ಬಚ್ಚಿಟ್ಟ ಮಾತು; ಮಾತು ನೊರೆತೆರೆಯಾಟ!
Team Udayavani, Jul 30, 2017, 6:00 AM IST
ಲೋಕದೊಳಗೆ ಬಚ್ಚಿಟ್ಟ , ಮುಚ್ಚಿಟ್ಟ ಮಾತುಗಳು ನೂರೆಂಟು. ಆಡಬೇಕೆಂದೇ ಹುಟ್ಟಿಕೊಳ್ಳುವ ಮಾತನ್ನು ಬಚ್ಚಿಡಬೇಕಾದ ಅಸಹಾಯಕತೆಗೆ, ಅಮಾಯಕತೆಗೆ ಹಾಗೇ ಕ್ರೌರ್ಯಕ್ಕೆ ಮತ್ತೆ ನೂರೆಂಟು ಕಾರಣವಿದ್ದೀತು. ಅದು ಎಷ್ಟಾದರೂ ಇರಲಿ, ಹೇಗಾದರೂ ಇರಲಿ, ಯಾವ ಕಾರಣಕ್ಕಾದರೂ ಇರಲಿ, ಬಚ್ಚಿಟ್ಟಿದ್ದನ್ನು ಹುಡುಕಿ ತೆಗೆಯುವ ಬಯಕೆಯನ್ನು ಅದು ಇನ್ನಷ್ಟು ಹುಟ್ಟಿಸಬಲ್ಲದು ಅಷ್ಟೇ.
ಹಾಗೆ ಬಚ್ಚಿಟ್ಟ ಒಂದು ಮಾತಿನ ಕುರಿತು ಈಗ ಆಡುವ ಆಸೆ. ಈ ಮಾತು ಹೆಣ್ಣಿನ ಲೈಂಗಿಕತೆಗೆ ಸಂಬಂಧಿಸಿದ್ದು ಮತ್ತು ಅದೇ ಕಾರಣಕ್ಕೆ ತೀರಾ ಇತ್ತೀಚಿನವರೆಗೂ ಬಚ್ಚಿಟ್ಟೇ ಗುಟ್ಟಿನಲ್ಲಿ ಆಡುತ್ತಿದ್ದದ್ದು. ಭಾರತೀಯ ಭಕ್ತಿ ಪರಂಪರೆಯಲ್ಲಿ ಬರುವ ಮಧುರ ಭಕ್ತಿಯ ದಾರಿಯಲ್ಲಿ ಮೂಡಿರುವ ಸಾಹಿತ್ಯವನ್ನು ಗಮನಿಸುವಾಗ ನನಗಿದು ಅನೇಕ ಬಾರಿ ಹೊಳೆದಿದೆ. ಶರಣ ಸತಿ-ಲಿಂಗಪತಿ ಭಾವದ ಹಿನ್ನೆಲೆಯಲ್ಲಿ ರಚಿತವಾದ ಕೆಲವು ವಚನಗಳಲ್ಲಿ ನಮಗೆ ಕಾಣಿಸುವ ಇಂತಹ ಮಧುರ ಭಕ್ತಿಯ ಕುರಿತು ಹಿಂದೊಮ್ಮೆ ಇನ್ನೊಂದೇ ಸಂದರ್ಭದಲ್ಲಿ ನಾನು ಲೇಖನವೊಂದನ್ನು ಬರೆದಿದ್ದೆ. ಅದರಿಂದಲೇ ಆಯ್ದ ಒಂದಿಷ್ಟು ಮಾತುಗಳನ್ನು ಈಗ ಇಲ್ಲಿ ಹಂಚಿಕೊಳ್ಳುವುದು ಅಗತ್ಯವೆನಿಸುತ್ತಿದೆ.
