ಮುಂಬೈಗೆ ಲೋಕಲ್ ದಿಲ್ಲಿಗೆ ಮೆಟ್ರೋ
ದಿಲ್‌ವಾಲೋಂಕೀ ದಿಲ್ಲಿ
Team Udayavani, Jun 9, 2019, 6:00 AM IST
ದಿಲ್ಲಿಯ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ಲೋಕಲ್ ಟ್ರೈನು, ಡಬ್ಟಾವಾಲಾಗಳಿಲ್ಲದ ಮುಂಬೈಯನ್ನು ಊಹಿಸುವುದು ಅದೆಷ್ಟು ಕಷ್ಟವೋ, ಮೆಟ್ರೋ ಇಲ್ಲದ ದಿಲ್ಲಿಯ ಕಲ್ಪನೆ ಮಾಡಿಕೊಳ್ಳುವುದೂ ಕೂಡ ಅಷ್ಟೇ ಕಷ್ಟ. ಇಲ್ಲಿಯ ಮೆಟ್ರೋ ವ್ಯವಸ್ಥೆಯು ಕಳೆದ ಒಂದೂವರೆ ದಶಕಗಳಿಂದ ಕೇವಲ ಸಾರಿಗೆ ವ್ಯವಸ್ಥೆಯಾಗಿಯಷ್ಟೇ ಉಳಿಯದೆ ಶಹರದ, ಜನಸಾಮಾನ್ಯರ ನಾಡಿಮಿಡಿತವಾಗುವಷ್ಟು ಬೃಹತ್ತಾಗಿ ಬೆಳೆದಿದೆ.
ಮೆಟ್ರೋ ಇಂದು ದಿಲ್ಲಿ ನಗರವಾಸಿಗಳ ಬದುಕಿನ ಒಂದು ಅವಿಭಾಜ್ಯ ಅಂಗ. ಇಲ್ಲವಾದರೆ ರಾಷ್ಟ್ರರಾಜಧಾನಿಯಲ್ಲಿ ಇನ್ನೂರೈವತ್ತಕ್ಕೂ ಮಿಕ್ಕಿ ಮೆಟ್ರೋ ಸ್ಟೇಷನ್ನುಗಳನ್ನೂ, ಮುನ್ನೂರೈವತ್ತಕ್ಕೂ ಹೆಚ್ಚಿನ ಕಿಲೋಮೀಟರುಗಳನ್ನು ಮೆಟ್ರೋ ವ್ಯವಸ್ಥೆಯು ಆವರಿಸಿಕೊಂಡಿರುವ ರೀತಿಯು ಹುಡುಗಾಟದ ಮಾತೇನಲ್ಲ.
ಪದ್ಮಪ್ರಶಸ್ತಿ ಪುರಸ್ಕೃತ ಇ. ಶ್ರೀಧರನ್ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಆರಂಭವಾದ ದಿಲ್ಲಿ ಮೆಟ್ರೋ ಇಂದು ಈ ಮಟ್ಟಿಗೆ ಬೃಹತ್ತಾಗಿ ಬೆಳೆದಿರುವ ಪರಿಯೇ ಅದ್ಭುತ. “ಮೆಟ್ರೋಮ್ಯಾನ್’ ಖ್ಯಾತಿಯ ಶ್ರೀಧರನ್ 1995ರಿಂದ 2012ರ ವರೆಗೂ ದಿಲ್ಲಿ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಇಂದು ಮಹಾನಗರಿಯು ಬೆಳೆಯುತ್ತಿರುವಷ್ಟೇ ವೇಗದಲ್ಲಿ ಮೆಟ್ರೋ ಜಾಲವೂ ವ್ಯವಸ್ಥಿತವಾಗಿ ಹಬ್ಬಿಕೊಂಡಿದೆ. ಗುರುಗ್ರಾಮದಂಥ ಶಹರಗಳಿಗೆ Rಚಟಜಿಛ Mಛಿಠಿrಟ ಕಾಲಿಟ್ಟಿದೆ. ಹಲವು ಸ್ಥಳಗಳನ್ನು ಒಂದಕ್ಕೊಂದು ಬೆಸೆಯುವ ನಿಟ್ಟಿನಲ್ಲಿ ಮತ್ತಷ್ಟು ಮೆಟ್ರೋ ಜಾಲಗಳು ಸಿದ್ಧವಾಗುತ್ತಿವೆ. ತನ್ನ ಸೇವೆ, ಸೌಲಭ್ಯ ಮತ್ತು ತಾಂತ್ರಿಕತೆಯ ಗುಣಮಟ್ಟದಿಂದಾಗಿ ಇಂದು ವಿಶ್ವದ ಅತ್ಯುತ್ತಮ ಮೆಟ್ರೋಗಳ ಪಟ್ಟಿಯಲ್ಲಿ ದಿಲ್ಲಿ ಮೆಟ್ರೋ ಕೂಡ ತನಗೊಂದು ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಕಳೆದ ಮೂರು ವರ್ಷಗಳನ್ನಷ್ಟೇ ಪರಿಗಣಿಸಿದರೂ ಮೆಟ್ರೋ ವ್ಯವಸ್ಥೆಯು ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಂಡು ಈಗಾಗಲೇ ಇರುವ ಸ್ಟೇಷನ್ನುಗಳು ಸಂಭಾಳಿಸಬೇಕಿದ್ದ ಜನಸಂದಣಿಯನ್ನು ತಗ್ಗಿಸಿ ಪ್ರಯಾಣಿಕರು ನಿರಾಳರಾಗುವಂತೆ ಮಾಡಿರುವುದು ಸತ್ಯ. ಇವುಗಳಲ್ಲಿ ಭೂತಳ ಮೆಟ್ರೋಸ್ಟೇಷನ್ನುಗಳೂ ಇರುವುದು ಗಮನಾರ್ಹ ಅಂಶ. ಉದಾಹರಣೆಗೆ ಇಲ್ಲಿಯ ಹಾಜಾVಸೆ¾ಟ್ರೋ ಸ್ಟೇಷನ್ ನೆಲದ ಮಟ್ಟಕ್ಕಿಂತ ಇಪ್ಪತ್ತೂಂಬತ್ತು ಚಿಲ್ಲರೆ ಮೀಟರುಗಳಷ್ಟು ಆಳದಲ್ಲಿ ನಿರ್ಮಿತವಾಗಿದ್ದು ವಿಮಾನ ನಿಲ್ದಾಣಗಳಿಗೆ ಪೈಪೋಟಿ ನೀಡುವಷ್ಟು ವ್ಯವಸ್ಥಿತವಾಗಿದೆ. ಇನ್ನು ಗೋಡೆಗಳನ್ನು ಅಲಂಕರಿಸಿರುವ ಭಾರತೀಯ ಸಾಂಪ್ರದಾಯಿಕ ಕಲಾಕೃತಿಗಳು, ಗ್ರಾಫಿಟಿಗಳು ಮತ್ತು ಬಗೆಬಗೆಯ ಕಲಾಪ್ರಕಾರಗಳು ನೀರಸವಾಗಬಹುದಿದ್ದ ನಿಲ್ದಾಣದ ಗೋಡೆಗಳನ್ನು ಸಿಂಗರಿಸಿ ಕಲಾತ್ಮಕ ಮ್ಯೂಸಿಯಂಗಳಾಗಿಸಿವೆ.
