ಕಲಾಂ ಕನಸಿನ ಇಂಡಿಯಾ-2020
Team Udayavani, Dec 29, 2019, 6:10 AM IST
2020ರಲ್ಲಿ ಭಾರತ ಹೇಗಿರಬೇಕು ಎಂಬ ಕನಸು ಕಂಡವರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ. ಆ ಕುರಿತ ಪುಸ್ತಕವನ್ನೇ ಅವರು ಬರೆದಿದ್ದರು. ಸಕಾರಾತ್ಮಕ ಚಿಂತನೆಗಳ ಮೂಲಕ ದೇಶದ ಮೇಲೆ ಅಪಾರ ಪ್ರಭಾವ ಬೀರಿದ್ದ ಕಲಾಂ ಕನಸುಗಳು ನನಸಾಗದೇ ಇರಬಹುದು. ಆದರೆ, ಸಾಗಬೇಕಾದ ದಾರಿ ಹೇಗಿರಬೇಕು ಎಂಬುದರ ಕಡೆಗೆ ಅವು ಬೆಳಕು ಚೆಲ್ಲುತ್ತವೆ !
ಆ ದಿನ ಪ್ರಸಿದ್ಧ ವಿಜ್ಞಾನಿ ಡಾ. ಎ. ಪಿ.ಜೆ. ಅಬ್ದುಲ್ ಕಲಾಂರವರ ಉಪನ್ಯಾಸ ಕಾರ್ಯಕ್ರಮವೊಂದಿತ್ತು. ಉಪನ್ಯಾಸದ ನಂತರ ವಿದ್ಯಾರ್ಥಿನಿಯೋರ್ವಳು ಕಲಾಂರವರ ಬಳಿ ಬಂದು ಹಸ್ತಾಕ್ಷರಕ್ಕಾಗಿ ವಿನಂತಿಸಿದಳು. ಹಸ್ತಾಕ್ಷರವನ್ನು ನೀಡುತ್ತ “ಏನಮ್ಮಾ ನಿನ್ನ ಕನಸು?’, ಎಂದು ಕಲಾಂ ಪ್ರಶ್ನಿಸಿದರು. “ನನಗೆ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕುವ ಕನಸಿದೆ’ ಎಂದು ಆಕೆ ಉತ್ತರಿಸಿದಳು.
ಈ ಮಾತುಗಳು ಕಲಾಂ ಅವರನ್ನು ಬಹಳ ಕಾಡಿತು. ಆಗಿನ್ನೂ ಅವರು ಭಾರತದ ರಾಷ್ಟ್ರಪತಿ ಹುದ್ದೆಗೇರಿರಲಿಲ್ಲ. ಆದರೆ, ಮುಂದೊಂದು ದಿನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ ಭಾರತ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟ ಅರಿವು ಅವರಿಗಿತ್ತು. ಇದೇ ಸ್ಫೂರ್ತಿಯಿಂದ ಅವರು ತಮ್ಮ ಸಹೋದ್ಯೋಗಿಯಾಗಿದ್ದ ವೈ. ಎಸ್. ರಾಜನ್ ಅವರ ಸಹಯೋಗದಲ್ಲಿ ಇಂಡಿಯಾ-2020 ಕೃತಿಯನ್ನು ರಚಿಸಿದರು. ಈ ಕೃತಿಯನ್ನು ಆ ಬಾಲಕಿಗೆ ಮತ್ತು ಇಂಥಾದ್ದೇ ಕನಸನ್ನು ಹೊಂದಿರುವ ಅಸಂಖ್ಯಾತ ಭಾರತೀಯರಿಗೆ ಅವರು ಅರ್ಪಿಸಿದ್ದಾರೆ.
ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು ಮೌಲ್ಯಮಾಪನ ಕೇಂದ್ರದ (ಟಿಐಎಫ್ಎಸಿ) ಟೆಕ್ನಾಲಜಿ ವಿಷನ್-2020 ಎಂಬ ಬಹುನಿರೀಕ್ಷಿತ ಕಾರ್ಯಕ್ರಮದ ತಂಡದಲ್ಲಿದ್ದ ಮೇಧಾವಿಗಳನ್ನೂ ಸೇರಿಸಿ, ದೇಶದಾದ್ಯಂತ ಹಲವರ ಅಭಿಪ್ರಾಯ-ಅನಿಸಿಕೆ-ಸಲಹೆಗಳನ್ನು ಸಂಗ್ರಹಿಸಿ ತಮ್ಮ ವಿಚಾರಗಳನ್ನು ದಾಖಲಿಸಿರುವ ಕಲಾಂರವರು ಹತ್ತಾರು ಸವಾಲುಗಳ ಹೊರತಾಗಿಯೂ ಹಲವು ಆಯಾಮ, ದೃಷ್ಟಿಕೋನಗಳನ್ನು ಪರಿಗಣಿಸಿ 2020ರ ಭಾರತದ ಕನಸು ಕಾಣುತ್ತಾರೆ. ಒಟ್ಟಾರೆಯಾಗಿ ಇವು ಭಾರತೀಯರೆಲ್ಲರ ಕನಸುಗಳೂ ಹೌದು ಎಂಬುದು ಅವರ ನಿಲುವೂ ಆಗಿತ್ತು.
ನೋಡನೋಡುತ್ತಲೇ ಕಲಾಂರವರ ಇಂಡಿಯಾ-2020 ಕನಸುಗಳಿಗೂ ಈಗ ಇಪ್ಪತ್ತೆರಡರ ವಯಸ್ಸಾಗಿದೆ. ಇವಿಷ್ಟು ವರ್ಷಗಳಲ್ಲಿ ಭಾರತವು ಅದೆಷ್ಟು ಬದಲಾಗಿದೆ, ಸವಾಲುಗಳನ್ನು ಎದುರಿಸಿ ನಿಂತಿದೆ ಎಂದು ಪರಾಮರ್ಶಿಸಿಕೊಳ್ಳಲು ಇದು ಸಕಾಲ. ಇಂದು ಅಭಿವೃದ್ಧಿಯ ಮಾತುಗಳು ಬಂದಾಗಲೆಲ್ಲಾ ಜಿಡಿಪಿ ಸೇರಿದಂತೆ ಬಹಳಷ್ಟು ಅಂಶಗಳು ಚರ್ಚೆಗೊಳಗಾಗುತ್ತವೆ. ತಲಾ ಆದಾಯ ಮತ್ತು ಕೊಳ್ಳುವ ಶಕ್ತಿಯ ಸಾಮ್ಯವನ್ನು ಪರಿಗಣಿಸಲಾಗುತ್ತದೆ.
ಇನ್ನು ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆಯನ್ನು ವೈಜ್ಞಾನಿಕ ರೂಪುರೇಷೆಯಲ್ಲಿ ಅಭ್ಯಸಿಸಲು ಮತ್ತು ಸರಳವಾಗಿ ವ್ಯಾಖ್ಯಾನಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬೇಕಿರುವ ಹೊಸ ಮಾನದಂಡಗಳ ಆವಶ್ಯಕತೆಗಳ ಬಗ್ಗೆಯೂ ನಿರಂತರ ಚರ್ಚೆಗಳಾಗುವುದನ್ನು ನಾವು ಕೇಳುತ್ತಿರುತ್ತೇವೆ. ಇವೆಲ್ಲದರ ಮಧ್ಯದಲ್ಲೂ ಉಳಿಯುವ ಗಮನಾರ್ಹ ಅಂಶವೆಂದರೆ ಅಂಕಿಅಂಶಗಳು ಜನಸಾಮಾನ್ಯನೊಬ್ಬನ ಜೀವನಸ್ಥಿತಿಯ ಕೆಲವೊಂದು ಭಾಗಗಳತ್ತ ಮಾತ್ರ ಬೆಳಕು ಚೆಲ್ಲುತ್ತವೆ. ಆದರೆ, ಈ ಅಂಕಿಅಂಶಗಳ ನೆರವಿನಿಂದಲೇ ದೇಶದ ನಾಗರಿಕನೊಬ್ಬನ ಜೀವನಸ್ಥಿತಿಯನ್ನು ಸಂಪೂರ್ಣವಾಗಿ ಅರಿಯಲಾಗದು.
