ಹೆಂಡತಿಗೆ ಹೆದರುವ ಗಂಡಂದಿರು
Team Udayavani, Sep 17, 2017, 8:55 AM IST
ರಾಯಚೂರಿಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದ ಗೆಳತಿ ಮೊನ್ನೆ ಸಿಕ್ಕಿ ಹೇಳಿದಳು. “”ನೋಡು, ನನ್ನ ಹತ್ತಿರ ಫೋನಲ್ಲಿ ಗಂಟೆಗಟ್ಟಲೆ ಹರಟೆ ಹೊಡೆಯುವ ಕವಿಯೊಬ್ಬರು ಸಮ್ಮೇಳನದಲ್ಲಿ ಭೇಟಿಯಾದರು. ನಾನು ಅವರ ಜೊತೆ ಎಂದಿನ ಸಲುಗೆಯಿಂದ ಮಾತಾಡಲು ಹೋದರೆ ಅಪರಿಚಿತರಂತೆ ವರ್ತಿಸಿ, “ನಮಸ್ಕಾರ, ಚೆನ್ನಾಗಿದ್ದೀರಾ?’ ಎಂದಷ್ಟೇ ಹೇಳಿ ಮಾತು ಮುಗಿಸಿದರು. ನನಗೋ ಆಶ್ಚರ್ಯ. ಫೋನಲ್ಲಿ ಪಟಪಟನೆ ಮಾತಾಡುತ್ತಿದ್ದ ವ್ಯಕ್ತಿ ಇವರೇನಾ? ಎಂಬ ಸಂಶಯ. ಆಮೇಲೆ ಗೊತ್ತಾಯ್ತು. ಅವರೊಂದಿಗೆ ಅವರ ಹೆಂಡತಿಯೂ ಇದ್ದರು ಎಂದು. ಅದಕ್ಕೇ ಅವರು ನನ್ನೊಂದಿಗೆ ಅಷ್ಟು ಗಪ್‌ಚಿಪ್ ಆಗಿ ಇದ್ದದ್ದು.
ಅಲ್ಲಾ, ಈ ಗಂಡಂದಿರು ಹೆಂಡತಿಗೆ ಯಾಕೆ ಇಷ್ಟು ಹೆದರುತ್ತಾರೆ?! “ಅವಳೇನು ಹುಲಿಯೇ, ಕರಡಿಯೇ, ಸಿಂಹವೇ? ಅಥವಾ ಭದ್ರಕಾಳಿಯೇ?’ ಗಂಡನ ಹತ್ರ ಕೇಳಿದೆ, “”ನೀವೂ ನನಗೆ ಹೆದರುತ್ತೀರಾ?” ಅವರು ಹೇಳಿದರು, “”ನಾನೇನು ನಿನಗೆ ಹೆದರುವುದಿಲ್ಲ. ಆದರೆ ಹೆದರಿದಂತೆ ನಟಿಸುತ್ತೇನೆ”. ಕಾರಣ ಏನು? ಕೇಳಿದರೆ ಗಂಡನಲ್ಲಿ ಉತ್ತರವಿಲ್ಲ. ಬಹುಶಃ ಸರಿಯಾದ ಕಾರಣ ಕೊಡಲು ನನ್ನ ಹೆದರಿಕೆಯೋ ಏನೋ! ಎಲ್ಲರ ಮನೆ ದೋಸೆಯೂ…
ಇದು ಕಳೆದ ತಿಂಗಳು ನಾನು ರೈಲಿನಲ್ಲಿ ಮಂಗಳೂರಿನಿಂದ ಕೊಲ್ಕತಾಗೆ ಹೋದಾಗ ನಡೆದ ಘಟನೆ. ನಾನು ಪ್ರಯಾಣಿಸುತ್ತಿದ್ದುದು ತ್ರೀಟಯರ್ ಎ.ಸಿ. ಬೋಗಿಯಲ್ಲಿ. ನನ್ನ ಸೀಟು ಇದ್ದುದು ಮೂರನೆಯ ಬರ್ತ್‌ನಲ್ಲಿ. ನಮ್ಮ ರಾಜ್ಯ ದಾಟಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಕ್ರಮಿಸಿ ಕೊನೆಗೆ ಪಶ್ಚಿಮ ಬಂಗಾಳ ಸೇರುವ ಅದೊಂದು ರೋಚಕ ಪಯಣ. ನನಗೆ ಎಲ್ಲವನ್ನೂ ನೋಡುವ ಕುತೂಹಲ. ಆದರೆ, ಕಿಟಕಿ ಪಕ್ಕ ಅದೇ ಸೀಟು ಹೊಂದಿದ ಒಬ್ಬ ಗಂಡಸು ಕೂತಿದ್ದ. ನಾನು ಮಧ್ಯೆ. ನನ್ನ ಇನ್ನೊಂದು ಬದಿಗೆ ಎರಡನೆಯ ಬರ್ತ್‌ನ ಗಂಡಸು. ನಾನು ಕೂತಲ್ಲಿಂದಲೇ ಕಿಟಕಿಯಿಂದ ಹೊರಗೆ ತನ್ಮಯಳಾಗಿ ನೋಡುತ್ತಿದ್ದೆ. ನೋಡುವ ಭರದಲ್ಲಿ ನನ್ನ ಮೈ ಕಿಟಕಿ ಪಕ್ಕ ಕೂತವನ ಮೈಗೆ ಸೋಕಿತೋ ಏನೋ ನನಗಂತೂ ಗೊತ್ತಾಗಲಿಲ್ಲ. ಆದರೆ, ಆ ಗಂಡಸು “”ಸ್ವಲ್ಪ ಸರಿಯಿರಿ” ಎಂದು ನನಗೆ ಹೇಳಿದ. ಅಲ್ಲಿಯವರೆಗೂ ಆತ ಒಂದೇ ಒಂದು ಮಾತಾಡಿರಲಿಲ್ಲ. ನನಗೆ ಅರ್ಥವಾಗದೆ “ಏನು’ ಎಂಬಂತೆ ಅವನನ್ನೇ ನೋಡಿದೆ.
“”ನಮ್ಮ ಮಧ್ಯೆ ಗ್ಯಾಪ್ ಬೇಕು. ದೂರ ಕುಳಿತುಕೊಳ್ಳಿ” ಎಂದು ಕೈ ಅಗಲಿಸಿ ತೋರಿಸಿ ಹೇಳಿದ. ಜಗತ್ತಿನಲ್ಲಿ ಹೀಗೆ ಹೇಳುವ ಗಂಡೂ ಇದ್ದಾನಲ್ಲ ಅನಿಸಿ ಸಂತೋಷವಾಯಿತು. ಮತ್ತೆ ನೋಡಿದರೆ ನಮ್ಮ ಎದುರು ಸೀಟಿನಲ್ಲಿ ಅವನ ಹೆಂಡತಿ ಕುಳಿತಿದ್ದಳು. ಇಂಥವರನ್ನು ನೋಡಿಯೇ ಇರಬೇಕು “ಮನೇಲಿ ಇಲಿ, ಬೀದೀಲಿ ಹುಲಿ’ ಎಂಬ ಮಾತು ಹುಟ್ಟಿದ್ದು.
ಒಮ್ಮೆ ನಾನು ಗಂಡನೊಂದಿಗೆ ಮಡಿಕೇರಿಯಲ್ಲಿ ಸ್ಟಾರ್ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದೆ. ಎದುರಿನ ಟೇಬಲಿನಲ್ಲಿ ಗಂಡನ ಸ್ನೇಹಿತರೊಬ್ಬರು ತಮ್ಮ ಸಹೋದ್ಯೋಗಿ ಹೆಂಗಸಿನ ಜೊತೆ ಊಟ ಮಾಡುತ್ತಿದ್ದರು. ಅವರಿಗೊಂದು ಫೋನ್ ಬಂತು. ಅವರು ಫೋನಿನಲ್ಲಿ ಹೇಳುತ್ತಿದ್ದರು “”ನಾನು ಊಟಕ್ಕೆ ಬರಲ್ಲ. ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ. ರೂಮಿಗೇ ಕಾಫಿ, ಏನಾದ್ರು ತಿಂಡಿ ತರಿಸಿ ತಿಂತೇನೆ. ಕಾಯಬೇಡ”. ಈ ಮಾತನ್ನು ಅವರು ತಮ್ಮ ಹೆಂಡತಿಗೇ ಹೇಳಿದ್ದೆಂದು ಬೇರೆ ಹೇಳಬೇಕಾಗಿಲ್ಲ ತಾನೆ? ಸಹೋದ್ಯೋಗಿ ಜೊತೆ ಹೊಟೇಲಿನಲ್ಲಿ ಊಟ ಮಾಡುತ್ತಿದ್ದೇನೆ ಎಂದು ಹೇಳಲು ಏಕೆ ಹೆದರಿದರೋ!
