K.G. Raghavan: ಧರ್ಮಕ್ಕೆ ಸಾಹಿತ್ಯದ ಸಾಹಚರ್ಯ
Team Udayavani, Dec 17, 2023, 4:16 PM IST
ಹಿರಿಯ ನ್ಯಾಯವಾದಿಗಳೂ, ಲೇಖಕರೂ, ಸಂಸ್ಕೃತಿ ಚಿಂತಕರೂ ಹಾಗೂ ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಕೆ. ಜಿ. ರಾಘವನ್ ಅವರ “ಸುಭಾಷಿತ’ಗಳು ಪುಸ್ತಕ ಬಿಡುಗಡೆಯಾಗಿದೆ. ಸುಭಾಷಿತಗಳ ಮಹತ್ವ, ಸಮಕಾಲೀನ ಸಂದರ್ಭದಲ್ಲಿ ಅವುಗಳು ಪ್ರಸ್ತುತತೆಯ ಬಗೆಗೆ ರಾಘವನ್ ಅವರ ಆಲೋಚನೆಗಳು ಗಮನ ಸೆಳೆಯುವಂತಿವೆ.
ಆಧುನಿಕ ಬದುಕಿನಲ್ಲಿ ಸುಭಾಷಿತಗಳ ಮಹತ್ವ ಏನು?
ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ನೀತಿ-ನಿಯಮಾವಳಿಗಳ ಮೇಲೆ ನಿಂತಿರುತ್ತದೆ. ಅದನ್ನೇ “ಧರ್ಮ’ ಎಂದು ವಿಶಾಲಾರ್ಥದಲ್ಲಿ ಕರೆಯಲಾಗುತ್ತದೆ. “ಧರ್ಮ’ಕ್ಕೆ ಸಾಹಿತ್ಯದ ಸಾಹಚರ್ಯವೂ ಇರುತ್ತದೆ. ಅದು ಚಿಕ್ಕದೊ ಅಥವ ದೊಡ್ಡದೊ ರೂಪದಲ್ಲಿರಬಹುದು. ಇಂಥ ಒಂದು ಸಾಹಿತ್ಯ ಪ್ರಕಾರ ಸುಭಾಷಿತ. ಒಂದು ರೀತಿಯಲ್ಲಿ ಇದು ಜಗತ್ತಿನ ಸಾರ್ವಕಾಲಿಕ ಸಂಸ್ಕೃತಿಯ ಬುನಾದಿ. ಮಾತ್ರವಲ್ಲ; ಸುಭಾಷಿತಗಳು ಸಾರ್ವಕಾಲಿಕವಾದ ಮೌಲ್ಯಗಳನ್ನು ಪ್ರತಿಪಾದಿಸುವ ಕಾರಣಕ್ಕೆ ಅವು ದೇಶ-ಕಾಲಗಳ ಗಡಿಗಳನ್ನು ಮೀರಿ ನಿಲ್ಲುತ್ತವೆ. ಪ್ರತಿಯೊಬ್ಬರೂ ಜೀವಿತದ ಕ್ಷಣ-ಕ್ಷಣದಲ್ಲಿಯೂ ಒಳಿತಿನ ನಡವಳಿಕೆ ಅಥವಾ ಧರ್ಮದ ಆಚರಣೆಗಾಗಿ ಬದ್ಧನಾಗಿರಬೇಕಾಗುತ್ತದೆ. ಈ ಪ್ರಕ್ರಿಯೆಯು ಆಂತರಿಕ ಶ್ರದ್ಧೆಯಿಂದ ನಡೆಯುವಂಥದು ಎಂಬುದನ್ನು ಸುಭಾಷಿತಗಳು ಮನಗಾಣಿಸುತ್ತವೆ.
ಸಂಸ್ಕೃತದ ಸುಭಾಷಿತಗಳ ವೈಶಿಷ್ಟ್ಯಗಳೇನು?
