ಮನೆ
Team Udayavani, Jan 21, 2018, 6:00 AM IST
ಈ ರೂಮಿನ ಸೈಜು ಟೆನ್ ಬೈ ಎಯ್r ಆದ್ರೆ ಸಾಕು” ಅಂದಳು ಶ್ರೀಮತಿ ಮಲಿಕ್, ತನ್ನ ಮುಂದಿನ ಟೇಬಲ್ ಮೇಲೆ ಹರಡಲಾಗಿದ್ದ ನೀಲನಕ್ಷೆಯಲ್ಲಿನ ಚೌಕವೊಂದನ್ನು ತೋರಿಸುತ್ತ. ಈ ಸಲಹೆಯನ್ನು ಆಕೆ ಕೊಡುತ್ತಿದ್ದುದು ಇದು ಮೂರನೇ ಸಲ. ಆದರೂ ಆ ಮಾತು ಆಕೆಯ ಗಂಡನ ತಲೆಯೊಳಗಾಗಲಿ, ಆ ಇಂಜಿನಿಯರನ ತಲೆಯೊಳಗಾಗಲಿ ಹೋದಂತೆ ಕಾಣಿಸಲಿಲ್ಲ.
ಮಲಿಕ್ ಕುಟುಂಬ ದೆಹಲಿಯಲ್ಲಿ ತಮ್ಮದೊಂದು ಸ್ವಂತ ಸೂರನ್ನು ಕಟ್ಟಿಸಿಕೊಳ್ಳುವ ಉಮೇದಿಯಲ್ಲಿದ್ದರು. ಈ ಹಿಂದೆಯೇ ಅವರು ನಗರದ ಫ್ಯಾಶನೇಬಲ್ ಕಾಲನಿ ಎಂದೇ ಹೆಸರಾದ ಪ್ರದೇಶದಲ್ಲಿ ನಿವೇಶನವನ್ನು ಕೊಂಡಿಟ್ಟಿದ್ದರು. ಈಗ ದೆಹಲಿಗೆ ಪುನಃ ವರ್ಗವಾದುದರಿಂದ ಮನೆಯನ್ನು ಕಟ್ಟಿಸುವ ಯೋಜನೆ ರೂಪಿಸಿದರು.
ಇನ್ನು ಈ ಮನೆಕೆಲಸ ಮುಗಿದ ನಂತರ ತನ್ನ ಗಂಡನಿಗೆ ಬೇರೆಲ್ಲಿಗೇ ವರ್ಗ ಆದರೂ ತಾನು ಮಾತ್ರ ಇÇÉೇ ಇರುವವಳೆಂದು ಶ್ರೀಮತಿ ಮಲಿಕ್ ಮನದೊಳಗೇ ಗಟ್ಟಿ ಮಾಡಿಕೊಂಡಿದ್ದಳು. ಆಕೆಗೆ ಈ ನಿರಂತರ ವರ್ಗಾವಣೆಗಳಿಂದ ಸಾಕುಸಾಕಾಗಿ ಹೋಗಿತ್ತು. ಪ್ರತಿವರ್ಷ ಅವರು ಬೇರೊಂದು ಊರಿಗೆ ಹೋಗುವುದು ಖಾಯಮ್ಮಾಗಿತ್ತು. ಈಗಂತೂ ಮಕ್ಕಳು ದೊಡ್ಡವರಾಗಿದ್ದರಿಂದ ಅವರನ್ನು ಶಾಲೆಯಿಂದ ಶಾಲೆಗೆ ಬಿಡಿಸಿಕೊಂಡು ಹೋಗುವುದು ಇನ್ನೂ ಕಷ್ಟವಾಗಿತ್ತು. “”ವರ್ಗ ಅಂತ ಆದರೆ ನೀವೊಬ್ಬರೆ ಹೋಗಿ” ಅಂತ ಗಂಡನಿಗೆ ಹೇಳಿಯೂ ಹೇಳಿದ್ದಳು. ತಾನು ಮಾತ್ರ ತನ್ನ ಅತ್ತೆ ಮತ್ತು ಮಕ್ಕಳೊಂದಿಗೆ ದಿಲ್ಲಿಯÇÉೇ ಪರ್ಮನೆಂಟಾಗಿ ಸೆಟ್ಲ ಆಗುವುದಾಗಿ ಹೇಳಿದ್ದಳಲ್ಲದೆ ಆ ಮಾತಿಗೆ ಗಂಡನೂ ಒಪ್ಪಿಯಾಗಿತ್ತು.
“”ಈ ರೂಮಿನ ಸೈಜು ಟೆನ್ ಬೈ ಎಯ್r ಆದ್ರೆ ಸಾಕು” ಶ್ರೀಮತಿ ಮಲಿಕ್ ಮತ್ತೂಮ್ಮೆ ಹೇಳಿದಳು. ಪಕ್ಕದ ಕೋಣೆಯಲ್ಲಿ ಆಕೆಯ ಗಂಡ ಫೋನಿನಲ್ಲಿ ಬಿಜಿಯಾಗಿದ್ದ.
“”ಆದ್ರೆ ಇದು ಸ್ಟೋರ್ ರೂಮು” ಎಂದು ವಿವರಿಸಲು ಹೋದ ಇಂಜಿನಿಯರ್.
