ಚಿತ್ರವಾದ ಅಪ್ಸರೆ ವಿಯೆಟ್ನಾಮಿನ ಕತೆ
Team Udayavani, Oct 27, 2019, 4:58 AM IST
ವುಮಂಗ್ ಎಂಬ ಶ್ರೇಷ್ಠ ಚಿತ್ರಕಾರನಿದ್ದ. ಅವನು ಯಾವುದೇ ಚಿತ್ರವನ್ನು ಬರೆದರೂ ಅದು ಜೀವ ಪಡೆದು ಸಂಚರಿಸುತ್ತದೆ ಎಂದು ಜನ ಹೊಗಳುತ್ತಿದ್ದರು. ಅವನಿಗೆ ಅಪಂಗ್ ಎಂಬ ಮಗನಿದ್ದ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಮಗನಿಗೆ ತಾನೇ ತಾಯಿಯೂ ಆಗಿ ವುಮಂಗ್ ಅವನನ್ನು ಬೆಳೆಸಿದ್ದ. ತಂದೆ ಸಂಪಾದಿಸಿಟ್ಟ ಸಂಪತ್ತು ಸಾಕಷ್ಟು ಇದ್ದ ಕಾರಣ ಅಪಂಗ್ ಯಾವ ವಿದ್ಯೆಯನ್ನೂ ಕಲಿಯಲು ಹೋಗಲಿಲ್ಲ. ತಂದೆಯ ಸಂಪಾದನೆಯನ್ನು ಖರ್ಚು ಮಾಡುತ್ತ ಸುಖವಾಗಿ ಇದ್ದ. ಹೀಗಿರಲು ಒಂದು ದಿನ ವುಮಂಗ್ ತೀರಿಕೊಂಡ. ಮಗನಿಗೆ ಯಾವ ಕೊರತೆಯೂ ಅರಿವಾಗದಂತೆ ಅವನು ಬೆಳೆಸಿದ್ದ ಕಾರಣ ತಂದೆಯ ಮರಣದ ಬಳಿಕ ಅಪಂಗ್‌ನಿಗೆ ಒಂಟಿತನ ಕಾಡಿತು. ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಒಂದು ಕೆಲಸವೂ ಅವನಿಗೆ ಗೊತ್ತಿರಲಿಲ್ಲ. ಇದರಿಂದ ಅವನು ಊಟವನ್ನೂ ಮಾಡದೆ ಉಪವಾಸವಿರಬೇಕಾಯಿತು.
ಆಗ ಗೆಳೆಯರು, “”ನೀನು ಮದುವೆ ಮಾಡಿಕೊಂಡು ಒಬ್ಬ ಯುವತಿಯನ್ನು ಮನೆಗೆ ಕರೆತಂದರೆ ಅವಳು ಎಲ್ಲ ಕೆಲಸಗಳನ್ನೂ ಮಾಡಿಕೊಂಡು ನಿನ್ನನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾಳೆ” ಎಂದು ಸಲಹೆ ನೀಡಿದರು. ಅವರ ಮಾತಿನಂತೆ ಅಪಂಗ್ ಮದುವೆ ಮಾಡಿಕೊಳ್ಳಲು ಮುಂದಾದರೆ ಒಬ್ಬ ಯುವತಿ ಕೂಡ ಅವನನ್ನು ಇಷ್ಟಪಡಲಿಲ್ಲ. “”ನಿನಗೆ ವಿದ್ಯೆ ಗೊತ್ತಿಲ್ಲ. ತಂದೆ ಬೇಯಿಸಿ ಹಾಕಿದುದನ್ನಷ್ಟೇ ತಿಂದು ಬದುಕುತ್ತಿದ್ದ ನಿನ್ನ ಕೈಹಿಡಿದರೆ ಮನೆಗೆಲಸ ಮಾತ್ರ ಅಲ್ಲ, ಹೊರಗೆ ದುಡಿದು ತಂದು ನಾವೇ ನಿನ್ನನ್ನು ಸಾಕಬೇಕಾದೀತು” ಎಂದು ಹೇಳಿ ನಿರಾಕರಿಸಿದರು.
