ದಿಲ್ಲಿಯಲ್ಲಿ ಹವಾಹವಾಯಿ
ದಿಲ್‌ವಾಲೋಂಕೀ ದಿಲ್ಲಿ
Team Udayavani, Jun 2, 2019, 6:00 AM IST
ದಿಲ್ಲಿಯ ಹವೆ ಚಂಚಲೆ!
ಸಂಭಾಷಣೆಗಳನ್ನು ಆರಂಭಿಸುವ ವಿಚಾರದಲ್ಲಿ ದೇಶಭಾಷೆಗಳ ಹಂಗಿಲ್ಲದೆ ಅತ್ಯಧಿಕ ಶ್ರೇಯಸ್ಸು ಸಲ್ಲಬೇಕಾಗಿರುವ ಅಂಶವೇನಾದರೂ ಇದ್ದರೆ ಅದು ಹವಾಮಾನವೇ ಸರಿ. ಈಗಲೂ ನಮ್ಮ ಬಹುತೇಕ ಸಂಭಾಷಣೆಗಳು “”ಎಂಥಾ ಧಗೆ ಕಣ್ರೀ… ಅದೇನು ಜಡಿಮಳೆ ಮಾರಾಯ್ರೆ…”, ಇಂಥಾ ಮಾತುಗಳಿಂದಲೇ ಶುರುವಾಗುವುದು. ಹೀಗಾಗಿ ನಮ್ಮ ಬದುಕಿಗೂ, ಹವಾಮಾನಕ್ಕೂ ಇರುವ ನಂಟು ಬಲು ಹತ್ತಿರದ್ದು.
ದಿಲ್ಲಿಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ವಾತಾವರಣ ಓಲಾಡುತ್ತಿರುತ್ತದೆ. ಇಲ್ಲಿ ಋತುಗಳೇನೋ ನಿಯಮಿತವಾಗಿರಬಹುದು. ಆದರೆ, ಅದರ ಹಾವಭಾವಗಳು ಮಾತ್ರ ಕೆಲವೊಮ್ಮೆ ಕಲ್ಪನೆಗೂ ನಿಲುಕದ್ದು ಅನ್ನಿಸಿಬಿಡುವುದುಂಟು. ಧಗೆಯು ಹೆಚ್ಚಾಗಿ ಅಗ್ನಿಕುಂಡದಂತಾಗಿರುವ ಶಹರಕ್ಕೆ ಎಲ್ಲಿಂದಲೋ “ಧೋ’ ಎಂದು ಬಂದೆರಗುವ ಜಡಿಮಳೆ, ಬರಲಿರುವ ಮಳೆಯ ಕಿಂಚಿತ್ತೂ ನಿರೀಕ್ಷೆಯಿಲ್ಲದೆ ಏಕಾಏಕಿ ಗೊಂದಲಕ್ಕೀಡಾಗಿ ತಲೆಯ ಮೇಲೊಂದು ಸೂರಿಗಾಗಿ ತಡಕಾಡುವ ಜನಸಮೂಹ, ಒಂದಷ್ಟು ಮಳೆ ಬಂದರೂ ಪುಟ್ಟ ಕೊಳಗಳಂತಾಗಿ ಉಸಿರುಗಟ್ಟಿಸುವಂತಾಗುವ ಅಸ್ತವ್ಯಸ್ತ ಮಹಾನಗರಿ… ಹೀಗೆ ಏಕಾಏಕಿ ಬಂದು ವಕ್ಕರಿಸುವ ಮಳೆಯು ದಿಲ್ಲಿಯನ್ನು ಅರೆಕ್ಷಣ ತಲ್ಲಣಗೊಳಿಸುತ್ತದೆ. ಮಹಾ ಗೊಂದಲಕ್ಕೆ ದೂಡುತ್ತದೆ. ಧಗೆಗೆ ಕ್ಷಣಮಾತ್ರ ಹಾಯೆನಿಸಿದರೂ ಬಹುತೇಕರಿಗದು ಆಹ್ವಾನವಿಲ್ಲದೆ ಬರುವ ಕಿರಿಕಿರಿಯ ಅತಿಥಿಯೇ ಸರಿ.
