ಭಾಷೆ ಕಟ್ಟಿದ ದೇಶ
Team Udayavani, Nov 18, 2018, 6:00 AM IST
ನಾವೆಲ್ಲರೂ ಕನ್ನಡ ಭಾಷೆ ಮಾತನಾಡುವವರೇ. ಕನ್ನಡ ನುಡಿಯು ಕನ್ನಡ ನಾಡನ್ನು ಕಟ್ಟಿದೆ, ಕನ್ನಡಿಗರಿಗೆ ಬದುಕನ್ನೂ ಕೊಟ್ಟಿದೆ. ಈ ಭಾಷೆಗೊಂದು ಅಕ್ಷರ ಪರಂಪರೆ ಇದೆ. ಅದನ್ನು ಅರಸುತ್ತ ಹೋದಾಗ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ವಿದ್ವತ್‌ಪೂರ್ಣ ಉಪನ್ಯಾಸವೊಂದರ ಆಯ್ದ ಭಾಗವಿದು…
ಪ್ರಾರಂಭವಾಗಿದ್ದು ಸುಮಾರು ಎರಡು ಸಹಸ್ರವರ್ಷಗಳ ಹಿಂದೆ. ಇದು ಮೌಖೀಕಯುಗವನ್ನು ಮುಕ್ತಾಯಗೊಳಿಸಿ, ಅಕ್ಷರಯುಗವನ್ನು ಆರಂಭಿಸಿತು. ಅಂದಿನಿಂದ ಇಂದಿನವರೆಗೂ ನಾವು ಅಕ್ಷರಗಳನ್ನು ಹಂಚಿಕೊಳ್ಳುತ್ತಲೇ ನಮ್ಮ ಸಮಾಜವನ್ನು ಕಟ್ಟಿ, ವಿಸ್ತರಿಸುತ್ತಲಿರುವೆವು. ಅಂದು ಪ್ರಾರಂಭವಾದ ಈ ಕಾರ್ಯವು ಇನ್ನೂ ಮುಗಿದಿಲ್ಲ. ಮುಗಿಯುವ ಸಂಭವವೂ ಇಲ್ಲ. ನಾನೀಗ ಇಲ್ಲಿ ಮಾಡುವುದು ಅದರ ಮುಂದುವರಿಕೆಯೇ.
ಮಾತಿಗೆ ಶಿಸ್ತು, ನಿಯಮ, ನಂಬಿಕೆಯನ್ನು ಒದಗಿಸುವ ಪ್ರಧಾನ ಸಾಧನೆಗಳೇ ಅಕ್ಷರಗಳು. ನಮ್ಮ ಪರಂಪರೆಯನ್ನು ಹೆಚ್ಚು ಸ್ಪಷ್ಟಗೊಳಿಸುವ ಈ ಅಕ್ಷರಗಳ ಹಿನ್ನೆಲೆಯಲ್ಲಿ ಕರ್ನಾಟಕವನ್ನು ದರ್ಶನಮಾಡಿಕೊಳ್ಳುವುದಾದರೆ ಕ್ರಿ. ಪೂ. ಮೂರನೆಯ ಶತಮಾನದಿಂದ ಇದನ್ನು ಪ್ರಾರಂಭಿಸಬೇಕಾಗಿರುವುದು. ಏಕೆಂದರೆ, ಈ ಶತಮಾನದಲ್ಲಿ ಮೊತ್ತಮೊದಲ ಬಾರಿಗೆ ನಮಗೆ ಅಕ್ಷರಗಳು ಲಭ್ಯವಾದದ್ದು. ಇವನ್ನು ಒದಗಿಸಿಕೊಟ್ಟವನು ನಮ್ಮ ನಾಡಿನ ಇತಿಹಾಸದಲ್ಲಿ ಶಾಶ್ವತಸ್ಥಾನ ಪಡೆದಿರುವ ಮೌರ್ಯ ಅರಸ ಅಶೋಕ ಸಾಮ್ರಾಟ.
ಕನ್ನಡ ನಾಡವರ ಮೊತ್ತಮೊದಲ ಬರಹ ಭಾಷೆ ಪ್ರಾಕೃತ; ಲಿಪಿ, ಬ್ರಾಹ್ಮಿ. ಇವು ನಮ್ಮ ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ, ರಾಷ್ಟ್ರ ವ್ಯಾಪ್ತಿಯಾಗಿ ಅಂದಿನ ಅಶೋಕನ ಸಾಮ್ರಾಜ್ಯವನ್ನೆಲ್ಲ ಹಂಚಿಕೊಂಡಿದ್ದವು. ಲಿಪಿ ಇದ್ದಲ್ಲಿ ಭಾಷೆ ಇದ್ದೇ ಇರುತ್ತದೆ, ಆದರೆ, ಭಾಷೆ ಇದ್ದಲ್ಲಿ ಲಿಪಿ ಇರಬೇಕೆಂಬುದಿಲ್ಲ, ಎಂಬ ಮಾತಿದೆ. ಈ ನಿಯಮಕ್ಕೆ ಬ್ರಾಹ್ಮಿ ಲಿಪಿ ಒಂದು ಅಪವಾದ. ಇದರ ವೈಶಿಷ್ಟ್ಯವೆಂದರೆ ಎಲ್ಲ ಭಾಷೆಗಳಿಗೂ ಇದು ತಾಯಿ ಲಿಪಿಯಾಗಿದ್ದುದು ಮತ್ತು ತನ್ನದೇ ಆದ ಭಾಷೆ ಇಲ್ಲದಿದ್ದುದು. ಅಕ್ಷರಗಳ ಮೂಲಕ ಮೊದಲು ವ್ಯವಹರಿಸತೊಡಗಿದ್ದು ಪ್ರಾಕೃತ ಭಾಷೆಗಳು. ಜನಸಾಮಾನ್ಯರ ಪ್ರಕೃತಿದತ್ತ ನುಡಿಗಳಾದ ಇವು ಏಕತ್ವವನ್ನು ಸಂಕೇತಿಸುತ್ತಿರಲಿಲ್ಲ, ಇವು ಸಂಕೇತಿಸುತ್ತಿದ್ದುದು ಬಹುತ್ವವನ್ನು. ಕ್ರಿ. ಪೂ. ಮೂರನೆಯ ಶತಮಾನದಲ್ಲಿ ಈ ಭಾಷೆ ಕರ್ನಾಟಕವನ್ನು ತಲುಪಿದಾಗ, ಅದು ತನ್ನೊಡನೆ ತಂದ ಅತಿದೊಡ್ಡ ಉಡುಗೊರೆಯೆಂದರೆ ಬಹುತ್ವವನ್ನು. ಈ ಬುನಾದಿಯ ಮೇಲೆ ನಿಂತಿರುವುದೇ ಕರ್ನಾಟಕದ ಸಮಾಜವಾಯಿತು.
