Jogi matti: ಜೋಗಿಮಟ್ಟಿ ಎಂಬ ಹಸಿರಿನ ಅಂಗಳ
Team Udayavani, Feb 25, 2024, 12:43 PM IST
ಏಕತಾನತೆಯಿಂದ ಬೇಸರವಾಗದೇ ಇರುತ್ತಾ? ಆಸಕ್ತಿ ಇಲ್ಲದ ಜಾಗದಲ್ಲಿ ಬಲವಂತಕ್ಕೆ ಇರುವ ದಿನ, ತಿಂಗಳುಗಳಿವೆಯಲ್ಲಾ? ಅದರಿಂದಾಗುವ ಹಿಂಸೆಯಿಂದ ಕೆಲವೊಮ್ಮೆ ಏಕಾಏಕಿ ಬ್ಯಾಗು ಹೆಗಲಿಗೇರಿಸಿಕೊಂಡು ಹೊರಡುವುದರಲ್ಲಿ ಇರುವ ಖುಷಿ ಬೇರೆಯೇ. ಗಮನಿಸಿ ನೋಡಿ, ಹೊರಡುತ್ತಿರುವುದು ಎಲ್ಲಿಗೆ ಅಂತಾನೇ ನಿರ್ಧರಿಸದೇ ಸುಮ್ಮನೆ ಜರ್ನಿ ಮಾಡುವುದು ಒಂಥರಾ ಮಜ.
ಆ ಸಮಯದಲ್ಲಿ ನಾನಿದ್ದದ್ದು ಯಾದಗಿರಿಯಲ್ಲಿ. ನೌಕರಿ ಅಂದಮೇಲೆ ವರ್ಗಾವಣೆ ಮಾಮೂಲು. ಆದರೆ ವರ್ಗಾವಣೆ ಆದ ಹಿಂದಿನ ಕಾರಣ ಮತ್ತು ಕ್ರಮಗಳು ಬಹಳ ನೋವುಂಟು ಮಾಡಿದ್ದವು. ಬೇಸರ ಮರೆಯಲು ಮತ್ತು ಮನದ ದುಗುಡ ಕಡಿಮೆ ಮಾಡಿಕೊಳ್ಳಲು ಎಲ್ಲಿಗಾದರೂ ಹೋಗಿ ಬರಬೇಕು ಅನ್ನಿಸಿತು. ಹಿಂದೆ ಮುಂದೆ ಯೋಚಿಸದೆ ರಜೆ ಹಾಕಿ ಹೊರಟು ಬಿಟ್ಟೆ. ಮೊದಲು ಬಂದಿದ್ದು ಕೊಪ್ಪಳಕ್ಕೆ… ಅಲ್ಲಿರುವಾಗಲೇ ಚಿತ್ರದುರ್ಗ ನೆನಪಾಯ್ತು. ಚಿತ್ರದುರ್ಗ ಅಂದ ತಕ್ಷಣ ಕೋಟೆ, ಜೋಗಿ ಮಟ್ಟಿ ಎಂಬ ಅದ್ಭುತ ತಾಣಗಳ ಛಾಯಾಚಿತ್ರಗಳನ್ನು ತೆಗೆಯುವ, ಕುಂಚದ ಕಣ್ಣಿನಿಂದಲೂ ಸುಂದರ ಚಿತ್ರ ಬಿಡಿಸುವ ನಾಗರಾಜ್ ಎಂಬ ಕಲಾವಿದರ ನೆನಪಾಯ್ತು. ಆ ಕಾರಣಕ್ಕೆ ಜೋಗಿಮಟ್ಟಿ ನೋಡಲು ಹೋಗಬೇಕೆಸಿತು.
