Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ
Team Udayavani, Sep 1, 2024, 11:58 AM IST
ಧಾರವಾಡದ ಪಂಚರತ್ನಗಳಾದ ರಾಜಗುರು, ಮನ್ಸೂರ್, ಭೀಮಸೇನ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ನಂತರದ ದಿನಗಳಲ್ಲಿ ಜಗತ್ತಿಗೆ ಪರಿಚಯವಾದ ಅಪ್ಪಟ ಪ್ರತಿಭೆ ಪಂಡಿತ ವಿನಾಯಕ ತೊರವಿ. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರಿಗೆ ಈಗ 75 ನೇ ವರ್ಷದ ಸಡಗರ…
ಕೀರ್ತನಕಾರರ ಕುಟುಂಬದಲ್ಲಿ 1948 ಸೆಪ್ಟೆಂಬರ್ 4ರಂದು ಜನಿಸಿದ ಪಂಡಿತ್ ವಿನಾಯಕ ರಾವ್ ತೊರವಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರು. ತಂದೆ ಮಲ್ಹಾರ ರಾವ್ ಕೀರ್ತನೆಗಳಿಗೆ ತೆರಳುತ್ತಿದ್ದ ಸಮಯದಲ್ಲಿ ಇವರಿಗೆ ಸಂಗೀತದ ಸೆಳೆತ ಪ್ರಾರಂಭವಾಯಿತು. ತಮ್ಮ 9ನೇ ವಯಸ್ಸಿನಲ್ಲಿ ತಮ್ಮಣ್ಣ ಗುರವ್ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿದರು. ನಂತರ ನಾರಾಯಣಾ ಚಾರ್ಯ ದಂಡಾಪುರ ಅವರಲ್ಲಿ ಕಲಿತರು. ತದನಂತರ ಪಂಡಿತ್ ಗುರುರಾವ್ ದೇಶಪಾಂಡೆ ಅವರಲ್ಲಿ ಶಿಷ್ಯತ್ವ ಮತ್ತು ದೀರ್ಘ ಒಡನಾಟ ದೊರೆಯಿತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಗೀತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈ ಸಂದರ್ಭದಲ್ಲೇ ದಿಗ್ಗಜ ಸಂಗೀತಗಾರರಾದ ಪಂಡಿತ್ ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಅವರ, ನಂತರದ ದಿನಗಳಲ್ಲಿ ಪಂಡಿತ್ ಭೀಮಸೇನ ಜೋಶಿ ಅವರ ಮಾರ್ಗದರ್ಶನ ಪಡೆದರು. 1976ರಲ್ಲಿ ಆಕಾಶವಾಣಿಯ ಅನುಮೋದಿತ ಕಲಾವಿದರಾದರು. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡತೊಡಗಿದರು. ಇದು ಅವರ ಸಂಗೀತದ ಬದುಕಿನ ಹಾದಿ.
ಬ್ಯಾಂಕ್ ಕೆಲಸ ಮತ್ತು ಸಂಗೀತ:
ಸಂಗೀತದಲ್ಲಿ ಸಾಧನೆ ಮಾಡುತ್ತಾ ದಿಗ್ಗಜರ ಒಡನಾಟ ಇದ್ದ ತೊರವಿಯವರು ಕೆನರಾ ಬ್ಯಾಂಕಿನಲ್ಲಿ ಸೇವೆಗೆ ನಿಯುಕ್ತಿಗೊಂಡರು. ಪ್ರತಿದಿನ ಬ್ಯಾಂಕ್ ಕೆಲಸದ ನಂತರ ಮನೆಗೆ ಬಂದು ಮೂರರಿಂದ ನಾಲ್ಕು ತಾಸುಗಳ ಕಾಲ ಅಭ್ಯಾಸದಲ್ಲಿ ತೊಡಗುತ್ತಿದ್ದರು. ಜತೆಗೆ ಶಿಷ್ಯರಿಗೂ ಪಾಠವಾಗುತ್ತಿತ್ತು. ವಾರದ ಕೊನೆಯಲ್ಲಿ ಕಾರ್ಯಕ್ರಮಗಳಿಗೆ ತೆರಳಬೇಕಾಗುತ್ತಿತ್ತು. ಪುನಃ ಸೋಮವಾರದಿಂದ ಬ್ಯಾಂಕ್ ವೃತ್ತಿ! ಹೀಗಿತ್ತು ಅವರ ವೃತ್ತಿ-ಬದುಕು.
