ಜಪಾನಿನ ಕತೆ: ಯುದ್ಧ ತಂದ ಮಡಕೆ
Team Udayavani, Oct 28, 2018, 6:00 AM IST
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನ ಹೆಸರು ಯುನೋ. ಅವನಿಗೆ ಹಿರಿಯರ ಕಾಲದಿಂದ ಬಂದ ಸಾಕಷ್ಟು ಹೊಲಗಳಿದ್ದವು. ಮುಂಜಾನೆ ಸೂರ್ಯ ಮೂಡುವ ಮೊದಲು ಅವನು ಎದ್ದು ಹೊಲಕ್ಕೆ ಹೋಗಿ ದುಡಿಯುತ್ತಿದ್ದ, ಸಂಜೆ ಸೂರ್ಯ ಮುಳುಗುವವರೆಗೂ ದುಡಿಮೆ ಮಾಡಿ ಬಳಿಕ ಮನೆಗೆ ಮರಳುತ್ತಿದ್ದ. ಅವನ ಪರಿಶ್ರಮದ ಫಲವಾಗಿ ಹೊಲದಲ್ಲಿ ಬೆಳೆದ ಪೈರು ಬಂಗಾರದಂತಹ ಕಾಳುಗಳನ್ನು ಹೊತ್ತು ಬಾಗುತ್ತಿತ್ತು. ದೇಶದ ಜನರು ಅವನ ದುಡಿಮೆಯ ಫಲವನ್ನು ಉಂಡು ಸಂತಸದಿಂದ ಬದುಕುತ್ತಿದ್ದರು.
ಒಂದು ಸಲ ಕಾಲಾವಧಿಗೆ ಬರಬೇಕಾದ ಮಳೆ ಬರಲಿಲ್ಲ. ಇಡೀ ದಿನ ಉರಿಯುತ್ತಿದ್ದ ಸೂರ್ಯನ ಬಿಸಿಲಿನ ತಾಪದಿಂದ ನೀರು ತುಂಬಿದ ನದಿ, ಕೊಳಗಳು ಬತ್ತಿಹೋದವು. ನೀರಿಲ್ಲದೆ ಯಾವ ಬೆಳೆಯನ್ನೂ ಬೆಳೆಯಲು ರೈತ ಯುನೋವಿಗೆ ಸಾಧ್ಯವಾಗದೆ ಹೋಯಿತು. ಈ ಪರಿಸ್ಥಿತಿಯನ್ನು ನಿವೇದಿಸಿಕೊಳ್ಳಲು ದೇಶವನ್ನಾಳುವ ದೊರೆಯ ಬಳಿಗೆ ಹೋದ. “”ಪ್ರಭುವೇ, ಮಳೆ ಬಾರದೆ ಬಹು ಕಾಲವಾಗಿದೆ. ಯಾವ ಬೆಳೆಯನ್ನೂ ಮಾಡುವಂತಿಲ್ಲ. ನನ್ನ ಧಾನ್ಯದ ಕಣಜ ಬರಿದಾಗಿದೆ. ತಾವು ನನಗೆ ಏನಾದರೂ ಪರಿಹಾರ ನೀಡಬೇಕು” ಎಂದು ಪ್ರಾರ್ಥಿಸಿದ.
ದೊರೆಗೆ ಬಂತು ಕೋಪ. “”ಮಳೆ ಬಾರದಿದ್ದರೆ ನಾನು ಕಾರಣವೆ? ನಾನೇನು ಆಕಾಶಕ್ಕೆ ಏಣಿಯಿಟ್ಟು ಕೆಳಗಿಳಿಸಲು ಆಗುತ್ತದೆಯೆ? ಪ್ರಕೃತಿ ಮುನಿದಿದೆ ಅಂತ ಬಂದವರಿಗೆಲ್ಲ ಪರಿಹಾರ ಒದಗಿಸಲು ಹೋದರೆ ನಾನು ಬೀದಿಯಲ್ಲಿ ಭಿಕ್ಷೆ ಎತ್ತಬೇಕಾಗುತ್ತದೆ. ಹೋಗು ಹೋಗು, ನಾನು ನಿನಗೆ ಯಾವ ಉಪಕಾರವನ್ನೂ ಮಾಡುವುದಿಲ್ಲ” ಎಂದು ಕಡ್ಡಿ ಮುರಿದ ಹಾಗೆ ಹೇಳಿದ.