ಮಧುರ ಭಕ್ತಿ ಕೇವಲ ಭಾರತೀಯ ಭಕ್ತಿ ಪರಂಪರೆಯ ಸಾಹಿತ್ಯದಲ್ಲಿ ಅಷ್ಟೇ ಅಲ್ಲ,ಯುರೋಪಿಯನ್ ಭಕ್ತಿ ಕಾವ್ಯದ ಮೆಟಪಿಸಿಕಲ… ಪರಂಪರೆ,ಸೂಫಿ ಕಾವ್ಯ ಮತ್ತು ಜಾನಪದ ಸಾಹಿತ್ಯವೇ ಮುಂತಾಗಿ ವಿಶ್ವದ ಹಲವೆಡೆ ಇದು ಅಲ್ಲಲ್ಲಿ ಕಾಣಿಸಿಕೊಂಡಿದೆ. ಈ ಎಲ್ಲೆಡೆಯೂ ಮಧುರ ಭಕ್ತಿಯ ಈ ಭಾವವನ್ನು ಪ್ರೇಮ, ವಿರಹ, ಲೈಂಗಿಕ ವಾಂಛೆ, ಅವಿನಾಭಾವ ಸಂಬಂಧ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಬಳಸಿ ಅಭಿವ್ಯಕ್ತಿಸಲಾಗಿದೆ. ಈ ಅಭಿವ್ಯಕ್ತತೆಯಲ್ಲಿ ಎದ್ದು ಕಾಣುವ ಒಂದು ಸಾಮಾನ್ಯ ಅಂಶವೆಂದರೆ ಇಲ್ಲಿ ಭಕ್ತ (ಕವಿ) ಹೆಣ್ಣಾಗುವುದು ಮತ್ತು ದೈವ ಗಂಡಾಗುವುದು. ಎಲ್ಲೋ ಕೆಲವೊಮ್ಮೆ ಇಲ್ಲಿ ಪಾತ್ರಗಳು ತಮ್ಮ ಸ್ಥಾನ ಬದಲಿಸಿಕೊಂಡರೂ ಲೈಂಗಿಕ ಪ್ರತಿಮೆಗಳನ್ನು ಬಳಸುವಾಗ ಮಾತ್ರ ಸಾಮಾನ್ಯವಾಗಿ ಭಕ್ತನು ಹೆಣ್ಣಾಗಿಯೇ ಉಳಿಯುತ್ತಾನೆ/ಳೆ. ಮೇಲ್ನೋಟಕ್ಕೆ ಇದು ಎಲ್ಲ ಕಾಲಗಳಲ್ಲೂ ಎಲ್ಲೆಡೆಯೂ ಸಾಮಾನ್ಯವಾಗಿ ಕಂಡುಬರುವ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಗಂಡಿನ ಮೇಲ್ಮೆ ಮತ್ತು ಹೆಣ್ಣಿನ ಅವಲಂಬನೆಯ ಹಿನ್ನೆಲೆಯಲ್ಲಿ ದೈವವನ್ನು ಒಡೆಯ (ಗಂಡು) ಎಂದು ಭಾವಿಸಿ ಭಕ್ತನನ್ನು ಆ ಒಡೆಯನ ಸೇವಕ, ದಾಸ (ಹೆಣ್ಣು) ಎಂದು ಭಾವಿಸುವ ಮನೋಭಾವವನ್ನೇ ಪ್ರತಿಬಿಂಬಿಸುತ್ತದೆ ಎನ್ನುವುದು ಸಾಮಾನ್ಯವಾಗಿ ಪ್ರಚಲಿತವಾದ ಅಭಿಪ್ರಾಯ.
ಈ ವಾದವನ್ನು ಸಂಪೂರ್ಣವಾಗಿ ನಿರಾಕರಿಸುವುದು ಸರಿಯಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ದುರದೃಷ್ಟಗಳಲ್ಲೊಂದಾದ ಈ ವ್ಯವಸ್ಥಿತ ತರತಮ ಭೇದವೇ ಮಧುರ ಭಕ್ತಿಯಲ್ಲಿ ಕಾಣುವ ಭಕ್ತ (ಹೆಣ್ಣು) ಮತ್ತು ದೈವ (ಗಂಡು)ದ ಸಂಬಂಧದಲ್ಲಿ ಅಲ್ಲಲ್ಲಿ ಪ್ರತಿಬಿಂಬಿತವಾಗಿದ್ದಿರಬಹುದಾದರೂ ಇದಕ್ಕಿಂತಲೂ ಭಿನ್ನವಾದ ಅಥವಾ ಇದಕ್ಕೆ ವಿರುದ್ಧ ಎನ್ನಬಹುದಾದ ಒಂದು ಮನೋಭಾವ ಅಥವಾ ಅಭಿಲಾಷೆ ನನಗೆ ಮಧುರ ಭಕ್ತಿಯ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣಿಸಿದೆ.
