ಹರಿಕತೆ
Team Udayavani, Jul 30, 2017, 6:25 AM IST
ಮನೆಯಲ್ಲಿ ಕುಳಿತು ಏನ್ ಮಾಡ್ತೀಯಾ? ಇಲ್ಲೇ ಹತ್ತಿರ ಗಣಪತಿ ದೇವಸ್ಥಾನದಲ್ಲಿ ಅಪರೂಪಕ್ಕೆ ಹರಿಕತೆ ಏರ್ಪಾಡಾಗಿದೆ. ಪುಟ್ಟ ಹುಡುಗಿ ಚೆನ್ನಾಗಿ ಹಾಡಿಕೊಂಡು ಮುದ್ದು ಮುದ್ದಾಗಿ ಪುರಾಣದ ಕತೆಗಳನ್ನು ಹೇಳುತ್ತಿದ್ದರೆ ಆಬಾಲವೃದ್ಧರು ಕಣ್ಣು-ಬಾಯಿ ಬಿಟ್ಟುಕೊಂಡು ಕುಳಿತಿರುತ್ತಾರೆ” ಎಂದು ನರೇಶ್ ವಿವರಿಸುತ್ತಿದ್ದರೆ ಸೋದರತ್ತೆ ಸುಭದ್ರಮ್ಮ ಕಣ್ಣರಳಿಸಿ ಕುಳಿತಿದ್ದರು. ಎಪ್ಪತ್ತರ ಸುಭದ್ರಮ್ಮನಿಗೆ ಮನೆಯಲ್ಲಿ ಬೇಸರ, ಹೊರಗೆ ಹೋಗಲು ಶಕ್ತಿ ಇಲ್ಲ. ಈಗ ಸೋದರಳಿಯ ನರೇಶ್ ಮನೆಮುಂದೆ ಕಾರು ನಿಲ್ಲಿಸಿ, ಕೈ ನೀಡಿ ಕರೆಯುತ್ತಿದ್ದಾನೆ. ತಯಾರಾಗಿ ಅವನೊಡನೆ ಹರಿಕತೆ ಕೇಳಲು ಹೊರಟೇ ಬಿಟ್ಟರು.
ಸಹಕಾರ ನಗರ ಒಂದು ಸುಂದರ ಬಡಾವಣೆ. ಮಧ್ಯ ಭಾಗದಲ್ಲಿ ಈ ಶಕ್ತಿ ಗಣಪತಿ ದೇವಸ್ಥಾನ. ದೇವಸ್ಥಾನಗಳು ಭಯೋತ್ಪಾದನೆಯ ಕೇಂದ್ರಗಳಾಗಬಾರದು. ಸಾಂಸ್ಕೃತಿಕ ಮಂದಿರಗಳಾಗಬೇಕು ಎಂದು ನಂಬುವವರು ಅರ್ಚಕರಾದ ವೇದಬ್ರಹ್ಮ ಶ್ಯಾಮಭಟ್ಟರು. ದೇವಸ್ಥಾನದಲ್ಲಿ ಸದಾ ಪೂಜೆ, ಹೋಮ, ಹವನ, ಅರ್ಚನೆ ನಡೆಯುತ್ತಿರುತ್ತವೆ. ಆದರೆ ಪ್ರತಿದಿನ ಸಂಜೆ ದೇವಸ್ಥಾನಕ್ಕೇ ಸೇರಿದ ದೊಡ್ಡ ಸಭಾಂಗಣದಲ್ಲಿ ಸಂಗೀತ-ನೃತ್ಯ-ಭಾಷಣ, ಗಮಕ, ಯಕ್ಷಗಾನ, ತಾಳಮದ್ದಳೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ನಡೆಯುತ್ತಲೇ ಇರುತ್ತವೆ. ಸದಾ ಆಸಕ್ತರು ಅಲ್ಲಿ ಬಂದು ಕುಳಿತು ಸಂತೋಷಪಡುತ್ತಾರೆ. ವೃದ್ಧರಿಗೆ ಅದೊಂದು ನೆಮ್ಮದಿಯ ತಾಣವೇ ಆಗಿಬಿಟ್ಟಿದೆ. ಬಂದ ಕೂಡಲೇ ಗಣಪನಿಗೆ ತಲೆಬಾಗಿ, ಶ್ಯಾಮಭಟ್ಟರು ಕುಶಲ ವಿಚಾರಿಸಿದಾಗ ಕಷ್ಟ-ಸುಖ ಹೇಳಿಕೊಂಡು ಸಭಾಂಗಣದಲ್ಲಿ ತಮಗೆ ಅನುಕೂಲವಾದ ಜಾಗ ಹಿಡಿದು ಕುಳಿತರೆ ಆಯ್ತು. ಎರಡು-ಮೂರು ಗಂಟೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ನೃತ್ಯವೋ, ಸಂಗೀತವೋ, ಉಪನ್ಯಾಸ ನೋಡುತ್ತ, ಕೇಳುತ್ತ, ಮಧ್ಯೆ ಮಧ್ಯೆ ಪಕ್ಕದಲ್ಲಿ ಕುಳಿತವರ ಜೊತೆ ಕಷ್ಟ-ಸುಖ ಹಂಚಿಕೊಳ್ಳುತ್ತ ರಾತ್ರಿಯಾಗೇ ಬಿಡುತ್ತದೆ. ಯಾರಾದರೂ ಬಂಧುಗಳ್ಳೋ, ಸ್ನೇಹಿತರ ಜೊತೆ ಮನೆಗೆ ಬಂದು ಊಟ ಮಾಡಿ ಮಲಗಿದರೆ ಒಂದು ದಿನ ನೆಮ್ಮದಿಯಿಂದ ಕಳೆದ ಭಾವ, ನಿದ್ರೆ ಬಂದುಬಿಡುತ್ತದೆ.
ಮುದ್ದು ಗೌರಿಯಂಥ ಹುಡುಗಿ ಮಧುರವಾಗಿ ಹಾಡುತ್ತಿದ್ದಾಳೆ. ಸುಭದ್ರಮ್ಮನನ್ನು ನರೇಶ ಗಾಳಿಯಾಡುವ ಕಿಟಕಿ ಬಳಿ ಕೂಡ್ರಿಸಿದ. “”ಅತ್ತೆ, ನನಗೆ ಸ್ವಲ್ಪ ಕೆಲಸವಿದೆ. ಮುಗಿಸಿ 9 ಗಂಟೆಗೆ ಬರುತ್ತೇನೆ. ಹರಿಕತೆ ಮುಗಿದರೆ ಇಲ್ಲೇ ದೇವಸ್ಥಾನದಲ್ಲಿ ಕುಳಿತಿರು, ನೀರಿನ ಬಾಟಿÉ, ಕಿತ್ತಳೆ ಹಣ್ಣು ಈ ಬ್ಯಾಗಿನಲ್ಲಿದೆ” ಎಂದು ಹೇಳುತ್ತ ಕೈಬೀಸಿ ಹೊರಟುಹೋದ. “”ನಾನು ನಾಲ್ಕಾರು ದಿನ ಎತ್ತಿ ಆಡಿಸಿದ ಮಗು ಇವನೇನಾ?” ಎಂಬ ವಿಚಿತ್ರವಾದ ತುಮುಲದಲ್ಲಿ ಸುಭದ್ರಮ್ಮ ಮುಳುಗಿದ್ದರು.
ಅಲ್ಲಿ ವೇದಿಕೆಯಲ್ಲಿ ಮುದ್ದು ಗೌರಿ ಹೇಳತೊಡಗಿದ್ದಳು: “”ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ ಅಂದರೆ ಏನು ಅಂತ ಗೊತ್ತಾ? ಈ ಕಾಲದ ಅರ್ಥ ಏನು ಅಂತ ಹೇಳಿ. ಗಂಡ-ಹೆಂಡತಿ ಒಟ್ಟಿಗಿದ್ದರೆ ಅದು ಅವಿಭಕ್ತ ಕುಟುಂಬ, ಗಂಡ-ಹೆಂಡತಿ ಬೇರೆ ಬೇರೆ ಇದ್ದರೆ ವಿಭಕ್ತ ಕುಟುಂಬ” ಎನ್ನುತ್ತ ಗೌರಿ ನಗು ಬೀರಿದರೆ ವೃದ್ಧರೇ ತುಂಬಿರುವ ಸಭೆ ಗೊಳ್ಳನೇ ನಗುತ್ತಿತ್ತು. ಸುಭದ್ರಮ್ಮನೂ ಈ ಮುದ್ದು ಗೌರಿಯ ಮಾತಿಗೆ ನಕ್ಕರೂ ಅವಳ ಮನಸ್ಸು ಒಳ ಒಳಗೆ ಸರಿದು ತನ್ನ ಬಾಲ್ಯದ, ಕುಮಟಾ ಸಮೀಪದ, ಹಳ್ಳಿಯ ತವರು ಮನೆಯ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯತೊಡಗಿತ್ತು.