ಹಾಗೆಂದು ಇದು ಮಳೆಗೆ ಮಾತ್ರ ಸೀಮಿತವೇನಲ್ಲ. ಪ್ರೇಮಿಗಳಿಗೆ ಪ್ರಶಸ್ತವೆಂಬಂತಿರುವ ಸುಂದರವಾದ ಸಂಜೆಯೊಂದು ಏಕಾಏಕಿ ಸುಂಟರಗಾಳಿಯದಾಳಿಗೀಡಾಗಿ ಧೂಳನ್ನು ಮುಖಕ್ಕೆ ರಾಚುವಂತೆ ಅಬ್ಬರಿಸಬಹುದು. ಕಾರ್ಮೋಡಗಳ ಹಿಮ್ಮೇಳದೊಂದಿಗೆ ಬರುವ ಧೂಳಿನ ಈ ತಾಂಡವವು ಅಚಾನಕ್ಕಾಗಿ ಎಲ್ಲರನ್ನೂ ಬೆಚ್ಚಿಬೀಳಿಸದಿದ್ದರೆ ಹೇಳಿ. ದಿಲ್ಲಿಯ ಬಗ್ಗೆ ಇನ್ನೂ ಒಟ್ಟಾರೆಯಾಗಿ ಹೇಳುವುದೇ ಆದರೆ ಒಂದೆಡೆ ಚಳಿಗಾಲದ ಮೈಕೊರೆಯುವ, ಶೂನ್ಯ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಮಟ್ಟಿನ ಚಳಿ. ಮತ್ತೂಂದೆಡೆ ಬರೋಬ್ಬರಿ ಐವತ್ತರ ಆಸುಪಾಸಿನತ್ತ ಸರಿದು ಜನರ ನೀರಿಳಿಸುವ ಬೇಸಿಗೆಯ ಧಗೆ. ಇನ್ನು ಈ ನಡುವೆ ಆಗೊಮ್ಮೆ ಈಗೊಮ್ಮೆ ಬಂದು ಮಾಯವಾಗುವ, ವಿನಾಕಾರಣ ಅಚ್ಚರಿಪಡುವಂತೆ ಮಾಡುವ ತಕ್ಕಮಟ್ಟಿನ ಮಳೆ. ಒಟ್ಟಿನಲ್ಲಿ ದಿಲ್ಲಿಯ ಬಗ್ಗೆ ಅಪಾರವಾದ ಪ್ರೀತಿಯಿರುವವರೂ ಇಲ್ಲಿಯ ಹವಾಮಾನದ ಚಾಂಚಲ್ಯವನ್ನು ಒಪ್ಪಿಕೊಳ್ಳುವುದು ಸತ್ಯ. ಹೊರಗಿನವರಂತೂ ಶಹರವನ್ನು ಪ್ರೀತಿಸುತ್ತಲೇ ದಿಲ್ಲಿಯ ಕಟು ಎನ್ನಿಸುವಂತಹ ಹವಾಮಾನದ ಬಗ್ಗೆ ಕೊಂಚ ನಿಡುಸುಯ್ಯುತ್ತಾರೆ. ಹವಾಮಾನವೊಂದನ್ನು ಬಿಟ್ಟರೆ ಅಂಥ ದೂರುಗಳೇನಿಲ್ಲ ಎಂದು ಥಟ್ಟನೆ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಾರೆ ಕೂಡ.