ಅವರೇ ಹೇಳುವಂತೆ- “ಬ್ಯಾಂಕ್‌ಗೆ ಬರುವ ಹೆಚ್ಚಿನವರಿಗೆ ನನ್ನ ವೈಯಕ್ತಿಕ ಸಾಧನೆ ಗೊತ್ತಿರಲಿಲ್ಲ. ಜನರಿಗೆ ವ್ಯಾವಹಾರಿಕವಾಗಿ ನಾನೊಬ್ಬ ಬ್ಯಾಂಕ್ ನೌಕರ. ಅವರ ವ್ಯವಹಾರಕ್ಕೆ ನನ್ನ ಸೇವೆ ಬೇಕು, ಅಷ್ಟೆ. ವೃತ್ತಿಯ ಕೊನೆಯ ದಿನಗಳಲ್ಲಿ ಕೆಲವರು ಗುರುತಿಸಿ, ಮಾತನಾಡಿಸಿ, ಹರಸಿದ್ದು ಇದೆ. ಆದರೆ ಶಾಸ್ತ್ರೀಯ ಸಂಗೀತ ಕಲಾವಿದರು ಬೇರೆ ಕಲಾವಿದರಂತೆ ಜನಪ್ರಿಯರಲ್ಲ. ಶಾಸ್ತ್ರೀಯ ಸಂಗೀತ ಕೇಳುವ ವರ್ಗವೇ ಬೇರೆ. ಹಾಗಾಗಿ ವೃತ್ತಿ ಅದರ ಜಾಗದಲ್ಲಿ. ನನ್ನ ಸಂಗೀತ ಸಾಧನೆ ಅದರ ಹಾದಿಯಲ್ಲಿ…’
ಹೃದಯವಂತ ಕಲಾವಿದ :
ನೇರ, ನಿಷ್ಠುರ ಹಾಗೂ ಹೃದಯವಂತ ಕಲಾವಿದರೆಂದೇ ಹೆಸರಾದ ತೊರವಿಯವರು, ಗುರು ಶಿಷ್ಯ ಪರಂಪರೆಯ ಜ್ವಲಂತ ಉದಾಹರಣೆ ಮತ್ತು ಅದನ್ನು ಮುಂದುವರೆಸಿದ ಹಿರಿ ಜೀವ. ಒಬ್ಬ ಗವಾಯಿಯಾಗಿ ಮುಂದಿನ ಪೀಳಿಗೆಗೆ ಸಂಗೀತದ ಮಹತ್ವದ ಮೈಲುಗಲ್ಲಾಗಿ ಅವರನ್ನು ನಿಸ್ಸಂಶಯವಾಗಿ ಹೆಸರಿಸಬಹುದು. ಗ್ವಾಲಿಯರ್ ಕಿರಾಣಾ ಘರಾಣೆಯ ಹೆಚ್ಚು ಅಂಶಗಳು ಅವರ ಗಾಯನದಲ್ಲಿ ವ್ಯಕ್ತವಾಗುತ್ತವೆ. ಚುರುಕಾದ ಕಟಕ, ಮುರ್ಕಿಗಳು, ಲಯಕಾರಿ ಅಂಶಗಳು, ಅತ್ಯಂತ ಗಂಭೀರ ಪ್ರಕೃತಿಯ ರಾಗಧಾರಿ ಗಾಯನ, ಸ್ವಲ್ಪವೂ ಚಂಚಲ ಎನಿಸದ ತನ್ಮಯತೆಯ ಪ್ರಸ್ತುತಿ ಅವರ ಗಾಯನದ ಮುಖ್ಯ ಲಕ್ಷಣಗಳು. ಮಾಲಕೌಂಸ, ದರ್ಬಾರಿ, ತೋಡಿ, ಶುದ್ಧ ಸಾರಂಗ, ಯಮನ್ ಮುಂತಾದವು ಅವರ ತುಂಬು ಕಂಠದಲ್ಲಿ ಪದೇ ಪದೇ ಕೇಳಬೇಕೆನಿಸುವ ರಾಗಗಳು.
