ಹೆಸರಿಗೆ ಕೆಸರು ಮೆತ್ತಿಕೊಳ್ಳಲಿ !
Team Udayavani, Sep 8, 2019, 5:46 AM IST
ನಾನು ಮೇಷ್ಟ್ರು , ನಾನು ಇಂಜಿನಿಯರ್ ಎನ್ನುವಂತೆಯೇ ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಯಾವಾಗ ಬಂದೀತು !
ಮಳೆನೀರಿನ ಮಂತ್ರಶಕ್ತಿ ಗೊತ್ತಾಗಬೇಕಾದರೆ ಭೂಮಿ ಒದ್ದೆಯಾಗಿ ಎರಡೇ ದಿನಗಳಲ್ಲಿ ಎದ್ದೆದ್ದು ಬರುವ ಗರಿಕೆಯನ್ನು ನೋಡಬೇಕು. ಆಕಾಶನೀರೇ ಹಸಿರು ಬಣ್ಣ ಹೊತ್ತು ಭೂಮಿಗೆ ಸುರಿದಂತೆ ಅಜ್ಞಾತ ಬೀಜಗಳೆಲ್ಲ ಸಿಡಿದು ಚಿಗುರುವ ವೇಗ ಅದ್ಭುತ. ಮತ್ತೆ ಮಳೆನೀರು ಆ ಗರಿಕೆಯ ಮೇಲಿಂದ ಜಾರಿ ಮಣ್ಣು ಸೇರುವ ಮೌನ ಭಾಷೆಗೆ ಕಿವಿಯಾಗುವುದೆಂದರೆ ಅದೊಂದು ಹಸಿರುಧ್ಯಾನವೇ ಸರಿ.
ನೆಲದವನ ಪುಣ್ಯ. ಬರೀ ಮಳೆನೀರಲ್ಲ, ಮೊದಲ ಮಳೆಗೆ ರೈತನ ಶ್ರಮದ ಬೆವರೂ ಅದೇ ನೀರಿಗೆ ಸೇರಿ ನುಣ್ಣಗೆ ಜಿನುಗುವ ಸುಖವೇ ಬೇರೆ. ಕಾಲಬುಡದಲ್ಲಿ ಜಿಗಿಜಿಗಿ ಕೆಸರು. ಗದ್ದೆ ತುಂಬಾ ನೀರು ನಿಂತು ಅವನಿಗೆ ಅದೇ ಕಡಲು. ತಿಳಿಗಟ್ಟುವ ಕೆಸರು ನೀರಿನ ಮೇಲೆ ಮಳೆಬಿದ್ದು ಗುಳ್ಳೆ ಎದ್ದು ಮರೆಯಾಗುತ್ತವೆ. ಉಳುಮೆಯಿಂದ ಗದ್ದೆ ಹದವಾಗಬೇಕು. ಬೀಜವೋ, ನೇಜಿಯೋ, ಗಿಡವೋ, ಬಳ್ಳಿಯೋ ಹೊಸದಾಗಿ ನೆಲಕ್ಕೆ ಬೆಸೆದು ಉಣ್ಣುವ ದಾರಿ ಸಿದ್ಧವಾಗಬೇಕು.
ಬೇರೆಯವರಿಗಿಂತ ಕೃಷಿಕ ಹೆಚ್ಚು ನೈತಿಕವಾಗುವುದಕ್ಕೆ ಕಾರಣ ನೆಲವೇ. ಬೆಳೆ ನೆಲಕಚ್ಚಿದರೂ ಆತ ಸೋಲುವುದಿಲ್ಲ. ಅದೇ ಗದ್ದೆ, ಅದೇ ತೋಟ. ಆತ ಮತ್ತೆ ಮತ್ತೆ ಬಿತ್ತುತ್ತಾನೆ. ಪ್ರತಿಸಲದ ಸೋಲು ಅವನನ್ನು ಬಡಿದು ಬಿಡಿದು ಹದಗೊಳಿಸುತ್ತದೆ. ಈ ಇಡೀ ಕ್ರಿಯೆ ಕಟ್ಟುವ, ಬಿಚ್ಚುವ ಮತ್ತೆ ಮತ್ತೆ ಅದನ್ನೇ ಪುನರ್‌ರೂಪಿಸುವ ಶ್ರಮ ಮತ್ತು ಕ್ರಿಯೆ ಅವನಲ್ಲಿ ನೆಲದಷ್ಟೇ ಸಹನೆ, ತಾಳ್ಮೆಯನ್ನು ತುಂಬುತ್ತದೆ.
