Kite: ಪಟ ಪಟ ಹಾರೋ ಗಾಳಿಪಟ…
Team Udayavani, Oct 22, 2023, 1:02 PM IST
ಹಣವಿದ್ದವರು ದೊಡ್ಡ ದಾರದ ರೀಲನ್ನೇ ಕೊಂಡು ಆಗಸದಲ್ಲಿ ಚುಕ್ಕಿಯಾಗಿ ಕಾಣುವಂತೆ ಪಟ ಹಾರಿಸುತ್ತಿದ್ದರು. ಚೋಟುದ್ದದ ದಾರ ಇಟ್ಟುಕೊಂಡು ನಾವು ಇದ್ದುದರಲ್ಲಿಯೇ ಪಟ ಹಾರಿಸಿ ತೃಪ್ತಿಪಟ್ಟುಕೊಳ್ಳುತ್ತಿದ್ದೆವು. ಒಮ್ಮೆ ಅತ್ಯಂತ ದೂರ ಹಾರಿದ್ದ ಪಟದ ದಾರವನ್ನು ಹಿಡಿದು ಪಟ ಆಡಿಸಬೇಕೆಂಬ ಆಸೆ ಉಂಟಾಯಿತು.
ಆ ಪಟ ಹಿಡಿದಿದ್ದವರನ್ನು ಕೇಳಿದೆ…
ಇದಿನ ಬಹುಪಾಲು ಮಕ್ಕಳಿಗೆ ಗಾಳಿಪಟದ ಅರಿವಿಲ್ಲ. ಪಾಲಕರಲ್ಲೂ ಅದರ ಬಗ್ಗೆ ಆಸಕ್ತಿ ಇಲ್ಲ. ಈಗ ಏನಿದ್ದರೂ ಟಿವಿ, ಮೊಬೈಲ್ ಅಷ್ಟೇ. ಅವುಗಳಲ್ಲೇ ಆಟ. ಆದರೆ ಮೊದಲೆಲ್ಲ ದೈಹಿಕವಾಗಿ, ಮಾನಸಿಕವಾಗಿ ಉಲ್ಲಾಸ ಗೊಳಿಸುವ ಎಷ್ಟೊಂದು ಆಟಗಳಿದ್ದವು. ಅದರಲ್ಲೂ ಗಾಳಿಪಟ ಹಾರಿಸುವುದು ಮಕ್ಕಳಿಂದ ವೃದ್ಧರವರೆರೆಗೆ ಎಲ್ಲರೂ ಇಷ್ಟಪಡುವ ಆಟವಾಗಿತ್ತು.
ನಾನು ಮನೆಯಲ್ಲಿಯೇ ಗಾಳಿಪಟ ಸಿದ್ದಪಡಿಸುತ್ತಿದ್ದೆ. ಅಮ್ಮ ಸರಿ(ಅಂಟು) ತಯಾರಿಸಿಕೊಡುತ್ತಿದ್ದಳು. ಪಟ ವೊಂದನ್ನು ರೂಪಿಸಲು ಎಷ್ಟು ಹಾಳೆ ಅಂಟನ್ನು ವ್ಯರ್ಥಗೊಳಿಸಿದ್ದೇನೋ ಗೊತ್ತಿಲ್ಲ. ಪಟದ ಆಧಾರಕ್ಕಾಗಿ ಕಡ್ಡಿಗಳು ಬೇಕಲ್ಲ, ಅದಕ್ಕಾಗಿ ಪೊರಕೆಯ ಕಡ್ಡಿಗಳನ್ನು ಉಪಯೋಗಿಸುತ್ತಿದ್ದೆ.
ಅದನ್ನು ಪಟದ ಹಾಳೆಗೆ ಅಡ್ಡಲಾಗಿ, ಉದ್ದಕ್ಕೆ, ಬಿಲ್ಲಿನಂತೆ ಬಾಗಿದ ಒಂದು ಕಡ್ಡಿ… ಹೀಗೆ ಏನೇನೋ ಪ್ರಯೋಗಗಳು. ಇಷ್ಟೆಲ್ಲ ಆದ ಮೇಲೆ ಅದಕ್ಕೊಂದು ದಾರ ಕಟ್ಟಿ ಮನೆಯ ಮಾಳಿಗೆ ಮೇಲೆ ಭರೊ…ಎಂದು ಬೀಸುವ ಗಾಳಿಗೆ ಪಟ ಹಾರಿಸಲು ಹೋದರೆ ಅದು ಹಾರೀತೇ? ಗರಗರನೆ ತಿರುಗುತ್ತಿತ್ತು. ಅದಕ್ಕೊಂದು ಬಾಲ ಬೇಕೇ ಬೇಕು ಎಂದು ಬೇರೆ ಪಟ ನೋಡಿ ಅರಿತುಕೊಂಡು ಅದನ್ನೂ ಸಿದ್ಧಪಡಿಸಿ ಅಂಟಿಸಿದೆ. ಎಷ್ಟು ಉದ್ದ ಇರುತ್ತದೆಯೋ ಅಷ್ಟು ಸಾವಧಾನದಿಂದ ಪಟ ಹಾರುತ್ತದೆ ಎಂದು ಕಂಡುಕೊಂಡೆ. ಸಿದ್ಧಗೊಂಡ ಪಟಕ್ಕೆ ದಾರ ಜೋಡಿಸಬೇಕಲ್ಲ; ಮತ್ತೆ ಹುಡುಕಾಟ ಶುರು! ಅಲ್ಲಿ ಇಲ್ಲಿ ಬಿದ್ದಿದ್ದ ದಾರಗಳನ್ನೇ ಜೋಡಿಸಿಕೊಂಡು ಪಟ ಹಾರಿಸಿ ಅದು ಗಾಳಿಯಲ್ಲಿ ತೇಲಿ ಹಾರುತ್ತ ಹೋದಾಗ ಖುಷಿಯೋ ಖುಶಿ. ಮುಂದೆ, ಅಂಗಡಿಗಳಲ್ಲಿ ವಿವಿಧ ಬಣ್ಣಗಳ ಪಟ ಸಿಗುತ್ತವೆಂದು ಗೊತ್ತಾಯಿತು. ಮನೆಯಲ್ಲಿ ಕಾಡಿಬೇಡಿ ಹಣ ಪಡೆದು ಬಣ್ಣದ ತೆಳು ಕಾಗದದ ಪಟವನ್ನು ಖರೀದಿಸಿ ಎದೆಗವಚಿಕೊಂಡು, ಅದೊಂದು ಅನರ್ಘ್ಯ ವಸ್ತುವೆಂಬಂತೆ ತರುತ್ತಿದ್ದೆ. ಅದಕ್ಕೆ ಬೇಕಾದ ದಾರವನ್ನೂ ಕೊಂಡುಕೊಂಡೆ. ಮನೆಗೆ ಬಂದು, ಯಾರ ಮಾತನ್ನೂ ಕೇಳದೇ ಮಾಳಿಗೆ ಮೇಲೇರಿ ಈಗಾಗಲೇ ಬೇರೆಯವರು ಹಾರಿಸುತ್ತಿದ್ದ ಪಟಗಳೊಂದಿಗೆ ನನ್ನ ಪಟವೂ ಹಾರತೊಡಗಿದರೆ ನಾನೇ ಹಾರತೊಡಗಿದಂತೆ.
