ಭಕ್ತಿ ಎಂಬ ಜೀವರಸ
Team Udayavani, Apr 30, 2017, 3:45 AM IST
ಅಮೆರಿಕದ ಸಾಹಿತ್ಯ ರಂಗ ಸಂಸ್ಥೆಯ ಬೋಸ್ಟನ್ ನಗರದಲ್ಲಿ ನಿನ್ನೆ ಮತ್ತು ಇಂದು (ಎ. 29, 30) ವಸಂತ ಸಾಹಿತ್ಯೋತ್ಸವ ನಡೆಯುತ್ತಿದೆ. ಇದರಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು “ಭಕ್ತಿ’ ಎಂಬ ವಿಷಯದ ಕುರಿತು ಪ್ರಧಾನ ಭಾಷಣಮಾಡಲಿದ್ದು ಅದರ ಆಯ್ದ ಭಾಗ ಇಲ್ಲಿದೆ…
ಇದೊಂದು ಅಪೂರ್ವ ಸಂದರ್ಭ. ಇಲ್ಲಿ ಪೂರ್ವ-ಪಶ್ಚಿಮ ಸೇರಿದಂತಿದೆ. ಪ್ರಾಚೀನ-ನೂತನ ಸೇರಿದಂತಿದೆ. ಕನಸು ಮತ್ತು ವಾಸ್ತವ ಸೇರಿದಂತಿದೆ. ಆಧುನಿಕ ನಾಗರಿಕತೆಯ ಕೇಂದ್ರವಾದ ಪಶ್ಚಿಮ ಅಮೆರಿಕದ ಪೂರ್ವಭಾಗದ ಈ ಬೋಸ್ಟನ್ ನಗರದಲ್ಲಿ, ಪೂರ್ವಭಾರತದಲ್ಲಿ ಅರಳಿದ್ದ ಪ್ರಾಚೀನ ನಾಗರಿಕತೆಯೊಂದರ ಜೀವಾಳವಾದ “ಭಕ್ತಿ’ ಎಂಬ ಸಂವೇದನೆ ಮತ್ತೆ ನಮ್ಮಲ್ಲಿ ಅರಳಿಕೊಳ್ಳಲನುವಾಗುವಂತೆ ನಾವು ಇಲ್ಲಿ ಸೇರಿದ್ದೇವೆ-ಒಂದೇ ಕುಟುಂಬದ ಮಂದಿಯಂತೆ. ಕನಸು ಮತ್ತು ವಾಸ್ತವ ಸೇರಿದಂತಿದೆ ಎಂದೆ. ಪ್ರಾಚೀನ ಮತ್ತು ನೂತನರನ್ನು ಒಂದುಗೂಡಿಸುವುದು “ವೇದ’ಗಳ ಕನಸಾಗಿತ್ತು ಎಂದರೆ ಆಶ್ಚರ್ಯಪಡಬೇಡಿ. ಮನುಕುಲದ ಅತ್ಯಂತ ಪ್ರಾಚೀನ ವಾš¾ಯವಾದ ಋಗ್ವೇದದ ಮೊದಲ ಋಕ್‌ನಲ್ಲಿ “ಪೂರ್ವಿಕ’ ಮತ್ತು “ನೂತನ’ ಎಂಬ ಎರಡು ಪದಗಳೂ ಬಂದಿವೆ. “ಅಗ್ನಿ! ಪೂರ್ವೆàಭಿಃ ಋಷಿಭಿಃ ಈಡ್ಯಃ ನೂತನೈಃ ಉತ’ -ನಮ್ಮ “ಪೂರ್ವಜ’ರಿಂದ ಸ್ತುತ್ಯನಾದ ಅಗ್ನಿ , ಈಗ “ನೂತನ’ರಿಂದಲೂ ಸ್ತುತ್ಯನಾಗುವುದಕ್ಕೆ ಯೋಗ್ಯನಿದ್ದಾನೆ ಎಂಬ ಅದ್ಭುತವಾದ ಆಶಂಸೆ ಇಲ್ಲಿದೆ!
ಯೋಚಿಸಿ ನೋಡಿ, ಲಭ್ಯವಿರುವ ಅತ್ಯಂತ ಪ್ರಾಚೀನವಾದ ವಾš¾ಯವಿದು-ವೇದ. ಈ ಅರ್ಥದಲ್ಲಿ ಮನುಕುಲದ ಮೊದಲ ಮಾತು. ಮೊದಲ ಆಶಯ. ಈ ಆಶಯ “ಪೂರ್ವಿಕ’ ಮತ್ತು “ನೂತನ’ರನ್ನು ಬೆಸೆಯುವ ಆಶಯವಾಗಿದೆ! ಈ ಮಾತಿನ ಮೂಲಕ ಸೃಷ್ಟಿಯೇ ತನ್ನ ಆಶಯವನ್ನು ಪ್ರಕಟಿಸಿಕೊಳ್ಳುತ್ತಿದೆ ಎನ್ನಬಹುದು. “ಸೃಷ್ಟಿ’ ಎಂದರೆ ಒಂದು ಬೆಸುಗೆ ಎಂಬ ಆಶಯ!
ಪ್ರಾಚೀನ-ನೂತನ ಎಂಬ ಕಾಲಭೇದಗಳು, ಪೂರ್ವ-ಪಶ್ಚಿಮ ಎಂಬ ದೇಶಭೇದಗಳು, ಬಿಳಿ-ಕಂದು-ಕಪ್ಪು ಎಂಬ ವರ್ಣಭೇದಗಳು, ಗಂಡು-ಹೆಣ್ಣು ಎಂಬ ಲಿಂಗಭೇದಗಳು, ಮಾರ್ಗ-ದೇಸಿ, ಶಾಸ್ತ್ರೀಯ- ಜಾನಪದ ಎಂಬ ಸಾಂಸ್ಕೃತಿಕ ಭೇದಗಳು, ಸಾವಿರಾರು ಭಾಷೆಗಳ ನುಡಿಭೇದ-ನಡೆಭೇದಗಳು, ನಾಮ-ರೂಪಗಳು ಇವೆಲ್ಲವೂ ಒಂದರೊಳಗೊಂದು ಹೆಣೆದುಕೊಂಡಿವೆ; ಬೆಸೆದುಕೊಂಡಿವೆ ಎಂಬ ಮಹಾನ್ ಆಶಯ!
