ಮತ್ತೂಂದು ಬದುಕು
Team Udayavani, Jun 23, 2019, 5:00 AM IST
ನಡುರಾತ್ರಿ ಕಳೆದಿತ್ತು. ಮಧುರಾ ಗಾಢಯೋಚನೆಯೊಳಗೆ ತಲೆತೂರಿಸಿ ಕುಳಿತಿದ್ದಳು. ಹಾಸಿಗೆಯಲ್ಲಿ ಪಾಪು ಆದಿತ್ಯ ನಿದ್ದೆಯಲ್ಲಿತ್ತು. ಮಂಚದ ಕೆಳಗೆ ಬುಟ್ಟಿಯಲ್ಲಿ ಮೋತಿ ಮಲಗಿತ್ತು. ಪಕ್ಕದ ರಸ್ತೆಯಲ್ಲಿ ಓಡಾಡುವ ವಾಹನಗಳು ಆಗೊಮ್ಮೆ ಈಗೊಮ್ಮೆ ನೀರವತೆಯನ್ನು ಭೇದಿಸುತ್ತಿದ್ದವು. ಟೇಬಲ್ ಮೇಲೆ ಮಂದವಾಗಿ ಉರಿಯುತ್ತಿದ್ದ ಬೆಡ್‌ಲ್ಯಾಂಪಿನ ಬೆಳಕಲ್ಲಿ ಚಿತ್ರವೊಂದನ್ನು ದಿಟ್ಟಿಸಿದಳು. ನೆರಳು-ಬೆಳಕಿನ ಅದ್ಭುತ ಸಂಯೋಜನೆಯಿಂದ ಕೂಡಿದ್ದ ಆ ಕಪ್ಪು ಬಿಳುಪಿನ ಚಿತ್ರದಲ್ಲಿ ಸುಂದರ ತರುಣಿಯೊಬ್ಬಳು ಜನನಿಬಿಡ ರಸ್ತೆಯಲ್ಲಿ ಮಂಡಿಯೂರಿ ಕುಳಿತು ತನ್ನೆತ್ತರಕ್ಕೆ ಬೆಳೆದಿದ್ದ ನಾಯಿಯೊಂದಕ್ಕೆ ಮುತ್ತಿಡುತ್ತಿದ್ದಳು. ಅವಳ ಮಗು ಫುಟ್‌ಪಾತಲ್ಲಿ ಅವಳಿಗಾಗಿ ಕೈಚಾಚಿ ಅಳುತ್ತಿತ್ತು. ಅವಳು ಉಟ್ಟ ಸೀರೆ ತುಸು ಅಸ್ತವ್ಯವಸ್ತವಾಗಿ ಎದೆ-ಸೊಂಟ-ಪಾದವನ್ನು ತೋರಿಸುತ್ತಿತ್ತು. ಆದರೆ, ಅವಳ ಮುಖ ಅಸ್ಪಷ್ಟವಾಗಿತ್ತು. “ಆಧುನಿಕತೆಯ ವ್ಯಸನ’ ಎಂಬ ತಲೆಬರಹವನ್ನು ಆ ಚಿತ್ರಕ್ಕೆ ಕೊಡಲಾಗಿತ್ತು. ಯಾವುದೋ ಸ್ಪರ್ಧೆಯಲ್ಲಿ ಆ ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿದೆಯಂತೆ ! ತನ್ನ ಬದುಕನ್ನೇ ಬುಡಮೇಲು ಮಾಡಿದ ಆ ಪೇಪರ್ ಕಟ್ಟಿಂಗನ್ನು ಟೇಬಲ್ ಮೇಲೆಸೆದು ಮಂಚದಲ್ಲಿ ಉರುಳಿಕೊಂಡಳು ಮಧುರಾ.