ಕಾಡಲ್ಲಿ ಕೇಳುವುದು ಹಕ್ಕಿ ಹಾಡು
ಎರಡನೇ ಯೋಚನೆ ಮಾಡದೆ ಚಿತ್ರದುರ್ಗದಲ್ಲಿರುವ ಗೆಳೆಯ ರವಿಶಂಕರ್ ಮತ್ತು ಪ್ರಕಾಶನಿಗೆ ಫೋನಾಯಿಸಿದ್ದೆ. ದುರ್ಗದಲ್ಲಿ ರಾತ್ರಿ ರವಿ ಮನೆಯಲ್ಲಿ ವಸತಿ. ನಂತರ ಬೆಳಿಗಿನ ಜಾವಕ್ಕೆಲ್ಲಾ ಪ್ರಕಾಶ ಮತ್ತು ನಾನು ಹೊರಟೆವು. ಪ್ರತಿನಿತ್ಯ ಅಲ್ಲಿಗೆ ಬರುವ ಟಿ.ವಿ.9 ವರದಿಗಾರರಾದ ಬಸವರಾಜ್ ಮುದನೂರು ಎಂಬ ಸ್ನೇಹಿತರೂ ಜೊತೆಯಾದರು. ಜೋಗಿ ಮಟ್ಟಿ ಎಂಬ ಕಾಯ್ದಿರಿಸಿದ ಅರಣ್ಯದ ಮುಖ್ಯದ್ವಾರದಿಂದ ಒಂದಿಷ್ಟು ದೂರ ಕಾಲ್ನಡಿಗೆಯಲ್ಲೇ ನಡೆದೆವು. ದಾರಿ ಮಧ್ಯೆ ಅಲ್ಲಲ್ಲಿ ನವಿಲುಗಳ ಕೂಗು, ಪಕ್ಷಿಗಳ ಕಲರವ ಕೇಳುತ್ತಾ ಹೆಜ್ಜೆ ಹಾಕುವುದೇ ಒಂದು ಅನನ್ಯ ಅನುಭವ.
ಕಣ್ತುಂಬುವ ಪ್ರಕೃತಿ ಸೊಬಗು
ಎತ್ತರದ ಜಾಗದಲ್ಲಿ ವ್ಯೂ ಪಾಯಿಂಟ್ ಇರುವ ಬಯಲಲ್ಲಿ ಕಾಲಿಟ್ಟರೆ ಆಲ್ಲಿಂದ ಕಾಣುವ ವಿಂಡ್ ಪವರ್ ರೆಕ್ಕೆಗಳ ಮಧ್ಯೆ ಇಣುಕುವ ಬಿಳಿ ಚಾದರದಂತೆ ಹರಡಿರುವ ಮಂಜು, ಹಸಿರು, ಮೋಡಗಳೇ ಧರೆಗಿಳಿದು ಹರಡಿಕೊಂಡಿರುವಂತೆ ಕಾಣುವ ಸುಂದರ ನೋಟ ಕಂಡಾಗ, ಈ ಸ್ಥಳದಲ್ಲಿ ಊಟಿ, ಕೊಡೈಕನಾಲ್‌ನಷ್ಟೇ ಅದ್ಭುತವಾದ ಪ್ರಕೃತಿ ಸೌಂದರ್ಯವಿದೆಯಲ್ಲ ಅನಿಸಿತು. ಎತ್ತರದ ಜಾಗದಲ್ಲಿ ನಿಂತು ಬೀಸುವ ಗಾಳಿಗೆ ಮೈಯೊಡ್ಡಿ ನಿಲ್ಲುವುದೇ ಒಂದು ಚೇತೋಹಾರಿ ಅನುಭವ. ಹೀಗೆ ಬೀಸುವ ಗಳಿಗೆ ಮೈಯೊಡ್ಡಿ ನಿಲ್ಲುವವರಲ್ಲಿ ಮಕ್ಕಳು, ಹರೆಯದವರು, ವಯಸ್ಕರು, ವೃದ್ಧರು ಎಂಬ ಭೇದ ಇಲ್ಲದೇ ಪ್ರಕೃತಿಯ ದೃಶ್ಯ ವೈಭವ ನೋಡುವ ಆಸೆಯಿಂದ ಎಲ್ಲರೂ ಇರುತ್ತಾರೆ ಎಂಬುದು ವಿಶೇಷ. ನಾನು ಫೋಟೋಗ್ರಫಿ ಹವ್ಯಾಸಿಗನಾಗಿ ಆಲ್ಲಿಯ ಫೋಟೋ ತೆಗೆದಿದ್ದರೂ, ನಾನು ತೆಗೆದ ಚಿತ್ರಗಳಿಗಿಂತ ಚಿತ್ರದುರ್ಗದ ಕಲಾವಿದ ಕಮ್ ಫೋಟೋಗ್ರಾಫರ್ ನಾಗರಾಜ್ ಅವರು ತೆಗೆದ ಚಿತ್ರಗಳೇ ನನಗಿಷ್ಟ. ಒಂದಂತೂ ನಿಜ, ಫೋಟೋಗ್ರಫಿ ಮತ್ತು ಪರಿಸರ ಪ್ರಿಯರಿಗಂತೂ ಜೋಗಿಮಟ್ಟಿ ಎಂಬುದು ಅಪೂರ್ವ ಆಕರ್ಷಣೆಯ ತಾಣ. ಮಳೆಗಾಲ ಮತ್ತು ಚಳಿಗಾಲದ ಕೊನೆಯ ದಿನಗಳಲ್ಲಂತೂ ಅಲ್ಲಿ ಕಾಣಸಿಗುವ ಪ್ರಕೃತಿ ವೈಭವವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಅಯ್ಯೋ, ಇಲ್ಲಿಂದ ಇಷ್ಟುಬೇಗ ವಾಪಸ್ ಹೋಗಬೇಕಾ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಜನ ಎದ್ದು ಬರುತ್ತಾರೆ. ಅಷ್ಟರಮಟ್ಟಿಗೆ ಜೋಗಿಮಟ್ಟಿಯ ಚೆಲುವು ಪ್ರವಾಸಿಗರ ಮನ ಗೆದ್ದಿರುತ್ತದೆ.