“”ಹೌದು. ಆದ್ರೆ ಇದು ನಮ್ಮತ್ತೆಯವರ ರೂಮಾದ್ರೆ ಚೆನ್ನಾಗಿರುತ್ತೆ ಅಂತ ನನ್ನ ಆಲೋಚನೆ. ಆನಂತರ ಬೇಕಾದ್ರೆ ಅದನ್ನು ಸ್ಟೋರ್ ರೂಮಾಗಿ ಬಳಸಿಕೊಳ್ಳಬಹುದು”
ಇಂಜಿನಿಯರಿಗೆ ಆ ಮಾತು ಅರ್ಥವಾಗಲಿಲ್ಲ. ಗೊಂದಲಕ್ಕೊಳಗಾದವನಂತೆ ಮುಖ ಮಾಡಿ ಶ್ರೀಮತಿ ಮಲಿಕ್‌ಳತ್ತ ನೋಡಿದ.
“”ಅಂದ್ರೆ ನಾನು ಹೇಳ್ಳೋದೇನೂಂದ್ರೆ ಸದ್ಯಕ್ಕೆ ನಮ್ಮತ್ತೆ ಈ ರೂಮನ್ನು ಬಳಸಿಕೊಳ್ಳಲಿ. ಹೇಗೂ ಅವರಿಗೆ ವಯಸ್ಸಾಗಿದೆ. ಅವರೇನೂ ತುಂಬಾ ದಿನ… ಅದಾದ ಮೇಲೆ ಈ ರೂಮನ್ನು ನಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು” ತಡೆದು ತಡೆದು ಮಾತಾಡುತ್ತ ಹೇಳಿದಳು ಶ್ರೀಮತಿ ಮಲಿಕ್.
ನಂತರ ಮಲಿಕ್ ಕೂಡ ಬಂದು ಸೇರಿಕೊಂಡರು. ಫೋನ್‌ನಲ್ಲಿ ಮಾತಾಡುತ್ತ ಅವರೂ ಇದೇ ಯೋಚನೆ ಮಾಡಿದ್ದರೆಂದು ಕಾಣಿಸುತ್ತೆ. ಹಾಗಾಗಿ, ಸ್ಟೋರ್ ರೂಮು ತುಸು ದೊಡ್ಡದಾಗಿರಲೆಂಬ ಆಕೆಯ ಅಭಿಪ್ರಾಯವನ್ನೇ ಅವರೂ ವ್ಯಕ್ತಪಡಿಸಿದರು. “”ಸ್ಟೋರ್ ರೂಮು ಸ್ವಲ್ಪ ವಿಶಾಲವಾಗಿರೋದೇ ಒಳ್ಳೆಯದು. ಅದರೊಳಗೆ ಓಡಾಡುವವರಿಗೂ ಅನುಕೂಲ ಅಲ್ಲದೆ ಅದನ್ನು ಸ್ವತ್ಛಗೊಳಿಸಲಿಕ್ಕೂ ಸುಲಭ”.
ಅಡುಗೆಕೋಣೆಗೆ ಹತ್ತಿಕೊಂಡಿರುವ ಆ ರೂಮಿನ ಸೈಜು ಟೆನ್ ಬೈ ಎಯ್r ಇರಲಿ ತೀರ್ಮಾನಿಸಲಾಯಿತು. ಅಂಗಳವೇ ಸ್ವಲ್ಪ ಕಿರಿದಾಗುತ್ತಿತ್ತು. ಆದರೆ, ಅದೇನೂ ಅಂಥ ದೊಡ್ಡ ವಿಷಯವಲ್ಲ. ಮಿಕ್ಕೆಲ್ಲವನ್ನು ಅದಾಗಲೇ ತೀರ್ಮಾನಿಸಿಯಾಗಿತ್ತು. ಕಟ್ಟಡ ಯೋಜನೆಯನ್ನು ಮುನಿಸಿಪಾಲಿಟಿಗೆ ಅನುಮೋದನೆಗಾಗಿ ಕಳಿಸಿಕೊಡಲಾಯಿತು.
ಶ್ರೀಮತಿ ಮಲಿಕ್ ಮನೆ ನಿರ್ಮಾಣದ ವಿಷಯದಲ್ಲಿ ಸಾಕಷ್ಟು ಆಸಕ್ತಿಯನ್ನು ತೆಗೆದುಕೊಂಡಳು. ಇಡೀ ದಿನವೆಲ್ಲ ಕೊಡೆ ಹಿಡಿದು ನಿರ್ಮಾಣ ಕಾಮಗಾರಿ ವೀಕ್ಷಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳಾಕೆ. ಒಮ್ಮೊಮ್ಮೆ ಮೇಸಿŒಯೊಂದಿಗೆ, ಕೆಲಸಗಾರರೊಂದಿಗೆ ಕೈಯನ್ನೂ ಜೋಡಿಸುತ್ತಿದ್ದಳು. ನಿವೇಶನ ಸ್ಥಳಕ್ಕೆ ಎಲ್ಲರಿಗಿಂತ ಮೊದಲು ಬರುತ್ತಿದ್ದುದು ಅವಳೇ, ಎಲ್ಲರ ನಂತರ ಹೋಗುತ್ತಿದ್ದುದು ಅವಳೇ. ಯಾವುದೇ ಸಾಮಗ್ರಿ ವೇಸ್ಟ್ ಆಗದಂತೆ, ಕೆಲಸಗಾರರು ಖಾಲಿ ಕೂರದಂತೆ ಸದಾ ನಿಗಾ ಇಡುತ್ತಿದ್ದಳು.