ಅದೊಮ್ಮೆ ಅಮೆರಿಕದಲ್ಲಿ ಇವರ ಕಾರ್ಯಕ್ರಮ ಆರಂಭವಾಗುವ ಸಮಯಕ್ಕೆ, ತಬಲಾ ವಾದಕರು ಅಲಭ್ಯ ಎಂದು ಗೊತ್ತಾಯಿತು. ತೊರವಿಯವರು ಧೃತಿಗೆಡಲಿಲ್ಲ. ಪ್ರಾಥಮಿಕ ಹಂತದಲ್ಲಿ ಇದ್ದ ಆದರೆ ಅಷ್ಟೇ ಬಲವಾಗಿ ಸಂಗೀತ ಪ್ರೀತಿಸುವ ಹವ್ಯಾಸಿ ತಬಲಾ ವಾದಕರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಮೂರು ತಾಸಿನ ಕಾರ್ಯಕ್ರಮ ನೀಡಿ ಯಶ ಕಂಡರು! ಸಂಕಷ್ಟದ ಸಂದರ್ಭದಲ್ಲೂ ಅವರು ತೋರಿಸಿದ ತಾಳ್ಮೆ, ಸಂಯಮ ಶ್ಲಾಘನೀಯ.
ಕಲಾವಿದರ ರೋಲ್ ಮಾಡೆಲ್ :
ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತ ಬೆಳೆಸುವಲ್ಲಿ ತೊರವಿಯವರ ಕೊಡುಗೆ ದೊಡ್ಡದು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಾರೆ. 1983ರಿಂದ ಗುರುಗಳಾದ ಗುರುರಾವ್ ದೇಶಪಾಂಡೆಯವರ ಸವಿನೆನಪಿನಲ್ಲಿ ಸಂಸ್ಥೆ ಸ್ಥಾಪನೆ ಮತ್ತು ನಿರಂತರ ಸಂಗೀತ ಕಾರ್ಯಕ್ರಮಗಳ ಆಯೋಜನೆ. ಅಹೋ ರಾತ್ರಿ ಸಂಗೀತ ಕಾರ್ಯಕ್ರಮಗಳು. ಅನೇಕ ಕಲಾವಿದರು ಬೆಂಗಳೂರಿಗೆ ಬರುವಂತಹ ವಾತಾವರಣ ಈ ವೇದಿಕೆಯಿಂದ ಇಂದಿಗೂ ಮುಂದುವರೆದಿದೆ. ಇಂದಿಗೂ ತಮ್ಮ ಶಿಷ್ಯರೊಂದಿಗೆ ಹರಿಕಥೆ, ಕೀರ್ತನೆಗಳನ್ನು ಹಬ್ಬದ ದಿನಗಳಲ್ಲಿ ಮಾಡುತ್ತಲೇ ಬಂದಿದ್ದಾರೆ. ನೂರಾರು ಶಿಷ್ಯರನ್ನು ಬೆಳೆಸಿದ್ದಾರೆ. ಅವರ ತುಂಬು ಸಂಗೀತ ಜೀವನ ಎಲ್ಲರಿಗೆ ಮಾದರಿ. ಸಮಯವನ್ನು ಸಮರ್ಪಕವಾಗಿ ಬಳಸಿ ಕೊಂಡು ಮಾದರಿಯಾಗಿ ಬೆಳೆದ ಪಂಡಿತ್ ವಿನಾಯಕ ತೊರವಿಯವರಿಗೆ 75ರ ಸಂಭ್ರಮದ ಶುಭಾಶಯಗಳು.
