ಪೊಲೀಸ್ ರಸ ಪ್ರಸಂಗಗಳು: ಕಂಡದ್ದು…ಕೇಳಿದ್ದು…ನೋಡಿದ್ದು…
Team Udayavani, Mar 31, 2024, 4:18 PM IST
ಪೊಲೀಸ್ ಇಲಾಖೆಯ ವೈಶಿಷ್ಟ್ಯವೆಂದರೆ- ಅವರು ಸಮಾಜದ ಎಲ್ಲ ವರ್ಗದ, ಎಲ್ಲ ಜಾತಿ ಸಂಘರ್ಷಗಳ ಜೊತೆಗೆ ನೇರ ಸಂಪರ್ಕ ಉಳ್ಳವರು. ಹಾಸ್ಯದ ಊಟೆ ಎಲ್ಲಿ ಹೇಗೆ ಟಿಸಿಲೊಡೆಯುತ್ತೋ, ಅಂತಹ ಕಡೆ ಕೂಡ ಪೊಲೀಸರು ಹಾಜರಿರುವುದುಂಟು. ಪೊಲೀಸ್ ಠಾಣೆಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು, ಪೊಲೀಸರ ಕುರಿತು ಇರುವ ಜೋಕ್‌ಗಳಿಗೆ ಲೆಕ್ಕವಿಲ್ಲ… ಅಂಥವುಗಳ ಪೈಕಿ ಕೆಲವೊಂದನ್ನು ಆಯ್ದು ಕೊಟ್ಟಿದ್ದೇವೆ. ಓದಿ, ನಕ್ಕು ಹಗುರಾಗಿ…
ನೀನು ಇಲ್ಲಿಗೆ ಬರೋದಿಕ್ಕೆ ಕಾರಣ? ನ್ಯಾಯಾಧೀಶರು ಕರಿಯನನ್ನು ಕೇಳಿದರು.
ಇಬ್ಬರು ಪೊಲೀಸ್ನೋರು ಸ್ವಾಮಿ, ಕರಿಯ ವಿನೀತನಾಗಿ ನುಡಿದ.
“ಇನ್ನೇನು? ಕುಡಿದು ಗಲಾಟೆ ಮಾಡಿರಬೇಕು’
“ಹೌದು ಮಹಾಸ್ವಾಮಿ. ಇಬ್ಬರೂ ಕಂಠಪೂರ್ತಿ ಕುಡಿದಿದ್ದರೂ ಅಂತ ಕಾಣುತ್ತೆ. ನನ್ನನ್ನ ದರದರ ಎಳೆದುಕೊಂಡು ಬಂದರು!’
***
ರಾಯರು ಕೊಂಡ ಹೊಸ ಕಾರು ಮನೆಗೆ ಬಂತು. ಡ್ರೈವಿಂಗ್ ಕಲಿತು ಕಾರು ಬಿಟ್ಟುಕೊಂಡು ಹೊರಟರು. ಹತ್ತು ನಿಮಿಷ ಹೋಗಿದ್ದರೋ ಇಲ್ಲವೋ? ಬೈಕಿನಲ್ಲಿ ಅಟ್ಟಿಸಿಕೊಂಡು ಬಂದ ಪೊಲೀಸ್ ಇನ್ಸ್ ಪೆಕ್ಟರು ತಡೆದರು.
“ಯಾಕೆ ಸಾರ್? ಏನಾಯ್ತು?’
“ನೀವು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಹೋಗ್ತಾ ಇದ್ದೀರಾ? ಅದು ಅಪರಾಧ…’
“ಅಯ್ಯೋ… ಯಾವ ಸೀಮೆ ಇನ್ಸ್ ಪೆಕ್ಟರು ರೀ ನೀವು? ಗಂಟೆ ಅಂತೆ ಗಂಟೆ! ನಾನಿನ್ನೂ ಮನೆ ಬಿಟ್ಟು ಹತ್ತು ನಿಮಿಷವೂ ಆಗಿಲ್ಲ…’
***
“ನಿಮ್ಮಮ್ಮನನ್ನು ಕರೆದುಕೊಂಡು ಬರಬೇಡಾಂತ ನಾನು ಸ್ಪಷ್ಟವಾಗಿ ಬರೆದಿದ್ದೆನಲ್ಲಾ?’ ಕಾನ್ಸ್ ಟೇಬಲ್ ಕರಿಯಣ್ಣ ಹೆಂಡತಿಯತ್ತ ದುರುಗುಟ್ಟಿದ.
“ಬರೆದಿದ್ದಿರಿ ಸರಿ. ನಾನಿಲ್ಲಾ ಅಂದನೇ? ನಮ್ಮಮ್ಮಂಗೂ ಹೇಳಿದೆ…’ಹೆಂಡತಿಯೂ ಪಿಸುಗುಟ್ಟಿದಳು: ಈಗ ನಮ್ಮಮ್ಮ ಬಂದಿರೋದೇ ನಿಮ್ಮನ್ನು ದಬಾಯಿಸಿ ಕೇಳ್ಳೋದಿಕ್ಕೆ!