ಪ್ರಪಂಚದ ಇತರ ಭಾಷೆಯುಲ್ಲಿರುವ ನುಡಿಗಟ್ಟುಗಳು, ಹೇಳಿಕೆಗಳಿಗಿಂತ ಸಂಸ್ಕೃತದ ಸುಭಾಷಿತಗಳು ಭಿನ್ನವಾಗಿವೆ. ಆಕರ್ಷಕವಾಗಿವೆ. ಮಾತ್ರವಲ್ಲ; ಅವು ಬೆರಗಿನ ವಚನಗಳೂ ಹೌದು, ಬೆಡಗಿನ ಅಭಿವ್ಯಕ್ತಿಗಳೂ ಹೌದು. ಇತರ ಸುಭಾಷಿತಗಳಿಗಿಂತ ಸಂಸ್ಕೃತದ ಸುಭಾಷಿತಗಳು ಮೂರ್ತ, ವಾಸ್ತವಿಕ ನೆಲೆಯ ಅರ್ಥವಂತಿಕೆಯ ಕಾರಣಕ್ಕಾಗಿ ವೈಶಿಷ್ಟ್ಯಪೂರ್ಣವಾಗಿವೆ. ಪಾಶ್ಚಾತ್ಯ ಸಮಾಜಗಳಿಗೆ ಹೋಲಿಸಿದರೆ ಭಾರತೀಯ ಸಮಾಜವು ರೂಪುಗೊಂಡಿರುವುದೇ ಮೌಲ್ಯ ವ್ಯವಸ್ಥೆಯ ಮೇಲೆ. ಈ ಮೌಲ್ಯ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಯ ಬೌದ್ಧಿಕ ಔನತ್ಯವನ್ನು ಎತ್ತಿ ಹಿಡಿಯುತ್ತದೆ. ಸಂಸ್ಕೃತ ಭಾಷೆಯು ಇವತ್ತು ಆಡು ಮಾತಾಗಿಲ್ಲದಿರಬಹುದು- ಆದರೆ ಎಲ್ಲರಿಗೂ ಸುಭಾಷಿತಗಳಲ್ಲಿ ಅಡಗಿರುವ ಜ್ಞಾನ ಮತ್ತು ಮೌಲ್ಯಗಳ ಬಗೆಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದರ ಅರಿವಿರುತ್ತದೆ.
ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದ ಸುಭಾಷಿತ ಯಾವುದು.?
ಸುಭಾಷಿತಗಳು ಕಾಲ, ದೇಶ ಬದ್ಧವಾಗಿರುವಂತೆ ಕಾಲಾತೀತವಾಗಿಯೂ ತನ್ನ ಅರ್ಥವಂತಿಕೆಯನ್ನು ಸಾರುತ್ತವೆ. ಕೆಲವು ಸಮಯ ಸಂದರ್ಭಗಳಲ್ಲಿ ಅವುಗಳ ಅರ್ಥ ಬೇರೆ ಬೇರೆಯಾಗುವುದುಂಟು. ಸುಭಾಷಿತಗಳ ಹಿಂದಿನ ಆಶಯವನ್ನು ನಾವು ಸರಿಯಾಗಿ ಗ್ರಹಿಸದೆ ಇದ್ದರೆ ಅಪಾರ್ಥಗಳಾಗುವುದೂ ಉಂಟು. ಸುಭಾಷಿತಗಳನ್ನು ಭಾಷೆ, ಧ್ವನಿ, ಶೈಲಿ, ವ್ಯಂಗ್ಯಾರ್ಥ, ಸ್ವಭಾವೋಕ್ತಿ, ಚಮತ್ಕಾರ ಹೀಗೆ ಹಲವು ವಿಧಗಳಲ್ಲಿ ಗ್ರಹಿಸಬೇಕು. ಶ್ರಮದ ಮಹತ್ವವನ್ನು ಸಾರುವ ಸುಭಾಷಿತವೊಂದಿದೆ. “ಯತ್ಕಿಮಪಿ ಕಾರ್ಯಂ ಪ್ರಯತ್ನೆನ ಸಿದ್ಧೈತಿ, ನ ತು ಕೇವಲಂ ಕಾಮನಾ, ಮೃಗಃ ಸ್ವಯಂಮೇವ ಸುಪ್ತಸಿಂಹಮುಖಂ ನ ಛಿ’ – “ಕಠಿಣ ಪರಿಶ್ರಮದಿಂದ ಮಾತ್ರ ನಮ್ಮ ಗುರಿಗಳನ್ನು ಸಾಧಿಸಬಹುದು’ ಎಂಬುದು ಈ ಸುಭಾಷಿತದ ಆಶಯ. ಸಿಂಹ ಒಂದೆಡೆ ಸುಮ್ಮನೆ ಮಲಗಿದ್ದರೆ ಯಾವುದೇ ಪ್ರಾಣಿ ಸ್ವ ಇಚ್ಛೆಯಿಂದ ಬಂದು ಸಿಂಹದ ಬಾಯಿಗೆ ಬೀಳುವುದಿಲ್ಲ. ಸಿಂಹ ತನ್ನ ಆಹಾರವನ್ನು ಪಡೆಯಲು ಬೇಟೆಯಾಡಬೇಕು. ಹೀಗಾಗಿ ಕೇವಲ ಉದ್ದೇಶ ಅಥವಾ ಬಯಕೆ ಇದ್ದರೆ ಸಾಲದು. ನಮ್ಮ ಜೀವನದ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಪರಿಶ್ರಮ ಅತ್ಯಗತ್ಯ. ಎನ್ನುವ ವಿಚಾರವನ್ನು ಈ ಸುಭಾಷಿತ ಮನವರಿಕೆಮಾಡಿಕೊಡುತ್ತದೆ. ಎಲ್ಲ ಸುಭಾಷಿತಗಳು ನನಗೆ ಮುಖ್ಯವೇ ಆದರೆ ಇದು ತುಂಬ ಇಷ್ಟವಾದುದು. ಸದ್ಯ ಮತ್ತು ಶಾಶ್ವತ ಮೌಲ್ಯಗಳ, ಒಳಿತಿನ ಗಣಿಯಂತಿವೆ ಸುಭಾಷಿತಗಳು. ಅವು ಯಾವುದೇ ದೇಶ ಭಾಷೆಯಿಂದ ಬಂದರೂ ಸ್ವೀಕರಿಸಲು ನಾನು ಸಿದ್ಧನಿದ್ದೇನೆ.
ಯುವಜನಾಂಗಕ್ಕೆ ಸುಭಾಷಿತಗಳ ಮಹತ್ವವನ್ನು ಹೆಚ್ಚಿಸಲು ಯಾವ ಮಾರ್ಗಗಳನ್ನು ಅನುಸರಿಸಬೇಕು?
ಹಿಂದಿನಕಾಲದಲ್ಲಿ ಜನಸಾಮಾನ್ಯರ ಮಾತುಗಳಲ್ಲಿ ಸುಭಾಷಿತಗಳು ಉದಾಹರಣೆಗೊಳ್ಳುತ್ತಿದ್ದವು. ಶಾಲೆಗಳಲ್ಲಿ ಪ್ರತಿದಿನ ಒಂದೊಂದು ಸುಭಾಷಿತವನ್ನು ಬೋರ್ಡಿನ ಮೇಲೆ ಬರೆದಿರುತ್ತಿದ್ದರು. ಹಲವು ಶಾಲೆಗಳಲ್ಲಿ ಅವುಗಳನ್ನು ಪ್ರಾರ್ಥನೆಯ ಸಮಯದಲ್ಲಿ ವಿವರಿಸುತ್ತಿದ್ದರು. ಕಛೇರಿಗಳ ಬಾಗಿಲಿನ ಬೋರ್ಡಿನ ಬರೆದಿರುತ್ತಿದ್ದರು. ಪ್ರಜ್ಞಾ ಪೂರ್ವಕವಾಗಿಯೂ ಅಪ್ರಜ್ಞಾ ಪೂರ್ವಕವಾಗಿಯೋ ಅವು ನಮ್ಮ ಕಿವಿ ಮತ್ತು ಕಣ್ಣಿಗೆ ಬೀಳುತ್ತಿದ್ದವು. ನಮ್ಮ ನಂಬಿಕೆ. ವ್ಯಕ್ತಿತ್ವ ನಡವಳಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಈಗಲೂ ಮನೆ ಮತ್ತು ಶಾಲೆಯಲ್ಲಿ ಸುಭಾಷಿತಗಳ ಮಹತ್ವವನ್ನು ವಿವರಿಸುವ ಕೆಲಸವಾಗಬೇಕು. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಸುಭಾಷಿತಗಳ ಬಗೆಗೆ ಅರಿವು ಮೂಡಿಸಬೇಕು. ನಮ್ಮ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಗೀತೆ, ಕಾಳಿದಾಸ, ವಚನಗಳು, ದಾಸರ ಕೀರ್ತನೆಗಳು, ಕುಮಾರವ್ಯಾಸ, ಕುವೆಂಪು, ಬೇಂದ್ರೆಯವರ ಕಾವ್ಯಗಳಲ್ಲಿರುವ ಸುಭಾಷಿತಗಳನ್ನು ಹೆಕ್ಕಿ ತೆಗೆದು ಅವುಗಳ ಮಹತ್ವ ವಿವರಿಸಿದರೆ ಆಸಕ್ತರು ಮೂಲ ಸಾಹಿತ್ಯಕ್ಕೆ ಹೋಗಬಹುದು. ಡಿ. ವಿ. ಜಿ. ಅವರ “ಮಂಕು ತಿಮ್ಮನ ಕಗ್ಗ’ದ ಬಗೆಗೆ ಹೇಳುವಂತೆಯೇ ಇಲ್ಲ. ಸುಭಾಷಿತಗಳ ಬಗೆಗೆ ಅಧ್ಯಯನ ಸಂಶೋಧನೆಗಳು ಹೆಚ್ಚಬೇಕು. ಸುಭಾಷಿತಗಳ ಬಗೆಗೆ ತರಗತಿಗಳನ್ನು ನಡೆಸುವಂತಾಗಬೇಕು. ಹಾಗಾದಲ್ಲಿ ಕೇವಲ ಸುಭಾಷಿತಗಳ ಬಗೆಗೆ ಮಾತ್ರವಲ್ಲ ನಮ್ಮ ಧರ್ಮ, ಸಾಹಿತ್ಯ ಸಂಸ್ಕೃತಿ ಪರಂಪರೆಗಳ ಬಗೆಗೆ ಅರಿವು ತನ್ನೀತಾನೇ ಹೆಚ್ಚಾಗುತ್ತದೆ. ದಿನಕ್ಕೊಂದರಂತೆ ಅವುಗಳನ್ನು ಓದಿದರೆ, ಮನನ ಮಾಡಿದರೆ ನಮ್ಮ ಅರಿವಿನ, ಗ್ರಹಿಕೆಯ ಕ್ಷಿತಿಜವನ್ನು ವಿಸ್ತರಿಸಬಹುದು.
ನಿಮ್ಮ ಮುಂದಿನ ಪುಸ್ತಕ ಯಾವುದು?
“ರಾಮಾಯಣ’ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಶ್ರೀರಾಮ, ಸೀತೆ ಇತ್ಯಾದಿ ಆದರೆ “ರಾಮಾಯಣ’ದಲ್ಲಿ ಹೆಚ್ಚು ಮುನ್ನಲೆಗೆ ಬರದ ಅನೇಕ ಸಂಗತಿಗಳಿವೆ. ನನ್ನ ಮುಂದಿನ ಪುಸ್ತಕ “ಶ್ರೀಮದ್ ರಾಮಾಯಣ’ದ ವೈವಿಧ್ಯಮಯ, ಸ್ವಾರಸ್ಯಮಯ ಸಂಗತಿಗಳನ್ನು ಕುರಿತದ್ದು. ಇವು ಆಗಾಗ ನಾನು ನೀಡಿದ ಉಪನ್ಯಾಸದ ಲಿಖೀತ ರೂಪ. “ರಾಮಾಯಣ’ದಲ್ಲಿ ಪ್ರಾಣಿ, ಪಕ್ಷಿಗಳು, ಶಾಪಗಳು, ರಾಕ್ಷಸರು, ಋಷಿಗಳು ಹಾಗು ಸುಂದರ ಕಾಂಡದ ಬೇರೆ ಬೇರೆ ವಿಷಯ ಇದರಲ್ಲಿದೆ. “ಕಂಬ ರಾಮಾಯಣ’, “ತುಳಸಿ ರಾಮಾಯಣ’, “ಆಧ್ಯಾತ್ಮ ರಾಮಾಯಣ’, “ಶ್ರೀರಾಮಾಯಣ ದರ್ಶನಂ’ ಮುಂತಾದ ಕೃತಿಗಳಲ್ಲಿ ಬಂದಿರುವ ಬಹುಮುಖಿ ನೆಲೆಗಳನ್ನು ಕುರಿತ ಬರಹಗಳ ಸಂಗ್ರಹವಿರಲಿದೆ. ಮುಂದೆ “ಕಠೊಪನಿಷತ್’ ಬಗೆಗೂ ಪುಸ್ತಕ ಪ್ರಕಟಿಸುವ ಪ್ರಯತ್ನದಲ್ಲಿರುವೆ.
ಸಂದರ್ಶನ:
ನ. ರವಿಕುಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.