ಗೂಗಲ್‌ ಮಾಡಿರಿ!


Team Udayavani, May 5, 2019, 6:00 AM IST

9

ಸಾಮಾಜಿಕ ಜಾಲತಾಣಗಳೆಂಬ ದೈತ್ಯ ಕಂಪೆನಿಗಳ ಮಾಲೀಕರು ತಾವು ಸುಂದರ ಜಗತ್ತನ್ನು ಸೃಷ್ಟಿಸುತ್ತಿರುವ ದೇವತೆಗಳೆಂಬ ಸೋಗಿನಿಂದ ಹೊರಬರಬೇಕು. ಹೊಗೆಸೊಪ್ಪು ಬೆಳೆಯುವ ರೈತರಂತೆ ಚಟಕ್ಕೆ ಕಾರಣವಾಗುವ ಉತ್ಪನ್ನವೊಂದು ಬೆಳೆದು ಮಾರುತ್ತಿರುವವರು ಎಂಬುದನ್ನು ಅರಿತು ವರ್ತಿಸಬೇಕು. ಏಕೆಂದರೆ ಪ್ರತಿಯೊಂದು “ಲೈಕ್‌’ ಕೂಡಾ ಒಂದು ಸಿಗರೇಟಿನಂತೆಯೇ ಸರಿ!

ಎಚ್‌ಬಿಓ ಚಾನೆಲ್‌ನ ಸಂದರ್ಶನಾಧಾರಿತ ಕಾರ್ಯಕ್ರಮದ ನಿರ್ವಾಹಕ ಬಿಲ್‌ ಮೆಹರ್‌ ಹೇಳಿದ ಮಾತುಗಳಿವು: ಎರಡು ವರ್ಷಗಳ ಹಿಂದೆ ಅವರ ಕಾರ್ಯಕ್ರಮ ರಿಯಲ್‌ ಟೈಂ ನ ಕೊನೆಯಲ್ಲಿ ಹೇಳಿದ ಈ ಭರತವಾಕ್ಯವನ್ನು ಭಾರತವೂ ನಿಧಾನಕ್ಕೆ ಅರ್ಥಮಾಡಿಕೊಳ್ಳಲು ತೊಡಗಿದೆ. ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಅಷ್ಟೇಕೆ ಗೂಗಲ್‌ ಹುಡುಕಾಟ ಕೂಡ ಈಗ ನಮಗೊಂದು ಅಭ್ಯಾಸ. ಹಿಂದೆ ಇಡೀ ಮನೆಗೆ ಒಂದು ಟಿ.ವಿ. ಇದ್ದಲ್ಲಿ , ಈಗ ಮನೆಯ ಪ್ರತೀ ಸದಸ್ಯನ ಕೈಗೊಂದು ತೆರೆ ದೊರೆತಿದೆ. ವ್ಯಕ್ತಿ ತನ್ನ ಸುತ್ತಲಿನವರೊಂದಿಗೆ ಸಂವಹಿಸುವುದಕ್ಕಿಂತ ಹೆಚ್ಚು ತನ್ನ ಕೈಯಲ್ಲಿರುವ ಮೊಬೈಲ್‌ ತೆರೆಯ ಜೊತೆ ಸಂವಹನ ನಡೆಸುತ್ತಾನೆ. ಇದು ಕೇವಲ ಸಂಪರ್ಕ ಅಥವಾ ಮಾಹಿತಿಯನ್ನು ಪಡೆಯುವ ಕ್ರಿಯೆಯಾಗಿ ಉಳಿದಿಲ್ಲ. ಇದೊಂದು ಎಡಿಕ್ಷನ್‌ ಆಗುತ್ತಿದೆ !

