ಎಂ. ಕೆ. ಇಂದಿರಾ ನೂರರ ನಮನ ಸಾವಿರದ ಚಿಂತನ


Team Udayavani, Dec 17, 2017, 10:13 AM IST

MKI-Udayavaani-New1.jpg

1917ಜನವರಿ 5ರಂದು ತೀರ್ಥಹಳ್ಳಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೊದರಲ್ಲಿ ಹುಟ್ಟಿದ ಮಂಡಗದ್ದೆ ಕೃಷ್ಣರಾವ್‌ ಇಂದಿರಾ (ಎಂ. ಕೆ. ಇಂದಿರಾ) ಕನ್ನಡದ ಆರಂಭಿಕ ಹಂತದ ಮಹತ್ವದ ಕಾದಂಬರಿಕಾರ್ತಿಯರಲ್ಲೊಬ್ಬರು. ಒಂದು ವಿಸ್ಮಯ ಎನ್ನಿಸುವಷ್ಟು ಪ್ರತಿಭಾವಂತ ಕಥೆಗಾರ್ತಿ. ಓದಿದ್ದು ಬರೇ ಎರಡನೇ ತರಗತಿಯವರೆಗಾದರೂ ಬರೆದಿದ್ದು 45 ಕಾದಂಬರಿಗಳು. ಅವು ಎಷ್ಟರ ಮಟ್ಟಿಗೆ ಸಾಹಿತ್ಯಪ್ರಿಯರ ಗಮನ ಸೆಳೆದವು ಅಂದರೆ ಅವುಗಳಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಪಿ.ಎಚ್‌ಡಿ.ಯ ವಿಷಯಗಳಾಗಿಯೂ ಪ್ರಸಿದ್ಧವಾದವು. ಎಳೆಯ ವಯಸ್ಸಿನಲ್ಲಿಯೇ ಮದುವೆಯಾಗಿ ಸಂಸಾರದ ಜವಾಬ್ದಾರಿಯನ್ನು ಹೊತ್ತು ಜಂಜಾಟಗಳಲ್ಲಿ ಮುಳುಗಿದ್ದ ಅವರು ಕಾದಂಬರಿಗಳನ್ನು ಬರೆಯಲಾರಂಭಿಸಿದ್ದು ತಮ್ಮ 45ನೆಯ ವರ್ಷದಲ್ಲಿ.  ಪುರುಷ ಪ್ರಧಾನ ಸಮಾಜವು ಒಬ್ಬ ಪ್ರತಿಭಾವಂತ ಹೆಣ್ಣನ್ನೂ ಹೇಗೆ ಮೂಲೆಗುಂಪಾಗಿಸುತ್ತದೆ ಅನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಇಂದಿರಾರವರು. ಸ್ತ್ರೀಸಾಹಿತ್ಯವೆಂದರೆ ಅಡುಗೆಮನೆ ಸಾಹಿತ್ಯವೆಂದು ತಾತ್ಸಾರದಿಂದ ಕಾಣುವ ಓದುಗರ ವರ್ಗವು ಬೆರಗಾಗುವಂತಹ ಸಾಹಿತ್ಯವನ್ನು ಎಂ.ಕೆ. ಇಂದಿರಾ ಸೃಷ್ಟಿಸಿದ್ದಾರೆ ಅನ್ನುವುದನ್ನು ಅವುಗಳಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಎಚ್ಚರದಿಂದ ಓದಿ ಅಧ್ಯಯನ ಮಾಡಿದವರು ಇಂದು ಒಪ್ಪಲೇಬೇಕು. 

ಪುರುಷ ಸಾಹಿತಿಗಳ ಪ್ರೌಢ ಶೈಲಿಯಲ್ಲಿ ಅಲ್ಲದಿದ್ದರೂ ಸರಳ ನಿರಾಡಂಬರ ಶೈಲಿಯಲ್ಲಿ ಅಂದಿನ ಸಮಾಜದ ಚಿತ್ರಣವನ್ನು ಯಶಸ್ವಿಯಾಗಿ ಕೊಟ್ಟಿದ್ದಾರೆ ಎಂ. ಕೆ. ಇಂದಿರಾ. ಪಾಶ್ಚಾತ್ಯ ದೇಶಗಳಲ್ಲಿ ಹುಟ್ಟಿಕೊಂಡ ಸ್ತ್ರೀವಾದವೆಂಬ ಚಳುವಳಿಯ ಸಿದ್ಧಾಂತಗಳ ಬಗ್ಗೆ ಏನೂ ಓದಿಕೊಳ್ಳದಿದ್ದರೂ ನಮ್ಮ ಸಮಾಜದಲ್ಲಿ ಸ್ತ್ರೀಯರಿಗಾಗುವ ಅನ್ಯಾಯ ಮತ್ತು ತಾರತಮ್ಯ ದೃಷ್ಟಿಯ ಬಗ್ಗೆ ಪರಿಣಾಮಕಾರಿ ಚಿತ್ರಣವನ್ನು ಕೊಟ್ಟಿದ್ದಾರೆ. ಅಲ್ಲದೆ ಮಲೆನಾಡಿನ ಮಣ್ಣಿನ ಕಂಪು-ಇಂಪುಗಳನ್ನು ಸಾಹಿತ್ಯದಲ್ಲಿ ಅಮರವಾಗಿಟ್ಟವರಲ್ಲಿ ಕುವೆಂಪು ಅವರನ್ನು ಬಿಟ್ಟರೆ ಪ್ರಮುಖರಾಗಿ ಕಾಣುವವರು ಎಂ.ಕೆ. ಇಂದಿರಾ ಅವರೇ ಆಗಿದ್ದಾರೆ. ಅವರ ಸ್ತ್ರೀಪರ ಕಾಳಜಿ ಎದ್ದು ಕಾಣುವ ಫ‌ಣಿಯಮ್ಮ ಮತ್ತು ಗೆಜ್ಜೆಪೂಜೆ ಎಂಬ ಎರಡು ಕಾದಂಬರಿಗಳ ಮೇಲೆ ಈ ಬರಹ‌.

