ಐರನ್ ಮ್ಯಾನ್: ರೀಲ್ ಅಲ್ಲ, ರಿಯಲ್ ಹೀರೋಗಳ ಕಥೆ!
Team Udayavani, Nov 10, 2024, 12:23 PM IST
ಜಗತ್ತಿನ ಕಠಿಣ ಸ್ಪರ್ಧೆ ಎಂದರೆ ಟ್ರಯಥ್ಲಾನ್. ಈಜು, ಸೈಕ್ಲಿಂಗ್ ಮತ್ತು ಓಟ- ಈ ಮೂರನ್ನೂ ಒಳಗೊಂಡ ಸ್ಪರ್ಧೆಗೆ ಟ್ರಯಥ್ಲಾನ್ ಎನ್ನುತ್ತಾರೆ. ಈ ಮೂರೂ ವಿಭಾಗದ ಸ್ಪರ್ಧೆಯನ್ನು ನಿಗದಿತ ಸಮಯದಲ್ಲಿ ಮುಗಿಸಿದವರನ್ನು “ಐರನ್ ಮ್ಯಾನ್’ ಎನ್ನಲಾಗುತ್ತದೆ. ಈ ಸ್ಪರ್ಧೆಯ ಹಿನ್ನೆಲೆ ಏನು? “ಐರನ್ ಮ್ಯಾನ್’ ಆಗಲು ಯಾರು ಅರ್ಹರು? ಅದಕ್ಕಾಗಿ ಏನು ಮಾಡಬೇಕು?- ಇಂಥ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ…
ಸಂಸದ ತೇಜಸ್ವಿ ಸೂರ್ಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಅದರ ಬಗ್ಗೆ ಜನಕ್ಕೆ ಕುತೂಹಲ ಮೂಡಿದೆ. ಅದಕ್ಕೂ ಸ್ವಲ್ಪ ದಿನಗಳ ಮೊದಲು ಮಂಗಳೂರಿನ ವೈದ್ಯ ಗುರುಪ್ರಸಾದ್ ಭಟ್, ಇಟಲಿಯಲ್ಲಿ ನಡೆದ ಫುಲ್ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದೂ ಸುದ್ದಿಯಾಗಿತ್ತು. ರನ್ನಿಂಗ್, ಸ್ವಿಮ್ಮಿಂಗ್ ಮತ್ತು ಸೈಕ್ಲಿಂಗ್ ಹೀಗೆ ಮೂರನ್ನೂ ಒಳಗೊಂಡ ಟ್ರಯಥ್ಲಾನ್ ಸುಲಭವಂತೂ ಅಲ್ಲ.
ಐರನ್ ಮ್ಯಾನ್ ಸ್ಪರ್ಧೆ ಆರಂಭವಾದದ್ದು ಹೇಗೆ?
ಇದಕ್ಕೊಂದು ರೋಚಕ ಕಥೆಯಿದೆ. ಇದು ಜೂಡಿ ಮತ್ತು ಜಾನ್ ಕಾಲಿನ್ಸ್ ದಂಪತಿಯ ಕಲ್ಪನೆಯ ಕೂಸು. ಕಾಲಿನ್ಸ್ ಕುಟುಂಬವು 1974, ಸೆಪ್ಟೆಂಬರ್ 25ರಂದು ಅಮೆರಿಕದ ಕ್ಯಾಲಿಫೊರ್ನಿಯಾ ನಗರದ ಸ್ಯಾನ್ ಡಿಯಾಗೋದಲ್ಲಿ ಮಿಷನ್ ಬೇ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿತ್ತು. ಮ್ಯಾರಥಾನ್‌ನಂತಹ ಸಣ್ಣ ಸ್ಪ್ರಿಂಟ್ ಇವೆಂಟ್‌ಗಳಲ್ಲಿ ಭಾಗವಹಿಸುವವರಿಗಾಗಿ ಏನಾದರೂ ಮಾಡಬೇಕು ಎನ್ನುವಾಗ ಅದಕ್ಕೆ ಸೈಕ್ಲಿಂಗ್ ಅನ್ನೂ ಸೇರಿಸುವ ಯೋಚನೆ ಬಂತು. 1978,ಫೆಬ್ರವರಿ 18ರಂದು, ಜೂಡಿ ಮತ್ತು ಕಾಲಿನ್ಸ್ ಮೊದಲ ಹವಾಯಿಯನ್ ಐರನ್ ಮ್ಯಾನ್ ಟ್ರಯಥ್ಲಾನ್‌ನೊಂದಿಗೆ ತಮ್ಮ ಕನಸು ನನಸಾಗಿಸಿದರು. ಯಾರು ಮೊದಲು ಮುಗಿಸುತ್ತಾರೋ ಅವರನ್ನು “ಐರನ್ ಮ್ಯಾನ್’ ಎನ್ನಲಾಗುತ್ತದೆ ಎಂದು ಮೊದಲೇ ಇಬ್ಬರೂ ನಿರ್ಧರಿಸಿದ್ದರು. 1980ರಲ್ಲಿ ಇವರು ಅಮೆರಿಕನ್ ಬ್ರಾಡ್‌ಕಾಸ್ಟ್ ಕಂಪನಿ (ಎಬಿಸಿ)ಯ ವೈಡ್ ವಲ್ಡ್ ಆಫ್ ನ್ಪೋರ್ಟ್ಸ್ಗೆ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲು ಅನುಮತಿ ನೀಡಿದರು. ಬಳಿಕ ಇದು ವಿಶ್ವ ಮನ್ನಣೆ ಪಡೆಯಿತು.
