ಹೂವ ಹುಡುಕುವ ಸೂರಕ್ಕಿ
Team Udayavani, May 26, 2019, 6:00 AM IST
ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ ಹಕ್ಕಿಗಳು ಭಾರೀ ಕ್ರಿಯಾಶೀಲತೆಯಿಂದ ಸರ್ಕಸ್ಸು ಮಾಡುವುದನ್ನು, ಸ್ಟ್ರಾನಂತಹ ತನ್ನ ಕೊಕ್ಕನ್ನು ಹೂವಿನ ದೇಹದೊಳಗೆ ಇಳಿಸಿ ‘ಸುರ್’ ಎಂದು ಹೀರಿ, ಮತ್ತೆ ಇನ್ನೊಂದು ಹೂವಿನತ್ತ ಹೋಗಿ ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸಿ ಕೊನೆಗೆ ಗಿಡದಲ್ಲಿರುವ ಸಕಲ ಹೂವುಗಳಿಗೂ ತನ್ನ ಕೊಕ್ಕಿನ ಸ್ಪರ್ಶ ಕೊಡುತ್ತಿರುವುದನ್ನು ನೋಡುತ್ತಲೇ ಇದ್ದೆ. ಈ ಹಕ್ಕಿಯ ಹೆಸರು ಸೂರಕ್ಕಿ (ಸನ್ ಬರ್ಡ್). ಹೂವಿನಿಂದ ಹೂವಿಗೆ ಹಾರುವ ಈ ಸೂರಕ್ಕಿಗಳಿಗೆ ಹೂಗಳ ಮಧು ಹೀರುವುದೆಂದರೆ ಪಂಚಪ್ರಾಣ. ದಾಸವಾಳ, ರತ್ನಗಂಧಿ, ಮುತ್ತುಮಲ್ಲಿಗೆ, ಕ್ರೋಟಾನು ಗಿಡದ ಬಣ್ಣ ಬಣ್ಣದ ಹೂವುಗಳ ಮಧುಪಾನಗೈಯುವ ಸೂರಕ್ಕಿಗಳು ನಮ್ಮ ಮನೆ ಅಂಗಳಗಳಲ್ಲಿ ಉತ್ಸಾಹಿ ವೀರರಂತೆ ಗಿಡ, ಪೊದೆ, ಬಳ್ಳಿಗಳ ಬಳಿ ಭಾರೀ ತರಾತುರಿಯಿಂದ ಓಡಾಡೋದನ್ನು ನೋಡುತ್ತಿದ್ದರೆ ಖುಷಿಯಾಗುತ್ತದೆ.
ಹೂವಿನಂಥ ಹಕ್ಕಿಗೆ ಹೂವೇ ಇಷ್ಟ
ಸೂರಕ್ಕಿಗಳು ಹೂವನ್ನೇ ಜಾಸ್ತಿಯಾಗಿ ಆಶ್ರಯಿಸಿ ಕೊಂಡಿರುವುದರಿಂದ ಇವುಗಳಿಗೆ ಹೂವಿನ ಹಕ್ಕಿ ಗಳಂತಲೂ ಕರೆಯುತ್ತಾರೆ. ಸೂರಕ್ಕಿಗಳು ತಮ್ಮ ವಿಶಿಷ್ಟ ನೀಲಿಯ ಹೊಳೆಯುವ ಬಣ್ಣಗಳಿಂದ, ಮಿಂಚಿನಂತಹ ಕ್ರಿಯಾಶೀಲತೆಯಿಂದ ಪಕ್ಷಿಲೋಕದಲ್ಲಿ ಪರಿಚಿತ ಹಕ್ಕಿ.
ಹಳದಿ ಸೂರಕ್ಕಿ (ಯಲ್ಲೋ ಸನ್ ಬರ್ಡ್), ಖಗರತ್ನ, ಕದಿರುಗಿಣಿ, ಕೆನ್ನೀಲಿ ಷೃಷ್ಠದ ಸೂರಕ್ಕಿ (ಪರ್‌ಪಲ್ ಸನ್ ಬರ್ಡ್), ಸಣ್ಣ ಸೂರಕ್ಕಿ, ಕಪ್ಪು ಸೂರಕ್ಕಿ (ಮರೂನ್ ಬ್ರೆಸ್ಟಡ್ ಸನ್ ಬರ್ಡ್) ಇವೆಲ್ಲ ನಮ್ಮ ಮನೆಯ ಅಂಗಳದಲ್ಲಿ ಯಾವತ್ತೂ ಕಾಣಸಿಗುವ ಸಾಮಾನ್ಯ ಸೂರಕ್ಕಿಗಳು.