“ಅಭಿವೃದ್ಧಿ ಹೊಂದಿದ ದೇಶ’ಗಳ ಪಟ್ಟಿಯಲ್ಲಿ ಭಾರತವನ್ನು ತರುವ ಕಲಾಂರವರ ಕನಸಿನಲ್ಲೂ ಎದ್ದು ಕಾಣುವುದು ಮಾನವೀಯತೆ ಮತ್ತು ಜೀವನಪ್ರೀತಿ. ಸದ್ಯದ ಮತ್ತು ಮುಂಬರುವ ಪೀಳಿಗೆಗಳು ನಿರಂತರವಾಗಿ ಸಾಮಾಜಿಕ ಉನ್ನತಿಯನ್ನು ಕಾಣದಿರುವ ಪಕ್ಷದಲ್ಲಿ “ಅಭಿವೃದ್ಧಿ ಹೊಂದಿದ ದೇಶ’ವೆಂಬ ಲೇಬಲ್ಲಿಗೆ ಅರ್ಥವೇ ಇಲ್ಲವೆಂದು ಎಂದು ದಾಖಲಿಸುತ್ತಾರೆ ಕಲಾಂ. ಅದು ವರ್ತಮಾನದ ಭದ್ರತೆ ಮತ್ತು ಆವಶ್ಯಕತೆಗಳ ಈಡೇರಿಕೆಯಷ್ಟೇ ಅಲ್ಲದೆ, ಉತ್ತಮ ಭವಿಷ್ಯಕ್ಕಾಗಿ ಆಶಾಭಾವದೊಂದಿಗೆ ನಿರೀಕ್ಷಿಸಬಹುದಾದ ಪರಿಸ್ಥಿತಿಯನ್ನು ಸೃಷ್ಟಿಸುವ ಜವಾಬ್ದಾರಿಯೂ ಹೌದು.
ಕನಸೂ, ಕಾರ್ಯಗಳೂ
2020ನೇ ಸಾಲಿನಲ್ಲಿ ಭಾರತವು ಜ್ಞಾನದ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಬೇಕು ಎಂದು ಅವರು ಆಶಿಸುತ್ತಾರೆ. “ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರತವು ಈ ಎತ್ತರಕ್ಕೆ ಏರುವುದು ಸಾಧ್ಯವಾಗಬಹುದು. ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುವುದು ಸಾಧ್ಯವಾಗಬಹುದು’ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ ಅಂಕಿಅಂಶಗಳನ್ನು ನೀಡಿ ಕನಸಿನ ಸಾಕಾರ ಮಾಡಿಕೊಳ್ಳುವುದು ಹೇಗೆ ಎಂಬುದನ್ನೂ ವಿವರಿಸಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ದೇಶವು ಜಾಗತಿಕ ನಕ್ಷೆಯಲ್ಲಿ ಮುಂಚೂಣಿಯ ದೇಶವಾಗಿ ಗುರುತಿಸಿಕೊಳ್ಳಬಹುದು ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ.
ಗಾಂಧೀಜಿಯೇ ಸ್ಫೂರ್ತಿ
ಹೊಟ್ಟೆಪಾಡಿಗಾಗಿ ರಾಮೇಶ್ವರಂನ ಬೀದಿಗಳಲ್ಲಿ ಸೈಕಲ್ ತುಳಿಯುತ್ತ ಹರೆಯದ ಕಲಾಂ ದಿನಮಣಿ ಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುತ್ತಿದ್ದ ದಿನಗಳವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣದ ಒಂದೆರಡು ದಿನಗಳಲ್ಲಿ ದೆಹಲಿಯ ನಾಯಕರು ಸಂಭ್ರಮದಲ್ಲೇ ವ್ಯಸ್ತರಾಗಿದ್ದರೆ ಅಧಿಕಾರ ವಲಯದಿಂದ ದೂರವಿದ್ದ ಮಹಾತ್ಮಾಗಾಂಧಿಯವರು ದೇಶದ ಮತಾöವುದೋ ಭಾಗದಲ್ಲಿ ದಂಗೆಗಳಿಂದ ಗಾಯಾಳುಗಳಾಗಿದ್ದ ಜನಸಾಮಾನ್ಯರ ಸೇವೆಯಲ್ಲಿ ನಿರತರಾಗಿದ್ದರು ಎಂಬ ಪತ್ರಿಕಾವರದಿಯೊಂದು ಅವರನ್ನು ಗಾಢವಾಗಿ ಪ್ರಭಾವಿಸಿತ್ತು. ಕಲಾಂ ಹೇಳುವಂತೆ ಪ್ರತಿಯೊಬ್ಬ ಭಾರತೀಯನಿಗೂ ಈ ಮಟ್ಟಿನ ಬದ್ಧತೆ ಅಗತ್ಯ. ಪ್ರಾಮಾಣಿಕತೆಯೊಂದಿಗೆ ಸೇವೆಯನ್ನು ನೀಡಬಲ್ಲ ನಾಯಕನೇ ಭವಿಷ್ಯದ ಯಶಸ್ವಿ ಭಾರತಕ್ಕಿರುವ ದೊಡ್ಡ ಆದ್ಯತೆ.