ಎಂದಿನಂತೆ ಬೆಳಿಗ್ಗೆ ಐದಕ್ಕೆದ್ದು ಮುಖತೊಳೆದು ಮೋತಿಯನ್ನು ಒಂದ್ಹತ್ತು ನಿಮಿಷ ಹೊರಗೆ ವಾಕ್ ಕರೆದೊಯ್ದಳು. ಹಾಲು ಕುದಿಸಿ ತಿಂಡಿ ಸಿದ್ಧಪಡಿಸಿ ತನಗೆ ಆದಿತ್ಯನಿಗೆ ಟಿಫನ್ ರೆಡಿಮಾಡಿದಳು. ಮೋತಿಗೆ ಸಂಜೆಯವರೆಗೆ ಹಾಲು ತಿಂಡಿ ಅನ್ನವನ್ನು ಬೇರೆ ಬೇರೆ ಪ್ಲೇಟುಗಳಲ್ಲಿ ಹಾಕಿಟ್ಟು ಆದಿತ್ಯನನ್ನು ಎಬ್ಬಿಸಿ ಸ್ನಾನಮಾಡಿಸಿದಳು. ಅವನ ಯೂನಿಫಾರ್ಮ್ ತಿಂಡಿ ಎಲ್ಲ ಆದಮೇಲೆ ಗಡಿಬಿಡಿಯಲ್ಲಿ ತಾನೂ ಅಣಿಯಾಗಿ ಪಾಪುವನ್ನು ಸ್ಕೂಲ್ ಬಸ್ ಹತ್ತಿಸಿ ತಾನು ಆಫೀಸ್ ವ್ಯಾನ್ ಹಿಡಿದಳು. ಮುನ್ನೂರ ಅರವತ್ತೆçದು ದಿನಗಳಲ್ಲಿ ಇದೂ ಒಂದು ದಿನ. ವಸಂತವೋ ಶಿಶಿರವೋ ಇತ್ತೀಚೆಗೆ ಋತುಗಳ ಹೆಸರೇ ಮರೆತುಹೋಗಿತ್ತು ಮಧುರಾಳಿಗೆ. ಯಾವ ಮರ ಎಲೆ ಉದುರಿಸಿತೇ ಇನ್ಯಾವ ಗಿಡ ಚಿಗುರಿತೋ ಯಾರಿಗೆ ಗೊತ್ತು. ಇನ್ನು ಈ ಬದುಕಲ್ಲಿ ತನ್ನ ದಿನಚರಿಯೇನೂ ಬದಲಾಗುವುದಿಲ್ಲ ಎನ್ನುವ ಖಾತ್ರಿ ಅವಳಿಗಿತ್ತು. ಆದಿತ್ಯ ಬೇಗ ದೊಡ್ಡವನಾಗಬೇಕು, ಚೆನ್ನಾಗಿ ಓದಬೇಕು. ಅವನು ನೆಲೆನಿಂತ ಮೇಲೆ ತನ್ನ ಉಸಿರು ಹೋದರೂ ತಪ್ಪಲ್ಲ. ಆದರೆ, ಅಲ್ಲಿಯ ತನಕ ಹೇಗಾದರೂ ಬದುಕಲೇಬೇಕು. ಮೊನ್ನೆ ಮೂರನೆಯ ತರಗತಿಯ ಕ್ಲಾಸ್ ಟೀಚರ್ ರೋಸಿ ಹೇಳಿದ್ದರು, “ಆದಿತ್ಯ ಒಳ್ಳೆ ಮಗು, ಬ್ರಿಲಿಯಂಟ್ ಕೂಡ’.
“ಹಾಗಾಗಲಿ ದೇವರೇ, ಅವನು ಒಳ್ಳೆಯವನೇ ಆಗಲಿ. ಮತ್ತೂಬ್ಬರ ಬದುಕು-ಭಾವನೆಗಳ ಸೂಕ್ಷ್ಮತೆ ಅವನಿಗೆ ಅರಿವಾಗಲಿ’ ಮಧುರಾ ಪ್ರಾರ್ಥಿಸಿದಳು.
.
.
ಯೌವನದ ಮೈಮುಚ್ಚಲು ಬಟ್ಟೆಗೂ ಗತಿಯಿಲ್ಲದ ಬಡತನ, ಬಾಲ್ಯದಲ್ಲಿಯೇ ಅಮ್ಮನನ್ನು ಕಳಕೊಂಡ ತಬ್ಬಲಿತನ. ಭವಿಷ್ಯದ ಗುರಿಯೊಂದೇ ಬದುಕಿಗೆ ಆಧಾರವಾಗಿದ್ದ ಕಾಲೇಜಿನ ದಿನಗಳವು. ಮಧುರಾ ಸದಾ ಮೌನಿ; ತಾನಾಯಿತು, ತನ್ನ ಓದಾಯಿತು. ಕಾಡುಗುಲಾಬಿಯಂತೆ ಚೆಲುವು ಮತ್ತು ಪ್ರತಿಭೆ ತುಂಬಿಕೊಂಡ ಜೀವ ಅವಳದ್ದು. ಪದವಿಯ ಕೊನೆ ದಿನಗಳಲ್ಲಿ ಆ ಊರಿನ ಪ್ರಸಿದ್ಧ ಜವುಳಿ ವರ್ತಕರ ಮಗ ನವೀನ ಆಕಸ್ಮಿಕವಾಗಿ ಮದುವೆ ಪ್ರಸ್ತಾಪವಿಟ್ಟಾಗ ಮಧುರಾ ಹೆದರಿದ್ದಳು. ಕಾಲೇಜಿನಲ್ಲಿ ಅವನ ರೌಡಿ ಗ್ಯಾಂಗ್ ಅನೇಕ ಅಡಾವುಡಿಗೆ ಪ್ರಸಿದ್ಧಿಯಾಗಿತ್ತು. ಆದರೂ ವಿದ್ಯಾರ್ಥಿ ಲೀಡರಾಗಿ ಅವನ ಮನಮುಟ್ಟುವ ಭಾಷಣಗಳು, ಸಮರ್ಥ ನಾಯಕತ್ವ ಕಂಡ ಮಧುರಾಗೆ ಅವನ ಕುರಿತು ಒಂದಷ್ಟು ಮೃದುಭಾವಗಳೂ ಇದ್ದವು. ಅಲ್ಲದೇ ತುಂಬ ಶ್ರೀಮಂತ ಮನೆತನ. ತಮ್ಮ ಮನೆಯ ಬಡತನವೆಲ್ಲ ಒಂದೇ ಏಟಿಗೆ ಕಿತ್ತು ಕೊಚ್ಚಿಹೋಗುತ್ತದೆ, ತಮ್ಮ ತಂಗಿಯರಿಗೆ ಓದಿಸಬಹುದು, ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದೆಲ್ಲ ಯೋಚಿಸಿದ ಮಧುರಾ, ನವೀನ ಮತ್ತಷ್ಟು ಒತ್ತಾಯಿಸಿದಾಗ ಒಪ್ಪಿಗೆ ಕೊಟ್ಟಿದ್ದಳು. ಮದುವೆಯೂ ಆಯಿತು, ಮೂರ್‍ನಾಲ್ಕು ತಿಂಗಳು ಸುಖವಾಗಿ ಕಳೆದದ್ದು ಮುಗಿಯಿತು. ಕ್ರಮೇಣ ಅತ್ತೆ -ಮಾವ ವಿಧಿಸಲಾರಂಭಿಸಿದ ಕಟ್ಟುನಿಟ್ಟು, ಅವರ ಮಾತನ್ನು ಮೀರದ ನವೀನನ ನಡವಳಿಕೆ ಎಲ್ಲವೂ ತಾನು ಚಿನ್ನದ ಪಂಜರದ ಹಕ್ಕಿ ಎಂಬುದನ್ನು ಮಧುರಾಗೆ ಸಾಬೀತುಪಡಿಸಿದವು. ಆದರೆ, ವರ್ಷವೊಂದರಲ್ಲೇ ಪಾಪು ಆದಿತ್ಯ ಬಂದಾಗ ಮಧುರಾ ಎಲ್ಲ ನೋವು ಮರೆತು ತನ್ನದೇ ಲೋಕದಲ್ಲಿ ಸಮಾಧಾನದಲ್ಲಿರುವುದನ್ನು ಅಭ್ಯಾಸ ಮಾಡಿಕೊಂಡಳು. ಆಸರೆಗಾಗಿ ಮುಳ್ಳಿನ ಮರವನ್ನು ತಬ್ಬಿದ್ದ ಬಳ್ಳಿ ತಂಗಾಳಿಗೆ ಎಲೆಯಲುಗಿಸುತ್ತ ಹೂಹಣ್ಣು ತಳೆಯುತ್ತ ಹಕ್ಕಿಗಳ ಜೊತೆ ಒಳಗೊಳಗೇ ಹಾಡಿಕೊಳ್ಳುತ್ತಿದ್ದರೂ ಹೆಚ್ಚು ಕಾಲ ಬಾಳಲಿಲ್ಲ. ಆವತ್ತೂಂದಿನ ಬೆಳಗ್ಗಿನ ಪೇಪರ್ ಹರಡಿಕೊಂಡು ಕುಳಿತಿದ್ದ ನವೀನ, ಅವನಪ್ಪ ಇಬ್ಬರೂ ಕರೆಂಟ್ ಹೊಡೆದವರಂತೆ ಅಡುಗೆ ಮನೆಗೆ ಓಡಿಬಂದರು. ಅಲ್ಲಿ ತಿಂಡಿ ತಯಾರಿಸುತ್ತಿದ್ದ ಮಧುರಾ ಮತ್ತು ಕುರ್ಚಿಯಲ್ಲಿ ಕೂತು ಅವಳಿಗೆ ಆದೇಶ ಕೊಡುತ್ತಿದ್ದ ಅವಳತ್ತೆ. ಇಬ್ಬರ ಮುಂದೆ ಎರಡು ಪೇಪರ್‌ಗಳು ಬಂದು ಬಿದ್ದವು. ಮರುಕ್ಷಣ ನವೀನ, ಮಧುರಾಳ ಕೆನ್ನೆಗೆ ರಪರಪನೆ ಬಾರಿಸಿದ.
“”ನಮ್ಮ ಮನೆತನದ ಮರ್ಯಾದೆ ತೆಗೆದು ಕಣೋ ನಿನ್ನ ಹೆಂಡ್ತಿ. ಬೇಡ ಅಂದ್ರೂ ಈ ದಿಕ್ಕಿಲ್ಲದ ಪರದೇಶಿಯನ್ನು ಮದುವೆ ಆದದ್ದಕ್ಕೆ ನಿಂಗೆ ಸರಿಯಾಗೇ ಆಯ್ತುಬಿಡು. ನೆಂಟರಿಷ್ಟರ ಎದುರು ಮುಖ ಎತ್ತಿ ತಿರುಗಾಡದ ಹಾಗೆ ಮಾಡಿದ್ಲಲ್ಲೊ” ಅತ್ತೆಮಾವ ಅಬ್ಬರಿಸಿ ಕಿರುಚುತ್ತಿದ್ದರು. ಗಾಬರಿ-ಗೊಂದಲ, ಕೆನ್ನೆಗೆ ಬಿದ್ದ ಪೆಟ್ಟು ಎಲ್ಲ ಸೇರಿ ಮಧುರಾ ತಲೆಸುತ್ತಿ ಬಿದ್ದುಬಿಟ್ಟಳು.
.
.
