Importance of rivers: ಬರದೇ ಇದ್ದೀತೇ ಬರಗಾಲದ ವರ
Team Udayavani, Sep 24, 2023, 4:47 PM IST
ರಾಜ್ಯವನ್ನು ಒಂದು ಕಡೆ ಬರದ ಛಾಯೆ ಆವರಿಸಿಕೊಂಡಿದೆ. ಇನ್ನೊಂದು ಕಡೆ ನದಿಗಳು ಬತ್ತಿಹೋಗುತ್ತಿವೆ. ನೀರಿಗಾಗಿ ಹಾಹಾಕಾರ ಶುರುವಾಗುವ ಲಕ್ಷಣಗಳು ದಟ್ಟವಾಗಿರುವ ಈ ಸಂದರ್ಭದಲ್ಲಿ, ನದಿಗಳ ಮಹತ್ವ ಮತ್ತು ಅವನ್ನು ಉಳಿಸಿಕೊಳ್ಳಲು ನಾವೆಲ್ಲರೂ ವಹಿಸಬೇಕಾಗಿರುವ ಪಾತ್ರದ ಬಗ್ಗೆ ವಿವರಿಸುವ ಬರಹ…
ನದಿಗಳೆಂದರೆ ಅದು ಕೇವಲ ನೀರಿನ ಹರಿವು ಅಲ್ಲ, ಈ ನಾಡಿನ ಭದ್ರತೆಯ ನರನಾಡಿಗಳು, ಜೀವನಾಡಿಗಳು. ನದಿಗಳಿಗೆ ಜಾತಿ, ಮತ, ಪಂಗಡ ಎಂಬುದೇನಿಲ್ಲ. ಅದು ದೇವಸ್ಥಾನದ ಪಕ್ಕದಲ್ಲಿ, ಮಸೀದಿಯ ಪಕ್ಕದಲ್ಲಿ, ಚರ್ಚ್ ಪಕ್ಕದಲ್ಲಿ ಹರಿಯುತ್ತದೆ. ಆದರೆ ಇಂದು ನದಿಗಳ ಫಲಾನುಭವಿಗಳೇ ಆದವರು, ಪೂಜ್ಯ ಭಾವನೆಯಿಂದ ನೋಡಬೇಕಾದ ನದಿಗಳಿಗೆ ತ್ಯಾಜ್ಯ ಎಸೆದು ಬಿಡುತ್ತಾರೆ. ನದಿಗಳ ನಡುವೆ ವ್ಯಾಜ್ಯಗಳನ್ನು ಸೃಷ್ಟಿಸುತ್ತಾರೆ. ( ಕಾವೇರಿ, ಮುನ್ನ ಪೆರಿಯಾರ್, ಮಹದಾಯಿ, ನರ್ಮದಾ, ಕೃಷ್ಣಾ ) ಇಂದು ಮಹಾನಗರಗಳಲ್ಲಿ ಟ್ಯಾಪ್ ತಿರುಗಿಸಿದಾಗ ನೀರು ಬರುತ್ತದೆ. ಆದರೆ ಈ ನೀರಿನ ಇನ್ನೊಂದು ಭಾಗವನ್ನು ಕಂಡರೆ…?! ಅಂದರೆ ಕುಡಿಯುವ ನೀರಿನ ಹೊಳೆಗಳನ್ನು ನಾವೇ ಮಲಿನಗೊಳಿಸಿ, ಹೊಲಸು ನೀರನ್ನು ನಾವೇ ಬಳಸಿಕೊಳ್ಳುವುದೆಂದರೆ ಮನುಜ ಸಾಮ್ರಾಜ್ಯ ಎಷ್ಟು ಬುದ್ಧಿವಂತ ಎಂದು ಯೋಚಿಸಬೇಕಾಗುತ್ತದೆ.
