ಅಪಾರ ಕಡಲಿನ ನಡುಗುಡ್ಡೆಯಲ್ಲಿ ವಿರಾಮ
Team Udayavani, Dec 30, 2018, 12:30 AM IST
ಈ ವರ್ಷ ಆಗಸ್ಟ್ ತಿಂಗಳಿನ ಆರಂಭದಲ್ಲಿ ಉದಯವಾಣಿ ಕನ್ನಡ ದಿನ ಪತ್ರಿಕೆಯ ಸಾಪ್ತಾಹಿಕ ಸಂಪಾದಕರು ಮಂಗಳ ಗಂಗೋತ್ರಿಯ ಆರಂಭದ ದಿನಗಳ ನನ್ನ ಅನುಭವಗಳನ್ನು ಬರಹರೂಪದಲ್ಲಿ ಕೊಡಲು ಕೇಳಿಕೊಂಡಾಗ ನಾನೇ ಅವರಿಗೆ ಹೇಳಿದ್ದು “ಅದು ಕಲಿಯುವಿಕೆಗೆ ಕೇಂದ್ರೀಕೃತವಾಗಿರಲಿ’ ಎಂದು. ಅದಕ್ಕಾಗಿಯೇ ನಾನು ಸೂಚಿಸಿದ ಶೀರ್ಷಿಕೆ “ಕಲಿತದ್ದು ಕಲಿಸಿದ್ದು ಕಲೆತ ಕಥನ’. ಅದನ್ನು ನನ್ನ ಪ್ರಾಥಮಿಕ ಶಾಲೆಯಿಂದ ಸುರುಮಾಡುವ ನನ್ನ ಪ್ರಸ್ತಾವಕ್ಕೆ ಸಂಪಾದಕರು ಒಪ್ಪಿಗೆ ಕೊಟ್ಟ ಕಾರಣ, ಪುಣಚ ಪರಿಯಾಲ್ತಡ್ಕ ಶಾಲೆಯಿಂದ ಆರಂಭಿಸಿ ಐದು ಸಂಚಿಕೆಗಳಲ್ಲಿ ಮಂಗಳಗಂಗೋತ್ರಿಯವರೆಗೆ ಬಂದು ಮುಕ್ತಾಯಮಾಡುವ ಯೋಚನೆ ಮಾಡಿದ್ದೆ. ಆದರೆ, ಐದನೆಯ ಸಂಚಿಕೆ ಮುಗಿಯುವಾಗ ನಾನು ಪುತ್ತೂರು ಫಿಲೋಮಿನಾ ಕಾಲೇಜಿನ ಕಲಿಯುವಿಕೆ ಆಗಷ್ಟೇ ಮುಗಿಸಿದ್ದೆ. ಪ್ರತಿಯೊಂದು ಸಂಚಿಕೆ ಪ್ರಕಟವಾದ ಬಳಿಕ ಸಂಪಾದಕರ ಜೊತೆಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆ. ಅವರ ಮುಕ್ತವಾದ ಪ್ರೋತ್ಸಾಹದಿಂದ ಹತ್ತು ಸಂಚಿಕೆಗಳಲ್ಲಿ ಈ ಕಥನವನ್ನು ಮುಗಿಸುವ ಸಿದ್ಧತೆಮಾಡಿದ್ದೆ. ಆದರೆ, ಮಂಗಳಗಂಗೋತ್ರಿಯ ಮಹಾಕಥನದ ತೆರೆಗಳು ಹತ್ತು ಸಂಚಿಕೆಗಳ ದಡವನ್ನು ಮೀರಿ ಮುಂದಕ್ಕೆ ನುಗ್ಗಿದವು. ಮಂಗಳಗಂಗೋತ್ರಿಯ ಮೊದಲ ತಂಡದ ವಿದ್ಯಾರ್ಥಿಯಾಗಿ ಮತ್ತು ಅಲ್ಲೇ ಅಧ್ಯಾಪಕನಾಗಿ ನಿರಂತರ ಅನುಭವಗಳಿಗೆ ಒಳಗಾದವನು. ಆದ್ದರಿಂದ ನನ್ನ ನೆನಪಿನ ಸಣ್ಣ ಸಣ್ಣ ಸಂಗತಿಗಳನ್ನು ದಾಖಲಿಸುವ ಉತ್ಸಾಹದಲ್ಲಿ 15 ಸಂಚಿಕೆಗಳಲ್ಲಿ ಈ ಕಥನವನ್ನು ನಿಲ್ಲಿಸುವ ನನ್ನ ಪ್ರಯತ್ನ ವಿಫಲವಾಯಿತು. ಸಂಪಾದಕರು ಮುಂದುವರಿಸಲು ಉದಾರವಾಗಿ ಹಸಿರು ನಿಶಾನೆ ತೋರಿಸಿದರು. ಸಂಚಿಕೆ 17 ಕೊನೆಯಾಗುವಾಗ ಕೊಣಾಜೆಯಲ್ಲಿ 1975ರ ಕ್ಯಾಲೆಂಡರ್ ಪುಟವು ಆಗ ತಾನೇ ತೆರೆದುಕೊಂಡಿತ್ತು. 