ಇಂಥ ಮಹಾನ್ ಆಶಯವೊಂದು “ಮಾತಿಗೆ’ ಅದರಲ್ಲೂ “ಮೊತ್ತಮೊದಲ ಮಾತಿಗೆ’ ಹೊಳೆದದ್ದಾದರೂ ಹೇಗೆ? ನಾಗರಿಕತೆ ಇನ್ನೂ ಬೆಳೆಯದೆ ಇದ್ದಾಗ? ಇನ್ನೂ ಕಣ್ತೆರೆಯದೆ ಇದ್ದ ಕಾಲದಲ್ಲಿ? ಅಂದರೆ ಮಾತು ಹೊರ ಜಗತ್ತನ್ನು ನೋಡಿ ಹೊರನೋಟದಿಂದ ಇಂಥ ಆಶಯವನ್ನು ತಿಳಿದುಕೊಳ್ಳಲಾಗದ ಕಾಲದಲ್ಲಿ? ಇತಿಹಾಸಪೂರ್ವ ಕಾಲದಲ್ಲಿ?- ಮಾತಿಗೆ ತನ್ನನ್ನು ಕುರಿತ ಒಳನೋಟದಿಂದಲೇ ಈ ಆಶಯ ಹೊಳೆಯಿತು! ತಾನು ಈ ಸೃಷ್ಟಿಯೊಳಗಣ “ಅನುಸೃಷ್ಟಿ’ ಎಂದು ಹೊಳೆಯುವುದಕ್ಕೆ, ತಾನು ಈ ಸೃಷ್ಟಿಯ ಅವಿಭಾಜ್ಯ ಅಂಗ ಎಂದು ಹೊಳೆಯುವುದಕ್ಕೆ ಒಂದೇ ಒಂದು ಒಳನೋಟ, ಮಿಂಚಿನಂಥ ಒಂದು ಹೊಳಹು-ಸಾಕು. ತಾನು ಈ ಸೃಷ್ಟಿಯೊಳಗಣ ಸೃಷ್ಟಿ ಎಂದು ಹೊಳೆದ ಕ್ಷಣದಲ್ಲಿ ಮಾತಿಗೆ ಸೃಷ್ಟಿಯ ಇಂಗಿತವೇನು ಎಂದು ಮನವರಿಕೆಯಾಯಿತೆನ್ನಬಹುದು. ತನ್ನ ಅನುಭವವೇ ತನ್ನ ಮನವರಿಕೆ! ತನ್ನ ಅನುಭವವೆಂದರೆ-ಈ ಸೃಷ್ಟಿಯ ಜೊತೆ ತಾನು ಬೆಸೆದುಕೊಂಡಿದ್ದೇನೆ ಎನ್ನುವುದು ತನ್ನ ಅನುಭವ-ಮಾತಿಗೆ. ಈ ಅನುಭವವೇ, ಅದು ಸೃಷ್ಟಿಯ ಎಲ್ಲೆಡೆಯೂ ತಾನು ಮನವರಿಕೆ ಮಾಡಿಕೊಂಡ ಸತ್ಯ!
ಈ ಅರ್ಥದಲ್ಲೇ, ಪೌರಾಣಿಕವಾಗಿ, ಸೃಷ್ಟಿಕರ್ತನನ್ನು ಬ್ರಹ್ಮ ಎಂದು ಕರೆಯುವರು. ಮಾತಿನ ಮತ್ತು ಸಕಲ ಕಲೆಗಳ ಅಧಿದೇವತೆಯನ್ನು “ಸರಸ್ವತಿ’ ಎಂದು ಕರೆದು ಸರಸ್ವತಿಯು ಬ್ರಹ್ಮನ ಮಡದಿ-ಮನೆಯಾಕೆ ಎಂದು ಕರೆಯುವರು. ಬ್ರಹ್ಮನ ಇಂಗಿತವನ್ನು ಸರಸ್ವತಿಯು ಪ್ರಕಟಿಸುವಳು-ಅದಕ್ಕಾಗಿಯೇ ಸರಸ್ವತಿ ಸೃಷ್ಟಿಯಾದುದು ಎನ್ನುವರು. ಮಾತಿಗೆ ತನ್ನ ಅರಿವು ಬಂದ ಕ್ಷಣದಲ್ಲಿ ಅದು ಸೃಷ್ಟಿಯ ಅರಿವನ್ನೇ ಪ್ರಕಟಿಸುವುದು. ತನ್ನ ಅರಿವು ಬಂದ ಕ್ಷಣ ಮಾತಿಗೆ ಹೊಸ ಹುಟ್ಟು! ಹೊಸ ಹುಟ್ಟೆಂದರೆ ಅದು ಶಿಶಿರ ಕಳೆದು ನವವಸಂತದ ಉದಯ!
ವಸಂತವೆಂದರೆ ಹೊಸ ಚಿಗುರು
ಅಮೆರಿಕದಲ್ಲಿರುವ ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾದಿಯಾಗಿ ನನ್ನ ಹಿರಿ-ಕಿರಿಯ ಸ್ನೇಹಿತರು, ವಸಂತ ಸಾಹಿತ್ಯೋತ್ಸವವನ್ನು ಆಚರಿಸುತ್ತಿದ್ದೀರಿ. ಆಚರಿಸುತ್ತಿದ್ದೇವೆ. ಸಾಹಿತ್ಯವೆಂದರೆ “ಮಾತು’. ವಸಂತವೆಂದರೆ ಹೊಸ ಚಿಗುರು. ಹೊಸ ಟಿಸಿಲು. ಹೊಸ ಜೀವ. “ಕಸಾರಂ’ (ಕನ್ನಡ ಸಾಹಿತ್ಯರಂಗ) ಎಂಬುದನ್ನು “ಕಾಸಾರಂ’ ಎಂದು ಓದಿಕೊಳ್ಳುವುದು ನನಗೆ ಇಷ್ಟ. “ಕಾಸಾರ’ ಎಂದರೆ ಸರೋವರ. ಹಿಮಕರಗಿದ ಅಚ್ಚ ತಿಳಿನೀರಿನ ಅಚೊfàದ ಸರೋವರ. “ಸರಸಿ’ ಎಂದರೂ ಸರೋವರ. ಸರಸವಾದ ಮಾತುಗಳನ್ನಾಡುವ ಜೀವ ಎಂದೂ ಅರ್ಥ! ಮಾತಿಗೆ ರಸ ಒದಗುವುದು ಮಾತು “ತಿಳಿ’ಯಾದಾಗ. ಪಾರದರ್ಶಕವಾದಾಗ. ತನ್ನೊಳಗನ್ನು ಪ್ರತಿಫಲಿಸುವಾಗ. ತನ್ನೊಳಗನ್ನು ತೆರೆದಿಟ್ಟಾಗ. ಪ್ರತಿಫಲನವು ಬೆಳಕಿನ ಸಹಜಸ್ವಭಾವವಾಗಿದೆ. ಮಾತೆನ್ನುವುದು ಬೆಳಕೂ ಆಗಿದೆ. ಆದುದರಿಂದಲೇ ಮಾತು “ಸ್ಫಟಿಕದ ಶಲಾಕೆ’ಯಂತಿರಬೇಕು ಎನ್ನುವರು ಬಸವಣ್ಣ. “ಜ್ಯೋತಿರ್ಲಿಂಗ’ ಎನ್ನುವರು ಮಾತನ್ನು ಅಲ್ಲಮಪ್ರಭು. “ವಚನ ರಚನೋದ್ಧಾರೆ’ ಎಂದು ಸರಸ್ವತಿಯನ್ನು ಬಣ್ಣಿಸುವನು ಕುಮಾರವ್ಯಾಸ. ತನ್ನ ರಚನೆಯ ಅರಿವು ಪಡೆದ ಮಾತು ತಾನು ಉದ್ಧಾರವಾಗಿ ಕೇಳುಗರನ್ನೂ ಉದ್ಧರಿಸಬಲ್ಲುದು-ಎನ್ನುವುದು ಈ ಬಣ್ಣನೆಯ ಅರ್ಥ. ಇಂಥ ಸರಸ್ವತಿಯನ್ನು ಸರ್ವಶುಕ್ಲಾ ಸರಸ್ವತೀ ಎನ್ನುವರು. ಸರಸ್ವತಿ ಮೈಯೆಲ್ಲ-ಬೆಳಕಿನ ಮೈ ಎಂದಂತೆ. ಅಷ್ಟೇಕೆ? ವೇದದಲ್ಲಿ “ಅಗ್ನಿ’ ಎಂದಾಗ, ಅದು ಅರಣಿಮಥನ ಮಾಡಿ ಪಡೆದ ಕಿಡಿ ಹೊತ್ತಿ ತಮ್ಮೆದುರು ಉರಿಯುತ್ತಿರುವ “ಬೆಂಕಿ’ ಮಾತ್ರವಲ್ಲ, “ಅಗ್ನಿ’ ಎಂದರೆ ಮಾತೂ ಹೌದು! “ವಾಗಗ್ನಿ’ ಎಂದರು. ಅಗ್ನಿರ್ವಾಗ್ ಭೂತ್ತಾÌ ಮುಖಂ ಪ್ರಾವಿಶತ್ ಅಗ್ನಿಯೇ “ವಾಕ್’ ಆಗಿ ವಿರಾಟ್ ಪುರುಷನ ಮುಖದಲ್ಲಿ ನೆಲೆಯಾಯಿತು-ಎಂದರು. ಅಗ್ನಿ ಎಂದರೆ ಬೆಳಕಲ್ಲವೆ? “ಮಾತು’ ಕೂಡಾ ಬೆಳಕೇ.
