ಅಂತೂ ಇಂತೂ ಕಾಗೆ ಬಂತು
Team Udayavani, Mar 23, 2019, 12:26 PM IST
ಬಾಲ್ಯದಲ್ಲಿ ಬೇಸಿಗೆಯ ರಜೆ ಶುರುವಾಯಿತೆಂದರೆ ಸಾಕು, ಉರಿವ ಬಿಸಿಲೂ ನಮಗೆ ಬೆಳದಿಂಗಳು. ಪರೀಕ್ಷೆ ಮುಗಿದಿದ್ದೇ ಬ್ಯಾಗು, ಯೂನಿಫಾರ್ಮ್ ಬಿಸಾಡಿ ಅಜ್ಜನ ಮನೆಯ ಬಸ್ಸು ಹಿಡಿಯುವುದೊಂದೇ ಕೆಲಸ. ಬೇರೆಯೇ ಲೋಕದಲ್ಲಿ ಹಕ್ಕಿಗಳಂತೆ ವಿಹರಿಸಿ ಶಾಲೆ ಶುರುವಾಗುವ ಹಿಂದಿನ ದಿನ ಅಜ್ಜನ ಮನೆಯಿಂದ ಹೊರಡುವಾಗ ಎಲ್ಲಿಲ್ಲದ ದುಃಖ. ಬಕೆಟ್‌ಗಟ್ಟಲೆ ಕಣ್ಣೀರು ಸುರಿಸಿ ನಮ್ಮ ಕಣ್ಣು ಕೆಂಪು, ಅತ್ತೂ ಅತ್ತೂ ದನಿ ಗೊಗ್ಗರಾದರೆ ಅಜ್ಜ-ಅಜ್ಜಿಯರದ್ದು ಅಳದಿದ್ದರೂ ಸಣ್ಣ ಮುಖ. ಮನೆಗೆ ಬಂದ ಕೂಡಲೇ ಸ್ಕೂಲಿನ ಬ್ಯಾಗು ಎಲ್ಲಿದೆ ಎಂಬ ಜೋರು ಹುಡುಕಾಟ ನಡೆಯುತ್ತಿತ್ತು. ಈಗಿನ ಐಟಿ ದಾಳಿ ನಡೆದಾಗ ಬರುವ ಬ್ರೇಕಿಂಗ್ ನ್ಯೂಸಿನಂತೆ ಕನ್ನಡ ಪುಸ್ತಕ ಸಿಕ್ಕಿದೆ -ಎರಡು ಹಳೆಯ, ಒಂದು ಹೊಸ ಪೆನ್ಸಿಲ್ ಇದೆ; ಆದರೆ, ಲೆಕ್ಕದ ಪುಸ್ತಕ ಇನ್ನೂ ಸಿಕ್ಕಿಲ್ಲ. ಎಲ್ಲಿರಬಹುದು ಎಂಬ ಹುಡುಕಾಟ ಜಾರಿಯಲ್ಲಿದೆ ಎಂಬ ಅಪ್‌ಡೇಟ್ ಅಪ್ಪ-ಅಮ್ಮರಿಗೆ ಕೊಡುತ್ತಿದ್ದೆವು. ಕೆಲವೊಮ್ಮೆ ಅಪ್ಪ ಶೇವ್ ಮಾಡಲು ಇಟ್ಟುಕೊಂಡ ಹೊಸ ಬ್ಲೇಡನ್ನು ನಮ್ಮ ಪೆನ್ಸಿಲ್ ಕೆತ್ತಲು ಉಪಯೋಗಿಸಿದ ಸ್ಫೋಟಕ ವಿಷಯ ಹೊರಬೀಳುತ್ತಿತ್ತು. ಇದರ ಮಧ್ಯೆ ನನ್ನ ಕಳೆದ ಹೋದ ರಬ್ಬರ್ ಇದೀಗ ಸಿಕ್ಕಿ, ಕದ್ದವರು ಯಾರೆಂದು ಗೊತ್ತಾಯ್ತು ಎಂಬ ತಂಗಿಯ ಆಪಾದನೆಗೆ ಸಾಕ್ಷ್ಯವೂ ಸಿಕ್ಕು ಕೂಡಲೇ ಶಿಕ್ಷೆಯೂ ಆಗುತ್ತಿತ್ತು ! ಅಂತೂ ಎರಡು ತಿಂಗಳ ನಂತರ ನಾವು ಬಂದ ಮೇಲೆ ಹೊಸದಾಗಿ ಸಂಸಾರ ಹೂಡಿದಷ್ಟೇ ಕಷ್ಟ ಅಮ್ಮನಿಗೆ. ಅದರೊಡನೆ ಬಿಸಿಲಲ್ಲಿ ಕುಣಿದು ಕುಪ್ಪಳಿಸಿ ಸುಟ್ಟು ಕರ್ರಗಾಗಿ, ಮಾವಿನ ಸೊನೆ ತಾಕಿ ಅಲ್ಲಲ್ಲಿ ಕಪ್ಪು ಕಲೆ ಮಾಡಿಕೊಂಡಿದ್ದ ನಮ್ಮನ್ನು ಮತ್ತೆ ಮೂಲ ಸ್ವರೂಪಕ್ಕೆ ತರುವ ದೊಡ್ಡ ಹೊಣೆಯೂ ಇತ್ತು!
