ಸೊಂಟದ ವಿಷ್ಯ..!? ಸೊಂಟ ಕೈಕೊಟ್ರೆ ಸಮಸ್ಯೆ ಗ್ಯಾರಂಟಿ!
Team Udayavani, Aug 18, 2024, 6:27 PM IST
ಬಹುತೇಕ ಹೆಣ್ಣುಮಕ್ಕಳಿಗೆ ಉಡದಾರದ ಉದ್ದಳತೆ ಹೆಚ್ಚಾಗುತ್ತದೆಯೇ ಹೊರತು, ಸೊಂಟದ ಅಳತೆ ಕಡಿಮೆಯಾಗುವ ಸಂಭವ ಕಡಿಮೆ. ಹಾಗಾಗಿ ಸೊಂಟಕ್ಕೆ ಹಾಕುವ ಡಾಬು ಮಾಡಿಸಬೇಕು ಎಂದಿದ್ದರೆ, ಮದುವೆಯಾದ ಹೊಸದರಲ್ಲಿಯೇ ಮಾಡಿಸಿಕೊಟ್ಟರೆ ಆ ಪತಿರಾಯನನ್ನು ಜಾಣ ಎನ್ನಬಹುದು. ಲೇಟಾದಷ್ಟು ಬಂಗಾರದ ಬೆಲೆ, ಸೊಂಟದ ಸುತ್ತಳತೆ ಎರಡೂ ಲೆಕ್ಕ ತಪ್ಪುವಷ್ಟು ಹೆಚ್ಚಾಗುವುದರಿಂದ, ಪಾಪರ್ ಚೀಟಿ ಗ್ಯಾರಂಟಿ…
ನಮ್ಮ ದೇಹದಲ್ಲಿರುವ ಮುಂಡದ ಭಾಗದಲ್ಲಿರುವ ಅತಿ ಕಿರಿದಾದ ಅಂಗ ಸೊಂಟ ಎಂದು ಗೂಗಲ್‌ನಲ್ಲಿ ಬರೆದುದ್ದನ್ನು ಓದಿ, ಗ್ರಹಗಳೆಲ್ಲಾ ತಲೆಯ ಸುತ್ತ ತಿರುಗಿದಂತೆ ಭಾಸವಾಯಿತು. ಗೂಗಲ್‌ನಲ್ಲಿ ದಾಖಲಿಸಿರುವವರು ಹೆಣ್ಣು ದೇವತೆಗಳ, ಸಿನೆಮಾ ನಟಿಯರ ಅಥವಾ ಹದಿಹರೆಯದ ಹುಡುಗಿಯರ ಸೊಂಟವನ್ನೋ ನೋಡಿ ತಪ್ಪಾಗಿ ಗ್ರಹಿಸಿ ದಾಖಲಿಸಿರಬಹುದು ಎನ್ನುವುದು ನನ್ನ ಗುಮಾನಿ. ಈ ಸಿಂಹಕಟಿ ಎನ್ನುವ ಪದದಿಂದಲೇ ಗೊತ್ತಾಗುತ್ತದೆ; ಗಂಡು ಸಿಂಹದ ಕಟಿಯನ್ನೇ ಉದಾಹರಣೆ ಕೊಡುತ್ತಾರೆಯೇ ಹೊರತು ಹೆಣ್ಣು ಸಿಂಹಿಣಿಯ ಕಟಿಯನ್ನಲ್ಲ ಎಂದು. ಹಾಗೆಯೇ ಸೊಂಟದ ಒಂದು ಪಕ್ಕ ವಾಲಿದರೆ, ನೆರಿಗೆ ಬೀಳುವ ಕಡೆಗೆ ಸುತ್ತಳತೆಯನ್ನು ಅಳೆಯಬಹುದಂತೆ. ವಾಲುವುದಕ್ಕೆ ಮೊದಲೇ ಆಗುವುದಿಲ್ಲ! ವಾಲಿದರೂ ಎರಡ್ಮೂರು ಟೈರುಗಳು ಹೊಟ್ಟೆಯ ಸಮೇತ ಹೊರಬರುವುದೇ ಹೊರತು, ಒಳಗೆ ಸರಿದು ಎರಡ್ಮೂರು ನೆರಿಗೆಯಾಗಿ, ಸೊಂಟದ ಕರ್ವ್ ಯಾವ ನೆರಿಗೆಯ ಲೆಕ್ಕದ ಅಳತೆ ಎನ್ನುವ ಗೊಂದಲ ಮೂಡುತ್ತದೆ.
