Horror stories: ನಾ ನಿನ್ನ ಬಿಡಲಾರೆ!
Team Udayavani, Oct 8, 2023, 1:12 PM IST
ಬಾಗಿಲು ತೆರೆದವನು ಬೆಚ್ಚಿದ್ದೇಕೆ?
ಖಗ್ರಾಸ ಸೂರ್ಯಗ್ರಹಣದ ಕಾಲಕ್ಕೆ ಸ್ನಾನಕ್ಕೆಂದು ಹೊರಟು ನಿಂತ ಗಂಡನನ್ನು ತಡೆದು ನಿಲ್ಲಿಸಿದ ಮಡದಿ – “ಗ್ರಹಣದ ಕಾಲಕ್ಕೆ ಸ್ನಾನ ಮಾಡಬಾರ್ದಂತೆ ರೀ, ಜೀವಕ್ಕೆ ಅಪಾಯವಂತೆ. ಯಾಕೆ ಸುಮ್ನೆ ರಿಸ್ಕಾ..?’ ಎಂದಿದ್ದಳು. ನಸುನಕ್ಕ ಗಂಡ- “ಇದನ್ನೆಲ್ಲ ನೀವು ಯಾವಾಗಿಂದ ನಂಬೋಕೇ ಶುರು ಮಾಡಿದ್ರಿ ಲೆಕ್ಚರರ್ ಮೇಡಂ’ ಎಂದು ಹೆಂಡತಿಯನ್ನು ಛೇಡಿಸುತ್ತ ಬಚ್ಚಲು ಮನೆಯ ಬಾಗಿಲು ತೆರೆದ. ಅಲ್ಲಿ ತಲೆಯೊಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಡದಿಯ ಶವ ಅವನಿಗೆ ಕಾಣಿಸಿತ್ತು.
ಒಂದೇ ಏಟು, ಎರಡು ಗುರಿ!
ತಮ್ಮ ಕಳ್ಳದಂಧೆಯ ವಿಚಾರ ಕೆಲಸದಾಕೆಗೆ ಗೊತ್ತಾಯಿತು ಎನ್ನುವ ಆತಂಕ ಆ ದಂಪತಿಗಳಿಗೆ. ಆದರೂ ಅದೇನೂ ಗೊತ್ತಾಗದವರ ಹಾಗೆ ತೋರಿಸಿಕೊಳ್ಳುತ್ತ, ಆಕೆಯನ್ನು ಪ್ರೀತಿಯಿಂದ ಮಾತನಾಡಿಸುವಂತೆ ನಟಿಸುತ್ತ ಊಟದಲ್ಲಿ ವಿಷ ಬೆರೆಸಿ ಆಕೆಗೆ ತಿನ್ನಿಸಿಬಿಟ್ಟರು. ಆಕೆ ತಲೆತಿರುಗಿ ಬಿ¨ªಾಕ್ಷಣ ಚಾಕುವಿನಿಂದ ಗಂಡ ಚುಚ್ಚಿಬಿಟ್ಟ. ತಕ್ಷಣವೇ ಕಣ್ಣು ತೆರೆದ ಆಕೆ ಒಂದೇ ಏಟಿಗೆ ಗಂಡ-ಹೆಂಡತಿಯನ್ನು ಕೊಂದು- “ಸತ್ತವಳನ್ನ ಮತ್ತೂಮ್ಮೆ ಸಾಯಿಸುವುದು ಅಸಾಧ್ಯ’ ಎನ್ನುತ್ತ ಗಾಳಿಯಲ್ಲಿ ಲೀನವಾದಳು.
ಆ ಮನೆಯ ಯಜಮಾನ…
“ಆ ಮುದುಕ ಸಾವಿನ ಮನುಷ್ಯ ರೂಪ ಅನ್ನಿಸುತ್ತಾನೆ. ಎಲ್ಲಿಂದ ಬರ್ತಾನೊ ಗೊತ್ತಿಲ್ಲ, ಪ್ರತಿ ಅಮವಾಸ್ಯೆಯ ರಾತ್ರಿ ಯಾರ ಮನೆಯ ಬಾಗಿಲು ತಟ್ಟುತ್ತಾನೊ, ಆ ಮನೆಯ ಯಜಮಾನ ಸಾಯುವುದು ಶತಃಸಿದ್ಧ’ ಎನ್ನುವ ಊರಿನವರ ಮಾತು ನೆನಪಿಸಿಕೊಂಡವನಿಗೆ ಅಂದು ಅಮವಾಸ್ಯೆ ಎನ್ನುವುದು ನೆನಪಾಗಿತ್ತು. ಮಲಗಬೇಕು ಎಂದುಕೊಂಡಾಗಲೇ ಮನೆಬಾಗಿಲು ತಟ್ಟಿದ್ದ ಸದ್ದು ಕೇಳಿ ಗಾಬರಿಯಲ್ಲಿ ಎದ್ದು ಕುಳಿತಿದ್ದ ಅವನು. ಮರುದಿನ ಬೆಳಗ್ಗೆ ಅವನ ಮನೆಯ ಬಾಗಿಲಲ್ಲಿ ಜನರಾಶಿ! ಕಾರಣ, ಬಾಗಿಲು ಬಡಿಯುತ್ತಿದ್ದ ಮುದುಕ ಅಲ್ಲಿ ಸತ್ತು ಬಿದ್ದಿದ್ದ.
ಅವಳು ಮತ್ತೆ ಬಂದಳು!