ರೈತ ಮುಖ ಸಪ್ಪಗೆ ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಬಂದ. ಒಂದು ಗುದ್ದಲಿ ತೆಗೆದುಕೊಂಡ. ಕಾಡಿಗೆ ಹೋಗಿ ಅಗೆದರೆ ಗೆಡ್ಡೆಗೆಣಸುಗಳಾದರೂ ಸಿಗಬಹುದು, ಅದನ್ನೇ ತಿಂದು ಹೇಗಾದರೂ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ಯೋಚಿಸಿ ಕಾಡಿನ ದಾರಿ ಹಿಡಿದ. ಒಂದೆಡೆ ಗೆಣಸಿಗಾಗಿ ಆಳವಾಗಿ ಅಗೆಯುತ್ತ ಹೋದ. ಆಗ ಯಾವುದೋ ಕಾಲದಲ್ಲಿ ಮಣ್ಣಿನೊಳಗೆ ಯಾರೋ ಹೂಳಿಟ್ಟಿದ್ದ ದೊಡ್ಡದೊಂದು ಮಡಕೆ ಸಿಕ್ಕಿತು. ಖಾಲಿ ಮಡಕೆ. ಆದರೆ ಅದನ್ನು ಕಂಡು ಯುನೋ ಆಶ್ಚರ್ಯಪಟ್ಟ. ಏಕೆಂದರೆ, ಅದು ಮನುಷ್ಯನಿಗಿಂತ ಎತ್ತರವಿತ್ತು. ಕುತೂಹಲದಿಂದ ಅವನು ಅದರೊಳಗೆ ಒಂದು ಕಲ್ಲು ಹಾಕಿದ. ಮರುಕ್ಷಣವೇ ನೂರು ಕಲ್ಲುಗಳು ತುಂಬಿಕೊಂಡವು. ಒಂದು ಕಾಡುಗೆಣಸಿನ ಗೆಡ್ಡೆ ಹಾಕಿ ಪರೀಕ್ಷಿಸಿದ. ನೂರು ಗೆಡ್ಡೆಗಳು ಹೊರಬಂದವು. ಓಹೋ! ಈ ಮಡಕೆಯೊಳಗೆ ಯಾವ ವಸ್ತುವನ್ನು ಹಾಕಿದರೂ ಅದು ನೂರರಷ್ಟು ಹೆಚ್ಚಾಗುತ್ತದೆ ಎಂಬ ಗುಟ್ಟು ಅವನಿಗೆ ಗೊತ್ತಾಯಿತು. ಮಡಕೆಯನ್ನು ಹೊತ್ತುಕೊಂಡು ಮನೆಗೆ ಬಂದ.