ಫ‌ಣಿಯಮ್ಮ
ಚಲನಚಿತ್ರವಾಗುವುದರ ಮೂಲಕ ಅಂತಾರಾಷ್ಟ್ರೀಯ ಖ್ಯಾತಿಗೇರಿದ ಕಾದಂಬರಿ ಎಂ.ಕೆ. ಇಂದಿರಾ ಅವರ “ಫ‌ಣಿಯಮ್ಮ’.  “ಫ‌ಣಿಯಮ್ಮ’ ಎಂಬ ನಿಜಜೀವನದ ಬಾಲವಿಧವೆಯ ಪಾತ್ರಕ್ಕೆ ಕಾಲ್ಪನಿಕತೆಯ ಹಂದರದ ಮೆರುಗನ್ನು ನೀಡಿ ಸೃಷ್ಟಿಸಿದ ಕಾದಂಬರಿಯಿದು. ಇಪ್ಪತ್ತನೆಯ ಶತಮಾನದ ಆದಿಮ ಹಂತದಲ್ಲಿ  ಸಾಹಿತ್ಯದಲ್ಲಿ ಪ್ರಚಲಿತವಿದ್ದ ಸುಧಾರಣಾವಾದಿ ನಿಲುವನ್ನು ದಾಟಿ ಹಿಂದೂ ಧರ್ಮದಲ್ಲಿ  ಮುಖ್ಯವಾಗಿ ಬ್ರಾಹ್ಮಣ ಸಂಪ್ರದಾಯದಲ್ಲಿ ಆಚರಣೆಯಲ್ಲಿದ್ದ ಬಾಲ್ಯವಿವಾಹ ಮತ್ತು ವೈಧವ್ಯಗಳ ಕ್ರೌರ್ಯವನ್ನು ನೇರವಾಗಿ ಅಲ್ಲದಿದ್ದರೂ  ಪರೋಕ್ಷವಾಗಿ ಈ ಕಾದಂಬರಿ ಪ್ರತಿಭಟಿಸುತ್ತದೆ. ಎಂ.ಕೆ. ಇಂದಿರಾ ಇದನ್ನು ಬರೆದ ಕಾಲದಲ್ಲಿ (1976) ಸ್ತ್ರೀವಾದದ ಪರಿಕಲ್ಪನೆಯು  ಪಾಶ್ಚಾcತ್ಯ ದೇಶಗಳ ಮೂಲಕ ಭಾರತವನ್ನು ಪ್ರವೇಶಿಸಿಯಾಗಿತ್ತು. 1975ರ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಆಚರಣೆಯ ನಂತರ ಭಾರತೀಯ ಸ್ತ್ರೀಯರಲ್ಲೂ ಜಾಗೃತಿ ಮೂಡಲಾರಂಭಿಸಿತ್ತು. ಲಾಗಾಯ್ತಿನಿಂದಲೂ ಪುರುಷ ಪ್ರಧಾನವಾದ ಭಾರತೀಯ ಸಮಾಜದಲ್ಲಿ  ಸಂಪ್ರದಾಯದ ಹೆಸರಿನಲ್ಲಿ ಮುಂದುವರಿಯುತ್ತಲೇ ಇದ್ದ  ಸ್ತ್ರೀಯರ ಮೇಲಿನ  ದೌರ್ಜನ್ಯ, ದಬ್ಟಾಳಿಕೆ, ಶೋಷಣೆ, ಲಿಂಗ ತಾರತಮ್ಯಗಳ ವಿರುದ್ಧ ಪ್ರಜ್ಞಾnವಂತ ಸ್ತ್ರೀ-ಪುರುಷರ ಧ್ವನಿಗಳು ಕೇಳಲಾರಂಭಿಸಿದ್ದವು. 