ಯಥಾಪ್ರಕಾರ ಶಾಲೆ ಶುರುವಾದರೂ ಮತ್ತೆ ರಜೆಯದ್ದೇ ನೆನಪು.ಆಡಿ, ಕುಣಿದ, ತಿರುಗಾಡಿದ ಫ್ಲ್ಯಾಶ್‌ಬ್ಯಾಕ್! ಮಲೆನಾಡಿನ ಹಳ್ಳಿಯಲ್ಲಿ ನಲವತ್ತು-ಐವತ್ತು ಮನೆ. ಎಲ್ಲರಿಗೂ ಎಲ್ಲರೂ ಪರಿಚಿತರು. ಯಾರ ಮನೆಯಲ್ಲಿ ಏನೇ ಕೆಲಸವಾದರೂ ಎಲ್ಲರೂ ಸೇರಿ ಮಾಡುವ ಕ್ರಮ. ಹೀಗಾಗಿ ನಮ್ಮ ಮನೆ, ಅವರ ಮನೆ ಎಂಬ ಬೇಧವಿರಲಿಲ್ಲ. ಅಂಥಾದ್ದೇ ಒಂದು ರಜೆಯಲ್ಲಿ ಅಜ್ಜನ ಮನೆಯಲ್ಲೊಂದು ಶ್ರಾದ್ಧ.ಅಜ್ಜನ ಅಪ್ಪ ಅಂದರೆ ಮುತ್ತಜ್ಜನ ಮೊದಲ ಶ್ರಾದ್ಧ. ಮನೆ ತುಂಬ ಜನ ಸೇರಿದ್ದರು. ನಮಗೆ ನಾಮಕರಣ, ಮದುವೆ, ಮುಂಜಿ, ಶ್ರಾದ್ಧ, ವೈಕುಂಠ ಸಮಾರಾಧನೆ- ಹೀಗೆ ಏನೇ ಸಮಾರಂಭವಾದರೂ ಖುಷಿಯೇ! ಕುಣಿಯಲು ಇತರ ಮಕ್ಕಳು, ತಿನ್ನಲು ಒಳ್ಳೆ ಊಟ ಸಿಗುವುದಲ್ಲ ಎನ್ನುವುದರತ್ತ ಮಾತ್ರ ಗಮನ. ದೊಡ್ಡವರೆಲ್ಲ ಸೇರಿದಾಗ “ಮುಂದಿನ ವರ್ಷ ಮೂಲೆ ಮನೆ ಶಾರದೆ ಮದುವೆ ಆಗಬಹುದು, ಅಣ್ಣಯ್ಯನ ಮಗನ ಮುಂಜಿ ಮಾಡಬಹುದು’ ಎಂದು ಲೆಕ್ಕ ಹಾಕುತ್ತಿದ್ದರೆ ತರಲೆ ಮಕ್ಕಳು ಯಾವ ಮುದುಕರಿಗೆ ಎಷ್ಟು ವಯಸ್ಸಾಯಿತು, ಮುಂದಿನ ವರ್ಷ ಇರುತ್ತಾರೋ ಇಲ್ಲವೋ ಎಂದು ತಲೆ ಓಡಿಸುತ್ತಿದ್ದರು. ಆದರೆ, ಶ್ರಾದ್ಧದ ದಿನಗಳಲ್ಲಿ ಒಂದು ಬೇಸರವೆಂದರೆ ಏನೇನೋ ವಿಧಿ-ವಿಧಾನ ಮಾಡಿದ ನಂತರ ಬಾಳೆ ಎಲೆಯಲ್ಲಿ ಮಾಡಿದ್ದನ್ನೆಲ್ಲ ಬಡಿಸಿ ಹೊರಗೆ ಇಟ್ಟು ಬರುತ್ತಿದ್ದರು. ಕಾಗೆ ಹಾರಿ ಬಂದು ಅದರಲ್ಲಿ ತಿಂದ ನಂತರವೇ ಎಲ್ಲರಿಗೂ ಊಟ. ಪಿತೃವೇ ಬಂದು ಸ್ವೀಕರಿಸಿದಂತೆ ಎಂಬ ನಂಬಿಕೆ. ಆದರೆ ನಮಗೆ ಇದು ದೊಡ್ಡ ಸಮಸ್ಯೆ. ಕುಣಿದು