ಭಾರತದಲ್ಲಿ ಐರನ್ ಮ್ಯಾನ್: ಭಾರತದಲ್ಲಿ ಮೊದಲ ಬಾರಿಗೆ ಐರನ್ ಮ್ಯಾನ್ ಸ್ಪರ್ಧೆ ಶುರುವಾಗಿದ್ದು 2019ರ ಅಕ್ಟೋಬರ್‌ನಲ್ಲಿ. ಯೋಸ್ಕ್ ಎನ್ನುವ ಸಂಸ್ಥೆಯೊಂದು ಫ್ರಾಂಚೈಸಿಯಾಗಿ ಇದನ್ನು ಪ್ರತಿ ವರ್ಷ ಆಯೋಜಿಸುತ್ತದೆ. ಇವೆಂಟ್‌ನಲ್ಲಿ ಗೋವಾದ ಮಿರಾಮರ್ ಬೀಚ್‌ನಲ್ಲಿ 1.9 ಕಿ.ಮೀ. ತೆರೆದ ನೀರಿನಲ್ಲಿ ಈಜು, 90 ಕಿ.ಮೀ. ಸೈಕ್ಲಿಂಗ್ ಮತ್ತು ಪಣಜಿಯಾದ್ಯಂತ 21 ಕಿ.ಮೀ. ಓಟ, ಆ ಎಲ್ಲಾ ಚಟುವಟಿಕೆಗಳನ್ನು ಒಂದು ದಿನದಲ್ಲಿ ನಿಗದಿತ ಸಮಯ ಅಂದರೆ 8 ಗಂಟೆ 30 ನಿಮಿಷದೊಳಗೆ ಅನುಕ್ರಮವಾಗಿ ಮಾಡಲಾಗುತ್ತದೆ. ಗೋವಾದಲ್ಲಿ ನಡೆಯುವುದು ಹಾಫ್ ಐರನ್ ಮ್ಯಾನ್ ಆಗಿದ್ದು, ಫುಲ್ ಐರನ್ ಮ್ಯಾನ್ ಆಗಲು 3.8 ಕಿ.ಮೀ. ಈಜು, 18 ಕಿ.ಮೀ. ಸೈಕ್ಲಿಂಗ್ ಮತ್ತು 42.2 ಕಿ.ಮೀ. ಓಟವನ್ನು 16 ಅಥವಾ 17 ಗಂಟೆಯೊಳಗೆ ಮುಗಿಸಬೇಕು.