ಯುನೋ ಎಲ್ಲಿಂದಲೋ ಹುಡುಕಿ ಒಂದು ಸೇರು ಧಾನ್ಯ ತಂದು ಮಡಕೆಯೊಳಗೆ ಹಾಕಿದ. ಮರುಕ್ಷಣವೇ ಮಡಕೆಯೊಳಗೆ ಅದರಷ್ಟಕ್ಕೆ ಧಾನ್ಯ ತುಂಬುವುದಕ್ಕೆ ಆರಂಭವಾಯಿತು. ಎಲ್ಲ ಧಾನ್ಯವನ್ನೂ ಕೆಳಗೆ ಸುರಿದು ಅಳತೆ ಮಾಡಿದ. ನೂರು ಸೇರು ಧಾನ್ಯ ಸಿಕ್ಕಿತು. ಯುನೋ ದುರಾಸೆಯವನಲ್ಲ. ಹೀಗಾಗಿ ತಾನೊಬ್ಬನೇ ಅದನ್ನು ಊಟ ಮಾಡಲಿಲ್ಲ. ಹಳ್ಳಿಯಲ್ಲಿದ್ದ ಎಲ್ಲ ರೈತರನ್ನೂ ಕರೆದು, “”ನೀವು ಉಪವಾಸ ಇರಬೇಡಿ. ಮಕ್ಕಳೊಂದಿಗೆ ಹೊಟ್ಟೆ ತುಂಬ ಊಟ ಮಾಡಿ” ಎಂದು ಹೇಳಿ ಅವರಿಗೆ ಒಂದೊಂದು ಸೇರು ಧಾನ್ಯವನ್ನು ಹಂಚಿದ. ಹೀಗೆ ಮಡಕೆಯ ಶಕ್ತಿಯಿಂದ ಹಣ, ಒಡವೆ, ಹಸು, ಮೇಕೆ ಎಲ್ಲವನ್ನು ಹೆಚ್ಚು ಮಾಡಿ ಅವರಿಗೂ ಕೊಟ್ಟ. ಹೊಟ್ಟೆಗಿಲ್ಲದೆ ಕಷ್ಟಪಡುತ್ತಿದ್ದ ರೈತರನ್ನೆಲ್ಲ ಸುಖವಾಗಿ ಬದುಕುವ ಹಾಗೆ ಮಾಡಿಬಿಟ್ಟ.
ಈ ವಿಷಯ ದೊರೆಗೆ ಗೊತ್ತಾಯಿತು. ಎಲಾ, ನನ್ನ ಗಮನಕ್ಕೆ ತರದೆ ಇವನೊಬ್ಬ ದಾನಿಯಾಗಿಬಿಟ್ಟನಲ್ಲ ಎಂದು ಅವನ ಹೊಟ್ಟೆ ಉರಿಯಿತು. ಭಟರನ್ನು ಕಳುಹಿಸಿ ರೈತ ಯುನೋ ತನಗೆ ದೊರಕಿದ ಮಡಕೆಯನ್ನು ಹೊತ್ತುಕೊಂಡು ತನ್ನ ಸಭೆಗೆ ಬರುವಂತೆ ಮಾಡಿದ. “”ಏನೋ, ರಾಜದ್ರೋಹ ಮಾಡುತ್ತ ಇದ್ದೀಯಾ? ನಿನಗೆ ವಸ್ತುಗಳನ್ನು ನೂರರಷ್ಟು ಹೆಚ್ಚಿಸುವ ಇಂತಹ ಅದ್ಭುತ ಶಕ್ತಿಯಿರುವ ಮಡಕೆ ದೊರಕಿದ್ದು ಮಣ್ಣಿನೊಳಗೆ ತಾನೆ? ಮಣ್ಣೊಳಗಿನ ವಸ್ತುಗಳು ಸೇರಬೇಕಾದ್ದು ದೊರೆಗೆ ಎಂಬ ಕಾನೂನಿನ ಬಗೆಗೆ ನಿನಗೆ ಅರಿವಿಲ್ಲವೆ? ಇದರ ಯಜಮಾನಿಕೆ ನನ್ನದೇ ಆಗಿರುವ ಕಾರಣ ಇನ್ನು ಮುಂದೆ ಇದು ನನ್ನ ಖಜಾನೆಯಲ್ಲಿರುತ್ತದೆ, ವಿಷಯವನ್ನು ಗೋಪ್ಯವಾಗಿಟ್ಟ ಕಾರಣ ನಿನಗೆ ಶಿಕ್ಷೆ ವಿಧಿಸಬೇಕಾಗಿತ್ತು. ಆದರೆ ದೇಶದ ಜನಗಳ ಅನ್ನದಾತ ಎಂಬ ಕಾರಣಕ್ಕೆ ಹಾಗೆ ಮಾಡದೆ ಹೋಗಲು ಬಿಡುತ್ತಿದ್ದೇನೆ. ಹೋಗು, ಅರೆಕ್ಷಣವೂ ನನ್ನ ಮುಂದಿರಬಾರದು” ಎಂದು ಕಠಿನವಾಗಿ ಹೇಳಿದ.