ಈ ಹೋರಾಟದ ಫ‌ಲವಾಗಿ  ಹಲವು ಭಾರತೀಯ ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳೂ ಬಂದವು. ಶಿವರಾಮ ಕಾರಂತರ ಕನ್ಯಾಬಲಿ,  ಮೂಕಜ್ಜಿಯ ಕನಸುಗಳು, ಯು. ಆರ್‌. ಅನಂತಮೂರ್ತಿಯವರ ಘಟಶ್ರಾದ್ಧ, ಎಸ್‌.ಎಲ್‌. ಭೈರಪ್ಪರ ವಂಶವೃಕ್ಷ ಮೊದಲಾದ ವೈಧವ್ಯದ ಘೋರ ಹಿಂಸೆಯ ಕುರಿತಾದ ಕಾದಂಬರಿಗಳೇ ಬಂದಿದ್ದವು. ಅಂತೆಯೇ ಎಂ.ಕೆ. ಇಂದಿರಾ ಅವರ ಫ‌ಣಿಯಮ್ಮನೂ ಬಂದಳು.

ಲೇಖಕಿಯ ಅಜ್ಜ ಕಿಟ್ಟಪ್ಪನವರ ತಂಗಿಯೇ ಫ‌ಣಿಯಮ್ಮ. ನೂರಾರು ಮಂದಿ ಜತೆಯಾಗಿ ಬಾಳುತ್ತಿದ್ದ  ಕೂಡುಕುಟುಂಬದಲ್ಲಿ  ಹುಟ್ಟಿದಾಕೆ. ಮಕ್ಕಳು ಮೈನೆರೆಯುವುದಕ್ಕೆ ಮೊದಲೇ ಮನೆಗೆಲಸಕ್ಕೆ ಹಚ್ಚುವುದು ಸಂಪ್ರದಾಯವಾಗಿದ್ದರಿಂದ  ಒಂಬತ್ತು ವರ್ಷಕ್ಕೇ ಫ‌ಣಿಯಮ್ಮ ಇನ್ನೂ ಸರಿಯಾಗಿ ಮುಖ ನೋಡಿಯೇ ಇಲ್ಲದ ಹುಡುಗನೊಂದಿಗೆ ಅವಳ ವಿವಾಹವಾಗುತ್ತದೆ. ಒಂದೆರಡು ತಿಂಗಳಲ್ಲೇ ಆಕೆ ವಿಧವೆಯೂ ಆಗುತ್ತಾಳೆ. ಅಂದಿನಿಂದ ಅವಳ ಕಷ್ಟಕೋಟಲೆಗಳು ಆರಂಭವಾಗುತ್ತವೆ. ನುಣ್ಣಗೆ ಬೋಳಿಸಿದ ತಲೆ, ಬಿಳಿಸೀರೆ, ಒಪ್ಪೊತ್ತಿನ ಊಟ, ಮಡಿ, ಉಪವಾಸ ವ್ರತ- ಒಟ್ಟಿನಲ್ಲಿ ಸನ್ಯಾಸಿನಿಯ ಬದುಕು. ಲೌಕಿಕದ ಎಲ್ಲ ಅಂಟುಗಳನ್ನೂ ತಾನಾಗಿಯೇ ತೊರೆದು ಋಷಿಯಂತೆ ಬದುಕುತ್ತಾಳೆ ಫ‌ಣಿಯಮ್ಮ. ರಾತ್ರಿಯಲ್ಲಿ ನಿದ್ದೆಗೆ ಜಾರುವ ಕೆಲವು ಗಂಟೆಗಳ ಹೊರತಾಗಿ ಇಡೀ ದಿನ ಗಾಣದೆತ್ತಿನಂತೆ ಮನೆಯ ಮತ್ತು ಕುಟುಂಬದ ಇತರರಿಗಾಗಿ ದುಡಿಯುತ್ತಾಳೆ ಫ‌ಣಿಯಮ್ಮ.

