ಕಪ್ಪು-ಬಿಳುಪಿನ ನಡುವೆ ಸತ್ಯ ದರ್ಶನ! ಛಾಯಾಚಿತ್ರ ಮಾಂತ್ರಿಕ ಟಿ.ಎಸ್.ಸತ್ಯನ್
Team Udayavani, Dec 17, 2023, 1:00 PM IST
ತಾಂಬ್ರಹಳ್ಳಿ ಸುಬ್ರಹ್ಮಣ್ಯ ಸತ್ಯನಾರಾಯಣ ಅಯ್ಯರ್ ಈ ಒತ್ತಕ್ಷರಗಳ ಮಾರುದ್ದದ ಹೆಸರಿನಲ್ಲಿ ವಿಶ್ವಕಂಡ ಅಪರೂಪದ ಛಾಯಾಗ್ರಹಕನೊಬ್ಬನ ವ್ಯಕ್ತಿತ್ವ ಅರಳುತ್ತದೆ. ಅವರೇ ಟಿ. ಎಸ್. ಸತ್ಯನ್. ಕಪ್ಪು -ಬಿಳುಪಿನ ಛಾಯಾಚಿತ್ರಗಳಿಗೆ ಬಹುವರ್ಣದ ಆಕಾರ, ವಿಚಾರ, ಭಾವನೆಗಳನ್ನ ತುಂಬಿ ಅರ್ಥಗರ್ಭಿತ ಚಿತ್ರ ಕೃತಿಗಳನ್ನು ಜಗತ್ತಿನ ಮುಂದಿಟ್ಟ ಮಾಂತ್ರಿಕ ಟಿ. ಎಸ್. ಸತ್ಯನ್. ವಿಶ್ವವಿಖ್ಯಾತಿ ಪಡೆದ ಕನ್ನಡದ ಪ್ರಬುದ್ಧ, ಪ್ರತಿಭಾನ್ವಿತ ಪತ್ರಿಕಾ ಛಾಯಾಗ್ರಾಹಕ ಟಿ. ಎಸ್. ಎಸ್ ಜನಿಸಿ ಇದೇ ಡಿ. 18ಕ್ಕೆ ನೂರು ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಟಿ. ಎಸ್. ಸತ್ಯನ್ ಅವರ ಅಸಂಖ್ಯಾತ ಅಭಿಮಾನಿಗಳು, ಶಿಷ್ಯ ವೃಂದ ಟಿ. ಎಸ್. ಸತ್ಯನ್ ಅವರ “ಜನ್ಮ ಶತಮಾನೋತ್ಸವ’ದ ಆಚರಣೆಯ ಸಂಭ್ರಮದಲ್ಲಿದ್ದಾರೆ. ಟಿ. ಎಸ್ ಸತ್ಯನ್ ಅವರ “ಜನ್ಮ ಶತಮಾನೋತ್ಸವ’ ನಿಮಿತ್ತ ಅವರ ಬದುಕು, ಸಾಧನೆ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ.
“ವಯಸ್ಸಾಯ್ತು ಕಣೋ ನೀನೇ ಫ್ರೇಮ್ ಸೆಟ್ ಮಾಡಿ, ಎಕ್ಸ್‌ಪೋಷರ್ ಸರಿ ಮಾಡಿಡು. ನಾನು ಶಟರ್ ಬಟನ್ ಒತ್ತುತ್ತೇನೆ’ ಎಂದು ಹೇಳಿದ ಮಾತುಗಳು ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಲೇ ಇದೆ. ದೇಶ ಕಂಡ ಪ್ರತಿಭಾವಂತ ಛಾಯಾಚಿತ್ರ ಕಲಾವಿದ ಟಿ. ಎಸ್. ಸತ್ಯನ್ ಅವರು ಹುಟ್ಟಿ ನೂರು ವರುಷವಾಯಿತು. ವಿಶ್ವದ ಕೋಟ್ಯಂತರ ಜನರ ಮನಸ್ಸಿನಲ್ಲಿ ಅವರು ನಿರ್ಮಿಸಿದ ಚಿತ್ರಗಳು ಕಥೆ ಹೇಳುತ್ತಲೇ ಇವೆ. ಅವರ ಶಿಷ್ಯರ ಸಂಖ್ಯೆ ಬೆಳೆಯುತ್ತಲೇ ಇದೆ. ಬಾಕ್ಸ್ ಕ್ಯಾಮರಾ ಇಂದು ಮಿರರ್ ಲೆಸ್ ಆಗಿದೆ. ಅದರಲ್ಲಿದ್ದ ಕನ್ನಡಿ ಮಾಯವಾಗಿದೆ. ಆದರೆ ಪ್ರತಿಬಿಂಬ ಪ್ರಕಾಶಮಾನವಾಗಿ ಬೆಳಗುತ್ತಿದೆ. ಪರಂಪರೆಯ ಕೊಂಡಿಯಂತೆ ಸತ್ಯನ್ ಅವರು ನಿರ್ಮಿಸಿದ ಪ್ರತಿಚಿತ್ರಗಳು ಎಲ್ಲರನ್ನೂ ಬೆಸೆಯುತ್ತಿವೆ. ಮಸೂರ ಮಸುಕಾಗದೆ ಸ್ಪಟಿಕದಂತೆ ಪ್ರಕಾಶಿಸುತ್ತಿದೆ.