ಮನೆ ಕೆಲಸವೇನೋ ಬೇಗನೇ ಮುಗಿಯಿತು. ಶ್ರೀಮತಿ ಮಲಿಕ್ ಮನೆಗಾಗಿ ಹೊಸ ಪೀಠೊಪಕರಣಗಳು ಬೇಕೆಂದಳಷ್ಟೇ ಅಲ್ಲ, ಹಳೆಯ ಯಾವುದನ್ನೂ ಅಷ್ಟೇಕೆ ಹಳೆಯದರ ಒಂದು ಸಣ್ಣ ತುಕಡಿಯನ್ನೂ ಹೊಸ ಮನೆಯೊಳಗೆ ಸೇರಿಸಗೊಡುವುದಿಲ್ಲ ಎಂದುಬಿಟ್ಟಳು.
ಮನೆಯನ್ನು ಶಿಫ್ಟ್ ಮಾಡುವ ಯೋಚನೆಯಲ್ಲಿರುವಾಗಲೇ ಸರ್ಕಾರವು ಅವರ ಮನೆಯನ್ನು ತೆಗೆದುಕೊಂಡಿರುವ ವಿಚಾರ ಅವರ ಕಿವಿಗೆ ಬಿತ್ತು. ಶ್ರೀಮತಿ ಮಲಿಕ್ ತುಂಬಾ ಕೋಪಾವಿಷ್ಟರಾದಳು. ಸರ್ಕಾರ ಅದಕ್ಕೆ ಕೊಡಲು ಒಪ್ಪಿರುವ ದೊಡ್ಡ ಮೊತ್ತದ ಬಾಡಿಗೆ ಹಣದ ಬಗ್ಗೆ ಮಲಿಕ್ ಹೇಳಿದ ಮೇಲಷ್ಟೇ ಸ್ವಲ್ಪ ತಣ್ಣಗಾದಳು.
ಮನೆಕೆಲಸ ನಡೆದಾಗಲೇ ಆಕೆ ನೆರೆಹೊರೆಯವರನ್ನೆಲ್ಲ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ದಳು. ಮನೆಯ ಬಗ್ಗೆ ಹಲವಾರು ಯೋಜನೆಗಳನ್ನೂ ಹಾಕಿಕೊಂಡಿದ್ದಳು. ಈಗ ಅವೆಲ್ಲವನ್ನು ಮರೆಯಬೇಕಾಯಿತು. ನಂತರ ಅವರಿಗೆ ಅಲ್ಲಿಂದ ಬೇರೆಡೆಗೆ ವರ್ಗವಾಯಿತು. ಮತ್ತೂಂದು ಅವಧಿಗೆ ದೆಹಲಿಗೇ ವರ್ಗಾ ಆಗಿ ಬರಲು ಅವರಿಗೆ ತುಂಬ ಸಮಯ ಹಿಡಿಯಿತು. ಈ ಸಂದರ್ಭದÇÉೇ ಆಕೆಯ ಅತ್ತೆಯವರೂ ತೀರಿಕೊಂಡರು. ಮಗಳ ಮದುವೆಯಾಯಿತು.
ಒಂದರ್ಥದಲ್ಲಿ ಅವರ ಮನೆಯನ್ನು ಸರ್ಕಾರವೇ ಬಾಡಿಗೆಗೆ ತೆಗೆದುಕೊಂಡದ್ದು ಒಳ್ಳೆಯದೇ ಆಯಿತು. ಏಕೆಂದರೆ ಖಾಸಗಿ ಬಾಡಿಗೆದಾರರೆಂದರೆ ದೊಡ್ಡ ತಲೆಬಿಸಿ. ಅವರ ಬೇಡಿಕೆಗಳಿಗೆ, ದೂರುಗಳಿಗೆ ಕೊನೆಯೇ ಇರುವುದಿಲ್ಲ. ಆಮೇಲೆ ಬಾಡಿಗೆಯನ್ನೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಸರ್ಕಾರವೇ ವಿನಂತಿಸಿಕೊಂಡು ಶ್ರೀಮತಿ ಮಲಿಕ್‌ರ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರಿಂದ ಪ್ರತಿ ತಿಂಗಳು ಅವರ ಖಾತೆಗೆ ನಿಗದಿತವಾಗಿ ಬಾಡಿಗೆ ಹಣ ಜಮೆಯಾಗುತ್ತಿತ್ತು.
