ಭಾರತೀಯ ಪ್ರಜಾಪ್ರಭುತ್ವದ ಅಪಸವ್ಯಗಳು


Team Udayavani, Apr 14, 2019, 6:00 AM IST

j-11

ಭಾರತೀಯ ಮಾದರಿಯ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಕ್ಕೂ ಅಮೆರಿಕದ ಮಾದರಿಯ ಅಧ್ಯಕ್ಷೀಯ ಪ್ರಜಾತಂತ್ರ ವ್ಯವಸ್ಥೆಗೂ ಬಹಳ ವ್ಯತ್ಯಾಸ ಇದೆ. ಎರಡೂ ಮಾದರಿಗಳೂ ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಒಳಗೊಂಡಿವೆ. 21ನೆಯ ಶತಮಾನದ ಸಾಮಾಜಿಕ, ಆರ್ಥಿಕ, ಜಾಗತಿಕ ಪರಿಸ್ಥಿತಿಗೆ ಮತ್ತು ಜನರ ಜೀವನಕ್ರಮದ ಮಟ್ಟಕ್ಕೆ ಅನುಗುಣವಾಗಿ ನಿಜವಾಗಿ ಬೇಕಾದದ್ದು ಈ ಎರಡೂ ಪ್ರಜಾತಂತ್ರ ಮಾದರಿಗಳ ಧನಾತ್ಮಕ ಅಂಶಗಳನ್ನು ಒಳಗೊಂಡ ಒಂದು ಹೈಬ್ರಿಡ್‌ ಮಾದರಿ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ತರುವ ಕೆಲಸ ಸುಲಭವಲ್ಲ. ಆದರೂ ಇಲ್ಲಿನ ಜನತಂತ್ರವ್ಯವಸ್ಥೆಯ ಸ್ಥಿತಿಯನ್ನು ಅಮೆರಿಕದ ಮಾದರಿಗೆ ಹೋಲಿಸಿದಾಗ ನಮ್ಮಲ್ಲೂ ಹಾಗೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸಬಹುದು !

ಭಾರತ ಇಂದು ದೇಶದ ಮತ್ತೂಂದು ಮಹಾಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಸಮಯದಲ್ಲಿ ನಾಗರಿಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಹಲವು ಸಂದಿಗ್ಧಗಳನ್ನು ಎದುರಿಸುತ್ತಿರುವುದು ಸಾಮಾನ್ಯ ವಾಗಿ ಅನುಭವಕ್ಕೆ ಬರುತ್ತದೆ. ಬೆಕ್ಕಿಗೆ ಗಂಟೆ ಕಟ್ಟುವವರು ಇಲ್ಲದೆ ಮತದಾರ ಇರುವ ವ್ಯವಸ್ಥೆಯೊಳಗೆ ಒಲ್ಲದ ಮನಸ್ಸಿನಿಂದ ತನ್ನನ್ನು ಒಪ್ಪಿಸಿಕೊಳ್ಳಬೇಕಾದದ್ದು ಅನಿವಾರ್ಯವಾಗುತ್ತದೆ. ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ಅವೆರಡು ದೇಶಗಳು ಸ್ವಾತಂತ್ರ್ಯದ ನಂತರ ಅನುಸರಿಸಿದ ಮಾರ್ಗಗಳು ವಿಭಿನ್ನ. ಭಾರತ ಬ್ರಿಟಿಷರ ಪದ್ಧªತಿಯನ್ನು ಬಹುತೇಕವಾಗಿ ಅನುಸರಿಸಿದರೆ, ಅಮೆರಿಕ ಬ್ರಿಟಿಷರ ಪದ್ಧತಿಗೆ ವಿರುದ್ಧವಾದ ಮಾರ್ಗದಲ್ಲಿ ಹೆಜ್ಜೆ ಇರಿಸಿತು. ಈ ಭಿನ್ನತೆಗಳನ್ನು ದೇಶದ ಆಳ್ವಿಕೆಯಿಂದ ಆರಂಭಿಸಿ, ವಾಹನ ಚಾಲನೆ, ಕ್ರಿಕೆಟ್‌ ಆಟದಂತಹ ಅನೇಕ ಜೀವನಕ್ರಮಗಳಲ್ಲಿಯೂ ಕಾಣಬಹುದು.