20ನೆಯ ಸಂಚಿಕೆಯಲ್ಲಿ ನಿಲುಗಡೆ ಮಾಡುವ ಸ್ಪಷ್ಟನಿರ್ಧಾರವನ್ನು ಸಂಪಾದಕರ ಜೊತೆಗೆ ಹಂಚಿಕೊಂಡು, ಉಳಿದ ಮೂರು ಸಂಚಿಕೆಗಳಲ್ಲಿ ಎರಡರಲ್ಲಿ ನನ್ನ ನೆಲದ ಬೇರು ಜಾನಪದ ಕಲಿಕೆಯ ಬಹುರೂಪಗಳನ್ನು ಮತ್ತು ಒಂದು ಸಂಚಿಕೆಯಲ್ಲಿ ಜರ್ಮನಿಯಲ್ಲಿ ಕನ್ನಡ ಕಲಿಸುವಿಕೆಯ ನನ್ನ ತಡಬದುಕಿನ ಪ್ರಯೋಗಗಳನ್ನು ಮಿಂಚಿನ ಹೊಳಹಿನ ರೂಪದಲ್ಲಿ ಕೊಡುವ ಸಾಹಸಮಾಡಿದೆ. ಹಾಯಿದೋಣಿಯಲ್ಲಿನ ಕಲಿಕೆಯ ಕಡಲಪಯಣದ ಬೆರಗು ಸಂಭ್ರಮಗಳನ್ನು ಹಂಚಿಕೊಳ್ಳಲು ಈ 21ನೆಯ ಸಂಚಿಕೆಯು ನನ್ನ ಪಾಲಿಗೆ ಋಣದ ಅನುಬಂಧವಾಗಿದೆ.
“ಕಲಿತದ್ದು ಕಲಿಸಿದ್ದು ಕಲೆತ ಕಥನ’ಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆ ನನಗೆ ಬೆರಗು ಮತ್ತು ಸಂತಸವನ್ನು ಉಂಟುಮಾಡಿದೆ. ನಾನು ನಿರೀಕ್ಷೆ ಮಾಡದ ಬೇರೆ ಬೇರೆ ಕ್ಷೇತ್ರಗಳ ಭಿನ್ನ ಅಭಿರುಚಿಗಳ ಜನರು ಈ ಅಂಕಣವನ್ನು ನಿಯತವಾಗಿ ಓದುತ್ತಾರೆ ಎನ್ನುವುದು ಐವತ್ತು ವರ್ಷಗಳ ನನ್ನ ಸಾಹಿತ್ಯ ಬದುಕಿನಲ್ಲಿ ಅಚ್ಚರಿಯ ಒಂದು ವಿದ್ಯಮಾನ. ಕಳೆದ ನಾಲ್ಕು ತಿಂಗಳಿನಲ್ಲಿ ನಾನು ಬೇರೆ ಬೇರೆ ಸ್ಥಳಗಳಲ್ಲಿ ಭೇಟಿಯಾದ ಪರಿಚಿತರು ಅಪರಿಚಿತರು ಎಲ್ಲರೂ ಮಾತನ್ನು ಮೊದಲು ಆರಂಭಿಸುವುದು “ಉದಯವಾಣಿಯ ನಿಮ್ಮ ಅಂಕಣವನ್ನು ಓದುತ್ತಿದ್ದೇವೆ’ ಎನ್ನುವ ಮೂಲಕ. ಮಂಗಳೂರು, ಪುತ್ತೂರು, ಮಂಜೇಶ್ವರ, ಮೂಡಬಿದಿರೆ, ಸವಣೂರು, ದುಬೈ, ಬಂಟ್ವಾಳ, ಕಾಸರಗೋಡು, ಏತಡ್ಕ- ಹೀಗೆ ಎಲ್ಲಿ ಹೋದರೂ ಈ ಅಂಕಣಬರಹದ ಮೂಲಕವೇ ನನ್ನ ಪರಿಚಯ ಮಾಡಿಕೊಳ್ಳುವ ಹೊಸ ಸಂಪ್ರದಾಯವನ್ನು ನಾನು ಗಮನಿಸಿದೆ. ಆಕಸ್ಮಿಕವಾಗಿ ಭೇಟಿಯಾದ ಮಂಗಳೂರಿನ ಹಿರಿಯ ರೇಡಿಯೊಲೊಜಿÓr… ಡಾ. ನವೀನಚಂದ್ರ ಶೆಟ್ಟಿ, ಮೋತಿಮಹಲ… ಮಂಗಳಾ ರೆಸ್ಟೋರೆಂಟ್‌ನ ಕ್ಯಾಪ್ಟನ್ ಮಧುಕರ ಶೆಟ್ಟಿ, ಟ್ಯಾಕ್ಸಿ ಡ್ರೈವರ್ ವಿಕ್ಟರ್- ಹೀಗೆ ಅನೇಕರು ಅವರಾಗಿಯೇ ಈ ಬರಹವನ್ನು ಓದುತ್ತಿರುವ ಪ್ರಸ್ತಾವಮಾಡಿದ್ದು ನನಗೆ ಸಂತೃಪ್ತಿಯ ವಿಸ್ಮಯವನ್ನು ಉಂಟುಮಾಡಿದೆ. ಫೋನ್, ವಾಟ್ಸಾಪ್, ಇಮೈಲ… ಮೂಲಕ ಬಹಳ ಜನರು ನಿರಂತರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರತೀ ವಾರ ಪ್ರತಿಯೊಂದು ಬರಹಕ್ಕೂ ವಿವರವಾದ ಪ್ರತಿಕ್ರಿಯೆ
ಯನ್ನು ಇಮೈಲ… ಮೂಲಕ ಕಳುಹಿಸಿದವರು ಹಿರಿಯ ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್. ಪ್ರತೀ ಭಾನುವಾರ ನನ್ನ ಅಂಕಣವನ್ನು ಓದಿ ನನಗೆ ಫೋನ್ ಮಾಡಿ ಮೆಚ್ಚುಗೆ ಹೇಳುತ್ತಿದ್ದವರು ಹಿರಿಯ ರಾಜಕಾರಣಿ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ.
ಈ ಬರಹಗಳನ್ನು ಬಹಳ ಮಂದಿ ನನ್ನ ಆತ್ಮಕಥನ ಎಂದು ಭಾವಿಸಿದ್ದಾರೆ. ಒಂದು ದೃಷ್ಟಿಯಲ್ಲಿ ಹಾಗೆ ಭಾಸವಾದರೂ ಇವು ನಿಜ ಅರ್ಥದಲ್ಲಿ ನನ್ನ ಆತ್ಮಕಥನ ಅಲ್ಲ. ಕಲಿಕೆಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ನನ್ನ ಅನುಭವದ ಸಂಗತಿಗಳನ್ನು ಹೇಳಿದ ಕಾರಣ “ನಾನು’ ಎಂಬ ಸರ್ವನಾಮ ಬರಹಗಳ ಉದ್ದಕ್ಕೂ ಬಂದಿದೆ. ಶಿಕ್ಷಣ ಸಂಸ್ಥೆಗಳ ಒಳಗಿನ ವಿವರಗಳನ್ನು ಕೊಡುವುದರ ಜೊತೆಗೆಯೇ ಆ ಕಾಲದ ಹೊರಗಿನ ಆವರಣದ ಸಂಗತಿಗಳ ಮಾಹಿತಿಯನ್ನೂ ಕೊಡಲು ಪ್ರಯತ್ನಿಸಿದ್ದೇನೆ. ಅದಕ್ಕೆ ಪೂರಕವಾಗಿ ನನ್ನ ಆಸಕ್ತಿಗಳ ಉಲ್ಲೇಖಗಳು ಬಂದಿವೆ. “ಕಲೆತ’ ಎನ್ನುವ ಪದವನ್ನು ಬಳಸಿದ್ದು ಆ ಉದ್ದೇಶಕ್ಕಾಗಿಯೇ. ಕಲಿಯುವಿಕೆ ಮತ್ತು ಕಲಿಸುವಿಕೆಗಳ ಮಿಶ್ರಣ ನಮಗೆ ಗೊತ್ತಿಲ್ಲದಂತೆ ಅನೇಕ ರೀತಿಗಳಲ್ಲಿ ನಮ್ಮ ಬದುಕಿನಲ್ಲಿ ನಡೆಯುತ್ತದೆ.