ರೈತ ಯುನೋವಿಗೆ ದುಃಖ ಒತ್ತರಿಸಿ ಬಂತು. “”ದೊರೆಯೇ, ದೇವರ ಕೃಪೆಯಿಂದ ಸಿಕ್ಕಿದ ಮಡಕೆಯನ್ನು ನನ್ನ ಬಳಿಯಿಂದ ದಯಮಾಡಿ ಕಿತ್ತುಕೊಳ್ಳಬೇಡಿ. ರೈತರಾದ ನಮಗೆ ಬದುಕಲು ಭೂತಾಯಿ ಕೊಟ್ಟ ಕೊಡುಗೆ ಇದು. ಇಂತಹ ಸಹಾಯವನ್ನು ನಮ್ಮಿಂದ ಕಸಿದುಕೊಂಡರೆ ನಮಗೆ ಬದುಕಲು ದಾರಿಯೇ ಇಲ್ಲ. ಉಪವಾಸ ಸಾಯುತ್ತೇವೆ. ಆದ್ದರಿಂದ ಕರುಣೆ ತೋರಿ” ಎಂದು ಕೈಮುಗಿದು ಪ್ರಾರ್ಥಿಸಿದ.
ದೊರೆ ರೈತನ ಮಾತಿಗೆ ಕಿವಿಗೊಡಲಿಲ್ಲ. “”ನಿನ್ನ ಉದ್ಧಾರವಾಗಿ ನನಗೇನೂ ಆಗಬೇಕಾಗಿಲ್ಲ. ರಾಜದ್ರೋಹ ಮಾಡಿದ ನಿನಗೆ ಶಿಕ್ಷೆ ವಿಧಿಸದೆ ಕಳುಹಿಸುತ್ತಿದ್ದೇನಲ್ಲ, ಅದು ನನ್ನ ದೊಡ್ಡ ಔದಾರ್ಯ ಎಂದು ತಿಳಿದುಕೋ. ಈ ಮಡಕೆ ನನಗೇ ಸೇರಬೇಕು ಎಂಬುದರಲ್ಲಿ ಎರಡು ಮಾತೇ ಇಲ್ಲ” ಎಂದು ಹೇಳಿದ. ಬಳಿಕ ತಡೆಯಲಾಗದ ಕುತೂಹಲದಿಂದ ಮಡಕೆಯ ಒಳಗೆ ಇಣುಕಿ ನೋಡಿದ. ಅಬ್ಬ, ಇದರೊಳಗೆ ಎಷ್ಟು ವಿಶಾಲವಾಗಿದೆ ಎಂದುಕೊಂಡು ಮೈಮರೆತು ಬಾಗಿ ಬಾಗಿ ನೋಡುತ್ತಿರುವಾಗಲೇ ಆಯತಪ್ಪಿ$ ಮಡಕೆಯೊಳಗೆ ಬಿದ್ದುಬಿಟ್ಟ. ಮರುಕ್ಷಣವೇ ಮಡಕೆಯು ತನ್ನ ಗುಣವನ್ನು ತೋರಿಸಿಬಿಟ್ಟಿತು. ದೊರೆಯ ಹಾಗೆಯೇ ಇರುವ ನೂರು ಮಂದಿಗಳು ಮಡಕೆಯೊಳಗಿಂದ ದಬದಬನೆ ಹೊರಗೆ ಬಂದರು. ಸಿಂಹಾಸನವೇರಲು ಅವರ ನಡುವೆ ಪೈಪೋಟಿ ನಡೆದು ದೊಡ್ಡ ಯುದ್ಧವೇ ಸಂಭವಿಸಿತು. ಹೊಡೆದಾಡಿಕೊಂಡು ಒಬ್ಬೊಬ್ಬರಾಗಿ ನೆಲಕ್ಕುರುಳಿದರು. ಸೈನಿಕರಿಗೆ ಯಾರ ಪರವಾಗಿ ನಿಂತು ನಾವು ಯುದ್ಧ ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೊಳಗಾದರು. ಕಲಹ ಅಂತ್ಯವಾದಾಗ ಒಬ್ಬ ದೊರೆಯು ಕೂಡ ಜೀವಂತ ಉಳಿಯಲಿಲ್ಲ.