ಕುಮಟಾ ಪೇಟೆಯಿಂದ ಅನತಿ ದೂರದ ಹಳ್ಳಿ. ಅಲ್ಲಿಯ ದೊಡ್ಡ ಹೆಗಡೇರಾದ ಕೃಷ್ಣಪ್ಪನವರ ಮನೆ-ತೋಟ, ಗದ್ದೆಯೇ ಒಂದು ಸಣ್ಣ ಗ್ರಾಮವಾಗಿತ್ತು. ಕೃಷ್ಣಪ್ಪ ಹೆಗಡೆಯವರ ಹೆಂಡತಿ ರಾಧಮ್ಮ ತುಂಬ ಓದಿದವಳಲ್ಲ. ಆದರೆ ಸಹಜವಾಗಿಯೇ ಸುಂದರಿ ಮತ್ತು ಬುದ್ಧಿವಂತೆಯಾಗಿದ್ದಳು. ತಮ್ಮ ಮನೆ, ಪರಿಸರಕ್ಕೆ “ಮಧುಬನ’ ಎಂದು ನಾಮಕರಣ ಮಾಡಿದ್ದಳು. ಕೃಷ್ಣ-ರಾಧೆ, ಮಧುಬನ ಚೆನ್ನಾಗಿದೆ ಎಂದು ಬಂಧುಗಳೂ ಮೆಚ್ಚಿಕೊಳ್ಳುತ್ತಿದ್ದರು. ಕೃಷ್ಣಪ್ಪ-ರಾಧಮ್ಮ ಅನುರೂಪದ ದಂಪತಿಗಳು. ತುಂಬ ಪರಿಶ್ರಮದಿಂದ ಮಧುಬನವನ್ನು ಚೆನ್ನಾಗಿ ಪೋಷಿಸಿ ಬೆಳೆಸಿದ್ದರು. ಅವರ ದಾಂಪತ್ಯ ಜೀವನದಲ್ಲಿ ಯಾವ ಅಡೆತಡೆಗಳಿಲ್ಲದೆ ಏಳು ಗಂಡು, ಒಬ್ಬಳು ಮಗಳು ಹುಟ್ಟಿದ್ದರು. ಮಕ್ಕಳಿಗೆ ಕ್ರಮವಾಗಿ ಅನಂತ, ಅಚ್ಯುತ, ಕೇಶವ, ಮಾಧವ, ವಿಠuಲ, ಜಗನ್ನಾಥ, ಮಧುಸೂದನ ಮತ್ತು ಅತ್ಯಂತ ಕಿರಿಯ ಮುದ್ದಿನ ಮಗಳಿಗೆ ಸುಭದ್ರಾ ಎಂದು ಹೆಸರಿಟ್ಟಿದ್ದರು. ಹಾಗಾಗಿ, ಅವರ ನಂದಗೋಕುಲದಂಥ ಮನೆಯಲ್ಲಿ ಸದಾ ಹರಿಸ್ಮರಣೆಯೇ ನಡೆಯುತ್ತಿತ್ತು.