ವರ್ಷಗಳುರುಳಿದಂತೆ ಫ‌ಣಿಯಮ್ಮ ಬೌದ್ಧಿಕವಾಗಿ ಬೆಳೆಯುತ್ತ ಮಾನಸಿಕವಾಗಿ ವಿಕಾಸಗೊಳ್ಳುತ್ತಾಳೆ. ಆದ್ದರಿಂದಲೇ ಹೊಲೆಯರ ಕೇರಿಯ ಸಂಕಿಯ ಹೆರಿಗೆ ಮಾಡಿಸಿ ಕೊಟ್ಟು ಪ್ರಾಣ ಉಳಿಸುತ್ತಾಳೆ. ನೂರಾರು ಬಾಣಂತನ ಸೇವೆಗಳನ್ನು ಸರಾಗವಾಗಿ ಮಾಡಿದ್ದ ಫ‌ಣಿಯಮ್ಮನಿಗೆ ವಾಸ್ತವದಲ್ಲಿ ಹೆರಿಗೆಯೆಂದರೇನೆಂದೇ ತಿಳಿಯದು. ಆದರೂ ನಾಲ್ಕು ದಿನಗಳಿಂದ ಹೆರಿಗೆ ನೋವು ತಿನ್ನುತ್ತ ಗರ್ಭದೊಳಗೆ ಅಡ್ಡ ಸಿಕ್ಕಿದ್ದ ಮಗುವನ್ನು ಸೂಲಗಿತ್ತಿಯ ನಿರ್ದೇಶನದಲ್ಲಿ ಕೈಗೆ ಹರಳೆಣ್ಣೆ ಹಚ್ಚಿಕೊಂಡು ಒಳಗೆ ತೂರಿಸಿ ಮಗುವನ್ನು ಹೊರಗೆಳೆದು ತಾಯಿ-ಮಗು ಇಬ್ಬರನ್ನೂ ಉಳಿಸುತ್ತಾಳೆ. ಈ ಘಟನೆಯಿಂದ ನಾವು ಆಕೆಯ ಎರಡು ಮುಖಗಳನ್ನು ನೋಡಬಹುದು. ಒಂದು-ಗೊಡ್ಡು ಸಂಪ್ರದಾಯವು ಜಾತಿ-ಧರ್ಮ, ಮಡಿ-ಮೈಲಿಗೆಗಳ ಹೆಸರಿನಲ್ಲಿ ಅಮಾನವೀಯವಾಗುವ ಕ್ರೌರ್ಯವನ್ನು ಮೀರಿ ಚಿಂತಿಸುವುದು ಎರಡು- ತಾನು ಹೊಲೆಯರ ಗುಡಿಸಲಿನ ಒಳಹೊಕ್ಕ  ವಿಚಾರವನ್ನು ಗುಟ್ಟಾಗಿಡುತ್ತ  ಸಂಪ್ರದಾಯವನ್ನು ಆಚರಿಸುವವರ ವಿರುದ್ಧ ಸಂಘರ್ಷಕ್ಕಿಳಿಯದಿರುವುದು.

ದಾûಾಯಿಣಿ ಹದಿನಾರು ವರ್ಷದ ತರುಣಿಯಾಗಿದ್ದಾಗ ಅವಳ ಗಂಡ ಸತ್ತು ಹೋಗುತ್ತಾನೆ. ಆದರೆ, ಅವಳು ತಲೆ ಬೋಳಿಸಿ ಮಡಿಯುಟ್ಟುಕೊಳ್ಳಲು ಸಿದ್ಧಳಾಗದೆ ಮೊಂಡು ಹಠ ಹಿಡಿದಾಗ ಫ‌ಣಿಯಮ್ಮ ಆಕೆಯನ್ನು ಬೆಂಬಲಿಸಿ ಮಾತನಾಡುವುದು ಆಕೆಯ ಪ್ರಗತಿಪರ ಚಿಂತನೆಯ ದ್ಯೋತಕವಾಗಿ ನಿಲ್ಲುತ್ತದೆ. ವಿಧವೆಯರ ಸ್ಥಿತಿಗತಿ ಬದಲಾಗಬೇಕು, ಅವರಿಗೂ ಆಯ್ಕೆಯ ಸ್ವಾತಂತ್ರ್ಯ ಸಿಗಬೇಕು ಅನ್ನುವುದು ಅವಳ ನಿಲುವು. ತಾನು ಮಡಿಯಲ್ಲಿದ್ದಾಗ ಪುಟ್ಟ ಮಕ್ಕಳು ಬಂದು ಮುಟ್ಟಿದರೆ ಆಕೆ ಎಂದೂ ಸಿಟ್ಟಾಗುವುದಿಲ್ಲ.  ಪ್ರಾಯಶಃ ಆಕೆಗೆ ಮಡಿ-ಹುಡಿಗಳಲ್ಲಿ ನಿಜವಾದ ನಂಬಿಕೆಯಿಲ್ಲ.  ಆದರೆ ತನಗೋಸ್ಕರ, ತನ್ನ ಅನುಕೂಲಗಳಿಗೋಸ್ಕರ ಅವಳು ಸಂಪ್ರದಾಯವನ್ನು ಮುರಿದು ನಂಬಿಕೆಯಿಟ್ಟುಕೊಂಡವರ ಮನಸ್ಸು ನೋಯಿಸಲು ಸಿದ್ಧಳಿಲ್ಲ. 