“ಒನ್ಸ್ ಮೋರ್’ ಅನ್ನಬ್ಯಾಡರಿ…
ಪುಣೆಯ ಸವಾಯಿ ಗಂಧರ್ವ ಹಾಲಿನೊಳಗ ಪಂ. ಭೀಮಸೇನ್ ಜೋಶಿ ಅವರು ನನ್ನ ಹಾಡು ಇಟ್ಟಿದ್ರು. ಬರೋಬ್ಬರಿ 15 ಸಾವಿರ ಪ್ರೇಕ್ಷಕರಿದ್ದರು. ನಾನು ಹಾಡಿದೆ. ಆಮ್ಯಾಲೆ “ಒನ್ಸ್ ಮೋರ್’ ಅಂತ ಪ್ರೇಕ್ಷಕರು ಒದರ್ಲಿಕತ್ರು. ಆಗ ನನಗ ರೋಮಾಂಚನ ಆತು. ಕೂಡಲೇ ಭೀಮಸೇನ್ ಜೋಶಿ ಅವರು ಸ್ಟೇಜ್ ಮ್ಯಾಲೆ ಬಂದು, “ನನ್ನ ಶಿಷ್ಯ, ಭಾಳ ಛೊಲೊ ಹಾಡ್ಯಾನ. ನೀವು ಮೆಚ್ಚಿಕೊಂಡಿರಿ. ನನಗೂ ಆನಂದ ಆತು. ನೀವು ಒನ್ಸ್ ಮೋರ್ ಅನ್ನಬ್ಯಾಡರಿ. ಯಾಕಂದ್ರ ನೀವು ಟೈಮ್ ಅವಂಗ ಮುಕ್ಕಾಲು ಗಂಟೆ ಕೊಟ್ಟಿರಿ, ಅದರ ತಕ್ಕಂಗ ಹಾಡ್ಯಾನ ಅವ. ಅವನ ಹಾಡು ನಿಮಗ ಸೇರಿದ್ರ, ನೀವು ಕರಸ್ರಿ. ಕಾರ್ಯಕ್ರಮ ಇಡ್ರಿ.’ ಭೀಮಸೇನ್ ಜೋಶಿ ಅವರು ಹೇಳಿದ್ದ ಆ ಮಾತು ಇನ್ನೂ ನೆನಪದ.
ಈ ಕ್ಷಣ ಅನಿಸುವುದು…
75 ವರ್ಷ ತುಂಬ್ತು. ಒಂದು ರೀತಿ ಮಿಶ್ರ ಅನುಭವದೊಳಗ ಇದ್ದೇನಿ. 30 ವರ್ಷದ ಸಂಗೀತ ಪಯಣ ನನ್ನದು. ಇಷ್ಟು ವರ್ಷ ಆತು, ಈಗ ಸಂಗೀತ ತಿಳಿಲಿಕತ್ತದ. ಇನ್ನೂ ಹೆಚ್ಚು ಅಭ್ಯಾಸ ಮಾಡಬೇಕು ಅನ್ನೋ ಭಾವ ಒಂದು ಕಡೆ ಆದರ, ಇಷ್ಟು ವರ್ಷದೊಳಗ ನನ್ನ ಸಾಧನೆ, ಸಿಕ್ಕ ಪ್ರೀತಿಯಿಂದ ಆನಂದ ಆಗೇದ. ಇದು ಪುಣ್ಯದ ಫಲ. ಹೆತ್ತವರು, ಗುರುಗಳಾದ ಪಂ. ಗುರುರಾವ್ ದೇಶಪಾಂಡೆ, ಪಂ. ಭೀಮಸೇನ್ ಜೋಶಿ ಅವರ ಆಶೀರ್ವಾದ, ಸಂಗೀತ ಪ್ರೇಮಿಗಳ ಪ್ರೋತ್ಸಾಹ ಮತ್ತ ನನ್ನ ಶಿಷ್ಯರು ತೋರಿಸುವ ಪ್ರೀತಿ. ಇದಕ್ಕೆಲ್ಲ ನಾನು ಭಾಳ ಕೃತಜ್ಞ.
-ನರಸಿಂಹ ಜೋಶಿ,ಹಿಂದೂಸ್ತಾನಿ ಗಾಯಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.