ಸ್ತ್ರೀ ಮತ್ತು ಪುರುಷ ದೇಹಗಳಲ್ಲಿ ಇರುವ ಕೆಲವು ಮೂಲಭೂತ ವ್ಯತ್ಯಾಸಗಳಿಂದಾಗಿ ಇವರಿಬ್ಬರ ಲೈಂಗಿಕ ಶಕ್ತಿ ಸಾಮರ್ಥ್ಯದಲ್ಲೂ ಕೆಲವು ವ್ಯತ್ಯಾಸಗಳುಂಟು. ಹಾಗೆ ನೋಡಿದರೆ ರತಿಯನ್ನು ಹೊಂದುವ ಇಚ್ಛೆಯನ್ನು ವ್ಯಕ್ತಪಡಿಸುವುದರಲ್ಲಿ ಪುರುಷನು ತೋರುವ ಉತ್ಸಾಹವು ಹೆಚ್ಚು ಎನ್ನುವ ಹಾಗೆ ಮೇಲ್ನೋಟಕ್ಕೆ ಕಂಡುಬಂದರೂ ಕಾಲ, ದೇಶ ಮತ್ತು ಅಲ್ಲಲ್ಲಿನ ಸಾಮಾಜಿಕ ವಿಧಿ ನಿಷೇಧಗಳ ಪ್ರಭಾವದಿಂದ ಮಾತ್ರ ಕಾಣಿಸುವ ಪರಿಸ್ಥಿತಿ ಇದು ಎಂಬುದು ಆ ಪರಿಸರ ಪರಿಸ್ಥಿತಿಗಳ ವ್ಯತ್ಯಾಸ ಮಾತ್ರದಿಂದ ಕಾಣಿಸುವ ಬದಲಾವಣೆಗಳಿಂದ ಸುಲಭವಾಗಿ ತಿಳಿಯುತ್ತದೆ. ಆದರೆ, ಮೈಮನಸ್ಸುಗಳೆರಡೂ ಒಂದಾಗಿ ನಡೆಯುವ ಲೈಂಗಿಕ ಕ್ರಿಯೆಯಲ್ಲಿ ಅತಿ ಮುಖ್ಯವಾದ ಮುನ್ನಲಿವಿನ ಅವಧಿಯಲ್ಲಿ ಹೆಚ್ಚು ಹೊತ್ತು ನಿಲ್ಲಬಲ್ಲ, ಒಂದೇ ಮಿಲನದಲ್ಲಿ ಹಲವು ಬಾರಿ ಸ್ಖಲಿಸಬಲ್ಲ, ಸ್ಖಲನದ ಪರಾಕಾಷ್ಟೆಯನ್ನು ತಲುಪಿದ ನಂತರ ರತಿಯ ಈ ತುರೀಯಾವಸ್ಥೆಯಲ್ಲಿ ಹೆಚ್ಚು ಹೊತ್ತು ಉಳಿಯಬಲ್ಲ ಮತ್ತು ಹಾಗೆ ತುದಿ ಮುಟ್ಟಿ ಮರಳಿದ ನಂತರವೂ ಇನ್ನೊಮ್ಮೆ ಕ್ರೀಡಿಸಲು ಮತ್ತೆ ಮರುಕ್ಷಣವೇ ಅನುವಾಗಬಲ್ಲ ದೈಹಿಕ ಸಾಮರ್ಥ್ಯ ಹೆಣ್ಣು ದೇಹದ್ದು ಮಾತ್ರ.