ಭಾರತ ಇಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದರೆ ಅತಿ ಹೆಚ್ಚು ಸಂಖ್ಯೆಯ ನಾಗರಿಕರು, ಜನರಿಂದಲೇ ಆಯ್ಕೆಯಾಗಿ ಬಹುಮತ ಪಡೆದ ಪಕ್ಷದ ಸರಕಾರದ ಆಡಳಿತಕ್ಕೆ ಒಳಪಟ್ಟವರು ಎಂದರ್ಥ. ಅಮೆರಿಕ ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜಗತ್ತಿನ ಇತರ ದೇಶಗಳಿಗೆ ಪ್ರಜಾಪ್ರಭುತ್ವದ ಮಂತ್ರ ಉಪದೇಶಿಸಿದ ಗುರುಸ್ಥಾನದ‌ಲ್ಲಿ ತನ್ನನ್ನು ಸ್ವಯಂ ಪ್ರತಿಷ್ಠಾಪಿಸಿಕೊಂಡ ಅಗ್ಗಳಿಕೆಯನ್ನು ಹೊಂದಿದೆ. ಈಗಲೂ ಮಧ್ಯಪ್ರಾಚ್ಯ, ಆಫ್ರಿಕಾ, ಪೂರ್ವಏಷ್ಯಾ, ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಪಸರಿಸುವ ಕೆಲಸ ಅಮೆರಿಕ ದೇಶದಿಂದ ನಿರಂತರವಾಗಿ ನಡೆದೇ ಇದೆ. ಆದರೆ, ಭಾರತದ ಮಾದರಿಯ ಪಾರ್ಲಿಮೆಂಟರಿ (ಸಂಸದೀಯ) ಪ್ರಜಾಪ್ರಭುತ್ವಕ್ಕೂ ಅಮೆರಿಕದ ಮಾದರಿಯ ಅಧ್ಯಕ್ಷೀಯ ಪ್ರಜಾತಂತ್ರ ವ್ಯವಸ್ಥೆಗೂ ಬಹಳ ವ್ಯತ್ಯಾಸ ಇದೆ. ಎರಡೂ ಮಾದರಿಗಳೂ ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಒಳಗೊಂಡಿವೆ. 21ನೆಯ ಶತಮಾನದ ಸಾಮಾಜಿಕ, ಆರ್ಥಿಕ, ಜಾಗತಿಕ ಪದ್ಧತಿಗಳಿಗೆ ಮತ್ತು ಇಂದಿನ ಜನರ ನೈತಿಕ ಮಟ್ಟಕ್ಕೆ ಅನುಗುಣವಾಗಿ ನಿಜವಾಗಿ ಬೇಕಾದದ್ದು ಈ ಎರಡೂ ಪ್ರಜಾತಂತ್ರ ಮಾದರಿಗಳ ಧನಾತ್ಮಕ ಅಂಶಗಳನ್ನು ಒಳಗೊಂಡ ಒಂದು ಹೈಬ್ರಿಡ್‌ ಮಾದರಿ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ತರುವ ಕೆಲಸ ಸುಲಭವಲ್ಲ. ಆದರೂ ಭಾರತದ ಜನತಂತ್ರವ್ಯವಸ್ಥೆಯ ಕೊರತೆಗಳನ್ನು ಅಮೆರಿಕದ ಮಾದರಿಗೆ ಹೋಲಿಸಿದಾಗ ನಮ್ಮಲ್ಲೂ ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ಆದರೆ ಅದು ಕನಸು ಮಾತ್ರ. ಆದಾಗ್ಯೂ ಕನಸು ಕಾಣುವುದು ತಪ್ಪಲ್ಲ.

ಕನಿಷ್ಠ ತಿಳಿವಳಿಕೆಯಾದರೂ ಬೇಕಲ್ಲ !
ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್‌ 155 ವರ್ಷಗಳ ಹಿಂದೆ ಪ್ರತಿಪಾದಿಸಿದ ಪ್ರಜಾಪ್ರಭುತ್ವ ಜನರಿಂದ, ಜನರಿಗಾಗಿ ಇರುವ ಜನರ ಸರಕಾರ ಎನ್ನುವುದನ್ನು ಶಾಲೆಯಲ್ಲಿ ಓದಿದ್ದರೂ ಅದರ ನಿಜವಾದ ಅರ್ಥ ಸಾಕಷ್ಟು ಭಾರತೀಯ ನಾಗರಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಅರಿವಿಲ್ಲ ಮತ್ತು ಆಚರಣೆಯಲ್ಲಿ ಕಾಣುವುದಿಲ್ಲ. ಸಮಾಜಸೇವೆಯನ್ನು ರಾಜಕೀಯ ಎಂದು ತಪ್ಪಾಗಿ ತಿಳಿದಿರುವ ಜನನಾಯಕರೇ ಹೆಚ್ಚಾಗಿದ್ದಾರೆ. ರಾಜಕಾರಣ ಅಥವಾ ರಾಜಕೀಯ ಎಂಬ ಶಬ್ದಗಳು ಇಂದು ಕೆಟ್ಟ ಕಾಯಕಕ್ಕೆ ಅನ್ವರ್ಥಕ ಪದಗಳಾಗಿವೆ. ಆದರೆ ಮೂಲತಃ ಅವೆರಡೂ ಶಬ್ದಗಳು ರಾಜನೀತಿ ಮತ್ತು ರಾಜ್ಯಶಾಸ್ತ್ರ ಎಂಬ ಪದಗಳ ಪರ್ಯಾಯವಾಗಬಲ್ಲ ಶಬ್ದಗಳು. ಇದಕ್ಕೆ ಕಾರಣ ಜನರಲ್ಲಿ ಪ್ರಜಾಪ್ರಭುತ್ವ ತತ್ವದ ಕನಿಷ್ಠ ಜ್ಞಾನದ ಕೊರತೆ. ಜನಪ್ರತಿನಿಧಿಗಳು ಜನಸೇವಕರು. ಅದನ್ನು ಜನರು ಒತ್ತಾಯಪೂರ್ವಕವಾಗಿ ಜನಪ್ರತಿನಿಧಿಗಳಿಂದ ಅಪೇಕ್ಷಿಸಬೇಕು.

ಅಧ್ಯಕ್ಷೀಯ ಪದ್ಧತಿಗೆ ಹೋಲಿಸಿದರೆ ಸಂಸದೀಯ ಪದ್ಧತಿ ಅರೆಪ್ರಜಾಪ್ರಭುತ್ವ ವ್ಯವಸ್ಥೆಯಂತೆ ತೋರುತ್ತದೆ. ದೇಶದ ಮತ್ತು ರಾಜ್ಯದ ನಾಯಕರ ಮತ್ತು ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ನಾಗರಿಕರಿಗೆ ನೇರ ಮತದಾನದ ಅವಕಾಶ ಅಧ್ಯಕ್ಷೀಯ ಪದ್ಧತಿಯಲ್ಲಿ ಇದೆ. ಸಂಸದೀಯ ಪದ್ಧತಿಯಲ್ಲಿ ಜನರು ಈ ಅವಕಾಶದಿಂದ ವಂಚಿತರು.

ನೇರ ಜನಮತ ಪಡೆಯದ ಉನ್ನತ ನಾಯಕರು
ಭಾರತದಲ್ಲಿ ದೇಶಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನಿ, ಮುಖ್ಯಮಂತ್ರಿ ಇತ್ಯಾದಿ ಪ್ರಮುಖ ನಾಯಕರನ್ನು ಮತದಾನದ ಮುಖೇನ ಪ್ರಜೆಗಳು ಆಯ್ಕೆ ಮಾಡುವ ಕ್ರಮ ಇಲ್ಲ. ನಾಗರಿಕರು ಜನಪ್ರತಿನಿಧಿಗಳನ್ನು ಮಾತ್ರ ಆರಿಸುವ ಹಕ್ಕುಳ್ಳವರು. ಹೀಗೆ ಬಹುಮತದಿಂದ ಆಯ್ಕೆ ಆದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಎಲ್ಲ ಜನರ ಆಶೀರ್ವಾದ ಪಡೆದವರಲ್ಲ. ಜನಪ್ರತಿನಿಧಿಗಳು ನಾಯಕರನ್ನು ಆಯ್ಕೆಮಾಡುತ್ತಾರೆ. ನಾಗರಿಕರಿಂದ ನೇರವಾಗಿ ಮತದಾನ ಮೂಲಕ ಜನಮತ ಪಡೆಯದ ನಾಯಕರು ದೇಶದ ಚುಕ್ಕಾಣಿ ಹಿಡಿಯುತ್ತಾರೆ. ದೇಶದ ನಾಯಕರ ಆಯ್ಕೆಯಲ್ಲಿಯ ಎರಡು ಸ್ತರದ ಮತದಾನ ವ್ಯವಸ್ಥೆ ಪ್ರಜಾಪ್ರಭುತ್ವದ ಮೂಲ ಆಶಯದ ಶೈಥಿಲ್ಯಕ್ಕೆ ಕಾರಣವಾಗುತ್ತದೆ.

ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವವರು ಯಾರು?
ಅಮೆರಿಕದ ಮುಖ್ಯಚುನಾವಣೆಗೆ (ದೇಶ, ರಾಜ್ಯ, ಪಟ್ಟಣ ಅಥವಾ ಸ್ಥಳೀಯ ಮಟ್ಟದ) ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪ್ರಾಥಮಿಕ (ಪ್ರೈಮರಿ) ಚುನಾವಣೆಗಳ ಮೂಲಕ ಆಗುತ್ತದೆ. ಪ್ರತಿ ರಾಜಕೀಯ ಪಕ್ಷಕ್ಕೆ ಹೆಸರು ನೋಂದಾಯಿಸಿಕೊಂಡ ನಾಗರಿಕರಿಗೆ ಈ ಪ್ರಾಥಮಿಕ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ಇದೆ. ಇಲ್ಲಿ ಪ್ರಜಾಪ್ರಭುತ್ವ ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳುತ್ತದೆ. ಪ್ರಾಥಮಿಕ ಮತ್ತು ಮುಖ್ಯ ಚುನಾವಣೆಗಳಿಗೂ ಪೂರ್ವದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನೆಲ್ಲ ಒಂದೇ ವೇದಿಕೆಯಲ್ಲಿ ಸೇರಿಸಿ ವಿಷಯಾಧಾರಿತ ಚರ್ಚೆ ಮತ್ತು ವಾದ, ಪ್ರತಿವಾದಗಳ ಮೂಲಕ ಅಭ್ಯರ್ಥಿಗಳನ್ನು ಸಾಣೆಗೆ ಹಿಡಿಯಲಾಗುತ್ತದೆ. ಈ ರೀತಿಯ ನೇರ ಚರ್ಚೆಗಳು ಜನರ ಅಭಿಪ್ರಾಯಗಳು ರೂಪುಗೊಳ್ಳಲು ಸಹಕಾರಿಯಾಗುತ್ತವೆ. ಇಂತಹ ಹಲವು ಚರ್ಚೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ. ಉಮೇದುವಾರರಲ್ಲಿ ಪ್ರಶ್ನೆಗಳನ್ನು ನೇರವಾಗಿ ಕೇಳುವ ಅವಕಾಶ ನಾಗರಿಕರಿಗೆ ಇರುತ್ತದೆ. ಅಭ್ಯರ್ಥಿಗಳ ಹಿಂದಿನ ಕಡತಗಳು, ವಿಷಯಗಳ ಮೇಲೆ ಅವರ ಹಿಂದಿನ ಕರ್ಮಕಾಂಡಗಳನ್ನು ಬಟ್ಟಬಯಲಾಗಿಸುವ ಅವಕಾಶ ಇದೆ. ಅಭ್ಯರ್ಥಿಗಳ ಹಿಂದಿನ ಅದೆಷ್ಟೋ ವೈಯಕ್ತಿಕ ಚರಿತ್ರೆಗಳು ಮತ್ತು ಅನೈತಿಕ ವ್ಯವಹಾರಗಳು ಇದ್ದರೆ ಬೆಳಕಿಗೆ ಬರುತ್ತವೆ. ಈ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನೇರಪ್ರಸಾರ ಆಗುತ್ತವೆ. ಅಭ್ಯರ್ಥಿಗಳ ವಯೋಮಾನ, ಆರೋಗ್ಯಸ್ಥಿತಿ, ದೈಹಿಕ ಮತ್ತು ಮಾನಸಿಕ ಸದೃಢತೆ, ಚಿತ್ತಸ್ವಾಸ್ಥ್ಯ, ಹಿಂದಿನ ಎಲ್ಲ ತೆರಿಗೆ ದಾಖಲೆಗಳು, ಕೌಟುಂಬಿಕರಹಿತ ಆಸಕ್ತಿಗಳು ಮತ್ತು ಇನ್ನೂ ಅನೇಕ ಸೂಕ್ಷ್ಮವಿಷಯಗಳು ಕೂಲಂಕಷವಾಗಿ ಪರಿಶೀಲಿಸಲ್ಪಡುತ್ತವೆ. ಪ್ರತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಲ್ಲಿ ಪ್ರೈಮರಿ ಚುನಾವಣೆಯಲ್ಲಿ ಆಯ್ಕೆ ಆದ ವ್ಯಕ್ತಿ ಮುಖ್ಯಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿ. ಅಮೆರಿಕದ ಮತದಾರರಿಗೆ ಸ್ವಕ್ಷೇತ್ರದ ಹಿತವನ್ನು ಮತ್ತು ತಮ್ಮ ರಾಜ್ಯ ಮತ್ತು ರಾಷ್ಟ್ರದ ಏಳ್ಗೆಯನ್ನು ಒಟ್ಟಿಗೆ ಸಾಧಿಸುವಲ್ಲಿ ಪೂರಕವಾಗಬಲ್ಲ ಅಭ್ಯರ್ಥಿಯನ್ನು ಆರಿಸುವ ವಿಪುಲ ಅವಕಾಶವಿದೆ.

ಆದರೆ, ಭಾರತದಲ್ಲಿ ಪಕ್ಷದ ನಾಯಕರು ದೆಹಲಿಯಲ್ಲಿ ಅಥವಾ ಬೆಂಗಳೂರಿನಲ್ಲಿ ಅಥವಾ ಮತ್ತೆಲ್ಲೋ ಕುಳಿತು ನಿರ್ಧರಿಸಿದ (ಹಣ, ಪ್ರಭಾವ, ಜಾತಿ ಆಧಾರಿತವಾಗಿ) ಅಭ್ಯರ್ಥಿಗಳಿಗೆ ಜನರು ಅರೆಮನಸ್ಸಿನಿಂದ ಮತ ನೀಡಿ ಬರುವ ಸಂದರ್ಭಗಳೇ ಹೆಚ್ಚು. ಅಧ್ಯಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಥಮಿಕ ಮತ್ತು ಮುಖ್ಯ ಚುನಾವಣೆಗಳ ಮೂಲಕ ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳು ಪಕ್ಷದ ನಾಯಕರಿಗೆ ಮಣೆಹಾಕುವ ಅಗತ್ಯವೇ ಇಲ್ಲ. ಆದರೆ, ತಮ್ಮನ್ನು ಆಯ್ಕೆ ಮಾಡಿಕಳುಹಿಸಿದ ಕ್ಷೇತ್ರದ ವಾಸಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಅವರನ್ನು ಮರೆಯುವ ಹಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಮಸೂದೆ ಮತ್ತು ಕಾನೂನುಗಳ ರಚನೆಯಲ್ಲಿ ತಮ್ಮನ್ನು ಆರಿಸಿದ ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ತಮ್ಮ ಮತ ಚಲಾಯಿಸುತ್ತಾರೆ. ಏಕೆಂದರೆ, ಮುಂದಿನ ಚುನಾವಣೆಗೆ ಅವರೇ ಬೇಕಲ್ಲವೇ ! ಇಲ್ಲಿ ಪಕ್ಷದ ನಾಯಕರಿಗೆ ವಿಶೇಷ ಮನ್ನಣೆ ಅಥವಾ ಅಧಿಕಾರಗಳಿಲ್ಲ. ಪಕ್ಷದ ವರಿಷ್ಠರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಅಥವಾ ಜನಪ್ರತಿನಿಧಿಗಳ ಮೇಲೆ ಯಾವುದೇ ಹತೋಟಿ ಇರುವುದಿಲ್ಲ.