***
ಆಗಸದ ತುಂಬಾ ಯಾರ್ಯಾರೋ ಎಲ್ಲಿಂದಲೋ ಹಾರಿಸುತ್ತಿದ್ದ ವಿವಿಧ ಬಣ್ಣದ ಗಾಳಿಪಟಗಳು ನೋಡಲಿಕ್ಕೇ ಚಂದ ಇದ್ದವು. ಯಾರ ಪಟ ಎತ್ತರಕ್ಕೆ ಏರುವುದೆಂಬ ಸ್ಪರ್ಧೆ ಬೇರೆ. ಅದಕ್ಕೆ ಉದ್ದದ ದಾರ ಬೇಕಿತ್ತು. ಹಣವಿದ್ದವರು ದೊಡ್ಡ ದಾರದ ರೀಲನ್ನೇ ಕೊಂಡು ಆಗಸದಲ್ಲಿ ಚುಕ್ಕಿಯಾಗಿ ಕಾಣುವಂತೆ ಪಟ ಹಾರಿಸುತ್ತಿದ್ದರು. ಚೋಟುದ್ದದ ದಾರ ಇಟ್ಟುಕೊಂಡು ನಾವು ಇದ್ದುದರಲ್ಲಿಯೇ ಪಟ ಹಾರಿಸಿ ತೃಪ್ತಿಪಟ್ಟುಕೊಳ್ಳುತ್ತಿದ್ದೆವು.
ಒಮ್ಮೆ ಅತ್ಯಂತ ದೂರ ಹಾರಿದ್ದ ಪಟದ ದಾರವನ್ನು ಹಿಡಿದು ಪಟ ಆಡಿಸಬೇಕೆಂಬ ಆಸೆ ಉಂಟಾಯಿತು. ಆ ಪಟ ಹಿಡಿದಿದ್ದವರನ್ನು ಕೇಳಿದೆ. ಅವರು ನನ್ನ ಕೈಯಲ್ಲಿ ದಾರವನ್ನು ಕೊಟ್ಟು- “ಭದ್ರವಾಗಿ ಹಿಡಿದುಕೊಳ್ಳಬೇಕು’ ಎಂದರು. ಇದ್ಯಾವ ದೊಡ್ಡ ವಿಷಯ ಎಂದು ಅವರು ಕೊಟ್ಟ ದಾರವನ್ನು ಹಿಡಿದುಕೊಂಡರೆ, ಅಬ್ಟಾ! ಆಗಸ, ಗಾಳಿ, ಎರಡೂ ಸೇರಿ ನನ್ನ ಬೆರಳ ತುದಿಯನ್ನೇ ಜಗ್ಗುತ್ತಿವೆಯೇನೋ ಎಂಬ ಭಾವ. ಎಂಥ ಅದ್ಭುತ ಅನುಭವ. ಎಲ್ಲಿ ನನ್ನನ್ನೂ ಪಟ ಹಾರಿಸಿಕೊಂಡು ಹೋಗಿ ಬಿಡುವುದೋ ಎಂಬಂತೆ ಪಟದ ಜಗ್ಗಾಟ ದಾರದಲ್ಲಿಯೇ ಗೊತ್ತಾಗುತ್ತಿತ್ತು. ಭದ್ರವಾಗಿ ಹಿಡಿದುಕೊಳ್ಳಬೇಕು ಅಂತ ಯಾಕಂದರು ಅಂತ ಆಗ ಗೊತ್ತಾಯಿತು. ಅಮೂರ್ತವಾಗಿರುವ ಗಾಳಿಯ ಮೂರ್ತ ರೂಪದ ಅನುಭವ ಪಟದ ದಾರದಲ್ಲಿಯೇ ಗೊತ್ತಾಗುತ್ತಿತ್ತು.
ಎಲ್ಲೋ ಚುಕ್ಕಿಯಂತಿರುವ ಪಟ ನೆಟ್ಟಗೆ ಹೋಗದೆ ಕೈಯಿಂದ ಪಟದವರೆಗೆ ಸ್ವಲ್ಪ ಡೊಂಕಾಗಿರುವ ಪಟದ ದಾರ, ಆಗಸದಲ್ಲೆಲ್ಲೋ ನಾಟ್ಯ ಮಾಡುವಂತಿರುವ ಪಟ, ಬೆರಳ ತುದಿಯಲ್ಲಿ ಕಂಪನದ ಅನುಭವ… ಎಲ್ಲವೂ ಮರೆಯಲಾಗದ್ದು.