ಕನಸಿನ ಇಂಡಿಯಾ-2020ಗೆ ಬೇಕಿರುವುದು ಸಮಾಜದ ಆಯ್ದ ವರ್ಗದ ಏಳಿಗೆಯಷ್ಟೇ ಅಲ್ಲ. ರಾಜಕೀಯ ನೇತಾರರಂತೆ, ಸಂಘ-ಸಂಸ್ಥೆಗಳಂತೆ, ಸರಕಾರಿ ಅಧಿಕಾರಿಗಳಂತೆ ಪ್ರತಿಯೊಬ್ಬ ಜನಸಾಮಾನ್ಯನ ಕೊಡುಗೆಯೂ ಇಲ್ಲಿ ಮಹತ್ವದ್ದು. ಹಿಂದಿನಿಂದಲೂ ತನ್ನಲ್ಲಿರುವ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಭಾರತವು ಎಡವಿದ್ದೇ ಹೆಚ್ಚು. ಅಂಥಾದ್ದರಲ್ಲಿ ತಿಂಗಳ ಒಂದೋ, ಎರಡೋ ದಿನವನ್ನು ಸಮಾಜಮುಖೀಯಾದ ಸೇವಾಕಾರ್ಯಗಳಿಗಾಗಿ ಮೀಸಲಿಡುವಂತಹ ಪುಟ್ಟ ಹೆಜ್ಜೆಗಳೇ ದೊಡ್ಡ ಬದಲಾವಣೆಗಳಿಗೆ ಹಾದಿಯಾಗಬಲ್ಲದು ಎಂಬ ಮಹತ್ತರವಾದ ಧ್ಯೇಯವು ಈ ಕನಸಿನ ಹಿಂದಿದೆ.
ಹೊಸತನ, ದಿಟ್ಟತನದ ಹಾದಿ
ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಹೊಸತನದ ಕೊರತೆಯು ಕಲಾಂರಿಗೆ ನಿಚ್ಚಳವಾಗಿ ಕಂಡಿತ್ತು. ಅವರೇ ಹೇಳುವಂತೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಮಹಾತ್ಮಾಗಾಂಧಿಯವರಿಂದ ಜನಪ್ರಿಯವಾಗಿದ್ದ, ಶಾಂತಿ-ಅಹಿಂಸೆಗಳ ಮಾನವೀಯ ಅಡಿಪಾಯದಲ್ಲಿ ರೂಪಿಸಲ್ಪಟ್ಟ ಸತ್ಯಾಗ್ರಹ, ಚಳುವಳಿಗಳು ಆ ಕಾಲಕ್ಕೆ ನಿಜಕ್ಕೂ ಹೊಸದಾಗಿದ್ದವು. ಇಂದು ಆರ್ಥಿಕ ನೀತಿಗಳಿಂದ ವ್ಯಾಪಾರ-ವಹಿವಾಟುಗಳವರೆಗೂ, ಸಿನೆಮಾಗಳಿಂದ ಮಾಧ್ಯಮಗಳವರೆಗೂ ಬಹುತೇಕ ಕ್ಷೇತ್ರಗಳಲ್ಲಿ ಭಾರತವು ಸರಕುಗಳನ್ನು ಎರವಲು ಪಡೆದುಕೊಂಡು ತನ್ನ ನೆಲದಲ್ಲಿ ಪ್ರಯೋಗಿಸಿದ್ದೇ ಹೆಚ್ಚು. ಬಾಹ್ಯಾಕಾಶ ವಿಜ್ಞಾನ, ಭದ್ರತಾ ಪರಿಕರಗಳು ಇತ್ಯಾದಿಗಳ ವಿಚಾರದಲ್ಲಿ ಭಾರತವು ಸಾಗಿಬಂದಿರುವ ಹಾದಿಯು ಸ್ಮರಣೀಯವಾಗಿದೆ. ಈಗ ತಂತ್ರಜ್ಞಾನವು ಮತ್ತಷ್ಟು ಮುಂದುವರೆದಿದೆ. ಇಂಥ ಕಾಲಮಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಂಥ ಕ್ಷೇತ್ರಗಳಲ್ಲಿ ಹೊಸತನದ ಹೆಜ್ಜೆಗಳನ್ನು ಕಾಣಬೇಕು ಎಂಬುದು ಅವರ ಆಶಯ.