ಅಭ್ಯರ್ಥಿಗಳು ಯಾವುದೋ ವಿಳಾಸದವರು !
ಅಮೆರಿಕದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಧಿಕೃತ ನಿವಾಸ ಇರುವ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವ ಅವಕಾಶ ಇದೆ. ಇದರಿಂದ ಅವರನ್ನು ಆಯ್ಕೆ ಮಾಡಿದ ಜನರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಶಕ್ಯವಾಗುತ್ತದೆ. ಕ್ಷೇತ್ರದ ನಾಗರಿಕರಿಗೂ ತಾವು ಆಯ್ಕೆ ಮಾಡಿದ ಪ್ರತಿನಿಧಿಯನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಈ ನಿಯಮ ಭಾರತದಲ್ಲಿ ಇಲ್ಲ. ಅನೇಕ ಸಲ ಆರಿಸಿ ಕಳುಹಿಸಿದ ಪ್ರತಿನಿಧಿ ಮತ್ತೆ ಕಾಣಸಿಗುವುದು ಮುಂದಿನ ಚುನಾವಣೆಯ ಸಂದರ್ಭದಲ್ಲಿಯೇ. ಏಕೆಂದರೆ, ಜನಪ್ರತಿನಿಧಿಗೂ ಮತ್ತು ಪ್ರತಿನಿಧಿಸುವ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಹಲವು ಸಲ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಬೇರೆ ಹೊರರಾಜ್ಯದ ಅಭ್ಯರ್ಥಿಗಳನ್ನು ದೆಹಲಿಗೆ ಆರಿಸಿ ಕಳಿಸುವ ಪರಿಪಾಠ ಇದೆ. ಅದೇ ರೀತಿ ಲೋಕಸಭೆಗೆ ತಮ್ಮದಲ್ಲದ ಕ್ಷೇತ್ರದಿಂದ ಅಭ್ಯರ್ಥಿಗಳು ಸ್ಪರ್ಧಿಸುವುದಿದೆ.

ಚುನಾವಣೆಯಲ್ಲಿ ಮೀಸಲಾತಿ ಎನ್ನುವುದು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಕ್ಕೆ ಪ್ರತಿಕೂಲವಾದ ಸಂಗತಿ. ಮೀಸಲಾತಿಯಿಂದ ಮೀಸಲು ಕ್ಷೇತ್ರಗಳಲ್ಲಿ ವಾಸಿಸುವ ನಾಗರಿಕರ ಸ್ವಾತಂತ್ರ್ಯಹರಣವಾದಂತೆ. ಮೀಸಲಾತಿ ಅನ್ವಯಿಸದ ಸಮುದಾಯಕ್ಕೆ ಸೇರಿದ ನಾಗರಿಕರ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯಾಗುತ್ತದೆ. ಭಾರತದಲ್ಲಿ ಚುನಾವಣಾ ಮೀಸಲಾತಿಯನ್ನು ತೆಗೆಯುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಜನಪ್ರತಿನಿಧಿಗಳು ಹೊಣೆಯನ್ನು ನಿರ್ವಹಿಸುವುದು ಸಾಧ್ಯವೆ?
ಅಮೆರಿಕದ ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆ ಆದ ಪ್ರತಿನಿಧಿಗಳಿಗೆ ಎರಡು ಮುಖ್ಯ ಕರ್ತವ್ಯಗಳಿವೆ. ಮೊದಲನೆಯದು ತಮ್ಮ ಕ್ಷೇತ್ರದ ಮತ್ತು ಕ್ಷೇತ್ರವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು. ಎರಡನೆಯದು ಶಾಸನಗಳನ್ನು ತಯಾರಿಸುವುದು. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದೇ ಗುರುತರ ಜವಾಬ್ದಾರಿ ಮತ್ತು ಜನಪ್ರತಿನಿಧಿಗಳ ಪೂರ್ಣಕಾಲದ ಉದ್ಯೋಗ. ಇದರ ಜೊತೆ ಮಂತ್ರಿಸ್ಥಾನವನ್ನು ಅಥವಾ ಜಿಲ್ಲಾ ಉಸ್ತುವಾರಿ ಪದವಿಯನ್ನು ನಿಭಾಯಿಸಲು ಅಸಾಧ್ಯ. ಭಾರತೀಯ ವ್ಯವಸ್ಥೆಯಲ್ಲಿ ಈ ಎಲ್ಲ ಜವಾಬ್ದಾರಿಗಳನ್ನು ಜನಪ್ರತಿನಿಧಿಗಳೇ ನೋಡಿಕೊಳ್ಳು ವುದರಿಂದ ಅವುಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗದೆ ಅವರನ್ನು ಆರಿಸಿದ ಜನತೆಗೆ ಅಪಚಾರವಾಗುತ್ತದೆ.

