Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ ಸಾಹಿತ್ಯ ರಂಗದ ಸಾರ್ಥಕ ಸೇವೆ
Team Udayavani, Sep 22, 2024, 4:18 PM IST
ಅಮೆರಿಕಾದಲ್ಲಿ ಈಗ ಪ್ರತಿಯೊಂದು ನಗರದಲ್ಲಿಯೂ ಕನ್ನಡ ಸಂಘಗಳಿವೆ. ಅವುಗಳ ಮಧ್ಯೆ ಸಾಹಿತ್ಯದ ಚಟುವಟಿಕೆಗಳನ್ನೇ ಉಸಿರಾಗಿಸಿಕೊಂಡ “ಕನ್ನಡ ಸಾಹಿತ್ಯ ರಂಗ’ವೂ ಇದೆ. ಕಳೆದ 20 ವರ್ಷಗಳಲ್ಲಿ ಅಲ್ಲಿರುವ ಹಲವಾರು ಲೇಖಕರಿಗೆ ವೇದಿಕೆ ಒದಗಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, “ಕನ್ನಡ ಸಾಹಿತ್ಯ ರಂಗ’ವನ್ನು ಅಭಿನಂದಿಸುವ ಕಾರ್ಯಕ್ರಮ ಬೆಂಗಳೂರಿನಲ್ಲಿ ಇಂದು (ಸೆ. 22) ನಡೆಯುತ್ತಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ರಂಗದ ಹುಟ್ಟು, ಅದು ಸಾಗಿ ಬಂದ ಹಾದಿಯ ಕುರಿತು ಆ ಸಂಸ್ಥೆಯ ಈಗಿನ ಅಧ್ಯಕ್ಷ ಶ್ರೀಕಾಂತ ಬಾಬು ಮಾತಾಡಿದ್ದಾರೆ.
“ಕನ್ನಡ ಸಾಹಿತ್ಯ ರಂಗ’ ಸ್ಥಾಪನೆಯ ಹಿನ್ನೆಲೆ ಏನು?
ಕಳೆದ ಶತಮಾನದ ಕೊನೆಯ ಹೊತ್ತಿಗೆ ಅಮೆರಿಕದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಕನ್ನಡ ಚಟುವಟಿಕೆಗಳೂ ಹೆಚ್ಚಾಗತೊಡಗಿದವು.”ಅಕ್ಕ’ ಮತ್ತು “ನಾವಿಕ’ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸತೊಡಗಿದ್ದವು. ಸಿನಿಮಾ, ಸಂಗೀತ, ನಾಟಕ, ನೃತ್ಯ, ಸಿನಿಮಾಗಳಿಗೆ ಪ್ರಾಮುಖ್ಯತೆಯಿದ್ದ ಆ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಕುರಿತಾಗಿ ಹೆಚ್ಚಿನ ಚಟುವಟಿಕೆಗಳಿರುತ್ತಿರಲಿಲ್ಲ. ಇದನ್ನು ಮನಗಂಡು 2003ರಲ್ಲಿ ನ್ಯೂಜೆರ್ಸಿಯ ಡಾ. ರಂಗಾಚಾರ್ ಮನೆಯಲ್ಲಿ ಡಾ. ಎಚ್. ವೈ. ರಾಜಗೋಪಾಲ್ ಡಾ. ನಾಗ ಐತಾಳ್, ಡಾ. ಚಂದ್ರಶೇಖರ್ ಮತ್ತಿತರರು ಸೇರಿ ಕನ್ನಡ ಸಾಹಿತ್ಯದ ಚಟುವಟಿಕೆಗಳಿಗೆಂದೇ ಮೀಸಲಾದ ಸಂಸ್ಥೆ “ಕನ್ನಡ ಸಾಹಿತ್ಯ ರಂಗ’ವನ್ನು ಸ್ಥಾಪಿಸಿದರು.
“ಕನ್ನಡ ಸಾಹಿತ್ಯ ರಂಗ’ದ ಮುಖ್ಯ ಚಟುವಟಿಕೆಗಳೇನು?