ಫ‌ಣಿಯಮ್ಮನ ಸಹನೆ, ತಾಳ್ಮೆ, ಶಿಸ್ತು, ಸಂಯಮಗಳಿಗೆ ತದ್ವಿರುದ್ಧವಾಗಿದ್ದಾಳೆ ದಾûಾಯಿಣಿ. ಸ್ತ್ರೀವಾದದ ಪ್ರತಿಭಟನೆಯ ಮುಖವನ್ನು ನಾವು ಅವಳಲ್ಲಿ ಕಾಣುತ್ತೇವೆ.  ವಿಧವೆಯೆನ್ನಿಸಿಕೊಂಡು ಅವಳ ಕೂದಲನ್ನು ಬಲಾತ್ಕಾರವಾಗಿ ಬೋಳಾಗಿಸಿದ್ದಕ್ಕೆ  ಆಕೆ ಸಮಾಜದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳೆ. ಮೈದುನನಿಂದಲೇ ಬಸಿರಾಗಿ  ಮಗುವನ್ನು ಮನೆಯವರು ಒಪ್ಪಿಕೊಳ್ಳಬೇಕೆಂದು ಪಟ್ಟುಹಿಡಿಯುತ್ತಾಳೆ. ವಿಧವೆ ಬಸಿರಾದರೆ ಸಂಪ್ರದಾಯದಂತೆ ಸಮಾಜದಿಂದ ಬಹಿಷ್ಕಾರ ಹಾಕುವುದರ ವಿರುದ್ಧ  ಆಕೆ ಸೆಟೆದು ನಿಲ್ಲುತ್ತಾಳೆ. 

ಸುಬ್ಬರಾಯನ ಹೆಂಡತಿ ಲಚ್ಚಮ್ಮ ಎಂಟು ತಿಂಗಳ ಬಸುರಿಯಾಗಿದ್ದಾಗ ಒಂದು ದಿನ ಫ‌ಣಿಯಮ್ಮ ಕೆರೆಯಲ್ಲಿ ಬಟ್ಟೆ ಒಗೆದು ಸ್ನಾನ ಮಾಡಿ ಬರುತ್ತಿದ್ದಾಗ ಬಂಡೆಕಲ್ಲ ಮೇಲೆ ಕುಳಿತು ಜನಿವಾರ ಬದಲಾಯಿಸುತ್ತಿದ್ದ ಸುಬ್ಬರಾಯನನ್ನು ಕಂಡು ಅಚ್ಚರಿ ಪಡುತ್ತಾಳೆ.  ಮನೆಗೆ ಬಂದು ವಿಚಾರಿಸಿದಾಗ ಆತ ಬೇರೆ ಜಾತಿಯ ಹೆಂಗಸರ ಸಹವಾಸ ಮಾಡಿ ಜನಿವಾರ ಬದಲಾಯಿಸಿ ಶುದ್ಧನಾಗಿ ಮನೆಗೆ ಬರುತ್ತಿದ್ದ ಸಂಗತಿ ಆಕೆಗೆ ಗೊತ್ತಾಗುತ್ತದೆ. ಆಗ ಸಮಾಜದ ತಾರತಮ್ಯ ಧೋರಣೆಯ ಬಗ್ಗೆ  ಫ‌ಣಿಯಮ್ಮ ಚಿಂತಿಸುವ ಪರಿ ಯಾವ ಸ್ತ್ರೀವಾದಿಗೂ ಕಡಿಮೆಯಿಲ್ಲದಂತಿದೆ.

ಫ‌ಣಿಯಮ್ಮ ಓದಿದವಳಲ್ಲ. ಅಕ್ಷರ ಬಲ್ಲವಳಲ್ಲ. ಆದರೆ ನೂರು ವರ್ಷಗಳಿಗೂ ಮಿಕ್ಕಿದ ಆಕೆಯ ಜೀವನಾನುಭವದಲ್ಲಿ ಆಕೆಗೆ ರಾಮಾಯಣ, ಮಹಾಭಾರತ, ಪುರಾಣ ಗ್ರಂಥ, ಭಗವದ್ಗೀತೆ, ಪಂಚತಂತ್ರದ ಕಥೆಗಳೆಲ್ಲವೂ ಗೊತ್ತು. ಬಹಳ ರಸವತ್ತಾಗಿ ಕಥೆಗಳನ್ನು ಮಕ್ಕಳ ಮುಂದೆ ನಿರೂಪಿಸುವ ಕಲೆ ಆಕೆಯಲ್ಲಿದೆ. ಮಾತ್ರವಲ್ಲದೆ ಆ ಕಥೆಗಳ ಹಲವು ಸನ್ನಿವೇಶಗಳಲ್ಲಿ ಹೆಣ್ಣಿಗಾದ ಅನ್ಯಾಯಗಳ ಬಗ್ಗೆ ವಿಚಾರವಾದಿಯಂತೆ ಆಕೆ ಚಿಂತಿಸುತ್ತಾಳೆ ಕೂಡ. ಜಾತಿ-ಧರ್ಮಗಳನ್ನು ಮೀರಿದ ಚಿಂತನೆ ಅವಳದ್ದು. ಆದ್ದರಿಂದಲೇ ಎಳೆಯ ವಯಸ್ಸಿನ ಮಿಡ್‌ವೈಫ್ ಪ್ರೇಮಾಬಾಯಿ ಕುರುವಳ್ಳಿಯ ತಿಪ್ಪಾ$ಜೋಯಿಸರ ಸೊಸೆಯ ಹೆರಿಗೆ ಮಾಡಿಸುವುದರಲ್ಲಿ ವಿಫ‌ಲಳಾದಾಗ ಫ‌ಣಿಯಮ್ಮ ಆಕೆಗೆ ಸಹಾಯ ಮಾಡುತ್ತಾಳೆ. ಅವಳಿಗೆ ಸಿಗಬೇಕಾದ ಹಣಕ್ಕೆ ತಿಪ್ಪಾ$ಜೋಯಿಸರು ಮೋಸಮಾಡಲೆತ್ನಿಸಿದಾಗ ಧ್ವನಿಯೇರಿಸಿ ಮಾತನಾಡಿಸಿ ಹಣ ಕೊಡಿಸುತ್ತಾಳೆ. ಇಲ್ಲೆಲ್ಲ  ಜಾತಿ, ಧರ್ಮ, ಲಿಂಗಗಳನ್ನು ಮೀರಿದ  ಮಾನವೀ ಯತೆಯನ್ನು ತೋರಿಸುವ ಫ‌ಣಿಯಮ್ಮ ನಮ್ಮ ಗಮನ ಸೆಳೆಯುತ್ತಾಳೆ. ವಿಧವೆಯೆಂದು ಮೂಲೆಗೆ ತಳ್ಳಿದ ಒಬ್ಬ ಹೆಣ್ಣಿನಲ್ಲಿ ಅದೆಂಥ ಅದಮ್ಯ ಶಕ್ತಿ ಇರಬಹುದು ಎನ್ನುವುದಕ್ಕೆ ಫ‌ಣಿಯಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ. 