ತೆಳ್ಳಗಿನ ಸುಂದರಿಯರು ಎಲ್ಲಿದ್ದಾರೆ?
ಅದ್ಯಾರ ಸೊಂಟ ಅಷ್ಟು ಸಣ್ಣದಾಗಿ ಇರುತ್ತದೆ ಹೇಳಿ. 36-28-36 ಹೀಗೆ ಜಿಗ್‌ಜಾಗ್ ಅಳತೆ ಇರುವವರನ್ನು ನೋಡಿರುವುದೇ ಕಡಿಮೆ. ಏನೋ ಮಾಡೆಲಿಂಗ್ ಮಾಡುವವರು ಊಟ, ತಿಂಡಿ, ಡಯೆಟ್ಟು ಅಂತ ಮೂಳೆ ಚಕ್ಕಳದಂತಿದ್ದಾಗ, ಈ ಲೆಕ್ಕ ಸಿಗಬಹುದೇನೋ. ಬಹುತೇಕರು ಏನಿದ್ದರೂ 36-40-44 ಹೀಗೆ ಆರೋಹಣ ಲೆಕ್ಕದಲ್ಲಿಯೇ ಹೆಚ್ಚಾಗಿ ಕಂಡುಬರುತ್ತಾರೆ ಅಥವಾ ಮೇಲಿನಿಂದ ಕೆಳಕ್ಕೆ ಸಿಂಟೆಕ್ಸ್ ಟ್ಯಾಂಕ್ ರೀತಿಯಲ್ಲಿ ಒಂದೇ ಸಮಾನವಾಗಿರುತ್ತಾರೆ. ಅದ್ಯಾರೋ ನಟಿ 16 ವರ್ಷದಿಂದ ಸೊಂಟಕ್ಕೆ ಚೈನ್ ಕಟ್ಟಿಕೊಂಡಿದ್ದನ್ನು ಬದಲಿಸಿಯೇ ಇಲ್ಲವಂತೆ. ಅದರ ಅಳತೆಗಿಂತ ಸೊಂಟ ಹೆಚ್ಚಾಗಬಾರದೆಂಬ ಎಚ್ಚರಿಕೆಯಲ್ಲಿಯೇ ಇರುತ್ತಾಳಂತೆ. ಬಹುತೇಕ ಹೆಣ್ಣುಮಕ್ಕಳಿಗೆ ಉಡದಾರದ ಉದ್ದಳತೆ ಹೆಚ್ಚಾಗುತ್ತಿತ್ತೇ ಹೊರತು, ಸೊಂಟದ ಅಳತೆ ಕಡಿಮೆಯಾಗುವ ಸಂಭವ ಕಡಿಮೆ. ಹಾಗಾಗಿ ಸೊಂಟಕ್ಕೆ ಹಾಕುವ ಡಾಬು ಏನಾದರೂ ಮಾಡಿಸಬೇಕು ಎಂದಿದ್ದರೆ, ಮದುವೆಯಾದ ಹೊಸದರಲ್ಲಿಯೇ ಮಾಡಿಸಿಕೊಟ್ಟರೆ ಆ ಪತಿರಾಯನನ್ನು ಜಾಣ ಎನ್ನಬಹುದು. ಲೇಟಾದಷ್ಟು ಬಂಗಾರದ ಬೆಲೆ, ಸೊಂಟದ ಸುತ್ತಳತೆ ಎರಡೂ ಲೆಕ್ಕ ತಪ್ಪುವಷ್ಟು ಹೆಚ್ಚಾಗುವುದರಿಂದ, ಪಾಪರ್ ಚೀಟಿ ಗ್ಯಾರಂಟಿ. ಆಗ ಸೊಂಟದ ಸೈಡಿಗೆ ಹಾಕುವ ಚೈನೋ ಅಥವಾ ಬೆಳ್ಳಿಯ ಕೀಚೈನೋ ಕೊಡಿಸಿ ಸಮಾಧಾನಪಡಿಸಬಹುದು.
ಬಳುಕು ಸೊಂಟ ವರ್ಸಸ್ ಉಳುಕು ಸೊಂಟ!