ಅಪಂಗ್ ಇದೇ ಚಿಂತೆಯಲ್ಲಿ ಬೀದಿಗಳಲ್ಲಿ ಅಲೆಯತೊಡಗಿದ. ಒಂದು ದಿನ ದೇವಮಂದಿರದ ಬಳಿ ಕುಳಿತಿದ್ದ ವೃದ್ಧ ಭಿಕ್ಷುಕಿಗೆ ತಾನೇ ಮಾಡಿತಂದ ರೊಟ್ಟಿಯನ್ನು ನೀಡಿದ. ದೇವರಿಗೆ ಕೈಜೋಡಿಸಿ, “”ನಾನು ಮಾಡಿದ ಈ ರೊಟ್ಟಿಯನ್ನು ಇವಳಿಗೆ ನೀಡುತ್ತಿದ್ದೇನೆ. ಅದನ್ನು ತಿನ್ನಲಾಗದೆ ಅವಳು ನಿನಗೆ ಶಪಿಸುತ್ತಾಳೆ. ಇದರಿಂದ ನೀನು ನೊಂದು ನನಗೆ ಮನೆಯಲ್ಲಿ ಬೇಕಾದ ಕೆಲಸ ಮಾಡಿ ಕೊಡಲು ಓರ್ವ ಸಂಗಾತಿಯನ್ನು ಕಳುಹಿಸಿ ಕೊಡುವೆಯೆಂದು ನಾನು ನಂಬುತ್ತೇನೆ” ಎಂದು ಪ್ರಾರ್ಥಿಸಿದ.
ಅಂದು ರಾತ್ರೆ ಮಲಗಿಕೊಂಡ ಅಪಂಗ್ ಬೆಳಗ್ಗೆ ಕಣ್ತೆರೆದಾಗ ಒಂದು ಅಚ್ಚರಿ ಅವನಿಗಾಗಿ ಕಾದಿತ್ತು. ಹಾಸಿಗೆಯ ಬಳಿ ಮುಖ ತೊಳೆಯಲು ಪನ್ನೀರಿನ ಹೂಜಿ ಸಿದ್ಧವಾಗಿತ್ತು. ಆಹಾರ ಪಾನೀಯಗಳು ತುಂಬಿದ ಪಾತ್ರೆಗಳಿದ್ದವು. ಅದರ ಕಂಪು ಅವನ ಹಸಿವನ್ನು ಕೆರಳಿಸುವಂತಿತ್ತು. ಸ್ನಾನ ಮಾಡಲು ಬಿಸಿನೀರು ಕುದಿಯುತ್ತಿತ್ತು. ಅವನ ಉಡುಪುಗಳು ಚೆನ್ನಾಗಿ ಒಗೆದು ಒಣಗಿಸಿ ನೀಟಾಗಿ ಜೋಡಿಸಿರುವುದು ಕಾಣಿಸಿತು. ಮುಚ್ಚಿದ ಬಾಗಿಲನ್ನು ತೆರೆದ ಲಕ್ಷಣಗಳಿರಲಿಲ್ಲ. ಯಾರೂ ಒಳಗೆ ಬಂದು ಇದನ್ನೆಲ್ಲ ಮಾಡಿರುವುದು ಗೋಚರಿ ಸಲಿಲ್ಲ. ಮನೆಯೊಳಗೆ ಬೇರೊಬ್ಬರು ಇರುವುದೂ ಗೊತ್ತಾಗಲಿಲ್ಲ. ಅಪಂಗ್ ಕುತೂಹಲದಿಂದಲೇ ಅಂದು ಮೃಷ್ಟಾನ್ನ ಊಟ ಮಾಡಿದ.