ಗೆಜ್ಜೆಪೂಜೆ
ಸ್ತ್ರೀಪರ ಕಾಳಜಿ ಎದ್ದು ಕಾಣುವ ಎಂ.ಕೆ. ಇಂದಿರಾ ಅವರ ಇನ್ನೊಂದು ಕಾದಂಬರಿ ಗೆಜ್ಜೆಪೂಜೆ. ಇದು ಕೂಡ ಚಲನಚಿತ್ರವಾಗಿ ಪ್ರಸಿದ್ಧಿ ಪಡೆದ ಕೃತಿ. ಅನಾದಿಕಾಲದಿಂದ ನಮ್ಮ ಪುರುಷ ಪ್ರಧಾನ ಸಮಾಜವು ಬೆಂಬಲಿಸಿಕೊಂಡು ಬಂದ  ವೇಶ್ಯಾವೃತ್ತಿಯ  ಕರುಣ ಕಥೆಯನ್ನು  ಮನ ಮಿಡಿಯುವಂತೆ ನಿರೂಪಿಸಿ ಹೆಣ್ಣಿಗಾಗುವ ಅನ್ಯಾಯವನ್ನು ಬಯಲಿಗೆಳೆಯುವ ಕಾದಂಬರಿ ಇದು. ಭಾರತೀಯ ಸಾಹಿತ್ಯದಲ್ಲಿ ಸುಧಾರಣಾವಾದಿ ಚಳುವಳಿ ನಡೆದಾಗ ಶಿವರಾಮ ಕಾರಂತರು, ಪ್ರೇಮಚಂದ್‌, ತಕಳಿ ಶಿವಶಂಕರ ಪಿಳ್ಳೆ„  ಮೊದಲಾದ ಉದ್ದಾಮ ಸಾಹಿತಿಗಳು ತಮ್ಮ ಕೃತಿಗಳಲ್ಲಿ  ಇದೇ ವಸ್ತುವಿನ ಕುರಿತು ಚರ್ಚಿಸಿದ್ದಾರೆ. ಸಮಾಜದ ಪ್ರಧಾನ ವಾಹಿನಿಯಲ್ಲಿ ಸ್ತ್ರೀಯರು ಮದುವೆಯಾಗಿ ಕೌಟುಂಬಿಕ ಬದುಕಿನ ಗೌರವಯುತ ಸ್ಥಾನದಲ್ಲಿ  (ಅದೂ ಒಂದು ಮಿಥ್‌) ಶೋಭಿಸಿದರೆ, ಪುರುಷನ ಲೈಂಗಿಕ ಬಯಕೆಗಳನ್ನು  ತೀರಿಸಿಕೊಳ್ಳಲು ಸಾಧನವಾಗಿ ಬಳಸುವ ಹೆಣ್ಣನ್ನು  ನಿಕೃಷ್ಟವಾಗಿ ಕಾಣುವ ಸ್ಥಿತಿಯಲ್ಲಿ, ಬಲವಂತವಾಗಿ ಆ ದುಸ್ಥಿತಿಗೆ ದೂಡಲ್ಪಟ್ಟ  ಹೆಣ್ಣಿನ ವೇದನೆಯೇನು, ಅದುಮಿಕೊಳ್ಳುವ ಆಸೆ-ಆಕಾಂಕ್ಷೆಗಳೇನು ಎಂಬುದನ್ನು ಆ ಎಲ್ಲ ಕಾದಂಬರಿಗಳು ಚಿತ್ರಿಸುತ್ತವೆ. ಅಂತೆಯೇ ಎಂ.ಕೆ. ಇಂದಿರಾ ಅವರ ಗೆಜ್ಜೆಪೂಜೆಯೂ ಅಂಥ ಒಂದು ವೇಶ್ಯಾ ಕುಟುಂಬದ ಹೀನಾಯ ಸ್ಥಿತಿಯನ್ನು ಹೃದಯವಿದ್ರಾವಕವಾಗಿ ವರ್ಣಿಸುತ್ತದೆ.