ವಸಂತ ಸಾಹಿತ್ಯೋತ್ಸವವನ್ನು 2 ವರ್ಷಕ್ಕೊಮ್ಮೆ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ಆಚರಿಸುವುದು ಒಂದು ಮುಖ್ಯ ಚಟುವಟಿಕೆ. ಈವರೆಗೆ 11 ಸಮ್ಮೇಳನಗಳನ್ನು ಅಮೆರಿಕದ ಮುಖ್ಯ ನಗರಗಳಲ್ಲಿ ಆಚರಿಸಿದ್ದೇವೆ. ಪ್ರತಿ ಸಮ್ಮೇಳನಕ್ಕೂ ಒಂದು ವಿಶೇಷ ವಿಷಯವನ್ನು ಆರಿಸಿ, ಅದರ ಕುರಿತು ಒಂದು ಪುಸ್ತಕವನ್ನು ಹೊರತಂದಿದ್ದೇವೆ. ಈ ವರ್ಷ ಮಹಿಳಾ ಸಂವೇದನೆ ಕುರಿತು “ಅವಳು’ ಹೆಸರಿನ ಸಂಚಿಕೆ ಬಂದಿದೆ. ಸಾಧಾರಣವಾಗಿ ಈ ಎಲ್ಲ ಪುಸ್ತಕಗಳ ಲೇಖನಗಳನ್ನೂ ಮತ್ತು ಅವುಗಳ ಸಂಪಾದನೆಯನ್ನೂ ಅಮೆರಿಕದಲ್ಲಿರುವ ಕನ್ನಡ ಲೇಖಕರೇ ಮಾಡಬೇಕೆನ್ನುವುದು ನಮ್ಮ ಉದ್ದೇಶ. ಈ ಮೂಲಕ ಕಳೆದೆರಡು ದಶಕಗಳಲ್ಲಿ ಇಲ್ಲಿನ ಸುಮಾರು 40-50 ಲೇಖಕರಿಗೆ “ಸಾಹಿತ್ಯಾವಕಾಶ’ ಕಲ್ಪಿಸಿದ್ದೇವೆ. ಪ್ರತಿ ತಿಂಗಳು “ಬುಕ್ ಕ್ಲಬ್’ನಲ್ಲಿ ಆಯ್ದ ಪುಸ್ತಕಗಳ, ಕಥೆ-ಕವನಗಳ ಕುರಿತು ಚರ್ಚೆ ಮತ್ತು ಲೇಖಕರೊಂದಿಗೆ ಆನ್‌ಲೈನ್ ಸಂವಾದ ನಡೆಯುತ್ತದೆ.
ಆಧುನಿಕ ತಂತ್ರಜ್ಞಾನದ ತೊಟ್ಟಿಲಾದ ಅಮೆರಿಕದಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ನಡೆಸುವುದು ಕಷ್ಟ ಎನಿಸುವುದಿಲ್ಲವೇ? “ಕನ್ನಡ ಸಾಹಿತ್ಯ ರಂಗ’ದ ಚಟುವಟಿಕೆಗಳಿಗೆ ಅಲ್ಲಿನ ಸ್ಥಳೀಯರ ಸಹಕಾರ ಹೇಗಿದೆ ?
ಸಂಸ್ಥೆಯ ಬೆಳವಣಿಗೆಗೆ ಆರ್ಥಿಕ ಸಹಾಯ ಮತ್ತು ಸ್ವಯಂಸೇವಕರ ಸಹಾಯ ಅತ್ಯಗತ್ಯ. ಅದೃಷ್ಟವಶಾತ್ ನಮಗೆ ಅವುಗಳ ನೆರವು ಸಮೃದ್ಧವಾಗಿವೆ. ಹಾಗಾಗಿ ನಮ್ಮ ಕೆಲಸಗಳು ಸುಗಮವಾಗಿ ನಡೆದುಕೊಂಡು ಹೋಗುತ್ತಿವೆ. ನಮಗೆ ಇಷ್ಟವಾದ ಕೆಲಸಗಳನ್ನು ಮಾಡಲು ಸಹಕಾರ/ ಸಹಾಯ ಸಿಗುತ್ತವೆ. ನಮ್ಮ ಯಾವ ಸಮ್ಮೇಳನ ಚಟುವಟಿಕೆಗಳಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ನೀವು ನಂಬುವುದಿಲ್ಲ, ಪ್ರತಿ ವಸಂತೋತ್ಸವಕ್ಕೆ ಕುಟುಂಬ ಸಮೇತ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆ ದಿನಕ್ಕಾಗಿ ಕಾಯುವ ಜನರೂ ಅಮೆರಿಕದಲ್ಲಿದ್ದಾರೆ.
ಅಮೆರಿಕಕ್ಕೆ ವಲಸೆ ಬರುತ್ತಿರುವ ಯುವ ಬರಹಗಾರರನ್ನು ಪ್ರೋತ್ಸಾಹಿಸಲು “ಕನ್ನಡ ಸಾಹಿತ್ಯ ರಂಗ’ ಯಾವ ಯೋಜನೆಗಳನ್ನು ಹಾಕಿಕೊಂಡಿದೆ?
ರಂಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯುವ ಬರಹಗಾರರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತೇವೆ. ಪುಸ್ತಕಗಳಿಗೆ ಲೇಖನಗಳನ್ನು ಬರೆಯುವುದಾಗಲೀ, ಕನ್ನಡ ಪುಸ್ತಕಗಳ ಇಂಗ್ಲಿಷ್ ಅನುವಾದಗಳಿದ್ದ ಪಕ್ಷದಲ್ಲಿ ಅದರ ವಿಮರ್ಶೆ ಮಾಡುವುದಾಗಲೀ, ಸಮ್ಮೇಳನದ ಚರ್ಚಾಕೂಟದಲ್ಲಿ ಭಾಗವಹಿಸುವುದಾಗಲೀ, ಸ್ವಯಂಸೇವಕರಾಗಿ ಸೇವೆ ಮಾಡುವುದು ಇತ್ಯಾದಿಗಳಿಗಾಗಿ ಯುವಜನತೆಯನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಯುವ ಬರಹಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಹಲವಾರು ಜವಾಬ್ದಾರಿಗಳನ್ನು ವಹಿಸುತ್ತೇವೆ. ಸೂಕ್ತ ಮಾರ್ಗದರ್ಶನ ಮಾಡಿ ಅವರನ್ನು ಮುಂದಿನ ಕೆಲಸಗಳಿಗೆ ಸಜ್ಜುಗೊಳಿಸುತ್ತೇವೆ.