ಮೈಸೂರಿನಿಂದ ಶುರು ಫೋಟೋ ನಂಟು:
ಮೈಸೂರಿನ ಭಾನುಮಯ್ಯ ಶಾಲೆಯಲ್ಲಿ ಶಿಕ್ಷಣ, ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಪ್ರತಿಭಾವಂತ. 1940ರಲ್ಲಿ ಕೇವಲ 7 ರೂಪಾಯಿಗೆ ಸಾಧಾರಣ ಕೆಮರಾ ಖರೀದಿಸಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಕಲಾವಂತ. ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ಮಾನವಂತ. ಹೆಚ್ಚಿಗೆ ಹೇಳುವುದಾದರೆ ಸಾಮಾಜಿಕ ಕಾಳಜಿಗೆ, ಬದ್ಧತೆಗೆ ತನ್ನನ್ನು ತಾನೇ ತೊಡಗಿಸಿಕೊಂಡ ಹೃದಯವಂತ.
ಟಿ. ಎಸ್. ಸತ್ಯನ್ ಛಾಯಾಗ್ರಹಣ ಕಲೆಗೆ ಮಾರುಹೋದ ಆಂಗ್ಲ ಪ್ರಾಧ್ಯಾಪಕ ಹೊಸ ಕೆಮರಾ ಖರೀದಿಗೆ 350 ರೂಪಾಯಿ ಸಾಲವಾಗಿ ನೀಡುತ್ತಾರೆ. ಕರ್ನಾಟಕದ ಕುರಿತಾಗಿ ಸಚಿತ್ರ ಕೃತಿ ತರುವುದರ ಮೂಲಕ ಋಣ ಸಂದಾಯ ಮಾಡುವಂತೆ ಪ್ರೇರೇಪಿಸುತ್ತಾರೆ. ಈ ಅಪೂರ್ವ ಅವಕಾಶವನ್ನು ಬಳಸಿಕೊಂಡ ಸತ್ಯನ್ ಎಚ್. ವೈ. ಶಾರದಾ ಪ್ರಸಾದ್ ಅವರ ಸಹಯೋಗದಿಂದ ಕೃತಿ ಅರ್ಪಣೆ ಮಾಡಿಯೇ ಬಿಡುತ್ತಾರೆ. ಇದು ಅವರ ಕತೃìತ್ವ ಶಕ್ತಿಗೆ ಹಿಡಿದ ಕೈಗನ್ನಡಿ.