ಈಗ ಅವರ ಮಗನ ಮದುವೆಯೊಂದು ಬಾಕಿಯಿತ್ತು. ತನ್ನ ನಿವೃತ್ತಿಗೂ ಮೊದಲೇ ಅದೊಂದು ಆಗಿಬಿಟ್ಟರೆ ಒಳ್ಳೆಯದಿತ್ತೆಂದು ಮಲಿಕ್ ಯೋಚಿಸುತ್ತಿದ್ದರು. ಅದರಂತೆ ಅವರ ಮಗನ ಮದುವೆಯೂ ಆಯಿತು. ಮಲಿಕ್‌ರ ನಿವೃತ್ತಿಯೂ ಆಯಿತು. ಆದರೆ, ಅವರ ಮನೆ ಮಾತ್ರ ಅವರ ವಶಕ್ಕೆ ಸಿಗಲಿಲ್ಲ. ಮಲಿಕ್ ದಂಪತಿಗಳು ಮಗ ಮತ್ತು ಸೊಸೆಯೊಂದಿಗೆ ಬಾಡಿಗೆ ಮನೆಯಲ್ಲಿರಬೇಕಾಯಿತು.
ಮಲಿಕ್ ಸಾಯುವ ಕಾಲ ಬಂದಾಗ ಸರ್ಕಾರದ ವಿರುದ್ಧದ ತಮ್ಮ ಮನೆ ಬಿಡಿಸಿಕೊಳ್ಳುವ ಹೋರಾಟ ಇನ್ನೂ ಮುಕ್ತಾಯ ಕಂಡಿರಲಿಲ್ಲ. ತಮ್ಮ ಮನೆಯಲ್ಲಿ ಒಂದು ದಿನವೂ ವಾಸ ಮಾಡಲಿಕ್ಕಾಗದೆ ಮಲಿಕ್ ತೀರಿಕೊಂಡರು. ಅದಾಗಿ, ಮೂರು ತಿಂಗಳೊಳಗೆ ಸರ್ಕಾರ ಅವರ ಮನೆಯನ್ನು ಬಿಟ್ಟುಕೊಟ್ಟಿತು. ಶ್ರೀಮತಿ ಮಲಿಕ್‌ಗಿಂತ ಹೆಚ್ಚು ಅವರ ಸೊಸೆ ತಮ್ಮ ಮನೆಯನ್ನು ಪ್ರವೇಶಿಸಲು ಉತ್ಸುಕಳಾಗಿದ್ದಳು. ಮನೆ ತಮ್ಮ ಸುಪರ್ದಿಗೆ ಬಂದ ಮರುಕ್ಷಣದಿಂದಲೇ ಅದಕ್ಕೆ ಸುಣ್ಣ ಬಣ್ಣ ಹೊಡೆಸಿ ಸಾಮಾನುಗಳನ್ನು ಸಾಗಿಸಲು ಪ್ರಾರಂಭಿಸಿದರು. ಫರ್ನಿಚರ್ ಅಂಗಡಿಯವನಿಗೆ ಸಾಕಷ್ಟು ಬಗೆಯ ಪೀಠೊಪಕರಣಗಳನ್ನು ಆರ್ಡರ್ ಮಾಡಲಾಯಿತು. ಅವನು ಅವುಗಳನ್ನು ಸಕಾಲಕ್ಕೆ ತಂದೂ ಕೊಟ್ಟ.
ಸೋಮವಾರ ಬೆಳಿಗ್ಗೆ ಅವರು ಹೊಸ ಮನೆಗೆ ಹೋಗುವುದಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಮಳೆ ಶುರುವಾಗಿತ್ತು. ತುಂಬಾ ಜೋರಾಗಿಯೂ ಸುರಿಯುತ್ತಿತ್ತು. ತುಂಬಾ ಹೊತ್ತು ಕಾದರು. ಕಾದರು. ಕಾದರು. ಮಳೆ ನಿಲ್ಲಲಿಲ್ಲ. ಮಗನಿಗೆ ಆಫೀಸಿಗೆ ಹೊರಡುವ ಸಮಯವಾದ್ದರಿಂದ ಸಂಜೆ ಶಿಫ್ಟ್ ಆಗುವುದೆಂದು ಮಾತಾಡಿಕೊಂಡರು. ಆ ದಿನವೆಲ್ಲ ಮಳೆ ಹೊಡೆಯಿತಲ್ಲದೆ, ಸಂಜೆ ಕೂಡ ಹಿಂದೆಂದೂ ಸುರಿಯದಷ್ಟು ಜೋರಾಗಿ ಸುರಿಯತೊಡಗಿತು. ಸೋಮವಾರ ಒಳ್ಳೆ ದಿನವಾದ್ದರಿಂದ ಅವತ್ತೇ ಹೋಗುವುದೆಂದು ಶ್ರೀಮತಿ ಮಲಿಕ್ ಅಂದುಕೊಂಡಿದ್ದರು. ಇನ್ನು ಮಂಗಳವಾರದ ಮಾತೇ ಎತ್ತುವಂತಿಲ್ಲ. ಅವತ್ತು ದಿನ ಸರಿಯಿರಲಿಲ್ಲ. ತಾಯಿಯ ನಿರ್ಧಾರದ ಬಗ್ಗೆ ಆಲೋಚಿಸಿದ ಮಗ ಆ ಮಳೆಯಲ್ಲೂ ಅಂದೇ ರಾತ್ರಿ ಶಿಫ್ಟ್ ಆಗುವುದೆಂದು ಯೋಚಿಸಿ ಸಾಮಾನು ಹೇರಿಕೊಂಡು ಬರಲು ತನ್ನ ಕಾರಿನ ಜೊತೆ ಮತ್ತೂಂದು ಟ್ಯಾಕ್ಸಿಗೆ ಹೇಳಿದ. ಸದ್ಯ ಮನೆಯೊಳಗೆ ಸಾಧ್ಯವಾದಷ್ಟು ಸಾಮಾನಿನೊಂದಿಗೆ ಹೋದರಾಯಿತು. ಮತ್ತೆ ಮಿಕ್ಕದ್ದನ್ನು ಬೇಕಾದಾಗ ತಂದುಕೊಂಡರಾಯಿತೆಂದುಕೊಂಡ.
