ಹಿಂದಿನಿಂದ ಹಿಂದಿ
Team Udayavani, Jun 9, 2019, 6:00 AM IST
ಮೊದಲಿನಿಂದಲೂ ಇಂಗ್ಲಿಶ್ ಮೋಹ, ಇನ್ನು ಹಿಂದಿಯ ಹೇರಿಕೆ. ಈ ನಡುವೆ ಕನ್ನಡ ಬದುಕುವುದು ಹೇಗೆ !
ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಅದರಲ್ಲಿ ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕೆನ್ನುವ ಅಂಶವನ್ನು ಸೇರಿಸಿದೆ. ಇದಕ್ಕೆ ದಕ್ಷಿಣದ ರಾಜ್ಯಗಳಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟು ಪರಿಷ್ಕೃತ ನೀತಿಯನ್ನು ಪ್ರಕಟಿಸಿದೆ. ಈ ಅಂಶ ಆಕಸ್ಮಾತ್ತಾಗಿ ನುಸುಳಿದೆ ಎಂಬ ಸಮಜಾಯಿಷಿಯನ್ನೂ ನೀಡಿದೆ. ಇದು ಒಪ್ಪುವ ಮಾತೆ? ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಮಹತ್ವದ ಸಂಗತಿಯಲ್ಲಿ ಹೀಗೆ ತಪ್ಪು ನುಸುಳುವುದು ಹೊಣೆಗೇಡಿತನ ಮಾತ್ರವಲ್ಲ, ವಿಶ್ವಾಸಾರ್ಹತೆಯ ಪ್ರಶ್ನೆಯೂ ಹೌದು. ಉತ್ತರದವರು ದಕ್ಷಿಣದ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನವನ್ನು ನಿರಂತರ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸಂವಿಧಾನ ಅನುಮೋದಿತ ಭಾರತೀಯ ಭಾಷೆಗಳೆಲ್ಲಕ್ಕೂ ಸಮಾನ ಸ್ಥಾನವಿದ್ದರೂ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವುದನ್ನು ರೂಢಿಗೆ ತರುತ್ತಿದ್ದಾರೆ. ಹಾಗೆ ನೋಡಿದರೆ ಕನ್ನಡವೂ ಸೇರಿದಂತೆ ಎಲ್ಲವೂ ರಾಷ್ಟ್ರಭಾಷೆಗಳೇ! ಭಾರತದಲ್ಲಿ ಕೆಲವು ರಾಜ್ಯಗಳನ್ನು ಬಿಟ್ಟರೆ ಬಹುಪಾಲು ರಾಜ್ಯಗಳಲ್ಲಿ ಹಿಂದಿ ಬಳಕೆಯಲ್ಲಿಲ್ಲವೆಂಬುದನ್ನು ನಾವು ಗಮನಿಸಬೇಕು. ಒಂದು ಕಾಲಕ್ಕೆ ಬ್ರಿಟಿಷರು ಮಾಡಿದ್ದನ್ನು ಈಗ ಹಿಂದಿಭಾಷಿಕರು ಮಾಡುತ್ತಿದ್ದಾರೆ. ಇದೊಂದು ರೀತಿ ಭಾಷಾ ದಬ್ಟಾಳಿಕೆಯೇ ಸರಿ. ಇದನ್ನು ಸಂವೇದನಾಶೀಲ ಮನಸ್ಸುಗಳು ತೀವ್ರವಾಗಿ ಪ್ರತಿಭಟಿಸಬೇಕು. ಚಳುವಳಿ ರೀತಿಯ ಆಂದೋಲನವೊಂದನ್ನು ರೂಪಿಸಬೇಕು.