***
ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ…
ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ!
***
ಲೇಡೀಸ್ ಹಾಸ್ಟೆಲ್‌ಗೆ ಬೆಂಕಿ ಹತ್ತಿಕೊಂಡಿತು. ಪಕ್ಕದ ಹಾಸ್ಟಲಿನ ಹುಡುಗರು ಮುಗಿಬಿದ್ದರು. ಪೊಲೀಸರ ನಿಯಂತ್ರಣ ವಿಫಲವಾಯಿತು.
ಆಗ ಟೀವಿಯಲ್ಲಿ ಬಂದ ಬ್ರೇಕಿಂಗ್ ನ್ಯೂಸ್-“ಹಾಸ್ಟೆಲ್‌ಗೆ ಹತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದವರಿಂದ ಸುಲಭವಾಗಿ ಹತೋಟಿಗೆ ತರಲಾಗಿದೆ. ಆದರೆ, ಹುಡುಗರನ್ನು ಹತೋಟಿಗೆ ತರುವುದು ಪೊಲೀಸರಿಗೆ ಕಷ್ಟವಾಗಿದೆ..!’
***
ಹೆಂಡತಿ: ಈ ಮನೇಲಿ ನಾನ್ ಇರಬೇಕು, ಇಲ್ಲ ನಿಮ್ಮ ಅಮ್ಮ ಇರಬೇಕು…
ಪೊಲೀಸಪ್ಪ : ಇಬ್ರೂ ಬೇಕಾಗಿಲ್ಲ!! ಕೆಲಸದವಳು ಒಬ್ಬಳಿದ್ರೆ ಸಾಕು…
***
ಅಪಘಾತ ವಲಯದ ಸೂಚನಾಫಲಕದ ಮೇಲೆ ಪೊಲೀಸರ ಹೊಸ ಸಾಲು:
ಎಚ್ಚರಿಕೆ:-
ನಿಧಾನವಾಗಿ ಹೋಗದಿದ್ದಲ್ಲಿ
ನಿಧನವಾಗಿ ಹೋಗುವಿರಿ!
***
ಎಸ್ಪಿ ಆಫೀಸಿಗೆ ಬಂದ ಗೆಳೆಯ ಕೇಳಿ¨:”ಏನ್ ಸುರೇಶ್, ನಿಮ್ಮ ಆಫೀಸಿನಲ್ಲಿ ಎಲ್ಲ ಮದುವೆಯಾದ ಗಂಡಸರೇ ಇದ್ದಾರಲ್ಲಾ? ಬ್ರಹ್ಮಚಾರಿಗಳಾಗಿದ್ದಿದ್ರೆ ಇನ್ನೂ ಚಿಕ್ಕವರು. ಚೆನ್ನಾಗಿ ಕೆಲಸ ಮಾಡ್ತಿದ್ರು ಅಲ್ವಾ?’
“ಕೆಲಸವೇನೋ ಮಾಡ್ತಾರೆ. ಆದರೆ ಮದುವೆಯಾದವರಾದ್ರೆ ಒಂದು ಅನುಕೂಲವಿದೆ…’ ಅಂದರು ಎಸ್ಪಿ .
“ಏನದು?’
“ಅವರ ಮೇಲೆ ಎಷ್ಟೇ ಕೂಗಾಡಿದ್ರೂ ತಿರುಗಿಸಿ ಅನ್ನಲ್ಲ. ಬೇಜಾರು ಮಾಡ್ಕೊಳ್ಳೋದಿಲ್ಲ ಮತ್ತು ಮಸಲತ್ತು ಮಾಡೋದಿಲ್ಲ…’
***
ದರೋಡೆಯಾದ ಹತ್ತೇ ನಿಮಿಷದಲ್ಲಿ ಮನೆಯ ಯಜಮಾನ ಠಾಣೆಗೆ ಬಂದು ದೂರು ನೀಡಿದ.
“ನಿಮ್ಮ ಮನೆ ನೋಡಿದ್ರೆ ಮೂರು ಕಿಮೀ ದೂರದಲ್ಲಿದೆ. ಈ ನಡುರಾತ್ರೀಲಿ, ಇಷ್ಟು ಬೇಗ ಠಾಣೆಗೆ ಬರಲು ಹೇಗೆ ಸಾಧ್ಯವಾಯ್ತು ನಿಮಗೆ?’ ಇನ್ಸ್ ಪೆಕ್ಟರು ಕೇಳಿದರು.
“ಪಾಪ ಪೊಲೀಸ್ನೋರಿಗೂ ಡ್ನೂಟಿ ಮಾಡೋದಿರುತ್ತೆ. ಬೇಗ ಹೋಗಿ ಕಂಪ್ಲೇಂಟ್ ಕೊಡಿ’ ಅಂತ ಕಳ್ಳರೇ ತಮ್ಮ ಕಾರಿನಲ್ಲಿ ನನ್ನ ಕರೆತಂದು ಇಲ್ಲೇ ಪಕ್ಕದ ಸರ್ಕಲ್ ಹತ್ರ ಬಿಟ್ಟೋದ್ರು- ಎಂದ ಮನೆಯಾತ.