ಅಂದಿನ ಪ್ರಸಿದ್ಧ ವಾರ ಪತ್ರಿಕೆ ಇಲ್ಯೂಸ್ಟ್ರೇಟೆಡ್ ವೀಕ್ಲಿಯಲ್ಲಿ ಟಿ. ಎಸ್. ಸತ್ಯನ್ ನಿರ್ಮಿಸಿದ ಚಿತ್ರ, ಲೇಖನಗಳು ಪ್ರಕಟವಾಗಲು ಆರಂಭವಾಗುತ್ತದೆ. 1948ರಿಂದ ಅವರ ಪತ್ರಿಕಾ ಛಾಯಾಗ್ರಹಣ ಬಹಳ ಉತ್ತಮ ಸ್ತರಕ್ಕೆ ಏರಲಾರಂಭಿಸುತ್ತದೆ. ದಲೈ ಲಾಮ ಅವರ ಆಗಮನ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ, ರಾಷ್ಟ್ರಪತಿ, ಪ್ರಧಾನಿ, ರಾಜ, ರಾಣಿ, ಅಬಾಲವೃದ್ಧರು ಹೀಗೆ ಎಲ್ಲರೂ ಅವರ ಚಿತ್ರಗಳಿಗೆ ವಸ್ತುಗಳಾಗುತ್ತಾರೆ. ಭಾರತೀಯ ಪತ್ರಿಕಾ ಛಾಯಾಗ್ರಹಣಕ್ಕೆ ಒಂದು ಅಗ್ರ ಪಂಕ್ತಿಯನ್ನು ಹಾಕಿಕೊಟ್ಟ ಸತ್ಯನ್ ಅವರನ್ನು ಭಾರತದ ಪತ್ರಿಕಾ ಛಾಯಾಗ್ರಹಣದ ಪಿತಾಮಹ ಎನ್ನಲು ಯಾವುದೇ ಅಡ್ಡಿ ಎದುರಾಗದು.
ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದ ವ್ಯಕ್ತಿತ್ವ :
1960ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಟಿ. ಎಸ್. ಸತ್ಯನ್ ಸಿಡುಬು ನಿವಾರಣೆ ಹಾಗೂ ಶಾಲೆಗಳಲ್ಲಿ ಆರೋಗ್ಯ ವ್ಯವಸ್ಥೆಯ ಕುರಿತು ಜಾಗೃತಿ ಅಭಿಯಾನವನ್ನು ಮಾಡುತ್ತಾರೆ. ಇಲ್ಲಿ ಸತ್ಯನ್ ಅವರ ಸಾಮಾಜಿಕ ಕಾಳಜಿ ಬೆಳಕಿಗೆ ಬರುತ್ತದೆ. ಅವರ ಸಾಮಾಜಿಕ ಸೇವೆಯನ್ನು ಗುರುತಿಸುವ ಯತ್ನದಲ್ಲಿ 1977ರಲ್ಲಿ ಸತ್ಯನ್ ಅವರಿಗೆ ಭಾರತ ಸರಕಾರ “ಪದ್ಮಶ್ರೀ’ ಪುರಸ್ಕಾರವನ್ನು ನೀಡುತ್ತದೆ. 1979ರಲ್ಲಿ ಅಮೆರಿಕೆಯು “ಅಂತಾರಾಷ್ಟ್ರೀಯ ಮಕ್ಕಳ ವರ್ಷ’ವನ್ನು ಆಚರಿಸುತ್ತದೆ ಹಾಗೂ ಆ ಕಾರ್ಯಕರ್ಮಕ್ಕೆ ಸತ್ಯನ್ ಅವರನ್ನು ವಿಶೇಷವಾಗಿ ಆಹ್ವಾನಿಸುತ್ತದೆ. ನ್ಯೂಯಾರ್ಕ್‌ನಲ್ಲಿ ಸತ್ಯನ್ ಅವರು ನಿರ್ಮಿಸಿದ ವಿಶೇಷ ಚಿತ್ರ ಪ್ರದರ್ಶನವನ್ನು ಆಯೋಜಿಸುತ್ತದೆ. ಆ ಚಿತ್ರಗಳು ವಿಶ್ವವನ್ನೇ ಗೆಲ್ಲುತ್ತವೆ. ಮಕ್ಕಳ ಮುಗ್ಧ ಮನಸ್ಸುಗಳ ಅನಾವರಣ ಸತ್ಯನ್ ಅವರಿಗೆ ಹೊಸ ಆಕಾಶವನ್ನು ತೋರಿಸುತ್ತವೆ.