ಮೆಟ್ರೋದೊಳಗೊಂದು ಲೋಕ
ದೆಹಲಿಯ ಹೃದಯದಂತಿರುವ ಕನ್ನಾಟ್‌ಪ್ಲೇಸ್‌ನಲ್ಲಿರುವುದು ರಾಜೀವ್ ಚೌಕ ಮೆಟ್ರೋ ಸ್ಟೇಷನ್. ಹಲವು ದಿಕ್ಕುಗಳಿಂದ ಬರುವ ವಿವಿಧ ಮೆಟ್ರೋಲೈನುಗಳು ಈ ಬಿಂದುವಿನಲ್ಲೇ ಸಂಧಿಸುವುದರಿಂದ ಬಹಳ ಹಿಂದಿನಿಂದಲೂ ಈ ಜಾಗದ ಜನಸಂದಣಿಯು ಬೆಚ್ಚಿಬೀಳಿಸುವಂಥಾದ್ದು. ಒಳಭಾಗದಲ್ಲೂ ಫ್ಲ್ಯಾಟ್‌ಫಾರ್ಮ್ ಗಳಿಂದ ಫ್ಲ್ಯಾಟ್‌ಫಾರ್ಮ್ಗಳಿಗೆ ಸಾಗಲು ಪುಟ್ಟ ಸೇತುವೆಗಳು. ಈ ಮಿನಿ ಸೇತುವೆಗಳ ಮೇಲೆ ನಿಂತು ನೋಡಿದರಂತೂ ಕಟ್ಟಿರುವೆಗಳ ರಾಶಿಯಂತೆ ತಮ್ಮದೇ ಗುಂಗಿನಲ್ಲಿ ಎಡೆಬಿಡದೆ ಓಡಾಡುತ್ತಿರುವ ಜನಸಾಗರ. ಒಳಾಂಗಣವಂತೂ ಎಲ್ಲಾ ದಿಕ್ಕುಗಳೂ ಒಂದೇ ರೀತಿ ಕಾಣುವಂತಿನ ಭ್ರಮೆಯಂತಿರುವ ಶೈಲಿ. ಈ ಭೂಲ-ಭುಲಯ್ನಾಗಳಲ್ಲಿ ಅತ್ತಿತ್ತ ಓಡಾಡಿ, ಅಲೆದಾಡಿ ಸುಸ್ತಾದವರಿಗೆಂದೇ ಅಲ್ಲಲ್ಲಿ ಬರ್ಗರ್ ಪಾಯಿಂಟ…, ಕಾಫಿಡೇಗಳ ಮೂಲೆ.
ಮೆಟ್ರೋದೊಳಗಿನಿಂದ ಕಾಣುವ ದಿಲ್ಲಿಯು ಶಹರದ ಪಕ್ಷಿನೋಟವೇ ಸರಿ. ಆಗಸಕ್ಕೆ ಮುತ್ತಿಕ್ಕುವಂತೆ ನೆಟ್ಟಗೆ ನಿಂತಿರುವ ಕುತುಬ್‌ಮಿನಾರ್, ಝಂಡೇವಾಲಾದ ಹನುಮ, ವಿಶಾಲವಾಗಿ ಹಬ್ಬಿಕೊಂಡಿರುವ ಅಕ್ಷರಧಾಮ, ಕಮಲಮಂದಿರದ ದೈತ್ಯಶ್ವೇತದಳಗಳು… ಹೀಗೆ ಮೆಟ್ರೋದ ದೂರ ಮತ್ತು ಎತ್ತರಗಳಿಗ ಇವೆಲ್ಲ ಮತ್ತಷ್ಟು ಆಕರ್ಷಕವಾಗಿ ಕಂಡು ಮನಸೂರೆಗೊಳ್ಳುತ್ತವೆ. ಮೆಟ್ರೋದಲ್ಲಿ ನಿತ್ಯವೂ ಸಾಗುವವರಿಗೆ ಹೀಗೆ ಇಲ್ಲಿ ಸಂಕ್ಷಿಪ್ತ ದಿಲ್ಲಿ ದರ್ಶನ. ಉಳಿದಂತೆ ಪ್ರಯಾಣಿಕರಲ್ಲಿ ಬಹುತೇಕರು ತಮ್ಮ ಸ್ಮಾರ್ಟ್ ಫೋನುಗಳಲ್ಲಿ ವ್ಯಸ್ತರಾಗಿದ್ದರೆ, ಇನ್ನುಳಿದ ಬೆರಳೆಣಿಕೆಯ ಮಂದಿಗೆ ಒಂದಷ್ಟು ಪುಸ್ತಕಪ್ರೀತಿ. ಅಂದ ಹಾಗೆ ಮೆಟ್ರೋ ಮೆಹಫಿಲ್‌ನಲ್ಲಿ ಪ್ರೇಮಿಗಳ ಪಾಲನ್ನೂ ತಳ್ಳಿಹಾಕುವಂತಿಲ್ಲ. ಅವರದ್ದು ಪ್ಯಾರ್ ಕಿಯಾತೋ ಡರ್ನಾ ಕ್ಯಾ ಧಾಟಿ!