ಹೀಗೆ ಒಂದು ದಿನ ಮಾತ್ರ ನಡೆಯಲಿಲ್ಲ. ಕಣ್ಣಿಗೆ ಗೋಚರಿಸದ ಯಾರೋ ಒಳಗೆ ಬಂದು ದಿನವೂ ರಾತ್ರೆ ಬೆಳಗಾಗುವಾಗ ತನಗೆ ಬೇಕಾದುದನ್ನು ಸಿದ್ಧಪಡಿಸಿಡುವುದನ್ನು ಅಪಂಗ್ ನೋಡಿದ. ಬಹುಶಃ ದೇವರಿಗೆ ತನ್ನ ಮೊರೆ ತಲುಪಿರ ಬಹುದು, ಅವನು ಯಾರನ್ನೋ ಕಳುಹಿಸಿರಬಹುದು. ಅವರು ಯಾರೆಂದು ತಿಳಿದು ಅವರಿಗೊಂದು ಕೃತಜ್ಞತೆ ಸಲ್ಲಿಸಬೇಕು ಎಂದು ನಿರ್ಧರಿಸಿದ. ಒಂದು ದಿನ ರಾತ್ರೆ ನಿದ್ರೆ ಬಂದಂತೆ ನಟಿಸುತ್ತ ಮಲಗಿಕೊಂಡ. ಬೆಳಗಿನ ಜಾವ ಇದ್ದಕ್ಕಿದ್ದಂತೆ ಇಡೀ ಮನೆ ಬೆಳಕಾಯಿತು. ದಿವ್ಯವಾದ ವಸ್ತ್ರಾಭರಣಗಳನ್ನು ಧರಿಸಿದ್ದ ಸುಂದರ ತರುಣಿಯೊಬ್ಬಳು ಮನೆಯೊಳಗೆ ಓಡಾಡುತ್ತ ಎಲ್ಲ ಕೆಲಸಗಳನ್ನು ಮಾಡುತ್ತಿರುವುದನ್ನು ಅಪಂಗ್ ನೋಡಿದ. ಅವಳು ಊಟ, ತಿಂಡಿಯನ್ನಿಡಲು ತನ್ನ ಹಾಸಿಗೆಯ ಬಳಿಗೆ ಬಂದಾಗ ತಟಕ್ಕನೆ ಅವಳ ಕೈಯನ್ನು ಹಿಡಿದು ನಿಲ್ಲಿಸಿದ. “”ಯಾರು ನೀನು, ಬಹು ದಿನಗಳಿಂದ ಬಂದು ನನಗೆ ಬೇಕಾದ ಸೇವೆ ಸಲ್ಲಿಸಿ ಹೋಗುತ್ತಿರುವ ಉದ್ದೇಶವೇನು?” ಎಂದು ಕೇಳಿದ.
ತರುಣಿಯು ಗೋಡೆಯಲ್ಲಿ ತೂಗುತ್ತಿದ್ದ ಚಿತ್ರದ ಖಾಲಿ ಚೌಕಟ್ಟನ್ನು ಅವನಿಗೆ ತೋರಿಸಿದಳು. “”ನಾನು ಆ ಚೌಕಟ್ಟಿನಲ್ಲಿ ನೆಲೆಸಿದ್ದ ಚಿತ್ರದೊಳಗಿದ್ದ ಅಪ್ಸರೆ. ನನ್ನನ್ನು ಇಷ್ಟು ಸುಂದರವಾಗಿ ಚಿತ್ರಿಸಿದವರು ನಿನ್ನ ತಂದೆ. ಅದರ ಋಣ ತೀರಿಸಲು ದೇವರು ನನ್ನನ್ನು ಹೀಗೆ ಬಂದು ನಿನಗೆ ಸೇವೆ ಸಲ್ಲಿಸಲು ಆದೇಶಿಸಿದ್ದಾನೆ. ನನ್ನ ಕೆಲಸಗಳು ಮುಗಿದ ಕೂಡಲೇ ನಾನು ಮರಳಿ ಚೌಕಟ್ಟನ್ನು ಸೇರಿ ಚಿತ್ರವಾಗುತ್ತೇನೆ” ಎಂದಳು. ಅಪಂಗ್, “”ನಿನ್ನಂತಹ ಸುಂದರಿ ಚಿತ್ರವಾಗಿ ಯಾಕಿರಬೇಕು? ನನ್ನ ಕೈಹಿಡಿದು ಸದಾ ನನಗೆ ಜೊತೆಯಾಗಿರು” ಎಂದು ಬೇಡಿಕೊಂಡ.
ಆದರೆ ತರುಣಿಯು ಅವನ ಮಾತಿಗೆ ಒಪ್ಪಲಿಲ್ಲ. “”ನೀನು ಮನುಷ್ಯ. ನಾನು ದೇವಲೋಕದ ಅಪ್ಸರೆ. ನಮ್ಮ ನಡುವೆ ಯಾವಾಗಲೂ ಅಂತಹ ಬಾಂಧವ್ಯ ಏರ್ಪಡಲು ಸಾಧ್ಯವಿಲ್ಲ” ಎಂದಳು. ಅಪಂಗ್ ಬಿಡಲಿಲ್ಲ. “”ಯಾಕೆ ಬಾಂಧವ್ಯ ಸಾಧ್ಯವಿಲ್ಲ? ನೀನು ವಾಸವಾಗಿರುವ ಚೌಕಟ್ಟನ್ನು ಅಲ್ಲಿಂದ ತೆಗೆದು ಭದ್ರವಾಗಿ ಒಳಗಿರಿಸುತ್ತೇನೆ. ನೀನು ಮರಳಿ ಚೌಕಟ್ಟು ಸೇರಲು ಅವಕಾಶ ನೀಡುವುದಿಲ್ಲ. ನನ್ನ ಹೆಂಡತಿಯಾಗಲೇಬೇಕು” ಎಂದು ಹೇಳಿ ಚಿತ್ರದ ಚೌಕಟ್ಟನ್ನು ತೆಗೆದು ರಹಸ್ಯ ಸ್ಥಳದಲ್ಲಿರಿಸಿದ. ವಿಧಿಯಲ್ಲದೆ ಅಪ್ಸರೆಯು ಅವನನ್ನು ವಿವಾಹವಾಗಲು ಒಪ್ಪಿಕೊಂಡಳು. ಅವನ ಜೊತೆಗೆ ಸಂಸಾರ ನಡೆಸತೊಡಗಿದಳು. ಅವರಿಗೆ ಮೂವರು ಮಕ್ಕಳು ಜನಿಸಿದರು. ಮಕ್ಕಳು ಬೆಳೆದು ದೊಡ್ಡವರಾದರೂ ಅಪ್ಸರೆ ಮೊದಲಿನ ಹಾಗೆಯೇ ಸೌಂದರ್ಯ ವತಿಯಾಗಿಯೇ ಇರುವುದನ್ನು ಅವರು ಗಮನಿಸಿದರು.
ಒಂದು ದಿನ ಮಕ್ಕಳು ಅಪ್ಸರೆ ಯೊಂದಿಗೆ, “”ಅಮ್ಮಾ, ನಾವು ಯುವಕರಾಗಿ ಬೆಳೆದು ನಿಂತಿದ್ದೇವೆ. ಆದರೆ ನೀನು ಮಾತ್ರ ಇನ್ನೂ ಚಿಕ್ಕ ವಯಸ್ಸಿನವಳಂತೆ ಕಾಣಿಸುತ್ತಿರುವೆ. ನಿನಗೆ ವಯಸ್ಸು ಹೆಚ್ಚಾಗುವಂತೆ ತೋರುವುದಿಲ್ಲ. ಇದರಲ್ಲಿ ಏನಾದರೂ ರಹಸ್ಯವಿದೆಯೇ?” ಎಂದು ಕೇಳಿದರು. ಅಪ್ಸರೆಯು ಮುಗುಳ್ನಗುತ್ತ, “”ಹೌದು ಮಕ್ಕಳೇ, ಇದರಲ್ಲಿ ರಹಸ್ಯವಿದೆ. ನಾನು ಈ ಲೋಕದ ವಳಲ್ಲ. ದೇವಲೋಕದಿಂದ ಭೂಮಿಗಿಳಿದವಳು. ನನ್ನನ್ನು ಚಿತ್ರವಾಗಿ ರೂಪಿಸಿ, ಚೌಕಟ್ಟಿನಲ್ಲಿ ಬಂಧಿಸಿಟ್ಟವರು ನಿಮ್ಮ ಅಪ್ಪ ಉಮಂಗ್. ಈಗಲೂ ಆ ಚೌಕಟ್ಟು ಕಣ್ಣಿಗೆ ಬಿದ್ದರೆ ನಾನು ಅದರೊಳಗೆ ಚಿತ್ರವಾಗಿ ಕುಳಿತುಬಿಡುತ್ತೇನೆ. ನನ್ನ ಮಾತು ನಿಜವೋ ಸುಳ್ಳೋ ಎಂಬುದನ್ನು ನಿಮಗೆ ತೋರಿಸಿಕೊಡಬಲ್ಲೆ” ಎಂದು ಹೇಳಿದಳು.