ಪ್ರಾಕೃತವು ವ್ಯವಹಾರ ಭಾಷೆಯಾಗಿ ಕರ್ನಾಟಕವನ್ನೊಳಗೊಂಡು ಅಂದಿನ ರಾಷ್ಟ್ರವನ್ನೆಲ್ಲ ಆವರಿಸಿದ್ದುದರಿಂದ, ರಾಷ್ಟ್ರದುದ್ದಕ್ಕೂ ಬಹುತ್ವ ಸಮಾಜವೇ ನಿರ್ಮಾಣವಾಯಿತು. ಸುಮಾರು ಅರ್ಧಸಹಸ್ರಮಾನಕಾಲ ತಮ್ಮ ಏಕಸ್ವಾಮ್ಯವನ್ನು ಪ್ರಾಕೃತಭಾಷೆಗಳು ಮೆರೆದ ನಂತರ, ಸಂಸ್ಕೃತ ಭಾಷೆಯು ವ್ಯವಹಾರ ಭಾಷೆಗಳಲ್ಲೊಂದಾಗಿ ಹೊರಹೊಮ್ಮಿತು. ಇದು ನಾಡಿನಾದ್ಯಂತ ವಿಸ್ತರಿಸಿ ಏಕತ್ವದ ಶಿಸ್ತಿನ ಚೌಕಟ್ಟನ್ನು ಒದಗಿಸಲೆತ್ನಿಸಿತು. ಪ್ರಾಕೃತದ ಏಕಸ್ವಾಮ್ಯ ಕರ್ನಾಟಕದಲ್ಲಿ ಅಂತ್ಯಗೊಂಡು ಸಂಸ್ಕೃತ ಸಂಸ್ಕೃತಿಯು ಪ್ರಾರಂಭವಾಗಿದ್ದು ಕ್ರಿ. ಶ. ಮೂರನೆಯ ಶತಮಾನದಲ್ಲಿ. ಅಂದಿನಿಂದ ಇಂದಿನವರೆಗೂ ಏಕತ್ವ-ಬಹುತ್ವಗಳೆರಡೂ ಕರ್ನಾಟಕದ ಬದುಕಿನ ಪ್ರಮುಖ ಆಯಾಮಗಳಾಗಿವೆ.
ಭಾರತ ರಾಷ್ಟ್ರದ ಅಂಗವಾಗಿ ಕರ್ನಾಟಕವು ತನ್ನ ದೇಸಿ ವೈಶಿಷ್ಟ್ಯವನ್ನು ರೂಪಿಸಿಕೊಂಡಿದ್ದು, ಸುಮಾರು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ. ಕನ್ನಡ ಲಿಪಿಯು ರೂಪಗೊಂಡದ್ದು, ಈ ಶತಮಾನದಲ್ಲಿ ಬ್ರಾಹ್ಮಿ ತಾಯಿಬೇರಿನಿಂದ ಬೇರ್ಪಟ್ಟು, ದಕ್ಷಿಣಭಾರತದ ದೇಸಿ ಲಿಪಿಗಳಲ್ಲಿ ಮೊದಲನೆಯದಾಗಿ ಇದು ಹೊರಹೊಮ್ಮಿತು, ಈ ಲಿಪಿಯು ದಖಣದ ಎರಡು ಪ್ರಮುಖ ಭಾಷೆಗಳಾದ ಕನ್ನಡ ಹಾಗೂ ತೆಲುಗನ್ನೂ ಒಂದು ಸಹಸ್ರಮಾನ ಕಾಲ ನಿರ್ವಹಿಸಿತು. ಆಗ ತಮಿಳು ಇನ್ನೂ ಬ್ರಾಹ್ಮಿಯಲ್ಲಿಯೇ ಕುಂಟುಕಾಲು ಹಾಕುತ್ತಿತ್ತು ಮತ್ತು ಮಲಯಾಳ ಆಗಲಿ ಮರಾಠಿಯಾಗಲಿ ಸ್ವಂತ ಲಿಪಿಯನ್ನು ಪಡೆದುಕೊಳ್ಳಲು ಇನ್ನೂ ಕೆಲವು ಶತಮಾನಗಳ ಕಾಲ ಕಾಯುತ್ತಿದ್ದವು.
ದಕ್ಷಿಣದ ಮೊದಲ ದೇಸಿ ಲಿಪಿಯಾಗಿ ಕನ್ನಡವು ಸಹಸ್ರಮಾನದುದ್ದಕ್ಕೂ ದಖನದ ವ್ಯವಹಾರವನ್ನು ನಿರ್ವಹಿಸಿದ್ದಲ್ಲದೆ, ಈ ಪ್ರದೇಶದ ಸಂಸ್ಕೃತ ಭಾಷಾ ವ್ಯವಹಾರಗಳನ್ನೂ ನಿರ್ವಹಿಸಿತು. ಅಂದರೆ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಮಾತ್ರ ಇದು ಲಿಪಿಯಾಗಿರಲಿಲ್ಲ, ಇಲ್ಲಿಯ ಸಂಸ್ಕೃತ ಭಾಷೆಯ ವ್ಯವಹಾರಕ್ಕೂ ಇದು ಲಿಪಿಯಾಗಿತ್ತು. ಅಲ್ಲದೆ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ ಮತ್ತು ಇವರ ಸಾಮಂತರಾಜರುಗಳ ಒಡ್ಡೋಲಗಗಳ ಬರಹ ಮಾಧ್ಯಮವೂ ಆಗಿತ್ತು.