ಛಾಯಾಗ್ರಹಣದ ಜತೆಗೆ ಸತ್ಯನ್ ಅವರಲ್ಲಿ ಓರ್ವ ಪ್ರಜ್ಞಾಶೀಲ ಬರಹಗಾರನು ಸದಾ ಎಚ್ಚರಾವಸ್ಥೆಯಲ್ಲಿ ಇದ್ದುದರ ಫಲವಾಗಿ, 2005ರಲ್ಲಿ ಪೆಂಗ್ವಿನ್ ಬುಕ್ ಸಂಸ್ಥೆ “ಅಲೈವ್ ಅಂಡ್ ಕ್ಲಿಕಿಂಗ್’ ಪುಸ್ತಕವನ್ನು ಪ್ರಕಟಿಸುತ್ತದೆ. ಈ ವಿಶಿಷ್ಟ ಕೃತಿಯಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ಸಿ. ವಿ. ರಾಮನ್, ಚಿತ್ರ ನಿರ್ಮಾಪಕ ಸತ್ಯಜಿತ್ ರಾಯ್ಸ್, ಮಾಜಿ ಪ್ರಧಾನಿ ಪಂಡಿತ್ ಜವರಹಲಾಲ್ ನೆಹರು, ದಲೈ ಲಾಮಾ, ಪೋಪ್ ಪಾಲ್ (VI), ಇವರ ವಿಶೇಷ ಚಿತ್ರಗಳು ಪ್ರಧಾನ ಆಕರ್ಷಣೆಯಾಗುತ್ತವೆ. ಸಿಕ್ಕಿಂ, ಅಫ್ಘಾನಿಸ್ತಾನ, ಅರುಣಾಚಲ ಪ್ರದೇಶ, ಮಲೇಷಿಯಾ, ಗೋವಾ ಹಾಗೂ ಬಾಂಗ್ಲಾದೇಶ ಪ್ರದೇಶದ ಚಿತ್ರಗಳು ಬಹು ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಛಾಯಾಗ್ರಹಣ ಕಲಾ ಮಾಧ್ಯಮವಾಗಬೇಕು:
ಛಾಯಾಗ್ರಹಣ ಕೇವಲ ರಾಸಾಯನಿಕ ಪ್ರಕ್ರಿಯೆಯಲ್ಲ. ವರ್ಣಛಾಯೆ, ರೇಖೆಗಳು, ಬೆಳಕಿನ ಕೋನ ಹಾಗೂ ಭಾವನೆಗಳು ಅವ್ಯಕ್ತ ಭಾವನೆಗಳನ್ನು ಹೊರಹಾಕುತ್ತವೆ. ಭಾವನಾಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. ಹಾಗಾಗಿ ಭಾರತದಲ್ಲಿಯೂ ಛಾಯಾಗ್ರಹಣ ಕಲೆಗೆ ಕಲಾ ಸ್ಥಾನಮಾನ ದೊರಕುವಂತಾಗಬೇಕೆಂದು ಆಗ್ರಹಿಸಿದ ಅಗ್ರಜರ ಸಾಲಿನಲ್ಲಿ ಸತ್ಯನ್ ಅವರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. ಇದು ಕೇವಲ ಮಾತಿಗೆ ನಿಲ್ಲದೆ ಛಾಯಾಗ್ರಹಣ ಕಲಾ ಮಾಧ್ಯಮವಾಗಬೇಕೆಂದು ಘೋಷಿಸಿ ಸತ್ಯನ್ ಅವರು ದೇಶದ ಉದ್ದಗಲಕ್ಕೂ ಅವರ ಚಿತ್ರ ಕೃತಿಗಳ ಪ್ರದರ್ಶನ ಮಾಡುತ್ತಾರೆ.
ಉಡುಪಿಗೂ ಸತ್ಯನ್‌ಗೂ ಭಾವನಾತ್ಮಕ ಬಂಧ:
ಉಡುಪಿಗೂ ಸತ್ಯನ್ ಅವರಿಗೂ ವಿಶಿಷ್ಟ ಸಂಬಂಧವಿದೆ. ಮಠ ಮಂದಿರಗಳ ಛಾಯಾಗ್ರಹಣದಲ್ಲಿ ಇವರು ನಿಸ್ಸೀಮರು. ಕಪ್ಪು ಬಿಳುಪಿನ ಕೃಷ್ಣ ಶ್ವೇತಾ ಛಾಯೆಯಲ್ಲಿ ಭಾವನೆಗಳು ತುಂಬುವ ಕಾರ್ಯ ಇವರಿಗೆ ಒಲಿದಿತ್ತು. ಆ ಕಾರಣಕ್ಕಾಗಿ ಅವರಿಗೆ ಉಡುಪಿಯೂ ಹಿಡಿಸಿತ್ತು. ಇವರ ಪುಸ್ತಕಗಳಲ್ಲಿ ಉಡುಪಿಯ ಚಿತ್ರಗಳು ಅನೇಕ ಬಾರಿ ಕಾಣಲು ಸಿಗುತ್ತದೆ. ಉಡುಪಿ ರಥಬೀದಿ, ಐರೋಡಿ ಮಾಲಕರ ಭಾವಚಿತ್ರ ಇಂದಿಗೂ ಪ್ರಸಿದ್ಧಿಯನ್ನು ಪಡೆದಿವೆ.