ಎಷ್ಟೊಂದು ಪಕ್ಷಗಳು !
ಅಮೆರಿಕದಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರೆಟಿಕ್‌ ಎಂಬ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಇವೆ. ಯಾವುದೇ ಪ್ರಾದೇಶಿಕ ಪಕ್ಷಗಳಿಲ್ಲ. ಭಾರತದಲ್ಲಿ ಕೂಡ ಸ್ವಾತಂತ್ರಾéನಂತರ ಬೆರಳೆಣಿಕೆಯ ರಾಷ್ಟ್ರೀಯ ಪಕ್ಷಗಳಿದ್ದುವು. ಕ್ರಮೇಣ ಅನೇಕ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಪ್ರಾದೇಶಿಕ ಪಕ್ಷಗಳು ಚುನಾವಣಾ ಫ‌ಲಿತಾಂಶ ಬಂದ ಬಳಿಕ ಜನಾದೇಶದ ವಿರುದ್ಧವಾಗಿ ಅಪವಿತ್ರ ಮೈತ್ರಿ, ಅವಕಾಶವಾದಿ ರಾಜಕಾರಣದಲ್ಲಿ ತೊಡಗುವುದು ಸಾಮಾನ್ಯವಾಗಿವೆ.

ಅಮೆರಿಕದಲ್ಲಿ ಪಕ್ಷಾಂತರ ಎನ್ನುವುದು ಚಿತ್ತಕ್ಕೆ ಗ್ರಹಿಸಲಾಗದ ವಿಷಯ. ರಾಜಕಾರಣಿಗಳು ಪಕ್ಷಾಂತರ ಮಾಡುವ ಕ್ರಮ ಇಲ್ಲ. ಎರಡುಪಕ್ಷಗಳ ವ್ಯವಸ್ಥೆಯಲ್ಲಿ ಪ್ರತಿವಿಷಯಗಳಲ್ಲೂ ಪರಸ್ಪರ ವಿರುದ್ಧವಾದ ಸಿದ್ಧಾಂತ ಮತ್ತು ನಿಲುವುಗಳನ್ನು ಈ ಪಕ್ಷಗಳು ಪ್ರತಿನಿಧಿಸುತ್ತವೆ. ಹೀಗಾಗಿ ಅಮೆರಿಕದ ರಾಜಕಾರಣಿಗಳು ಯಾವುದಾದರೊಂದು ಪಕ್ಷದ ಸಿದ್ಧಾಂತಕ್ಕೆ ಜೀವನಪರ್ಯಂತ ಬದ್ಧರಾಗಿರಬೇಕು. ಒಂದೊಮ್ಮೆ ತಮ್ಮ ಪಕ್ಷದಲ್ಲಿ ಉಳಿಯುವ ಮನಸ್ಸಿಲ್ಲದಿದ್ದರೆ ಸ್ವಂತಂತ್ರ ರಾಜಕಾರಣಿಯಾಗಿ ಅಥವಾ ಜನಪ್ರತಿನಿಧಿಯಾಗಿ ಮುಂದುವರಿಯುವ ಅವಕಾಶ ಇದೆ. ಪಕ್ಷ ಬದಲಾಯಿಸಿದರೆ ಜನರ ನಂಬುಗೆಯನ್ನು ಕಳೆದುಕೊಳ್ಳುವುದು ಖಚಿತ. ರಾಜಕಾರಣಿಯಾಗಿ ಸಮಾಜಸೇವಾ ಜೀವನವೂ ಅಲ್ಲಿಗೇ ಕೊನೆಗೊಳ್ಳುತ್ತದೆ. ಭಾರತದಲ್ಲಿ ಪಕ್ಷಾಂತರ ನಿಷೇಧ ಕಾಯಿದೆ ಇದ್ದರೂ ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ರಾಜಕಾರಣಿಗಳ ನೈತಿಕತೆಯ ಮಟ್ಟ ಇದಕ್ಕೆ ಮೂಲಕಾರಣ ಎಂದು ವಿಶ್ಲೇಷಿಸಬಹುದು.

ಕಾರ್ಯಾಂಗ ಮತ್ತು ಶಾಸಕಾಂಗಗಳ ಅವಧಿ
ಅಮೆರಿಕದ ಜನರಿಂದ ಒಮ್ಮೆ ಚುನಾಯಿತವಾದ ಕಾರ್ಯಾಂಗ (ಸರಕಾರ) ನಾಲ್ಕು ವರ್ಷಗಳ ಮತ್ತು ಶಾಸಕಾಂಗದ ಕೆಳಮನೆ (ಹೌಸ್‌ ರೆಪ್ರಸೆಂಟೇಟಿ…) 2 ವರ್ಷಗಳ ನಿಶ್ಚಿತ ಅವಧಿಗಳನ್ನು ಪೂರೈಸುತ್ತವೆ.