ಹೆಣ್ಣುಮಕ್ಕಳ ಸೊಂಟ ಹೀಗೆ ವಿಶಾಲವಾಗಿ ಆಲದ ಮರದ ರೀತಿ ಬೆಳೆಯಲು ಕಾರಣವೂ ಇಲ್ಲದಿಲ್ಲ. ಈಗೆಲ್ಲಾ ನಲ್ಲಿ ತಿರುವಿದರೆ ನೀರು ಬರುತ್ತದೆ. ಹಿಂದಿನ ಕಾಲದವರ ಹಾಗೆ ಎಷ್ಟೋ ದೂರ ನಡೆದುಕೊಂಡು ಹೋಗಿ, ಕೊಡವನ್ನು ಬಲ ಸೊಂಟದಿಂದ ಎಡ ಸೊಂಟಕ್ಕೆ, ಎಡ ಸೊಂಟದಿಂದ ಬಲ ಸೊಂಟಕ್ಕೆ ಪುಟ್ಟ ಗಣಪನಂತಹ, ಹಿತ್ತಾಳೆ, ತಾಮ್ರದ ಕೊಡಪಾನಗಳನ್ನು ಪಾಸ್ ಪಾಸ್ ಮಾಡುತ್ತ ಸೊಂಟವೂ ನೆಗ್ಗುವಂತೆ ನೀರು ಹೊತ್ತು ತರುವ ಜಂಜಾಟವಿಲ್ಲ. ಮಕ್ಕಳನ್ನು ಸೊಂಟದಲ್ಲಿ ಕೂರಿಸಿಕೊಂಡು ತಿನಿಸುವ, ಉಣಿಸುವ, ಓಡಾಡುವ ತಾಪತ್ರಯವೇ ಇಲ್ಲ. ಕಾಂಗರೂ ಚೀಲದಲ್ಲಿ ಮಗುವನ್ನು ಹೊರುವ ಹಾಗೆ ಬ್ಯಾಗ್‌ಪ್ಯಾಕು, ಫ್ರಂಟ್‌ಬ್ಯಾಗು, ವಾಕರ್, ದೂಕರ್ ಎಂದೆಲ್ಲ ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಳೆಯ ಕಾಲದಲ್ಲಿ “ಬಾಣಂತಿ ಬಳುಕಬೇಕು, ಕೂಸು ಕುಣಿಯಬೇಕು’ ಎನ್ನುವ ಹಾಗೆ, ಸಣ್ಣನೆ ಸೊಂಟದ ಬಾಣಂತಿ, ಗುಂಡಗುಂಡನೆಯ ಮಗು ಇರುತ್ತಿತ್ತು. ಈಗಿನ ಮಕ್ಕಳು ಹೆಚ್ಚಾಗಿ “ಆನೆಯ ಹೊಟ್ಟೆಯಲ್ಲಿ ಸೂಲಂಗಿ ಹುಟ್ಟಿದಂತೆ’ ಎನ್ನುವ ಗಾದೆಮಾತಿನಂತೆ, ದೈಹಿಕಸೂಕ್ಷ್ಮತೆ, ಅತಿಯಾದ ವಿಶ್ರಾಂತಿ, ಆರೈಕೆಯಿಂದ ಬಾಣಂತಿ ಗುಂಡಾಗಿದ್ದರೆ, ಮಕ್ಕಳು ಮಾತ್ರ ಹೆಚ್ಚಾಗಿ ಪೀಚುಪೀಚಾಗಿಯೇ ಹುಟ್ಟಿರುತ್ತವೆ. ಸೊಂಟ ಬಗ್ಗಿಸಿ ಮೋಟು ಪೊರಕೆಗಳಿಂದ ಕಸ ಗುಡಿಸುವ, ಒರೆಸುವ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದ್ದಿ ಕುಕ್ಕರುಕಾಲಿನಲ್ಲಿ ಕೂತು, ಬಾಗಿ ನೆಲ ಒರೆಸುವ ಗೋಳಾಟವೇ ಇಲ್ಲ. ಪೊರಕೆಗಳೂ, ಮೋಪುಗಳು ಆಳೆತ್ತರದ ಅಳತೆ ಸಿಗುತ್ತವಾದ್ದರಿಂದ ಬಾಗುವ ಪ್ರಮೇಯವೇ ಇಲ್ಲ. ಹಾಗಾಗಿ ಬಳುಕು ಸೊಂಟಕ್ಕಿಂತ ಉಳುಕು ಸೊಂಟದ ನಾರೀಮಣಿಗಳೇ ಹೆಚ್ಚು ಎನ್ನಬಹುದು.