ಇಲ್ಲಿನ ಬರಹಗಳ ಬಗ್ಗೆ ಬಂದ ಪ್ರತಿಕ್ರಿಯೆಗಳು ಬೇರೆ ಬೇರೆ ಕ್ಷೇತ್ರಗಳವರದ್ದು ಆದಕಾರಣ ಸಹಜವಾಗಿ ವೈವಿಧ್ಯ ಇದೆ. ಸಾಹಿತ್ಯರಂಗದವರು ಸಾಹಿತ್ಯದ ಒಳನೋಟ, ತಾತ್ವಿಕ ನಿಲುವುಗಳು, ಬರಹದ ಕೊನೆಯ ಸೂತ್ರವಾಕ್ಯಗಳನ್ನು ಹೆಚ್ಚು ಮೆಚ್ಚಿದ್ದಾರೆ. ಕೆಲವು ಲೇಖನಗಳಲ್ಲಿ ವರದಿಯ ಸ್ವರೂಪ ಇದೆ, ಮಾಹಿತಿಯ ಪ್ರಮಾಣವೇ ಅಧಿಕವಾಗಿದೆ ಎಂಬ ಅಭಿಪ್ರಾಯ ಕೊಟ್ಟಿದ್ದಾರೆ. ಅದೇ ಲೇಖನಗಳನ್ನು ಬಹಳ ಮಂದಿ ಮಾಹಿತಿಯ ಕಾರಣಕ್ಕಾಗಿ ಹೆಚ್ಚು ಇಷ್ಟಪಟ್ಟಿದ್ದಾರೆ. ಆ ಕಾಲದಲ್ಲಿ ಆ ಪರಿಸರದಲ್ಲಿ ಇದ್ದವರಿಗೆ ಈ ಮಾಹಿತಿಕೋಶಗಳು ಬಹಳ ಅಪೂರ್ವವಾಗಿವೆ. ಮಂಗಳೂರು ವಿವಿ ನಿವೃತ್ತ ರಿಜಿಸ್ಟ್ರಾರ್ ಡಾ. ಜನಾರ್ದನರು ಆಗಾಗ ಫೋನ್ ಮಾಡಿ ತಿಳಿಸಿದಂತೆ ಅನೇಕ ಮಂದಿ ಈ ಮಾಹಿತಿಯುಕ್ತ ಲೇಖನದ ಪ್ರತಿಗಳನ್ನು ಅಪೂರ್ವಗ್ರಂಥದ ಹಾಗೆ ಸಂರಕ್ಷಿಸಿ ಇಟ್ಟಿದ್ದಾರಂತೆ. ನಾನು ಈ ಅಂಕಣವನ್ನು ಬರೆಯಲು ತೊಡಗಿದಾಗ ಇದನ್ನು ಸಾಹಿತ್ಯಕಥನದ ಮಾದರಿಗಿಂತ ಭಿನ್ನವಾಗಿ, ಮಾಹಿತಿಗಳ ಪುನರುಜ್ಜೀವನದ ರೀತಿಯಲ್ಲಿ ದಾಖಲಿಸಲು ನಿರ್ಧಾರಮಾಡಿದೆ. ಇದೇ ವಿಷಯಗಳನ್ನು ಸಾಹಿತ್ಯಕಥನವಾಗಿ ನಾನು ಬರೆಯುವ ವಿನ್ಯಾಸವೇ ಬೇರೆ ಆಗುತ್ತಿತ್ತು.
ಈ ಅಂಕಣದ ಇಪ್ಪತ್ತು ಸಂಚಿಕೆಗಳಲ್ಲಿ ಪುನರಾವರ್ತನೆಯನ್ನು ಹೊರತುಪಡಿಸಿ ಒಟ್ಟು 540 ಜನರ ಹೆಸರುಗಳು ಉಲ್ಲೇಖಗೊಂಡಿವೆ. ಆ ವ್ಯಕ್ತಿಗಳ ಬಗ್ಗೆ ಗೊತ್ತಿಲ್ಲದವರಿಗೆ, ಆ ಪರಿಸರದ ಸಂಪರ್ಕ ಇಲ್ಲದವರ ಪಾಲಿಗೆ ಇಂತಹ ಹೆಸರುಗಳ ಪಟ್ಟಿ ಆಸಕ್ತಿದಾಯಕ ಆಗುವುದಿಲ್ಲ. ಆದರೆ, ಇಲ್ಲಿ ಪ್ರಸ್ತಾವಗೊಂಡ ಅನೇಕ ಹೆಸರುಗಳ ಸಂಪರ್ಕ ಇದ್ದವರು- ಕುಟುಂಬಿಕರು, ಶಿಷ್ಯರು, ಅಭಿಮಾನಿಗಳು, ಊರವರು- ನನ್ನನ್ನು ಸಂಪರ್ಕಿಸಿ ತಮ್ಮ ಸಂತೋಷವನ್ನು ಪ್ರಕಟಿಸಿದ್ದಾರೆ. ಮಣಿಲದ ಸುಬ್ರಹ್ಮಣ್ಯ ಶಾಸ್ತ್ರೀ, ಕೊಣಾಜೆಯ ರಮಾನಾಥ ಕಾಜವರ ಪತ್ನಿ ಮೀನಾಕ್ಷಿ ಕಾಜವ, ವಿಲಿಯಮ… ಡಿಸೋಜ, ಬಡೆಕ್ಕಿಲ ಶ್ರೀಧರ ಭಟ್, ಜಯಚಂದ್ರ ನಾಯಕ್, ವಿಜಯಕುಮಾರ್ ಮೊಳೆಯಾರ, ಪುತ್ತೂರು ಬಾಬುರಾಯರ ಹೊಟೇಲ್‌ನ ಶಿವಣ್ಣ, ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪ್ರೊ. ಎಂ. ರಾಮಚಂದ್ರ, ಡಾ. ಎಂ. ಪ್ರಭಾಕರ ಜೋಶಿ, ಡಾ. ಕೆ. ಚಿನ್ನಪ್ಪ ಗೌಡ, ಡಾ. ವಾಮನ ನಂದಾವರ, ಡಾ. ಅಶೋಕ ಆಳ್ವ, ನಂದಳಿಕೆ ಬಾಲಚಂದ್ರ ರಾವ್, ಕರ್ನಾಟಕ ಬ್ಯಾಂಕ್‌ನ ಶ್ರೀನಿವಾಸ ದೇಶಪಾಂಡೆ, ಪುತ್ತೂರು ಬೋರ್ಡ್ ಹೈಸ್ಕೂಲಿನ ನನ್ನ ವಿದ್ಯಾರ್ಥಿನಿ ಶೈಲಜಾ, ಸಿಂಡಿಕೇಟ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಡಾ. ನವೀನ್‌ಚಂದ್ರ ತಿಂಗಳಾಯ, ಕರ್ನಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ, ಮೈಸೂರಿನ ಡಾ. ಡಿ.ಕೆ. ರಾಜೇಂದ್ರ, ಪುತ್ತೂರು ಮೂಲದ ಮಸ್ಕರೇನ್ಹಸ್- ಹೀಗೆ ಉಲ್ಲೇಖಗೊಂಡ ಹಿರಿಯರ ಹೆಸರುಗಳ ಜೊತೆಗೆ ತಮ್ಮ ಸಂಬಂಧವನ್ನು ಮತ್ತು ಆ ಕಾಲದ ನೆನಪುಗಳನ್ನು ಅನೇಕರು ಸಂದೇಶ ಮತ್ತು ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಅಂಕಣಬರಹಗಳ ಬಗ್ಗೆ ನನಗೆ ದೊರೆತ ಒಂದು ಏಕರೂಪದ ಪ್ರತಿಕ್ರಿಯೆ ಎಂದರೆ ನನ್ನ ನೆನಪಿನ ಶಕ್ತಿಯ ಬಗ್ಗೆ ಪ್ರಶಂಸೆ. ಅಷ್ಟೊಂದು ಹೆಸರುಗಳು, ದಿನಾಂಕಗಳು, ಸ್ಥಳಗಳು, ಘಟನೆಗಳು ಕರಾರುವಾಕ್ಕಾಗಿ ದಾಖಲಾಗಿರುವುದರ ಬಗ್ಗೆ ಮೆಚ್ಚುಗೆ. ಆದರೆ, ಇಂತಹ ಮಾಹಿತಿಗಳ ಸ್ಪಷ್ಟತೆಗಾಗಿ ನಾನು ಅನೇಕ ಜನರ ಸಹಾಯ ಪಡೆದಿದ್ದೇನೆ. ಪುಣಚದ ಬಾಲ್ಯದ ಬಗ್ಗೆ ಜೀವನಕ್ಕ, ತಮ್ಮ ಉಲ್ಲಾಸ್ ರೈ, ಪ್ರಾಥಮಿಕ ಶಾಲೆಯ ಸಹಪಾಠಿ ಮಾರಪ್ಪ ಶೆಟ್ಟಿ, ಮಣಿಲ ಹರ್ಷ ಶಾಸ್ತ್ರೀ, ಪುತ್ತೂರು ಬೋರ್ಡ್ ಹೈಸ್ಕೂಲ… ಕಾಲದ ಬಗ್ಗೆ ಸಹಪಾಠಿ ಇಂಜಿನಿಯರ್ ಗೋಪಾಲಕೃಷ್ಣ, ಮಹಾಲಿಂಗ ಭಟ್, ಪುತ್ತೂರು ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಬದುಕಿನ ಬಗ್ಗೆ ಸಹಪಾಠಿ ವಿ. ಹಸನ್, ಪ್ರೊ. ಬಿ. ಸುರೇಂದ್ರ ರಾವ್, ಕಾಲೇಜಿನ ಕನ್ನಡ ಪ್ರಾಧ್ಯಾಪಕ ವಿಜಯಕುಮಾರ ಮೊಳೆಯಾರ, ಬೋರ್ಡ್ ಹೈಸ್ಕೂಲ… ಅಧ್ಯಾಪನದ ಬಗ್ಗೆ ಆಗಿನ ಸಹೋದ್ಯೋಗಿ ವಿ. ಹಸನ್ ಮತ್ತು ಪ್ರಭಾಕರ ಶೆಟ್ಟಿ, ಆಗಿನ ನನ್ನ ವಿದ್ಯಾರ್ಥಿಗಳು ಈಗ ಕರ್ನಾಟಕ ಕಾನೂನು ವಿವಿ ಕುಲಪತಿ ಪ್ರೊ. ಈಶ್ವರ ಭಟ್, ಬೇರಿಕೆ ಈಶ್ವರ ಭಟ್, ಇಕ್ಬಾಲ…, ಕ್ವಾಮಿಲ…, ಮಂಗಳಗಂಗೋತ್ರಿ ಕನ್ನಡ ವಿಭಾಗದ ಕಾಲದ ವಿವರಗಳ ಬಗ್ಗೆ ನನ್ನ ಎಂಎ ಸಹಪಾಠಿಗಳು ಎನ್.ಜಿ. ಪಟವರ್ಧನ್, ಕೇಶವ ಉಚ್ಚಿಲ್, ಎ.ವಿ. ನಾವಡ, ಯು. ಶಂಕರನಾರಾಯಣ ಭಟ್, ಶಂಕರ ಶೆಟ್ಟಿ, ಶೀಲಾವತಿ, ಶ್ರೀಧರ ಭಟ್, ರಂಗೇಗೌಡ, ಮಳಲಿ ವಸಂತಕುಮಾರ್; ನನ್ನ ಬಳಿಕದ ತಂಡಗಳ ವಿದ್ಯಾರ್ಥಿ ಸ್ನೇಹಿತರು ಹರಿನಾರಾಯಣ ಮಾಡಾವು, ಶಿವಾಜಿ ಜೋಯಿಸ್, ಶಾರದಾ ಶೆಟ್ಟಿ, ಅನಂತಕೃಷ್ಣ ಹೆಬ್ಟಾರ್, ಎಸ್. ರಾಮ ಭಟ್, ಮುರಳೀಧರ ಉಪಾಧ್ಯ, ಸುಶೀಲಾ ರಾವ್, ಚಂದ್ರಕಲಾ ನಂದಾವರ ಮುಂತಾದವರು. ಮಂಗಳಗಂಗೋತ್ರಿಯ ಅಧ್ಯಾಪನದ ಆರಂಭದ ದಿನಗಳ ಬಗ್ಗೆ ಪ್ರೊ. ಎಂ. ಅಬ್ದುಲ… ರಹಿಮಾನ್, ಬಿ. ಗೋಕುಲದಾಸ ಶೆಣೈ, ಡಾ. ಡಿ.ಸಿ. ಚೌಟ, ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ , ಕೆ. ವಾಮನ್- ಈ ರೀತಿ ಮಾಹಿತಿ ಹಂಚಿಕೊಂಡ ಆಪ್ತರ ದೊಡ್ಡ ಸಮುದಾಯ ನನ್ನ ಈ ಬರಹಗಳ ಅಧಿಕೃತತೆಗೆ ಬುನಾದಿಯಾಗಿದೆ. ಈ ಸಂಚಿಕೆಗಳನ್ನು ಮೆಚ್ಚಿ ಪುಸ್ತಕರೂಪದಲ್ಲಿ ತರಲು ಅಮೃತ ಸೋಮೇಶ್ವರರು ಪತ್ರ ಬರೆದಿದ್ದಾರೆ.