***
ಪಟಕ್ಕೆ ಪಟ ಜಗಳವೂ ಇರುತ್ತಿತ್ತು. ದುರ್ಬಲ ದಾರವನ್ನು ಬೇರೆ ದಾರದವರು ಕತ್ತರಿಸಿಹಾಕುತ್ತಿದ್ದರು. ಆ ಪಟ ತೇಲಿ ಸೋಲೊಪ್ಪಿಕೊಂಡು ಎಲ್ಲೋ ಗಿಡದ ಮೇಲೆ ಜೋತುಬೀಳುತ್ತಿತ್ತು. ಅವರ ಪಟವನ್ನು ಸೋಲಿಸಲು ಏನು ಮಾಡಬೇಕೆಂದು ಯೋಚಿಸಿದಾಗ, ಅದಕ್ಕೆ ವಿಶೇಷ ದಾರ ಬೇಕೆಂದು ಗೊತ್ತಾಯಿತು. ಕಾಜಿನಪುಡಿಯನ್ನು ಸವರಿದ ದಾರವೇ ಒಳ್ಳೆಯದು ಎಂದೂ ಗೊತ್ತಾಗಿ ಅಂತಹ ದಾರವನ್ನೂ ತಂದು ಪಟ ಹಾರಿಸಿದಾಗ ಆ ದಾರದ ಮಹತ್ವ ಗೊತ್ತಾಯಿತು. ದಾರವನ್ನು ರೀಲಿನಿಂದ ಬಿಟ್ಟಂತೆಲ್ಲ ಕೈ ಬೆರಳು ಕೊರೆದಂತಾಗುತ್ತಿತ್ತು, ಕೆಲವೊಮ್ಮೆ ಬೆರಳು ಕೊಯ್ದು ರಕ್ತವೂ ಬಂದಿತ್ತು. ಆದರೆ ಬೇರೆ ಸಾಮಾನ್ಯ ದಾರದ ಪಟಗಳನ್ನು ಕ್ಷಣಾರ್ಧದಲ್ಲಿ ಕತ್ತರಿಸಿ ಒಗೆವ ಶಕ್ತಿ ಈ ದಾರಕ್ಕಿತ್ತು. ಅದಕ್ಕೆ ಚಾಕಚಕ್ಯತೆಯೂ ಬೇಕಿತ್ತು. ಅದನ್ನೆಲ್ಲ ಕರಗತ ಮಾಡಿಕೊಂಡವರು, ನಾನು ಇಷ್ಟು ಪಟ ಕತ್ತರಿಸಿದೆ, ಅಷ್ಟು ಪಟ ಕತ್ತರಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತಿದ್ದರು.
***
ಒಟ್ಟಾರೆ, ಪಟ ಹಾರಿಸುವುದು ಎಂದರೆ ಅದು ಕೇವಲ ಖುಷಿಗಾಗಿ ಅಲ್ಲದ ಅಲ್ಲಿ ಏಕಾಗ್ರತೆ, ಛಲ, ಹಟ, ಗಾಳಿ ಮತ್ತು ಆಗಸದೊಂದಿಗೆ ಮಿಳಿತವಾಗುವ ಮನಸು ಎಲ್ಲವೂ ಇದ್ದವು. ಈಗ ಏನಿದ್ದರೂ ಮಕ್ಕಳಿಗೆ ಮೊಬೈಲ್ ಎಲ್ಲ ಆಟಗಳ ಬ್ರಹ್ಮವಾಗಿದೆ. ಹೊರಪ್ರಪಂಚದೊಂದಿಗೆ ಸೇತುವೆ ಏರ್ಪಡಿಸುವಂತಿದ್ದ ಪಟಗಳ ಆಟವೆಂಬುದು ಕಾಲಗರ್ಭದಲ್ಲಿ ಮರೆಯಾಗಿ ಮೂಲೆ ಸೇರಿದೆ.
(ಅಕ್ಟೋಬರ್ 18 ರಂದು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದೆ.)
– ಸಿದ್ಧರಾಮ ಕೂಡ್ಲಿಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.