ದೇಶಭಾಷೆಯ ಕುರಿತು ಕುವೆಂಪು
ಕುವೆಂಪು ಅವರು ಹೇಳುವಂತೆ…
ನಮ್ಮ ದೇಶದ ಮನಸ್ಸನ್ನು ಕುದಿಸುತ್ತಿರುವ ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆಯೂ ಒಂದು. ಪ್ರಾದೇಶಿಕ ದೃಷ್ಟಿಯಿಂದ, ಅಖೀಲ ಭಾರತೀಯ ದೃಷ್ಟಿಯಿಂದ, ಅಂತರರಾಷ್ಟ್ರೀಯ ದೃಷ್ಟಿಯಿಂದ, ಸಂಸ್ಕೃತಿಯ ದೃಷ್ಟಿಯಿಂದ, ಜ್ಞಾನಾರ್ಜನೆಯ ದೃಷ್ಟಿಯಿಂದ- ಹೀಗೆ ಹಲವು ದೃಷ್ಟಿಗಳಿಂದ ನಿರಂತರ ಚರ್ಚೆ ನಡೆಯುತ್ತಲೇ ಇದೆ. ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಇಂಗ್ಲಿಷಿಗಿರುವ ಕೃತಕ ಪ್ರಾಮುಖ್ಯವನ್ನು ಸ್ವದೇಶೀಯ ವಿದೇಶಿಯರಾದಿಯಾಗಿ ಶಿಕ್ಷಣತಜ್ಞರು, ವಿದ್ವಜ್ಜನರು, ಭಾಷಾಶಾಸ್ತ್ರಜ್ಞರು ಎಲ್ಲರೂ ಖಂಡಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧೀಜಿ ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡುಮಾಡಿದೆ, ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ, ಪ್ರತಿಭಾನ್ವಿತವಾದ ಸೃಜನಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ, ನನಗೆ ಅಧಿಕಾರವಿದ್ದರೆ ಈ ಕ್ಷಣದಿಂದಲೇ ಪರಭಾಷೆಯ ಮೂಲಕದ ಶಿಕ್ಷಣವನ್ನು ನಿಲ್ಲಿಸಿ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಆಜ್ಞೆ ಮಾಡುತ್ತಿದ್ದೆ… ಹೀಗೆ ಸರ್ವಮಾನ್ಯ ಅಭಿಪ್ರಾಯ ಪ್ರಾದೇಶಿಕ ಭಾಷೆಯ ಕಡೆಗಿದ್ದರೂ, ಈಗಲೂ ಅನ್ಯಭಾಷೆಗಳನ್ನು ನಮ್ಮ ಮಕ್ಕಳ ಮೇಲೆ ಹೇರುವ ಪ್ರಯತ್ನ ನಡೆಯುತ್ತಲೇ ಇರುವುದು ದುರಂತವ್ಯಂಗ್ಯವೇ ಸರಿ!
ಕುವೆಂಪು ಈ ಬಗ್ಗೆ ಸಾಕಷ್ಟು ವಿಸ್ತಾರವಾಗಿ ಚರ್ಚಿಸಿದ್ದಾರೆ. ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಅವರ ಖಚಿತ ಅಭಿಪ್ರಾಯ. ಅವರ ಚಿಂತನೆ ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ. ಮೊದಲಿಗೇ ಗಮನಿಸಬೇಕಾದ ಸಂಗತಿಯೆಂದರೆ ಕುವೆಂಪು ಇಂಗ್ಲಿಷನ್ನು ವಿರೋಧಿಸುವುದಿಲ್ಲ. ಹಾಗೆಯೇ ಹಿಂದಿಯನ್ನೂ. ಅಷ್ಟೇಕೆ ಯಾವ ಭಾಷೆಯನ್ನೂ ನಾವು ಯಾಕೆ ವಿರೋಧಿಸಬೇಕು? ಜ್ಞಾನ ಎಲ್ಲಿಂದ ಬಂದರೂ ಸ್ವಾಗತಾರ್ಹವೇ! ಆದರೆ ಯಾವ ಭಾಷೆಗೆ ಎಷ್ಟು ಪ್ರಾಮುಖ್ಯ ನೀಡಬೇಕೆಂಬ ಎಚ್ಚರವಿರಬೇಕು ಎಂಬುದು ಕುವೆಂಪು ಅಭಿಪ್ರಾಯ.
ಇಂಡಿಯಾಕ್ಕೆ ಇಂಗ್ಲಿಷ್ ಬಂದದ್ದು ಮುಖ್ಯವಾಗಿ ರಾಜಕೀಯ ಕಾರಣಗಳಿಂದಾಗಿ. ಮೇಲು ವರ್ಗದವರು ಇಂಗ್ಲಿಷ್ ಕಲಿತದ್ದೂ ಇದೇ ಕಾರಣದಿಂದ. ಒಂದು ಕಾಲದಲ್ಲಿ ಕೀರ್ತಿ, ಪ್ರತಿಷ್ಠೆ, ಸಂಪತ್ತು, ಏಳಿಗೆ ಇವುಗಳು ಇಂಗ್ಲಿಷ್ ಮೂಲಕ ಬರುತ್ತದೆಂದು ನಮ್ಮ ಜನ ಭಾವಿಸಿದ್ದರು. ಈಗಲೂ ನಮ್ಮ ಜನಸಮುದಾಯ ಈ ಭ್ರಮೆಯಿಂದ ಹೊರಬಂದಿಲ್ಲ. ಆದರೆ, ಈಗ ನಮ್ಮ ಪರಿಸ್ಥಿತಿ ಬದಲಾಗಿದೆ. ದೇಶಭಾಷೆಗಳ ಮೂಲಕವೇ ನಾವು ಅದನ್ನೆಲ್ಲ ಪಡೆಯಬಹುದಾಗಿದೆ. ಆದರೆ ಇದನ್ನು ನಂಬುವ ವಾತಾವರಣವನ್ನು ನಾವು ನಿರ್ಮಾಣ ಮಾಡಿಲ್ಲ, ಈಗಲೂ ಅಧೀನ ಮನೋಭಾವವೇ ನಮ್ಮನ್ನು ಆಳುತ್ತಿದೆ… ಎನ್ನುತ್ತಾರೆ ಕುವೆಂಪು.