ಮಳೆ ಎಡೆಬಿಡದೆ ಸುರಿಯುತ್ತಲೇ ಇತ್ತು. ಹಿಂದಿನ ಸೀಟಿನಲ್ಲಿ ಕುಳಿತುಕೊಂಡ ಶ್ರೀಮತಿ ಮಲಿಕ್ ನೆನಪುಗಳೊಳಕ್ಕೆ ಜಾರಿಹೋದಳು. ಮನೆ ನಿರ್ಮಾಣದ ದಿನಗಳಲ್ಲಿ ತಾನು ಪಟ್ಟ ಶ್ರಮವೆಷ್ಟು! ಊಟ ಬಿಟ್ಟ ದಿನಗಳೆಷ್ಟು! ಮನೆಯ ಕೆಲಸ ನೋಡುತ್ತ ಉರಿಬಿಸಿಲಿನಲ್ಲಿ ನಿಂತ ಕ್ಷಣಗಳೆಷ್ಟು! ಮಳೆಯಲ್ಲಿ ತೋಯ್ದು ತೊಪ್ಪೆಯಾದ ದಿನಗಳೆಷ್ಟು! ಮನೆ ಮುಗಿದು ಬಣ್ಣ ಗಿಣ್ಣ ಎಲ್ಲ ಆದ ಮೇಲೆ ಹೇಗೆ ಕಾಣಿಸುತ್ತದೆಂದು ತೋರಿಸಲು ಇಂಜಿನಿಯರ್ ಒಂದು ಕಲರ್ ಸ್ಕೆಚ್ ಹಾಕಿಕೊಟ್ಟಿದ್ದ. ಅದರಲ್ಲಿ ಅಮೃತಶಿಲೆಯ ಕಂಬಕ್ಕೊರಗಿ ವರಾಂಡಾದಲ್ಲಿ ನಿಂತಿದ್ದ ಮನೆಯೊಡತಿಯ ಚಿತ್ರವಿತ್ತು. ಸುಂದರವಾದ, ಆಕರ್ಷಕವಾದ ಒಂದು ಸಂತೃಪ್ತಿ ಸೂಸುವ ಮರೂನ್ ಬಣ್ಣದ ಸೀರೆಯುಟ್ಟ ಹೆಂಗಸಿನ ಚಿತ್ರ. ಇಷ್ಟು ದಿನ ಆ ಚಿತ್ರ ತನ್ನದೆಂದೇ ಭಾವಿಸಿದ್ದಳು ಆಕೆ. ಆದರೆ ಆಕೆ ಎಂದೂ ಮೆರೂನ್ ಸೀರೆ ಉಟ್ಟಿರಲಿಲ್ಲ. ಆದಾಗ್ಯೂ ಚಿತ್ರದಲ್ಲಿನ ಹೆಂಗಸಿನ ಎತ್ತರ ತನ್ನಷ್ಟೇ ಇತ್ತು. ಅವಳು ನಿಂತಿರುವ ಭಂಗಿ ಕೂಡ ಥೇಟು ತಾನು ಕಂಬಕ್ಕೊರಗಿ ನಿಲ್ಲುವ ಭಂಗಿಯಂತೆಯೇ ಇತ್ತು. ಆ ಚಿತ್ರವನ್ನೊಮ್ಮೆ ನೋಡುವುದು, ಒಳಗೆ ಹೋಗಿ ನಿಲುವುಗನ್ನಡಿಯ ಮುಂದೆ ನಿಂತು ತನ್ನನ್ನೊಮ್ಮೆ ನೋಡಿಕೊಳ್ಳುವುದು. ಹೀಗೆ ನೋಡಿಕೊಂಡದ್ದು ಎಷ್ಟು ಸಲವೋ! ಎಂದಾದರೂ ಆ ಚಿತ್ರವನ್ನು ತನ್ನ ಸೊಸೆಗೆ ತೋರಿಸಬೇಕೆಂದು ಆಕೆ ಅಂದುಕೊಂಡಿದ್ದಿತ್ತು.
