ಕೇದಾರನಾಥನ ಧ್ಯಾನದಲ್ಲಿ
Team Udayavani, Aug 26, 2017, 8:21 PM IST
ಸನಾತನಿಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ್ ಯಾತ್ರೆ ಕೈಗೊಳ್ಳೋ ಅವಕಾಶ ಸಿಗೋದು ಅಹೋಭಾಗ್ಯ. ಅಂತಹ ಭಾಗ್ಯ ನಮಗೊಲಿದದ್ದು ಇದೇ ವರ್ಷ. ಚಾರ್‌ಧಾಮ್ ಯಾತ್ರೆಗೆ ಅತ್ಯಂತ ಸೂಕ್ತ ಸಮಯವಾದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಯಾಣ ಬೆಳೆಸಿದ ನಮಗೆ ಯಾತ್ರೆಯಲ್ಲಿ ಅನೇಕ ಪವಾಡಗಳು, ವಿಸ್ಮಯಗಳು ಎದುರಾದಾವು. ಮೊದಲಿಗೆ ದೆಹಲಿ ಸುತ್ತಿ ಹರಿದ್ವಾರ ಹೃಷಿಕೇಶ ಆಗಿ ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿಗೆ ಭೇಟಿ ಇತ್ತೆವು. ನಂತರ ವಾಸ್ತವ್ಯ ಹೂಡಿದ್ದು ಕೇದಾರದಿಂದ ಸುಮಾರು 24 ಕಿ.ಮೀ. ದೂರದ ಸೀತಾಪುರವೆಂಬ ಪುಟ್ಟ ಗಿರಿಧಾಮದಲ್ಲಿ.
ಬೆಳಗ್ಗಿನ ಜಾವ ಎರಡು ಗಂಟೆಗೆ ಎದ್ದು ಕನಿಷ್ಠ ತಾಪಮಾನದಲ್ಲಿ ತಣ್ಣೀರಲ್ಲೇ ತಲೆಸ್ನಾನವನ್ನು ಮಾಡೋವಾಗ ಕೇದಾರನಾಥನ ಧ್ಯಾನವೊಂದೇ ನೆರವಾದದ್ದು. ನಾಲ್ಕೂವರೆ ಗಂಟೆಗೆ ಸೀತಾಪುರದಿಂದ 8 ಕಿ.ಮೀ. ದೂರದ ಗೌರಿಕುಂಡಕ್ಕೆ ಜೀಪ್‌ನಲ್ಲಿ ತಲುಪಿದಾಗ ಡೋಲಿ, ಫೋನಿಗೋಸ್ಕರ ನೂಕುನುಗ್ಗಲು ಆರಂಭವಾಗಿತ್ತು. ಹೆಲಿಕಾಪ್ಟರ್ ಮೂಲಕ ದೇವಸ್ಥಾನಕ್ಕೆ ಹೋಗಲು ಸೀತಾಪುರದಿಂದ ಫಟಾಗೆ ತೆರಳಬೇಕಿದ್ದು, ಅದೇ ದಿನ ವಾಪಸಾಗಲು ಅನುಕೂಲವಾಗಲೆಂದು 2100 ರೂಪಾಯಿ ಪಾವತಿಸಿ ವಿಶೇಷ ದರ್ಶನ ಪಡೆಯೋ ಏರ್ಪಾಡು ಮಾಡಲಾಗಿತ್ತು.
ಮುಂಗಡ ಬುಕ್ಕಿಂಗ್ ಮಾಡದಿದ್ದರಿಂದ ಡೋಲಿ ಹೆಲಿಕಾಪ್ಟರ್ ಲಭ್ಯವಾಗದೆ ನಾವು ಕುದುರೆ ಸವಾರಿ, ಪಿಟ್ಟು ಇಲ್ಲಾ ಕಾಲ್ನಡಿಗೆಯನ್ನು ಆಯ್ಕೆ ಮಾಡಬೇಕಾಯಿತು. ಅಲ್ಲಿನ ಚಳಿಯನ್ನು ಎದುರಿಸಲು ಸ್ವೆಟರ್, ಗ್ಲೌಸ್, ಶೂ, ಸಾಕ್ಸ್ ಧರಿಸಿ ಸಜ್ಜಾದೆವು. ರೈನ್‌ಕೋಟ್, ಟ್ರಿಪ್‌ಕಾರ್ಡ್, ಹಣ, ನೀರು, ಆಹಾರ, ಅಗತ್ಯದ ಔಷಧಿಗಳನ್ನು ತುಂಬಿಸಿದ ಬ್ಯಾಗನ್ನು ಹೆಗಲಿಗೇರಿಸಿ ಕುದುರೆ ಸವಾರಿಗೆ ಸಿದ್ಧರಾದೆವು. ಜೀವನದ ಮೊದಲನೆಯ ಕುದುರೆ ಸವಾರಿ ಅದೂ 32 ಕಿ.ಮೀ. ಹೊಸ ಹುಮ್ಮಸ್ಸು ಸಂಭ್ರಮದ ಜೊತೆಗೆ ಭಯ ರೋಮಾಂಚನವನ್ನೂ ಉಂಟುಮಾಡಿತು. ಸಮುದ್ರ ಮಟ್ಟದಿಂದ 12,000 ಅಡಿ ಎತ್ತರಕ್ಕೆ ಬೆಟ್ಟಗಳಿಂದಲೇ ಆವೃತವಾಗಿದ್ದ ತಿರುವು ಮುರುವುಗಳಿಂದ ಕೂಡಿದ್ದ ಏರುಗತಿಯಲ್ಲಿದ್ದ ಹಾದಿಯ ಸ್ಪಷ್ಟ ಚಿತ್ರಣದ ಅರಿವಿಲ್ಲದ ನಮಗೆ ಆರಂಭದಲ್ಲಿ ಆರಾಮದಾಯಕವೆನಿಸಿದ ಸವಾರಿ, ಕಡಿದಾದ ದಾರಿಯಲ್ಲಿ ಮುಂದುವರಿಯುತ್ತ ಅಭ್ಯಾಸವಾಯಿತು.