ದುಡ್ಡು , ನಗರ, ಮಹಾನಗರಗಳನ್ನು ಬದುಕಿಗೆ ಜೋಡಿಸಿಕೊಂಡು ಬದುಕುವವರಿಗೆಲ್ಲ ಬಹಳ ಬೇಗ ಬದುಕು ಬೋರಾಗುತ್ತಿದೆ. ವಿಷದ ನೀರು, ಗಾಳಿ, ಅನ್ನ ದೇಹವನ್ನು ಕುಗ್ಗಿಸಿದರೆ, ಮನಸ್ಸಿನೊಳಗಡೆ ಕಟ್ಟಿಕೊಂಡ ಯಂತ್ರಗಳು ಮನಸ್ಸನ್ನು ದಣಿಸುತ್ತಿದೆ. ಇವರಿಗೆಲ್ಲ ತತ್‌ಕ್ಷಣ- ತತ್‌ಸ್ಥಳದಲ್ಲಿ ಅನ್ನದ ಸಮಸ್ಯೆಯಿಲ್ಲ. ನೆಮ್ಮದಿಯ ಸಮಸ್ಯೆಯಿದೆ.
ನಮ್ಮ ರೈತರೊಳಗೆ ಬಡತನವಿರಬಹುದು. ದಾರಿದ್ರ್ಯವಿಲ್ಲ. ದಾರಿದ್ರ್ಯಕ್ಕೂ ಬಡತನಕ್ಕೂ ಅಂತರವಿದೆ. ದಾರಿದ್ರ್ಯವನ್ನು ಮನುಷ್ಯ ಸೃಷ್ಟಿಸುವುದು. ಆದರೆ, ಬಡತನ ಮನುಷ್ಯನನ್ನು ಸೃಷ್ಟಿಸುತ್ತದೆ. ಶ್ರೀಮಂತಿಕೆ ಮತ್ತು ದಾರಿದ್ರ್ಯ ಎರಡೂ ಹತಾಶೆಗೊಳಿಸುತ್ತದೆ. ಜೀವನಾಸಕ್ತಿಯನ್ನೇ ಬಡಿದು ನಿಷ್ಕ್ರೀಯಗೊಳಿಸುತ್ತದೆ. ಇವುಗಳ ಆಚೆ ನಿಲ್ಲುವ ಭೂಮಿಯಿಂದಲೇ ಸಿದ್ಧಗೊಂಡ ರೈತನಿಗೆ ಯಾವತ್ತೂ ಬೋರಾಗುವುದಿಲ್ಲ. ಜಿಗುಪ್ಸೆ ಬಂದರೆ ಆತ ರೈತನೂ ಅಲ್ಲ.
ಕೃಷಿ ಹಸಿರು ಕಲಿಕೆ. ಅದು ಬಾಳುವ, ಬಾಳಿಸುವ ಕಲಿಕೆ. ನೆಲದೊಳಗೆ ಪುಗುವುದೆಂದರೆ ನಿರಂತರ ಅವನೊಂದಿಗೆ ಏನಾದರೊಂದು ಇದ್ದೇ ಇರು ತ್ತದೆ. ನೊಗ, ನೇಗಿಲು, ಕತ್ತಿ, ಗಿಡ, ಬೀಜ, ಬೇರು, ಚಿಗುರು ಎಲ್ಲವೂ ಅವನಿಗೆ ಭೂಮಿ ತಿಳಿಯುವ, ಅಳೆಯುವ ಉಪಕರಣಗಳೇ. ನೇಗಿಲನ್ನು ಮಾಡುವವನೂ ಅವನೇ. ಬಟ್ಟ-ಬುಟ್ಟಿ ಹೆಣೆಯುವವನೂ ಅವನೇ.