ಯಾರಾಗಬಹುದು ಐರನ್ ಮ್ಯಾನ್?: ಈಜು, ಸೈಕ್ಲಿಂಗ್ ಮತ್ತು ಓಡುವ ಸಾಮರ್ಥ್ಯವಿರುವವರು ಖಂಡಿತ ಇದನ್ನು ಪ್ರಯತ್ನಿಸಬಹುದು. ಸಾಧಾರಣವಾಗಿ ಫಿಟ್ನೆಸ್ ಮಾಡುವ ಹಂಬಲವಿರುವವರು ಸೈಕ್ಲಿಂಗ್ ಅಥವಾ ರನ್ನಿಂಗ್ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ, ಟ್ರಯಥ್ಲಾನ್ ಎಂದಾಗ ಈಜನ್ನೂ ಸೇರಿಸಿ, ಈ ಮೂರನ್ನೂ ಅಷ್ಟೇ ಸಮರ್ಥವಾಗಿ ಮಾಡಬೇಕಾಗುತ್ತದೆ. ನಿಮಗೆ ಈಗಾಗಲೇ ಈಜು ಬರುತ್ತಿದ್ದರೆ, ಉಳಿದೆರಡನ್ನು ಮಾಡುವುದು ಸ್ವಲ್ಪ ಸುಲಭ. ಅದೇ ನೀವು ಈಜನ್ನು ನಂತರದಲ್ಲಿ ಕಲಿಯಬೇಕಾದರೆ, ಆಗುವ ಕಷ್ಟ ಅಷ್ಟಿಷ್ಟಲ್ಲ ಎನ್ನುತ್ತಾರೆ 2019ರಿಂದಲೂ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅಶ್ವಿನ್ ಬಿ. ಗುರುರಾಜ್. ಮೊದಲನೆಯದಾಗಿ ಈಜು ಏರೋಬಿಕ್ ವ್ಯಾಯಾಮ. ನೀರಿನ ಭಯ, ಬೇಕಾದ ಚಲನೆಯ ವೇಗ ಸುಲಭಕ್ಕೆ ಬರುವುದಿಲ್ಲ. ಇಷ್ಟನ್ನೂ ಮೀರಿ ಈಜು ಕಲಿತ ನಂತರ, ಸ್ಪರ್ಧೆಯಲ್ಲಿ ಈಜಬೇಕಿರುವುದು ಪೂಲ್‌ನಲ್ಲಲ್ಲ. ಬದಲಾಗಿ ಸಮುದ್ರದಲ್ಲಿ! ಹಾಗಾಗಿ ಸ್ವಿಮ್ಮಿಂಗ್ ಪೂಲ್ ಅಲ್ಲದೆ ಕೆರೆ ಅಥವಾ ಬೇರೆ ಕಡೆ ತೆರೆದ ನೀರಿನಲ್ಲಿ ಈಜಿ ಅಭ್ಯಾಸ ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಈಜು ನಿಮ್ಮನ್ನು ಗೆಲುವಿನ ದಡ ಮುಟ್ಟಲು ಬಿಡುವುದಿಲ್ಲ. ಸತತ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ನಂತರ ಈಜು ಕಲಿತು ಮೊದಲ ಗೋವಾ ಆವೃತ್ತಿಯಲ್ಲಿ ಸ್ವರ್ಧೆಗೆ ಇಳಿದಾಗ ಈಜುವ ವಿಭಾಗದಲ್ಲಿ ಬಹುತೇಕ ಸ್ಪರ್ಧಿಗಳ ಭಯ ಕಣ್ಣಿಗೆ ರಾಚುವಂತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅಶ್ವಿನ್. ಈಗಾಗಲೇ ಈ ಮೂರೂ ವಿಭಾಗದಲ್ಲಿ ಪರಿಣಿತಿ ಪಡೆದಿದ್ದರೆ, ಸ್ಥಳೀಯವಾಗಿ ಆಯೋಜಿಸುವ ಟ್ರಯಥ್ಲಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಮರ್ಥ್ಯ ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ, 750 ಮೀಟರ್ ಈಜಬೇಕಾಗುತ್ತದೆ. ಅದೂ ಸಾಧ್ಯವಿಲ್ಲದಿದ್ದರೆ, ಒಂದೇ ದಿನ ಸ್ವಂತಕ್ಕೆ ಇದನ್ನು ವಿರಾಮವಿಲ್ಲದೆ ಪ್ರಯತ್ನಿಸಿ ನಿಮ್ಮ ತರಬೇತಿ ಹೆಚ್ಚಿಸಿಕೊಳ್ಳಬಹುದು.