ಮಧುರಾ ಕಣ್ಣುಬಿಟ್ಟಾಗ ಸುತ್ತೆಲ್ಲ ಮಬ್ಬುಕತ್ತಲು. ಯಾವುದೋ ಅಪರಿಚಿತ ಸ್ಥಳ. ಕೋಣೆಯ ಮೂಲೆಯ ಗೋಡೆಗೆ ಹೊಡೆದ ಮೊಳೆಯಲ್ಲಿ ಪುಟ್ಟ ಲ್ಯಾಂಪೊಂದು ಮಿಣಿ ಮಿಣಿ ಉರಿಯುತ್ತಿತ್ತು. ತಾನು ಎಲ್ಲಿದ್ದೇನೆಂದು ಅವಳಿಗೆ ತಿಳಿಯಲಿಲ್ಲ. ಧಡಕ್ಕನೆ ಎದ್ದುಕುಳಿತು ಭಯದಿಂದ ಸುತ್ತೆಲ್ಲ ಕಣ್ಣಾಸಿದಳು. ಪಕ್ಕದಲ್ಲೇ ಪಾಪು ಆದಿತ್ಯ ನಿದ್ದೆಯಲ್ಲಿತ್ತು. ಸಂತಸದಿಂದ ಅವನನ್ನು ಬಿಗಿದಪ್ಪಿ ಮುತ್ತಿಟ್ಟು ವಾಸ್ತವವನ್ನು ಅರಿತುಕೊಳ್ಳಲು ಪ್ರಯತ್ನಿಸಿದಳು. ತಾನಿರುವ ಪರಿಸರದ ಇಂಚಿಂಚನ್ನೂ ಕಣ್ಣಲ್ಲೇ ಪರಿಶೀಲಿಸತೊಡಗಿದಳು. ಅದೊಂದು ಹಂಚಿನ ಮನೆ. ಅವಳು ಮಲಗಿದ್ದ ಮಂಚ ಆ ಮನೆಯ ದೊಡ್ಡ ರೂಮಿನಲ್ಲಿತ್ತು. ಕೋಣೆಯಿಂದಾಚೆ ಹಾಲ್‌ನಂಥ ಜಾಗ, ಅದರ ಮರೆಯಲ್ಲಿ ಅಡುಗೆಮನೆ. ನಿಧಾನಕ್ಕೆ ಎದ್ದು ಹಾಲಿಗೆ ಕಾಲಿಟ್ಟಳು. ಪಕ್ಕದಲ್ಲೇ ಇನ್ನೊಂದು ಪುಟ್ಟ ಕೋಣೆ. ಆ ಕೋಣೆಯ ಬಾಗಿಲು ಹಾಕಿರಲಿಲ್ಲ. ಅಲ್ಲೂ ಗೋಡೆಗೆ ಒಂದು ಲ್ಯಾಂಪು ನೇತುಹಾಕಿತ್ತು. ನಡುವಯಸ್ಸಿನ ಕಟ್ಟುಮಸ್ತಾದ ಗಂಡಸು ಮತ್ತು ಹೆಂಗಸು ಅಲ್ಲಿ ಮಲಗಿದ್ದರು. ಮಧುರಾಗೆ ಮೈ ಜುಮ್ಮೆಂದಿತು. ನಡುಗುವ ದೇಹದಿಂದ ತಾನು ಮೊದಲು ಮಲಗಿದ್ದ ರೂಮಿಗೆ ಮರಳಿ ಮಂಚದ ಮೇಲೆ ಕುಕ್ಕರಿಸಿದಳು. ಸದ್ಯ ಪಾಪು ಎಚ್ಚರಗೊಂಡಿರಲಿಲ್ಲ. ವಿಪರೀತ ಸುಸ್ತು, ದಾಹವೆನಿಸಿ ಅಲ್ಲೇ ತಂಬಿಗೆಯಲಿದ್ದ ನೀರು ಕುಡಿದಳು. ತನ್ನನ್ನು ಇಲ್ಲಿಗೆ ಯಾಕೆ ಕರೆತಂದಿದ್ದಾರೆ, ಇದ್ಯಾವ ಜಾಗ, ತಾನು ಇಲ್ಲಿಗೆ ಬಂದದ್ದಾದರೂ ಹೇಗೆ ಎಂದೆಲ್ಲ ಯೋಚಿಸಿದಳು. ಆ ರೂಮಿನ ಗೋಡೆ ಮೊಳೆಯೊಂದಕ್ಕೆ ನೇತಾಡುತ್ತಿದ್ದ ತನ್ನ ವ್ಯಾನಿಟಿಬ್ಯಾಗು ಕಂಡದ್ದೇ ನಿಧಿ ಸಿಕ್ಕಂತೆ ಓಡಿ ಅದರ ಜಿಪ್ ತೆಗೆದು ತಡಕಾಡಿದಳು. ಅದರಲ್ಲಿ ಅವಳ ಮೊಬೈಲ್ ಇರಲಿಲ್ಲ. ಬದಲಿಗೆ ತಾನು ರಸ್ತೆಯಲ್ಲಿ ಕುಳಿತು ಮೋತಿಗೆ ಮುತ್ತಿಡುತ್ತಿರುವ ಚಿತ್ರದ ಪೇಪರ್ ಕಟ್ಟಿಂಗ್!