ರಾಷ್ಟ್ರದ ಮೊದಲ ಅಕ್ಷರಸ್ಥ ನಾಡು
ಕರ್ನಾಟಕದಲ್ಲಿ ಮೊದಲು ಬ್ರಾಹ್ಮಿ ಲಿಪಿಯಲ್ಲಿ ತನ್ನ ಸಂದೇಶಗಳನ್ನು ಬರೆಸಿ, ಈ ಪ್ರದೇಶವನ್ನು ರಾಷ್ಟ್ರದ ಮೊತ್ತಮೊದಲ ಅಕ್ಷರಸ್ಥ ನಾಡುಗಳಲ್ಲಿ ಒಂದನ್ನಾಗಿ ಮಾಡಿದರೂ, ಅಶೋಕನು ಇಲ್ಲಿ ತನ್ನ ಕಾಲಕ್ಕೆ ಆಗಲೇ ಪ್ರಚಲಿತವಿದ್ದ ಸ್ಥಳನಾಮಗಳನ್ನಾಗಲಿ ವ್ಯಕ್ತಿನಾಮಗಳನ್ನಾಗಲಿ ಉಲ್ಲೇಖೀಸಲಿಲ್ಲ. ಈ ಪ್ರದೇಶದಲ್ಲಿ ಹಾಕಿಸಿದ ಶಾಸನಗಳಲ್ಲಿ ಆತನು ಹೆಸರಿಸಿದ ಎರಡೇ ಎರಡು ಸ್ಥಳಗಳೆಂದರೆ, ಇಸಿಲ ಮತ್ತು ಸುವರ್ಣಗಿರಿ. ಇವೆರಡೂ ಪ್ರಾಕೃತಪದಗಳೆಂದು ತೀರ್ಮಾನಕ್ಕೆ ಬಂದಿವೆ. ಪ್ರಾಕೃತವನ್ನು ಆಸ್ಥಾನ ಭಾಷೆಯನ್ನಾಗಿ ಮಾಡಿಕೊಂಡ ಈ ಅರಸನು ಸಹಜವಾಗಿ ಇದೇ ಭಾಷೆಯಲ್ಲಿ ವ್ಯವಹರಿಸುತ್ತಿದ್ದನು. ಇದಕ್ಕೆ ಕಾರಣ, ಅಂದಿನ ದಖಣದ ದೇಸಿಭಾಷೆಗಳು ಅವನ ರಾಜ್ಯದ ವಾಯುವ್ಯ ಗಡಿಯಲ್ಲಿದ್ದ ಗ್ರೀಕ್, ಅರಾಮೈಕ ಮತ್ತು ಖರೋಷ್ಠಿ ಭಾಷೆಗಳಷ್ಟು ಪ್ರಬುದ್ಧವೂ ಬರಹಯೋಗ್ಯವೂ ಆಗಿರದಿದ್ದುದು. ಇದೇನೇ ಇದ್ದರೂ ಇಲ್ಲಿಯ ಜನಪದ ನುಡಿಗಳು ಅಶೋಕನ ಕಾಲಕ್ಕಿಂತ ಮುಂಚೆ ಪ್ರಚಾರದಲ್ಲಿದ್ದುದನ್ನು, ಅವು ಮುಂಚೂಣಿ ಕನ್ನಡಗಳಾಗಿದ್ದುದನ್ನು ಪ್ರಶ್ನಿಸುವಂತಿಲ್ಲ. ಇವು ಅಶೋಕನ ಶಾಸನಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅವನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬಂದ ಶಾತವಾಹನ ಮತ್ತು ಅವರ ಸಮಕಾಲೀನರ ಶಾಸನಗಳಲ್ಲಿ, ಅಂದರೆ ಕ್ರಿ. ಪೂ. ಎರಡನೆಯ ಶತಮಾನದ ನಂತರ ಕಾಣಿಸಿಕೊಂಡವು.