ಸೊಸೆ ಮುಂದಿನ ಸೀಟಿನಲ್ಲಿ ಮಗನ ಪಕ್ಕದಲ್ಲಿ ಕುಳಿತಿದ್ದಳು. ಹಿನ್ನೋಟ ದರ್ಪಣವನ್ನು ತನ್ನೆಡೆ ತಿರುಗಿಸಿಕೊಂಡು ಅವಳು ಮತ್ತೂಮ್ಮೆ ಲಿಪ್‌ಸ್ಟಿಕ್ ಬಳಿದುಕೊಳ್ಳುತ್ತಲಿದ್ದಳು. ತಮ್ಮದೇ ಮನೆಗೆ ತಾವು ಹೊರಟಿರುವಾಗ ಇದೆಲ್ಲ ಅಗತ್ಯವೆ? ಅಬ್ಬಬ್ಟಾ ಅಂದರೆ ಅಲ್ಲಿ ಹೋದ ಮೇಲೆ ಉಣ್ಣುವುದು ನಂತರ ಮಲಗುವುದು ಅಷ್ಟೇ ಇರುತ್ತೆ. ಈ ಕಾಲದ ಹುಡುಗಿಯರೇ ವಿಚಿತ್ರ! ಎಷ್ಟೊಂದು ಮಾತು! ನಿರಂತರವಾಗಿ ಆಡಿದ್ದೇ ಆಡಿದ್ದು. ಅದೂ ಗಂಡನೊಂದಿಗೆ ಇಂಗ್ಲಿಶಿನಲ್ಲಿ ಮಾತಾಡುವಂಥಾದ್ದೇನಿರುತ್ತೂ?
ಶ್ರೀಮತಿ ಮಲಿಕ್‌ಗೆ ಅಷ್ಟೇನೂ ಇಂಗ್ಲಿಶ್ ಬರಿ¤ರಲಿಲ್ಲ. ಅದೊಂದರÇÉೇ ಆಕೆ ಸೋತದ್ದು. ಅದೊಂದು ಬಿಟ್ಟರೆ ಬದುಕಿನಲ್ಲಿ ಎಲ್ಲವನ್ನೂ ಪೂರೈಸಿಕೊಂಡಿದ್ದಳು. ಕುಡೀತಿದ್ದಳು. ಕ್ಲಬ್‌ನಲ್ಲಿ ಡ್ರಿಂಕ್ಸ್‌ನ ಆಫರ್ ಬಂದಾಗ ನಿರಾಕರಿಸುವುದು ಯಾರಿಗಾದರೂ ಕಷ್ಟವೇ. ಬಾಲ್‌ರೂಮ್ ಡ್ಯಾನ್ಸ್ ಅನ್ನೂ ಕಲಿತುಕೊಂಡಿದ್ದಳು. ಗಂಡನ ಜತೆಗಷ್ಟೇ ಅಲ್ಲದೆ ಅವನ ಗೆಳೆಯರ ಜತೆಗೂ ಹೆಜ್ಜೆಗೂಡಿಸುತ್ತಿದ್ದಳು.
ಇದ್ದಕ್ಕಿದ್ದಂತೆ ಆಕೆಗೆ ಆ ಚಿತ್ರದಲ್ಲಿನ ಹೆಂಗಸು ತನ್ನ ಸೊಸೆನಾ ಅನ್ನಿಸಿತು. ಅದು ಹೇಗೆ ಸಾಧ್ಯ? ಮನೆಯ ಯೋಜನೆ ಸಿದ್ಧಪಡಿಸುತ್ತಿ¨ªಾಗ ಈಕೆ ಎಲ್ಲಿದ್ದಳು? ಆದರೆ ಸದ್ಯಕ್ಕಂತೂ ಅವಳು ಚಿತ್ರದಲ್ಲಿನ ಹೆಂಗಸಿನಂತೆ ಮೆರೂನ್ ಬಣ್ಣದ ಸೀರೆಯನ್ನೇ ಉಟ್ಟುಕೊಂಡಿದ್ದಳು. ಹೌದು, ಮೆರೂನ್ ಬಣ್ಣದ ಸೀರೆಯೇ. ಶ್ರೀಮತಿ ಮಲಿಕ್‌ಗೆ ಮೆರೂನ್ ಬಣ್ಣ ಇಷ್ಟವಿರಲಿಲ್ಲ. ಆಕೆಯ ಅಭಿರುಚಿಗೆ ಅದು ಹೊಂದಿಕೆಯಾಗುತ್ತಿರಲಿಲ್ಲ. ಅದೇನಿದ್ದರೂ ಆಕೆಯ ಸೊಸೆಯಂಥ ಹುಡುಗಿಯರು ಇಷ್ಟಪಡುತ್ತಿದ್ದ ಬಣ್ಣ.
ಅವಳು ಉಡಬಹುದು ಮೆರೂನ್ ಸೀರೆಯನ್ನು ಹೇಳಿಕೊಂಡರು ತನಗೆ ತಾನೇ ಶ್ರೀಮತಿ ಮಲಿಕ್. ಆದರೆ, ನನ್ನಷ್ಟು ಕೆಲಸ ಕೂಡ ಮಾಡಿದ್ರೆ ಗೊತ್ತಾಗುತ್ತೆ. ಮಳೆಯೆನ್ನದೆ, ಬಿಸಿಲೆನ್ನದೆ ಪ್ರತಿಯೊಂದು ಇಟ್ಟಿಗೆಯನ್ನೂ ಮುಂದೆ ನಿಂತು ಇಡಿಸಿದ್ದೀನಿ. ಒಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸದ ಮೇಲೆ ನಿಗಾ ಇಡುತ್ತ ನಿಂತೇ ಇದ್ದೀನಿ. ಎಷ್ಟೋ ಸಲ ಮೇಸಿŒಗಳಿಗೆ ಗಾರೆ, ಇಟ್ಟಿಗೆ ಎತ್ತಿಕೊಟ್ಟಿದ್ದೀನಿ. ಎಷ್ಟೋ ಸಲ ನಾನೇ ಪೈಪ್ ಹಿಡಿದು ಗೋಡೆಗಳಿಗೆ ನೀರು ಬಿಟ್ಟಿದ್ದೀನಿ.
ಮನೆ ಬಂತು. ಪೊರ್ಟಿಕೊದಲ್ಲಿ ಮಗ ಕಾರು ನಿಲ್ಲಿಸುತ್ತಿದ್ದಂತೆ ಸೊಸೆ ಟಣ್ಣೆಂದು ಜಿಗಿದು ಕೆಳಗಿಳಿದವಳೇ ವರಾಂಡಾದಲ್ಲಿದ್ದ ಅಮೃತಶಿಲೆಯ ಕಂಬಕ್ಕೆ ಆತುಕೊಂಡು ನಿಂತಳು, ಥೇಟು ಆ ಇಂಜಿನಿಯರ್ ಬಿಡಿಸಿದ ಚಿತ್ರದ ಹಾಗೆ. ಶ್ರೀಮತಿ ಮಲಿಕ್‌ಗೆ ಹೃದಯದೊಳಗೆ “ಚುಳುಕ್’ ಎಂದು ಅಳುಕಿದಂತಾಯಿತು. ಬಹುಶಃ ಆ ಇಂಜಿನಿಯರ್ ಅವಳನ್ನು ಅಣಕಿಸಿದಂತಾಯಿತೇನೋ. ವರಾಂಡಾದಲ್ಲಿನ ಆ ಕಂಬಕ್ಕಾತುಕೊಂಡು ನಿಂತು, ಚೆನ್ನಾಗಿ ಕೇಶಾಲಂಕಾರ ಮಾಡಿದ ತಲೆಯನ್ನು ಮೆರೂನ್ ಬಣ್ಣದ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುತ್ತ, ಆಕೆಯ ಸೊಸೆಯು ತಮ್ಮ ಕಾರಿನ ಹಿಂದೆ ಬರುತ್ತಿರುವ ಟ್ಯಾಕ್ಸಿಯೊಳಗಿನ ಸಾಮಾನುಗಳನ್ನು ಇಳಿಸಿಕೊಳ್ಳುವ ಬಗ್ಗೆ ಆಳುಗಳಿಗೆ ನಿರ್ದೇಶನ ನೀಡುತ್ತಿದ್ದಳು.
ಟ್ಯಾಕ್ಸಿಯಿಂದ ಲಗೇಜ್ ಇಳಿಸಿಕೊಳ್ಳಲಾಯಿತು. ದುಡ್ಡು ಇಸಿದುಕೊಂಡು ಟ್ಯಾಕ್ಸಿಯವ ಹೋಗಿಬಿಟ್ಟ. ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಶ್ರೀಮತಿ ಮಲಿಕ್ ಇನ್ನೂ ಕುಳಿತೇ ಇದ್ದಳು. ವಿಚಿತ್ರವಾಗಿ ಮುಳುಗುತ್ತಿರುವ ಭಾವ ಅವಳನ್ನು ಆವರಿಸಿತು.
ಅವಳ ಮಗ ಮತ್ತು ಸೊಸೆ ಮನೆಯೊಳಗೆ ಹೋದರು. ಒಂದಾದ ನಂತರ ಒಂದರಂತೆ ಎಲ್ಲ ಲೈಟುಗಳನ್ನು ಬೆಳಗಿಸಿದರು. ಶ್ರೀಮತಿ ಮಲಿಕ್ ಕಾರಿನ ಹಿಂಬದಿ ಸೀಟಲ್ಲಿ ಕುಳಿತುಕೊಂಡೇ ಕಣ್ಣು ಅಗಲಿಸಿ ನೋಡಿದಳು. ಪ್ರತಿಸಲವೂ ತೆಗೆಯುವಂತೆ ಆಕೆ ಕುಳಿತಿದ್ದ ಬದಿಯ ಕಾರಿನ ಬಾಗಿಲನ್ನು ತೆರೆಯುವುದನ್ನು ಉದ್ವೇಗದಲ್ಲಿ ಎಲ್ಲರೂ ಮರೆತುಬಿಟ್ಟಿದ್ದರು. ಸಟಕ್ಕನೆ ಮಗನಿಗೆ ತನ್ನ ತಾಯಿಯ ನೆನಪಾಯಿತು. ಓಡಿ ಬಂದವನೇ ಕಾರಿನ ಬಾಗಿಲನ್ನು ತೆಗೆದ.
“”ಸಂಜೆ ಹೊತ್ತಿನ ಪಯಣ ಯಾವತ್ತೂ ನನಗೆ ಸ್ವಲ್ಪ ನಿ¨ªೆ ಮಂಪರು ತರಿಸುತ್ತೆ” ತನ್ನಷ್ಟಕ್ಕೆ ಗೊಣಗಿದಳಾಕೆ. ಅಷ್ಟರಲ್ಲಿ ಸೊಸೆಯೂ ಹೊರಗೆ ಬಂದಳು. ಪ್ರತಿಯೊಬ್ಬರೂ ನಗುತ್ತಿದ್ದರು. ಸೊಸೆ ಮತ್ತೆ ಮೊದಲಿನಂತೆ ವರಂಡಾದಲ್ಲಿನ ಅಮೃತಶಿಲೆಯ ಕಂಬಕ್ಕೊರಗಿ ನಿಂತು, ಕೇಶಾಲಂಕಾರಗೊಂಡ ತಲೆಯನ್ನು ಮೆರೂನ್ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುತ್ತಿದ್ದಳು.