***
ಪೊಲೀಸರಿಬ್ಬರು ಪರಸ್ಥಳದ ದೊಡ್ಡ ಹೋಟೆಲಿನಲ್ಲಿ ಗಡದ್ದಾಗಿ ತಿಂದರು. ಒಬ್ಬ ಕೈ ತೊಳೆಯಲು ಎದ್ದು ಹೋದ. ಮತ್ತೂಬ್ಬ ಬೇರರ್‌ನನ್ನು ಹತ್ತಿರ ಕರೆದು ಹೇಳಿದ: “ತಗೋ ಇಟ್ಕೊà. ಈ ಇಪ್ಪತ್ತು ರೂಪಾಯಿ ಟಿಪ್ಸ್.’
“ಇನ್ನೂ ನಾನು ಬಿಲ್ಲೇ ಕೊಟ್ಟಿಲ್ಲ ಸಾರ್. ಈಗಲೇ ಟಿಪ್ಸ್ ಯಾಕೆ?’
“ಬಿಲ್ಲನ್ನ ನನ್ನ ಫ್ರೆಂಡ್ ಕೈಗೇ ಕೊಡು. ಅಕಸ್ಮಾತ್ ಕೇಳಿದ್ರೆ ನೀವೇ ದೊಡ್ಡ ಆಫೀಸರ್‌ಅಂದ್ಕೊಂಡೆ ಅನ್ನು’ ಎಂದ ಪೊಲೀಸಪ್ಪ.
***
ಮನೆಯಲ್ಲಿ ನೆಮ್ಮದಿ ಸಿಕ್ಕದೆ ದೇವಾಲಯಕ್ಕೆ ಬಂದು ಕೈ ಮುಗಿದ ಪೊಲೀಸಪ್ಪ- “ಅರ್ಚನೆ ಮಾಡಿ ಸ್ವಾಮೀ’ ಎಂದ.
“ನಿಮ್ಮ ಹೆಸರಲ್ಲೇ ಮಾಡಲಾ?’
“ಬೇಡಾ ಸ್ವಾಮೀ, ಮನೇಲಿ ಸಹಸ್ರಾರ್ಚನೆ ಈಗಾಗಲೇ ಆಗಿದೆ. ದೇವರ ಹೆಸರಲ್ಲಿ ಮಾಡಿ…’ ನಿಟ್ಟುಸಿರಿಟ್ಟ.
***
ಇನ್ಸ್ ಪೆಕ್ಟರು ಹಳೇ ಕಳ್ಳನ ಮನೆ ಮುಂದೆ ಜೀಪು ನಿಲ್ಲಿಸಿ ಬಾಗಿಲು ತಟ್ಟಿ ಕೇಳಿದರು: ಮುನಿಸಾಮಿ ಇದ್ದಾನಾ?
“ಇಲ್ಲವಲ್ಲಾ? ಸಾರ್…’ ಅಂದಳು ಅವನ ಹೆಂಡತಿ ಅಮಾಯಕ ದನಿಯಲ್ಲಿ.
“ಈಗ ತಾನೇ ನಿಮ್ಮನೆ ಕಿಟಕಿ ಹಿಂದೆ ಅವನನ್ನ ನೋಡೆª…’
“ಹೌದೂ! ಅವರೂ ಸಹ ನಿಮ್ಮನ್ನು ನೋಡಿಬಿಟ್ಟರು ಸಾಮೀ. ಟೇಸನ್ ಹತ್ರ ಹೋಗಿ ಬರ್ತೀನಿ ಅಂತ ಹೋದರು…’ ಎಂದಳು ಕಳ್ಳನ ಹೆಂಡತಿ ಮಳ್ಳಿ.
***
ಮಾಸ್ಟರ್ ಹಿರಣ್ಣಯ್ಯನವರು ಪೊಲೀಸರ ಬಗ್ಗೆ ಹೇಳ್ತಿದ್ದ ಮಾತು: “ನಾವು ಆಡುವ ಮಾತು ಕೂಡಾ ನ್ಯಾಯವಾಗಿರಬೇಕಲ್ಲವೇ? ಪೊಲೀಸ್ನೋರೆಲ್ಲಾ ಕೆಟ್ಟವರು ಅಂದ್ರೆ ಒಪ್ಪೋ ಮಾತಲ್ಲಾ ಬಿಡಿ. ಆದ್ರೆ ಪೊಲೀಸ್ನೋರೆಲ್ಲಾ ಪ್ರಾಮಾಣಿಕರು ಅಂದ್ರೆ ಅವರೇ
ಒಪ್ಪೋದಿಲ್ಲ ಬಿಡಿ!
-ಜೆ.ಬಿ. ರಂಗಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ , ಮೈಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.