ಕೃಷ್ಣಪ್ಪನವರ ಮಕ್ಕಳು ಓದಿದರು. ಎಲ್ಲರೂ ಬುದ್ಧಿವಂತರೇ! ಮೊದಲ ಮಗ ಅನಂತನೊಬ್ಬ ಪದವೀಧರನಾದ, ಹಳ್ಳಿಯ ಹುಡುಗಿಯನ್ನು ಮದುವೆಯಾಗಿ ಮಧುವನದಲ್ಲೇ ನೆಲೆಸಿದ. ಕೃಷ್ಣಪ್ಪನವರ ಒಬ್ಬೊಬ್ಬ ಮಕ್ಕಳೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನೆ ಬಿಡುವಾಗ ಅವರದ್ದು ಒಂದೇ ರಾಗ. “”ಮಕ್ಕಳೇ, ನೀವು ಬೇಕಾದಷ್ಟು ಓದಿ. ಆದರೆ, ಎಲ್ಲರೂ ಈ ದೊಡ್ಡ ಮನೆಗೇ ಮರಳಬೇಕು, ಇಲ್ಲೇ ನೆಲೆಸಬೇಕು. ಹೊಟ್ಟೆಪಾಡಿಗಾಗಿ ನೌಕರಿ ಮಾಡಬೇಕಾದ ಆವಶ್ಯಕತೆ ಯಾರಿಗೂ ಇಲ್ಲ. ಎಲ್ಲರಿಗೂ ಸರಳವಾಗಿ, ಸುಖವಾಗಿ ಬದುಕಲು ಬೇಕಾದಷ್ಟು ಹೊಲ, ತೋಟ, ಮನೆ, ಬಂಗಾರ ನಾನು ಮಾಡಿದ್ದೇನೆ. ಇಲ್ಲೇ ನಿಮ್ಮ ಬುದ್ಧಿಶಕ್ತಿಯಿಂದ ಸ್ವರ್ಗ ಸೃಷ್ಟಿಸಬಹುದು”. ಮಕ್ಕಳು ತಲೆ ಅಲ್ಲಾಡಿಸಿ ಹೊರಗೆ ಹೋದರು.
ರೆಕ್ಕೆ ಬಲಿತು ಗಗನಕ್ಕೆ ನೆಗೆದ ಪಕ್ಷಿಗಳು ಮತ್ತೆ ಮರಳಿ ಅದೇ ಗೂಡಿಗೆ ಬರುತ್ತವೆಯೇ? ಅನಂತ ಮನೆಯಲ್ಲಿ, ಅಚ್ಯುತ ಕುಮಟಾ ಪೇಟೆಯಲ್ಲಿ, ಕೇಶವ ಬೆಂಗಳೂರು, ಮಾಧವ ಮುಂಬಯಿ, ವಿಠuಲ ಡೆಲ್ಲಿ, ಜಗನ್ನಾಥ ಇಂಗ್ಲೆಂಡ್, ಮಧುಸೂದನ ಅಮೆರಿಕ ಸೇರಿದರು. ಮುದ್ದಿನ ಮಗಳು ಸುಭದ್ರೆಯನ್ನು ಹತ್ತಿರ ಹಳ್ಳಿಗೇ ಕೊಟ್ಟಿದ್ದರೂ, ಅವಳು ಗಂಡನ ಕೆಲಸದ ನಿಮಿತ್ತ ಆಸ್ಟ್ರೇಲಿಯಾ ಸೇರಿದಳು. “ನಮ್ಮದು ವಿಶ್ವಕುಟುಂಬ’ ಎಂದು ರಾಧಮ್ಮ ನಗುತ್ತ ನುಡಿದರೂ, ಅರಮನೆಯಂಥ ಮನೆ ಬಿಕೋ ಎಂದು ಅತ್ತಂತೆ ಕಾಣುತ್ತಿತ್ತು.
“”ನಾನು ಯಾಕೆ ಕಷ್ಟಪಟ್ಟು ದುಡಿದೆ, ಯಾರಿಗಾಗಿ ಆಸ್ತಿ ಮಾಡಿದೆ. ಇಷ್ಟು ದೊಡ್ಡ ಮನೆ ಕಟ್ಟಿದೆ” ಎಂದು ಕೃಷ್ಣಪ್ಪ ಚಿಂತಿಸುತ್ತಿದ್ದರು. ಮನೆಯಲ್ಲಿರುವ ಅನಂತ-ಅವನ ಹೆಂಡತಿ ಅಂಜಲಿಗೂ ಸದಾ ಬೇಸರವೇ! “”ನಾವ್ಯಾಕೆ ಈ ದೆವ್ವದಂಥ ಮನೆಯಲ್ಲಿ ಇರಬೇಕು? ನಾವು ಆರಾಮಾಗಿ ವಿಮಾನದಲ್ಲಿ ಹಾರಾಡುತ್ತ ವಿದೇಶದಲ್ಲಿ ನೆಲೆಸಬಹುದಿತ್ತು ಎಂಬ ಆಸೆ! ಅನಂತನಿಗೆ ಇಬ್ಬರು ಗಂಡು ಮಕ್ಕಳು ಇನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದರೂ ಅಮೆರಿಕಕ್ಕೆ ಹಾರುವ ಆಸೆ.