“”ನಾನು ಊಟ ಮಾಡಲ್ಲ, ನನಗೆ ಹಸಿವಿಲ್ಲ” ಎಂದಳು ಶ್ರೀಮತಿ ಮಲಿಕ್. “”ನಾನು ಮಲಗ್ತಿàನಿ” ಎಂದಳು. ಆಳುಗಳು ಟೇಬಲ್ ಮೇಲೆ ಊಟಕ್ಕೆ ಎಲ್ಲ ಸಜ್ಜುಗೊಳಿಸಿದ್ದರು. “”ಹಾಗಾದರೆ, ನೀವು ನಿಮ್ಮ ರೂಮೊಳಗೆ ಹೋಗಿ ಮಲಕ್ಕೊಳ್ಳಿ ಅತ್ತೆ” ಅಂದಳು ಸೊಸೆ ಟೆನ್ ಬೈ ಎಯ್r ಸೈಜಿನ ರೂಮಿನೆಡೆ ಕೈ ಮಾಡುತ್ತ. ಆ ಮಾತಿನಂತೆ ಮಗ ಅಮ್ಮನ ಕೈ ಹಿಡಿದುಕೊಂಡು ಆ ರೂಮಿನೆಡೆ ನಡೆಸಿಕೊಂಡು ಹೋದ. ಆಕೆಗೆ ವಿಪರೀತ ನಿ¨ªೆ ಮಂಪರು ಕವಿದಿತ್ತು.
ರೂಮಿನಲ್ಲಿ ಹೋಗಿ ಮಂಚದ ಮೇಲೆ ಮಲಗಿಕೊಂಡವಳೇ, “”ಇದನ್ನು ನನ್ನ ಅತ್ತೆಯ ರೂಮಾಗಿಸಬೇಕೆಂದುಕೊಂಡಿ¨ªೆ. ನಂತರ ಬೇಕಾದರೆ ಸ್ಟೋರ್ ರೂಮಾಗಿ ಪರಿವರ್ತಿಸಬಹುದು ಎಂದುಕೊಂಡಿ¨ªೆ” ಎಂದಳು. ಆ ಮಾತುಗಳು ಅವಳ ಕಿವಿಯೊಳಗೇ ಪ್ರತಿಧ್ವನಿಸತೊಡಗಿದವು. ಶ್ರೀಮತಿ ಮಲಿಕ್ ಮತ್ತೆ ಮತ್ತೆ ತಲೆ ಕೊಡವಿಕೊಂಡಳು. ಅದರಲ್ಲಿ ತಪ್ಪಾದರೂ ಏನಿತ್ತು? ಅವಳ ಗಂಡ ಎಂದೋ ತೀರಿಕೊಂಡಾಗಿತ್ತು. ತಾನೂ ಇಂದಲ್ಲ ನಾಳೆ ಆತನನ್ನು ಅನುಸರಿಸಿ ಹೋಗಲೇಬೇಕು. ಅವಳ ಮಾತುಗಳು ಮತ್ತೆ ಮತ್ತೆ ಕಿವಿಯಲ್ಲಿ ಮಾರ್ಮೊಳಗತೊಡಗಿದವು.
ಆಗಲೇ ಸೊಸೆಯ ಮಾತುಗಳು ಕಿವಿ ಮೇಲೆ ಬಿದ್ದವು. “”ಮನೆ ಏನೋ ಚೆನ್ನಾಗೇ ಪ್ಲ್ಯಾನ್ ಮಾಡಿ ಕಟ್ಟಿ¨ªಾರೆ. ಒಂದು ಸ್ಟೋರ್ ರೂಮ್ ಮಾತ್ರ ಇಲ್ಲ. ಒಂದು ದೊಡ್ಡ ಸ್ಟೋರ್‌ರೂಮ್ ಇದ್ರೆ ನನಗಿನ್ನೂ ಚೆನ್ನಾಗಿರ್ತಿತ್ತು”. ಆ ಮಾತುಗಳನ್ನು ಕೇಳಿದ ಶ್ರೀಮತಿ ಮಲಿಕ್‌ಗೆ ತಾನು ತಳವಿಲ್ಲದ ಬಾವಿಯೊಂದರ ಆಳಕ್ಕೆ, ಇನ್ನೂ ಆಳಕ್ಕೆ ಮುಳುಗಿ ಹೋಗುತ್ತಿದ್ದಂತೆ ಭಾಸವಾಗತೊಡಗಿತು.
ಪಂಜಾಬಿ ಮೂಲ: ಕರ್ತಾರ್ ಸಿಂಗ್ ದುಗ್ಗಲ್
ಕನ್ನಡಕ್ಕೆ : ಚಿದಾನಂದ ಸಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.