ಮಧುರಾ ಅಸಹಾಯಕಳಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಸ್ವಲ್ಪಹೊತ್ತಿಗೆ ಹೆಜ್ಜೆಗಳ ಶಬ್ದ ಕೇಳಿ ತಲೆಯೆತ್ತಿದರೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಆ ಹೆಂಗಸು ಅವಳೆದುರಿಗೆ ನಿಂತಿತ್ತು. “”ಯಾರು ನೀವು?” ಮಧುರಾ ಗಾಬರಿಯಿಂದ ತಡೆತಡೆದು ಉಚ್ಚರಿಸಿದಳು.
“”ನಾನು ಕೆಲಸದ ಚಿನ್ನಮ್ಮ. ನಿಮ್ಮತ್ತೆ ಮಾವ ಇಲ್ಲಿಗೆ ಕಳಾರೆ” ಆ ಹೆಂಗಸಿನ ಕನ್ನಡ ಉಚ್ಚಾರಣೆ ವಿಚಿತ್ರವಾಗಿ ಕೇಳಿಸಿತು.
“” ಯಾಕೆ ನನ್ನನ್ನು , ಆದಿತ್ಯನನ್ನು ಇಲ್ಲಿಗೆ ತಂದಿದ್ದಾರೆ? ಇದು ಯಾವು ಊರು? ಇದ್ಯಾರ ಮನೆ… ನೀವು ಎಲ್ಲಿಂದ ಬಂದಿರಿ?” ಮಧುರಾ ಬಡಬಡಿಸಿದಳು.
“” ಅದೆಲ್ಲ ಗೊತ್ತಿಲ್ಲ ಕಣಮ್ಮ. ನಿಮ್ಮತ್ತೆ ಮಾವಂಗೆ, ಚಿಕ್ ಸಾಯೇಬ್ರಿಗೆ ನಿಮ್ಮ ಮೇಲೆ ಭಾಳ ಸಿಟ್ಟದೆ. ನಿಮಗೆ ಎಚ್ಚರ ಇಲ್ಲದಾಗ ಕಾರಲ್ಲಿ ಹಾಕ್ಕೊಂಡು ತಂದವೆ. ನನ್° ಗಂಡ ಚಿನ್ನಪ್ಪ ನನ್ನೂ ನಿಮ್ಮನ್ನ ಕಾಯೋಕಂತ ಕಳಾರೆ”
“”ಓಹ್!”
“”ಅದೇನೋ ಕೊಟ್ಟವ್ರೆ ನೋಡಿ”
ಮಧುರಾ ಕವರ್ ಒಡೆದಳು. ಅದರಲ್ಲಿ ಒಂದು ಕಾಗದ; ನವೀನನ ಹಸ್ತಾಕ್ಷರ.
“ಸ್ವಲ್ಪ ದಿನ ಅಲ್ಲೇ ಬಿದ್ದಿರು. ಬುದ್ಧಿ ಬರಲಿ, ನಿಂಗೆ ಅದ್ಯಾವನ ಕೈಯಲ್ಲೋ ಫೊಟೋ ತೆಗೆಸ್ಕೊಂಡು ಪೇಪರಲ್ಲಿ ಹಾಕ್ಕೊಳ್ಳುವಷ್ಟು ಕೊಬ್ಬು ಬಂತಲ್ಲ ? ಅವನಿಗೂ ನಿನಗೂ ಸಂಬಂಧ ಇದೆ. ಇಲ್ಲವಾದರೆ ಇವೆಲ್ಲ ಸಾಧ್ಯವಿಲ್ಲ. ನೀ ಮಾಡಿದ ತಪ್ಪಿಗೆ ಡಿವೋರ್ ಒಂದೇ ದಾರಿ. ಲೆಟರ್ ಕಳಿಸ್ತೇನೆ, ಸಹಿ ಮಾಡಿಕೊಡು. ಒಂದಷ್ಟು ಸಮಯ ಅಲ್ಲೇ ಇರು. ಹೊರಹೋಗಲು ಪ್ರಯತ್ನಿಸಿದರೆ ಚಿನ್ನಪ್ಪ ಜೀವಸಹಿತ ಬಿಡೋದಿಲ್ಲ ನಿನ್ನ. ಆಮೇಲೂ ಅಷ್ಟೇ ಡಿವೋರ್ ತಗೊಂಡು ಮುಚ್ಕೊಂಡು ತವರಿಗೆ ಹೋಗು. ಅಲ್ಲಿ ಏನಾದರೂ ಸುಳ್ಳು ಹೇಳು. ನಿನ್ನ ಹಿಂದಿನ ಜೀವನದ ಕಥೆ ಎಲ್ಲೂ ಪ್ರಸ್ತಾಪವಾಗಬಾರದು. ನಾನು ನಿನ್ನ ಗಂಡನಾಗಿದ್ದೆ ಅಂತ ಎಲ್ಲಾದರೂ ಬಾಯಿಬಿಟ್ಟರೆ ಮುಗೀತು ನಿನ್ನ ಕಥೆ. ನೀನು ಎಲ್ಲಿದ್ದರೂ ತಿಳಿದುಕೊಳ್ಳುವ ಶಕ್ತಿ ನನಗಿದೆ, ಎಚ್ಚರದಿಂದಿರು ಗೊತ್ತಾಯ್ತಲ್ಲ?”