ಅಶೋಕನ ಕಾಲದಲ್ಲಿ ಕರ್ನಾಟಕವೆಂಬ ಪ್ರತ್ಯೇಕ ರಾಜಕೀಯ ಅಥವಾ ಸಾಮಾಜಿಕ ವಲಯ ಇರಲಿಲ್ಲ. ಕೆಳದಖಣವನ್ನೆಲ್ಲ ಒಗ್ಗೂಡಿಸಿ, ಈ ಪ್ರದೇಶವನ್ನು ಅಂಧಕ ಎಂದು ಅಶೋಕನು ಕರೆದಿದ್ದನು, ಆದರೆ, ಆತನು ಮೊತ್ತಮೊದಲು ಹಾಕಿಸಿದ ಕಿರುಶಾಸನಗಳಲ್ಲಿ ಬಹುತೇಕವು ಇಂದಿನ ಕರ್ನಾಟಕ ವಲಯದಲ್ಲಿದ್ದವು. ಈ ಕಾಲದಲ್ಲಿ ಕುಪಣ ಮತ್ತು ಬನವಾಸಿ ಪಟ್ಟಣಗಳೂ, ಮೈಸೆನಾಡು, ಕೊಂಗಾಣ, ಪುನ್ನಾಡು, ಮುಂತಾದ ರಾಜ್ಯ ಘಟಕಗಳೂ ಇದ್ದವೆಂಬುದಕ್ಕೆ ಆಧಾರಗಳಿವೆ. ಈ ಕಾಲದ ತಮಿಳರ ರಾಜ್ಯಗಳು ಅಶೋಕನ ಸಾಮ್ರಾಜ್ಯದ ದಕ್ಷಿಣಗಡಿಯ ಹೊರಗಿದ್ದವು. ನೀಲಗಿರಿಯ ಉತ್ತರಕ್ಕಿದ್ದ ಜನಾಂಗಗಳನ್ನು ಉಲ್ಲೇಖೀಸಿ, ಇವರನ್ನು ವಡುಗರು (ಅಂದರೆ ಉತ್ತರದವರು) ಎಂಬ ಪದದಿಂದ ತಮಿಳರು ಗುರುತಿಸಿದ್ದರು. ಅಲ್ಲದೆ, ತಮಗೆ ಅರ್ಥವಾಗದ ಭಾಷೆಯನ್ನು ಆಡುವ ಕೊಂಗಣಾರ್, ಕರುನಾಡರ್, ಗಂಗರ್ ಇಲ್ಲಿ ವಾಸಿಸುವರೆಂದು. ತಮಿಳು ಮಹಾಕಾವ್ಯ ಮಣಿಮೇಗಲೈ ಹೇಳಿತ್ತು. ಅಶೋಕನು ಮಹಿಷಮಂಡಲಕ್ಕೆ ಬೌದ್ಧಧರ್ಮ ಪ್ರಸಾರಕರನ್ನು ಕಳಿಸಿಕೊಟ್ಟ ಉಲ್ಲೇಖವು ಈವರೆಗೂ ಶ್ರೀಲಂಕೆಯ ಮಹಾವಂಸ (ಕ್ರಿ.ಶ. ಐದನೆಯ ಶತಮಾನ) ಎಂಬ ವಂಶಾವಳಿಗೆ ಸೀಮಿತವಾಗಿತ್ತು. ಆದರೆ, ಕರ್ನಾಟಕದ ಕನಗನಹಳ್ಳಿಯಲ್ಲಿ ಇತ್ತೀಚೆಗೆ ದೊರೆತ ಪ್ರಾಕೃತ ಭಾಷೆಯ ನಾಲ್ಕು ಶಾಸನಗಳು ಮಾಹಿಸೆಕವು ಅಶೋಕನ ಕಾಲದಲ್ಲಿ ಒಂದು ಜನಪದವಾಗಿತ್ತೆನ್ನುವುದನ್ನು ದೃಢೀಕರಿಸಿವೆ. ಅಂದರೆ ಕುಪಣ, ಬನವಾಸಿ, ಮಾಹಿಸೆಕಗಳು ಕರ್ನಾಟಕದ ಅತಿ ಪೂರ್ವಕಾಲದ ವಸತಿಸ್ಥಾನಗಳಾಗಿದ್ದವೆಂಬುದು ಗಟ್ಟಿಗೊಂಡಂತಾಗಿದೆ. ಇದೇ ಕಾಲದಲ್ಲಿ, ಇಲ್ಲವೇ ಇದರ ಸುತ್ತಮುತ್ತಲಲ್ಲಿ, ಇಲ್ಲಿ ಅಭಿವೃದ್ಧಿಗೊಂಡಿದ್ದ ಕೆಲವು ವಸತಿಗಳು ದಾಖಲೆಗೆ ನಿಲುಕಿವೆ. ಇವುಗಳಲ್ಲಿ ಮಟ್ಟಪಟ್ಟಿ, ಸಂಬಲೀವಲೂರು, ಆಪಟ್ಟಿ, ವೇಗೂರಂ, ಕೊಂಗಿನಗರಂ, ಕುಂದಮಚ್ಚುಂಡಿ, ಕಪ್ಪೆನ್ನಲಾ, ಮುಂತಾದ ಹತ್ತಾರು ಕನ್ನಡ ಹೆಸರುಗಳು ಪ್ರಾಕೃತ ಶಾಸನಗಳಲ್ಲಿ ಉಲ್ಲೇಖಗೊಂಡಿವೆ.
ಕರ್ನಾಟಕ ಸಮಾಜ
ಲಿಖಿತ ಇತಿಹಾಸದ ಹಿನ್ನೆಲೆಯಲ್ಲಿ ಕನ್ನಡನಾಡಿನ ಬಹುರೂಪಿ ಆಯಾಮಗಳನ್ನು ದರ್ಶನ ಮಾಡಿಕೊಳ್ಳುವುದಾದರೆ, ಇದರಲ್ಲಿ ಮೂರು ಸ್ಥೂಲ ಹಂತಗಳನ್ನು ಗುರುತಿಸಬಹುದು.