ಸತ್ಯನ್ ಅವರಿಗೆ 80 ವರ್ಷ ವಯಸ್ಸಾದ ಸಂದರ್ಭದಲ್ಲಿ ತಮ್ಮ ಛಾಯಾಗ್ರಹಣದ ಕೊನೆಯ ಸುತ್ತು ಎಂದು ಪರ್ಯಟನೆ ಮಾಡುತ್ತಾರೆ. ಉಡುಪಿಗೆ ಆಗಮಿಸಿ ಮತ್ತೂಂದು ಸುತ್ತು ಚಿತ್ರಗಳನ್ನು ನಿರ್ಮಿಸುತ್ತಾರೆ. ಹಿರಿಯಡ್ಕ ಸಮೀಪ ಇರುವ ಪುತ್ತಿಗೆ ಮಠಕ್ಕೆ ತೆರಳಿ ವೇದ ಅಧ್ಯಯನ ವಿದ್ಯಾರ್ಥಿಗಳ ಚಿತ್ರ, ಮಣಿಪಾಲದ ಹಸ್ತ ಶಿಲ್ಪಕ್ಕೆ ಭೇಟಿ ನೀಡಿ ವಿಜಯನಾಥ ಶೆಣೈ ಅವರ ಭಾವ ಚಿತ್ರಗಳನ್ನು ನಿರ್ಮಿಸುತ್ತಾರೆ. ಖ್ಯಾತ ಪತ್ರಕರ್ತ ಹಾಗೂ ಸಮಕಾಲೀನರಾದ ದಿ. ಎಂ. ವಿ. ಕಾಮತ್ ಅವರನ್ನು ಭೇಟಿಯಾಗಿ ಭಾವಚಿತ್ರಗಳನ್ನು ನಿರ್ಮಿಸುತ್ತಾರೆ.
ಎಂ. ಜಿ. ಎಂ. ಕಾಲೇಜಿನಲ್ಲಿ ಚಿತ್ರ ಪ್ರದರ್ಶನಕ್ಕೆ ಆಗಮಿಸಿದ್ದ ಸತ್ಯನ್ ಅವರನ್ನು ಕಂಡದ್ದು ಅದೇ ಮೊದಲು. ಸರಳ ಸ್ವಭಾವದ ಅವರೊಂದಿಗೆ ಬೆರೆತ ಸಂಬಂಧ ವೈಯಕ್ತಿಕವಾಗಿ ಮರೆಯಲು ಸಾಧ್ಯವೇ ಇಲ್ಲ. ಸುಮಾರು ಎರಡೂ ವರೆ ದಶಕಗಳಕಾಲ ಅವರೊಂದಿಗೆ ಬೆಸೆದುಕೊಂಡ ಸಂಬಂಧ ನನ್ನ ಛಾಯಾಗ್ರಹಣ ಲೋಕವನ್ನು ಬೆಳಗುವಂತೆ ಮಾಡಿವೆ. ನಾನು ನಿರ್ಮಿಸಿದ ಶ್ರೀಕೃಷ್ಣ ಮಠದ ಮಧ್ವ ಸರೋವರದ ಬಳಿ ನಿಂತ ವೇದ ವಿದ್ಯಾರ್ಥಿಯ ಕಪ್ಪು ಬಿಳುಪು ಚಿತ್ರ ನೋಡಿ, “ಈ ಚಿತ್ರ ನಾನ್ ತೆಗೆದ ಹಾಗೆ ಇದೆ’ ಎಂದು ನೀಡಿದ ಸರ್ಟಿಫಿಕೇಟ್ ನನ್ನ ಛಾಯಾಗ್ರಹಣ ಕ್ಷೇತ್ರದಲ್ಲಿ ಇನ್ನಷ್ಟು ಕೃಷಿಮಾಡುವ ಉತ್ಸಾಹವನ್ನು ತುಂಬಿದೆ.