ಮಧುರಾಗೆ ತಲೆಚಿಟ್ಟು ಹಿಡಿಯಿತು. ಕಾಗದವನ್ನು ಎಸೆದು ಅಲ್ಲೇ ಇದ್ದ ಪೇಪರ್ ಕಟಿಂಗ್ ನೋಡಿದಳು. ಆವತ್ತು ಪಾಪುವನ್ನು ಮೋತಿಯನ್ನು ಮನೆಪಕ್ಕದ ರಸ್ತೆಯಲ್ಲಿ ವಾಕ್ ಮಾಡಿಸುತ್ತಿದ್ದಳು. ರಸ್ತೆಯ ಇನ್ನೊಂದು ಬದಿ ಯಾವುದೋ ನಾಯಿಯನ್ನು ನೋಡಿದ ಮೋತಿ ತಪ್ಪಿಸಿಕೊಂಡು ಓಟ ಕಿತ್ತಿತ್ತು. ರಸ್ತೆ ಬ್ಯುಸಿಯಾಗಿತ್ತು. ರೊಂಯ್ಯನೆ ಹೋಗುವ ವಾಹನಗಳು ಇನ್ನೇನು ಮೋತಿಯ ಮೇಲೇ ಹೋದವೆನಿಸಿ ಮಧುರಾ ಕಿರುಚಿಕೊಂಡಿದ್ದಳು. ಒಂದೆರಡು ವಾಹನ ಸವಾರರು ಕೊನೆಯಗಳಿಗೆಯಲ್ಲಿ ಬ್ರೇಕ್ ಹಾಕಿದ್ದರಿಂದ ಮೋತಿ ಬದುಕಿಕೊಂಡಿತ್ತು. ರಸ್ತೆಯ ಇನ್ನೊಂದು ಬದಿಯಲ್ಲಿ ನೀಡಿದ ತನ್ನ ಕೈಗಳಿಗೆ ಮೋತಿ ಬಂದಾಗ ಖುಷಿಯಲ್ಲಿ ಅದನ್ನು ತಬ್ಬಿಕೊಂಡಿದ್ದಳು. ಆ ಗಲಾಟೆಯಲ್ಲಿ ಫುಟ್‌ಪಾತಲ್ಲಿ ಬಿಟ್ಟು ಬಂದಿದ್ದ ಆದಿತ್ಯ ಅಳಲಾರಂಭಿಸಿದ್ದ. ಅಂತಾ ಹೊತ್ತಿನಲ್ಲಿ ಯಾರು ಪೋಟೋ ತೆಗೆದರೋ ಅದ್ಯಾವ ಸ್ಪರ್ಧೆಗೆ ಕಳಿಸಿದರೋ ಮಧುರಾಗೆ ಗೊತ್ತಿಲ್ಲ. ಇದರಲ್ಲಿ ತನ್ನದೇನು ತಪ್ಪು… ಮಧುರಾ ನಿಡುಸುಯ್ದಳು.
“”ಅಯ್ಯೋ… ಮೋತಿ ಮೋತಿ ಎಲ್ಲಿ? ಚಿನ್ನಮ್ಮ, ಮೋತಿ ಎಲ್ಲಿದೆ?” ಮಧುರಾ ಅಳಲಾರಂಭಿಸಿದಳು.
“”ಗಾಬ್ರಿ ಮಾಡ್ಕೊಬೇಡಿ ಕಣವ್ವಾ. ಅಂಗಳದಾಗದೆ ನಿಮ್ಮ ನಾಯಿ. ಬೆಳಿಗ್ಗೆ ನೋಡೋರಂತೆ”
“”ಇಲ್ಲ ಚಿನ್ನಮ್ಮ, ಮೋತಿಯನ್ನು ಈಗ್ಲೆà ತೋರಿಸಿ ಪ್ಲೀಸ್”
ಏನು ಯೋಚಿಸಿದಳ್ಳೋ ಚಿನ್ನಮ್ಮ ತಲೆಬಾಗಿಲು ತೆಗೆದು ಅವಳ ಕೈಹಿಡಿದು ಹೊರಗೆ ಕರೆದೊಯ್ದಳು. ಅಲ್ಲಿ ಚಡಪಡಿಸುತ್ತ ನಿಂತಿತ್ತು ಮೋತಿ. ಇವಳನ್ನು ನೋಡಿ ದುಃಖದ ಸದ್ದು ಮಾಡುತ್ತ ಹಾರಿ ಮುಖ ಕೈ ಕಾಲು ನೆಕ್ಕತೊಡಗಿತು. ಅದರ ಕೊರಳನ್ನು ತಬ್ಬಿ ಕುಳಿತ ಮಧುರಾಳನ್ನು ಬಿಡಿಸಿ ಒಳಗೆ ಕರೆತಂದು ಬಾಗಿಲು ಭದ್ರಪಡಿಸಿದಳು ಚಿನ್ನಮ್ಮ.