ಮಕ್ಕಳಿಗೆ ತಾಯಿಯ ಮಾತಿನಲ್ಲಿ ನಂಬಿಕೆಯುಂಟಾಗಲಿಲ್ಲ. “”ಅಮ್ಮ, ನೀನು ಹೇಳುತ್ತಿರುವುದು ಸುಳ್ಳು ಕತೆ. ಚಿತ್ರವೊಂದು ಚೌಕಟ್ಟಿನಿಂದ ಹೊರಗೆ ಬರುವುದು, ಮನುಷ್ಯನೊಬ್ಬನಿಗೆ ಹೆಂಡತಿಯಾಗುವುದು ಇದೆಲ್ಲ ನಂಬುವ ವಿಷಯವೇ ಅಲ್ಲ” ಎಂದು ಹೇಳಿದರು. ಅಪ್ಸರೆಯು ನಡೆದ ಕತೆಯನ್ನು ಸ್ವಲ್ಪವೂ ಮುಚ್ಚಿಡದೆ ಹೇಳಿದಳು. “”ನಂಬಿಕೆ ಯಾಕೆ ಬರುವುದಿಲ್ಲ? ಬೇಕಿದ್ದರೆ ನಿಮ್ಮ ತಂದೆಯನ್ನು ಕೇಳಿ. ಅವರು ಎಲ್ಲೋ ಅಡಗಿಸಿಟ್ಟಿರುವ ಚೌಕಟ್ಟನ್ನು ಹುಡುಕಿತಂದು ನನ್ನ ಮುಂದೆ ಇರಿಸಿನೋಡಿ. ನನ್ನ ಮಾತಿನಲ್ಲಿ ಸುಳ್ಳಿದೆಯೋ ಸತ್ಯವಿದೆಯೋ ನೀವೇ ಪರೀಕ್ಷಿಸಬಹುದು” ಎಂದಳು.
ಮಕ್ಕಳು ತಂದೆಯ ಬಳಿಗೆ ಹೋದರು. “”ಅಪ್ಪ, ನಾವೊಂದು ಕತೆ ಹೇಳುತ್ತೇವೆ. ಇದು ಸತ್ಯವೋ ಸುಳ್ಳೋ ಎಂಬುದನ್ನು ನೀವೇ ನಿರ್ಧರಿಸಿ ಹೇಳಬೇಕು” ಎಂದರು. ಅಪಂಗ್, “”ಮೊದಲು ಕತೆ ಹೇಳಿ. ಬಳಿಕ ನನ್ನ ತೀರ್ಮಾನ ಹೇಳುತ್ತೇನೆ” ಎಂದು ಹೇಳಿದ. ಮಕ್ಕಳು, “”ಒಬ್ಬ ದಿಕ್ಕಿಲ್ಲದ ಯುವಕನಿದ್ದನಂತೆ. ಅವನಿಗೆ ಮನೆಯಲ್ಲಿ ಅಡುಗೆ ಮಾಡಿ ಬಡಿಸಲು ಯಾರೂ ಇರಲಿಲ್ಲವಂತೆ. ಆಗ ಅವನು ದೇವರಲ್ಲಿ ಮೊರೆಯಿಟ್ಟನಂತೆ. ಬಳಿಕ ಒಂದು ಪವಾಡ ನಡೆಯಿತಂತೆ. ರಾತ್ರೆ ಅವನು ನಿದ್ರಿಸಿರುವಾಗ ಒಬ್ಬಳು ಸುಂದರಿಯಾದ ತರುಣಿ ಮನೆಯೊಳಗೆ ಬಂದು ಅಡುಗೆ ಮಾಡಿ, ಬಟ್ಟೆ ತೊಳೆದು, ಬೀಸಿ ನೀರು ಕಾಯಿಸಿಟ್ಟು ಹೋಗುತ್ತಿದ್ದಳಂತೆ. ಅವಳು ಯಾರೆಂದು ಪರೀಕ್ಷಿಸಿದಾಗ ಚಿತ್ರದೊಳಗಿದ್ದ ಅಪ್ಸರೆಯೊಬ್ಬಳು ಕೆಳಗಿಳಿದು ಬಂದು ಈ ಕೆಲಸ ಮಾಡುತ್ತಿದ್ದಳಂತೆ. ಅವಳನ್ನು ಯುವಕ ಕಂಡುಹಿಡಿದು ಮದುವೆಯಾಗಲು ಕೋರಿದಾಗ ಒಪ್ಪಲಿಲ್ಲ. ಆಗ ಅವನು ಅವಳು ಅಡಗಿದ್ದ ಚೌಕಟ್ಟನ್ನು ಮರೆ ಮಾಡಿದ. ಬಳಿಕ ನಿರ್ವಾಹವಿಲ್ಲದೆ ಅವಳು ಅವನ ಕೈಹಿಡಿದಳಂತೆ. ಈ ಕತೆ ನಿಜವೆ?” ಎಂದು ಕೇಳಿದರು.