ಸಪೂರ ಸೊಂಟ ಎಂಬ ಮಾಯೆ…
ಸಪೂರ ಸೊಂಟ ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಕನಸಾಗಿರುತ್ತದೆ. ಹಾಗಾಗಿ ಸೊಂಟವನ್ನು ಗ್ಲಾಸ್ ಅವರ್ ಬಾಟಲ್ ಶೇಪ್ ತರಲು ನಾನಾ ಕಸರತ್ತು ನಡೆಯುತ್ತಿರುತ್ತದೆ. ಆರೋಗ್ಯದ ದೃಷ್ಟಿಯಿಂದ ನಮ್ಮ ಹಿರಿಯ ಪೀಳಿಗೆಯ ಮಹಿಳೆಯರು ನಡುವಿಗೆ ಬೆಳ್ಳಿಯ ಡಾಬನ್ನು ಸ್ವಲ್ಪ ಬಿಗಿಯಾಗಿ ಹಾಕಿಕೊಳ್ಳುತ್ತಿದ್ದುದು ಹೆಚ್ಚು. ಈಗ ಎಲ್ಲ ಫ್ಯಾಷನ್‌ಮಯ. ಕೇವಲ ಬಳುಕುವ ಸೊಂಟದ ಸೊಬಗು ಹೆಚ್ಚಿಸಲು ಸೊಂಟದ ಪಟ್ಟಿಗಳು, ಡಾಬು, ಒಡ್ಯಾಣ, ಬೆಲ್ಟಾಗಳು, ಸ್ಯಾರಿ ಬೆಲ್ಟಾಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಅವುಗಳನ್ನು ಧರಿಸಿದಾಗ ಸೊಂಟ ಸಣ್ಣದಾಗಿ ಕಾಣುತ್ತದೆಯೋ ಇಲ್ಲವೋ ಗೊತ್ತಿಲ್ಲ, ಹೊಟ್ಟೆ ಮಾತ್ರ ಎರಡು ಭಾಗವಾಗಿ ಗ್ಲಾಸ್ ಅವರ್ ಬಾಟಲ್‌ನ ಅರ್ಧ ಭಾಗದಂತೆ ಗೋಚರಿಸುತ್ತಿ ರುತ್ತದೆ. ಉಳುಕು ಸೊಂಟಕ್ಕೆ ಅಥವಾ ಬೆನ್ನು ನೆಟ್ಟಗಾಗಲು ಸೊಂಟಕ್ಕೆ ಲುಂಬೋ ಸ್ಯಾಕರಲ್ ಬೆಲ್ಟ್‌ಗಳನ್ನು ಹಾಕುವುದಿದೆ. ಒಟ್ಟಿನಲ್ಲಿ ಸೊಂಟಕ್ಕೆ ಹುಟ್ಟಿದಾಗಿ ನಿಂದಲೂ ಯಾವುದಾದ ರೊಂದು ಬೆಲ್ಟ… ಸುತ್ತುವುದು ತಪ್ಪದು.
ಬಹುಶಃ ಈ ಸೊಂಟದ ಭಾಗದಲ್ಲಿ ಹೊಟ್ಟೆ ಸೇರಿಕೊಂಡೇ ಅದರ ಶೇಪೌಟ್ ಮಾಡುತ್ತಿದೆ ಎನ್ನಿಸದಿರದು. ಸೊಂಟ ಸಣ್ಣಗಾಗಲು ಅದೆಂತಹ ಎಣ್ಣೆ, ಮುಲಾಮು, ಸೊಂಟಕ್ಕೆ ಹಾಕುವ ಪಟ್ಟಿ, ಬೆಲ್ಟಾ ಮಾರುಕಟ್ಟೆಗಳಲ್ಲಿ ಲಭ್ಯವಿದ್ದರೂ, ಜಿಮ್ಮು, ವ್ಯಾಯಾಮ ಎಂದೆಲ್ಲ ಹೊಡೆದಾಡಿದರೂ ಸುತ್ತಳತೆಯನ್ನು ಕಡಿಮೆ ಮಾಡುವುದು ಸುಲಭವಲ್ಲ. ದೇಹದ ಯಾವ ಭಾಗ ನೋವಿನಿಂದ ಕೈಕೊಟ್ಟರೂ ಮರೆತು ಕೆಲಸ ಮಾಡಬಹುದು, ಆದರೆ ಸೊಂಟ ಕೈಕೊಟ್ಟರೆ ಮಾತ್ರ ಎಲ್ಲ ಕಾರ್ಯಗಳೂ ಕುಂಟುತ್ತಲೇ ಸಾಗುವವು.