1 ಕ್ರಿ.ಪೂ. ಮೂರರಿಂದ ಕ್ರಿ.ಶ. ಮೂರನೆಯ ಶತಮಾನದವರೆಗಿನ ಆರಂಭಕಾಲ-ಇದನ್ನು ಬೌದ್ಧಯುಗ,
2 ಕ್ರಿ.ಶ. ನಾಲ್ಕರಿಂದ 12ನೆಯ ಶತಮಾನದವರೆಗಿನ ಅಭಿವೃದ್ಧಿಯ ಕಾಲ-ಇದನ್ನು ಬಹುತ್ವ ಸಮಾಜದ ಯುಗ,
3ಕ್ರಿ.ಶ. 12ನೆಯ ಶತಮಾನದಿಂದ ಇಂದಿನವರೆಗಿನ ಕಾಲ-ಇದನ್ನು ಸಂಘರ್ಷಯುಗ
ಮೊದಲ ಹಂತದಲ್ಲಿ…
ಬೌದ್ಧಧರ್ಮದ ಏಕಸ್ವಾಮ್ಯವನ್ನು ಮಾತ್ರ ಲಿಖೀತ ದಾಖಲೆಗಳಲ್ಲಿ ಗುರುತಿಸಲು ಸಾಧ್ಯವಾಗಿದೆ. ಈ ಕಾಲದಲ್ಲಿ ಜೈನಮತಗಳನ್ನೊಳಗೊಂಡು ಇನ್ನಾವ ಮತೀಯರ ಪ್ರಸ್ತಾಪಗಳೂ ಶಾಸನಗಳಲ್ಲಿ ಬರುವುದಿಲ್ಲ. ಅಂದಿನ ಬೌದ್ಧಸಂಸ್ಕೃತಿಯ ಪ್ರಮುಖ ಲಕ್ಷಣಗಳೆಂದರೆ ಸ್ತೂಪ, ವಿಹಾರ, ಚೈತ್ಯಾಲಯಗಳನ್ನು ಪ್ರಪ್ರಥಮವಾಗಿ ರಚಿಸಿ, ಪರಿಚಯಿಸಿದ್ದು. ದತ್ತಿದಾನಗಳ ವಿತರಣೆ ಈ ಕಾಲದಲ್ಲಿ ಪ್ರಾರಂಭವಾದರೂ ಅವೆಲ್ಲವೂ ಧರ್ಮಸಂಸ್ಥೆಗಳಿಗೆ ಮಾಡಿದವುಗಳಾಗಿದ್ದವು, ವ್ಯಕ್ತಿಗಳಿಗೆ ಮಾಡಿದ ದಾನಗಳಾಗಿರಲಿಲ್ಲ. ದಾನಿಗಳಲ್ಲಿ ಪುರುಷರಿಗಿಂತ ಸ್ತ್ರೀಯರು ಹೆಚ್ಚು ಸಂಖ್ಯೆಯಲ್ಲಿದ್ದುದು, ಗೃಹಸ್ಥರನ್ನು ಸರಿಗಟ್ಟುವ ಸಂಖ್ಯೆಯ ದಾನಿಗಳು ಭಿಕ್ಕು-ಭಿಕ್ಕುಣಿಗಳಾಗಿದ್ದುದು, ಈ ಸಮಾಜದ ಇನ್ನೊಂದು ವೈಶಿಷ್ಟ್ಯವಾಗಿತ್ತು. ಇಂದಿನ ಸಾಮಾಜಿಕ ಜೀವನವನ್ನು ರೂಪಿಸಿದ್ದು ಧರ್ಮತತ್ವಗಳು, ಧರ್ಮಗುರುಗಳಲ್ಲ. ವಿಹಾರ, ಚೈತ್ಯಾಲಯಗಳಲ್ಲಿ ಭಿಕ್ಕು-ಭಿಕ್ಕುಣಿಯರಿದ್ದರೂ ಪುರೋಹಿತರು ಇರಲಿಲ್ಲ. ಯಜ್ಞಯಾಗಾದಿಗಳನ್ನು ರಾಜವಂಶಸ್ಥರು ಆಚರಿಸಿದ ವಿರಳ ನಿದರ್ಶನಗಳಿದ್ದರೂ ಅವು ರಾಜಕೀಯ ಹೆಗ್ಗಳಿಕೆಯನ್ನು ಪ್ರದರ್ಶಿಸುವ ಆಚರಣೆಗಳಾಗಲಿ, ಧಾರ್ಮಿಕ ಹೆಗ್ಗಳಿಕೆಗಳನ್ನು ಪ್ರದರ್ಶಿಸುವ ಆಚರಣೆ ಗಳಾಗಲಿ ಆಗಿರಲಿಲ್ಲ. ಅಲ್ಲದೆ ಈ ಬಗೆಯಲ್ಲಿ ಆಚರಿಸಿದ ಉದಾಹರಣೆಗಳು ಕರ್ನಾಟಕದಲ್ಲಿ ಬರೆಸಿದ ಬೌದ್ಧಶಾಸನಗಳಲ್ಲಿ ತುಂಬಾ ಅಪರೂಪ. ಈ ಎಲ್ಲ ಹೇಳಿಕೆಗಳಿಗೆ ಕರ್ನಾಟಕದ ಸಣ್ಣತಿ-ಕನಗನಹಳ್ಳಿಯಲ್ಲಿ ದೊರಕಿರುವ ಮುನ್ನೂರಕ್ಕೂ ಹೆಚ್ಚು ಇನ್ನುಳಿದೆಡೆ ದೊರಕಿರುವ 70-80 ಪ್ರಾಕೃತ ಶಾಸನಗಳು, ಸಾಕ್ಷಿಯಾಗಿವೆ.
ಇದು ನಮ್ಮ ಸಮಾಜ ನಿರ್ಮಾಣದ ಪ್ರಾತಃಕಾಲ.
ಆವರೆಗೂ ನಿಶ್ಚಿತ ಕಟ್ಟಳೆಗಳಿಲ್ಲದ ಜನಾಂಗಗಳ ಬಾಳನ್ನು ಒಂದು ಬಗೆಯ ನಿಯಮಗಳಿಗೆ ಒಳಪಡಿಸಿದ ಕಾಲ ಇದೆನ್ನಬಹುದು. ಅಶೋಕನು ಇಲ್ಲಿ ಬರೆಸಿದ ಶಾಸನಗಳು ಉತ್ತಮ ಸಮಾಜ ಕಟ್ಟುವ ಸೂತ್ರಗಳನ್ನು ತಿಳಿಸಿದ್ದವು, ಧರ್ಮ ಬೋಧನೆಯನ್ನಲ್ಲ. ನೆಮ್ಮದಿಯ ಬದುಕಿಗೆ ಬೇಕಾದ ತತ್ವಗಳನ್ನು ಅವನು ತಿಳಿಸಿದ್ದನು. ಇವು ಪ್ರಾರಂಭವಾಗುವುದು ಮಾತಾ-ಪಿತೃಗಳನ್ನು, ಗುರು-ಹಿರಿಯರನ್ನು, ಪ್ರಾಣಿ- ಪಕ್ಷಿಗಳನ್ನು ಗೌರವ ಹಾಗೂ ಕರುಣೆಯಿಂದ ಕಾಣಬೇಕೆಂಬ ಹಿತ ನುಡಿಗಳಿಂದ. ಅಲ್ಲದೆ, ಯಾವ ಜಾತಿಯಲ್ಲಿ ಜನಿಸಿದ್ದರೂ ಸ್ವಪ್ರಯತ್ನದಿಂದ ವಿಮುಕ್ತಿಯನ್ನು ಸಾಧಿಸಬಹುದೆಂಬ ಧೈರ್ಯ ತುಂಬುವ ಮಾತನ್ನು ಆಡಿ ಆತನು, ಕರ್ಮಸಿದ್ಧಾಂತವನ್ನು ಪ್ರಶ್ನಿಸಲು ಪ್ರಚೋದಿಸಿದ್ದನು. ಪರಂಪರಾ ಧರ್ಮವನ್ನು ಪೊರಾಣಪಕಿತಿ ಎಂಬ ಹೆಸರಿನಿಂದ ಗುರುತಿಸಿ, ಅದನ್ನು ರಕ್ಷಿಸಿ ಮುಂದುವರೆಸುವ ಬೇಡಿಕೆಯನ್ನಿಟ್ಟಿದ್ದನು.