ಈ ಹಂತದಲ್ಲಿ ಕುವೆಂಪು ನಾವೆಲ್ಲರೂ ಎದುರಾಗಬಹುದಾದ ಅನೇಕ ಪ್ರಶ್ನೆಗಳಿಗೆ ಮುಖಾಮುಖೀಯಾಗುತ್ತಾರೆ. ವಿದ್ಯಾಭ್ಯಾಸದ ಉನ್ನತ ಮಟ್ಟದಲ್ಲಿ ಬೋಧಕ ಭಾಷೆಯಾಗುವಷ್ಟು ಸಿದ್ಧವಾಗಿದೆಯೇ ನಮ್ಮ ಭಾಷೆ? ವಿಜ್ಞಾನ ವಿಷಯಗಳಲ್ಲಿ ಉಪಯೋಗಿಸುವ ಪದಗಳಿಗೆ ಸಮಾನಪದಗಳಿವೆಯೇ ಕನ್ನಡದಲ್ಲಿ? ಕನ್ನಡ ಮಾಧ್ಯಮದಲ್ಲಿ ಪಾಠ ಹೇಳುವ ಅಧ್ಯಾಪಕರಿದ್ದಾರೆಯೇ? ಸ್ನಾತಕೋತ್ತರ ವಿಶೇಷ ವ್ಯಾಸಂಗ, ಸಂಶೋಧನೆ ಇಂಗ್ಲಿಷ್ ಭಾಷೆಯಿಲ್ಲದೆ ಸಾಧ್ಯವೇ? ಉನ್ನತ ಸಂಶೋಧನೆಯ ಹಂತದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ನಡುವೆ ಪರಸ್ಪರ ಸಂಪರ್ಕಕ್ಕಾಗಿ ಇಂಗ್ಲಿಷಲ್ಲದೆ ಇನ್ನಾವ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯ? ಜ್ಞಾನ-ವಿಜ್ಞಾನ ವಿಷಯಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಇಂಗ್ಲಿಷನ್ನು ಬಿಟ್ಟರೆ ನಮಗೆ ನಷ್ಟವಲ್ಲವೇ? ಇಂತಹ ಅನೇಕ ಪ್ರಶ್ನೆಗಳ ಅರಿವು ಕುವೆಂಪು ಅವರಿಗಿದೆ. ಈ ಹಿನ್ನೆಲೆಯಲ್ಲಿಯೇ ಅವರು ತಮ್ಮ ವಾದಗಳನ್ನು ಮಂಡಿಸುತ್ತಾರೆ.
ಇಂಗ್ಲಿಷ್ ಭಾಷೆಯ ಆವಶ್ಯಕತೆಯನ್ನು ಕುವೆಂಪು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲರೂ ಇಂಗ್ಲಿಷ್ ಕಲಿಯಬೇಕು, ಎಲ್ಲರ ತಲೆಯ ಮೇಲೂ ಇಂಗ್ಲಿಷನ್ನು ಕಡ್ಡಾಯವಾಗಿ ಹೇರಬೇಕೆಂಬುದನ್ನು ಕುವೆಂಪು ವಿರೋಧಿಸುತ್ತಾರೆ. ಇದೇ ನಿಲುವು ಹಿಂದಿಗೂ ಅನ್ವಯವಾಗುತ್ತದೆ. ಇಂತಹ ನಿಲುವನ್ನು ಕುವೆಂಪು ಅವಿವೇಕದ ಪರಮಾವಧಿ ಎಂದು ಜರೆಯುತ್ತಾರೆ. ಶಿಕ್ಷಣತಜ್ಞರ, ಚಿಂತಕರ ಅಭಿಪ್ರಾಯಗಳನ್ನು ಮಾನ್ಯ ಮಾಡದೆ, ನಮ್ಮ ದೇಶದ ಪ್ರತ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತಿ ಪ್ರತಿಗಾಮಿ ಶಕ್ತಿಗಳು ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಮಾಧ್ಯಮದಿಂದ ನಮ್ಮ ಎಳೆಯ ಮಕ್ಕಳ ಜೀವ ಹರಣ ಮಾಡುತ್ತಿವೆಯೆಂದು ಕುವೆಂಪು ಆಕ್ರೋಶದ ದನಿಯಲ್ಲಿಯೇ ಪ್ರತಿಭಟಿಸುತ್ತಾರೆ.
ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ / ನಿನ್ನ ಮಕ್ಕಳ ಶಕ್ತಿ-ಬುದ್ಧಿ-ಪ್ರತಿಭಾ/ ರಾಷ್ಟ್ರನಾಯಕ ಮನದಿ ವಿವೇಕ ರೂಪದಿ ಮೂಡಿ / ಓ ರಸಮಯೀ ಸರಸತಿಯೆ, ಪೊರೆ ಬಾ/ ಕಲ್ಲ ಕುಂಡದಿ ನೆಟ್ಟ ಅಶ್ವತ್ಥ ಸಸಿಯಂತೆ / ಕಿಮುಳಿc ಗುಜ್ಜಾಗುತಿದೆ ಮೊಳೆವ ಚೈತನ್ಯ / ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ / ನಿಲುವವರಿಗೇಕೀ ದಾಸದೈನ್ಯ? ಕನ್ನಡ ಮಾಧ್ಯಮದ ಬಗ್ಗೆ ಮಾತನಾಡುವಾಗ ಕಲಾ ವಿಭಾಗದಲ್ಲಿ ಕನ್ನಡದ ಬಳಕೆ ಸಾಧ್ಯವಾಗಬಹುದು,
ಆದರೆ, ವಿಜ್ಞಾನ ಬೋಧನೆಗೆ ಮಾತ್ರ ಸಾಧ್ಯವಿಲ್ಲ ಎಂಬ ಭಾವನೆ ಕೆಲವರ ತಲೆಯಲ್ಲಿ ತುಂಬಿದೆ ಎಂದು ಹೇಳುವ ಕುವೆಂಪು ಸಾಧಾರಣವಾಗಿ ಇದನ್ನು ಅಲ್ಲಗಳೆಯುತ್ತಾರೆ. ಇಂಗ್ಲಿಷ್ ಅಥವಾ ಜರ್ಮನ್ ಅಥವಾ ರಷ್ಯನ್ ಭಾಷೆಗಳು ಏನೇನು ವೈಜ್ಞಾನಿಕ ವಿಷಯಗಳನ್ನು ಹೇಳಬಲ್ಲವೋ ಅವೆಲ್ಲವನ್ನು ಅಷ್ಟೇ ಸ್ಪಷ್ಟವಾಗಿ ಹೇಳುವ ಶಕ್ತಿ ಕನ್ನಡಕ್ಕಿದೆ ಎಂದು ಅವರು ವಿವರಿಸುತ್ತಾರೆ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಜೀವವಿಜ್ಞಾನ, ಪ್ರಾಣಿಶಾಸ್ತ್ರ, ಭೂವಿಜ್ಞಾನ, ಲೋಹವಿದ್ಯೆ, ಖಗೋಳಶಾಸ್ತ್ರ, ರೇಡಾರ್ ಮೊದಲಾದ ಅನೇಕ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ನಿದರ್ಶನವನ್ನಾಗಿ ನೀಡಿ ಆ ಪ್ರಯತ್ನವನ್ನು ನಾವು ಮುಂದುವರೆಸಬೇಕೆಂದು ಹೇಳುತ್ತಾರೆ. ವೈದ್ಯ ಮತ್ತು ಎಂಜಿನಿಯರಿಂಗ್ ವಿಷಯಗಳಿಗೆ ಸಂಬಂಧಿಸಿದ ವೃತ್ತಿ ಶಿಕ್ಷಣದಲ್ಲಿ ಬರುವ ಪಾರಿಭಾಷಿಕ ಪದಗಳನ್ನು ಭಾಷಾಂತರ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸುತ್ತ, ಪಾರಿಭಾಷಿಕ ಪದಗಳನ್ನು ಭಾಷಾಂತರ ಮಾಡುವ ಅವಿವೇಕಕ್ಕೆ ನಾವು ಹೋಗಬೇಕಾಗಿಲ್ಲ ಎಂದು ಹೇಳುತ್ತಾರೆ. ವಿಜ್ಞಾನ ವಿಷಯದ ಅನೇಕ ಪಾರಿಭಾಷಿಕ ಪದಗಳು ಮೂಲತಃ ಗ್ರೀಕ್ ಲ್ಯಾಟಿನ್‌ನಿಂದ ಬಂದಂಥವು, ಅವುಗಳನ್ನು