ತೊಂಬತ್ತರ ದಶಕದ ಅಂತಿಮ ಭಾಗದಲ್ಲಿ ದೇಶದ ಭದ್ರತಾ ಆವಶ್ಯಕತೆಗಾಗಿ ಪರಮಾಣು ಶಕ್ತಿಯನ್ನು ಬಳಸಿಕೊಳ್ಳಲು ಭಾರತವು ಮುಂದಾದಾಗ ಹಲವು ಮುಂದುವರಿದ ದೇಶಗಳಿಂದ ಪ್ರಕಟವಾಗಿದ್ದ ತಣ್ಣನೆಯ ಪ್ರತಿಕ್ರಿಯೆಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಇಂದು ಜಾಗತಿಕವಾಗಿ ಭಾರತ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳೂ ಸೇರಿವೆ.
ಗಡಿ ವಿವಾದಗಳು, ಹವಾಮಾನ ವೈಪರೀತ್ಯ, ಅಂತಾರಾಷ್ಟ್ರೀಯ ಮಾರುಕಟ್ಟೆಯಂತಹ ವಿಚಾರಗಳಲ್ಲಿ ರಾಜತಾಂತ್ರಿಕ ನೆಲೆಯಲ್ಲಿ ಭಾರತವು ಇಡುವ ಜಾಗರೂಕ ಹೆಜ್ಜೆಗಳ ಬಗ್ಗೆ ಜಗತ್ತು ಗಮನಿಸುತ್ತಿದೆ. ಯಾಕೆಂದರೆ, ಜಗತ್ತಿನ ದೊಡ್ಡ ಮಾರುಕಟ್ಟೆಗಳ ಪೈಕಿ ಭಾರತವು ಮುಖ್ಯವಾದುದು. ಮಹತ್ತರವಾದ ಗುರಿಯನ್ನಿಟ್ಟುಕೊಂಡು ಸಾಗುವ ಕೆಲ ಪಯಣಗಳನ್ನು ಏಕಾಂಗಿಯಾಗಿ ದಾಟಬೇಕಾದ ಅನಿವಾರ್ಯತೆಗಳೂ ಸೃಷ್ಟಿಯಾದಲ್ಲಿ ಅಚ್ಚರಿಯಿಲ್ಲ. ಹೊಸ ಶಕೆಯ ಭಾರತದ ನಿರ್ಮಾಣದಲ್ಲಿ ಕಲಾಂರವರ ದೂರದೃಷ್ಟಿಯಂತೆ ಈ ಅಂಶಗಳು ಮುಖ್ಯ ಪಾತ್ರವನ್ನು ವಹಿಸಲಿವೆ ಎನಿಸುತ್ತದೆ.
ಭಾರತೀಯತೆಯೆಂಬ ಹೆಮ್ಮೆ
ಇಂಡಿಯಾ-2020ರ ಹಿನ್ನೆಲೆಯಲ್ಲಿ ಕಲಾಂರವರು ದಾಖಲಿಸಿರುವ ಸ್ವಾರಸ್ಯಕರ ಕಥೆಯೊಂದು ಇಲ್ಲಿ ಹಿಂದೆಂದಿಗಿಂತಲೂ ಪ್ರಸ್ತುತವೆನಿಸುತ್ತದೆ. ಓರ್ವ ಹಿರಿಯ ಅಧಿಕಾರಿಯೊಬ್ಬರ ಜಪಾನ್ ಪ್ರವಾಸ ಅನುಭವದ ಬಗ್ಗೆ ಆಪ್ತವಾಗಿ ನೆನಪಿಸಿಕೊಳ್ಳುವ ಕಲಾಂರವರು ದೇಶವೊಂದರ ಉದ್ಯಮವೊಂದು ನೀಡಬಹುದಾದ ಸೇವೆಗಳು, ಅದರ ಗುಣಮಟ್ಟ ಮತ್ತು ತತ್ಸಂಬಂಧಿ ಯಶಸ್ಸಿನಿಂದಾಗಿ ಹುಟ್ಟಿಕೊಳ್ಳುವ ಸಹಜ ಹೆಮ್ಮೆಯ ಬಗ್ಗೆ ನೀಡುವ ಪರಿಚಯವು ಮನಸ್ಸಿಗೆ ತಟ್ಟುವಂಥದ್ದು.