ಕಾಲಚಕ್ರ ಬೇಗ ಬೇಗ ಉರುಳಿದೆ. ಕಷ್ಟದ ಸಮಯದಲ್ಲಿ ದಿನ ಕಳೆಯುವುದೇ ನಿಧಾನವಾಗಿ! ಸುಖದ ಅಮಲಿನಲ್ಲಿ ವರ್ಷಗಳು ಉರುಳಿದ್ದೇ ಗೊತ್ತಾಗುವುದಿಲ್ಲ ಎಂದು ರಾಧಮ್ಮ ಗೊಣಗುತ್ತಾರೆ. ಆದರೆ ಕಷ್ಟವೋ-ಸುಖವೋ ಕಾಲ ಓಡುತ್ತದೆ, ವೇಗವಾಗಿ ಓಡುತ್ತದೆ. ಬಾಲ್ಯ, ಯೌವ್ವನದ ಬೆಲೆ ಗೊತ್ತಾಗುವಷ್ಟರಲ್ಲಿ ಮುಪ್ಪು ಬಂದು ಅಡರುತ್ತದೆ. ಕಳೆದ ಕಾಲ ಮರಳಿ ಬರುವುದಿಲ್ಲ. ಕಾಲಚಕ್ರ ತಿರು-ತಿರುಗಿ ಕೃಷ್ಣಪ್ಪನವರಿಗೆ ಎಂಬತ್ತೈದು, ರಾಧಮ್ಮನಿಗೆ ಎಂಬತ್ತಾದಾಗ ಅನಿರೀಕ್ಷಿತವಾಗಿ ಮರಣ ಬಂದಿತ್ತು. ತಮ್ಮ ಇಳಿವಯಸ್ಸಿನಲ್ಲೂ ಗದ್ದೆಗೆ ನೀರು ಬಿಡಲು ಹೋದ ಕೃಷ್ಣಪ್ಪ ಕಾಲು ಜಾರಿ ಹಳ್ಳದಲ್ಲಿ ಮುಳುಗಿದ್ದರು. ಮಗ ಅನಂತ, ಆಳುಗಳು ಸೇರಿ ಕೃಷ್ಣಪ್ಪನವರ ಹೆಣವನ್ನು ಹೊತ್ತು ತರುವುದನ್ನು ನೋಡಿಯೇ ರಾಧಮ್ಮ ಕುಸಿದು ಬಿದ್ದವರು ಮತ್ತೆ ಮೇಲೇಳಲಿಲ್ಲ. ದೇಶ-ವಿದೇಶದಿಂದ ಮಕ್ಕಳು-ಮೊಮ್ಮಕ್ಕಳು ಬಂದರು. “ಪುಣ್ಯವಂತರು’ ಎಂದು ಜನ ಹಾಡಿ ಹೊಗಳುತ್ತಿದ್ದಂತೆ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ನಡೆದಿದ್ದವು.