ಕುಣಿದು ಸುಸ್ತು, ಜತೆಗೆ ಹಸಿವು. ಬಾಳೆಯಲ್ಲಿ ಬಡಿಸಿಟ್ಟ ಊಟವಲ್ಲ, ಬಾಳೆಎಲೆಯನ್ನೇ ತಿನ್ನುವಷ್ಟು ಹಸಿವು. ಮಧ್ಯೆ ಮಧ್ಯೆ ಅವಲಕ್ಕಿ, ಅರಳು ಕಾಳು ತಿಂದರೂ ಸಾಲುತ್ತಿರಲಿಲ್ಲ. ದಣಿದ ದೇಹಕ್ಕೆ ಬಿಸಿಲಿಗೆ ಜೊಂಪು ಬೇರೆ. ಅದಕ್ಕಾಗಿ ಶ್ರಾದ್ಧ ಎಂದು ಗೊತ್ತಾದ ದಿನ ಬೆಳಗಿನಿಂದಲೇ ಕಾಗೆ ಎಲ್ಲಿದೆ ಎಂದು ಹುಡುಕಾಟ ನಡೆಯುತ್ತಿತ್ತು. ಕೆಲವು ಬಾರಿ ಕಾಗೆ ಬೇಗ ಬಂದರೆ ಮತ್ತೆ ಕೆಲವು ಬಾರಿ ಸಾಕಷ್ಟು ತಡವಾಗುತ್ತಿತ್ತು. ಕಾಗೆ ಬಾರದಿದ್ದದ್ದಕ್ಕೆ “ಮೃತರ ಏನೋ ಆಸೆ ಪೂರ್ಣವಾಗಿಲ್ಲ, ಅದಕ್ಕೇ ಅದು ಅತೃಪ್ತಿಯಿಂದ ಬರುತ್ತಿಲ್ಲ’ ಎನ್ನುತ್ತಿದ್ದರು ದೊಡ್ಡವರು. ಸುಮಾರು ಸಲ ಭರ್ಜರಿ ಊಟದ ಹೊತ್ತಿನಲ್ಲಿ ಈ ಕಾಗೆ ಕೊಡುವ ಕಾಟದಿಂದ ಬೇಸತ್ತು ಮಕ್ಕಳಾದ ನಮಗೆ ದನಕರು ಸಾಕಿದ ಹಾಗೆ ಒಂದೆರಡು ಕಾಗೆ ಪಂಜರದಲ್ಲಿಟ್ಟು ಸಾಕಿದರೆ ಹೇಗೆ? ಆಗ ಶ್ರಾದ್ಧದ ದಿನ ನಾವು ಹೇಳಿದ ಟೈಮಿಗೆ ತಿನ್ನುತ್ತೆ, ಎಲ್ಲರ ಮನೆಗೂ ಉಪಯೋಗ ಎಂಬ ಘನವಾದ ಆಲೋಚನೆ ಹೊಳೆದಿತ್ತು. ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ಏಕೆಂದರೆ, ಈ ಮಾತು ಕೇಳಿದ್ದೇ ಅಜ್ಜಿ ಹೌಹಾರಿ ಮಂಗನಿಂದ ಮಾನವ ಎನ್ನುವ ಮಾತಿಗೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಡಾರ್ವಿನ್‌ನನ್ನು ಕೊಂಡಾಡಿದಳು. ಹಾಗೇ ನಮ್ಮನೆ ಮಂಗಗಳು ಮನುಷ್ಯರಾದರೆ ಸಾಕು ಎಂದು ದೇವರಿಗೆ ಹರಕೆ ಹೊತ್ತಳು. ಹೀಗಾಗಿ, ಶ್ರಾದ್ಧ ಇದ್ದಾಗ ಕಾಗೆಗಾಗಿ ಕಾಯುವುದು ಅನಿವಾರ್ಯವಾಗಿತ್ತು.