ಜಪಾನಿನ ಹೊಟೇಲೊಂದರಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದ ಆ ಹಿರಿಯರ ಸಿಹಿನಿದ್ದೆಯು ಸ್ನಾನಗೃಹದಲ್ಲಿ ಸೋರುತ್ತಿದ್ದ ನೀರಿನ ನಳ್ಳಿ ಯಿಂದಾಗಿ ಕೆಟ್ಟುಹೋಗಿತ್ತು. ಈ ಬಗ್ಗೆ ದೂರು ನೀಡಿದ ಕೂಡಲೇ ಬರುವ ಇಬ್ಬರು ಕಾರ್ಮಿಕರು ಅರ್ಧ ತಾಸು ಕೆಲಸವನ್ನು ಮಾಡಿ ಸಮಸ್ಯೆಯನ್ನು ಪರಿಹರಿಸುವುದಲ್ಲದೆ ಕೋಣೆಯಲ್ಲಿ ತಂಗಿರುವ ಅತಿಥಿಯ ಬಳಿ ಚರ್ಚಿಸಿ ಅವರ ಸಂತೃಪ್ತಿಯನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಇತ್ತ ಹೊಟೇಲಿನ ಆಡಳಿತ ಮಂಡಳಿಯ ಅಧಿಕಾರಿಗಳು ಅಚಾತುರ್ಯದಿಂದ ಆಗಿರುವ ಅಡಚಣೆಯ ಬಗ್ಗೆ ಅತಿಥಿಯಲ್ಲಿ ಕ್ಷಮೆಯನ್ನೂ ಕೋರುತ್ತಾರೆ. ಇವಿಷ್ಟೂ ಸಾಲದೆಂಬಂತೆ ಕಾರ್ಮಿಕನೊಬ್ಬ ಸವಿನಯದಿಂದ ತಲೆಬಾಗುತ್ತ ನಿರ್ಗಮನದ ಹೊತ್ತಿನಲ್ಲಿ ಆ ಅತಿಥಿಯೊಂದಿಗೆ ಹೀಗೆ ಹೇಳಿದ್ದನಂತೆ: “ನಮ್ಮನ್ನು ದಯವಿಟ್ಟು ಕ್ಷಮಿಸಿ. ಈ ನಳ್ಳಿಯಲ್ಲಿ ಎಡವಟ್ಟು ಮಾಡುತ್ತಿದ್ದ ಲೋಹದ ಉತ್ಪನ್ನವು ಜಪಾನೀ ಮೇಡ್ ಅಲ್ಲ. ಬದಲಾಗಿ ಎಲ್ಲಿಂದಲೋ ಆಮದು ಮಾಡಿಕೊಂಡಿರುವ ಭಾಗ. ನಾವು ನಮ್ಮ ಸೇವೆಯನ್ನು ಮುಂದಿನ ದಿನಗಳಲ್ಲೂ ಉತ್ತಮಪಡಿಸುವತ್ತ ಎಂದಿನಂತೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ’.