ಜವಾಬ್ದಾರಿ ಇರಲಿ…
ಮೆಚ್ಚುಗೆಯ ಅಂಶವೆಂದರೆ ಅಲ್ಲಿ ಅರಣ್ಯ ಇಲಾಖೆಯೂ ಸಹ ಪರಿಸರ ಸ್ನೇಹಿ ತಂಡಗಳ ಆಸಕ್ತಿಗೆ ಪೋಷಣೆ ನೀಡುತ್ತಾ, ಸ್ವತ್ಛತಾ ಕಾರ್ಯಕ್ರಮ ಮಾಡುವವರಿಗೆ, ಚಾರಣಿಗರಿಗೆ, ವೀಕ್ಷಕರಿಗೆ ಸಹಕಾರ ನೀಡುತ್ತಿದೆ ಎಂಬುದು ನನ್ನ ಅಭಿಪ್ರಾಯ. ಕಾಡಿನ ಮಧ್ಯೆ ಅಲೆಯಲು ಹೋಗುವವರು ಪ್ಲಾಸ್ಟಿಕ್ ಪ್ಯಾಕಿಂಗ್ ಇರುವ ಯಾವುದೇ ತಿನಿಸುಗಳನ್ನು, ನೀರಿನ ಬಾಟಲ್‌ಗಳನ್ನು ತೆಗೆದುಕೊಂಡು ಹೋಗಬಾರದು. ಇದೊಂದು ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ; ತ್ಯಾಜ್ಯ ವಸ್ತು ಕಾಣಿಸಿದಾಗ ಅದನ್ನು ಸಂಗ್ರಹಿಸಿ ಕಾಡಿನಿಂದ ಹೊರಗೆ ತಂದು ಹಾಕಿದರೆ, ಅಷ್ಟರಮಟ್ಟಿಗೆ ಆ ಕಾಡಿನಲ್ಲಿ ಪರಿಸರ ಮಾಲಿನ್ಯ ಆಗುವುದು ತಪ್ಪುತ್ತದೆ.
ಚಳಿಗಾಲದ ಸಂದರ್ಭದಲ್ಲಿ ಮೋಡಗಳು ಧರೆಗಿಳಿದಂತೆ, ಜೋಗಿಮಟ್ಟಿ ಕಾನನದ ಮರಗಳ ಮೇಲೆ ಕುಳಿತಂತೆ ಕಾಣುವ ದೃಶ್ಯ ನಯನ ಮನೋಹರ. ಅಂಥ ಸುಂದರ ದೃಶ್ಯವನ್ನು ಸೆರೆ ಹಿಡಿಯಲು ಮತ್ತೆ ಜೋಗಿಮಟ್ಟಿಗೆ ಯಾವಾಗ ಹೋಗುತ್ತೇನೋ ಎಂಬ ಕಾತರ ನನಗಿದ್ದೇ ಇದೆ. ಅಂತಹ ಸಂದರ್ಭಕ್ಕಾಗಿ ಕಾಯುತ್ತೇನೆ.
ಚಿತ್ರಗಳು: ನಾಗರಾಜ್, ಚಿತ್ರದುರ್ಗ
ಪಿ.ಎಸ್. ಅಮರದೀಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.