ಮೂರು ವರ್ಷಗಳ ಹಿಂದೆ ಅಮೆರಿಕದ ಪ್ರಭಾವಿ ಬ್ಲಾಗರ್‌ಗಳಲ್ಲಿ ಒಬ್ಬರಾದ ಆಂಡ್ರೂé ಸಲ್ಲಿವಾನ್‌ ಅವರ ಸುದೀರ್ಘ‌ ಪ್ರಬಂಧವೊಂದು ನ್ಯೂಯಾರ್ಕ್‌ ನಿಯತಕಾಲಿಕದಲ್ಲಿ ಪ್ರಕಟವಾಯಿತು. ಅದರ ಶೀರ್ಷಿಕೆ ನಾನು ಮನುಷ್ಯನಾಗಿದ್ದೆ. ಈ ಲೇಖನದಲ್ಲಿ ಅವರು ಹೇಳಲು ಹೊರಟಿದ್ದು ಒಂದೇ ಒಂದು ಅಂಶವನ್ನು. ನಮ್ಮ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಸುದ್ದಿ, ಗಾಸಿಪ್‌ ಮತ್ತು ಚಿತ್ರಗಳು ನಮ್ಮನ್ನು ಮಾಹಿತಿ ಚಟಕ್ಕೆ ದಾಸರನ್ನಾಗಿಸುತ್ತಿವೆ. ಇದು ನನ್ನನ್ನು ನುಂಗಿಬಿಟ್ಟಿತು. ನಿಮ್ಮನ್ನು ನುಂಗುವ ಮೊದಲು ಎಚ್ಚೆತ್ತುಕೊಳ್ಳಿ!

ಬಹಳ ವರ್ಷಗಳ ಕಾಲ ಟೀವಿ ತಯಾರಿಸುವ ಸಂಸ್ಥೆಗಳು ಒಂದು ಮನೆಗೆ ಒಂದಕ್ಕಿಂತ ಹೆಚ್ಚು ಟೀವಿಗಳನ್ನು ಮಾರುವುದು ಹೇಗೆ ಎಂದು ಚಿಂತಿಸುತ್ತಿದ್ದರು. ಅತಿ ಶ್ರೀಮಂತರನ್ನು ಹೊರತುಪಡಿಸಿದರೆ ಒಂದು ಮನೆಗೆ ಒಂದಕ್ಕಿಂತ ಹೆಚ್ಚು ಟೀವಿ ಬೇಕು ಎಂದು ಯಾರೂ ಭಾವಿಸುತ್ತಿರಲಿಲ್ಲ. ಆದರೆ, ಮೊಬೈಲ್‌ ಫೋನ್‌ ಸ್ಮಾರ್ಟ್‌ ಆದ ತಕ್ಷಣ ಮನೆಯ ಪ್ರತಿಯೊಬ್ಬ ಸದಸ್ಯನ ಕೈಗೊಂದು ಟೀವಿ ಬಂತು. ಟೀವಿಯಲ್ಲಾದರೆ ನಿರ್ದಿಷ್ಟ ಹೊತ್ತಿಗೆ ಪ್ರಸಾರವಾಗುವ ನಿರ್ದಿಷ್ಟ ಕಾರ್ಯಕ್ರಮಗಳಷ್ಟೇ ಇದ್ದವು. ಸ್ಮಾರ್ಟ್‌ ಆಗಿರುವ ಫೋನ್‌ ಹಾಗಲ್ಲ. ಯಾವ ಹೊತ್ತಿಗೂ ಯಾರಿಗೆ ಬೇಕಾದರೂ ಅವರವರ ಇಷ್ಟದ ಕಾರ್ಯಕ್ರಮವನ್ನು ತೋರಿಸುವ ಸಾಮರ್ಥ್ಯ ಹೊಂದಿವೆ. ನೆಟ್‌ಫ್ಲಿಕ್ಸ್‌ , ಅಮೆಜಾನ್‌, ಪ್ರೈಮ್‌ಗಳಂಥ ಸೇವೆಗಳನ್ನು ಭಾರತೀಯರು ಯಾವ ಮಟ್ಟಿಗೆ ಬಳಸುತ್ತಾರೆಂದರೆ ಈಗ ಧಾರಾವಾಹಿಗಳ ಸಂಚಿಕೆಗಳು ದಿನಕ್ಕೊಂದರಂತೆಯೋ ವಾರಕ್ಕೆ ಒಂದರಂತೆಯೋ ನಿಯತವಾಗಿ ಪ್ರಸಾರವಾಗುವುದಿಲ್ಲ. ಎಲ್ಲಾ ಸಂಚಿಕೆಗಳೂ ಒಮ್ಮೆಗೇ ಸಿಗುತ್ತವೆ. ನಿರಂತರವಾಗಿ ಮುಂದಿನ ಭಾಗಗಳನ್ನು ನೋಡುತ್ತಲೇ ಇರುವಂತೆ ಇವುಗಳನ್ನು ರೂಪಿಸಲಾಗುತ್ತದೆ.