ಇನ್ನು ಎನ್‌ಸಿಆರ್ (ನೇಶನಲ್ ಕ್ಯಾಪಿಟಲ್ ರೀಜನ್) ಭಾಗವಾದ ದಿಲ್ಲಿಯ ಹೊರಭಾಗದ ಮಹಾನಗರಿಗಳದ್ದೂ ಬಹುತೇಕ ಇದೇ ಕಥೆ. ಅದರಲ್ಲೂ ಶಹರದಲ್ಲಿ ವರ್ಷಧಾರೆಯಾದಾಗ ಏಕತಾನತೆಯಲ್ಲಿ ಕಳೆದುಹೋದಂತಿದ್ದ ಜನಜೀವನದಲ್ಲಿ ಏಳುವ ತರಹೇವಾರಿ ಅಲೆಗಳನ್ನು ನೋಡಿಯೇ ತೀರಬೇಕು. ಈಚೆಗೆ ಒಂದೆರಡು ಸಂಜೆ ಸತತವಾಗಿ ಮಳೆಯಾದಾಗ ದೆಹಲಿಯ ಬಗಲಿನಲ್ಲಿರುವ ಹರಿಯಾಣಾದ ಗುರುಗ್ರಾಮದ ಬೀದಿಗಳಲ್ಲಿ ನೀರು ತುಂಬಿ ಕೊಳಗಳಂತಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ಇಲ್ಲಿಯ ಕೆಲವರು ಈ ಚಿತ್ರಗಳನ್ನು ಪೋಸ್ಟ್ ಮಾಡಿ, “”ನಿನ್ನೆ ಮಲಗಿದಾಗ ಗುರುಗ್ರಾಮದಲ್ಲಿದ್ದೆ. ಇಂದು ಮುಂಜಾನೆ ಎದ್ದಾಗ ವೆನಿಸ್ ತಲುಪಿದ್ದೇನೆ”, ಎಂದೆಲ್ಲ ಬರೆದು ತಮ್ಮ ಹಾಸ್ಯಪ್ರಜ್ಞೆಯನ್ನು ತೋರಿಸಿದರು. ಹಾಗೆಂದು ಜನತೆಯ ಈ ಹಾಸ್ಯಮಯ ಅಭಿಪ್ರಾಯಗಳು ತೀರಾ ಉತ್ಪ್ರೇಕ್ಷಿತವಾದವುಗಳೂ ಆಗಿರಲಿಲ್ಲ. ಒಂದೆರಡು ಮಳೆಯ ಏಟಿಗಷ್ಟೇ ಗುರುಗ್ರಾಮವು “ಕಾಲುವೆಗಳ ನಗರ ವೆನಿಸ್’ನ ರೂಪವನ್ನು ತಾತ್ಕಾಲಿಕವಾಗಿ ಪಡೆದುಕೊಂಡು ಅಸ್ತವ್ಯಸ್ತವಾಗಿತ್ತು.
ಈ ಗುಂಗಿನಲ್ಲೇ ಹರಿಯಾಣಾದ ಗುರುಗ್ರಾಮದ ಕಥೆಯೂ ಕೂಡ ಹೇಳಲು ಲಾಯಕ್ಕಿರುವಂಥದ್ದು. “ಗುರ್ಗಾಂವ್’ ಈ ಶಹರದ ಹಳೆಯ ನಾಮಧೇಯ. ಆದರೆ, ಗ್ರಾಮೀಣ ಹರಿಯಾಣವೀ ಜನರಿಗೆ ಮಾತ್ರ ಇಂದಿಗೂ “ಗುಡ್ಗಾಂವಾ’. ದಿಲ್ಲಿಯ ಪಕ್ಕದಲ್ಲೇ ಇರುವುದರಿಂದಾಗಿ ಇದಕ್ಕೂ ಒಂದು ವಿಶೇಷವಾದ ಗತ್ತು. ದಿಲ್ಲಿ ರಾಷ್ಟ್ರರಾಜಧಾನಿಯಾದರೆ, ಗುರುಗ್ರಾಮವು ದೇಶದ ಪ್ರಮುಖ ಆರ್ಥಿಕ ಮತ್ತು ಔದ್ಯೋಗಿಕ ತಾಣಗಳಲ್ಲೊಂದು. ಜಗತ್ತಿನ ಬಹುತೇಕ ಎಲ್ಲಾ ದೈತ್ಯ ಕಂಪೆನಿಗಳೂ ಕೂಡ “ಇಲ್ಲಿ ತಮಗೊಂದಿಷ್ಟು’ ಎಂದು ಜಾಗಮಾಡಿಕೊಂಡು ಕೂತಿವೆ. ನಗರಿಯು ಉದ್ಯಮಗಳ ಬೀಡಾಗಿದ್ದು ಯುವಸಮೂಹವನ್ನು ಉದ್ಯೋಗ ನಿಮಿತ್ತ ತನ್ನತ್ತ ಸೆಳೆದುಕೊಳ್ಳುತ್ತ ವಲಸಿಗರ ಗೂಡಾಗಿಬಿಟ್ಟಿದೆ. ಇನ್ನು ಉದ್ಯಮಗಳ ಜೊತೆಗೇ ಕಾಲೆಳೆದುಕೊಂಡು ಬಂದ ಶ್ರೀಮಂತಿಕೆಯ ವೈಭವದಿಂದಾಗಿ, ಭಾರತದ ಶಾಂNç, ಮಿಲೇನಿಯಮ್ ಸಿಟಿ ಇತ್ಯಾದಿ ಬಿರುದು-ಬಾವಲಿಗಳನ್ನೂ ಪಡೆದುಕೊಂಡಿದೆ.
ಇಂದು ಹವಾಮಾನ ವೈಪರೀತ್ಯ, ಮಾಲಿನ್ಯ ಎಂದೆಲ್ಲ ದಿಲ್ಲಿಯು ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದರೆ, ಬಗಲಲ್ಲೇ ಇರುವ ಗುರುಗ್ರಾಮವು ತಾನೂ ಸ್ಪರ್ಧೆಯೊಡ್ಡುವಂತೆ ಮುನ್ನಡೆಯುತ್ತಿದೆ. ಗಾಜಿನ ದಿರಿಸು ತೊಟ್ಟ ಗಗನಚುಂಬಿ ಕಟ್ಟಡಗಳಿಂದ, ಲೆಕ್ಕವಿಲ್ಲದಷ್ಟು ದೈತ್ಯ ಶಾಪಿಂಗ್‌ಗಳಿಂದ, ಕಣ್ಣೆತ್ತಿದರೆ ಕಾಣಸಿಗುವ ಫ್ಲೈ ಓವರ್- ಸಬ್‌ವೇಗಳಿಂದ ಜೀವನ ನೀರಸವಾದಾಗಲೆಲ್ಲ ಗುರುಗ್ರಾಮದ ನಿವಾಸಿಗಳಿಗೆ ದಿಲ್ಲಿಯ ಹಸಿರೇ ಸಂಜೀವಿನಿ, ವಾರಾಂತ್ಯದ ಸ್ವರ್ಗ. “”ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಬಂಜರುಭೂಮಿಯಂತಿದ್ದ ಗುರ್ಗಾಂವ್ ಈಗ ಹೇಗೆ ಬೆಳೆದುಬಿಟ್ಟಿದೆ ನೋಡಿ”, ಎಂದು ಇಲ್ಲಿಯ ಸ್ಥಳೀಯರು ಕಣ್ಣರಳಿಸುತ್ತ ಹೇಳುವಾಗ ಈಗಲೂ ತಕ್ಕಮಟ್ಟಿನ ಬಂಜರಿನಂತಿರುವ ಮನೇಸರ್ ಪ್ರದೇಶ ಮತ್ತು ಇನ್ನೊಂದೆಡೆ ರಾಕ್ಷಸ ವೇಗದಲ್ಲಿ ಬೆಳೆಯುತ್ತಿರುವ ನೋಯ್ಡಾ ಮಹಾನಗರಿಗಳು ನಾವೂ ಕೂಡ ಇಂಥಾ¨ªೊಂದು ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳುತ್ತಿರುವಂತೆ ಭಾಸವಾಗುತ್ತದೆ.
