ವಿಹರಿಸೋಣ ಕರೆಂಟಿನ ಕಾರಿನಲ್ಲಿ!
Team Udayavani, Aug 13, 2017, 6:20 AM IST
ಬ್ರಿಟನ್‌ನ ಯಾವ ಮೂಲೆಯಿಂದ ನೀವು ಕಾರು ಓಡಿಸಿಕೊಂಡು ರಾಜಧಾನಿ ಲಂಡನ್ ಪ್ರವೇಶಿಸುವವರಾದರೂ ಕಡಿಮೆ ಹೊರಸೂಸುವಿಕೆ ವಲಯ (Emission Zone) ಎಂದು ಎಚ್ಚರಿಸುವ ಸೂಚನೆಗಳ ಸ್ವಾಗತ ನಿಮಗೆ ಸಿಗುತ್ತದೆ. ಮತ್ತೆ ದಟ್ಟಣೆ ಶುಲ್ಕ (Congestion Charge) ನೀಡಬೇಕು ಎನ್ನುವ ಫಲಕಗಳೂ ಎದುರಾಗುತ್ತವೆ. ಈ ಶುಲ್ಕದಿಂದ ವಿನಾಯಿತಿ ಪಡೆಯಬೇಕಿದ್ದರೆ ಒಂದೋ ವಾರಾಂತ್ಯದಲ್ಲೇ ಲಂಡನ್‌ಗೆ ಕಾರುಪ್ರಯಾಣ ಮಾಡಬೇಕು ಅಲ್ಲದಿದ್ದರೆ ವಿದ್ಯುತ್‌ಚಾಲಿತ ಅಥವಾ ಅತಿ ಕಡಿಮೆ ಅನಿಲ ಹೊರಸೂಸುವ ನವೀನ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕು. ನಗರದ ತುಂಬೆಲ್ಲ ದಿನನಿತ್ಯ ಓಡಾಡುವ ಸಹಸ್ರ ಸಹಸ್ರ ವಾಹನಗಳು, ಲಂಡನ್‌ನ ಬೇರೆ ಬೇರೆ ದಿಕ್ಕುಗಳಲ್ಲಿರುವ ಐದು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರತಿ ನಿಮಿಷಕ್ಕೂ ಆಕಾಶವನ್ನು ಹತ್ತುವ ಇಳಿಯುವ ಸಾಲು ಸಾಲು ವಿಮಾನಗಳು, ಇವೆಲ್ಲ ಸೇರಿ ಬದುಕಿಗೆ ಅನುಕೂಲ ಮಾಡಿದರೂ, ಲಕ್ಷ ಲಕ್ಷ ಉದ್ಯೋಗ ಸೃಷ್ಟಿಸಿದರೂ ಲಂಡನ್ ಮತ್ತು ಅದರ ಹೊರವಲಯದ ಗಾಳಿಯನ್ನು ತೀವ್ರವಾಗಿ ಕಲುಷಿತವೂ ಮಾಡಿವೆ. ಬ್ರಿಟನ್‌ನ ಸರಕಾರ ನಂಬುವ ವರದಿಯೊಂದರ ಪ್ರಕಾರ ಮಲಿನ ಗಾಳಿಯ ಸೇವನೆಯಿಂದ ಇಲ್ಲಿ ವರ್ಷಕ್ಕೆ ನಲವತ್ತು ಸಾವಿರ ಅಕಾಲ ಮೃತ್ಯುಗಳು ಆಗುತ್ತವೆ. ವಾತಾವರಣದಲ್ಲಿ ಏರುತ್ತಿರುವ ಇಂಗಾಲದ ಡೈಆಕ್ಸೆ„ಡ್ ಪ್ರಮಾಣ ಬರಿಯ ಲಂಡನ್‌ನ ನಗರಕ್ಕೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ ; ಜಗತ್ತಿನ ಎಲ್ಲ ದೊಡ್ಡ ಪಟ್ಟಣಗಳು, ರಾಜಧಾನಿಗಳು ಮತ್ತು ಆ ರಾಜಧಾನಿಗಳಲ್ಲಿ ಕುಳಿತು ಆಡಳಿತ ನಡೆಸುವ ಸರಕಾರಗಳು ಚರ್ಚಿಸುವ ವಸ್ತುವೂ ಹೌದು.