ಆ ದಿನದ ಶ್ರಾದ್ಧದಲ್ಲಿ ಧಾರ್ಮಿಕ ವಿಧಿ-ವಿಧಾನಗಳೆಲ್ಲ ಮುಗಿದಿತ್ತು. ಆದರೆ, ಕಾಗೆಯ ಸುಳಿವೇ ಇಲ್ಲ.ಸುಮಾರು ಹೊತ್ತು ಕಾದಿದ್ದಾಯ್ತು. ಕಡೆಗೆ ಪುರೋಹಿತರು, “ಅವರ ಆಸೆ ಏನೋ ಇರಬೇಕು ಯೋಚಿಸಿ’ ಎಂದರು. ತೊಂಬತ್ತು ವರ್ಷ ಆರೋಗ್ಯಕರ ಬಾಳು ಬದುಕಿದ ಹಿರಿಯರು ಮುತ್ತಜ್ಜ. ಅವರಿಗೆ ಯಾವ ಅಪೂರ್ಣ ಆಸೆ ಇತ್ತು, ಯಾರಿಗೆ ಗೊತ್ತು? “ತುಂಬ ಚಾಕ್ಲೆಟ್ ಬೇಕು ಅಂತ ಇತ್ತೇನೋ?’ ಅಂದ ಪುಟ್ಟ ಬೈಸಿಕೊಂಡ. ಅಷ್ಟರಲ್ಲಿ ಅಜ್ಜ, ಅಜ್ಜಿ ಮತ್ತು ಪುರೋಹಿತರೊಂದಿಗೆ ಏನೋ ಗುಸುಗುಸು ಮಾತುಕತೆ ನಡೆಸಿದರು. ತಕ್ಷಣವೇ ಮಕ್ಕಳಾದ ನಮಗೆ ಎಲೆ ಹಾಕಿ ಊಟ ಬಡಿಸಿದರು. ನಾವು ಊಟ ಆರಂಭಿಸಿದ್ದೇ ತಡ ಹೊರಗೆ ದೊಡ್ಡ ಕೂಗು ಕಾಗೆ ಬಂತು, “ಅನ್ನ ಮುಟ್ಟಿತು’. ಅಂತೂ ದೊಡ್ಡವರೆಲ್ಲ ಕೈ ಮುಗಿದು ಊಟಕ್ಕೆ ಕುಳಿತರು.
ಊಟ ಮುಗಿಸಿ ಎಲ್ಲರೂ ಬಾಳೆಹಣ್ಣು -ಎಲೆ ಅಡಿಕೆ ತಿನ್ನುವಾಗ ಅಜ್ಜ ತಾವು ಹಾಗೇಕೆ ಮಾಡಿದೆ ಎಂದು ವಿವರಿಸಿದರು.