ಖಗರತ್ನ ಸೂರಕ್ಕಿ, ಗುಬ್ಬಚ್ಚಿಗಿಂತ ತುಸು ಚಿಕ್ಕದಾದ ಮಿಂಚುವ ನೇರಳೆ, ಹಳದಿ ಬಣ್ಣದಿಂದ ಕಂಗೊಳಿಸುವ ಹಕ್ಕಿ. ಇದರ ತಲೆ ನೀಲಿ ಮಿಶ್ರಿತ ಹಸುರು ಬಣ್ಣದಿಂದ ಕೂಡಿದ್ದು, ಹೆಣ್ಣು ಹಕ್ಕಿ ಕಂದು ಬಣ್ಣದಿಂದ ಹೊಳೆಯುತ್ತವೆ.
ಸಣ್ಣ ಸೂರಕ್ಕಿ ಕೆಂಪುಗಂದು ಬಣ್ಣದ ಹಕ್ಕಿ ಯಾಗಿದ್ದು ಹೊಟ್ಟೆಯ ಬಣ್ಣ ಬಿಳಿ, ತಲೆ ನೀಲಿ ಮಿಶ್ರಿತ ಹಸುರುಬಣ್ಣದಿಂದ ಹೊಳೆಯುತ್ತವೆ. ಹೆಣ್ಣು ಹಕ್ಕಿಗೆ ಕಂದು ಬಣ್ಣ.
ಕಪ್ಪು ಸೂರಕ್ಕಿಯ ಮೈ ಬಣ್ಣ ಕಪ್ಪು ಮಿಶ್ರಿತ ನೇರಳೆ, ಎದೆಯಲ್ಲಿ ಕಿತ್ತಳೆ ಬಣ್ಣದ ಪಟ್ಟೆ, ಹೆಣ್ಣು ಹಕ್ಕಿಯ ಬಣ್ಣ ಎಲೆ ಹಸಿರು. ಒಟ್ಟಾರೆ ಈ ಸೂರಕ್ಕಿಗಳನ್ನು ದೂರದಿಂದ ನೋಡಿದರೆ ಗುಣದಲ್ಲಿ ಒಂದೇ ಹಕ್ಕಿಗಳಂತೆ ಕಂಡರೂ ಬಣ್ಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಚಿತ್ತಾಕರ್ಷಕ ವರ್ಣ ವೈವಿಧ್ಯವನ್ನು ನೋಡುತ್ತಿದ್ದರೆ ನಮ್ಮ ಕಣ್ಣುಗಳೂ ಬಣ್ಣ ಹಾಕಿ ಕುಣಿದಂತನ್ನಿಸುತ್ತದೆ.
ಮಧು ಹೀರಲು ಅವುಗಳ ಚೂಪಗಿನ ಸಣ್ಣ ಕೊಕ್ಕು ಸ್ಟ್ರಾ ನಂತಿದ್ದು ಹೂವಿನ ಮಧು ಹೀರಲು ಹೇಳಿಮಾಡಿಸಿದಂತಿದೆ. ‘ಸುರ್… ಸುರ್…’ ಎಂದು ಕ್ಷಣಾರ್ಧದಲ್ಲಿ ಮಧು ಹೀರಿ, ಅವಸರವಸರವಾಗಿ ಕೊಂಬೆಯಿಂದ ಕೊಂಬೆಗೆ ಹಾರಿ, ಮತ್ತೆ ಇನ್ನೊಂದು ಹೂವಿನ ಗಿಡಗಳತ್ತ ಪುಸಕ್ಕನೇ ಜಾರಿ ಅಲ್ಲಿಯೂ ಮಧು ಹೀರುವುದರಲ್ಲಿಯೇ ಬ್ಯುಸಿಯಾಗಿಬಿಡುತ್ತವೆ. ಈ ಸೂರಕ್ಕಿಗಳು ಹಗುರವಾದ ಮೈಕಟ್ಟು ಹೊಂದಿರುವುದರಿಂದ ಕೊಂಬೆಯಿಂದ ಕೊಂಬೆಗೆ ನಿರಾಯಾಸವಾಗಿ ಹಾರುತ್ತವೆ. ಹೂವಿನ ತೋಟಗಳಿಗೆ ಬರಲು ಸಮಯ ಪಾಲನೆ ಮಾಡುವ ಈ ಹಕ್ಕಿಗಳು, ಒಂದು ನಿರ್ದಿಷ್ಟ ವೇಳೆಯಲ್ಲಿಯೇ ಮಧು ಹೀರಲು ಸಮಯ ನಿಗದಿ ಮಾಡಿಕೊಳ್ಳುತ್ತವೆ.