ಮೂಲದಲ್ಲಿರುವಂತೆಯೇ ಕನ್ನಡದಲ್ಲಿ ಬಳಸಿಕೊಳ್ಳಬಹುದು. ಮ್ಯಾಗ್ನೊàಲಿಯಾ ಗ್ರಾಂಡಿಫ್ಲೋರಾ ಎಂಬುದು ಒಂದು ಹೂವಿನ ಹೆಸರು. ಕನ್ನಡದಲ್ಲಿಯೂ ಅದಕ್ಕೆ ಅದೇ ಹೆಸರಿರಲಿ ಎನ್ನುತ್ತಾರೆ ಕುವೆಂಪು. ಅಂತರರಾಷ್ಟ್ರೀಯವಾದ ಪಾರಿಭಾಷಿಕ ಶಬ್ದಗಳನ್ನು ಹಾಗೆಯೇ ಉಳಿಸಿಕೊಳ್ಳುವುದರಿಂದ ಶಿಕ್ಷಣ ಮಾಧ್ಯಮವನ್ನು ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸುವುದು ಸುಲಭವಾಗುತ್ತದೆ ಎಂಬುದು ಕುವೆಂಪು ಅವರ ಅಭಿಪ್ರಾಯ.
ಸರಳ ಕನ್ನಡದಲ್ಲಿ ಸಂಕೀರ್ಣ ವಿಷಯಗಳು
ಇಲ್ಲಿ ಒಂದು ಸಂಗತಿಯನ್ನು ನಾವು ಪ್ರಮುಖವಾಗಿ ಗಮನಿಸಬೇಕು. ಧರ್ಮದ ವಿಷಯಕ್ಕೆ ಬಂದಾಗ ನಮ್ಮಲ್ಲಿ ಅನುಭಾವ ಹಾಗೂ ಉನ್ನತಮಟ್ಟದ ಆಲೋಚನೆಯ ಅಭಿವ್ಯಕ್ತಿಗೆ ಸಂಸ್ಕೃತ, ದಿನನಿತ್ಯದ ಸರಳ ಸಾಧಾರಣ ಸಂಗತಿಗಳನ್ನು ಹೇಳುವುದಕ್ಕೆ ಕನ್ನಡ ಎಂಬ ನಂಬಿಕೆಯಿತ್ತು. ಆದರೆ, ಹನ್ನೆರಡನೆಯ ಶತಮಾನದಲ್ಲಿ ವಚನಕಾರರು ಕನ್ನಡದಲ್ಲಿಯೂ ಧಾರ್ಮಿಕ ವಿಷಯಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಬಹುದು, ಕನ್ನಡ ಭಾಷೆಗೆ ಆ ಶಕ್ತಿಯಿದೆ ಎಂದು ತೋರಿಸಿಕೊಟ್ಟರು. ದಯವೇ ಧರ್ಮದ ಮೂಲವಯ್ಯ ಎಂಬ ಮಾತುಗಳ ಮೂಲಕ ಧರ್ಮದ ಸಾರವನ್ನು ಹಿಡಿದಿಟ್ಟರು. ಬಹುಷಃ ಜಗತ್ತಿನ ಯಾವುದೇ ಭಾಷೆಯಲ್ಲಿಯೂ ಧರ್ಮದ ಸಾರವನ್ನು ಇಷ್ಟು ಸರಳವಾಗಿ, ಇಷ್ಟು ಪರಿಣಾಮಕಾರಿಯಾಗಿ ಹೇಳಿದ ನಿದರ್ಶನ ವಿರಳ. ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇಲ್ಲಿ ಉತ್ತರವಿದೆ. ಇಂಗ್ಲಿಷಿನಲ್ಲಿಯೇ ವಿಜ್ಞಾನ ವಿಷಯ ಕಲಿತವರಿಗೆ ಕನ್ನಡ ಭಾಷೆಯ ಮೇಲೆ ಪ್ರಭುತ್ವವಿಲ್ಲ. ಕನ್ನಡ ಭಾಷೆ ಸಮರ್ಥವಾಗಿ ಬಲ್ಲವರಿಗೆ ವಿಜ್ಞಾನ ವಿಷಯದಲ್ಲಿ ಪ್ರವೇಶವಿಲ್ಲ. ವಿಜ್ಞಾನ ಕಲಿತವರು ಕನ್ನಡದಲ್ಲಿ ವ್ಯವಹರಿಸಲು ಪ್ರಯತ್ನಿಸಿದರೆ ಅವರಿಗೆ ಕನ್ನಡದ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ.
