Kedarnath Temple: ದಕ್ಷಿಣ ಕೇದಾರ ಬಳ್ಳಿಗಾವಿಯ ಈ ಕೇದಾರನಾಥ
Team Udayavani, Dec 24, 2023, 1:53 PM IST
ಬಳ್ಳಿಗಾವಿ’ ಶಿವಮೊಗ್ಗದಿಂದ 21 ಕಿ. ಮೀ ದೂರದಲ್ಲಿ, ಶಿಕಾರಿಪುರ -ಶಿರಾಳಕೊಪ್ಪ ಮಾರ್ಗದಲ್ಲಿರುವ ಚಿಕ್ಕ ಹಳ್ಳಿ. ಬಳ್ಳಿಗಾವೆ, ಬೆಳಗಾಮಿ, ಬಳ್ಳಿಗಾಮೆ, ಬಳ್ಳಿಗ್ರಾಮ ಅಲ್ಲದೇ ಬಲಿಪುರ ಎಂದೂ ಈ ಊರು ಪ್ರಸಿದ್ಧಿ. ಪುರಾಣ, ಪುಣ್ಯ ಕಥೆಗಳ ಪ್ರಕಾರ ಈ ಊರು ಹಿಂದೆ ಬಲಿ ಚಕ್ರವರ್ತಿಯ ರಾಜ್ಯದ ಭಾಗವಾಗಿತ್ತಂತೆ. ಹಾಗಾಗಿಯೇ ಬಲಿಪುರ ಎಂಬ ಹೆಸರು ಬಂದಿದ್ದಿರಬಹುದು. ಇತಿಹಾಸದ ಪ್ರಕಾರ, ಆರಂಭದಲ್ಲಿ ಚುಟು ಶಾತವಾಹನರ ಆಳ್ವಿಕೆಗೆ ಒಳಪಟ್ಟಿದ್ದು, ನಂತರದಲ್ಲಿ ಬನವಾಸಿಯ ಕದಂಬರ ರಾಜ್ಯದ ಭಾಗವಾಗಿತ್ತು. ಬಾದಾಮಿ ಚಾಲುಕ್ಯರು, ಮುಳಖೇಡದ ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ದೇವಗಿರಿ ಯಾದವರು, ದೋರಸಮುದ್ರದ ಹೊಯ್ಸಳರು ತದನಂತರ ವಿಜಯನಗರದ ಅರಸರು ಆಯಾ ಕಾಲಘಟ್ಟದಲ್ಲಿ ಈ ಪ್ರದೇಶದ ಅಧಿಕಾರವನ್ನು ಹೊಂದಿದ್ದರು. 5 ವಿದ್ಯಾಪೀಠಗಳನ್ನು ಹೊಂದಿದ್ದ ಈ ಊರು, ಅಂದಿನ ಕಾಲದ ಪ್ರಮುಖ ವಿದ್ಯಾಕೇಂದ್ರವೂ ಆಗಿತ್ತು. 12ನೇ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ಜನ್ಮಸ್ಥಳ ಬಳ್ಳಿಗಾವಿ. ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ದೇವಿಯ ಜನ್ಮಸ್ಥಳವೂ ಹೌದು.
ಕೇದಾರನಾಥ ದೇವಾಲಯ ಪ್ರಮುಖ ಆಕರ್ಷಣೆ:
12ನೇ ಶತಮಾನದಲ್ಲಿ ನಿರ್ಮಿತವಾದ “ಕೇದಾರನಾಥ ದೇವಾಲಯ’ ಇಂದಿಗೂ ಬಳ್ಳಿಗಾವಿಯ ಪ್ರಮುಖ ಆಕರ್ಷಣೆಯ ಕೇಂದ್ರ. “ಹೊಯ್ಸಳ ತ್ರಿಕೂಟ ಶೈಲಿ’ಯ ವಾಸ್ತು ಶಿಲ್ಪಕ್ಕೆ ಮಾದರಿ ಈ ದೇವಾಲಯ. ಮೂರು ಶಿಖರಗಳುಳ್ಳ, ಮೂರು ಗರ್ಭಗೃಹಗಳನ್ನು ಹೊಂದಿದ, ಪೂರ್ವ-ಪಶ್ಚಿಮವಾಗಿ ನಿರ್ಮಿತವಾಗಿರುವ ಈ ದೇಗುಲದಲ್ಲಿ ಪಶ್ಚಿಮದ ಗರ್ಭಗೃಹಕ್ಕೆ ಒಂದು ಸುಖನಾಸಿ ಇದೆ.
ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಅರ್ಧಮಂಟಪ ಸಹಿತ ಗರ್ಭಗೃಹವಿದ್ದು, ಎಲ್ಲವೂ ಆರು ಸ್ತಂಭಗಳ ಮಹಾಮಂಟಪದ ಮೂಲಕ ತೆರೆದುಕೊಳ್ಳುತ್ತವೆ. ಮಹಾಮಂಟಪವನ್ನು ಪ್ರವೇಶಿಸುವದಕ್ಕೆ ಉತ್ತರ, ದಕ್ಷಿಣ ಮತ್ತು ಪೂರ್ವ ದಿಕ್ಕುಗಳಲ್ಲಿ ಬಾಗಿಲುಗಳಿವೆ. ಮಹಾಮಂಟಪದ ಒಳಭಾಗದಲ್ಲಿ ದೇವ ಕೋಷ್ಟಗಳನ್ನು ರೂಪಿಸಿದ್ದಾರೆ. ಪಶ್ಚಿಮ ಹಾಗೂ ದಕ್ಷಿಣ ಗರ್ಭಗೃಹಗಳಲ್ಲಿ ಶಿವಲಿಂಗಗಳಿದ್ದರೆ, ಉತ್ತರ ಗರ್ಭಗುಡಿಯಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಮಂಟಪವನ್ನು ದಾಟಿ ಮುಂದೆ ಹೋದರೆ ಅಲಂಕೃತ ಸ್ತಂಭಗಳ ಸಭಾ ಮಂಟಪ ಎದುರಾಗುತ್ತದೆ. ಹದಿನಾರು ಮೂಲೆಯ ಮತ್ತು ಎಲೆಯ ಅಲಂಕರಣದಿಂದ ಕೆತ್ತಲ್ಪಟ್ಟ ಹೊಳಪುಗೊಳಿಸಿದ ಸ್ತಂಭಗಳು ಎಂಥವರನ್ನೂ ಆಕರ್ಷಿಸುತ್ತವೆ.
ಪ್ರವೇಶ ದ್ವಾರದಲ್ಲಿರುವ ಕರಿಶಿಲೆಯ ನಂದಿ ದೇವಸ್ಥಾನದ ಆವರಣದಲ್ಲಿರುವ ಮತ್ತೂಂದು ಪ್ರಮುಖ ಆಕರ್ಷಣೆ. ಇನ್ನು ದೇವಾಲಯದ ಹೊರಭಾಗದ ಗೋಡೆಗಳು, ಆಭರಣಗಳನ್ನು ಧರಿಸಿದ ಸ್ತ್ರೀಯರ ಸುಂದರ ಕೆತ್ತನೆಗಳಿಂದ ಕೂಡಿದೆ. ತ್ರಿಕುಟಗಳ ಮೇಲೆ ತಾಂಡವೇಶ್ವರ, ವರಾಹ, ಉಮಾ ನರಸಿಂಹ, ಭೈರವ ಹೀಗೆ ಶಿವ-ವಿಷ್ಣುವಿನ ಹಲವು ಅವತಾರಗಳನ್ನು ಕೆತ್ತಲಾಗಿದೆ. ಪಶ್ಚಿಮದ ಗರ್ಭಗೃಹದ ಮೇಲಿನ “ಸುಖನಾಸಿ’ಯ ಮೇಲೆ ಹೊಯ್ಸಳರ ಲಾಂಛನವನ್ನು ಕೆತ್ತಲಾಗಿದೆ. ಪ್ರಾಚೀನ ಕಾಲದ ವಾಸ್ತು ಶಿಲ್ಪ, ಕಲಾ ನೈಪುಣ್ಯ ಮತ್ತು ಶಿಲ್ಪ ವೈಭವಕ್ಕೆ ಬಳ್ಳಿಗಾವಿಯ “ಕೇದಾರನಾಥ ದೇವಾಲಯ’ ಸಾಕ್ಷಿಯಾಗಿ ನಿಂತಿದೆ. 12ನೇ ಶತಮಾನದ ಈ ದೇವಾಲಯ ಇಂದಿಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ, ಪ್ರತಿದಿನ ಸಾವಿರಾರು ಮಂದಿಯನ್ನು ಸೆಳೆಯುತ್ತ ನಿಂತಿದೆ.
-ಚಿತ್ರ-ಲೇಖನ: ಜಿ. ಆರ್. ಪಂಡಿತ್, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.