ಎರಡನೆಯ ಹಂತದಲ್ಲಿ…
ಸುಮಾರು ಆರೇಳು ಶತಮಾನಗಳ ಕಾಲ (ಕ್ರಿ.ಪೂ. ಮೂರರಿಂದ ಕ್ರಿ.ಶ. ನಾಲ್ಕರ ಆರಂಭ) ಸಾರ್ವತ್ರಿಕವಾಗಿದ್ದ ಈ ಧಾರ್ಮಿಕ-ಸಾಮಾಜಿಕ ವ್ಯವಸ್ಥೆ, ಕ್ರಿ.ಶ. ನಾಲ್ಕನೆಯ ಶತಮಾನದನಂತರ ಬದಲಾಗಿ ಭಿನ್ನ ನಿಯಮಗಳು, ಯಜ್ಞಯಾಗಾದಿಗಳು, ಚಾತುರ್ವರ್ಣಗಳು, ವ್ಯಕ್ತಿಗತ ದಾನ ಸ್ವೀಕಾರಗಳು, ಅಗ್ರಹಾರ-ಬ್ರಹ್ಮದೇಯ ನಿರ್ಮಾಣಗಳು, ಆಗಮೋಕ್ತ ಪೂಜಾವಿಧಾನಗಳು, ಪ್ರಸಾರಕ್ಕೆ ಬಂದವು. ದೇವಾಲಯಗಳ ನಿರ್ಮಾಣ ಹೆಚ್ಚಾಗಿ, ಅದ್ಭುತ ಶೈಲಿಯ ವಾಸ್ತು ಮತ್ತು ಶಿಲ್ಪಗಳೂ ಕಾಣಿಸಿಕೊಂಡವು. ಇದರೊಡನೆ ವಾದ್ಯ, ಸಂಗೀತ, ನೃತ್ಯ, ನಾಟಕ ಕಲೆಗಳೂ ವೃದ್ಧಿಸಿದವು. ಇದನ್ನು ವೈದಿಕ ಸಂಸ್ಕೃತಿಯೆಂದು ಇತಿಹಾಸಕಾರರು ಗುರುತಿಸಿರುವರು. ಇದು ಭಾಗಶಃ ನಿಜವಾದರೂ ಈ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದ್ದುದು ಪೌರಾಣಿಕ ದೇವತೆಗಳ ಆರಾಧನೆ ಮತ್ತು ಪೌರಾಣಿಕ-ಮಹಾಕಾವ್ಯಗಳು ಸಾಮಾಜಿಕ ನಿಯಮಾವಳಿಗಳು.
ಈ ಸಂಸ್ಕೃತಿಯು ಬೌದ್ಧರು ನಿರ್ಮಿಸಿದ್ದ ಸಮಾಜವನ್ನು ಬದಲಾಯಿಸಿದ್ದೇನೂ ನಿಜ, ಆದರೆ ಅವರು ನಿರ್ಮಿಸಿದ ಬಹುತ್ವದ ಬಾಳಿಗೆ ಧಕ್ಕೆ ತರಲಿಲ್ಲ. ಬೌದ್ಧಯುಗವು ಅಂತ್ಯಗೊಂಡು ಪೌರಾಣಿಕಯುಗವು ಪ್ರಾರಂಭವಾಗುವ ಸಂಧಿಕಾಲದಲ್ಲಿ ಒಂದು ವಿಶಿಷ್ಟ ಭಾಷಾಪ್ರಯೋಗವು, ಕರ್ನಾಟಕವನ್ನೊಳಗೊಂಡು, ದೇಶದಾದ್ಯಂತ ನಡೆಯಿತು. ಅದು ಆವೆರಗೂ ಏಕತ್ವವನ್ನು ರಕ್ಷಿಸಿಕೊಂಡಿದ್ದ ಸಂಸ್ಕೃತ ಭಾಷೆಯು ಹಲವು ಬಗೆಯ ಅನುಸಂಧಾನಗಳಿಗೊಳಗಾಗಿ, ಸಂಕರ ಭಾಷೆಯಾಗಿ ಪರಿವರ್ತನೆಗೊಂಡದ್ದು. ಅಂದರೆ ಆವರೆಗೂ ದೂರವಿಟ್ಟಿದ್ದ ಪ್ರಾಕೃತ ಭಾಷೆಯನ್ನು ವೈದಿಕರು ಬಳಸತೊಡಗಿದರೆಂದು, ಸಂಸ್ಕೃತ ಭಾಷೆಯನ್ನು ದೂರವಿಟ್ಟಿದ್ದ ಬೌದ್ಧರೂ-ಜೈನರೂ ಇದನ್ನು ಬಳಸತೊಡಗಿದರೆಂದು, ಅರ್ಥ. ಇದರಿಂದಾಗಿ ಸಂಸ್ಕೃತ ಭಾಷೆಯು ಆರ್ಯವರ್ತದ ಬ್ರಾಹ್ಮಣವರ್ಗಕ್ಕೆ ಮಾತ್ರವಲ್ಲದೆ, ಇನ್ನಿತರ ವರ್ಗಗಳಿಗೂ ದೊರಕುವಂತಾಗಿ ಬ್ರಾಹ್ಮಣೇತರರು ಲೇಖಕರಾಗಿ, ಲಿಪಿಕಾರರಾಗಿ ಸ್ಥಾ§ನಪಡೆದುಕೊಂಡು, ಪ್ರಶಸ್ತಿಗಳನ್ನೂ ಮಹಾಕಾವ್ಯಗಳನ್ನೂ ಸಂಸ್ಕೃತಭಾಷೆಯಲ್ಲಿ ರಚಿಸುವಂತಾದರು. ಸಂಸ್ಕೃತವು ವ್ಯವಹಾರ ಭಾಷೆಯಾಗಿ ಕಾವ್ಯಭಾಷೆಯಾಗಿ ಹೆಚ್ಚು ಪುಷ್ಟಿ ಪಡೆದುಕೊಂಡದ್ದು ಈ ಕಾಲದಲ್ಲಿಯೇ. ಕಾಳಿದಾಸನಂತಹ ಬ್ರಾಹ್ಮಣೇತರ ಕವಿಗಳು ಪ್ರತಿಭೆಯನ್ನು ಮೆರೆಯಲು ಸಾಧ್ಯವಾದುದ್ದನ್ನು ಈ ಹಿನ್ನೆಲೆಯಲ್ಲಿ ನಾವು ಕಾಣಬೇಕು.