ನನ್ನ ಬಂಧುಗಳೊಬ್ಬರು ತಮ್ಮ ಮುದಿ ಅಮ್ಮನಿಗೂ ಹೆಂಡತಿಗೂ ಸರಿಬರುವುದಿಲ್ಲವೆಂದು ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಹೆಂಡತಿಗೆ ಗೊತ್ತಾಗದಂತೆ ವಾರಕ್ಕೊಮ್ಮೆ ಹೋಗಿ ಅಮ್ಮನಿಗೆ ಹಣ್ಣು, ತಿಂಡಿ ಕೊಟ್ಟು ಬರುತ್ತಾರೆ! ಹೆತ್ತ ಅಮ್ಮನನ್ನೇ ದೂರ ಇಡುವಷ್ಟು ಹೆಂಡತಿಗೆ ಹೆದರುವವರಿಗೆ ಏನೆಂದು ಹೇಳುವುದು? ಹೆಂಡತಿ ಕೈಯಿಂದ ಲಟ್ಟಣಿಗೆ ಏಟು ತಿಂದು ತಲೆಯಲ್ಲಿ ಮೊಳೆ ಬರಿಸಿಕೊಳ್ಳುವ ಗಂಡಂದಿರ ಚಿತ್ರವನ್ನು ಸಾಮಾನ್ಯವಾಗಿ ನಾವು ಪತ್ರಿಕೆಗಳಲ್ಲಿ ನೋಡಿರುತ್ತೇವೆ. ಇದು ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೂ ಇಂಥವರ ಕೈಯಲ್ಲಿ ಸಿಕ್ಕಿದ ಗಂಡಂದಿರದು ನಾಯಿಪಾಡೇ ಸರಿ.
ಹೆಂಡತಿಗೆ ಹೆದರುವ ಗಂಡಂದಿರು ಎಂದು ಹೇಳುವಾಗ ಇನ್ನೊಂದು ಘಟನೆ ನೆನಪಾಗುತ್ತದೆ. ನಮ್ಮ ಮನೆಯಿಂದ ಪೇಟೆಗೆ ಹೋಗಬೇಕಾದರೆ ಎಂಟು ಮೈಲು ನಡೆದೇ ಹೋಗಬೇಕು. ಬಸ್ ಸೌಕರ್ಯವಿಲ್ಲ. ಅದೃಷ್ಟವಿದ್ದರೆ ಬಾಡಿಗೆ ಜೀಪು ಸಿಗುತ್ತದೆ. ಒಮ್ಮೆ ಹೀಗೆ ನಾನು ಮನೆಯಿಂದ ಪೇಟೆಗೆ ನಡೆದು ಹೋಗುವಾಗ ಪರಿಚಿತರೊಬ್ಬರ ಬೈಕು ಸಿಕ್ಕಿತು. ಪೇಟೆಯಲ್ಲಿ ಅವರಿಗೆ ಅಂಗಡಿ ಇದೆ. ನಾವು ಅಲ್ಲಿಂದಲೇ ಸಾಮಾನು ಖರೀದಿಸುವುದು. “”ಬರುತ್ತೀರಾ?” ಎಂದು ಕೇಳಿದರು. ನಡೆದು ನಡೆದು ಸುಸ್ತಾಗಿದ್ದ ನಾನು ಇದಕ್ಕೇ ಕಾದಿದ್ದವಳಂತೆ ಬೈಕ್ ಹತ್ತಿದೆ. ಪೇಟೆಗೆ ಸ್ವಲ್ಪ ದೂರ ಇರುವಾಗ ಬೈಕ್ ನಿಲ್ಲಿಸಿ, “”ಇಳಿಯಿರಿ” ಎಂದರು. “”ಇನ್ನೂ ಪೇಟೆ ಬರಲಿಲ್ಲ ಅಲ್ವಾ?” ಎಂದೆ. “”ಈಗಲೇ, ಇಲ್ಲೇ ಇಳಿಯಿರಿ” ಎಂದರು ಚಳಿಯಲ್ಲಿ ನಡುಗುವವರಂತೆ. “”ಏಕೆ? ಏನಾಯ್ತು?” ಕೇಳಿದೆ. “”ಏನಿಲ್ಲ. ಇಂದು ಕೆಲಸದವನು ರಜೆ ಹಾಕಿದ್ದಾನೆ. ಅಂಗಡಿಯಲ್ಲಿ ನನ್ನ ಹೆಂಡತಿ ಕುಳಿತಿದ್ದಾಳೆ. ಅವಳು ಕಂಡರೆ ಕಷ್ಟ” ಎಂದರು. ಅವರ ಹೆದರಿಕೆ ಕಂಡು ನಾನು ಮನದಲ್ಲೇ ನಕ್ಕೆ.