ಜೈನಧರ್ಮದಲ್ಲಿ ಸಂಘಜ್ಞಾನ, ಸಂಘಚರಿತಾ, ಸಂಘ ಅನುಭÊ ಎಂಬ ಪರಿಕಲ್ಪನೆಗಳಿವೆ. ಎಲ್ಲದಕ್ಕೂ ಸಂಘವೇ ಪ್ರಧಾನ. ಕೃಷಿ ಬಿಟ್ಟು ನಗರಮುಖೀಯಾಗುವವರ ಮುಖ- ಮನಸ್ಸಿನೊಳಗೆ ಈ ಮೇಲಿನ ಕೊರತೆ ಕಾಡುತ್ತದೆ. ಹಿಂದೆ ಸಾಗುವಳಿಯಲ್ಲಿ ಸಹಜವಾಗಿಯೇ ಅಂಟಿಕೊಂಡಿದ್ದ ಸಹಕಾರ-ಅವಲಂಬನೆಯಲ್ಲಿ ಒಂದು ಒಗ್ಗಟ್ಟು ಇತ್ತು. ಅದೊಂದು ಕೂಡು ಸಂಯುಕ್ತ ಕಲ್ಪನೆ. ರೈತನೊಬ್ಬನ ಹಟ್ಟಿಯ ಹಸು, ರಾಸು ಸತ್ತಾಗ ಅದನ್ನು ಮಣ್ಣಿಗೆ ಇಳಿಸಲು, ರೈತನೊಬ್ಬ ಕಾಯಿಲೆ ಬಿದ್ದಾಗ ಆತನನ್ನು ದವಾಖಾನೆಗೆ ಸಾಗಿಲು ಜಾತಿ, ಮತ, ಧರ್ಮ ಮರೆತು ಜನ ಸೇರುತ್ತಿದ್ದರು. ಹಳ್ಳಿಯಲ್ಲಿ ಅಸಹಜ ಸಾವಾದರೆ ಕ್ಷಣಕ್ಕೆ ಸಾವಿರ ಜನ. ಸಾವಿರ ಕಥೆಗಳು. ವಯಸ್ಸಿಗೆ ಬಂದ ಹಳ್ಳಿ ಹುಡುಗಿ ನಾಪತ್ತೆಯಾದರೆ ಅದು ಇಡೀ ಊರಿನ ಮರ್ಯಾದೆಯ ಪ್ರಶ್ನೆ. ಆ ಮಾನ, ಗೌರವ, ಅನುಮಾನ ಆ ಊರಿನ ಕ್ರೈಸ್ತರೂ ಆಗಬಹುದು, ಮುಸ್ಲಿಮರೂ ಆಗಬಹುದು, ಹಿಂದೂ, ಜೈನರೂ ಆಗಬಹುದು. ಎಲ್ಲರೂ ತನ್ನೂರಿನ ಹುಡುಗಿಯನ್ನು ಹುಡುಕುತ್ತಾರೆ. ಕಾರಣನಾದವನನ್ನು ತದಕುತ್ತಾರೆ. ಜತನದಿಂದ ಆ ಬಾಲೆಯ ಕಣ್ಣೀರು ಒರೆಸಿ ಸಾಂತ್ವನ ಹೇಳುತ್ತಾರೆ. ಆದರೆ, ಈಗ ಅದು ಯಾವ ಜಾತಿಯ ಹುಡುಗ, ಯಾರ ಜಾತಿಯ ಹುಡುಗಿ ಎಂಬುದು ಮುಖ್ಯವಾಗುತ್ತದೆ. ಇವತ್ತಿಗೂ ಹಳ್ಳಿಗಳಲ್ಲಿ ಹೊರಗಡೆಯ ಹಸಿರು ದಟ್ಟವಾಗಿರಬಹುದು. ಆದರೆ, ಒಳಗಡೆಯ ಹಸಿರು ಬತ್ತುತ್ತಿದೆ. ಮನಸ್ಸು ನಿಧಾನವಾಗಿ ಬರಡಾಗುತ್ತಿದೆ.