ಈ ಎರಡನೆಯ ಹಂತವನ್ನು ಸ್ಥೂಲವಾಗಿ ಸೌಹಾರ್ದ ಯುಗವೆಂದು ಕರೆಯಬಹುದು. ಸಂಗೀತ, ಕಲೆ, ಸಾಹಿತ್ಯ ಬೆಳವಣಿಗೆ ಮಾತ್ರವಲ್ಲ, ಸೌಹಾರ್ದಯುತ ಬಹುತ್ವ ಸಮಾಜವು ಗಟ್ಟಿಗೊಂಡದ್ದು ಈ ಕಾಲದಲ್ಲಿಯೇ ಅಂದರೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ, ಇವಕ್ಕೆ ಎಡೆಮಾಡಿಕೊಡುತ್ತಲೇ ವಿಭಿನ್ನ ಮತಧರ್ಮಗಳು, ಸಾಮಾಜಿಕ ನಿಯಮಗಳು, ತಳವೂರಿದ ಕಾಲವಿದು. ಇದರಿಂದಾಗಿ ಮತ ಘರ್ಷಣೆ ಅಪರೂಪವಾಗಿ, ಎಲ್ಲಾ ಮತಾನುಯಾಯಿಗಳು ಭಿನ್ನಾಭಿಪ್ರಾಯವನ್ನು ಹೊಂದುತ್ತಲೇ ಒಗ್ಗೂಡಿ ಬಾಳಿದ, ಬಹುತ್ವದ ಕಾಲ ಇದು, ಎನಿಸಿತು.
ಅಂತರ್‌ಜಾತಿಯ ಮದುವೆಗಳಿಗೆ ಈ ಸಮಾಜವು ಎಷ್ಟು ಅನುವು ಮಾಡಿಕೊಟ್ಟಿತ್ತೆಂಬುದಕ್ಕೆ ಒಂದೆರಡು ಐತಿಹಾಸಿಕ ನಿದರ್ಶಗಳನ್ನು ಕೊಡಬಹುದು, 11-12ನೆಯ ಶತಮಾನದ ಹೊಯ್ಸಳ ಕುಟುಂಬಕ್ಕೆ ಸಂಬಂಧಿಸಿದ ಒಂದು ನಿದರ್ಶನ. ಇದಕ್ಕೆ ಮಾದರಿಯಾಗಿದೆ. ವಿಷ್ಣುವರ್ಧನನ ಪಟ್ಟದರಾಣಿ ಶಾಂತಲೆ ಜಿನಧರ್ಮಿಯಳಾದ ತಾಯಿ ಮಾಚಿಕಬ್ಬೆಗೂ, ಶಿವಭಕ್ತನಾದ ತಂದೆ ಮಾರಸಿಂಗನಿಗೂ ಜನಿಸಿ, ವೈಷ್ಣವಧರ್ಮದೆಡೆ ಹೆಚ್ಚು ಒಲವು ಹೊಂದಿದ್ದ ವಿಷ್ಣುವರ್ಧನನನ್ನು ಮದುವೆಯಾಗಿ, ತನ್ನ ತಾಯಿ ಶಿವಧರ್ಮೀಯನನ್ನು ಮದುವೆಯಾದ ನಂತರವೂ ಜಿನನ ಆರಾಧನೆಯನ್ನು ಮುಂದುವರಿಸಿದ್ದನ್ನು, ತನ್ನ ತಂದೆ ಜಿನಧರ್ಮೀಯಳನ್ನು ವರಿಸಿದನಂತರವೂ ಶಿವನ ಆರಾಧನೆಯಲ್ಲಿ ಮುಂದುವರಿಸಿದ್ದನ್ನು ಕಂಡಿದ್ದಳು. ಅಲ್ಲದೆ, ತನ್ನ ಪತಿಯೊಡನೆ ಬೇಲೂರಿನ ಚನ್ನಕೇಶವದೇವಾಲಯದಲ್ಲಿ, ತಾಯಿಯೊಡನೆ ಶ್ರವಣಬೆಳೊYಳದ ಜಿನಾಲಯದಲ್ಲಿ, ತಂದೆಯೊಡನೆ ಶಾಂತಿಗ್ರಾಮದ ಧರ್ಮೇಶ್ವರ ದೇವಾಲಯದಲ್ಲಿ ಪೂಜಾರ್ಚನೆಗಳನ್ನು ಆಚರಿಸುತ್ತಲೇ, ಸ್ವತಃ ಶಾಂತಲೆಯೇ ಶಿವಗಂಗೆಯಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಳು.