ಅಗ್ನಿಯು ನಾವೆರೆದ ಹವಿಸ್ಸನ್ನು ದೇವತೆಗಳಿಗೆ ಒಯ್ದು ಮುಟ್ಟಿಸಬಲ್ಲನೆಂದರು. “ಹವ್ಯವಾಹನ’ನೆಂದು ಅಗ್ನಿಯನ್ನು ಕರೆದರು. ಹೀಗೆ ಕರೆದಾಗ, ಮನುಷ್ಯರ ಮಾತು ದೇವತೆಗಳನ್ನು ಮುಟ್ಟಬಲ್ಲುದು ಎನ್ನುವ ಒಳನೋಟದ ಅರ್ಥವನ್ನು ಸೂಚಿಸಿದರು. ಹೀಗೆ ಸೂಚಿಸುವಾಗ, ಮಾತು, ಮನುಷ್ಯರನ್ನೂ ದೇವತೆಗಳನ್ನೂ ಬೆಸೆಯಬಲ್ಲುದು ಎಂಬ ಅಪೂರ್ವ ಗ್ರಹಿಕೆಯನ್ನು ಮಂಡಿಸಿದರು! ಈ ಹಿನ್ನೆಲೆಯಲ್ಲಿ “ಪೂರ್ವಿಕ’ ಮತ್ತು “ನೂತನ’ ಎಂಬ ಪದಗಳನ್ನು ನೋಡಿದರೆ, ಪೂರ್ವಿಕರೆಂದರೆ ದೇವತೆಗಳು, ನೂತನರೆಂದರೆ ಮನುಷ್ಯರು ಎಂಬ ಹೊಸ ಅರ್ಥ ಹೊಳೆಯುವುದು. ಮನುಷ್ಯರೆಲ್ಲರೂ ನೂತನರು. ದೇವತೆಗಳೆಲ್ಲರೂ ಪೂರ್ವಿಕರು. ದೇವತೆಗಳನ್ನು , ಮನುಷ್ಯರನ್ನೂ ಬೆಸೆಯಬೇಕೆಂದಿರುವ ಮಾತು, ನೂತನರಾದ ಮನುಷ್ಯ ಸಮುದಾಯವನ್ನು ಬೆಸೆಯುವುದಿಲ್ಲವೆ? ವೇದವೆಂದರೆ ಹಳೆಯ ಮಾತು! “ಪಳನುಡಿ’ ಎಂದೇ ವೇದಕ್ಕೆ ಹಳೆಗನ್ನಡದಲ್ಲಿ ಕರೆದಿದ್ದಾರೆ. ಇಂಥ ವೇದಕ್ಕೆ, ತಾನು “ನೂತನ’ವಾಗಿ ನೂತನರಾದ ಮನುಷ್ಯರನ್ನು ಮುಟ್ಟುವ ಹಂಬಲ! ಯಾವುದೋ ಒಂದು ದಿನ-ತನ್ನೊಳಗಿನ ವಸಂತೋದಯದ ದಿನ ಪುಳಕಿತಗೊಂಡು ವೇದ ಈ ಮಾತನ್ನು ನುಡಿದಿರಬೇಕು!
ಮಾತು “ತಿಳಿ’ಯಾದಾಗ ಅಲ್ಲಿ ಬೆಳಕಿನ ಚಮತ್ಕಾರಗಳು ನಡೆಯುವವು. “ತಿಳಿ’ ಎಂದಾಗ ಸ್ವತ್ಛವೂ ಹೌದು. “ತಿಳುವಳಿಕೆ’ಯೂ ಹೌದು. ಇವೆರಡೂ ಪರಸ್ಪರ ಬೆಸೆದುಕೊಂಡಿರುವ ಅವಸ್ಥೆಗಳು. ಮಾತು-ತಿಳಿಯಾಗದೆ ಮನಸ್ಸು ತಿಳಿಯಾಗದು. ಮನಸ್ಸು ತಿಳಿಯಾಗದೆ ಅಲ್ಲಿ ಹೊಸ ಹೊಳಹು ಹೊಳೆಯದು. ತಿಳುವಳಿಕೆ ಎಂದರೆ ಹೊಳಹು. Flash ಒಳನೋಟದಿಂದ ಪಡೆಯುವ ಅರಿವು. ಬರಿಯ ಸಿದ್ಧ ಮಾಹಿತಿಗಳಲ್ಲ. ರಾಗ-ದ್ವೇಷಗಳ ಸಮರ್ಥನೆಗಳಲ್ಲ. “ಹೊಳಹು’ ಎನ್ನುವುದು ವಸಂತಾಗಮನದಂತೆ! ಅದೊಂದು ಜೀವದಾಯಕವಾದ ಉಲ್ಲಾಸದ ಚಿಗುರು!
ಈ “ಬಾಸ್ಟನ್’ ನಗರದಲ್ಲಿ ವಸಂತ ಸಾಹಿತ್ಯೋತ್ಸವವನ್ನು ತಾವು ನಡೆಯಿಸುತ್ತಿದ್ದೀರಿ. ಬಾಸ್ಟನ್, ವಿಖ್ಯಾತ ಕವಿ; ಅನುಭಾವಿ; ಕ್ರಾಂತಿಕಾರಿ ಖಲೀಲ್ ಗಿಬ್ರಾನ್ ನೆಲೆಸಿದ್ದ ನಗರ ಎಂದು ನೆನಪು ಮಾಡಿಕೊಳ್ಳುವುದು ನನಗೆ ತುಂಬ ಸಂತೋಷ. ನೂರ ಇಪ್ಪತ್ತು ವರ್ಷಗಳಿಗೂ ಹಿಂದೆ ಗಿಬ್ರಾನ್, ಕೆಲವು ವರ್ಷಗಳ ಕಾಲ ಇಲ್ಲಿದ್ದ. ಅದೊಂದು ಬಗೆಯ ಅನಿರ್ವಚನೀಯ ಉದ್ವಿಗ್ನತೆಯಲ್ಲಿ ಬದುಕಿದ್ದ ಗಿಬ್ರಾನ್, ತನ್ನ ಮನುಜಗೀತೆ ಎಂಬ ಕವಿತೆಯಲ್ಲಿ “ನೆಮ್ಮದಿ’ಯ ನಾಡು ಭಾರತದಿಂದ ನಾನು ವಿವೇಕವನ್ನು ಪಡೆದೆ ಎಂಬ ಸಾಲುಗಳನ್ನು ಬರೆದಿದ್ದಾನೆ. ಅವನ ಉದ್ವಿಗ್ನತೆಯನ್ನೂ ಅದರ ನಡುವೆಯೇ ಈ ಸಾಲನ್ನೂ ನೆನೆಯುವುದು ನನ್ನೊಳಗನ್ನು ಅರ್ಥಪೂರ್ಣವಾಗಿಸಲು ನನಗೆ ಮುಖ್ಯವೆನಿಸುತ್ತದೆ. ಉದ್ವಿಗ್ನ ಗಿಬ್ರಾನ್ ನೂತನ ಮನುಷ್ಯನಾಗಿದ್ದ. ಪೂರ್ವಭಾರತವನ್ನು ನೆನೆಯುತ್ತಿದ್ದ!
