ ದ್ವೀಪವೊಂದಕ್ಕೆ ತಲುಪಿ ಕವಳ ಜಗಿಯುತ್ತ ಸೈಕಲ್ಲು ಹೊಡೆಯುವುದೆಂದರೇನು? ತನ್ನ ಬಾಯಿಬಾರದ ತಂಗಿಯನ್ನು ವಂಚನೆಯಿಂದ ಗೆಳೆಯನಿಗೆ ಮದುವೆಮಾಡಿಸಿ ದೇಶಾಂತರಗೈದ ಈ ಹವಳ ದ್ವೀಪದ ಮಹಾಶಯನೊಬ್ಬ ನಮ್ಮ ಬಾಲ್ಯಕಾಲದ ಖುರಾನು ಕಲಿಸುವ ಮಹಾನುಭಾವನಾಗಿ ರೂಪಾಂತರಗೊಂಡು ನನ್ನ ಬರಹದ ಕಥಾಪಾತ್ರವಾಗುವುದೆಂದರೇನು? ಅವರು ಮಂತ್ರಿಸಿ ಕೊಡುತ್ತಿದ್ದ ಪಿಂಗಾಣಿ ಬಟ್ಟಲಿನ ಮೂಲ ರಹಸ್ಯವನ್ನು ಹುಡುಕುತ್ತ ಹುಡುಕುತ್ತ ಹದಿನೈದು ದಿನಗಳ ಹಿಂದೆ ಆ ಮಾಂತ್ರಿಕ ಬಟ್ಟಲಿನ ಮೂಲ ಬಟ್ಟಲನ್ನು ನಾನು ಈ ದ್ವೀಪದಲ್ಲಿ ಕಣ್ಣಾರೆ ಕಾಣುವುದೆಂದರೇನು? ತಿಪಟೂರಿನ ಬಳಿಯ ಹಳ್ಳಿಯೊಂದರ ಜಮೀನ್ದಾರಿ ಮುಸ್ಲಿಂ ಕುಟುಂಬವೊಂದರ ಯುವಕ ರಜಾಕ್ ಎಂಬ ಈತ ಬದುಕಿನ ಕೆಲವು ಅಸಂಗತ ತಮಾಷೆಯ ಸುಳಿಗಳಿಗೆ ಸಿಲುಕಿ ತಾನು ಸಾವಿನಂತೆ ಭಯಪಡುವ ಕಡಲ ಯಾನವನ್ನು ಪ್ರತಿವರ್ಷ ಕೈಗೊಳ್ಳುತ್ತ ಇಲ್ಲಿನ ಪುಟ್ಟ ದ್ವೀಪವೊಂದರಲ್ಲಿ ಸೈಕಲ್ಲು ರಿಪೇರಿ ಮಾಡಿಕೊಂಡು ಬದುಕುವುದೆಂದರೇನು? ಅದಕ್ಕಿಂತ ತಮಾಷೆಯ ಸಂಗತಿ ಎಂದರೆ ನಮ್ಮೆಲ್ಲರ ಕಥೆಗಳು ಚಲಿಸುತ್ತಿರುವ ಹಡಗೊಂದರಲ್ಲಿ ಅನಾವರಣಗೊಳ್ಳುತ್ತಿರುವುದು.
ಯೋಚಿಸಿದರೆ ತಲೆಕೆಟ್ಟು ಹೋಗುವ ಸಂಗತಿಗಳು. ಸುಮ್ಮನೆ ಹಾಗೇ ಕೇಳಿಸಿಕೊಂಡರೆ ಬಹಳ ಗಹನ ಅರ್ಥಗಳನ್ನು ಮೂಡಿಸುವಂತಹವು.
ಮುಂದಿನ ವಾರ ಈ ಎಲ್ಲ ಕಥೆಗಳಿಗೆ ಒಂದು ಮಂಗಳ ಹಾಡಿದರೆ ನನ್ನ ತಲೆ ಕೆಡುವುದರಿಂದ ಬಚಾವ್ ಆಗಬಹುದು ಅನಿಸುತ್ತದೆ.
(ಮುಂದಿನ ವಾರ ಅಂಕಣ ಮುಕ್ತಾಯ)
ಅಬ್ದುಲ್ ರಶೀದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.