ನಡಿಗೆಯ ದಾರಿ
ಕೇದಾರನಾಥ ದೇವಾಲಯಕ್ಕೆ ತಲುಪಲು ಕೊನೆಯ ಒಂದೂವರೆ ಕಿ.ಮೀ. ನಡೆದುಕೊಂಡೇ ಸಾಗಬೇಕು. ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆ, ತಲೆನೋವು, ವಾಕರಿಕೆ ಕಾಡಬಹುದು. ಕರ್ಪೂರ ಆಘ್ರಾಣಿಸೋದು ಈ ಸಮಸ್ಯೆಗಳಿಗೆ ಹಿತಕರ. ಯಾತ್ರಿಕರ ಅನುಕೂಲಕ್ಕೆ ಬಯೋ ಟಾಯ್ಲೆಟ್ಸ್ , ಯಾತ್ರಿ ನಿವಾಸಗಳು, ಟೆಂಟ್ಸ್, ಹೆಲಿ ಟಿಕೆಟ್ ಬುಕ್ಕಿಂಗ್ ಕೌಂಟರ್, ಮೆಡಿಕಲ್ ರಿಲೀಫ್ ಪೋಸ್ಟ್ ಬೇಸ್ ಕ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ದುಬಾರಿ ಬೆಲೆಗೆ ನೀರು, ಚಹಾ, ಬಿಸ್ಕಟ್ಟು, ಸ್ನ್ಯಾಕ್ಸ್ ಕೂಡ ಲಭ್ಯವಿದೆ. ದೇವರ ಪೂಜೆಗೆ ನಾನಾ ದರದ ಥಾಲಿಗಳು, ಪೂಜಾ ಸಾಮಗ್ರಿಗಳು, ಪುಸ್ತಕ ಚಿತ್ರಗಳು ಇತ್ಯಾದಿ ತಾತ್ಕಾಲಿಕ ನೆಲೆಯಲ್ಲಿ ತೆರೆದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ.
ಶುಭ್ರವಾದ ಬಿಳುಪಾದ ಹೊದಿಕೆಯನ್ನು ಹೊದ್ದಂತೆ ಪ್ರಕಾಶನಮಾನವಾಗಿ ಕಂಗೊಳಿಸುತ್ತಿದ್ದ ಹಿಮಾಲಯದ ಸೌಂದರ್ಯವನ್ನು ಹನಿ ಹನಿ ಮಳೆಯಲ್ಲಿ ಆಸ್ವಾದಿಸುತ್ತಾ ಉದ್ದನೆಯ ಸರತಿ ಸಾಲಲ್ಲಿ ಒಂದೂವರೆ ಗಂಟೆ ಕಾಯೋವಾಗ ನಾಲ್ಕು ವರ್ಷದ ಹಳೆಯ ದುರಂತದ ನೆನಪು ಕೂಡ ಕಾಡಿತು. ನೀರವ ಮೌನ ತಳೆದು ದುರಂತದ ಭೀಕರತೆಯನ್ನು ಬಿಂಬಿಸೋ ಕೊಚ್ಚಿಹೋದ ಹಳೆಯ ಕಾಲುದಾರಿ, ಇನ್ನೂ ಪೂರ್ಣ ತೆರವಾಗದ ಹಾನಿಗೊಳಗಾದ ಕಟ್ಟಡದ ಅವಶೇಷಗಳು, ಮಂದಾಕಿನಿ ನದಿಯ ತಾಂಡವದಿಂದ ಅಲ್ಲಲ್ಲಿ ಸಸ್ಯಸಂಕುಲ ನಶಿಸಿ ಬರಡಾದ ಭೂಮಿ, ಪ್ರವಾಹದಲ್ಲಿ ಕೊಚ್ಚಿ ಬಂದು ಭೂಮಿಯಲ್ಲಿ ಅಲ್ಲಲ್ಲಿ ಹುದುಗಿರೋ ಭಾರೀ ಗಾತ್ರದ ಬಂಡೆಗಲ್ಲುಗಳು ಅಂದಿನ ಕರಾಳತೆಗೆ ಹಿಡಿದ ಕೈಗನ್ನಡಿಯಂತಿದೆ. ಇಂತಹ ಭಯಾನಕ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸ್ಥಳದಲ್ಲಿ ಸ್ಥಿರವಾಗಿ ನಿಂತಿರೋ ಕೇದಾರನಾಥ ದೇವಾಲಯವನ್ನು ಕಂಡಾಗ ಯಾವುದೇ ನಾಸ್ತಿಕನು ಆ ಮಹಾದೇವನಿಗೆ ಶಿರಬಾಗದೆ ಇರಲಾರನು.
ದೇವಸ್ಥಾನದ ಹೊರ ಆವರಣದಲ್ಲಿದ್ದ ಕುಂಡಗಳು, ತೀರ್ಥಗಳು, ಶಂಕರಾಚಾರ್ಯರ ಸಮಾಧಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು ಅದರ ಅಸ್ತಿತ್ವದ ಕುರುಹುಗಳು ಸಹ ಕಾಣೆಯಾಗಿವೆ. ದೇವಸ್ಥಾನವನ್ನು ಪ್ರವಾಹದಿಂದ ರಕ್ಷಿಸಿದ್ದ ದೊಡ್ಡ ಗಾತ್ರದ ಬಂಡೆ “ಭೀಮ್ ಶಿಲಾ’ ದರ್ಶನ ಮಾಡಿ ಅಲ್ಲೇ ನೆಲೆಸಿದ್ದ ಸಾಧುಗಳಿಗೆ ವಂದಿಸಿ ಅನ್ನಪ್ರಸಾದ ಸ್ವೀಕರಿಸಲು ಪಕ್ಕದಲ್ಲಿದ್ದ ಲಂಗರಿಗೆ ತೆರಳಿದೆವು.
ಮಧ್ಯಾಹ್ನ ಮೂರು ಗಂಟೆಗೆ ಪುನಃ ಮಳೆ ಸುರಿಯಲಾರಂಭಿಸಿದ್ದರಿಂದ ಮಿಂದ ಪರ್ವತ ಶಿಖರಗಳು ಧರೆಯನ್ನು ಸ್ವರ್ಗವನ್ನಾಗಿ ಪರಿವರ್ತಿಸಿದ್ದವು. ದಟ್ಟ ಮಂಜಿನಿಂದ ಹೆಲಿಕಾಪ್ಟರ್ ಯಾನವು ರದ್ದಾಗಿ ಯಾತ್ರಿಗಳು ಕೇದಾರದಲ್ಲೇ ಉಳಿಯಬೇಕಾಗೋ ಪರಿಸ್ಥಿತಿಯು ನಿರ್ಮಾಣವಾಗಬಹುದು. ಮರಗಟ್ಟೋ ಚಳಿಗೆ ಮಳೆಯಲ್ಲಿ ನೆನೆಯುತ್ತಾ ಕುದುರೆ ಏರಿ ಬರೋವಾಗ ತಿರುವುಗಳನ್ನೊಳಗೊಂಡ ಇಡೀ ಕೇದಾರ ಕಣಿವೆಯು ಮಂಜಲ್ಲಿ ಮರೆಯಾಗಿ ಆಕಾಶ ಪಾತಾಳದ ಭೇದವನ್ನೇ ತೊಡೆದುಹಾಕಿತ್ತು. ಬದಿಯಲ್ಲಿದ್ದ ಪ್ರಪಾತವು ಅದೃಶ್ಯವಾಗಿ ಮೈಯೆಲ್ಲ ನಡುಕ ಹುಟ್ಟಿಸುತ್ತಿತ್ತು. ಮಳೆಯಲ್ಲಿ ನೆನೆದ ಮಣ್ಣಿನ ರಸ್ತೆಯಲ್ಲಿ ಅತ್ತ ಕುದುರೆಗೆ ಕಾಲು ಜಾರೋವಾಗ ಇತ್ತ ಹೃದಯದ ತಾಳ ತಪ್ಪಿದ ಅನುಭವ. ಅಂತೂ “ಓಂ ನಮಃ ಶಿವಾಯ’ ನಾಮಜಪದೊಂದಿಗೆ 16 ಕಿ.ಮೀ. ದೂರದ ಗಿರಿಕಂದಕಗಳ ಮಧ್ಯದ ದಾರಿ ಸುರಕ್ಷಿತವಾಗಿ ಸಾಗಿ ಇಳಿದದ್ದು ಕೇದಾರನಾಥನ ಶ್ರೀರಕ್ಷೆಯಿಂದಲೇ.
– ದೀಪಾ ಎಸ್. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.