ದಿನಗಳು ಕಳೆದವು. ತಾನು ಯಾವ ಊರಲ್ಲಿದ್ದೇನೆಂದೂ ಮಧುರಾಗೆ ತಿಳಿಯಲಿಲ್ಲ. ಕೇಳಿದರೆ, “”ನಿಮ್ತಾವ ಏನನ್ನೂ ಹೇಳೂ ಹಂಗಿಲ್ಲ ಕಣವ್ವಾ” ಅಂದಳು ಚಿನ್ನಮ್ಮ. ಮಧುರಾ ಮನೆಬಾಗಿಲು ತೆಗೆದು ಹೊರಗೆ ಕಾಲಿಡುವಂತಿರಲಿಲ್ಲ. ಮೋತಿಯನ್ನೇ ತಂದು ಸ್ಟೋರ್‌ರೂಮಲ್ಲಿ ಕಟ್ಟಿಹಾಕಿದ್ದ ಚಿನ್ನಪ್ಪ. ಕಿಟಕಿಯ ಮೂಲಕ ಹೊರಗೆ ಗಮನಿಸಿದಾಗ ಆ ಮನೆಯ ಮೂರೂ ಭಾಗದಲ್ಲಿ ನೀರು ಸುತ್ತುವರಿದಿರುವುದು ಅಂದಾಜಿಗೆ ಬರುತ್ತಿತ್ತು. ಗಂಡನ ಊರಿನಲ್ಲಿ ಸೆಕೆಯೇ ಇಲ್ಲ, ಸದಾ ಚಳಿಯ ವಾತಾವರಣ. ಆದರೆ, ಇಲ್ಲಿ ಸೆಕೆ. ಹಾಗಾಗಿ ಈ ಊರು ಅಲ್ಲಿಂದ ಸುಮಾರು ದೂರದಲ್ಲಿರಬೇಕೆಂದು ಲೆಕ್ಕಹಾಕಿದಳು. ಚಿನ್ನಮ್ಮ ದಿನವೂ ಬೆಳಿಗ್ಗೆ ಚಪಾತಿ, ಮಧ್ಯಾಹ್ನ ಅನ್ನ, ರಾತ್ರಿಗೆ ಮುದ್ದೆ ತಯಾರಿಸುತ್ತಿದ್ದಳು. ಬಸ್ಸಾರು ಪಲ್ಯ, ಮೊಳಕೆಕಾಳು ಪಲ್ಯ ಹೀಗೆ ಏನನ್ನಾದರೂ ನೆಂಜಿಕೊಳ್ಳಲು ಮಾಡುತ್ತಿದ್ದಳು. ದಿನದಲ್ಲಿ ಎರಡು ಹೊತ್ತು ಬ್ಲ್ಯಾಕ್ ಟೀ ಕುಡಿಸುತ್ತಿದ್ದಳು. ಮನೆಯಲ್ಲಿ ಇನ್ನೂ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ ಸಂಗ್ರಹವಿತ್ತು. ಮಧುರಾ, ಚಿನ್ಮಮ್ಮ ಕೊಟ್ಟದ್ದನ್ನು ತಿಂದು ತನ್ನ ಪಾಡಿಗೆ ಆದಿತ್ಯನನ್ನು ಗಮನಿಸುತ್ತ ಇದ್ದುಬಿಡುತ್ತಿದ್ದಳು. ತಾನು, ಆದಿತ್ಯ ಜೀವಸಹಿತ ಅಲ್ಲಿಂದ ಹೊರಹೋದರೆ ಸಾಕು ಎಂಬುದೊಂದೇ ಅವಳ ಯೋಚನೆಯಾಗಿತ್ತು. ಮೋತಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ಆದಿತ್ಯನನ್ನು ಅವಳನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಿತ್ತು. ಮಧುರಾಳ ಮದುವೆಯಾದ ಹೊಸತರಲ್ಲಿ ಬೀದಿಯಲ್ಲಿ ಅನಾಥವಾಗಿ ಸಿಕ್ಕಿದ್ದ ನಾಯಿಮರಿಯೇ ಮೋತಿ. ಆದಿತ್ಯನಂತೆ ಮೋತಿ ಅವಳ ಇನ್ನೊಂದು ಮಗು.
ಆ ದ್ವೀಪದ ಮನೆಗೆ ಬಂದ ಗಳಿಗೆಯಿಂದ ಮಧುರಾ ಒಂದೊಂದು ದಿನವನ್ನೂ ಲೆಕ್ಕವಿಟ್ಟಿದ್ದಳು. ಸರಿಯಾಗಿ ಎರಡು ತಿಂಗಳಾದ ಮೇಲೆ ಒಂದು ದಿನ ಚಿನ್ನಪ್ಪ ಲೆಟರ್ ಒಂದನ್ನು ತಂದುಕೊಟ್ಟ. ಅದು ಡಿವೋರ್ಸ್ ಲೆಟರ್. ಮಧುರಾ ಹೆಚ್ಚು ಯೋಚಿಸದೆ ಸಹಿ ಮಾಡಿಕೊಟ್ಟಳು. ನಿರ್ಲಿಪ್ತವಾಗಿ ಇರಲು ಪ್ರಯತ್ನಿಸುತ್ತಿದ್ದಳು ಅವಳು. ಚಿನ್ನಮ್ಮ ಈಗ ಮೊದಲಿನ ಗಡಸುತನ ಬಿಟ್ಟು ಮಾತಾಡುತ್ತಿದ್ದಳು. ಒಮ್ಮೆ, “”ನವೀನ ಸಾಯೇಬ್ರು ಆಗಾಗ ಈ ಮನೆಗೆ ಬಂದು ಹೋಗ್ತಾರೆ” ಅಂದಳು.