ಶಾಸಕಾಂಗದ ಮೇಲ್ಮನೆಯ (ಸೆನೆಟ್) ಪ್ರತಿನಿಧಿಗಳ ಅವಧಿ 6 ವರ್ಷಗಳು. ಇದರಿಂದ ರಾಷ್ಟ್ರಾಧ್ಯಕ್ಷರು ಮತ್ತು ಚುನಾಯಿತ ಪ್ರತಿನಿಧಿಗಳು ನಿರಾತಂಕವಾಗಿ ಅವಧಿ ಮುಗಿಯುವವರೆಗೆ ಕಾರ್ಯ ನಿರ್ವಹಿಸಬಹುದು. ಮುಖ್ಯ ಚುನಾವಣೆಗಳು ಪ್ರತಿಸಲ ನವೆಂಬರ್‌ 1ನೆಯ ತಾರೀಕಿನ ನಂತರ ಬರುವ ಮೊದಲ ಮಂಗಳವಾರ ನಡೆಯುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಸರಕಾರಕ್ಕೆ ತನ್ನ ಬಹುಮತವನ್ನು ಸದಾ ಕಾಯ್ದುಕೊಳ್ಳುವ ಅನಿವಾರ್ಯತೆ ಇರುತ್ತದೆ. ಇದರಿಂದ ಹಲವು ಅನಪೇಕ್ಷಿತ ಬಾಧಕಗಳು ಸಂಭವಿಸುತ್ತವೆ. ಅವಧಿ ಪೂರ್ತಿಗೊಳ್ಳುವ ಮೊದಲೇ ದೇಶ ಅತಿ ದುಬಾರಿಯಾದ ಮತ್ತು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವ ಚುನಾವಣೆಯನ್ನು ಎದುರಿಸಿದ ಪ್ರಸಂಗಗಳು ಹಿಂದೆ ಅನೇಕ ಬಾರಿ ನಡೆದಿವೆ.

ಸಚಿವರು ಮತ್ತು ಅವರ ಅನುಭವಗಳು
ಅಮೆರಿಕದ ಸರಕಾರದಲ್ಲಿ ಮಂತ್ರಿಗಳು (ಸೆಕ್ರೆಟರಿಗಳು) ಅಧ್ಯಕ್ಷರಿಂದ ನಾಮಕರಣಗೊಂಡ ವ್ಯಕ್ತಿಗಳು. ಇವರು ಜನಾದೇಶ ಪಡೆದವರಲ್ಲ. ಆದರೆ, ಅವರು ಶಾಸಕಾಂಗದ ಅನುಮೋದನೆ ಪಡೆಯಬೇಕು. ಶಾಸಕರು ಕೇಳುವ ಖಾತೆಗೆ ಸಂಬಂಧಿಸಿದ ಕಠಿಣ ಪ್ರಶ್ನೆಗಳಿಗೆ ಉತ್ತರಿಸಿ ಸೈ ಎನಿಸಿಕೊಂಡವರು ಮಾತ್ರ ಶಾಸಕಾಂಗದ ಒಪ್ಪಿಗೆಗಳ ಸಚಿವರಾಗಬಹುದು. ಮಂತ್ರಿಸ್ಥಾನಕ್ಕೆ ಅಧ್ಯಕ್ಷರಿಂದ ನೇಮಿಸಲ್ಪಟ್ಟವರು ಅವರ ಇಲಾಖೆಗಳ ವಿಷಯಗಳಲ್ಲಿ ನುರಿತವರು. ಅಪಾರ ಅನುಭವ ಉಳ್ಳವರು ಮಾತ್ರ ಸಚಿವಸ್ಥಾನಕ್ಕೆ ಆರಿಸಲ್ಪಡುತ್ತಾರೆ. ಭಾರತದಲ್ಲಿ ಪ್ರಧಾನಿಯವರು ಜನರಿಂದ ಚುನಾಯಿತರಾದ ಪ್ರತಿನಿಧಿಗಳನ್ನು ಮಾತ್ರ ಸಚಿವರನ್ನಾಗಿ ನೇಮಿಸುವ ಅವಕಾಶ ಇರುವುದರಿಂದ ಸಚಿವರಿಗೆ ಅವರ ಇಲಾಖೆಯ ಜ್ಞಾನ ಮತ್ತು ಅನುಭವ ಇರದೇ ಇರುವ ಸಾಧ್ಯತೆಯೇ ಹೆಚ್ಚು. ಜನಪ್ರತಿನಿಧಿಗಳ ಜಾತಿ, ವಯಸ್ಸು, ಶಾಸಕರಾಗಿ ಅವಧಿಗಳ ಸಂಖ್ಯೆ, ಅವರ ರಾಜ್ಯ ಇತ್ಯಾದಿ ಆಧಾರಿತ ಪ್ರಾತಿನಿಧ್ಯ, ಸರಕಾರ ರಚನೆಯಲ್ಲಿ ಪಕ್ಷಗಳ ಹೊಂದಾಣಿಕೆ ಇತ್ಯಾದಿಗಳು ಸಚಿವರ ಆಯ್ಕೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ. ಭಾರತದಲ್ಲಿ ಸಚಿವರ ಖಾತೆಗಳನ್ನು ಆಗಾಗ ಬದಲಾಯಿಸುವ ರೂಢಿ ಇರುವುದು ಗಮನಾರ್ಹ. ಸಚಿವರ ಅನುಭವಕ್ಕೂ ಅವರು ವಹಿಸಿಕೊಳ್ಳುವ ಖಾತೆಗೂ ಎಷ್ಟೋ ಸಲ ನೇರ ಸಂಬಂಧವೇ ಇರುವುದಿಲ್ಲ. ಇದು ಸಚಿವರ ಸುಪರ್ದಿಯಲ್ಲಿರುವ ಇಲಾಖೆಗಳಿಗೆ ಪರಿಣಾಮಕಾರಿ ನಾಯಕತ್ವ ನೀಡುವಲ್ಲಿ ತೊಡಕನ್ನು ಉಂಟುಮಾಡುತ್ತದೆ. ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸಚಿವರ ಸಂಖ್ಯೆಬಹಳ ಕಡಿಮೆ ಮತ್ತು ಖಾತೆಗಳು ಅತಿನಿಗದಿತ ಸಂಖ್ಯೆಯಲ್ಲಿವೆ.