ಅನಾಹುತಗಳಿಗೆ ಹಲವು ಕಾರಣ
ಪಶ್ಚಿಮ ಘಟ್ಟದ ಅಡವಿಯ ಕಣಿವೆಯಲ್ಲಿ ಉಗಮ ಆಗುವ ನದಿ ಸುರಿಯುವಲ್ಲಿ ಸುರಿದು, ಹರಿಯುವಲ್ಲಿ ಹರಿದು ಕೃಷಿ, ಕುಡಿಯುವ ನೀರಿನ ಬಳಕೆಯಾಗಿ ಸಮುದ್ರ ಸೇರುವುದು ನೈಸರ್ಗಿಕ ನಿಯಮ. ಈ ನಿಯಮದ ಹಕ್ಕು ಸ್ವಾಮ್ಯವನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದರ ಹಕ್ಕನ್ನು ಕಸಿದುಕೊಂಡರೆ ಒಂದು ನೈಸರ್ಗಿಕ ದುರಂತ ಗ್ಯಾರಂಟಿ. ಇಂದು ಆಗುತ್ತಿರುವ ಪ್ರಾಕೃತಿಕ ದುರಂತಗಳಿಗೆ ಇದುವೇ ಕಾರಣ. ಯಾವಾಗ ನಾವು ಪಶ್ಚಿಮಘಟ್ಟದ ಸೂಕ್ಷ್ಮಜೀವಸಂಕುಲವನ್ನು, ಅಲ್ಲಿಂದ ಹರಿದು ಬರುವ ನದಿಗಳನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ಕಂಡು, “ಅಭಿವೃದ್ಧಿ’ ಎಂಬ ನೆಪದಲ್ಲಿ ನದಿಗಳನ್ನು, ಪಶ್ಚಿಮ ಘಟ್ಟವನ್ನು ಛಿದ್ರಗೊಳಿಸಿ ಅಸಂಬದ್ಧ, ಅವೈಜ್ಞಾನಿಕ ಯೋಜನೆಗಳನ್ನುಆರಂಭ ಮಾಡಿದೆವೋ ಅಲ್ಲಿಂದ ಪ್ರಕೃತಿ ಕೂಡಾ ತನ್ನ ಪ್ರತೀಕಾರವನ್ನು ತೀರಿಸುತ್ತಾ ಬಂದಿತು. ಮಳೆಗಾಲದಲ್ಲಿ ಜಲ ಪ್ರವಾಹ, ಜಲಸ್ಫೋಟ, ಭೂಕುಸಿತ, ಮಳೆ ಮುಗಿದ ನಂತರ ಬರಗಾಲ… ಮುಂತಾದ ಪ್ರಾಕೃತಿಕ ದುರಂತಗಳಿಗೆ ತುತ್ತಾಗುವಂತಾಯಿತು. ಈ ವರ್ಷದ ಮಳೆಗಾಲ ವನ್ನೇ ನೋಡಿದರೆ, ಮುಂದಿನ ದಿನಗಳಲ್ಲಿ ಯಾವ ರೀತಿಯ ಬರಗಾಲವನ್ನು ಅನುಭವಿಸಬೇಕಾದೀತು ಎಂಬ ಆತಂಕವೂ ನಮ್ಮೆದುರು ಇದೆ.
ಪ್ರಶ್ನೆಗಳಿವೆ, ಉತ್ತರವಿಲ್ಲ…
ಯಾಕೆ ಮಳೆ ಕಡಿಮೆಯಾಗುತ್ತಿದೆ? ಯಾಕೆ ಈ ಸಮೃದ್ಧ ನಾಡು ಬರದ ನಾಡಾಗುತ್ತಿದೆ? ಎಂದು ಯೋಚಿಸಿದರೆ ಇದೆಲ್ಲಕ್ಕೂ ನಾವೇ ಕಾರಣ ಅನ್ನಿಸುತ್ತದೆ. ನಮ್ಮಸುಖದ ಬದುಕಿಗೆ ಎಷ್ಟೊಂದು ನದಿ, ತೊರೆ, ಝರಿಗಳನ್ನು ಮಲಿನ ಮಾಡಿಬಿಟ್ಟಿದ್ದೇವೆ, ಎಷ್ಟು ನದೀ ಮೂಲಗಳ ಅಡವಿಯನ್ನು ಕತ್ತರಿಸಿಬಿಟ್ಟಿದ್ದೇವೆ. ಹರಿಯಬೇಕಾಗಿರುವ ಎಷ್ಟೊಂದು ನದಿಗಳನ್ನು ಆಣೆಕಟ್ಟು ಕಟ್ಟಿ ತಡೆ ಹಿಡಿದಿದ್ದೇವೆ. ತ್ಯಾಜ್ಯ, ಕಸ ಎಸೆದು ಎಷ್ಟೊಂದು ನೀರನ್ನು ವಿಷಮಯ ಮಾಡಿದ್ದೇವೆ. ಇಷ್ಟೆಲ್ಲಾ ಆದ ಮೇಲಾದರೂ ಪ್ರಕೃತಿ ಸಂರಕ್ಷಣೆಯ ಬಗ್ಗೆ ಯೋಚಿಸಿದ್ದೀವಾ? ನದಿ ತಿರುವು, ನದಿ ಜೋಡಣೆ ಎಂಬ ಅವೈಜ್ಞಾನಿಕ ಯೋಜನೆಗಳ ಕುರಿತು ಪ್ರಶ್ನಿಸಿದ್ದೀವಾ? ತಡೆದಿದ್ದೀವಾ? ಇಲ್ಲ. ನದಿಗಳ ಸಂರಕ್ಷಣೆಯ ಕೆಲವು ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ, ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ ಅಂತ ಆಗಿದೆ. ನಮ್ಮನ್ನಾಳುವ ರಾಜಕೀಯ ವ್ಯವಸ್ಥೆ ನದಿ, ಕೆರೆ, ಕಾಲುವೆ, ಸಮುದ್ರ ಎಲ್ಲವನ್ನೂ “ಅಭಿವೃದ್ಧಿ’ ಎಂಬ ನೆಪದಲ್ಲಿ ಹಂತಹಂತವಾಗಿ ನಾಶ ಮಾಡುತ್ತಾ ಬರುತ್ತಿದೆ. ಆದರೂ ನಾವು ಅಂಥವರಿಗೆ ಮತ ನೀಡಿ ಮತಿಹೀನರಾಗುತ್ತಿದ್ದೇವೆ. ಇಂದು ಮಳೆ ಕಡಿಮೆಯಾಗಿ ಬರಗಾಲದ ಕಡೆ ಸಾಗುತ್ತಿರುವುದಕ್ಕೆ, ಅತಿವೃಷ್ಟಿ, ಅನಾವೃಷ್ಟಿಯಾಗುವುದಕ್ಕೆ, ಪ್ರಾಕೃತಿಕ ದುರಂತಗಳು ಆಗುವುದಕ್ಕೆ ನಾವು ಮತ್ತು ನಮ್ಮನ್ನಾಳುವ ವ್ಯವಸ್ಥೆಯೇ ಕಾರಣ ಹೊರತು ಪ್ರಕೃತಿಯಲ್ಲ.
ನದಿಯೂ ಸೊರಗುತ್ತದೆ:
ಆದರೆ ಇಂದು ಪಶ್ಚಿಮ ಘಟ್ಟದ ಮಳೆ ಕಾಡು, ನದೀ ಮೂಲದ ಸೂಕ್ಷ್ಮಪ್ರದೇಶಗಳಲ್ಲಿ ಮಾನವ ಚಟುವಟಿಕೆ ಮಿತಿ ಮೀರಿದೆ. ಅರಣ್ಯ ಅತಿಕ್ರಮಣ, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆ, ಅಕ್ರಮ ರೆಸಾರ್ಟು, ಟಿಂಬರ್ ಮಾಫಿಯಾ, ಕಾಂಕ್ರೀಟ್ ರಸ್ತೆ ನಿರ್ಮಾಣ, ನದಿ ತಿರುವು, ಮಾನವ ನಿರ್ಮಿತ ಕಾಡ್ಗಿಚ್ಚು… ಹೀಗೇ ವಿವಿಧ ಕಾರಣಗಳಿಂದ ನದಿಗಳ ನೆಮ್ಮದಿಗೆ ಗೀರು ಗಾಯವಾಗುತ್ತಿದೆ. ಬೆಟ್ಟಗಳ ಒಳಗಿನ ಜಲನಾಡಿಗಳಲ್ಲಿ ನೀರು