ನೆನಪುಗಳು ನಮ್ಮ ಪ್ರಜ್ಞೆಯ ಭಾಗವಾಗಿ ಉಳಿಯುವ ವಿನ್ಯಾಸಗಳು ವಿಚಿತ್ರವಾಗಿರುತ್ತವೆ. ಅವುಗಳಲ್ಲಿ ಕಲಿಯುವಿಕೆಯ ನೆನಪುಗಳಿಗೆ ಹೆಚ್ಚು ಸಾಂದ್ರತೆ ಇರುತ್ತದೆ. ಹೊಸತಾಗಿ ಏನನ್ನಾದರೂ ಕಲಿಯುವಾಗ ಕುತೂಹಲ, ಸಾಹಸ ಮತ್ತು ಛಲ ಇರುತ್ತದೆ. ಅದು ಸಾಧ್ಯವಾದಾಗ ರೋಮಾಂಚನ ಮತ್ತು ಧನ್ಯತೆ ಬರುತ್ತದೆ. ಕಲಿಯುವಿಕೆ ಎನ್ನುವುದು- ಅದು ಸಂಸ್ಥೆಯ ಒಳಗೇ ಇರಲಿ ಅಥವಾ ಹೊರಗೇ ಇರಲಿ- ಅದನ್ನು ಪಡೆಯುವ ಇಡೀ ಪ್ರಕ್ರಿಯೆ ಅದೊಂದು ಕಥನದ ದ್ರವ್ಯ ಆಗುತ್ತದೆ. ಅದನ್ನು ನಿರೂಪಿಸುವ ವಿನ್ಯಾಸಗಳನ್ನು ಗಮನಿಸಿಕೊಂಡು ಅಂತಹ ಕಥನಗಳಿಗೆ ಆತ್ಮಚರಿತ್ರೆ, ಅನುಭವ ಕಥನ, ಪ್ರಬಂಧ ಮುಂತಾದ ಹೆಸರುಗಳನ್ನು ಕೊಟ್ಟುಕೊಳ್ಳುತ್ತೇವೆ. ನಿಜದ ನೆಲೆಯಲ್ಲಿ ಅವೆಲ್ಲವೂ ಕಲೆತ ಕಥನವೇ ಆಗಿರುತ್ತವೆ.
1970ರಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇರಿ, 1980ರಲ್ಲಿ ಮಂಗಳೂರು ವಿವಿ ಆದ ಬಳಿಕ ಪ್ರಾಧ್ಯಾಪಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥನಾಗಿ ದೊರೆತ ಅವಕಾಶಗಳು ಜವಾಬ್ದಾರಿಗಳು ಸವಾಲುಗಳು ಅಪಾರ ಮತ್ತು ಸಂಕೀರ್ಣ. ಮಂಗಳಗಂಗೋತ್ರಿಯ ಕನ್ನಡವಿಭಾಗದಲ್ಲಿನ ಒಟ್ಟು 34 ವರ್ಷಗಳ ನನ್ನ ಅಧ್ಯಾಪಕ ಬದುಕಿನಲ್ಲಿ ಮಂಗಳೂರು ವಿವಿ ಆದ ಬಳಿಕದ 24 ವರ್ಷಗಳ ಅವಧಿಯಲ್ಲಿ ಕಲಿತ ಕಲಿಸಿದ ಕಥನವೇ ವಿಸ್ತಾರವಾದುದು. ಅಪಾರ ವಿದ್ಯಾರ್ಥಿ ಸಂಪತ್ತನ್ನು ಪಡೆದು, ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಪ್ರೀತಿಯ ಬೆಂಬಲದಿಂದ ಕನ್ನಡವಿಭಾಗವನ್ನು ಕಟ್ಟಿದ ಮತ್ತು ಅಲ್ಲಿ ನಡೆಸಿದ ವಿಶಿಷ್ಟ ಕನ್ನಡದ ಕೆಲಸಗಳು ನನಗೆ ಸಾರ್ವಜನಿಕ ವ್ಯಕ್ತಿತ್ವವನ್ನು, ಮನ್ನಣೆಯನ್ನು ತಂದುಕೊಟ್ಟವು. ನನ್ನ ಶೈಕ್ಷಣಿಕ ಮತ್ತು ಬೌದ್ಧಿಕ ಬದುಕಿನ ಶಕ್ತಿಕೇಂದ್ರ ಮಂಗಳೂರು ವಿವಿಯ ಕನ್ನಡವಿಭಾಗ; ಅಲ್ಲಿನ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವಿವಿಯ ಆಡಳಿತ ವರ್ಗ. ಆ ಕಥನವನ್ನು ಪ್ರತ್ಯೇಕವಾಗಿಯೇ ವಿವರವಾಗಿ ಬರೆಯುವ ಅಭಿಲಾಷೆ ಇದೆ.