ನಮ್ಮ ಭರವಸೆಯ ಭಾರತ – ಆಶಾವಾದಿತ್ವ
ಅಮೆರಿಕ ದೇಶಕ್ಕೆ ಹೋಲಿಸಿದರೆ ಭಾರತ ಇನ್ನೂ ಎಳೆಯ ಪ್ರಜಾತಂತ್ರ ವ್ಯವಸ್ಥೆ. ಅಮೆರಿಕ ಸುಮಾರು 243 ವರ್ಷಗಳಿಂದ ಪ್ರಜಾಪ್ರಭುತ್ವದ ಇತಿಹಾಸವನ್ನು ಹೊಂದಿದ್ದರೆ, ಭಾರತ ಕೇವಲ 72 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆ ಪೂರ್ಣಪ್ರಮಾಣದ ಪಕ್ವತೆ ಪಡೆಯಲು ಇನ್ನೂ ಹಲವು ವರ್ಷಗಳೇ ಬೇಕು. ಸಾಧ್ಯತೆಗಳು ಹೇರಳವಾಗಿವೆ. ಇದಕ್ಕೆ ಮತದಾರರ ಮತ್ತು ರಾಜಕಾರಣಿಗಳ ಪಾತ್ರ ಮಹತ್ತರವಾದದ್ದು. ಜವಾಬ್ದಾರಿಯುತ ಮಾಧ್ಯಮವರ್ಗದವರು ಮತ್ತು ಪತ್ರಿಕೋದ್ಯಮಿಗಳೂ ಅಗತ್ಯವಾಗಿ ಬೇಕು. ಜನರನ್ನು ಶೈಕ್ಷಣಿಕವಾಗಿ ತರಬೇತುಗೊಳಿಸುವ, ರಾಜಕಾರಣಿಗಳನ್ನು ಸರಿಯಾದ ಪಥದಲ್ಲಿಡುವ ಮಾಧ್ಯಮಗಳು ಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧಪಕ್ಷಗಳು ಸರಕಾರದ ಧೋರಣೆಗಳನ್ನು ವಸ್ತುನಿಷ್ಠವಾಗಿ ಪ್ರಶ್ನಿಸಿ, ಜನಾಭಿವೃದ್ಧಿಯ ಕೆಲಸಗಳಲ್ಲಿ ಅಧಿಕಾರದಲ್ಲಿರುವ ಪಕ್ಷದ ಜೊತೆ ಕೈಜೋಡಿಸಬೇಕು. ಜನರ ಅನುಕೂಲತೆಗೆ ಬೇಕಾಗಿ ಮತ್ತು ಮತದಾನದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯ ನಾಗರಿಕರು ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಚುನಾವಣೆಯ ದಿನದ 1-2 ವಾರಗಳ ಮುಂಚಿತವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತಗಟ್ಟೆಗೆ ಹೋಗಲು ಅನುಕೂಲತೆ ಇಲ್ಲದವರಿಗಾಗಿ ಆನ್‌ಲೈನ್‌ ಅಥವಾ ಅಂಚೆ ಮೂಲಕ ಮತ ಚಲಾಯಿಸುವ ಸೌಕರ್ಯ ಒದಗಿಸಬೇಕು. ಹಣ, ಹೆಂಡ ಮತ್ತು ಇತರ ಆಕರ್ಷಕ ವಸ್ತುಗಳನ್ನು ಬಳಸಿಕೊಂಡು ಜನರ ಮನಸ್ಸಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರಿ ಮತ ಪಡೆಯುವ ಪರಂಪರೆ ತೊಲಗಬೇಕು. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಪ್ರಜಾಪ್ರಭುತ್ವದ ಪೂರ್ಣಸಫ‌ಲತೆಗೆ ಕಾರಣವಾಗಬಲ್ಲ ಇಂತಹ ಅನೇಕ ವಿಚಾರಗಳಲ್ಲಿ ಅಮೆರಿಕದ ಜನತೆ ಚೆನ್ನಾಗಿ ತಿಳುವಳಿಕೆ ಉಳ್ಳವರು. ಅವರು ಈ ವಿಷಯದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದಾರೆ. ಜನತಂತ್ರದ ಗರಿಷ್ಟತೆಯನ್ನು ಸಾಧಿಸುವಲ್ಲಿ ಭಾರತ ಮತ್ತು ಇತರ ದೇಶಗಳಿಗೆ ಅಮೆರಿಕ ಮಾದರಿಯಾಗಿದೆ.

ಕರ್ಕಿ ಆನಂದ ಹಾಸ್ಯಗಾರ
ಕ್ಯಾಲಿಫೋರ್ನಿಯಾ, ಅಮೆರಿಕ

ಟಾಪ್ ನ್ಯೂಸ್

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.