ಇಲ್ಲಿ ಕುವೆಂಪು ಮತ್ತೂಂದು ಸಂಗತಿಯನ್ನು ಪ್ರಸ್ತಾಪಿಸುತ್ತಾರೆ : ಇಂಗ್ಲೆಂಡಿನಲ್ಲಿ ಲ್ಯಾಟಿನ್ ಭಾಷೆಯೇ ಪ್ರಧಾನವಾಗಿದ್ದ ಕಾಲದಲ್ಲಿ ಲ್ಯಾಟಿನ್-ಗ್ರೀಕ್ ತೆಗೆದುಕೊಳ್ಳುವವರೆಲ್ಲ ಮೇಲ್ಮಟ್ಟದ ವಿದ್ಯಾರ್ಥಿಗಳು; ಇಂಗ್ಲಿಷ್ ತೆಗೆದುಕೊಳ್ಳುವವರು ದಡ್ಡರು. ಇವನು ದಡ್ಡ ಎಂದು ನನ್ನನ್ನು ಇಂಗ್ಲಿಷಿಗೆ ಹಾಕಿ ಬಹಳ ಮೇಲ್ಮಟ್ಟದವರಿಗೆ ಲ್ಯಾಟಿನ್-ಗ್ರೀಕ್ ಕೊಡುತ್ತಿದ್ದರು ಎಂದು ಚರ್ಚಿಲ್ ತನ್ನ ಆತ್ಮಕತೆಯಲ್ಲಿ ಉಲ್ಲೇಖೀಸಿದ್ದಾರೆೆ. ನಮ್ಮ ಕನ್ನಡದ ಸಂದರ್ಭವೂ ಹಾಗೆಯೇ ಇದೆ ಎಂದು ಕುವೆಂಪು ಹೇಳುತ್ತಾರೆ. ಮೇಲ್ಮಟ್ಟದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ನೀಡಿ, ಚೆನ್ನಾಗಿ ಪಾಠ ಮಾಡುವ ಅಧ್ಯಾಪಕರನ್ನು ಆ ವಿಭಾಗಕ್ಕೆ ನಿಯಮಿಸಿ, ಸಾಮಾನ್ಯ ವಿದ್ಯಾರ್ಥಿಗಳನ್ನು, ಸಾಮಾನ್ಯ ಅಧ್ಯಾಪಕರನ್ನು ಕನ್ನಡ ಮಾಧ್ಯಮಕ್ಕೆ ತಳ್ಳುವ ಪರಿಪಾಠ ನಮ್ಮಲ್ಲಿದೆ ಎಂದು ಕುವೆಂಪು ಸೂಚಿಸುತ್ತಾರೆ. ಪರಿಣಾಮ, ಕನ್ನಡ ಮಾಧ್ಯಮದ ಫಲಿತಾಂಶ ಅಷ್ಟು ಚೆನ್ನಾಗಿಲ್ಲ ಎಂದು ಬಿಂಬಿಸುವ ಪ್ರಯತ್ನ ಇದರ ಹಿಂದಿದೆಯೇ ಎಂದು ಅವರು ಕೇಳುತ್ತಾರೆ.
ಕನ್ನಡ ನಾಡಿನಲ್ಲೇ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಲೆಗೆ ಪ್ರಾಶಸ್ತ ಸಿಗದಿದ್ದರೆ ಬೇರೆಲ್ಲಿ ಸಿಗಬೇಕು? ಇಂಗ್ಲಿಷ್ ಭಾಷೆ ತನ್ನ ಬೆಳವಣಿಗೆಗೆ ಕನ್ನಡ ನಾಡನ್ನು ಅವಲಂಬಿಸಿಲ್ಲ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅದು ಸುಪುಷ್ಟವಾಗಿ ಬೆಳೆಯುತ್ತಿದೆ. ಹಿಂದಿಯೂ ಭಾರತದ ಅನೇಕ ಭಾಗಗಳಲ್ಲಿ ಪೋಷಿತವಾಗುತ್ತಿದೆ. ಆದರೆ, ಕನ್ನಡ? ಇಲ್ಲಿಯೇ ಕನ್ನಡವನ್ನು ನಿರ್ಲಕ್ಷಿಸಿದರೆ ಅದು ಅವನತಿಯ ಹಾದಿ ಹಿಡಿಯುತ್ತದಲ್ಲವೇ ಎಂದು ಕುವೆಂಪು ಎಚ್ಚರಿಸುತ್ತಾರೆ.
ರಷ್ಯಾದಲ್ಲಿ ನೂರಾರು ಭಾಷೆಗಳಿವೆ. ಉಜ್‌ಬೆಕ್ ಸಂಸ್ಥಾನದಲ್ಲಿ ಆಡುವ ಭಾಷೆಗೆ ಲಿಪಿ ಕೂಡ ಇರಲಿಲ್ಲ. ಜನರು ಮಾತನಾಡುತ್ತಿದ್ದರಷ್ಟೆ. ಈಗ ಆ ಭಾಷೆ ಬೆಳೆದು ಒಂದು ವಿಶ್ವವಿದ್ಯಾಲಯ ಕೂಡ ಸ್ಥಾಪನೆಯಾಗಿ, ಆ ಭಾಷೆಯಲ್ಲಿ ಲಕ್ಷಾಂತರ ಗ್ರಂಥಗಳು ಸೃಷ್ಟಿಯಾಗಿ, ವೈಜ್ಞಾನಿಕ ಜ್ಞಾನವನ್ನೂ ಆ ದೇಶ ತನ್ನ ಭಾಷೆಯಲ್ಲಿಯೇ ಪಡೆಯುತ್ತಿದೆ. ಅಲ್ಲಿ ಸಾಧ್ಯವಾದದ್ದು ಇಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಇಂತಹ ನಿದರ್ಶನಗಳು ನಮಗೆ ಮಾದರಿಯಾಗಬೇಕೆಂದು ಕುವೆಂಪು ಸೂಚಿಸುತ್ತಾರೆ.
ಕುವೆಂಪು ಪ್ರಕಾರ ಎಲ್ಲರಿಗೂ ಇಂಗ್ಲಿಷಿನಲ್ಲಿ ಪ್ರಭುತ್ವ ಬೇಕಾಗಿಲ್ಲ. ನಮ್ಮಲ್ಲಿ ಬಹು ಜನರಿಗೆ ಓದಿ ವಿಷಯವನ್ನು ಗ್ರಹಿಸುವಷ್ಟು ಇಂಗ್ಲಿಷ್ ಬಂದರೆ ಸಾಕು. ಅದಕ್ಕಿಂತ ಕಡಿಮೆ ಸಂಖ್ಯೆಯ ಜನರಿಗೆ ಇಂಗ್ಲಿಷ್ ಮಾತನಾಡುವ, ಓದುವ ಜ್ಞಾನ ಬೇಕು. ಆದರೆ, ಕೆಲವರಿಗೆ ಮಾತ್ರ ಇಂಗ್ಲಿಷಿನಲ್ಲಿ ಓದುವ, ಮಾತನಾಡುವ, ಬರೆಯುವ ಜ್ಞಾನ ಬೇಕು. ಅಂಥವರಿಗೆ ಕನ್ನಡದ ಜ್ಞಾನವೂ ಇರಬೇಕು. ಅಂಥವರು ಜಗತ್ತಿನ ಜ್ಞಾನವನ್ನು ನಮಗೆ ಕನ್ನಡದಲ್ಲಿ ಕೊಡಲಿ. ನಮ್ಮ ಮಕ್ಕಳೆಲ್ಲರೂ ಇಂಗ್ಲಿಷ್ ಪಂಡಿತರಾಗುವುದು ಅಗತ್ಯವಿದೆಯೇ?