“”ಹಳ್ಳಿ ಮನೆಗಳಲ್ಲಿ ಸಾಮಾನ್ಯವಾಗಿ ಮನೆಯ ಯಜಮಾನ ಮೊದಲು ಊಟ ಮಾಡಿ ನಂತರ ಮಕ್ಕಳು, ಹೆಂಗಸರು ಊಟ ಮಾಡುವ ಪದ್ಧತಿ. ಆದರೆ, ಮಕ್ಕಳು ಎಂದರೆ ಬಹಳ ಪ್ರೀತಿಯಾಗಿದ್ದ ನನ್ನಪ್ಪನಿಗೆ ಇದು ಇಷ್ಟವಿರಲಿಲ್ಲ. ಮಕ್ಕಳು ಹಸಿದಿರುವಾಗ ದೊಡ್ಡವರು ಊಟ ಮಾಡುವುದು ತಪ್ಪು$ಎನ್ನುತ್ತಿದ್ದರು. ಹಾಗಾಗಿಯೇ ಮನೆಯಲ್ಲಿ ಐದೂ ಮಕ್ಕಳಿಗೆ ಮೊದಲು ತಿಂಡಿ-ಊಟ ಹಾಕಬೇಕಿತ್ತು. ನಂತರ ಅಪ್ಪ ಮತ್ತು ತನಗೆ ಬಡಿಸಿಕೊಂಡು ಅಮ್ಮನೂ ಒಟ್ಟಿಗೇ ಕೂರುತ್ತಿದ್ದಳು.ಎಷ್ಟೋ ಬಾರಿ ಮಕ್ಕಳಾದ ನಮಗೆ ಪಾತ್ರೆಯಲ್ಲಿ ಎಷ್ಟಿದೆ, ಅಪ್ಪ-ಅಮ್ಮರಿಗೆ ಬೇಕು ಎನ್ನುವ ಪರಿವೆಯೂ ಇರುತ್ತಿರಲಿಲ್ಲ. ಹಾಗಾಗಿ, ಅವರು ಅರೆಹೊಟ್ಟೆ ಉಂಡಿದ್ದೂ ಇದೆ. ಕಡೆಯತನಕ ಅಪ್ಪಈ ನಿಯಮ ಪಾಲಿಸಿಕೊಂಡು ಬಂದವರು. ಹಾಗಾಗಿಯೇ ಇವತ್ತು ಮಕ್ಕಳು ಹಸಿದು ಕಾಯುತ್ತಿರುವುದನ್ನು ಅವರ ಆತ್ಮಕ್ಕೆ ಸಹಿಸಲಾಗಲಿಲ್ಲ ಅನ್ನಿಸಿತು. “ಯಾರೇನೇ ಹೇಳಲಿ ಕಾದಿದ್ದು ಸಾಕು; ಮಕ್ಕಳಿಗೆ ಊಟ ಹಾಕೋಣ’ ಎಂದೆ. ಆತ್ಮ, ಕಾಗೆ ಅದೆಲ್ಲಾ ಅವರವರ ನಂಬಿಕೆ. ಆದರೆ ಕಾಕತಾಳೀಯವೋ ಏನೋ ಮಕ್ಕಳು ಊಟ ಮಾಡುತ್ತಿದ್ದಂತೆ ಅಲ್ಲಿ ಕಾಗೆ ಬಂತು. ಇನ್ನು ಅಪ್ಪನ ಶ್ರಾದ್ಧದಲ್ಲಿ ಮಕ್ಕಳಿಗೆ ಮೊದಲು ಊಟ ಹಾಕಿಬಿಡೋಣ ಎಂದು ನಿರ್ಧರಿಸಿದ್ದೇನೆ”
ಹೊಟ್ಟೆ ತುಂಬಿ ಅಲ್ಲೇ ಜಮಖಾನದ ಮೇಲೆ ಒರಗಿದ್ದ ನಮಗೆಲ್ಲ ನಮ್ಮಜ್ಜ ಹೇಳಿದ್ದು ಅರ್ಧಮರ್ಧ ಕೇಳಿತ್ತು, ಮನಸ್ಸಿನಲ್ಲೇ ಒಳ್ಳೇ ಮುತ್ತಜ್ಜ, “ಥಾಂಕ್ಯೂ’ ಅಂದುಕೊಂಡೆವು. ಹಸಿದಿದ್ದ ನಮಗೆ ಅಂದು ಮುತ್ತಜ್ಜ ಹೀರೋ ಅನ್ನಿಸಿದ್ದು ಸುಳ್ಳಲ್ಲ. ಈಗ ನೆನಪಿಸಿಕೊಂಡರೆ, ಮುತ್ತಜ್ಜ ಮತ್ತು ಅಜ್ಜ ಇಬ್ಬರೂ ಹೀರೋ ಅನ್ನಿಸುತ್ತಾರೆ!
ಕೆ. ಎಸ್. ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.