ಸೂರಕ್ಕಿಗಾಗಿ ಗಿಡದಲ್ಲಿ ಹೂವು ಬಿಟ್ಟಿರಿ
ಹೂವಿನ ಮಧು ಹೀರುವ ಇವುಗಳು, ಜೇಡ, ಹಣ್ಣುಗಳನ್ನೂ ತಿನ್ನುವುದುಂಟು. ಆದರೂ ಹೆಚ್ಚಾಗಿ ಹೂವಿನ ತೋಟಗಳತ್ತಲೇ ಇವುಗಳ ಕಣ್ಣು. ಇವು ಹೂವುಗಳ ಮಕರಂದವನ್ನು ಕುಸ್ತಿ ಮಾಡಿದಂತೆ ಕುಡಿದು ಹಾರಿ ಹೋಗುವುದೇ ನೋಡಲು ಚೆಂದ. ಮಲೆನಾಡು, ಕರಾವಳಿ, ಬಯಲು ಸೀಮೆಗಳ ತೋಟಗಳಲ್ಲಿಯೂ ಇವು ಸಾಮಾನ್ಯವೆಂಬಂತೆ ಕಾಣಿಸುತ್ತವೆ. ಹೂವನ್ನೇ ತನ್ನ ಬದುಕು ಎಂಬಂತೆ ತಿಳಿದಿರುವ ಸೂರಕ್ಕಿಗಾಗಿಯೇ ಗಿಡದಲ್ಲಿರುವ ಹೂವನ್ನೆಲ್ಲಾ ಕೀಳದೇ ಒಂದಷ್ಟು ಹೂವುಗಳಿಗೆ ಸೂರಕ್ಕಿಯ ಸ್ಪರ್ಶವೂ ಸಿಗುವಂತೆ ಗಿಡದಲ್ಲೇ ಬಿಟ್ಟುಬಿಡೋಣ. ಪ್ರಕೃತಿ ನಮಗೆ ಏನೇನೆಲ್ಲ ಕೊಟ್ಟಿದೆ. ನಾವು ಒಂದಷ್ಟು ಹೂವುಗಳನ್ನು, ಹೂವಿನ ಗಿಡಗಳನ್ನು ಈ ಹೂವಿನ ಹಕ್ಕಿಗಳ ಪಾಲಿಗೆ ಬಿಟ್ಟುಬಿಡೋಣ. ಮಕರಂದ ಹೀರಿದ ಸೂರಕ್ಕಿಯ ಹೊಟ್ಟೆ ತಣ್ಣಗಿರಲಿ ಅಲ್ವಾ? ಸುಮ್ಮನೆ ನಿಮ್ಮ ತೋಟದಲ್ಲಿರುವ ಪುಟ್ಟ ಪುಟ್ಟ ಗಿಡಗಳತ್ತ ಕಣ್ಣು ಹಾಕಿ. ಅಲ್ಲೊಂದು ಸೂರಕ್ಕಿ ಹೂವಿನಿಂದ ಹೂವಿಗೆ ಹಾರಿ ರಸ್ ಹೀರೋದನ್ನು ನೋಡಿ ಖುಷಿಪಡೋಣ.
-ಪ್ರಸಾದ್ ಶೆಣೈ ಆರ್. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.