ಬೀಗುವ ನಡು…ಬಾಗುವ ನಡು…
ಬ್ಯಾಲೆ ನೃತ್ಯ ಮಾಡುವ ಬಾಲೆಯರ ಬಡನಡುವಿನ ಬಾಗು, ಬಳುಕುವಿಗೆ ಮಾರುಹೋಗದವರಿಲ್ಲ. ನಮ್ಮ ಸಾಹಿತ್ಯ ಪ್ರಕಾರಗಳಲ್ಲಿಯೂ ಹೆಣ್ಣಿನ ಬಡನಡುವಿಗೆ ಪ್ರಾಶಸ್ತ್ಯ ಹೆಚ್ಚು. ಸೊಂಟ ನೋವಿನ ಜಾಹೀರಾತಿಗೆ ಕೇವಲ ಹೆಣ್ಣುಮಕ್ಕಳನ್ನು ನಟಿಸಲು ತೆಗೆದುಕೊಳ್ಳುವುದ್ಯಾಕೆ, ಗಂಡಸರಿಗೇನು ಸೊಂಟ, ಸೊಂಟನೋವೇ ಇರುವುದಿಲ್ಲವೇ ಎಂದು ಕೆಲವು ಗಂಡುಮಕ್ಕಳು ಆಕ್ಷೇಪಣೆ ಎತ್ತುವುದಿದೆ. ಅದೂ ಸರಿಯೇ ಬಿಡಿ. ಗಂಡಸರ ಸೊಂಟದ ಬಗ್ಗೆ ವರ್ಣಿಸಿರುವ ದಾಖಲೆಗಳು ಕಡಿಮೆಯೇ. ಅವರೇನಿದ್ದರೂ ಸಿಕ್ಸ್‌ಪ್ಯಾಕ್, ತೋಳಿನ ಮಸಲ್ಸ್ ಬಗ್ಗೆ ಗಮನ ಹರಿಸುವುದೇ ಹೆಚ್ಚು. ಬಹುತೇಕರಿಗೆ ವರ್ಷದಿಂದ ವರ್ಷಕ್ಕೆ ಸೊಂಟಕ್ಕೆ ಧರಿಸುವ ಬೆಲ್ಟಾಗಳಲ್ಲಿಯ ರಂಧ್ರಗಳೂ ದೂರದೂರ ಸರಿಯುತ್ತಿರುತ್ತವೆ. ಇದಕ್ಕೆ ಅಪವಾದವೆಂಬಂತೆ ನಮ್ಮ ಹೀರೋ ಪ್ರಭುದೇವ, ತಮ್ಮ ಬಡನಡು ಬಳುಕಿಸುತ್ತ, ತುಳುಕಿಸುತ್ತ ಮೂನ್ ವಾಕ್ ನೃತ್ಯ ಮಾಡಿ ಪ್ರೇಕ್ಷಕರನ್ನು ಈಗಲೂ ಸೆರೆಹಿಡಿದಿಟ್ಟುಕೊಂಡಿದ್ದಾರೆ ಬಿಡಿ.
ವಯಸ್ಸಿದ್ದಾಗ ಠೀವಿಯಿಂದ ಬೀಗುವ ನಡು, ನಡುವಯಸ್ಸು ದಾಟುತ್ತಿದ್ದಂತೆ ಸಣ್ಣಗೆ ನಡುಗುತ್ತಲೆ ಬಾಗುತ್ತ ಮನುಷ್ಯನ ಆಯಸ್ಸು ಕ್ಷೀಣಿಸುವ ಸೂಚನೆ ನೀಡುತ್ತ, ಭೂಮಿತಾಯಿಗೆ ಹತ್ತಿರವಾಗುವುದನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ ಯೇನೋ ಗೊತ್ತಿಲ್ಲ. ಆದರೆ ವಿನೀತರಾಗಿ ಬಾಗುವ ಸೊಂಟ ಅವರ ಸುಸಂಸ್ಕೃತ ನಡವಳಿಕೆಯನ್ನು ತೋರಿಸಿ, ಕೀರ್ತಿಪತಾಕೆಯನ್ನು ಗಗನಕ್ಕೇರಿಸುವುದು ಸುಳ್ಳಲ್ಲ.
-ನಳಿನಿ ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.