ಆಹಾರ ಕಟುನಿಟ್ಟೇ ಆದರೆ, ಡಯಟ್ ಅಲ!: ತೂಕ ಇಳಿಸುವ ಅಗತ್ಯವಿದ್ದು ಯಾವುದೇ ಚಟುವಟಿಕೆ ಮಾಡುತ್ತಿದ್ದರೂ ಅಲ್ಲಿ ಕಟ್ಟುನಿಟ್ಟಾದ ಡಯಟ್ ಅಗತ್ಯವಿರುತ್ತದೆ. ಆದರೆ, ಇಲ್ಲಿ ಈ ಎಲ್ಲಾ ಚಟುವಟಿಕೆಗಳಿಗೆ ಶಕ್ತಿ ನೀಡುವುದೇ ಕಾರ್ಬೋ ಹೈಡ್ರೇಟ್. ಹಾಗಾಗಿ ಇಲ್ಲಿ ಅದಕ್ಕೆ ನಿರ್ಬಂಧವಿಲ್ಲ. ಆದರೆ, ಅದರ ಜೊತೆಗೆ ಅಗತ್ಯ ಪ್ರೋಟೀನ್ ಕೂಡ ಬೇಕು. ಇಲ್ಲದೆ ಹೋದಲ್ಲಿ ಅದು ಸ್ನಾಯುವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಅಪಾಯವೂ ಹೆಚ್ಚು. ಹಾಗಾಗಿ ಕಾಬೋìಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್‌ಯುಕ್ತವಾದ ನಿಗದಿತ ಆಹಾರ ಪದ್ಧತಿಯನ್ನು ಕ್ರೀಡಾಪಟುಗಳು ಅನುಸರಿಸುತ್ತಾರೆ. ಇಷ್ಟೆಲ್ಲಾ ಕಷ್ಟ ಯಾಕೆ?-ಹೀಗೊಂದು ಪ್ರಶ್ನೆ ಕೇಳಿದಾಗ ಅಶ್ವಿನ್ ನಕ್ಕರು. ನೀವು ಯಾವುದೇ ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿದ್ದಾಗ ಅದನ್ನು ಮತ್ತೂಂದು ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಎಲ್ಲರ ಆಸೆ. ಮೊದಲು ಟ್ರಯಥ್ಲಾನ್ ಎಂದು ನಾವು ಯೋಚಿಸಿದಾಗ ಕೇಳಿಕೊಳ್ಳುವುದು ನನಗೆ ಇದು ಸಾಧ್ಯವೇ ಎಂದು. ಅನುಮಾನದಿಂದ ಪ್ರಾರಂಭವಾಗುವ ಈ ಪ್ರಯಾಣ ಮೊದಲ ಬಾರಿ ಭಾಗವಹಿಸಿದಾಗ ಅಂತೂ ಮುಗಿಸಿದೆ ಎನ್ನುವ ತೃಪ್ತಿ ನೀಡುತ್ತದೆ. ಅದಾದ ಬಳಿಕ ಮತ್ತೆ ಮತ್ತೆ ಭಾಗವಹಿಸುವ ಕಾರಣ, ಈಗಾಗಲೇ ರೂಢಿಸಿಕೊಂಡಿರುವ ಶಿಸ್ತು ಮತ್ತು ಅದಕ್ಕಾಗಿ ನಾವು ಎಷ್ಟು ಸಿದ್ಧರಾಗಿದ್ದೇವೆ ಮತ್ತು ಹೆಚ್ಚು ಸುಧಾರಣೆ ಮಾಡಿಕೊಂಡಿದ್ದೇವೆ ಎನ್ನುವುದರ ಪರೀಕ್ಷೆ ಎನ್ನುವುದು ಅವರ ಉತ್ತರವಾಗಿತ್ತು.
ಶಿಸ್ತಿನ ದಿನಚರಿ, ತರಬೇತಿ ಅತ್ಯಗತ್ಯ: ಐರನ್ ಮ್ಯಾನ್ ಆಗಬೇಕೆನ್ನುವವರು ಶಿಸ್ತುಬದ್ಧ ದಿನಚರಿ ಪಾಲಿಸಬೇಕು. ಹೆಚ್ಚಿನ ತರಬೇತಿ ಪಡೆಯಬೇಕು. ಜೊತೆಗೆ ಅನೇಕ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಈ ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೇವಲ ರನ್ನಿಂಗ್, ಸೈಕ್ಲಿಂಗ್ ಮತ್ತು ಈಜನ್ನು ಗಮನಿಸುತ್ತಾರೆ. ಆದರೆ ಗಾಯಾಳುವಾಗುವುದನ್ನು ತಪ್ಪಿಸಲು ನಿಯಮಿತವಾದ ಸ್ಟ್ರೆಂಥ್ ಟ್ರೇನಿಂಗ್ ಅತ್ಯಗತ್ಯ. ಇಲ್ಲದಿದ್ದರೆ ಬಹುಬೇಗ ಗಾಯಗಳಾಗುತ್ತವೆ. ಅದನ್ನು ಈಗಿನವರು ಗಮನಿಸಬೇಕು ಎನ್ನುವ ಕಿವಿಮಾತನ್ನೂ ಅಶ್ವಿನ್ ಹೇಳಿದ್ದಾರೆ.
– ಶ್ವೇತಾ ಭಿಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.