ಶರೀರ ಸುಖಕ್ಕಾಗಿ ವೇಶ್ಯೆಯರ ಸಂಗ ಮಾಡಿ ಆ ಸಂಬಂಧವನ್ನು ಸಮಾಜದ ಮುಂದೆ‌ ಒಪ್ಪಿಕೊಳ್ಳಲು ಹೆದರುವ ಪುರುಷರ ಗೋಸುಂಬೆತನವನ್ನು ಈ ಕಾದಂಬರಿ ಟೀಕಿಸುತ್ತದೆ.  ಅಪರ್ಣಾಳಲ್ಲಿ ತನಗೆ ಹುಟ್ಟಿದ ಮಗಳನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆ ಹೊತ್ತ ಚಂದ್ರಶೇಖರಯ್ಯ, ಸಂಸಾರವಂದಿಗನಾದ ತನ್ನನ್ನು ಸಮಾಜ ತಿರಸ್ಕರಿಸೀತೆಂಬ ಭಯದಿಂದ ಮರೆಯಲ್ಲಿ ಉಳಿಯ ಬಯಸುತ್ತಾನೆ. ಕೊನೆಗೂ ಚಂದ್ರಾ ದೊಡ್ಡವಳಾಗಿ ಕಾಲೇಜಿಗೆ ಹೋಗುವ ಹುಡುಗಿಯಾದಾಗ ಕದ್ದು ಮುಚ್ಚಿ ಆಕೆಯನ್ನು ಭೇಟಿಯಾಗಿ ತನ್ನ ಪಿತೃವಾತ್ಸಲ್ಯವನ್ನು ಪ್ರದರ್ಶಿಸುತ್ತಾನೆ. ತನ್ನ ಬೆಲೆಬಾಳುವ ವಜ್ರದುಂಗುರವನ್ನು  ತನ್ನ ಪ್ರೀತಿಯ ಗುರುತಾಗಿ ಕೊಡುತ್ತಾನೆ. ಆದರೆ, ತಮ್ಮ ಸಂಬಂಧದ ರಹಸ್ಯವನ್ನು ಮಾತ್ರ ಯಾರ ಬಳಿಯೂ ಹೇಳಕೂಡದು ಎಂಬ ವಾಗ್ಧಾನವನ್ನು  ಆಕೆಯಿಂದ ತೆಗೆದುಕೊಳ್ಳುವುದು ಮಾತ್ರ ಅತಿ ದೊಡ್ಡ ವ್ಯಂಗ್ಯ. ತಾನು ಪ್ರೀತಿಸಿದ ಸೋಮು ತನ್ನ ತಂದೆಯ ಮಗಳನ್ನೇ ಮದುವೆಯಾಗುವ ಸಂದರ್ಭ ಒದಗುವುದು ಚಂದ್ರಾಳ ಬಾಳಿನ ಅತ್ಯಂತ ಸಂಕಟದ ಕ್ಷಣ. ಲೋಕದ ಮೇಲೆ ಸೇಡು ತೀರಿಸಿಕೊಳ್ಳಲು ಚಂದ್ರಾ ಕಂಡುಕೊಂಡ‌ ಒಂದೇ ದಾರಿಯೆಂದರೆ  ತಾನು ವೇಶ್ಯೆಯಾಗಲು ಒಪ್ಪಿದ್ದೇನೆನ್ನುವ ನಾಟಕವಾಡಿ ಗೆಜ್ಜೆಪೂಜೆಯ ಸಿದ್ಧತೆ ನಡೆಸಿ ಆಕೆಯ ಸಂಗ ಬಯಸಿದ ಶ್ರೀಮಂತನ ಬಯಕೆಯನ್ನು ಕೆಣಕಿ ತನ್ನನ್ನು ದೂರಮಾಡಿದ ತಂದೆ ಕೊಟ್ಟ ವಜ್ರದುಂಗುರದ ಹರಳನ್ನೇ ಕರಗಿಸಿ ಕುಡಿದು ಸಾಯುವುದು. ಅವಳ ಮುಂದಿರುವ ಪರಿಮಿತ ಅವಕಾಶಗಳನ್ನು ಪರಿಗಣಿಸಿದರೆ ಅವಳ‌ ಧೈರ್ಯವನ್ನು ಮೆಚ್ಚಲೇಬೇಕು. ಆತ್ಮಹತ್ಯೆ ಹೇಡಿತನವೆಂದು ಲೋಕ ಹೇಳಿದರೂ ಚಂದ್ರಾಳ ಸಂದರ್ಭದಲ್ಲಿ ಅದನ್ನು ದಿಟ್ಟತನವೆಂದೇ ಹೇಳಬೇಕು. 