ಈ ಬಗೆಯ ಧಾರ್ಮಿಕ ಸಹಬಾಳ್ವೆ ಒಂದು ಕುಟುಂಬಕ್ಕೆ ಸೀಮಿತವಾಗಿರಲಿಲ್ಲ, ಇದು ನೂರಾರು, ಬಹುಶಃ ಸಾವಿರಾರು ಕುಟುಂಬಗಳಿಗೆ, ಹಬ್ಬಿ ಅಕ್ಷರಶಃ ಬಹುತ್ವ ಸಮಾಜವನ್ನು ನಿರ್ಮಿಸಿತ್ತು. ಜಿನಧರ್ಮಿಯಳಾದ ಅತ್ತಿಮಬ್ಬೆ ಶಿವಾಲಯಕ್ಕೆ ಉದಾರ ದತ್ತಿಯನ್ನು ಕೊಟ್ಟದ್ದು, ಶಿವಶರಣೆ ಅಕ್ಕಮಹಾದೇವಿ ಜಿನಧರ್ಮಿಯನಾದ ಕೌಶಿಕನನ್ನು ಮದುವೆಯಾದದ್ದೂ, ಇದೇ ಕಾಲದಲ್ಲಿ. ಇಲ್ಲಿ ಗಮನಿಸಬೇಕಾದದ್ದು ಅಂತಜಾìತಿಯ ಸಂಬಂಧಗಳನ್ನು ಮಾತ್ರವಲ್ಲ, ಮದುವೆಯಾದ ನಂತರವೂ ಸತಿ-ಪತ್ನಿಯರು ಒಂದೇ ಮನೆಯಲ್ಲಿದ್ದು ತಮ್ಮ ತಮ್ಮ ಧರ್ಮಾಚರಣೆಗಳನ್ನು ಮುಂದುವರಿಸಿದ್ದು. ಈ ಸಹಬಾಳ್ವೆಯ ವಿಹಂಗಮ ದೃಶ್ಯವೊಂದನ್ನು ನಾವು ಅಂದಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಬಳ್ಳಿಗಾವೆಯಲ್ಲಿ ಕಾಣುತ್ತೇವೆ.
ಆರಂಭ ಕಾಲದಿಂದ ಸುಮಾರು 13ನೆಯ ಶತಮಾನದವರೆಗೆ, ಈ ನಗರದಲ್ಲಿ ಸೌಹಾರ್ದಯುತವಾಗಿ ಬಾಳಿದ ಬಹುತ್ವದ ಸಮಾಜದಲ್ಲಿ, ವೈದಿಕರು, ಲಾಕುಳೀಶರು, ಕಾಳಾಮುಖರು, ವೀರಶೈವರು, ವೈಷ್ಣವರು, ಕ್ಷಪಣಕರು, ಬೌದ್ಧರು, ಶಾಕ್ತರು, ಭಾರವಿಗಳು, ಏಕದಂತರು, ತ್ರಿದಂತರು, ಹಂಸರು ಮತ್ತು ಪರಮಹಂಸರ, ಸಹಭಾಗಿಗಳಾಗಿದ್ದರು. ಈ ಎಲ್ಲಾ ಸಮುದಾಯಗಳು ತಮ್ಮ ವೈಯಕ್ತಿಕ ಧಾರ್ಮಿಕ ನಿಯಮಗಳನ್ನು ಪಾಲಿಸುತ್ತಲೇ, ಪರಧರ್ಮೀಯರ ನಿಯಮ ನಂಬಿಕೆಗಳನ್ನು ಪ್ರಶ್ನಿಸದೇ, ಏಳು ಬ್ರಹ್ಮಪುರಿಗಳನ್ನು, ಐದು ಮಠಗಳನ್ನು, ಮೂರು ಪುರಗಳನ್ನು, 50 ದೇವಾಲಯಗಳನ್ನು ಹಂಚಿಕೊಂಡು, ಯಾವ ಘರ್ಷಣೆಗೂ ಎಡೆಮಾಡಿಕೊಡದೆ ಬಾಳಿದ್ದರು. ಇವರಲ್ಲಿ ಲೋಕಾಯತರು, ಅಕಳಂಕರು, ಸಾಂಖ್ಯರು, ಮೀಮಾಂಸಕಾರರು, ಸುಗತರು, ನ್ಯಾಯಯಿಕರು, ವೈಶೇಷಿಕರು, ಅಕುಳಸಿದ್ಧಾಂತಿಗಳು, ಸ್ಯಾದ್‌ವಾದಿಗಳು ಇದ್ದುದನ್ನು ತಿಳಿಸುವ ಶಾಸನಗಳಿವೆ. ಇದೊಂದು ಅಮೋಘ, ಅಪೂರ್ವ, ಸಹಬಾಳ್ವೆಯ ಕೇಂದ್ರವಾಗಿ ಭವನೊಲಿದು ನೆಲೆಸಿರ್ಪ ಸಜ್ಜೆ ತಾನೆಂದೆನಿಪ, ಬಳ್ಳಿಗಾವಿಯನಿಪ ಪುರವರಂ ರಂಜಿಪುದು ಎಂದು ಕವಿಗಳ ಶ್ಲಾಘನೆಗೆ ಒಳಪಟ್ಟಿತ್ತು. ಇಂತಹ ಪರಿಸರವು ಸರ್ವತೋಮುಖ ಅಭಿವೃದ್ಧಿಗೆ, ಸೌಹಾರ್ದಯುತ ಬಾಳ್ವೆಗೆ ಅನುವು ಮಾಡಿಕೊಟ್ಟಿದ್ದರಿಂದ ಈ ನಗರವು ಅಂದಿನ ಕರ್ನಾಟಕ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ದರ್ಪಣವಾಯಿತು.
(ಆಳ್ವಾಸ್ “ನುಡಿಸಿರಿ’ಯ ಉದ್ಘಾಟನ ಭಾಷಣದ ಅಪೂರ್ಣ ಪಾಠ)
ಷ. ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.