ವರ್ಷದಿಂದ ವರ್ಷಕ್ಕೆ ಜಗತ್ತಿನ ತಾಪಮಾನ ಹೆಚ್ಚುತ್ತಿದೆ, ಚಳಿ ಮತ್ತು ಮಳೆ ಕಡಿಮೆ ಆಗುತ್ತಿದೆ ಎಂದು ವಿಜ್ಞಾನಿಗಳು, ಪರಿಸರವಾದಿಗಳು ಹಲವು ವರ್ಷಗಳಿಂದ ಬೇರೆ ಬೇರೆ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಮತ್ತೆ ಇದರ ಹಿಂದೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ, ಕಲ್ಲೆಣ್ಣೆ ಚಾಲಿತ ವಾಹನಗಳ ಹೊರಸೂಸುವಿಕೆ ಮುಖ್ಯ ಕಾರಣಗಳು ಎನ್ನುತ್ತಿದ್ದಾರೆ. ವಿಶ್ವ ಸಮ್ಮೇಳನಗಳಲ್ಲಿ ಭೇಟಿ ಆಗುವ ವಿವಿಧ ದೇಶಗಳ ಪ್ರಧಾನಿಗಳು, ಪರಿಸರ ಮಂತ್ರಿಗಳು ಮುಂದಿನ ಹತ್ತೋ ಇಪ್ಪತ್ತೋ ವರ್ಷಗಳಲ್ಲಿ ತಮ್ಮ ತಮ್ಮ ದೇಶಗಳಲ್ಲಿ ಎಷ್ಟು ವಾಯುಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ಆಣೆ, ಭಾಷೆ ಕೊಟ್ಟುಕೊಳ್ಳುತ್ತಿರುತ್ತಾರೆ ! ತಮ್ಮ ದೇಶದ ಜವಾಬ್ದಾರಿಯನ್ನು ಇತರ ದೇಶಗಳ ಬೇಜಾವಾಬ್ದಾರಿಯನ್ನು ಎತ್ತಿ ಆಡುತ್ತಾರೆ. ಭಾರತ, ಚೀನಾ, ಇರಾನ್, ಕ್ಯಾಮೆರೂನ್, ಸೌದಿ ಅರೇಬಿಯಾಗಳ ಪಟ್ಟಣಗಳು ಜಗತ್ತಿನ ಅತೀ ವಾಯುಮಾಲಿನ್ಯ ಅನುಭವಿಸುವ ನಗರಗಳ ಪಟ್ಟ ಧರಿಸಿವೆ ಎಂದು ತಿಳಿಸುತ್ತಾರೆ. ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ದೇಶಗಳ ಅಜಾಗರೂಕತೆಯನ್ನು ನಿರ್ಲಕ್ಷ್ಯವನ್ನು ದೂಷಿಸಿದರೆ, ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳ ವೇಗದ ಐಷಾರಾಮಿ ಕಾರುಗಳ ಉಗುಳನ್ನೂ ಮತ್ತೆ ಅಂತಹ ದೇಶಗಳಲ್ಲಿ ಹಾರುವ ಅಸಂಖ್ಯ ವಿಮಾನಗಳು ಅವಿರತವಾಗಿ ಆಕಾಶದಲ್ಲಿ ಚಿತ್ರಿಸಿ ಕರಗಿಸುವ ಬಿಳಿ ವಿಷದ ಚಂದದ ಹೊಗೆಯನ್ನೂ ದೂರುತ್ತಾರೆ. ಆಮೇಲೆ, ಜರ್ಮನಿಯ ವೊಲ್ಕ್ ವೇಗನ್ ಡೀಸೆಲ್ ಕಾರುಗಳ ಪ್ರಕರಣವನ್ನೂ ನೆನಪಿಸುತ್ತಾರೆ. ವಿಶ್ವಾಸಾರ್ಹ ಮತ್ತು ಸುಖಪ್ರಯಾಣಗಳನ್ನು ಜೊತೆಯಾಗಿ ನೀಡುವ ಕಾರುಗಳನ್ನು ತಯಾರಿಸುವ ಗರ್ವದ ವೊಲ್ಕ್$Õವೇಗನ್ ಕಂಪೆನಿ ತನ್ನ ಡೀಸೆಲ್ ಕಾರುಗಳ ನಿಜವಾದ ಹೊರಸೂಸುವಿಕೆಯನ್ನು ಮರೆಮಾಚುವ ಚತುರ ಸಾಫ್ಟ್ ವೇರ್ ಬಳಸುತ್ತಿದ್ದುದು 2015ರಲ್ಲಿ ಬೆಳಕಿಗೆ ಬಂದಿದ್ದರ ಬಗ್ಗೆ ಮಾತಾಡಿ ಮುಂದುವರಿದ ದೇಶ ಎನ್ನುವ ಹೆಮ್ಮೆಯನ್ನು ಹೊತ್ತ ದೇಶಗಳಿಗೆ ಮುಜುಗರ ಉಂಟುಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳೆಲ್ಲವೂ ಅನುಮತಿಸಲ್ಪಟ್ಟ ಹೊರಸೂಸುವಿಕೆಯ ಬಗ್ಗೆ ತಪ್ಪು ಮಾಹಿತಿ ನೀಡುವಂಥವು ಇರಬಹುದೇ ಅಥವಾ ಡೀಸೆಲ್ ಕಾರುಗಳಲ್ಲಿ ಪರಿಮಿತವಾದ ಇಂಗಾಲದ ಡೈ ಆಕ್ಸೆ„ಡ್ ಸೂಸುವಿಕೆ ಸಾಧ್ಯವೇ ಇಲ್ಲವೇ ಎನ್ನುವ ಸಂಶಯವನ್ನು ಜೊತೆಯಾಗಿ ಹಂಚಿಕೊಳ್ಳುತ್ತಾರೆ. ಕೊನೆಗೆ ಡೀಸೆಲ್ ಕಾರುಗಳ ತಯಾರಿಯೇ ನಿಲ್ಲಿಸಬೇಕೆಂದು ತಮ್ಮ ಮೇಲೆಯೇ ಒತ್ತಡ ಹಾಕಿಕೊಳ್ಳುತ್ತಾರೆ.