ಈ ವಿಷಯದಲ್ಲಿ ಪ್ರಕೃತಿಯು ಸ್ತ್ರೀ ಪಕ್ಷಪಾತಿ. ಎಷ್ಟು ಪಕ್ಷಪಾತಿ ಎಂದರೆ, ಪ್ರಕೃತಿಯು ಸ್ತ್ರೀ ದೇಹದಲ್ಲಿ ಕೇವಲ ಲೈಂಗಿಕ ತೃಪ್ತಿಗಷ್ಟೇ ಮೀಸಲಿರುವ ಭಗಾಂಕುರವೆಂಬ ಅದ್ಭುತವನ್ನು ನಿರ್ಮಿಸಿಕೊಟ್ಟಿದೆ. ಪುರುಷ ಲೈಂಗಿಕಾಂಗವೂ ಜೊತೆಗೇ ಜನನಾಂಗವೂ ಆದ ಶಿಶ°ಕ್ಕೆ ಸಂವಾದಿಯಾಗಿಯೇ ಸ್ತ್ರೀ ಜನನಾಂಗವಾದ ಯೋನಿಯಿದೆ ಎಂಬ ಕಲ್ಪಿತ ಸಿದ್ಧಾಂತದಲ್ಲೇ ಕಾಮಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲೆತ್ನಿಸಿದ ಪ್ರಯತ್ನಗಳೆಲ್ಲ ಇದರಿಂದಾಗಿಯೇ ಸೋತು ಸುಮ್ಮನಾಗಿವೆ ಅಥವಾ ಅರ್ಧ ಸತ್ಯವನ್ನಷ್ಟೇ ಹೇಳಿವೆ. ಅಷ್ಟೇ ಅಲ್ಲ , ಗಂಡು ದೇಹಕ್ಕಾದರೆ ಸಂತಾನೋತ್ಪತ್ತಿ ಸಾಮರ್ಥ್ಯವು ಕ್ಷೀಣವಾಗುತ್ತಿದ್ದಂತೆಯೇ ಕ್ರೀಡಿಸುವ ಸಾಮರ್ಥ್ಯವೂ ಕ್ಷೀಣಿಸುವುದು. ಆದರೆ ಭಗಾಂಕುರಕ್ಕಾದರೋ ಲೈಂಗಿಕ ಅಪೇಕ್ಷೆಯೊಂದು ಮನದಲ್ಲಿ ಇದ್ದರಾಯಿತು. ಆರೋಗ್ಯವಂತ ಹೆಣ್ಣು ದೇಹಕ್ಕೆ ಈ ವಿಷಯದಲ್ಲಿ ಮುಪ್ಪಿನ ಹಂಗೂ ಅಷ್ಟಾಗಿ ಕಾಡಲಾರದು.
ಆಧುನಿಕ ಜೀವವಿಜ್ಞಾನದ ತಿಳಿವಿನಿಂದ ಈ ಕಾಲಕ್ಕೆ ತಿಳಿದುಬಂದಿರುವ ಹೆಣ್ಣುದೇಹದ ಈ ಸಾಧ್ಯತೆಗಳೆಲ್ಲ, ಎಲ್ಲಾ
ಕಾಲದಲ್ಲಿಯೂ ಅನುಭವದ ಮೂಲಕವೇ ತೀವ್ರ ಕುತೂಹಲಿಗಳಾದ ಗಂಡು-ಹೆಣ್ಣುಗಳಿಗೆ ತಿಳಿದಿದ್ದಿರಲೇಬೇಕು. ದೈಹಿಕವಾಗಿ ಹೆಚ್ಚು ಬಲಶಾಲಿಯಾದ ಗಂಡಿಗೆ ಹೆಣ್ಣಿನ ಉಳಿದ ಹಲವು ಸಾಮರ್ಥ್ಯಗಳ ಜೊತೆಗೇ ಅವಳ ಈ ಲೈಂಗಿಕ ಶಕ್ತಿಯು ತನ್ನ ಪುರುಷ ಅಹಮ್ಮಿಗೆ ಸವಾಲೆನಿಸದ ಕಾರಣಕ್ಕೆ ಸಂಚೊಂದು ರೂಪಗೊಂಡು, ಹೆಣ್ಣನ್ನು ಹತ್ತಿಕ್ಕುವ ವ್ಯವಸ್ಥೆಯೊಂದು ನಿರ್ಮಾಣಗೊಂಡು, ಈ ವ್ಯವಸ್ಥೆಯಲ್ಲಿ ಗಂಡು-ಹೆಣ್ಣುಗಳೆರಡೂ ಸಿಲುಕಿ ನರಳಬೇಕಾಗಿದ್ದು ನಮಗೆಲ್ಲರಿಗೂ ತಿಳಿದಿರುವ ದುರಂತ. ಈ ದುರಂತಕ್ಕೆ ಕಾರಣವಾದ ಕ್ರೌರ್ಯದ ಕೈ ಎಲ್ಲಿಯವರೆಗೂ ಚಾಚಿದೆಯೆಂದರೆ, ಇಂದಿಗೂ ಈ ಪ್ರಪಂಚದ ಅದೆಷ್ಟೋ ಕಡೆಗಳಲ್ಲಿ ಹೆಣ್ಣಿನ ಈ ಲೈಂಗಿಕಾಂಗವನ್ನೇ ಕತ್ತರಿಸಿ ಅಥವಾ ಊನಗೊಳಿಸಿ ಅವಳನ್ನು ಲೈಂಗಿಕ ಸುಖದಿಂದ ವಂಚಿತಳನ್ನಾಗಿಸುವ ಸ್ತ್ರೀ ಸುನ್ನತಿ ಆಚರಣೆಯಲ್ಲಿದೆ.