ಕನ್ನಡದಲ್ಲಿ ಷೇಕ್ಸ್‌ಪಿಯರ್‌ನ ಕೃತಿಗಳು
ಫ್ರಾನ್ಸ್ ದೇಶದಲ್ಲಿ ಶೇಕ್ಸ್‌ಪಿಯರ್ ಕೃತಿಗಳನ್ನು ಇಂಗ್ಲಿಷಿನಲ್ಲಿ ಓದಿ ಫ್ರೆಂಚ್ ಭಾಷೆಯಲ್ಲಿ ವಿವರಿಸುತ್ತಾರೆ. ಇನ್ನು ಮುಂದೆ ನಾವು ಇಂಗ್ಲಿಷ್ ಕೃತಿಗಳನ್ನು ಕನ್ನಡದಲ್ಲಿಯೇ ವಿವರಿಸಬೇಕು. ನಮ್ಮ ಮಕ್ಕಳು ಕನ್ನಡದಲ್ಲಿಯೇ ಉತ್ತರ ಬರೆಯಲು ಸಾಧ್ಯವಾಗಬೇಕು. ನಮ್ಮ ಬಹುಪಾಲು ಮಕ್ಕಳು ಇಂಗ್ಲಿಷಿನಲ್ಲಿ ಬರೆಯಲು ಹೋಗಿ ಫೇಲಾಗುತ್ತಿರುವುದನ್ನೂ ನಾವು ಗಮನಿಸಬೇಕೆಂದು ಕುವೆಂಪು ಸೂಚಿಸುತ್ತಾರೆ.
ಕುವೆಂಪು ಅವರಿಗೂ ತಮ್ಮ ಬದುಕಿನ ಆರಂಭದಲ್ಲಿ ಇಂಗ್ಲಿಷಿನ ಬಗ್ಗೆ ಮೋಹ, ಕನ್ನಡದ ಬಗ್ಗೆ ತಿರಸ್ಕಾರವಿತ್ತು. ಕಸಿನ್ಸ್ ಅವರು, “ನೀವು ಕನ್ನಡದಲ್ಲಿ ಯಾಕೆ ಬರೆಯುತ್ತಿಲ್ಲ?’ ಎಂದು ಕೇಳಿದಾಗ ಕುವೆಂಪು, “ಕನ್ನಡದಲ್ಲಿ ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ ಉದಾತ್ತ ಭಾವಗಳನ್ನು, ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ’ ಎಂದೇ ಉತ್ತರಿಸಿದ್ದರು. ಆಗ ಕಸಿನ್ಸ್ ಅವರು ಹೇಳಿದ ಮಾತುಗಳು ಕುವೆಂಪು ಅವರ ಮೇಲೆ ಗಾಢ ಪರಿಣಾಮ ಬೀರಿದವು. ಕಸಿನ್ಸ್ ಹೇಳುತ್ತಾರೆ: ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ, ಸಮರ್ಥನೊಬ್ಬನು ಬರುವ ತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲುದು. ಈಗ ನೋಡಿ, ಬಂಗಾಲಿ ಭಾಷೆಯೂ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಇತ್ತು. ರವೀಂದ್ರ ಠಾಕೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು.
ಕಸಿನ್ಸ್ ಹೇಳುವುದು ಸತ್ಯ. ಯಾವ ಭಾಷೆಯೂ ದುರ್ಬಲವಲ್ಲ, ಅದು ಸಮರ್ಥರಿಗಾಗಿ ಕಾಯುತ್ತಿರುತ್ತದೆ. ಕುವೆಂಪು ಇದನ್ನು ಅರ್ಥಮಾಡಿಕೊಂಡರು. ವಿಶ್ವಮಾನ್ಯ ಕೃತಿಗಳನ್ನು ಸೃಷ್ಟಿಸಿದರು.
ಕುವೆಂಪು ಅವರ ವಿಚಾರಗಳನ್ನು ಕನ್ನಡ ಮನಸ್ಸು, ಅದರಲ್ಲೂ ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಮ್ಮ ಜನಪ್ರತಿನಿಧಿಗಳು ಅರ್ಥಮಾಡಿಕೊಂಡು ಅದಕ್ಕಾಗಿ ಹೋರಾಡುತ್ತಾರೆಯೇ? ಅನ್ಯ ದಬ್ಟಾಳಿಕೆಯಿಂದ ಕನ್ನಡವನ್ನು ಪಾರು ಮಾಡುತ್ತಾರೆಯೇ? ವಿವಿಧ ಕ್ಷೇತ್ರದ ಪರಿಣತರು ಈ ದಿಕ್ಕಿನಲ್ಲಿ ಆಲೋಚಿಸಿ ಕನ್ನಡವನ್ನು ಬೆಳೆಸುತ್ತಾರೆಯೇ? ನಮ್ಮ ಸಾಂಸ್ಕೃತಿಕ ವಲಯ ಈ ವಿಚಾರದಲ್ಲಿ ಜಾಗೃತಿಯನ್ನುಂಟು ಮಾಡಲು ಶ್ರಮಿಸುತ್ತದೆಯೇ?
ನರಹಳ್ಳಿ ಬಾಲಸುಬ್ರಹ್ಮಣ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.