ಜಾಗತಿಕ ಮಟ್ಟದ ಒತ್ತಡಗಳ, ದೇಶದೊಳಗಿನ ಬದ್ಧತೆಗಳ ಫಲವಾಗಿ ಮೊನ್ನೆ ಮೊನ್ನೆ ಅಂದರೆ ಜುಲೈ ಕೊನೆಯ ವಾರದಲ್ಲಿ ಬ್ರಿಟನ್ನಿನ ಸರಕಾರ, 2040ರಿಂದ ಇಲ್ಲಿ ಯಾವುದೇ ಪೆಟ್ರೋಲ್ ಮತ್ತು ಡೀಸೆಲ್ ಹೊಸಕಾರು ಮತ್ತು ವ್ಯಾನ್‌ಗಳ ಉತ್ಪಾದನೆ ಆಗುವುದಿಲ್ಲ ಎಂದು ಸಾರಿತು. ಪೆಟ್ರೋಲ್ ಡೀಸೆಲ್‌ಚಾಲಿತ ಕಾರಿನಂತಹ ಸಣ್ಣ ವಾಹನಗಳ ತಯಾರಿ ನಿಲ್ಲಿಸಬೇಕೆಂಬ ಕೂಗು ಇಂದಿನದಲ್ಲ. 2008ರಲ್ಲಿ ಬ್ರಿಟನ್ ಇಂತಹದೇ ಘೋಷಣೆಯನ್ನು ಮಾಡಿಯಾಗಿತ್ತು, ಅಂದಿನ ಲೆಕ್ಕಾಚಾರದ ಪ್ರಕಾರ 2020ರಿಂದಲೇ ಕಲ್ಲೆಣ್ಣೆ ಮೂಲದ ಇಂಧನಗಳಿಂದ ಓಡುವ ಸಣ್ಣ ವಾಹನಗಳ ತಯಾರಿ ನಿಲ್ಲಿಸುವುದು ಎಂದಾಗಿತ್ತು. ಇಂಗಾಲದ ಡೈಆಕ್ಸೆ„ಡ್ ಪ್ರಮಾಣ ವಾತಾವರಣದಲ್ಲಿ ಹೆಚ್ಚುವಷ್ಟು ವೇಗದಲ್ಲಿ ವಿದ್ಯುತ್‌ಚಾಲಿತ ಕಾರುಗಳು ಸಮರ್ಥವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಡೀಸೆಲ್ ಕಾರುಗಳನ್ನು ಸ್ಥಳಾಂತರಿಸುವುದು ಸಾಧ್ಯ ಆಗಿಲ್ಲ. ವಿದ್ಯುತ್‌ಚಾಲಿತ ಕಾರುಗಳು ಓಡುವ ವೇಗ, ಅಂತಹ ಕಾರುಗಳ ಬೆಲೆ, ವಿದ್ಯುತ್ ಪುನರ್ ಭರ್ತಿ ಮಾಡಲು ಬೇಕಾಗುವ ದೀರ್ಘ ಸಮಯ, ಮತ್ತೆ ಮನೆ ಮನೆಯಲ್ಲಿ ಕಾರಿರುವ ದೇಶವೊಂದು ಪ್ರತಿ ಕಾರಿಗೂ ವಿದ್ಯುತ್ ಒದಗಿಸಲು ಬೇಕಾಗುವ ವಿದ್ಯುತ್‌ಶಕ್ತಿಯ ಉತ್ಪಾದನಾ ಸಾಮರ್ಥ್ಯ ಇತ್ಯಾದಿ ಕಠಿಣ ಸವಾಲುಗಳು ಪರಿಸರಮಿತ್ರ ಇಲೆಕ್ಟ್ರಿಕ್ ಕಾರುಗಳು ಜನಸ್ನೇಹಿಯೂ ಆಗುವುದನ್ನು ತಡಮಾಡುತ್ತಿವೆ; ಬ್ರಿಟನ್ ಮರುನಿಗದಿ ಪಡಿಸಿಕೊಂಡ 2040ರ ಗುರಿಯೂ ಸುಲಭ ಇಲ್ಲ ಎಂದು ಪಿಸುಗುಟ್ಟುತ್ತಿವೆ. ಈ ವರ್ಷ, ಅಂದರೆ 2017ರಲ್ಲಿ ಬ್ರಿಟನ್ನಿನಲ್ಲಿ ನೋಂದಣಿಗೊಂಡ ಕಾರುಗಳ ಪೈಕಿ ಸುಮಾರು ಒಂದೂವರೆ ಶೇ. ಕಾರುಗಳಷ್ಟೇ ವಿದ್ಯುತ್‌ಚಾಲಿತ ಕಾರುಗಳಾಗಿವೆ. ಪೆಟ್ರೋಲ್ ಆಧರಿತ ವೇಗದ ಕಾರನ್ನು ಓಡಿಸುವ ಹುಚ್ಚಿನ ನನ್ನ ಆಂಗ್ಲ ಸ್ನೇಹಿತ 2040ಕ್ಕೆ ಹೇಗೂ ತನಗೆ 70 ವರ್ಷ ಆಗಿರುತ್ತದೆ, ಆ ಕಾಲದ ಇಲೆಕ್ಟ್ರಿಕ್ ಕಾರುಗಳು ತನ್ನ ಈಗಿನ ಆಸ್ಟನ್ ಮಾರ್ಟಿನ್ ಕಾರಿನಂತೆ ಓಡಿತೋ ಇಲ್ಲವೋ ಎನ್ನುವ ಚಿಂತೆ ಇಲ್ಲ ; ಆದರೆ, ಈ ದೇಶದಲ್ಲಿ ನಡೆಯಲಾಗದ ಒಂಟಿ ವೃದ್ಧರು ಸಣ್ಣ ಸಣ್ಣ ತಿರುಗಾಟಕ್ಕೆ ಬಳ ಸುವ ವಿದ್ಯುತ್‌ಚಾಲಿತ ತ್ರಿಚಕ್ರವಾಹನ ಆ ಕಾಲದಲ್ಲೂ ಲಭ್ಯ ಇದ್ದರೆ ತನಗೆ ಅಷ್ಟೇ ಸಾಕು ಎಂದು ವ್ಯಂಗ್ಯ ಮಾಡಿದ್ದಾನೆ.
ವಾಯು ಮಾಲಿನ್ಯದ ಬಗ್ಗೆ ವ್ಯಂಗ್ಯ-ಕಾಳಜಿ, ಘೋಷಣೆಗಳು, ಗುರಿಗಳು ಬ್ರಿಟನ್‌ಗೆ ಮಾತ್ರ ಸೀಮಿತ ಅಲ್ಲ ; ಉದಾಹರಣೆಗೆ, ಫ್ರಾನ್ಸ್ 2040ನೆಯ ಇಸವಿಯಿಂದ, ಜರ್ಮನಿ ಮತ್ತು ಭಾರತಗಳು 2030ರಿಂದ ಮತ್ತೆ ನಾರ್ವೆ 2025ರಿಂದ ಹೊಸ ಪೆಟ್ರೋಲ್ ಡೀಸೆಲ್‌ಚಾಲಿತ ವಾಹನಗಳ ಉತ್ಪಾದನೆ ನಿಲ್ಲಿಸುವುದಾಗಿ ಹೇಳಿದ್ದಾವೆ. ಸ್ವೀಡನ್‌ನ ಬಹು ಜನಪ್ರಿಯ ಕಾರು ತಯಾರಕ ವೋಲ್ವೋ ಕಂಪೆನಿ 2019ರಿಂದ ತಾನು ಕಲ್ಲೆಣ್ಣೆಚಾಲಿತ ಕಾರುಗಳನ್ನು ಮಾಡುವುದಿಲ್ಲ; ಬದಲಿಗೆ ಇಲೆಕ್ಟ್ರಿಕ್ ಅಲ್ಲದಿದ್ದರೆ ಹೈಬ್ರಿಡ್ ಇಂಧನ ಬಳಸುವ ಕಾರು ಮಾತ್ರ ತಯಾರಿಸುತ್ತೇನೆ ಎಂದಿದೆ. ಯೂರೋಪ್, ಅಮೆರಿಕ ಮತ್ತು ಜಪಾನ್ ದೇಶಗಳ ಕಾರು ತಯಾರಿಸುವ ಕಂಪೆನಿಗಳಿಂದ ಪೆಟ್ರೋಲ್- ಡೀಸೆಲ್ ಕಾರುಗಳ ತಯಾರಿ ನಿಲ್ಲಿಸುವ ಗುರಿಗಳನ್ನು