ಅಮೆರಿಕ ಕನ್ನಡಿಗರ ಸಾಹಿತ್ಯದ ಒಲವು-ನಿಲುವುಗಳು ಯಾವ ಕಡೆಗೆ ಹೆಚ್ಚಿದೆ ಎಂದು ಭಾವಿಸುತ್ತೀರಿ?
ಸಾಹಿತ್ಯ ಎನ್ನುವುದು ಅಡುಗೆಯಿದ್ದಂತೆ. ಸಾಹಿತ್ಯಾಸಕ್ತರು, ಅಪರೂಪದ ವಿಷಯ ಮತ್ತು ಆಕರ್ಷಕ ಶೈಲಿಯ ಯಾವ ಪ್ರಕಾರವನ್ನಾದರೂ ಮೆಚ್ಚಿಯಾರು! ಕಥೆ, ಕವನ, ಪ್ರಬಂಧ, ನಾಟಕ, ಕಾದಂಬರಿ, ಆತ್ಮಕಥೆ, ಇತ್ಯಾದಿ. ಹೆಚ್ಚಾಗಿ ಬಾಲ್ಯದ ಹಳ್ಳಿಯ ಅನುಭವಗಳನ್ನು ಬರೆಯುತ್ತಿದ್ದವರು ಈಚೀಚೆಗೆ ಆಧುನಿಕ ಬದುಕಿನ ವಿನ್ಯಾಸಗಳು ಸಮಾಜದ ಆಗು ಹೋಗುಗಳು, ನಗರ ಕೇಂದ್ರಿತ ಬದುಕು, ವಲಸೆಯ ಪರಿಣಾಮಗಳು, ಮಾನವ ಸಂಬಂಧಗಳಲ್ಲಿನ ಸೂಕ್ಷ್ಮಸಂಗತಿಗಳ ಬಗ್ಗೆಯೂ ಬರೆಯುತ್ತಿದ್ದಾರೆ.
ಸಾಹಿತ್ಯಾಸಕ್ತರೇ ಹಣ ಹಾಕಿ ಕಾರ್ಯಕ್ರಮ ಮಾಡುತ್ತಾರೆ!
ಸರ್ಕಾರದ ನೆರವು ಪಡೆಯದೆ, ಸಾಹಿತ್ಯಾಸಕ್ತರೇ ಹಣ ಹಾಕಿಕೊಂಡು ಅಚ್ಚುಕಟ್ಟಾದ ಕಾರ್ಯಕ್ರಮ ಮಾಡುವ ಹೆಗ್ಗಳಿಕೆ ಕನ್ನಡ ಸಾಹಿತ್ಯ ರಂಗಕ್ಕಿದೆ. ಪ್ರತಿ ವರ್ಷ ಒಬ್ಬ ಲೇಖಕರನ್ನು ಕರೆಸಿ ಅಮೆರಿಕದ ಬೇರೆ ಬೇರೆ ಊರುಗಳಲ್ಲಿ ಉಪನ್ಯಾಸ, ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಈವರೆಗೆ ಡಾ. ಪ್ರಭುಶಂಕರ, ಬರಗೂರು ರಾಮ ಚಂದ್ರಪ್ಪ, ವೈದೇಹಿ, ಭುವನೇಶ್ವರಿ ಹೆಗಡೆ, ಕೆ. ವಿ. ತಿರುಮಲೇಶ್, ಲಕ್ಷ್ಮೀಶ ತೋಳ್ಪಾಡಿ, ವೀಣಾ ಶಾಂತೇಶ್ವರ, ಎಚ್. ಎಸ್. ಶ್ರೀಮತಿ, ವಸುಧೇಂದ್ರ ಮುಂತಾದವರು ಕನ್ನಡ ಸಾಹಿತ್ಯ ರಂಗದ ಕಾರ್ಯ ಕ್ರಮಗಳಲ್ಲಿ ಅತಿಥಿ/ ಉಪನ್ಯಾಸಕ ರಾಗಿ ಭಾಗವಹಿಸಿದ್ದಾರೆ.
ಸಂದರ್ಶನ:
ಪಿ. ಚಂದ್ರಿಕಾ
ವಾರದ ಅತಿಥಿ:
ಶ್ರೀಕಾಂತ ಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.