ಅರಮನೆಯಂಥ ದೊಡ್ಡ ಮನೆಯಲ್ಲಿ ಕೃಷ್ಣಪ್ಪ-ರಾಧಮ್ಮನವರು ಮಾತ್ರ ಇರಲಿಲ್ಲ. ಮನೆ-ಮಕ್ಕಳು-ಮೊಮ್ಮಕ್ಕಳು ಸಂಬಂಧಿಕರಿಂದ ತುಂಬಿ ತುಳುಕಿತ್ತು. ಎಲ್ಲ ಮುಗಿದು ವೈಕುಂಠ ಸಮಾರಾಧನೆಯೂ ಆದ ಮೇಲೆ ಬಂಧುಗಳು ಅವರವರ ಮನೆಗೆ ತೆರಳಿದ್ದರು. ರಾತ್ರಿ ಕೃಷ್ಣಪ್ಪನವರ ಎಂಟು ಮಕ್ಕಳು ಮಾತ್ರ ಅಂಗಳದಲ್ಲಿ ಕುಳಿತು ಹರಟೆ ಹೊಡೆಯತೊಡಗಿದ್ದರು. ಹಳ್ಳಿಯ ಪ್ರಶಾಂತ ವಾತಾವರಣ, ಹುಣ್ಣಿಮೆಯ ರಾತ್ರಿ, ವಿವಿಧ ಹೂಗಳ ಪರಿಮಳ, ತಂದೆ-ತಾಯಿಯರ ಸಾವು ತಂದ ಶೂನ್ಯತೆ, ಅನಾಥಭಾವ ಎಲ್ಲ ಸೇರಿ ನಿಗೂಢ ಲೋಕವೊಂದನ್ನು ಸೃಷ್ಟಿಸಿತ್ತು. ಯಾವುದೋ ಮಾಯೆಗೆ ಸಿಲುಕಿದಂತೆ ಎಲ್ಲರಿಗೂ ಮುದ್ದಿನ ತಂಗಿಯಾದ ಸುಭದ್ರಾ ಈಗ ಮುದುಕಿ, ನುಡಿದಿದ್ದಳು.
“”ಹಳ್ಳಿಯನ್ನು ಬಿಟ್ಟು ದೂರದ ಸಿಡ್ನಿಗೆ ಹೋದೆವು. ಅಲ್ಲಿಯೇ ಬದುಕನ್ನು ಕಟ್ಟಿಕೊಂಡೆವು. ಆದರೆ, ನನ್ನ ಒಬ್ಬನೇ ಮಗನಿಗೆ ಸಿಡ್ನಿ ಬೇಡವಾಯ್ತು. ಕೊರಿಯಾದ ಹುಡುಗಿಯನ್ನು ಕಟ್ಟಿಕೊಂಡು ಅಲ್ಲೇ ಹೋಗಿ ನೆಲೆಸಿದ್ದಾನೆ. ನಿಮ್ಮ ಭಾವನಿಗೆ ಯಾವುದೂ ಬೇಡವಾಗಿದೆ. ತಮ್ಮ ಹಳ್ಳಿಗೆ ಹೋಗಿ ಇರೋಣ ಎನ್ನುತ್ತಿದ್ದಾರೆ. ನನಗೆ ಆ ಹಳ್ಳಿಯಲ್ಲಿ ಇರಲು ಸಾಧ್ಯವಿಲ್ಲ. ಸಿಡ್ನಿಯಲ್ಲಿ ಇರುವುದರಲ್ಲಿ ಯಾವ ಅರ್ಥವೂ ಕಾಣುತ್ತಿಲ್ಲ”.
ಎಲ್ಲರ ಭಾವನಾಪ್ರವಾಹದ ಕಟ್ಟು ಒಡೆದಿತ್ತು. ಅನಂತನಿಗೆ ಈ ಮಧುಬನ ಸೆರೆಯಾಗಿತ್ತು. ಅಚ್ಯುತ, ಕೇಶವ, ಮಾಧವ… ಎಲ್ಲರದ್ದು ಒಂದೊಂದು ಕತೆ. ಎಲ್ಲರ ಮಕ್ಕಳು ಓದಿದ್ದರು. ಅವರವರ ನೆಲೆ ಕಂಡುಕೊಂಡಿದ್ದರು. ಆದರೂ ಪರರಾಜ್ಯ-ಪರದೇಶಗಳಲ್ಲಿ ಪರದೇಶಿಗಳೆಂದೇ ಅನ್ನಿಸುತ್ತಿತ್ತು. ಎಲ್ಲರ ಗೋಳಿನ ಕತೆ ಕೇಳಿ ಕೇಳಿ ಕೊನೆಗೆ ಮನೆಯ ಹಿರಿಯ ಸೊಸೆ ಅಂಜಲಿ ನುಡಿದಿದ್ದಳು, “”ಆಯ್ತು, ಈಗ ಮಧ್ಯರಾತ್ರಿ ಆಗಿದೆ. ಎಲ್ಲರೂ ಮಲಗೋಣ. ನಮ್ಮೆಲ್ಲರಿಗೂ ಸಮಸ್ಯೆಗಳಿವೆ. ಆದರೆ, ಹುಡುಕಿದರೆ ಪರಿಹಾರವೂ ಸಿಗುತ್ತದೆ. ನಿಧಾನವಾಗಿ ವಿಚಾರ ಮಾಡೋಣ”.