ಈ ಕಾರಣಕ್ಕೋ ಏನೋ ಹೆಣ್ಣು ದೇಹದ ಈ ಸಾಧ್ಯತೆಗಳು ಮತ್ತು ಕಾಮ ಕಲೆಯ ಈ ಸೂûಾ¾ತಿ ಸೂಕ್ಷ್ಮಗಳೆಲ್ಲ ಜಗತ್ತಿನ ಸೃಜನಶೀಲ ಸಾಹಿತ್ಯದಲ್ಲಿ ತಲೆಮರೆಸಿಕೊಂಡು ಕುಳಿತಿವೆ. ಭಾರತೀಯ ಧಾರ್ಮಿಕ ಕಾವ್ಯಗಳಲ್ಲೂ ಇದು ನೆಲದ ಮರೆಯ ನಿಧಾನದಂತೆ ಭಾವದ ಮರೆಯ ಬ್ರಹ್ಮವಾಗಿ ಕಂಡವರಿಗಷ್ಟೇ ಕಾಣುವಂತೆ ಅಡಗಿ ಕುಳಿತಿದೆ. ಲೈಂಗಿಕ ಅಪೇಕ್ಷೆ ಮತ್ತು ಅದನ್ನು ಹೊಂದುವಲ್ಲಿನ ವಿವಿಧ ಅವಸ್ಥೆಗಳು ಮತ್ತು ದೇಹಗಳ ಮಿಲನ ಸುಖದ ತುರೀಯಾವಸ್ಥೆಯಾದ ಸ್ಖಲನದಲ್ಲಿ ಮನೋ ದೈಹಿಕ ಇಚ್ಛೆಯೊಂದು ಹೀಗೆ ತೃಪ್ತಗೊಂಡ ಸ್ಥಿತಿಯಾಗುವುದಾದರೆ, ಜೀವವೊಂದರ ಆಧ್ಯಾತ್ಮಿಕ ಹಂಬಲಕ್ಕೆ, ಅತೀತದ ಹುಡುಕಾಟದಲ್ಲಿ ಒದಗಿ ಬರುವ ನಾನಾ ಅವಸ್ಥೆಗೆ ಮತ್ತು ಆ ಆನಂದೋಬ್ರಹ್ಮ ಸ್ಥಿತಿಯನ್ನು ಒಂದು ವೇಳೆ ತಲುಪಿದರೆ ಅಲ್ಲಿ ಆದಷ್ಟೂ ಹೊತ್ತು ನಿಲ್ಲಬೇಕೆಂದೆನಿಸುವ, ಮತ್ತೆ ಮತ್ತೆ ಅಲ್ಲಿಗೆ ಮರಳಿ ಹೋಗಬೇಕೆಂದೆನಿಸುವ ಜೀವಕ್ಕೆ ಈ ಹಂಬಲವನ್ನು ಕಾವ್ಯಾಭಿವ್ಯಕ್ತಿಗೊಳಿಸುವಾಗ, ಶಬ್ದಕ್ಕೆ ಸಿಲುಕಿಸುವಾಗ ಸ್ತ್ರೀ ಲೈಂಗಿಕ ಶಕ್ತಿ ಒಂದು ಶಕ್ತ ರೂಪಕವಾಗಿ ಯಾಕೆ ಒದಗಿರಬಾರದು? ಅಥವಾ ಇದಕ್ಕಿಂತಲೂ ಶಕ್ತವಾದ ರೂಪಕವಾದರೂ ಎಲ್ಲಿ ಸಿಗಬಹುದು? ಆದರೆ ಇದರ ಜೊತೆಗೇ ಎಚ್ಚರದಿಂದಲೇ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಹೆಣ್ಣು ಎನ್ನುವುದು ಕೇವಲ ಹೆಣ್ಣು ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲವೆಂದು ಹೇಳುತ್ತ ಹೆಣ್ಣು ಎನ್ನುವುದು ಹೆಣ್ಣಿನ ದೇಹದ ಹಾಗೆ ಅಪರಿಮಿತ ಸಾಧ್ಯತೆಗಳಿರುವ, ವಿಕಸಿತಗೊಂಡ ಸ್ಥಿತಿ ಅಥವಾ ಅವಸ್ಥೆ ಎಂದು ಸೂಚಿಸಿರುವುದು.