ಕಲಾನೈಪುಣ್ಯ ಸಾರುವ ಸಾವಿರಾರು ಕೃತಿಗಳು:
ಚಿತ್ರಗಳ ಸಾಮ್ಯತೆ ಮತ್ತು ಮರು ಬಳಕೆ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಸತ್ಯನ್, ಪತ್ರಿಕೆಗಳು ಒಮ್ಮೆ ಉಪಯೋಗಿಸಿದ ಚಿತ್ರಗಳನ್ನು ಮರು ಉಪಯೋಗ ಮಾಡಲು ಕೃತಿಕಾರರ ಅನುಮತಿ ಪಡೆದುಕೊಳ್ಳಬೇಕೆಂದು ಪ್ರತಿಪಾದಿಸುತ್ತಿದ್ದರು. ಅದಕ್ಕೆ ಸೂಕ್ತ ಸಂಭಾವನೆಯನ್ನೂ ನೀಡಬೇಕೆಂದು ಆಗ್ರಹಿಸುತ್ತಿದ್ದರು. ಸದಾ ನವೀನತೆ ಮತ್ತು ವಿಚಾರಶೀಲತೆಗೆ ಆದ್ಯತೆ ನೀಡುತ್ತಿದ್ದ ಅವರ ಅನೇಕ ಚಿತ್ರಗಳು ಪ್ರಯೋಗಶೀಲತೆಯನ್ನು ಕಂಡಿವೆ. 90ರ ದಶಕದಲ್ಲಿ ವಿಪ್ರೋತ್ತಮ ಲ್ಯಾಟ್ಟಾಪ್ ಹಿಡಿದ ಚಿತ್ರ ಇದಕ್ಕೆ ಪೂರಕವೆನಿಸುತ್ತದೆ. ಮುಂಬೈಯ ಗೇಟ್ ವೇ ಆಫ್ ಇಂಡಿಯಾ ಬಳಿ ಬಿಸಿಲ ಬೇಗೆಗೆ ದೇಹವನ್ನು ತಂಪಾಗಿಸಿಕೊಳ್ಳಲು ಮೂವರು ವ್ಯಕ್ತಿಗಳು ಏಕ ಕಾಲಕ್ಕೆ ಸಮುದ್ರಕ್ಕೆ ಜಿಗಿಯುವ ಚಿತ್ರ ಅಪಾರ ಮನ್ನಣೆಯನ್ನು ತಂದು ಕೊಟ್ಟಿದೆ. ಅಂದಿನ ಪ್ರಧಾನಿ ದಿ. ಜವಾಹರ ಲಾಲ್ ನೆಹರು ಅವರು ಪಂಚಶೀಲದ ಕುರಿತಾಗಿ ಮಾತುಕತೆ ಫಲಿಸದ ಹಿನ್ನೆಲೆಯಲ್ಲಿ ಸಂವಿಧಾನದತ್ತ ಮುಖಮಾಡಿ ಪಂಚ ಬೆಳಕಿನ ಕಿಂಡಿಗಳತ್ತ ಚಲಿಸುತ್ತಿರುವ ಚಿತ್ರ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕರನ್ನು ಜಾಗೃತಗೊಳಿಸುತ್ತದೆ. ಸತ್ಯನ್ ಅವರ ಕೃತಿಗಳು ಫ್ಯಾಬಲ್ಡ್ ಕ್ಯಾಪಿಟಲ್ ಆಫ್ ವಿಜಯನಗರ,
ಎಕ್ಸ್‌ಪ್ಲೋರಿಂಗ್ ಕರ್ನಾಟಕ, ಇನ್ ಲವ್ ವಿಥ್ ಲೈಫ್, ಕಾಲಕ್ಕೆ ಕನ್ನಡಿ ಸೃಜನಶೀಲ ಛಾಯಾಗ್ರಹಕತೆಯನ್ನು ಎತ್ತಿ ಹಿಡಿದಿವೆ.
ಆಸ್ಟ್ರೋ ಮೋಹನ್
ಹಿರಿಯ ಪತ್ರಿಕಾ ಛಾಯಾಗ್ರಾಹಕರು,
ಉದಯವಾಣಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.