ಅಗಲಿಕೆ ಮತ್ತು ಬಿಟ್ಟಗಲಿ ಬಂದುದರ ಉತ್ಕಟ ನೆನವರಿಕೆ-ಮನುಷ್ಯ ಜೀವನದ ಮೂಲಪಾಡಾಗಿದೆ ಎಂದು ಅನಿಸುತ್ತದೆ. ಇದು ಮನುಷ್ಯರಿಗೆ ಮಾತ್ರ ಸೀಮಿತವಲ್ಲದ, ಸಹಜ ನೈಸರ್ಗಿಕ ವಿದ್ಯಮಾನವೂ ಹೌದು. ಹಕ್ಕಿಗಳು ಅನುಕೂಲವಾದ ಪರಿಸರವನ್ನು ಹುಡುಕಿಕೊಂಡು ಕಡಲುಗಳನ್ನು ದಾಟಿ, ಖಂಡಗಳನ್ನು ದಾಟಿ ವಲಸೆ ಹೋಗುತ್ತವೆ. ಹಾಗೆ ವಲಸೆ ಹೋದರೂ ತಾವು ಬಿಟ್ಟು ಬಂದ ಪರಿಸರವನ್ನು ನೆನೆಯುತ್ತಲೇ ಇರುತ್ತವೆ. ಆದುದರಿಂದಲೇ ಮರಳಿ ತಮ್ಮ ಮೂಲನೆಲೆಗೆ ಹಾರಿಹೋಗುತ್ತದೆ. ಹಕ್ಕಿಗಳ ಮನದಾಳದಲ್ಲಿ, ಅವುಗಳ ಅಸಂಖ್ಯ ಜೀವಕೋಶಗಳಲ್ಲಿ ಈ ಮೂಲಸ್ಮತಿ ಹುದುಗಿರುತ್ತದೆ. ಇದನ್ನೊಪ್ಪಿದರೆ ಈ ಹಕ್ಕಿಗಳು ದೈಹಿಕವಾಗಿ ಮಾತ್ರ ತಮ್ಮ ಮೂಲ ಪರಿಸರವನ್ನು ಅಗಲಿ ಬಂದಿವೆ; ಅಷ್ಟೆ. ತಮ್ಮ ಒಳಮನದಲ್ಲಿ ಅವು ಎಂದೂ ತಮ್ಮ ಮೂಲನೆಲೆಯನ್ನು ಅಗಲಿರಲಿಲ್ಲ-ಎಂದು ತಿಳಿಯುತ್ತದೆ. ಇಲ್ಲೊಂದು ಚಮತ್ಕಾರವಿದೆ. ಅಗಲದೆ-ದೈಹಿಕವಾಗಿ ಅಗಲದೆ- ನೆನೆಯುವುದು ಸಾಧ್ಯವಿಲ್ಲ. ನೆನೆಯದೆ ಮರಳುವುದು ಸಾಧ್ಯವಿಲ್ಲ.
ನೆನೆಯದೆ ಭಾವ ಜೀವನವಿಲ್ಲ. ನೆನೆಯದೆ ನಮ್ಮ ಭಾವಜೀವನದ ಅರಿವು ನಮಗೇ ಉಂಟಾಗುವುದಿಲ್ಲ! ಅಕ್ಕ ಮಹಾದೇವಿ ತಾನು ತನ್ನ ಚೆನ್ನಮಲ್ಲಿಕಾರ್ಜುನನನ್ನು ನೆನೆವ ಬಗೆಯನ್ನು ಹೀಗೆ ಹೇಳುತ್ತಾಳೆ. ಹಿಂಡನಗಲಿದ ಸಲಗ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ನಾ ನಿಮ್ಮ ಎನ್ನುತ್ತಾಳೆ. ಅದ್ಭುತವಾದ ಉಪಮೆ ಇದು. ತನ್ನ ವಿಂಧ್ಯ, ತನ್ನ ಹಿಂಡು, ತಾನು-ಇವೆಲ್ಲ ಅಖಂಡವಾಗಿ ಒಂದಾಗಿತ್ತು. ಅಖಂಡತೆಯ ಆ ಭಾವದಲ್ಲಿ ತಾನು ಬೇರೆ, ತನಗೊಂದು ಬೇರೆಯೇ ಆದ ವ್ಯಕ್ತಿತ್ವವಿದೆ ಎಂಬ ಭಾವನೆಯೇ ಉಂಟಾಗಿರಲಿಲ್ಲ. ಅದೊಂದು ಮುಗ್ಧ ಬಾಲ್ಯವಾ ಗಿತ್ತು. ಯಾವುದೋ ಕಾರಣದಿಂದ ಹಿಂಡನ್ನು ಆನೆ ಅಗಲಿತು. ಅಗಲಿದ ಆನೆಗೆ ಆ ಅಗಲಿಕೆಯ ಕಾರಣದಿಂದಾಗಿಯೇ ತನ್ನ ಪ್ರತ್ಯೇಕವಾದ ವ್ಯಕ್ತಿತ್ವದ ಅರಿವು, ತಾನು ಒಂಟಿ-ಏಕಾಂಗಿ ಎಂಬ ಅರಿವು, ಈ ಒಂಟಿತನ ಅಸಹಜವಾದದ್ದು; ವಿಲಕ್ಷಣವಾದದ್ದು ಎಂಬ ಅರಿವು, ಅಪಾಯಕಾರಿಯೂ ಆದದ್ದು ಎಂಬ ಅರಿವು-ಇವೆಲ್ಲ ಉಂಟಾಗಿವೆ. ಆಗ ಅಗಲಿ ಬಂದ ತನ್ನ ವಿಂಧ್ಯದ ನೆನಪು ಉತ್ಕಟವಾಗಿ ಒಳಗಿಂದ ಒತ್ತರಿಸಿ ಬಂದಿದೆ.
ಬದುಕಿನಲ್ಲಿ ಅಗಲುವಿಕೆ ಅನಿವಾರ್ಯವೆನ್ನಬಹುದು ಅಥವಾ ಬದುಕೆಂದರೇ ಅಗಲಿಕೆ ಎನ್ನಬಹುದು. ಹೊಕ್ಕುಳ ಬಳ್ಳಿ ತುಂಡರಿಸಿ ಮಗು ಬೇರ್ಪಡಲೇಬೇಕು. ಬೇರ್ಪಟ್ಟು ತನ್ನ ಪ್ರತ್ಯೇಕ ಅಸ್ತಿತ್ವವನ್ನೂ ಅದರ ಯಾತನೆಯನ್ನೂ ಅನುಭವಿಸಲೇಬೇಕು. ಯಾತನೆಯ ಕಾರಣದಿಂದಲೇ ಈ ಅನುಭವವು ಸಂದೇಹಾಸ್ಪದವಾಗಿಯೂ, ಪ್ರಶ್ನಾರ್ಹವಾಗಿಯೂ, ಜಿಜ್ಞಾಸೆಗೆ ಯೋಗ್ಯವಾಗಿಯೂ ಕಾಣಿಸುವುದು. ಅಗಲಿಕೆಯ ನೋವು ತೀವ್ರವಾದಂತೆ ತಾನು ಯಾವುದರಿಂದ ಅಗಲಿ ಬಂದೆನೋ ಅದರ ನೆನಪೂ ಅಷ್ಟೇ ತೀವ್ರವಾಗಿ ಮೇಲೇಳುವುದು. ಇದೊಂದು ಸೋಜಿಗ ! ಅಗಲಿಕೆಯ ನೋವು ಅಗಲಿಬಂದುದರ ನೆನಪನ್ನು ಉದ್ಬುದ್ಧಗೊಳಿಸುವ ಸೋಜಿಗ! ನಮ್ಮೊಳಗೇ ನಡೆಯುವ ಈ ಸೋಜಿಗವನ್ನು “ಭಕ್ತಿ’ ಎನ್ನುವೆವು.