ಗಡಿಬಿಡಿ ದುನಿಯಾ
ನಮ್ಮದು ಶರವೇಗದ ಯುಗ. ಶಹರದ ಜನಸಂಖ್ಯೆಗೂ, ಗಡಿಬಿಡಿಗೂ ತಕ್ಕಂತೆ ಮೆಟ್ರೋಗಳೂ ಸಾಕಷ್ಟಿವೆ. ಸಮಯ ಪರಿಪಾಲನೆಯಲ್ಲಿ ಮೆಟ್ರೋಗಳ ಸ್ಟ್ರೈಕ್ ಅಸಾಮಾನ್ಯ. ಒಟ್ಟಾರೆಯಾಗಿ ಪ್ರತೀ ಮೂರು ನಿಮಿಷಕ್ಕೊಮ್ಮೆ ಆರರಿಂದ ಎಂಟು ಬೋಗಿಗಳಿರುವ ಒಂದು ಮೆಟ್ರೋ ಪ್ರಯಾಣಿಕರನ್ನು ಕರೆದೊಯ್ಯಲು ತಯಾರಾಗಿ ಬರುತ್ತದೆ. ಇಷ್ಟಿದ್ದರೂ ಪ್ರಯಾಣಿಕರ ಗುಂಪು ಕೆಲವೊಮ್ಮೆ ಜಲ್ಲಿಕಟ್ಟುವಿನ ಗೂಳಿಗಳಂತೆ ತಾಳ್ಮೆಗೆಟ್ಟು ಬೋಗಿಯ ಒಳನುಗ್ಗುತ್ತದೆ. ಅದೂ ಕೂಡ ಆಯಾ ಸ್ಟೇಷನ್ನಿನಲ್ಲಿ ಇಳಿಯಬೇಕಾಗಿರುವ ಪ್ರಯಾಣಿಕರಿಗೆ ಮೊದಲು ದಾರಿಬಿಟ್ಟು ಕೊಡಲಾಗದಷ್ಟಿನ ಅವಸರದಲ್ಲಿ.
ಹಿಂದೆಲ್ಲಾ ರಾಜೀವ ಚೌಕಗಳಂಥ ಜನನಿಬಿಡ ಸ್ಟೇಷನ್‌ಗಳಲ್ಲಿ ಪ್ರಯಾಣಿಕರ ಅರ್ಥವಿಲ್ಲದ ಅವಸರಕ್ಕೆ ಕಡಿವಾಣ ಹಾಕಲೆಂದೇ ಮೆಟ್ರೋ ಬೋಗಿಯ ದ್ವಾರಗಳ ಬಳಿ ಸಮವಸ್ತ್ರಧಾರಿ ಪಡೆಗಳನ್ನು ನೇಮಿಸಲಾಗುತ್ತಿತ್ತು. ಆದರೆ, ಮೆಟ್ರೋ ಜಾಲವು ಹಬ್ಬುತ್ತ ಜನಸಂದಣಿಯು ಒಂದಷ್ಟು ತಿಳಿಯಾಗುತ್ತಿದ್ದಂತೆ ಮತ್ತು ಸುರಕ್ಷತೆಯ ನಿಟ್ಟಿನಲ್ಲಿ ಕೆಲ ಮೆಟ್ರೋಸ್ಟೇಷನ್‌ಗಳಲ್ಲಿ ಪಾರದರ್ಶಕ ತಡೆಗೋಡೆಯಂತಿನ ವ್ಯವಸ್ಥೆಯೊಂದಿಗೆ ಸ್ವಯಂಚಾಲಿತ ಗೇಟುಗಳನ್ನು ಅಳವಡಿಸಿದ್ದರಿಂದಾಗಿ ಇಂಥ ಜಂಜಾಟಗಳು ಒಂದಷ್ಟು ಕಮ್ಮಿಯಾಗಿವೆಯೆಂದರೆ ತಪ್ಪಾಗಲಿಕ್ಕಿಲ್ಲ. ಅಂದ ಹಾಗೆ, ಇಡೀ ಜಗತ್ತು ಅವಸರದಲ್ಲಿರುವಂತೆ ಕಾಣುವುದೇನೋ ಸರಿ. ಆದರೆ, ನಿಜಕ್ಕೂ ಸಮಯಕ್ಕೆ ನಿಷ್ಠರಾಗಿರುವವರೆಷ್ಟು ಎಂಬುದು ಮಾತ್ರ ಚರ್ಚಾಸ್ಪದ ಸಂಗತಿ.