ಮಳೆಯಲ್ಲಿ ಕತ್ತಲಿನತ್ತ ದಿಟ್ಟಿಸುತ್ತ ಕುಳಿತಿದ್ದ ಗಂಡ. “ದೀಪ ಹಾಕೋದಿಲ್ವ, ಮುಸ್ಸಂಜೆ ಕತ್ತಲಲ್ಲಿ ಹೀಗ್ಯಾಕೆ ಕೂತಿದ್ದೀರಾ’ ಎಂದ ಹೆಂಡತಿಯೆಡೆಗೆ ನೋಡಿ ನಕ್ಕ ಅವನು- “ಕತ್ತಲು ಕಂಡು ನೀನು ಹೀಗೆ ಬರಲಿ, ಬಂದು ಬಯ್ಯಲಿ ಅಂತಲೇ ಕಣೇ’ ಎನ್ನುತ್ತಾ ಕುಳಿತಲ್ಲಿಂದ ಎದ್ದು ಸ್ವಿಚ್ ಅದುಮಿದ. ಬೆಳಕಿನಲ್ಲಿ ಹೆಂಡತಿ ಕಾಣದಾಗಿದ್ದಳು. ಆಕೆ ತೀರಿಕೊಂಡು ಎರಡು ವರ್ಷವಾಗಿತ್ತು.
ಬಂದ್ಯಾ…ಬಾ..ಬಾ..!
ಆನ್‌ಲೈನ್ ಡಿಲೆವರಿಯ ಹುಡುಗ ಬೇಗ ಬರಲಿಲ್ಲವೆಂದು ಇವನಿಗೆ ಅಸಹನೆ. ರಾತ್ರಿ ಒಂಬತ್ತರೊಳಗೆ ಕೊಡಬೇಕಿದ್ದ ಡಿಲೆವರಿಗೆ ಹುಡುಗ ಬಂದಿದ್ದು ರಾತ್ರಿಯ ಹನ್ನೊಂದಕ್ಕೆ. ಬಾಗಿಲು ಬಡಿದ ಸದ್ದಿಗೆ ಬಾಗಿಲು ತೆರೆದರೆ- “ಸಾರಿ ಸರ್, ತಡವಾಯ್ತು. ತುಂಬ ಡಿಲೆವರಿಗಳಿದ್ದವು. ಈ ಸ್ಥಳ ಸಾಕಷ್ಟು ದೂರ ಬೇರೆ. ದಯವಿಟ್ಟು ದೂರು ಕೊಡಬೇಡಿ’ ಎಂದಿದ್ದ ಹುಡುಗ. ಅರೆತೆರೆದ ದೀಪವಾರಿದ ಬಾಗಿಲಿನಿಂದ ಪಾರ್ಸಲ್‌ನತ್ತ ನೋಡಿದ್ದ ಅವನು- “ಪರವಾಗಿಲ್ಲ ಬಿಡು, ಈಗ ಹಸಿವು ಜಾಸ್ತಿಯಾಗಿದೆ’ ಎಂದವನೇ ಸರಕ್ಕನೇ ಡಿಲಿವರಿಯ ಹುಡುಗನ ಕೈ ಹಿಡಿದು ಒಳಗೆಳೆದು ಬಾಗಿಲು ಹಾಕಿಕೊಂಡ. ಪಾರ್ಸಲ್ ಹುಡುಗನ ಕೂಗು ಕೇಳಿಸಲು ಅಲ್ಲಿ ಇನ್ಯಾವ ಮನೆಯೂ ಇರಲಿಲ್ಲ.
ಚಕಚಕನೆ ಗೋಡೆ ಏರಿ…
ಊರ ಕೊನೆಯ ಮನೆಯ ವಿಳಾಸದತ್ತ ನಡೆದಿದ್ದ ಅವನನ್ನು ಕಂಡ ಊರಿನವರು ಎಚ್ಚರಿಸಿದ್ದರು. ಅದು ದೆವ್ವದ ಮನೆಯೆಂದೂ ಅಲ್ಲಿಗೆ ಹೋದವರ್ಯಾರೂ ತಿರುಗಿ ಬಂದಿಲ್ಲವೆಂದೂ ಹೇಳಿದ್ದರು. ಅವನು ತಾನು ದೆವ್ವ ಭೂತಗಳನ್ನು ನಂಬುವುದಿಲ್ಲ ಎಂದಿದ್ದ. ಜನರ ವಿರೋಧದ ನಡುವೆಯೇ ಸರಿ ರಾತ್ರಿಯ ಹೊತ್ತಿಗೆ ಮನೆಯ ಬಾಗಿಲು ತಲುಪಿ ಬಾಗಿಲು ತೆರೆದಿದ್ದ. ಕಿರ್ರೆಂದು ಸದ್ದು ಮಾಡಿದ ಬಾಗಿಲು ತೆರೆದುಕೊಂಡವನಿಗೆ ಗೋಡೆ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ಆಕೃತಿಯೊಂದು ಕಂಡಿತ್ತು. ಈತ ಒಳಹೊಕ್ಕವನೇ, ಹಲ್ಲಿಯಂತೆ ಗೋಡೆಯನ್ನೇರಿ ತಾನೂ ತಲೆಕೆಳಗಾಗಿ ನೇತಾಡತೊಡಗಿದ್ದ. ಬಾಗಲು ಮತ್ತೆ ಮುಚ್ಚಿಕೊಂಡಿತ್ತು.
-ಗುರುರಾಜ ಕೊಡ್ಕಣಿ, ಯಲ್ಲಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.