ವೇಶ್ಯಾವೃತ್ತಿಯ ವಿಚಾರದಲ್ಲಿ ಮಾತ್ರವಲ್ಲ, ನೈತಿಕತೆಗೆ ಸಂಬಂಧಪಟ್ಟ ಎಲ್ಲ ಕಟ್ಟುಪಾಡುಗಳಲ್ಲೂ ಹೆಣ್ಣನ್ನಷ್ಟೇ ಬಂಧಿಯಾಗಿಸಿ ತಾನು ಲಾಭ ಪಡೆದ  ಪುರುಷಪ್ರಧಾನ ಸಮಾಜ ನಮ್ಮದು. ಭಾಷೆಯಲ್ಲೂ ಅಷ್ಟೆ, ಎಲ್ಲ ರೀತಿಯ ಬೈಗುಳ ಶಬ್ದಗಳನ್ನು  ಹೆಣ್ಣಿನ ನೈತಿಕತೆಗೆ ತಳಕು ಹಾಕಿ ಆಕೆಯನ್ನು ನಿಕೃಷ್ಟವಾಗಿಸಿದ ಸಂಸ್ಕೃತಿ ನಮ್ಮದು. ಈ ಸತ್ಯವನ್ನು ಎಂ.ಕೆ. ಇಂದಿರಾ ಅವರ ಗೆಜ್ಜೆಪೂಜೆ ಸ್ಪಷ್ಟವಾಗಿ ಧ್ವನಿಸುತ್ತದೆ. ಅಪರ್ಣಾ ಅನ್ನುವ ಹೆಸರೇ (ಪರಿಶುದ್ಧಳು) ಇಲ್ಲಿ ಪ್ರತಿಭಟನೆಯ ಸಂಕೇತವಾಗಿದೆ. ಎಲ್ಲ ಸದ್ಗುಣಗಳನ್ನೂ ಹೊಂದಿದ್ದೂ ವೇಶ್ಯೆ ಎಂದು ಹೀನಾಯವಾಗಿ ಕರೆಸಿಕೊಳ್ಳುವ ಮಾನಸಿಕ ಯಾತನೆಗೆ ಗುರಿಯಾದ  ಹೆಣ್ಣಿನ ನೋವು-ತಲ್ಲಣಗಳನ್ನು ಕರುಣರಸದ ಮೂಲಕ ಚಿತ್ರಿಸುವ ಈ ಕಾದಂಬರಿ ಮಲಯಾಳದ ಜ್ಞಾನಪೀಠ ಪುರಸ್ಕೃತ ಸಾಹಿತಿ ತಕಳಿ ಶಿವಶಂಕರ ಪಿಳ್ಳೆಯವರ ಪತಿತ ಪಂಕಜಂ ಎಂಬ ಕಾದಂಬರಿಯನ್ನು ನೆನಪಿಸುತ್ತದೆ. ಅಲ್ಲಿ ತಕಳಿಯವರು ಕೂಡಾ ಇದೇ ವಾದವನ್ನು ಮಂಡಿಸುತ್ತಾರೆ. ಕಥಾನಾಯಕಿಗೆ ಗುಣವತಿ ಎನ್ನುವ ಹೆಸರಿಡುವ ಮೂಲಕ ವೇಶ್ಯೆಯ ಕುರಿತಾದ ಪೂರ್ವಗ್ರಹೀತಗಳನ್ನು ಒಡೆಯುತ್ತಾರೆ. ಶಿವರಾಮ ಕಾರಂತರ ಮೊದಲ ಕಾಂಬರಿಗಳಲ್ಲೊಂದಾದ ಕನ್ಯಾಬಲಿಯಲ್ಲೂ ವೇಶ್ಯೆಯ ಅಂತರಂಗದ ಅಳಲಿಗೆ ಅಭಿವ್ಯಕ್ತಿ ನೀಡಲಾಗಿದೆ. ಅವರ ಅಪಾರ ಪ್ರಸಿದ್ಧಿ ಪಡೆದ ಮೈಮನಗಳ ಸುಳಿಯಲ್ಲಿ ಕಾದಂಬರಿ ವೇಶ್ಯೆ ಎಷ್ಟು ಪ್ರಬುದ್ಧಳಾಗಿ ಚಿಂತನೆ ಮಾಡಬಲ್ಲಳು ಎಂಬುದನ್ನು ನಿರೂಪಿಸುತ್ತದೆ. ಎಂ.ಕೆ. ಇಂದಿರಾ ಅವರು ಕೂಡ ಇವೇ ವಿಚಾರಗಳನ್ನು ಸರಳ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಎಂ. ಕೆ. ಇಂದಿರಾ 1994, ಮಾರ್ಚ್‌ 14ರಂದು ತೀರಿಕೊಂಡರು.

ಫೊಟೊ : ಎ. ಎನ್‌. ಮುಕುಂದ್‌

– ಪಾರ್ವತಿ ಜಿ. ಐತಾಳ್‌

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.