ಅಪಂಗ್ ಮುಗುಳ್ನಕ್ಕ. “”ಖಂಡಿತ ಇದು ಸತ್ಯವಾದ ಕತೆ. ನಮ್ಮದೇ ಕತೆ. ನೋಡಿ, ನೆಲಮಾಳಿಗೆಯಲ್ಲಿ ಒಂದು ಪೆಟ್ಟಿಗೆ ಯೊಳಗೆ ಇನ್ನೂ ಖಾಲಿಯಾದ ಚೌಕಟ್ಟು ಹಾಗೆಯೇ ಇದೆ. ಅದನ್ನು ನೋಡಿದರೆ ಕತೆ ಸತ್ಯವೆಂದು ನಿಮಗೆ ಅರಿವಾಗುತ್ತದೆ” ಎಂದು ಹೇಳಿದ.
ತಂದೆ ಮನೆಯಲ್ಲಿಲ್ಲದ ವೇಳೆಯಲ್ಲಿ ಮಕ್ಕಳು ನೆಲಮಾಳಿಗೆ ಯಲ್ಲಿ ಹುಡುಕಿ ಚಿತ್ರದ ಚೌಕಟ್ಟನ್ನು ಹೊರಗೆ ತಂದರು. ಅದನ್ನು ತಾಯಿಗೆ ತಂದುಕೊಟ್ಟು, “”ನೀನು ಚಿತ್ರವಾಗಿ ಇದೇ ಚೌಕಟ್ಟಿ ನಲ್ಲಿ ನೆಲೆಸಿದ್ದೆಯೆಂದು ಹೇಳುವೆಯಲ್ಲವೆ? ಇದರೊಳಗೆ ಹೇಗೆ ಇರುವೆಯೆಂಬುದನ್ನು ನಮಗೆ ನೋಡಬೇಕೆನಿಸುತ್ತಿದೆ. ಒಂದು ಸಲ ತೋರಿಸುತ್ತೀಯಾ?” ಎಂದು ಕೇಳಿದರು. ಅಪ್ಸರೆ ಸಂತೋಷದಿಂದ ನಕ್ಕಳು. “”ಮಕ್ಕಳೇ, ನಿಮಗೆ ಧನ್ಯವಾದ. ಇಷ್ಟರ ತನಕ ಇಷ್ಟವಿಲ್ಲದಿದ್ದರೂ ಭೂಮಿಯಲ್ಲಿ ಅನಿವಾರ್ಯ ವಾಗಿ ನೆಲೆಸಿದ್ದ ನನಗೆ ಮೊದಲಿನ ಲೋಕ ಸೇರಲು ನೀವು ನೆರವಾದಿರಿ” ಎಂದು ಹೇಳುತ್ತ ಚೌಕಟ್ಟಿನೊಳಗೆ ಚಿತ್ರವಾಗಿ ಸೇರಿಕೊಂಡಳು. ಮತ್ತೆ ಎಂದಿಗೂ ಹೊರಗೆ ಬರಲಿಲ್ಲ. ಅಪಂಗ್ ಮರಳಿದಾಗ ಈ ಅಚಾತುರ್ಯ ನಡೆದೇ ಹೋಗಿತ್ತು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.