ದೊರೆಗಳು ಕೈ ಕೈ ಮಿಲಾಯಿಸಿ ಹೋರಾಡುತ್ತಿರುವುದನ್ನೇ ನೋಡುತ್ತ ನಿಂತಿದ್ದ ರೈತ ಯುನೋ ಸುಮ್ಮನಿರಲಿಲ್ಲ. ಸದ್ದಿಲ್ಲದೆ ಬಂದು ತನ್ನ ಮಡಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಬಂದ. ಹಳ್ಳಿಯಲ್ಲಿರುವ ಎಲ್ಲ ರೈತರನ್ನು ಬಳಿಗೆ ಕರೆದ. “”ನಾವು ಈ ಮಡಕೆಯನ್ನು ಅವಲಂಬಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೆ ಯಾರಾದರೂ ಬಲಶಾಲಿಗಳು ಇದನ್ನು ಕಸಿದುಕೊಳ್ಳದೆ ಬಿಡುವುದಿಲ್ಲ. ಹೀಗಾಗಿ ಮಡಕೆಗೆ ಸ್ವಲ್ಪ ನೀರು ಹಾಕುತ್ತ ಇರುತ್ತೇನೆ. ಅದು ತುಂಬಿದಾಗ ನಿಮ್ಮ ಕೆರೆ ಬಾವಿಗಳನ್ನು ತುಂಬಿಕೊಂಡು ಮತ್ತೆ ಕೃಷಿ ಆರಂಭಿಸಿ. ಬೆಳೆ ಕೈಸೇರುವಾಗ ಮಡಕೆಯನ್ನು ಮತ್ತೆ ಕಾಡಿಗೆ ಒಯ್ದು ಹೂಳಿ ಬರುತ್ತೇನೆ. ಶ್ರಮವಿಲ್ಲದೆ ಆಹಾರ ಸಿಕ್ಕಿದರೆ ನಾವು ಸೋಮಾರಿಗಳಾಗುತ್ತೇವೆ, ಹಾಗಾಗಬಾರದು” ಎಂದು ಹೇಳಿದ. ರೈತರು ಅದಕ್ಕೆ ಒಪ್ಪಿದರು.
ರೈತ ಮಡಕೆಯೊಳಗೆ ನೀರು ತುಂಬಿಸಿದ. ಅದರಿಂದ ಬಂದ ನೀರನ್ನು ಹರಿಸಿ ಎಲ್ಲ ಕೊಳ, ಬಾವಿಗಳಿಗೂ ರೈತರು ಭರ್ತಿ ಮಾಡಿಕೊಂಡರು. ನೀರನ್ನು ಕಂಡು ಹರ್ಷದಿಂದ ಕುಣಿದಾಡಿದರು. “”ಮತ್ತೆ ನಮ್ಮ ಹೊಲಗಳನ್ನು ಉಳುಮೆ ಮಾಡಿ ಪರಿಶ್ರಮದಿಂದ ವ್ಯವಸಾಯ ನಡೆಸಿ ಬೆಳೆಗಳನ್ನು ಬೆಳೆಸೋಣ. ಸ್ವಂತ ಶಕ್ತಿಯಿಂದ ಬದುಕುವ ದಾರಿಯನ್ನು ಹುಡುಕಿಕೊಳ್ಳೋಣ. ನಮಗೆ ದುಡಿಯದೆ ಸಿಗುವ ಸಂಪತ್ತು ಬೇಡ” ಎಂದು ಹೇಳಿದರು. ಯುನೋ ಮಡಕೆಯನ್ನು ಕಾಡಿಗೆ ತೆಗೆದುಕೊಂಡು ಹೋದ. ಅದು ತನಗೆ ದೊರಕಿದ ಹೊಂಡದಲ್ಲಿ ಅದನ್ನಿರಿಸಿ ಮಣ್ಣು ಮುಚ್ಚಿ ಮನೆಗೆ ಬಂದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.