ಮನೋದೈಹಿಕ ಅಭಿಲಾಷೆಯೊಂದು ಆಧ್ಯಾತ್ಮಿಕ ಅಭಿಲಾಷೆಯ ರೂಪಕವಾಗಿ ಬಂದಿರುವ ವೇಳೆ ಇಲ್ಲಿ ಹೆಣ್ಣು ಎನ್ನುವುದು ದೇಹವಲ್ಲ, ಅದು ಒಂದು ಸ್ಥಿತಿ ಎನ್ನುವುದನ್ನು ನಾವು ಮರೆಯದೆಯೇ ಇರಬೇಕಾಗುತ್ತದೆ. ಹೆಣ್ಣು ದೇಹ ಇರುವವರೆಲ್ಲರೂ ಈ ವಿಕಸಿತ ಸ್ಥಿತಿಯನ್ನು ತಲುಪಬಹುದೆಂದಾಗಲಿ ಅಥವಾ ಗಂಡು ದೇಹಕ್ಕೆ ಈ ಉತ್ಕಟತೆಯನ್ನು ಅನುಭವಿಸುವ ಅನುಕೂಲವೇ ಇಲ್ಲವೆಂದಾಗಲಿ ಅಂದುಕೊಂಡುಬಿಟ್ಟಲ್ಲಿ ಮತ್ತೆ ಮೌಡ್ಯಕ್ಕೆ ಎದುರಾಗಿ ಪ್ರತಿಮೌಡ್ಯವೊಂದು ಎದುರು ಬಂದಂತೆ!ಇದಕ್ಕೆ ಸಂಬಂಧಿಸಿದ ಇನ್ನೊಂದಿಷ್ಟು ವಿಚಾರಗಳನ್ನು ಗಮನಿಸಲೇಬೇಕಿದೆ.
ಪುರುಷಪ್ರಾಬಲ್ಯವೆಂಬ ಮನೋರೋಗಕ್ಕೆ ತುತ್ತಾಗಿ ನರಳುತ್ತಿರುವ ಈ ಲೋಕವನ್ನು ಅದರಿಂದ ವಿಮುಕ್ತಗೊಳಿಸಬೇಕೆಂದರೆ ಸ್ತ್ರೀ, ಪುರುಷ ಮತ್ತು ಈ ಎರಡೂ ಲಿಂಗದ ನಡುವಿನ ಎಲ್ಲರನ್ನೂ ಸಮಾನ ದೃಷ್ಟಿ ಮತ್ತು ಧೋರಣೆಗಳಿಂದ ನೋಡುವುದು ಅತ್ಯಗತ್ಯ ಎನ್ನುವ ಮಾತನ್ನು ನಾವೆಲ್ಲರೂ ಇಂದಿಗೂ ಆಡಬೇಕಾಗಿ ಬಂದಿರುವುದೇ ಒಂದು ದೊಡ್ಡ ದುರಂತ. ಈ ದುರಂತಕ್ಕೆ ಪುರುಷ ಪಾರಮ್ಯವನ್ನು ಒಪ್ಪಿ ಆಚರಿಸುವ ಎಲ್ಲಾ ಹೆಣ್ಣುಗಂಡುಗಳೂ ಕಾರಣರಾಗುತ್ತಾರೆ. ಇದು ಗಂಡಿನ ವಿರುದ್ಧ ಸಿಡಿದೆದ್ದು ನಿಂತು ಕೇವಲ ಹೆಂಗಸರು ಮಾಡಬೇಕಾದ ಹೋರಾಟವಲ್ಲ ಎಂಬುದು ನಮಗೆ ತಿಳಿದಿರುವಾಗಲೂ ಇಂಥಲ್ಲೊಂದು ಮನೋಭೂಮಿಕೆಯಲ್ಲೇ ಇಂಥ ಹೋರಾಟವನ್ನು ಮಾಡುವವರೂ ನೋಡುವವರೂ ಬಹಳಷ್ಟು ಬಾರಿ ಸಿಕ್ಕಿಬೀಳುವುದು ದುಃಖದ ಸಂಗತಿ. ಇದಕ್ಕೆ ಕಾರಣ ನಾವು ಬಳಸುವ ಕೆಲವು ಶಬ್ದಗಳು ಎಂದು ನನಗೆ ಎಷ್ಟೋ ಬಾರಿ ಅನ್ನಿಸಿದೆ. ಮಾತು ನಮ್ಮ ಆ ಹೊತ್ತಿನ ಭಾವನೆಯನ್ನು ಆಲೋಚನೆಯನ್ನು ವ್ಯಕ್ತಪಡಿಸಲು ಇರುವ ಸಾಧನವಷ್ಟೇ ಅಲ್ಲ, ಮಾತು ನಮ್ಮ ವರ್ತನೆಯ ಒಂದು ದೊಡ್ಡ ಭಾಗ.