ಮತ್ತೆ ಮತ್ತೆ ಘೋಷಿಸಿಕೊಳ್ಳುತ್ತಿವೆ. ಜೊತೆಗೆ ಅನುಷ್ಠಾನದ ಪ್ರಯತ್ನ ನಿಧಾನವಾದರೂ ನಡೆಯುತ್ತಿದೆ. ಇನ್ನು ಜಗತ್ತಿನ ಕಾರು ಕೊಳ್ಳುವ ಅತಿ ದೊಡ್ಡ ಮಾರುಕಟ್ಟೆಯಾದ ಚೀನ, ವಿದ್ಯುತ್‌ಚಾಲಿತ ಕಾರುಗಳ ಸಂಶೋಧನೆ ಮತ್ತು ತಯಾರಿಕೆಯಲ್ಲಿ ದೊಡ್ಡ ಬಂಡವಾಳ ಹೂಡಿದೆ. ಕಾರುಉತ್ಪಾದಕರ, ಕಾರುಕೊಳ್ಳುವವರ ತಯಾರಿ ನೋಡಿ ಅನಿಸುವುದು- 20ನೆಯ ಶತಮಾನದ ಜಗತ್ತಿನ ಬಂಡವಾಳಶಾಹಿಯ ದೊಡ್ಡ ಪಾಲುದಾರ- ಆಟೋಮೊಬೈಲ್ ಉದ್ಯಮ ಬೃಹತ್ ಬದಲಾವಣೆಗೆ ಸಿದ್ಧ ಆಗುತ್ತಿದೆಯೆ? 2025ನೆಯ ಇಸವಿ ಅಲ್ಲದಿದ್ದರೆ 2030, ಅದೂ ತಪ್ಪಿದರೆ 2040 ಹೀಗೆ ಮೈಲಿಗಲ್ಲು ಮುಂದೆ ಮುಂದೆ ಹೋಗುತ್ತಿದ್ದರೂ, ವಿದ್ಯುತ್‌ಚಾಲಿತ ಕಾರುಗಳು ಒಂದಾನೊಂದು ದಿನ ರಸ್ತೆ ರಸ್ತೆಗಳನ್ನು ತುಂಬಬಹುದು. ಮತ್ತೆ ಆ ರಸ್ತೆಗಳ ಬದಿಗಳಲ್ಲಿ ನಡೆಯುವವರು. ಅಂತಹ ಊರಿನಲ್ಲಿ ಮನೆ ಮಾಡಿಕೊಂಡವರು ಇಂದಿಗಿಂತ ಹೆಚ್ಚು ಶುದ್ಧ ಗಾಳಿಯನ್ನು ಉಸಿರಾಡಬಹುದು. ಮತ್ತೆ ಸರಕಾರಗಳು ನಂಬಿ ಪ್ರತಿಕ್ರಿಯಿಸುವಂಥ ವರದಿಯೊಂದು ಪ್ರತಿವರ್ಷ ಮಲಿನ ವಾಯುವನ್ನು ಸೇವಿಸಿ ಸಾಯುವವರ ಸಂಖ್ಯೆ ಬಹಳ ಕಡಿಮೆ ಆಗಿದೆ ಎಂದೂ ಹೇಳಬಹುದು; ಮತ್ತೆ ಅಂದು, ಇಲೆಕ್ಟ್ರಿಕ್ ಕಾರುಗಳು ಎಂದು ಬಂದಾವೆಂದು ಕಾದ ನಿರೀಕ್ಷೆಗಳೂ, ಮತ್ತೆ ಬಂದಿದ್ದರೆ ಹೇಗಿರುತ್ತಿತ್ತು ಅಂತ ಯೋಚಿಸಿದ ಕಲ್ಪನೆಗಳೂ ಒಂದಾಗಬಹುದು; ನಿರೀಕ್ಷೆಗಳು ಮತ್ತು ಕಲ್ಪನೆಗಳು ಸೇರಿ ಒಂದು ವಿಹಾರ ನಡೆಸಬಹುದು – ವಿದ್ಯುತ್ ಕಾರಿನಲ್ಲಿ !
ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.