ಅಕ್ಕಮಹಾದೇವಿ ತನ್ನ ಅಂತರಂಗದ ಅವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಾಳೆ. ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನಲ್ಲಿ ತನ್ನೊಳಗನ್ನು ತೋಡಿಕೊಳ್ಳುತ್ತಿದ್ದಾಳೆ. ಚೆನ್ನನನ್ನು ನೆನೆದರೆ ಸಾಲದು. ಹೇಗೆ ನೆನೆಯುತ್ತಿದ್ದೇನೆ ಎಂದು ಕೂಡ ಹೇಳಬೇಕು. ನೆನವರಿಕೆಯ ಟrಟcಛಿss ಅನ್ನೇ ಅವನ ಮುಂದಿಡಬೇಕು! ಮನೋದೈಹಿಕ ಯಂತ್ರವನ್ನೇ ಅವನಿಗೆ ಮೀಸಲು ಮಾಡಬೇಕು. ನಿನ್ನನ್ನು ನೆನೆಯುತ್ತಿದ್ದೇನೆ ಎಂದು ಹೇಳುತ್ತಲೇ ಅವನನ್ನು ನೆನೆಯಬೇಕು. ಮಾತು-ಮನಸ್ಸು ಒಂದಾದಾಗ ಆ ಮಾತಿಗೆ ಕಾವ್ಯದ ಗುಣ ಒದಗಿಬರುವ ಸೋಜಿಗವೊಂದು ಕೂಡ ನಡೆಯುವುದು. ತೋಡಿಕೊಳ್ಳುವ ಮಾತಿಗೆ ಕಾವ್ಯದ ಗುಣ. ಇಷ್ಟದೈವದ ಮುಂದೆ ಆಡುವ ಮಾತಿಗೆ ಕಾವ್ಯದ ಗುಣ. ಲೋಕದ ಮುಂದೆ ಯಾವುದೋ ವ್ಯವಹಾರಕ್ಕಾಗಿ ಆಡುವ ಮಾತಿಗಿಲ್ಲದ ಕಾವ್ಯದ ಗುಣ! “ಭಕ್ತಿ’ ಮತ್ತು “ಕಾವ್ಯ’- ಹತ್ತಿರ ಇವೆ!
ಅಕ್ಕ, ಲೋಕದ ಜೊತೆ ಮಾತಾಡುತ್ತಿಲ್ಲ. ನಿಜ. ಆದರೆ ಲೋಕ, ತನ್ನ ಅವಸ್ಥೆಯನ್ನು ತನ್ನ ಇಷ್ಟದೈವಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅನುಕೂಲವಾಗಿ ಒದಗಿಬಂದಿದೆ ಅಕ್ಕನಿಗೆ. ಹಿಂಡನಗಲಿದ ಸಲಗ ತನ್ನ ವಿಂಧ್ಯವ ನೆನೆವಂತೆ- ಎನ್ನುವುದು ಲೋಕ, ಅಕ್ಕನಿಗೆ ಒದಗಿಸಿದ ಉಪಮಾನವಲ್ಲವೆ? ಅಂದರೆ ತನ್ನ ಒಳಗಿನ ನಿಜ ತನಗೆ ತಿಳಿದಾಗ, ಲೋಕದ ನಿಜವೂ ತಿಳಿದುಬರುವುದು. ಅದುವರೆಗೆ-ತನ್ನ ನಿಜ ತನಗೆ ತಿಳಿಯದವರೆಗೆ-ಲೋಕದ ನಿಜವೂ ತಿಳಿದುಬರುವುದಿಲ್ಲ. ತಿಳಿದುಬಂದಾಗ, ತನ್ನ ಅವಸ್ಥೆಯನ್ನು ಮಾತ್ರ ಅಲ್ಲ, ಲೋಕದ ಆಂತರಿಕ ಅವಸ್ಥೆಯನ್ನೂ ತನ್ನ ಮಾತಿನಿಂದ ತೋಡಿಕೊಂಡಂತೆಯೇ ಆಗುವುದು. ತನ್ನ ಮಾತು, ಲೋಕದ ಪರವಾಗಿ ತಾನು ಆಡುತ್ತಿರುವ ಮಾತೂ ಹೌದು! “ಭಕ್ತಿ’, ಲೋಕಕ್ಕೆ ಸ್ಪಂದಿಸುವ ಬಗೆ ಇದು. “ಭಕ್ತಿ’ಗೆ ಲೋಕ ಸ್ಪಂದಿಸುವುದೇನೂ ಅಚ್ಚರಿಯಲ್ಲ!
ಭಾಗವತದ ಒಂದು ಕಥೆ
ನಮ್ಮ ಕನ್ನಡಿಗರಂತೂ “ಭಕ್ತಿ’ಗೆ ಸ್ಪಂದಿಸುವುದು-ಅವರು ಎಲ್ಲಿಯೇ ನೆಲೆಸಿರಲಿ-ಅವರ ನಾಡಿಯ ಮಿಡಿತದಲ್ಲೇ ಇರುವಂಥದು ಎಂದು ನನಗನ್ನಿಸುವುದು. ನಾಡಿಯ ಮಿಡಿತ ಮಾತ್ರವಲ್ಲ, “ಭಕ್ತಿ’ಯು ಕನ್ನಡನಾಡಿನ ಮಿಡಿತವೂ ಹೌದು. “ಭಕ್ತಿ’ಯನ್ನು ಕುರಿತೇ ಇರುವ ಉದ್ಗ†ಂಥವಾದ “ಭಾಗವತ’ದಲ್ಲಿ ಈ ಬಗೆಗೆ ಒಂದು ಕಥೆಯೇ ಇದೆ. ಕಥೆ ಹೀಗೆ: ನಾರದನೊಮ್ಮೆ ಮರ್ತ್ಯಲೋಕದಲ್ಲಿ ಅಲೆದಾಡುತ್ತಿದ್ದನಂತೆ. ಇದು ಬಹಳ ಒಳ್ಳೆಯ ಲೋಕವೆಂದು ನಾರದನಿಗೆ ಯಾರೋ ಹೇಳಿದ್ದರು. ಆದರೆ ಇಲ್ಲಿಗೆ ಇಳಿದು ಬಂದು ನೋಡಿದರೆ: ಶಾಂತಿಯ ಮಾತೇಕೆ? ಮನಸ್ಸಿಗೆ ಸಂತೋಷವೇ ಇಲ್ಲವಾಗಿದೆ. ಅದೇಕೆಂದರೆ-ಹೊಟ್ಟೆಯ ಪಾಡು; ಅದಕ್ಕಾಗಿ ಏನು ಮಾಡಲೂ ಹೇಸದ ಮಂದಿ. ನಡೆಯೆಲ್ಲ ಕಪಟ. ನುಡಿಯೆಲ್ಲ ತೋರಿಕೆ. ಒಂದು ಮಾತಿನಲ್ಲಿ ಹೇಳುವುದಾದರೆ-ಇಲ್ಲಿ ಎಲ್ಲವೂ ಮಾರಾಟದ ಸಾಮಗ್ರಿಯಾಗಿಬಿಟ್ಟಿದೆ! ಯಾವುದೆಲ್ಲ ಮಾರಲಾಗದೋ ಅದೆಲ್ಲವೂ “ಧರ್ಮ’ವೂ ಇಲ್ಲಿ ಮಾರಾಟದ ಸಾಮಗ್ರಿ! ಇದೇನಪ್ಪಕಲಿಯುಗ ಎಂದುಕೊಂಡು ಚಿಂತಾಕ್ರಾಂತನಾಗಿ ಅಲೆಯುತ್ತಿದ್ದಾಗ ಯಮುನಾನದಿಯ ಬಳಿ ಒಂದು ದೃಶ್ಯ.