ನಿಜವಾಗಿ ಕೃಷಿಯ ಪರಿಭಾಷೆಯೇ ಮನುಷ್ಯನನ್ನು ಒಂಟಿಯಾಗಿ ನೋಡಲು ಸಾಧ್ಯವಾಗದೇ ಇರುವುದು. ನಿಧಾನವಾಗಿ ಇಂದು ಹಳ್ಳಿ ಮೂಲದ ಬಹುತ್ವ ಜ್ಞಾನ ಏಕ ಮಾದರಿಗೆ ಜಾರುತ್ತಿದೆ. ಹಳ್ಳಿಯಲ್ಲಿ ನೊಗ-ನೇಗಿಲು, ಕತ್ತಿ ಮಾಡುವ ಬಡಗಿ ಭತ್ತ ನೋಡುವುದು, ರೈತ ಕತ್ತಿ ಮಾಡುವುದನ್ನು ನೋಡುವುದು, ಅನ್ನ ತಿನ್ನುವ ಮಗು ಭತ್ತ ಕುಟ್ಟುವುದನ್ನು ನೋಡುವುದು, ಕತ್ತಿ ಮಾಡುವವ ಮಡಕೆ ಮಾಡುವುದನ್ನು ಗಮನಿಸುವುದು- ಹೀಗೆ ಗ್ರಾಮ ಕಟ್ಟುವ, ಅನ್ನಸೃಷ್ಟಿಯ ಎಲ್ಲಾ ಸೂಕ್ಷ್ಮತೆಗಳು ಎಲ್ಲರಿಗೂ ಗೊತ್ತಾಗಿ ಆ ಗಮನಿಸುವ ‘ಗ್ರಾಮ ಬಂಧ’ ಸಾಮಾಜಿಕವಾಗಿ ಹೆಚ್ಚು ನೈತಿಕವಾಗಿರುತ್ತಿತ್ತು.
ಬೆವರು ಮತ್ತು ಶ್ರಮದ ಮೌಲ್ಯಮಾಪನದ ಸಾಮೀಪ್ಯ ಮತ್ತು ಕಣ್ಣೆದುರಿನ ಸೃಷ್ಟಿಕ್ರಿಯೆ, ಕೊಂಡುಕೊಳ್ಳುವ ಪ್ರಕ್ರಿಯೆಗಳೇ ಭಾರತೀಯ ಗ್ರಾಮಗಳ ನಿಜವಾದ ಅಂತಃಶಕ್ತಿ. ಇಂದಿನ ಭಾರತೀಯ ಗ್ರಾಮಲೋಕದಲ್ಲಿ ನಮಗೆ ನೇಗಿಲು ಸಿಗುತ್ತದೆ. ನೇಗಿಲು ಮಾಡುವವನು ಸಿಗುವುದಿಲ್ಲ. ಮಡಿಕೆ ಸಿಗುತ್ತದೆ, ಮಡಿಕೆ ಮಾಡುವ ಕುಂಬಾರ ಸಿಗುವುದಿಲ್ಲ. ಗ್ರಾಮದಂಗಡಿಗಳಲ್ಲಿ ಬದನೆ, ಸೌತೆ, ನೀರುಳ್ಳಿ ಸಿಗುತ್ತದೆ. ಆದರೆ ರೈತ ಸಿಗುವುದಿಲ್ಲ. ಗದ್ದೆ-ಹೊಲವೇ ಇಲ್ಲದವನು ಉಣ್ಣುವುದು, ನೆಲ ಇಲ್ಲದವನು ತಿನ್ನುವುದು ಇಲ್ಲಿ ಕಾಣಿಸದೇ ಇರುವ ಕೃಷಿಮೂಲ ಉಪಕ್ರಮಗಳೇ ಇಂದು ರೈತರನ್ನು ಮತ್ತು ಕೃಷಿಯನ್ನು ಎಲ್ಲರೂ ದೂಷಿಸಲು, ದೂರವಾಗಲು ಕಾರಣವಾಗುತ್ತಿದೆ!