“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ. ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’ ಎಂದು ಹೆಂಡತಿಯ ಗುಣಗಾನ ಮಾಡಿದವರು ಕವಿ ಕೆ. ಎಸ್. ನರಸಿಂಹಸ್ವಾಮಿ ಒಬ್ಬರೇ ಇರಬಹುದು ಅಥವಾ ಹೆಂಡತಿಗೆ ಹೆದರಿ ಅವಳನ್ನು ಪೂಸಿ ಹೊಡೆಯಲು ಈ ಮಾತು ಹೇಳಿದ್ದರೋ ಏನೋ! ಯಾರಿಗೆ ಗೊತ್ತು? ಪತ್ರಿಕೆಯೊಂದರಲ್ಲಿ ಪ್ರಶ್ನೋತ್ತರ ಅಂಕಣಕ್ಕೆ ಒಬ್ಬರು ಒಂದು ಪ್ರಶ್ನೆ ಕೇಳಿದ್ದರು, “”ನನಗೆ ಆಫೀಸಿನಿಂದ ಮನೆಗೆ ಬಂದ ತಕ್ಷಣ ಬಿ.ಪಿ., ಶುಗರ್ ರೈಸ್ ಆಗುತ್ತದೆ. ಏನು ಮಾಡಬೇಕು?” ಉತ್ತರ ಹೀಗಿತ್ತು: “”ಹೆಂಡತಿಯನ್ನು ತವರಿಗೆ ಕಳಿಸಿ”. ಪಾಪ! ಹೆಂಡತಿಗೆ ಹೆದರಿ ಆರೋಗ್ಯವನ್ನೂ ಕಳಕೊಳ್ಳುತ್ತಾರೆಂದರೆ ಆ ಬಡಪಾಯಿ ಗಂಡಸರನ್ನು ದೇವರೇ ಕಾಪಾಡಬೇಕು!
ಹೆಂಡತಿಗೆ ಹೆದರುವುದು ಈಗಿನ ಕಾಲದ ಸಂಗತಿಯೇನೂ ಅಲ್ಲ, ರಾಜರ ಕಾಲದಿಂದಲೂ ಇತ್ತು ಎಂಬುದಕ್ಕೆ ಸಾವಿರ ಕುದುರೆಯ ಸರದಾರನಾದರೂ ಹೆಂಡತಿಗೆ ಗುಲಾಮ ಎಂಬ ಮಾತೇ ಸಾಕ್ಷಿ. ಮಾತ್ರವಲ್ಲ ಪುರಾಣ ಕಾಲದಲ್ಲೂ ಇತ್ತು. ಶ್ರೀಕೃಷ್ಣ ಪರಮಾತ್ಮ ತನ್ನ ಹೆಂಡತಿ ಸತ್ಯಭಾಮೆಗೆ ಹೆದರುವ ಕತೆ ಮಹಾಭಾರತದಲ್ಲಿ ಬರುತ್ತದೆ. “ಅಮ್ಮಾವ್ರ ಗಂಡ’ ಎಂಬುದು ಹೆಂಡತಿ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ಗಂಡಸಿಗೆ ಆಧುನಿಕ ಕಾಲದಲ್ಲಿ ಇಟ್ಟ ಹೆಸರು.
ಬುದ್ಧ ಕಿಸಾಗೋತಮಿಗೆ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತಾ’ ಎಂದು ಹೇಳುವ ಬದಲು “ಹೆಂಡತಿಗೆ ಹೆದರದ ಗಂಡಿನ ಮನೆಯಿಂದ ಸಾಸಿವೆ ಕಾಳು ತಾ’ ಎಂದಿದ್ದರೂ ಸಾಸಿವೆ ಕಾಳು ಸಿಗುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಹೆಂಡತಿಗೆ ಗಂಡಂದಿರು ಯಾಕೆ ಹೆದರುತ್ತಾರೆ? ಎಂಬುದು ಸಂಶೋಧನೆಗೆ ಯೋಗ್ಯವಾದ ವಿಷಯ. ಏನಂತೀರಿ?
– ಸಹನಾ ಕಾಂತಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.