ಒಬ್ಟಾಕೆ ತರುಣಿ ನಿರ್ವಿಣ್ಣಳಾಗಿ ಕುಳಿತಿದ್ದಾಳೆ. ಅವಳ ಪಕ್ಕದಲ್ಲಿ ಇಬ್ಬರು ಮುದುಕರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಈ ತರುಣಿಯಾದರೋ ಏನೇನೋ ಉಪಚಾರಗಳನ್ನು ಮಾಡುತ್ತ ಮುದುಕರಿಗೆ ಪ್ರಜ್ಞೆ ಮರುಕಳಿಸುವುದನ್ನು ಕಾಯುತ್ತಿದ್ದಾಳೆ ಆದರೆ ಪ್ರಜ್ಞೆ ಮರುಕಳಿಸುತ್ತಿಲ್ಲ. ತರುಣಿ ಗೋಳಿಡುತ್ತಿದ್ದಾಳೆ. ಸುತ್ತ ಮಂದಿ ನೆರೆದಿದ್ದಾರೆ.
ನಾರದ ತರುಣಿಯ ಬಳಿ ಬಂದ. ಏನಿದೆಲ್ಲ? ನೀನು ಯಾರು? ತರುಣಿ ಹೇಳಿದಳು: “”ನಾನು ಭಕ್ತಿ. ಈ ಇಬ್ಬರು ನನ್ನ ಮಕ್ಕಳು. “ಜಾnನ’ ಮತ್ತು “ವೈರಾಗ್ಯ’. ನಾವು ಚೆನ್ನಾಗಿಯೇ ಇದ್ದೆವು. ಆದರೆ ಅದೇನೋ ಕಲಿಕಾಲದ ಪ್ರಭಾವ ಇರಬೇಕು. ನಾವು ಮೂವರೂ ಚೈತನ್ಯಗುಂದಿ ಗತಯೌವನರಾಗಿ ಮುಪ್ಪಾದೆವು. ಹಾಗೇ ಅಲೆಯುತ್ತ ವೃಂದಾವನಕ್ಕೆ ಬಂದೆವು. ವೃಂದಾವನ-ಕೃಷ್ಣ ನಡೆದಾಡಿದ ನೆಲ. ಕೃಷ್ಣ ಭಕ್ತಿಯಿಂದ ಉನ್ಮತ್ತರಾದ ಗೋಪಿಕೆಯರ ಹೆಜ್ಜೆ-ಗುರುತುಗಳನ್ನು ಹೊತ್ತ ನೆಲ. ಅಲ್ಲಿಗೆ ಬಂದಂದಿನಿಂದ ನಾನು ಮರಳಿ ತಾರುಣ್ಯವನ್ನು ಪಡೆದೆ. ಆದರೆ ಈ ನನ್ನ ಮಕ್ಕಳಿಗಾದರೋ ಕಳೆದುಹೋದ ಯೌವನ ಇನ್ನೂ ಮರಳಿ ಬಂದಿಲ್ಲ. ಹೀಗಾಗಿ ತಾಯಿ ತರುಣಿ-ಮಕ್ಕಳು ಮುದುಕರು ಎನ್ನುವ ವಿಪರೀತ ಸ್ಥಿತಿಯೊಂದು ಉಂಟಾಗಿದೆ. ಇದು ಕಲಿಯುಗದ ಪ್ರಭಾವವೇ ಇರಬೇಕು. ಈ ಸ್ಥಿತಿ ಕಳೆದೀತು ಹೇಗೆ ಎಂದು ಹಗಲಿರುಳೂ ಚಿಂತಿಸುತ್ತಿದ್ದೇನೆ. ನೀವು ದೊಡ್ಡವರು, ನಮಗೊಂದು ದಾರಿ ತೋರಿಸಿ” ಎಂದಳು.
ಹೀಗೆ ಹೇಳುತ್ತಿರುವ ಸಂದರ್ಭದಲ್ಲಿ ತನ್ನ ಇತಿವೃತ್ತವನ್ನಾಕೆ ತೋಡಿಕೊಂಡಳು. ಅದು ಹೀಗೆ:
ಉತ್ಪನ್ನಾ ದ್ರಾವಿಡೇದೇಶೇ ವೃದ್ಧಿಂ ಕರ್ಣಾಟಕೇಗತಾ | ಕ್ವಚಿನ್ ಕ್ವಚಿನ್ ಮಹಾರಾಷ್ಟ್ರೇ ಗುರ್ಜರೆ ಜೀರ್ಣತಾಂಗತಾ |
(ದ್ರಾವಿಡ ದೇಶದಲ್ಲಿ (ತಮಿಳುನಾಡು) ನಾನು ಹುಟ್ಟಿದೆ. ನಾ ದ್ರಾವಿಡಕನ್ಯೆ; “ಭಕ್ತಿ’. ಬೆಳೆದುದೆಲ್ಲ ಕನ್ನಡದ ನೆಲದಲ್ಲಿ. ಮಹಾರಾಷ್ಟ್ರದಲ್ಲೇನೋ ನಾನು ಅಲ್ಲಲ್ಲಿ ನಲಿದಾಡಿದ್ದುಂಟು. ಆದರೆ ಗುಜರಾತಿನ ನೆಲದಲ್ಲಿ ನನಗೆ ಮುಪ್ಪು ಆವರಿಸಿಬಿಟ್ಟಿತ್ತು.)
ಇದು ಭಾರತೀಯ ಮನಸ್ಸು ಇತಿಹಾಸವನ್ನು ಕಥೆ ಮಾಡುವ ಬಗೆ !
ನಿಜಕ್ಕಾದರೆ ಭಕ್ತಿಯಿಂದ ಪರಿಪುÉತವಾದ ಕೀರ್ತನೆಗಳು ನಮಗೆ ಮೊದಲು ದೊರಕುವುದು ತಮಿಳುನಾಡಿನ ಆಳ್ವಾರುಗಳು ಮತ್ತು ನಾಯನ್ಮಾರುಗಳದು. ಶೈವ, ವೈಷ್ಣವ ಭಕ್ತಿಮಾರ್ಗದ ಮೂಲಸೆಲೆಗಳಿವು. ಆದುದರಿಂದಲೇ ಕ್ರಿ.ಶ. ಹತ್ತನೆಯ ಶತಕದಲ್ಲಿ ತಮಿಳುನಾಡಿನಲ್ಲಿ ಕಾಣಿಸಿಕೊಂಡ ಆಚಾರ್ಯ ರಾಮಾನುಜರು ಆಳ್ವಾರುಗಳ ಪರಂಪರೆಯನ್ನು ತಮ್ಮದೆಂದೇ ಭಾವಿಸಿ, ಆ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು. ಆಳ್ವಾರುಗಳ ದೇಸೀ ತಮಿಳು ಕೀರ್ತನೆಗಳನ್ನು ವೇದತುಲ್ಯವಾಗಿ ಭಾವಿಸಿದರು. ಅವುಗಳನ್ನು ದಿವ್ಯಪ್ರಬಂಧ ಎಂದು ಕರೆದರು. ವೇದ-ಶಾಸ್ತ್ರಗಳು ಮತ್ತು ಈ ದಿವ್ಯ ಪ್ರಬಂಧಗಳು ಇವೆರಡೂ ಸೇರಿ ಉಭಯ-ವೇದಾಂತ ಎಂದು ಸ್ಥಾಪಿಸಿದರು. ವೇದದ ಮೊದಲ ಆಶಯ-ಪೂರ್ವಿಕ ಮತ್ತು ನೂತನ ಒಂದಾಗಬೇಕೆನ್ನುವ ಆಶಯ ಹೀಗೆ “ಭಕ್ತಿ’ಯ ಮೂಲಕ ಈಡೇರಿತು. ಭಕ್ತಿಯು ತನ್ನ ತೀವ್ರತೆಯಿಂದಾಗಿಯೇ-ತನಗೆ ತಿಳಿಯದೆಯೇ ಕ್ರಾಂತಿಯ ಬೀಜವೊಂದನ್ನು ಹೊತ್ತದ್ದು ಸಮಾಜದ ಅರಿವಿಗೆ ಬಂತು.