ನಾವು ಕೂರುವ ನಿಲ್ಲುವ ನಡೆಯುವ ಭಂಗಿಗಳೆಲ್ಲ ಪ್ರತಿನಿತ್ಯದ ಅಭ್ಯಾಸದಲ್ಲಿ ಹೇಗೆ ನಮಗೆ ಅರಿವಿಲ್ಲದೆಯೇ ನಮ್ಮ ದೇಹಭಾಷೆಯಾಗಿ ರೂಪುಗೊಳ್ಳುತ್ತದೋ ಹಾಗೆ, ನಾವು ಮತ್ತೆ ಮತ್ತೆ ಆಡುವ, ಕೇಳುವ ಮಾತು ಕೂಡ ನಮ್ಮ ಮನೋಭಾವವನ್ನು ನಮಗೇ ಗೊತ್ತಿಲ್ಲದೆ ಮಾರ್ಪಡಿಸುವ ಗುಣ ಇರುವ ಕಾರಣಕ್ಕೆ ಇಲ್ಲಿ ಆಡುವ ಮಾತು ತುಂಬಾ ಮುಖ್ಯವಾಗುತ್ತದೆ. ಹೆಣ್ಣಿನ ಕುರಿತಂತೆ ಅಷ್ಟೇ ಅಲ್ಲ, ಗಂಡಿನ ಕುರಿತಂತೆ ತೋರುವ ಅಸಮಾನತೆಗೂ ಈ ಸಂಕುಚಿತ ಮನೋಭಾವವೇ ಕಾರಣವಲ್ಲವೆ?
ಈ ಮನೋಭಾವಕ್ಕೊಂದು ಉದಾಹರಣೆಯಾಗಿ ಸದ್ಯಕ್ಕೆ ನನಗೆ ನೆನಪಾಗುತ್ತಿರುವ ಒಂದು ಪ್ರಸಂಗವೆಂದರೆ, ಯಶೋಧರೆಯನ್ನು , ಮಗು ರಾಹುಲನನ್ನೂ ಬಿಟ್ಟು ರಾತ್ರೋರಾತ್ರಿ ಎದ್ದು ಹೊರಟುಹೋದ ಬುದ್ಧನ ಈ ನಡವಳಿಕೆ ಕುರಿತಂತೆ ಇರುವ ಆಕ್ಷೇಪ. ಬುದ್ಧನ ಈ ನಡವಳಿಕೆಯನ್ನು ಖಂಡಿಸಿ, ಲೇವಡಿ ಮಾಡಿ, ಆಕ್ರೋಶ ವ್ಯಕ್ತಪಡಿಸಿ ಆಡಿದ, ಬರೆದ ಮಾತುಗಳಿಗೆ ಲೆಕ್ಕವಿಲ್ಲ. ಇಂಥ ಮಾತುಗಳನ್ನು ಸ್ತ್ರೀವಾದವೆಂದು ಯಾರಾದರೂ ಅಂದುಕೊಳ್ಳುವುದಂತೂ ಇನ್ನೂ ವಿಚಿತ್ರ. ಗಂಡ ಕೌಶಿಕನನ್ನು ಬಿಟ್ಟು ನಡೆದ ಅಕ್ಕ , ಗಂಡನನ್ನು ಬಿಟ್ಟು ಗಿರಿಧರನೊಬ್ಬನೇ ನನ್ನವನು ಎಂದು ಹೊರಟ ಮೀರಾ ಇವರ್ಯಾರಿಗೂ ಇಲ್ಲದ ಆಕ್ಷೇಪ ಬುದ್ಧನಷ್ಟೇ ಎದುರಿಸಬೇಕಾಗಿದ್ದು ಅವನು ಗಂಡು ಎಂಬ ಕಾರಣದಿಂದ ! ಹಾಗೆ ನೋಡಿದರೆ, ಇವರ್ಯಾರೂ ಕೇವಲ ತಮ್ಮ ತಮ್ಮ ಹೆಂಡತಿ, ಗಂಡನನ್ನಷ್ಟೇ ಬಿಟ್ಟು ಹೊರಟವರಲ್ಲ.