ಮೆಟ್ರೋ ಮಹಾಭಾರತ
ಕೆಲವೊಮ್ಮೆ ಮೆಟ್ರೋ ಒಂದು ಮಹಾಕಥೆಯಾಗಿ, ಮೆಟ್ರೋ ಸ್ಟೇಷನ್ನುಗಳಿಂದ ಆಟೋ, ಸೈಕಲ್‌ಕ್ಷಾ, ಇ-ರಿಕ್ಷಾಗಳೊಂದಿಗೆ ಚಿಕ್ಕ ಅಸಂಖ್ಯಾತ ರೆಂಬೆಗಳಾಗಿ ಶಹರದೆಲ್ಲೆಡೆ ಹಂಚಿಹೋಗುವ ಸಾರಿಗೆ ವ್ಯವಸ್ಥೆಯು ಉಪಕಥೆಗಳಾಗಿ ಕಾಣುವುದೂ ಇದೆ. ಇಂದು ಒಂದು ಮೆಟ್ರೋಸ್ಟೇಷನ್ನಿನಿಂದಾಗಿ ಸ್ಟೇಷನ್ ಆವರಣದಲ್ಲಿ ಹಾಕಿರುವ ಪುಟ್ಟ ಬೀಡದಂಗಡಿಯಿಂದ ಹಿಡಿದು ರಸ್ತೆಯ ಮೇಲೆ ಚಾಪೆಹಾಸಿ ಸೆಕೆಂಡ್‌ಹ್ಯಾಂಡು ಪುಸ್ತಕಗಳನ್ನು ಮಾರುವ ಹುಡುಗನವರೆಗೂ ವ್ಯಾಪಾರ ಕುದುರಿಕೊಳ್ಳುತ್ತದೆ. ಇದು ಸಾರಿಗೆ ವ್ಯವಸ್ಥೆಯಾಚೆಗಿರುವ ಅರ್ಥವ್ಯವಸ್ಥೆಯ ಒಂದು ಮುಖ. ಖಾಸಗಿ ಟ್ಯಾಕ್ಸಿ, ಪೂಲ್ ಸೌಲಭ್ಯಗಳು ಮಹಾನಗರಿಯಲ್ಲಿ ಅಗತ್ಯಕ್ಕಿಂತ ಹೆಚ್ಚೇ ಇರುವಷ್ಟಿದ್ದರೂ ಮೆಟ್ರೋ ಯಾವತ್ತಿಗೂ ಜನಪ್ರಿಯ. ಏಕೆಂದರೆ ಮೆಟ್ರೋ ಒಂದು ರೀತಿಯಲ್ಲಿ ಜನಸಾಮಾನ್ಯರ ತಲ್ಲಣಗಳನ್ನು ಅರಿತುಕೊಂಡಂತಿರುವ, ಕಾಲಾಂತರದಲ್ಲಿ ಅವರೊಳಗೊಂದಾದ ವ್ಯವಸ್ಥೆ. ಪ್ರಯಾಣಿಕರಿಗಿಲ್ಲಿ ಟ್ರಾಫಿಕ್ ಜಾಮ್‌ಗಳಿಲ್ಲದ ನಿರಾತಂಕ ಪ್ರಯಾಣ. ಜೇಬಿಗೂ ಅಷ್ಟೇ ಸಮಾಧಾನ.
ಹೀಗಾಗಿ ಮೆಟ್ರೋ ಅದೆಷ್ಟು ಮಾಡರ್ನ್ ಆಗಿದ್ದರೂ ದಿಲ್ಲಿಯ ನಿವಾಸಿಗಳಿಗೆ “ದೇಸಿ’ಯೇ!
ಪ್ರಸಾದ್ ನಾೖಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.