ಕನ್ನಡನಾಡಿನಲ್ಲಿ-ಶೈವ, ವೈಷ್ಣವ ಭಕ್ತಿಯ ಎರಡು ಪರಂಪರೆಗಳೂ ಬೆಳೆದವು. ಮೇಲುಕೋಟೆಯ ಸುತ್ತಮುತ್ತ ಆಳ್ವಾರುಗಳ ತಮಿಳು ದಿವ್ಯಪ್ರಬಂಧಗಳು ಕೇಳತೊಡಗಿದವು. ಆಚಾರ್ಯ ಶಂಕರರು ಶೃಂಗೇರಿಗೆ ಬಂದಿದ್ದರೆನ್ನುವುದು, ಪೀಠವೊಂದನ್ನು ಸ್ಥಾಪಿಸಿದ್ದರೆನ್ನುವುದು ಈಗ ಇತಿಹಾಸ. ಶಂಕರರು ಜ್ಞಾನ-ಮಾರ್ಗವಾದರೂ ಅವರು “ಭಕ್ತಿ’ಯ ಮಹಣ್ತೀವನ್ನು ಮನಗಂಡವರೇ. ಭಕ್ತಿಯ ಪ್ರತಿಪಾದಕರೇ. ಸೌಂದರ್ಯ ಲಹರೀ ಎಂಬ ಶಂಕರರಿಂದ ರಚಿತವಾದ ದೇವೀ ಸ್ತೋತ್ರವಂತೂ ತಾಯಿಯನ್ನು ಕೂಗಿ ಕರೆದ ಮಗುವಿನ ಆರ್ತ ಕರೆಯಂತಿದೆ. ಕರಾವಳಿಯ ತುಳುನಾಡಿನ ಆಚಾರ್ಯ ಮಧ್ವರು ಭಕ್ತಿಯಿಂದಲೇ “ಜ್ಞಾನ’ ಎಂದು ಘೋಷಿಸಿದವರು. ಅಂಥ ಜ್ಞಾನದಿಂದ ಮತ್ತೆ ಭಕ್ತಿಯೇ ಬೆಳೆಯುತ್ತದೆ ಎಂದವರು. ಭಕ್ತಾ$Âಜ್ಞಾನಂ ತತೋ ಭಕ್ತಿಃ ಮಧ್ವರ ಈ ಕಾಣೆRಯೇ ಆಮೇಲೆ ಕನ್ನಡನಾಡಿನಲ್ಲಿ ಮೂಡಿಬಂದ ಹರಿದಾಸ ಆಂದೋಲನಕ್ಕೆ ಮೂಲಸ್ಫೂರ್ತಿಯಾಯಿತು. ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡು ಮತ್ತೂಂದು ಅಭೂತಪೂರ್ವವಾದ ಕ್ರಾಂತಿಯೊಂದಕ್ಕೆ ಸಾಕ್ಷಿಯಾಯಿತು. ಅದು ಬಸವಣ್ಣನವರ ನೇತೃತ್ವದಲ್ಲಿ ನಡೆದ ಜನಾಂದೋಲನ. ಬಸವಣ್ಣನವರ ನೇತೃತ್ವ ಎಂದರೆ ಭಕ್ತಿಯ ನೇತೃತ್ವ. ಏಕೆಂದರೆ, ಬಸವಣ್ಣನೆಂದರೆ ಭಕ್ತಿ ಭಂಡಾರಿ ಬಸವಣ್ಣ ! ಅಲ್ಲಮನಂಥ ಜ್ಞಾnನಿಗಳು ಬಸವಣ್ಣನವರ ನೇತೃತ್ವವನ್ನು ಒಪ್ಪಿದ್ದರು. ತಾವೇ ನೇತಾರರಾಗಿರಲಿಲ್ಲ. ಕ್ರಾಂತಿಯ ಬೀಜ ಇರುವುದು ಭಕ್ತಿಯ ಬಸಿರಿನಲ್ಲಿ. ಇದು ಅಲ್ಲಮನಿಗೆ ತಿಳಿದ ಸತ್ಯವಾಗಿತ್ತು.
ಮಧ್ಯಕಾಲದಲ್ಲಿ ಕನ್ನಡನಾಡಿಗೆ ಇಸ್ಲಾಮಿನ ಸಂಪರ್ಕ ಬಂತು. ಕನ್ನಡದ ವಿಜಾಪುರ (ವಿಜಯಪುರ) ಸೂಫಿಸಂತರ ಕೇಂದ್ರವಾಗಿತ್ತು. ಸೂಫಿಗಳು ಉಜ್ವಲ ಭಕ್ತರಾಗಿದ್ದರು.
ವಿಠಲ ಭಕ್ತಿಯ ಸಂಪ್ರದಾಯ ನೆರೆಯ ಮಹಾರಾಷ್ಟ್ರದಲ್ಲಿ ಬೆಳೆಯಿತು. ವಿಠuಲ ಕನ್ನಡದವನು, ಕನ್ನಡಿಗ ಎನ್ನುವುದು ಮಹಾರಾಷ್ಟ್ರದ ವಿಠuಲ ಭಕ್ತರಿಗೆ ಚೆನ್ನಾಗಿ ತಿಳಿದಿತ್ತು. “ಕಾನಡೀ ಹೋ ವಿಠuಲೂ’ ಎನ್ನುವ ಮಾತೇ ಇದೆ-ಈಗಲೂ. ಭಕ್ತಿಯ ವೈಶಿಷ್ಟ್ಯವೆಂದರೆ ಯಾವ ಸಂಬಂಧವನ್ನೂ ಕೆಡಿಸದೆ, ಅದನ್ನು ಉಳಿಸಿ ಬೆಳೆಸುತ್ತ ಹೋಗುವುದು. ವಿಠuಲ ಕನ್ನಡಿಗನೆನ್ನುವುದು, ವೀರನಾರಾಯಣ ಗದುಗಿನವನೆನ್ನುವುದು ಈ ನೆಲೆಯಲ್ಲಿಯೇ. ದೇವರು ಸರ್ವವ್ಯಾಪಿ ಎಂಬ ಪ್ರಮೇಯವನ್ನು ಕೇಳಿದಾಗ, ನಾವಿರುವ ಸ್ಥಳದ ಜೊತೆ ದೇವರಿಗೆ ಸಂಬಂಧವಿದೆ ಎಂದು ಭಕ್ತಿಗೆ-ಭಕ್ತಿಗೆ ಮಾತ್ರ ಹೊಳೆಯುವುದು.
ಯಾವ ನೆಲೆಯಿಂದಲೇ ನೋಡಿ: ವೃದ್ಧಿಂ ಕರ್ಣಾಟಕೇ ಗತಾ- ಕನ್ನಡನಾಡಿನಲ್ಲಿ ಬೆಳೆದೆ ಎಂಬ “ಭಕ್ತಿ’ಯ ಮಾತು ಇತಿಹಾಸದ ಮಾತೆನ್ನಲೇಬೇಕು. ಈ ಹಿನ್ನೆಲೆಯಲ್ಲಿ, ಅಮೆರಿಕೆಯ ಕನ್ನಡಿಗರು, “ಭಕ್ತಿ’ ಎಂಬ ಪರಿಕಲ್ಪನೆಯ ಸುತ್ತ ವಸಂತ ಸಾಹಿತ್ಯೋತ್ಸವವನ್ನು ನಡೆಯಿಸಿರುವುದು ಬಹಳ ಒಳನೋಟದ ಮಾತಾಗಿದೆ. ಭಕ್ತಿಯ ದರ್ಶನ ಎಂದರೆ ಅದು ಪರೋಕ್ಷವಾಗಿ ನಾಡು-ನುಡಿಯ ದರ್ಶನ. ನಾಡಿನ ಇತಿಹಾಸದ ದರ್ಶನ.