ಇಂದು ಆಹಾರದ ವಿಚಾರದಲ್ಲಿ ಸ್ವಾವಲಂಬಿ ರೈತರು ಇಲ್ಲವೇ ಇಲ್ಲ. ಅವನು ತಿನ್ನುವ ಬಹುಪಾಲು ಆಹಾರ ಎಲ್ಲಿಂದಲೋ ಬರುತ್ತದೆ. ಹಾಗೆಯೇ ಅವನು ಬೆಳೆದದ್ದು ಕೂಡಾ ಎಲ್ಲಿಗೋ ಹೋಗುತ್ತದೆ. ಈ ಎಲ್ಲಿಂದಲೋ ಮತ್ತು ಎಲ್ಲಿಗೋ ಎಂಬ ಅಂತರಗಳು ರೈತರನ್ನು ಒಂದೇ ಕಡೆ ಸೇರಿಸುವುದಿಲ್ಲ. ಕೃಷಿಯಲ್ಲಿ ಜ್ಞಾನದ ನಿಯಂತ್ರಣ ರೈತರಿಂದ ತಪ್ಪಿಹೋಗಿ ಅದು ಬೀಜ, ಯಂತ್ರ, ಗೊಬ್ಬರ ಮಾರುವವರ ಕೈಸೇರಿದೆ. ಇದರಿಂದ ರೈತ ತನ್ನ ತೋಟ, ತನ್ನ ಹೊಲದಲ್ಲೇ ಪರಕೀಯವಾಗತೊಡಗಿದ್ದಾನೆ. ಈ ಒಡೆತನ ಪರಾಧೀನಗೊಂಡಾಗ ತನ್ನ ಉತ್ಪಾದನೆ-ಮಾತು, ವ್ಯವಹಾರ ಸಾಚಾ ಆಗಿರಬೇಕೆಂಬ ವಾರಸುದಾರಿಕೆಯೂ ತಪ್ಪುತ್ತದೆ.
ಹಿಂದೆ ರೈತ ಬೆಳೆದ ಅನ್ನವೇ ಅವನ ಮುಖವಾಗಿತ್ತು. ಅವನು ಬೆಳೆಸಿದ ರಾಸು, ಅವನು ಕಟ್ಟಿದ ಮನೆ, ಅವನು ನಿರ್ಮಿಸಿದ ತೋಟ, ಗದ್ದೆ ಎಲ್ಲವೂ ಅವನ ಮನಸ್ಸು- ಭಾವನೆಯಾಗಿರುತ್ತಿತ್ತು. ರೈತ ಯಾವತ್ತೂ ತನ್ನ ಉತ್ಪನ್ನಗಳ ಮೇಲೆ ಹೆಸರು ಕೆತ್ತಲು ಹೋಗಲೇ ಇಲ್ಲ. ಯಾರೇ ಬೆಳೆದ ಬೆಳೆ ಇರಬಹುದು ರೈತರಿಗೆ ಅದು ತನ್ನದೇ ಬೆಳೆ ಎಂಬ ಭಾವನೆ ಇತ್ತು. ಬಿತ್ತುವ ಬೀಜ, ಉಳುವ ಯಂತ್ರ, ಹಾಕುವ ಗೊಬ್ಬರ ಯಾವುದೂ ರೈತನ ಕೈ-ಮನಸ್ಸಿನ ನಿಯಂತ್ರಣದಲ್ಲಿ ಇಲ್ಲದೆ ಇದ್ದಾಗ ರೈತಯೋಗಿಯೊಳಗೆ ಕಾಯಕನಿಷ್ಠೆ ಉಳಿಯುವುದಾದರೂ ಹೇಗೆ?
– ನರೇಂದ್ರ ರೈ ದೇರ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.