ಹಾಗೇ ಆ ದಿನ, ಆ ತಿಂಗಳು, ವರ್ಷ ಉರುಳುರುಳಿ ಹೋಗಿದ್ದವು. ಒಂದು ವರ್ಷದ ನಂತರ ಬೆಂಗಳೂರಿನ ಸುಂದರ ಬಡಾವಣೆ ಸಹಕಾರ ನಗರದಲ್ಲೊಂದು ಸುಂದರ ಕಟ್ಟಡ ನಿರ್ಮಾಣವಾಗಿತ್ತು. ಎಂಟು ಪುಟ್ಟ ಮನೆಗಳಿರುವ ಅಪಾರ್ಟ್‌ಮೆಂಟ್, ಹೆಸರು “ಅವಿಭಕ್ತ’.
ಹಳ್ಳಿಯ “ಮಧುಬನ’ದ ಮನೆ, ತೋಟ, ಆಸ್ತಿಯನ್ನು ಐದು ಕೋಟಿಗೆ ದುಬೈಯಿಂದ ಬಂದ ಸಾಹುಕಾರ ಖರೀದಿಸಿದ್ದ. ಆ ಹಣದಿಂದ ಬೆಂಗಳೂರಿನಲ್ಲಿ ಈ ಕಟ್ಟಡ ನಿರ್ಮಾಣವಾಗಿತ್ತು. ಏಳು ಜನ ಅಣ್ಣ-ತಮ್ಮಂದಿರು, ತಂಗಿ ಸುಭದ್ರಾ ಒಂದೊಂದು ಮನೆಯಲ್ಲಿ ನೆಲೆಸಿದ್ದರು. ಸುಭದ್ರೆಯ ಗಂಡ ತನ್ನ ಹಳ್ಳಿಯಲ್ಲಿಯೇ ಉಳಿಯುವರಾಗಿ ಹೇಳಿ ನೆಲೆಸಿದ್ದ. ಅನಂತ, ಅಚ್ಯುತ, ಕೇಶವ… ಎಲ್ಲ ವೃದ್ಧ ದಂಪತಿಗಳೇ! ಒಬ್ಬರಿಗೊಬ್ಬರು ನೆರವಾಗುತ್ತ, ಬಾಲ್ಯದ “ಮಧುವನ’ವನ್ನು ಸ್ಮರಿಸಿಕೊಳ್ಳುತ್ತ, ಅಪ್ಪನ ಅವಿಭಕ್ತ ಕುಟುಂಬದ ಕನಸು ಹೀಗೆ ನನಸಾಗಿರುವುದಕ್ಕೆ ವಿಷಾದವೋ-ವಿನೋದವೋ ತಿಳಿಯದ ಭಾವಾವೇಶಕ್ಕೆ ಆಗಾಗ ಒಳಗಾಗುತ್ತ ದಿನ ಕಳೆಯುತ್ತಿದ್ದಾರೆ. ಬೆಂಗಳೂರಿನÇÉೇ ಬೇರೆ ಬೇರೆ ಬಡಾವಣೆಯಲ್ಲಿರುವ ಅನಂತನ ಮಗ ನರೇಶ, ಕೇಶವನ ಮಗಳು ಕನ್ನಿಕಾ ಯಾವಾಗ ಬರುತ್ತಾರೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ.
ವೇದಿಕೆಯಲ್ಲಿ ಮುದ್ದು ಗೌರಿಯ ಹರಿಕತೆ ಮುಗಿದಿತ್ತು. ಸುಭದ್ರಮ್ಮನ ಮನೋಪಟಲದ “ಹರಿಕತೆ’ ಮುಗಿಯುವಂತದ್ದಲ್ಲ. ನರೇಶನಿಗಾಗಿ ಕಾಯುತ್ತ ಸುಭದ್ರಮ್ಮ ಕುಳಿತೇ ಇದ್ದರು.
– ವಿಜಯಾ ಶ್ರೀಧರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.