“ಭಕ್ತಿ’ಯ ಬಗೆಗೆ ಹೇಳುವುದು ಬಹಳ ಇದೆ. ಭಕ್ತಿಯ ಸಂವೇದನೆಯಿಂದ ಒಂದು ಭಾಷೆ ಪಡೆಯುವ ಆಳ, ಬಾಗು, ಬಳುಕು, ಭಾವಶಕ್ತಿ ಇವೆಲ್ಲ ರೋಮಾಂಚಕವಾದ ಸಂಗತಿ. ಎಲ್ಲವನ್ನೂ ಒಂದೇ ಬೀಸಿನಲ್ಲಿ ಹೇಳಲಾಗುವುದಿಲ್ಲ. ಆದರೆ ಭಕ್ತಿಯ ಅನುಭವ ಮನುಷ್ಯ ಜೀವನಕ್ಕೆ ಹೇಗೆ ಮುಖ್ಯ ಎಂದು ಸೂಚಿಸಿ ಈ ಮಾತುಗಳನ್ನು ಮುಕ್ತಾಯಕ್ಕೆ ತರುತ್ತಿದ್ದೇನೆ.
ಲೋಕವೆಂಬ ದೊಡ್ಡ ಸಂತೆಯ ನಡುವೆ ಬಂದು ನಿಂತ ಮನುಷ್ಯಜೀವ ಸಂತೆಯಲ್ಲಿ ಕಳೆದುಹೋಗುವ ಸಂಭವವೇ ಹೆಚ್ಚು. ಹಾಗೆ ಕಳೆದುಹೋಗುವುದೇ “ಜೀವನಪ್ರೀತಿ’ ಎಂಬ ತಿಳುವಳಿಕೆಯೂ ಇದೆ. ಆದರೆ ಲೋಕದಲ್ಲಿ ಕಳೆದುಹೋಗಲಲ್ಲ- ಈಗಾಗಲೇ ಕಳೆದುಹೋದಂತಿರುವ ತನ್ನನ್ನು ತಾನು ಮರಳಿ ಪಡೆಯುವಂತಾಗುವುದೇ ನಿಜವಾದ ಜೀವನಪ್ರೀತಿ ಎಂಬ ಪ್ರತಿ ಪ್ರಸ್ಥಾನವೇ ಆಧ್ಯಾತ್ಮಿಕತೆಯಾಗಿದೆ. ಭಕ್ತಿಯು ಆಧ್ಯಾತ್ಮಿಕತೆಯ ಜೀವಸಾರವಾಗಿದೆ. ಕಳೆದುಹೋಗದೆ ಇರಬೇಕಾದರೆ, ಜೀವ; ವಿರಹವನ್ನು ಅನುಭವಿಸ-ಬೇಕು. ವಿರಹದಲ್ಲಿ ಬೇಯಬೇಕು. ತನ್ನಂತೆಯೇ ಇರುವ ಇನ್ನೊಂದು ಮನುಷ್ಯಜೀವದ ವಿರಹದಲ್ಲಿ ಅಲ್ಲ. ಇನ್ನೊಂದು ಮನುಷ್ಯ ಜೀವಕ್ಕೆ ಸಂಬಂಧಿಸಿದ ವಿರಹವು, ನಿಜವಾದ ವಿರಹವೇ ಅಲ್ಲ. ಏಕೆಂದರೆ ಆ ಜೀವಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳೂ ನಮಗೆ ತಿಳಿದಿರುತ್ತವೆ; ಆ ಜೀವವೂ ನಮ್ಮಂತೆಯೇ ಇದೆಯಾಗಿ; ಬದುಕಿದೆಯಾಗಿ; ಆ ಜೀವದ ಬೇಕು-ಬೇಡಗಳು ಕೂಡ ನಮ್ಮ ಬೇಕು-ಬೇಡಗಳಂತೇ ಇವೆಯಾಗಿ, ನಮ್ಮಂತೆಯೇ ಇರುವ ಇನ್ನೊಂದು ಜೀವಕ್ಕೆ ಸಂಬಂಧಿಸಿ ನಿಜವಾದ ವಿರಹವು ಸಂಭವಿಸುವುದೇ ಇಲ್ಲ. ಬಯಕೆಗಳು; ಲಾಲಸೆಗಳು; ಒಲವುಗಳು, ಕದಾಚಿತ್, ನಿಸ್ವಾರ್ಥವಾದ ಪ್ರೀತಿಗಳು ಸಂಭವಿಸಬಹುದು. “ವಿರಹ’ ಎನ್ನುವ ಸಂವೇದನೆಯೇ ನಮಗೆ ತಿಳಿದಿಲ್ಲದ ತಣ್ತೀದ ಜತೆಗೆ, ನಮ್ಮಂತಿಲ್ಲದ ತಣ್ತೀದ ಜತೆಗೆ, ನಮಗೆ “ಅನ್ಯ’ವಾದುದರ ಜತೆಗೆ ಮಾತ್ರ ಸಂಭವಿಸುವಂಥ ಹೃದಯವಿದ್ರಾವಕವಾದ ವಿದ್ಯಮಾನವಾಗಿದೆ. “ನಿನ್ನ ವಿರಹದಲ್ಲಿ ಬೆಂದವರ ಮತ್ತೆ ಸುಡಲುಂಟೆ?’- ಎಂದು ಉತ್ಕಟವಾಗಿ ಕೇಳುವಂಥ ವಿದ್ಯಮಾನವಾಗಿದೆ. ನನ್ನನ್ನು ನಿನ್ನಂತೆ ಮಾಡಿಕೋ ಎಂದು ಆರ್ತವಾಗಿ; ಹೃತೂ³ರ್ವಕವಾಗಿ ಕೇಳಿಕೊಳ್ಳಬೇಕಾದರೆ, ನಿನ್ನಂತೆ ಮಾಡಿಕೊಳ್ಳುವುದೆಂದರೇನೆಂದು ನಮಗೆ ಮೊದಲೇ ತಿಳಿದಿರಬಾರದು. ನಮಗೆ ತಿಳಿದಿರದೆ ಇರುವುದನ್ನು ತೀವ್ರವಾಗಿ ಬಯಸುವುದು ವಿರಹ ಎನ್ನುವ ಸಂವೇದನೆಯ ಅರ್ಥ. ಈ ಲೋಕದಲ್ಲಿ ನಮಗೆ ತಿಳಿದಿರುವುದೆಲ್ಲ ನಮ್ಮನ್ನು ಗಟ್ಟಿಗೊಳಿಸುತ್ತಲೇ ಹೋಗಿವೆ. ಅಹಂಕಾರವನ್ನು ಬೆಳೆಯಿಸುತ್ತಲೇ ಹೋಗಿವೆ. ನಮ್ಮನ್ನು ಕರಗಿಸುತ್ತಿಲ್ಲ. ಆದರೆ ಭಕ್ತಿಯು ಎಲ್ಲವನ್ನೂ ಕರಗಿಸಬಲ್ಲ ಬೆಂಕಿಯಾಗಿದೆ. ಕರಗದೆ ಹರಿಯುವುದಿಲ್ಲ. ಕರಗದೆ ಬೆಸೆಯುವುದಿಲ್ಲ. ಭಕ್ತಿಯು ಕರಗಿಸುವ, ಕರಗಿಸಿ ಹರಿಯುವಂತೆ ಮಾಡುವ; ಹರಿದು ಬೆಸೆಯುವಂತೆ ಮಾಡುವ ಹೃದಯದ ಪವಾಡವಾಗಿದೆ.
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.