ನಾನು ಕುಲಪತಿಯಾಗಿ ಕನ್ನಡ ವಿವಿ ಹಂಪಿ (2004-2007) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು (2007-2009)ಗಳಲ್ಲಿ ಕಲಿತ ಹೊಸಸಂಗತಿಗಳು ಮತ್ತು ಪಡೆದ ಅನುಭವಗಳು ನನ್ನ ಶೈಕ್ಷಣಿಕ ಬದುಕಿನ ಮಹತ್ವದ ಹಂತದವು. “ಅಧ್ಯಾಪನ’ ಮತ್ತು “ಆಡಳಿತ’ ಎಂಬ ಎರಡು ಕ್ಷೇತ್ರಗಳಿಗಿಂತ ಭಿನ್ನವಾದ “ಶೆಕ್ಷಣಿಕ ಆಡಳಿತ’ ಎಂಬ ಹೊಸ ಪರಿಕಲ್ಪನೆಯನ್ನು ನಾನು ಪಡೆದದ್ದು ಮತ್ತು ಅದರಲ್ಲಿ ಪ್ರಯೋಗಗಳನ್ನು ಮಾಡಿದ್ದು ಕುಲಪತಿಯಾಗಿ ಈ ಎರಡು ವಿವಿಗಳಲ್ಲಿ. “ಆಡಳಿತ ನಿರ್ವಹಣೆ’ ಎಂಬ ವಿಷಯವ್ಯಾಪ್ತಿಯಲ್ಲಿ ಬರುವ “ಶೈಕ್ಷಣಿಕ ಆಡಳಿತ’ದ ಬಗ್ಗೆ ಮತ್ತು ವಿವಿಗಳ ಆರ್ಥಿಕ ನಿರ್ವಹಣೆ, ನಿಯಮಾವಳಿಗಳ ಪ್ರಸ್ತುತತೆ, ಸ್ವಾಯತ್ತತೆಯ ಸ್ವವಿಮರ್ಶೆ, ರಾಜ್ಯ ಕೇಂದ್ರ ಸರಕಾರಗಳ ಒಳಗೊಳ್ಳುವಿಕೆ, ಯುಜಿಸಿಯ ಪಾತ್ರ, ಉನ್ನತ ಶಿಕ್ಷಣದ ಮೇಲ್ಮೆ„ಯ ಬದಲಾವಣೆಗಳು- ಇಂತಹ ಹಲವು ವಿಷಯಗಳ ಬಗ್ಗೆ ನನ್ನ ಅನುಭವಗಳ ನೆಲೆಯಲ್ಲಿ ಅಭಿಪ್ರಾಯಗಳನ್ನು ಹೇಳಲು ಸಾಕಷ್ಟು ಇರುವುದರಿಂದ ಅದನ್ನು ಪ್ರತ್ಯೇಕವಾಗಿ ಬರೆಯುವ ಯೋಚನೆ ಇದೆ.
ಕಲಿಯುವಿಕೆಗೆ ಕೊನೆ ಎಂಬುದು ಇಲ್ಲ, ಇರಬಾರದು. ಹಾಗೆಯೇ ಕಲಿಸುವಿಕೆ ಕೂಡಾ. ಅದೊಂದು ತೀರವಿಲ್ಲದ ಕಡಲಿನಂತೆ. ಅದರ ದಡವನ್ನು ಯಾರೂ ಮುಟ್ಟಲಾರರು. ನಮಗೆ ತಿಳಿದಿರುವುದನ್ನು ಬೇರೆಯವರಿಗೆ ತಿಳಿಸುವ ಯಾವುದೇ ಬಗೆಯ ಚಟುವಟಿಕೆ ಆದರೂ ಅದು ಕಲಿಸುವಿಕೆಯೇ. ನನ್ನ ಈ ಇಪ್ಪತ್ತು ಬರಹಗಳಲ್ಲಿ ನನಗೆ ಗೊತ್ತಿರುವ ನಾನು ಕಲಿತಿರುವ ಸಂಗತಿಗಳನ್ನು ನಿಮ್ಮ ಜೊತೆಗೆ ಹಂಚಿಕೊಂಡಿದ್ದೇನೆ. ಈ ರೀತಿಯ ಬರವಣಿಗೆ ಎನ್ನುವುದು ಕೂಡ ಅಧ್ಯಾಪನದ ಒಂದು ವಿಸ್ತರಣೆಯೇ. ಅಂಕಣ ಅಂಕಣಗಳಲ್ಲಿ ನಿಮ್ಮ ಜೊತೆಗೆ ಸಹಪಾಠಿಯಾಗಲು ಸಹೋದ್ಯೋಗಿಯಾಗಲು ಅವಕಾಶ ಕಲ್ಪಿಸಿದ “ಉದಯವಾಣಿ’ ಬಳಗಕ್ಕೆ ಕೃತಜ್ಞತೆಗಳು; ನನ್ನ ನೆನಪುಗಳ ಆಳಕ್ಕೆ ಇಳಿಯಲು ಸಂಬಂಧದ ಏಣಿ ಜೋಡಿಸಿದ ನಿಮಗೆ ವಂದನೆಗಳು.
(ಅಂಕಣ ಮುಕ್ತಾಯ)
ಬಿ. ಎ. ವಿವೇಕ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.