ನಗರೀಕರಣವೆನ್ನುವುದು ಈ ಮಟ್ಟಿನ ವೇಗವನ್ನು ಪಡೆಯುತ್ತಿರುವಾಗ ಹವಾಮಾನ ವೈಪರೀತ್ಯಗಳು ಹೆಚ್ಚಾಗುವುದು ಹೊಸತೇನಲ್ಲ. ಈಗಂತೂ ಪಕ್ಷಭೇದಗಳಿಲ್ಲದೆ ಪ್ರಣಾಳಿಕೆಗಳಿಂದ ಹಿಡಿದು ಭಾಷಣಗಳವರೆಗೂ ಎಲ್ಲರಿಗೂ ಸ್ಮಾರ್ಟ್‌ಸಿಟಿಗಳದ್ದೇ ಧ್ಯಾನ. ದಿಲ್ಲಿಯಲ್ಲಿ ದಶಕಗಳಿಂದ ಬೇರೂರಿರುವ ಹಲವರ ಪ್ರಕಾರ ದಿಲ್ಲಿಯ ಚಳಿಗಾಲದ ಚಳಿಯ ತೀವ್ರತೆಯು ಈಗ ಹಿಂದೆ ಇದ್ದಷ್ಟಿಲ್ಲ. ಹಸಿರು ಕಮ್ಮಿಯಾದ ಪರಿಣಾಮವಾಗಿ ಧಗೆಯ ತೀಕ್ಷ್ಣತೆಯೂ ಹಲವು ಪಟ್ಟು ಹೆಚ್ಚಾಗಿದೆ. ಜನಸಂಖ್ಯೆಯೂ, ವಾಹನಗಳ ಸಂಖ್ಯೆಯೂ ಮಿತಿಮೀರಿ ಮಹಾನಗರಿಯೂ ಜನತೆಯೂ ಇಷ್ಟಿಷ್ಟೇ ಒದ್ದಾಡುತ್ತಿದೆ. ಇರಲೂ ಆಗದೆ, ಎದ್ದು ಹೋಗಲೂ ಆಗದ ದ್ವಂದ್ವದಲ್ಲಿ ತೊಳಲಾಡುತ್ತಿದೆ.
ಶಹರದಷ್ಟೇ ವೇಗದಲ್ಲಿ ಹವಾಮಾನವೂ ಬದಲಾದ ಪರಿಣಾಮವಾಗಿ ಮಹಾನಗರಿಯ ಚಾಂಚಲ್ಯವೇ ಇಲ್ಲಿಯ ಹವೆಗೂ ಬಂದಿರಬಹುದೇನೋ. ಕಾರಣಗಳೇನೇ ಇರಲಿ, ಗುರುಗ್ರಾಮದ ವೈಭವವು ಕ್ಷಣಮಾತ್ರಕ್ಕೆ ಕಣ್ಣು ಕುಕ್ಕಬಹುದು. ನೋಯ್ಡಾ ಬೆಳೆಯುತ್ತಿರುವ ವೇಗವು ಅಭಿವೃದ್ಧಿಯ ಅಸ್ಪಷ್ಟ ಭ್ರಮೆಯೊಂದನ್ನೂ ತರಬಹುದು. ಆದರೆ, ನಿರಾಳತೆಯಿರುವುದು ಮಾತ್ರ ದಿಲ್ಲಿಯಲ್ಲಿ ಉಳಿದಿರುವ ಒಂದಿಷ್ಟು ಹಸಿರಿನಲ್ಲೇ. ದಿಲ್ಲಿಯು ತನ್ನಲ್ಲಿನ್ನೂ ಉಳಿಸಿಕೊಂಡಿರುವ ಆಕರ್ಷಣೆಯ ಹಿಂದಿರುವ ರಹಸ್ಯಗಳಲ್ಲಿ ಇದೂ ಒಂದು!
ಪ್ರಸಾದ್ ನಾೖಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.