ಅನುಭಾವಕ್ಕೋ ಆತ್ಮಸಾûಾತ್ಕಾರಕ್ಕೋ ಅರಿವನ್ನು ಅರಿವ ಬಯಕೆಯಿಂದಲೋ ಅಲ್ಲಿಯವರೆಗೂ ಜೊತೆಗಿದ್ದ ಎಲ್ಲವನ್ನೂ ಬಿಟ್ಟು ಹೊರಟವರು. ಉಳಿದಲ್ಲೆಲ್ಲ ಬಂಧನವೆಂದು ಹೊರೆಯೆಂದೂ ಅನ್ನಿಸಿ ಅದನ್ನು ಬಿಟ್ಟವರು. ಬುದ್ಧನ ಅನುಭಾವವನ್ನು ಅರಿಯಲಾರದವರು ಅಕ್ಕನನ್ನು ಅರಿಯುವ ಬಗೆ ಹೇಗೆ? ಅಕ್ಕನನ್ನು ಕೇವಲ ಹೆಣ್ಣೆಂದು ನೋಡುವ ಮನಸ್ಸೇ ಬುದ್ಧನನ್ನು ಕೇವಲ ಗಂಡೆಂದು ನೋಡುವ ಕಾರಣಕ್ಕೆ ಹೀಗಾಗುತ್ತದೆ. ಲಾಗಾಯ್ತಿನಿಂದಲೂ ಹೀಗೆ ಎಲ್ಲವನ್ನೂ ಒಡೆದು ನೋಡುವ ಗುಣವೊಂದು ಮನುಷ್ಯನ ಬುದ್ಧಿಗೆ ಮಂಕು ಕವಿಸುತ್ತಲೇ ಬಂದಿದೆ. ಅದು ನಮ್ಮ ಮಾತಿಗೂ ಸುತ್ತಿಕೊಂಡು ನಮ್ಮನ್ನು ಇನ್ನಷ್ಟು ಗೊಂದಲಕ್ಕೆ ದೂಡುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಹೆಣ್ಣಿನ ಮನಸ್ಸು ಅಥವಾ ಗಂಡು ಬುದ್ಧಿ ಎಂಬ ಶಬ್ದಗಳನ್ನು ಬೇಕಾಬಿಟ್ಟಿ ಬಳಸುವಾಗ ಆಗುವ ವ್ಯತಿರಿಕ್ತ ಪರಿಣಾಮಗಳ ಕುರಿತು ನಾವು ತಿಳಿದಿರಲೇ ಬೇಕಾಗುತ್ತದೆ. ಬಚ್ಚಿಟ್ಟ ಮಾತುಗಳನ್ನು ಬಗೆದು ನೋಡುವಾಗೆಲ್ಲ ಸಿದ್ಧ ಮಾದರಿಗಳಿಗೆ ಜೋತು ಬೀಳದೆ ನಮ್ಮದೇ ದೇಹ ಮನಸ್ಸುಗಳು ಒದಗಿಸುವ ಸಂವೇದನೆಗಳನ್ನು ಈ ಸದ್ಯದ ವಿಜ್ಞಾnನದ ಬೆಳಕಿನ ಹಿನ್ನೆಲೆಯಲ್ಲಿ ಗಮನಿಸಿ ನೋಡಬೇಕಾದ ಹೊಸದೊಂದು ದೃಷ್ಟಿಯನ್ನು ನಾವೀಗ ಬೆಳೆಸಿಕೊಳ್ಳಲೇಬೇಕು ಎನಿಸುತ್ತಿದೆ.
– ಮೀರಾ ಪಿ. ಆರ್., ನ್ಯೂಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.