ಜಪಾನಿ ಕಾರ್ಮಿಕನೊಬ್ಬನಿಗೆ ತನ್ನ ದೇಶದ ಮತ್ತು ತಾನು ನೀಡುತ್ತಿರುವ ಸೇವೆಯ ಬಗ್ಗೆ ಇರುವ, ಒಂದು ರೀತಿಯಲ್ಲಿ ಮೇಲ್ನೋಟಕ್ಕೆ ಸಾತ್ವಿಕ ಅಹಂಕಾರದಂತೆಯೂ ಕಾಣುವ ಹೆಮ್ಮೆಯು ನಿಸ್ಸಂದೇಹವಾಗಿ ತನ್ನ ಕೌಶಲ್ಯದಿಂದಲೇ ಬಂದಿರುವಂಥದ್ದು. ವೃತ್ತಿ ಕೌಶಲಗಳು ಹೆಚ್ಚಿದಷ್ಟು ಮಾನವ ಸಂಪನ್ಮೂಲದ ಬಳಕೆಯು ಮತ್ತಷ್ಟು ಪರಿಣಾಮಕಾರಿಯಾಗಿ ದೇಶದ ಹಿತಕ್ಕಾಗಿ ಬಳಕೆಯಾಗುವುದು ಸಹಜ. ಪ್ರತಿಯೊಬ್ಬ ಭಾರತೀಯ ನಾಗರಿಕನೂ ಆಯಾ ಕ್ಷೇತ್ರದಲ್ಲಿ ಇಂಥ ಬದ್ಧತೆಯನ್ನು ಬೆಳೆಸಿಕೊಂಡಿದ್ದೇ ಆದರೆ ಇಂಡಿಯಾ-2020ರ ಕನಸು ಅಷ್ಟೇನೂ ದೂರವಿಲ್ಲವೆಂಬ ಕನಸು ಕಲಾಂರದ್ದಾಗಿತ್ತು.
ಏಳು-ಬೀಳುಗಳ ಹಾದಿ
ಐತಿಹಾಸಿಕ ನೆಲೆಯಲ್ಲಿ ಮಹತ್ವದ ಘಟ್ಟವಾಗಿರುವ ಸ್ವಾತಂತ್ರ್ಯವು ದೊರಕಿದ ಕಳೆದ ಏಳು ದಶಕಗಳಲ್ಲಿ ಹಲವಾರು ಏಳುಬೀಳುಗಳನ್ನು ಭಾರತವು ಕಂಡಿದೆ. ಅಂತಾರಾಷ್ಟ್ರೀಯ ಮಟ್ಟಿನಲ್ಲಿ ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದ ಡಾ. ಕಲಾಂರಂಥ ಮಹನೀಯರು ಕಲ್ಪಿಸಿಕೊಂಡಿದ್ದ 2020ರ ವರ್ಷವನ್ನು ಎದುರುಗೊಳ್ಳಲು ಭಾರತವೂ ಅಣಿಯಾಗಿದೆ. ಸಾರಿಗೆ, ಆರೋಗ್ಯದಂಥ ಕ್ಷೇತ್ರಗಳಲ್ಲಿ ನಡೆದಿರುವ ಅಭಿವೃದ್ಧಿಯ ಹೊರತಾಗಿಯೂ ಬಡತನ, ಶಿಕ್ಷಣ, ರೈತರ ಸಮಸ್ಯೆಗಳು ಮತ್ತು ಸಾಮಾಜಿಕ ನ್ಯಾಯದಂಥ ಕ್ಷೇತ್ರಗಳಲ್ಲಿ ಭಾರತವು ಸಾಗಬೇಕಾದ ದೂರವು ಬಹಳಷ್ಟಿದೆ.
ಕಲಾಂರವರು ಎರಡು ದಶಕಗಳ ಹಿಂದೆ ಇಂಡಿಯಾ-2020 ಎಂದಿದ್ದರು. ಆ ಕನಸಿನ ಬೀಜವೇ ಇಂದು ಚಿಗುರಿ ಬೆಳೆದಂತೆ ಬೆಳೆದಿದೆ ಯೆಂಬಂತೆ “ಟೆಕ್ನಾಲಜಿ ವಿಷನ್-2035′ ಎನ್ನಲು ಟಿಐಎಫ್ಎಸಿ ಮತ್ತೆ ತಯಾರಾಗಿದೆ. ದೂರದೃಷ್ಟಿಯ ಕನಸುಗಳು ದೇಶದ ಉತ್ತಮ ಭವಿಷ್ಯತ್ತಿನ ನೀಲನಕ್ಷೆಯಷ್ಟೇ ಅಲ್ಲದೆ, ವರ್ತಮಾನದಲ್ಲಿ ಹೆಚ್ಚಿನ ಜವಾಬ್ದಾರಿಗಳಿಗೆ ಹೆಗಲಾಗುವ ಕರ್ತವ್ಯವೂ ಹೌದು. ಈ ಸದುದ್ದೇಶದಿಂದಾದರೂ ಕಲಾಂ ಕನಸುಗಳು ಭಾರತಕ್ಕೆ ಕಲ್ಪವೃಕ್ಷವಾಗಲಿ.
ಪ್ರಸಾದ್‌ನಾೖಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.