ಮಾತ್ರ ಹರಿದು ಬರಬೇಕಿತ್ತು. ಆದರೆ ಇಂದು ನದೀ ಮೂಲಗಳ ಸೂಕ್ಷ್ಮಪ್ರದೇಶಗಳಲ್ಲಿ ವಿವಿಧ ರೀತಿಯ ಕಾಮಗಾರಿ ಮಾಡಿದಾಗ ವಿಪರೀತ ಮಳೆ ನೀರಿನ ಜೊತೆ ಮೇಲ್ಗಡೆಯಿಂದ ಕಲ್ಲು, ಮಣ್ಣು, ರಾಡಿ ಹರಿದುಬಂದಾಗ ಜಲನಾಡಿಗಳು ಸ್ಫೋಟಗೊಂಡು ಭೂಕುಸಿತವಾಗುತ್ತದೆ. ಎತ್ತಿನ ಹೊಳೆ ಯೋಜನೆಗೆ ಬೆಟ್ಟಗಳ ಒಳಗಿನ ಬಂಡೆಗಳನ್ನು ಡೈನಮೈಟ್ ಮೂಲಕ ನ್ಪೋಟಿಸಿದಾಗ ಬೆಟ್ಟಗಳು ಕಂಪನವಾಗಿ ಮಣ್ಣಿನ ಮೇಲ್ಮೆ„ಪದರ ಮತ್ತು ಒಳಮೈ ಪದರಗಳು ಕುಸಿದು ನೀರು ಸಹಜವಾಗಿ ಹರಿಯಬೇಕಾದಲ್ಲಿ ತಡೆಯಾಗಿ, ಅದರ ವಿರುದ್ಧ ಎÇÉೋ ಹರಿದು ಹೋಗಿ ಜಲ ಪ್ರವಾಹ, ಭೂಕುಸಿತ ಉಂಟಾಗುತ್ತದೆ. ಹೀಗಾದಾಗ ಮಳೆಯ ನೀರು ಬೆಟ್ಟಗಳ ಒಳಗಿನ ಶಿಲಾ ಪದರಗಳಲ್ಲಿ ಶೇಖರಣೆ ಆಗದೇ ನದಿ ಬಡಕಲಾಗುತ್ತದೆ. ನದಿಗೆ ಈ ರೀತಿಯ ಏಟು ಬಿದ್ದರೆ ಮುಂದಿನ ಮಳೆಗಾಲದಲ್ಲಿ ನೀರಿನ ವ್ಯತ್ಯಯ ಆಗಿ ಮಳೆ ಬಂದರೂ ಅಂತರ್ಜಲ ಕಡಿಮೆಯಾಗಿ ಬರಗಾಲಕ್ಕೆ ಕಾರಣವಾಗುತ್ತದೆ.
ಒಂದು ಬೃಹತ್ ನಗರ ಕುಸಿದುಬಿದ್ದರೆ ಅಂತಹ ನೂರಾರು ನಗರಗಳನ್ನು ಮರು ನಿರ್ಮಾಣ ಮಾಡಬಹುದು. ಅಂತಹ ಟೆಕ್ನಾಲಜಿ ನಮ್ಮಲ್ಲಿದೆ. ಆದರೆ ಒಂದು ನದೀ ಮೂಲ, ಮಳೆಕಾಡಿನಂತಹ ಸೂಕ್ಷ್ಮ ಪ್ರದೇಶ ಅಳಿದು ಹೋದರೆ ಮತ್ತೆ ಅದನ್ನು ಮರು ಸ್ಥಾಪಿಸಲು ಯಾವ ಟೆಕ್ನಾಲಜಿಯೂ ನಮ್ಮಲ್ಲಿ ಇಲ್ಲ. ನದಿಗಳು ನಮ್ಮ ಬದುಕಿನ ಜೀವನಾಡಿಗಳು, ಅವು ಅಳಿದುಹೋದರೆ ನಾವು ವಿಪರೀತ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ತಿಳಿದುಕೊಂಡು, ಅವುಗಳ ಸಂರಕ್ಷಣೆಗೆ ಮುಂದಾಗದೇ ಇದ್ದರೆ, ನಮ್ಮಮಕ್ಕಳಿಗೆ ನಾವು ನೀರು ಕೊಡಲಾಗದೇ ಕಣ್ಣೀರನ್ನು ಕೊಡಬೇಕಾಗುತ್ತದೆ.
-ದಿನೇಶ್ ಹೊಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.