“”ಯಾಕೆ?” ಎಂದು ಪ್ರಶ್ನಿಸಲಿಲ್ಲ ಮಧುರಾ. ಯಾರಲ್ಲೂ ಏನನ್ನೂ ಕೇಳಬಾರದು, ಯಾರಿಗೂ ಏನೋ ಸಮಜಾಯಿಷಿ ಕೊಡಬಾರದು ಎಂದು ತೀರ್ಮಾನಿಸಿದ್ದಳು ಅವಳು. ಅದೊಂದು ದಿನ ಚಿನ್ನಪ್ಪ ದೊಡ್ಡ ಪಾರ್ಸೆಲ್ ಒಂದನ್ನು ತಂದುಕೊಟ್ಟ. ಅದು ನವೀನ ಮತ್ತು ಮಧುರಾ ಸ್ವಇಚ್ಚೆಯಿಂದ ಬದುಕಲ್ಲಿ ದೂರ ಆಗುತ್ತಿರುವುದಾಗಿ ಬರೆದು ಸಹಿ ಮಾಡಿದ ವಿಚ್ಛೇದನ ಪತ್ರ! ವಿಷಾದದ ನಗುವೊಂದು ಅವಳ ತುಟಿಗಳ ಮೇಲೆ ಹಾದುಹೋಯಿತು. ಜೊತೆಯಲ್ಲಿ ನವೀನದ್ದೊಂದು ಕಾಗದ. ಕಳೆದ ಸಲ ಬರೆದ ಧಾಟಿಯಲ್ಲೇ ಧಮಕಿ ಹಾಕಿದ್ದ. “”ನಾಳೆ ಬೆಳಗಿನ ಜಾವ ಹೊರಡಿ. ನಿಮ್ಮನ್ನು ಮಗುವನ್ನು ನಿಮ್ಮ ತವರು ಮನೆಗೆ ಬಿಟ್ಟು ಬರಲು ಹೇಳಾರೆ” ಎಂದ ಚಿನ್ನಪ್ಪ. ಮಧುರಾ ಉತ್ತರಿಸಲಿಲ್ಲ. ಅವಳಿಗೆ ಗೊತ್ತಿತ್ತು. ತವರಿನಲ್ಲಿ ಅಪ್ಪ ಒಬ್ಬರನ್ನು ಬಿಟ್ಟರೆ ಉಳಿದವರಿಗೆಲ್ಲ ಬೇಕಿರುವುದು ತಾನಲ್ಲ; ತನ್ನ ದುಡ್ಡು. ಈಗ ಶ್ರೀಮಂತರ ಮನೆ ಸೊಸೆಯಲ್ಲದ ತನಗೆ ಅಲ್ಲೇನು ಕೆಲಸ.
ತಡೆತಡೆದು ಕೇಳಿದಳು, “”ಚಿನ್ನಪ್ಪ, ನನಗೊಂದು ಸಹಾಯ ಮಾಡ್ತೀರಾ?”
“”ಹೇಳವ್ವ , ಅದೇನು?”
“”ನನ್ನ ಗೆಳತಿ ಸುಮಾ ಇರುವ ಊರಿನ ಅಡ್ರೆಸ್ ಕೊಡುವೆ. ಅಲ್ಲಿಗೆ ತಲುಪಿಸುತ್ತೀರ ನನ್ನ? ಈ ಪರಿಸ್ಥಿತಿಯಲ್ಲಿ ನಾನು ತವರಿಗೆ ಹೋಗುವುದಿಲ್ಲ. ಸುಮಾ ಮನೆಯಲ್ಲಿ ಕೆಲದಿನ ಇದ್ದು ಏನಾದರೊಂದು ಕೆಲಸ ಹುಡುಕುತ್ತೇನೆ”
ಚಿನ್ನಪ್ಪ ಒಂದಷ್ಟು ಹೊತ್ತು ಯೋಚಿಸಿದ, “”ಆಯ್ತು ಕಣವ್ವ, ಹಂಗೇ ಆಗ್ಲಿ. ಆದ್ರೆ ಸಾಯೇಬ್ರಿಗೆ ಈ ವಿಷ್ಯ ಗೊತ್ತಾಗಂಗಿಲ್ಲ” ಎಂದ. ಮಧುರಾ ತಲೆದೂಗಿದಳು.
ಮರುಬೆಳಿಗ್ಗೆ ಘಟ್ಟದ ಕಡೆ ಹೊರಟ ಕಾರು ಸೂರ್ಯ ಮುಳುಗುವ ಹೊತ್ತಿಗೆ ಮಧುರಾ, ಆದಿತ್ಯ, ಮೋತಿಯನ್ನು ಸುಮಾಳ ಮನೆಯೆದುರು ನಿಲ್ಲಿಸಿ ಹೊರಟುಹೋಯಿತು. ಮಧುರಾಳ ಮತ್ತೂಂದು ಬದುಕಿನ ಪಯಣ ಆರಂಭವಾಗಿತ್ತು.
ವಿಜಯಶ್ರೀ ಹಾಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.