ಇನ್ನು ಪಠ್ಯರೂಪದಲ್ಲಿರುವ ಮಾಹಿತಿಯದ್ದು ಮತ್ತೂಂದು ಕಥೆ. ದಿನದ ಎಲ್ಲಾ ಹೊತ್ತಿನಲ್ಲಿ ಸುದ್ದಿ ಪ್ರಸಾರ ಮಾಡುವುದು ಟೀವಿಯ ಜೊತೆಗೆ ಆರಂಭವಾಯಿತು. ಆದರೆ, ಅದೀಗ ಮತ್ತೂಂದು ಸ್ವರೂಪವನ್ನೇ ಪಡೆದುಕೊಂಡಿದೆ. ಇಂಟರ್‌ನೆಟ್‌ ನಿರ್ದಿಷ್ಟ ಗ್ರಾಹಕನ ಆಸಕ್ತಿಯ ಸುದ್ದಿಯನ್ನೇ ದಿನ 24 ಗಂಟೆಯೂ ಕೊಡುತ್ತದೆ. ಒಮ್ಮೆ ಅದನ್ನು ಓದಲಾರಂಭಿಸಿದರೆ ಅದು ಮುಗಿಯುವುದೇ ಇಲ್ಲ. ಅಂತ್ಯವೇ ಇಲ್ಲದೆ ಬೆಳೆದು ನಿಂತಿರುವ ಮರದ ಕೊಂಬೆ ರೆಂಬೆಗಳಂತೆ ಅದು ವಿಸ್ತಾರವಾಗುತ್ತಲೇ ಹೋಗುತ್ತದೆ.

ಗೂಗಲ್‌ ಹುಡುಕಾಟದ ಎಡಿಕ್ಷನ್‌
ಇನ್ನು ಮಾಹಿತಿಯ ಹುಡುಕಾಟ. ಗೂಗಲ್‌ ಎಂಬ ಹುಡುಕಾಟ ಸೇವೆ ಆರಂಭಗೊಂಡಾಗ ಅದು ಹೇಳಿಕೊಂಡದ್ದು- “ಜಗತ್ತಿನ ಮಾಹಿತಿಯನ್ನು ಓರಣಗೊಳಿಸುವ ಹೊಣೆ ನಮ್ಮದು’. ಈಗ ಅದು ಓರಣಗೊಳಿಸಿದ ಮಾಹಿತಿಯ ಸೇವೆಯಲ್ಲ. ಈಗ ಅದು ಗ್ರಾಹಕ ನಿರಂತರವಾಗಿ ಮಾಹಿತಿಯನ್ನು ಹುಡುಕುತ್ತಲೇ ಇರಬೇಕಾದ ಸೇವೆ!
ಪದದ ಅರ್ಥದಿಂದ ತೊಡಗಿ ಕಾಯಿಲೆಯ ಲಕ್ಷಣಗಳನ್ನು ವಿವರಿಸುವ ಸಕಲ ಮಾಹಿತಿಗಳನ್ನು ಒಳಗೊಂಡಿರುವ ಗೂಗಲ್‌ ಎಂಬ ಮಹಾ ಹುಡುಕಾಟ ಯಂತ್ರ ಬಹುತೇಕರಿಗೆ ಒಂದು ದಿನಚರಿ. ಇದನ್ನು ಉದ್ದೀಪಿಸುವ ಸೇವೆಗಳೇ ಅದರ ಸುತ್ತ ಹರಡಿಕೊಂಡಿವೆ. ಗೂಗಲ್‌ ಸೇವೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಗೂಗಲ್‌ ಮ್ಯಾಪ್‌, ಮಾರ್ಕೆಟ್‌ ಪ್ಲೇಸ್‌, ಪ್ಲೇ ಸ್ಟೋರ್‌ ಇವುಗಳೆಲ್ಲವೂ ಗ್ರಾಹಕ ಹುಡುಕುವ ಮಾಹಿತಿಯನ್ನು ಒಂದು ಹಣಕಾಸಿನ ವ್ಯವಹಾರವಾಗಿ ಮಾರ್ಪಡಿಸುವ ಚಾಕಚಕ್ಯತೆಯನ್ನು ಹೊಂದಿವೆ. ಪಿಜ್ಜಾ ಎಂದರೆ ಏನು ಎಂದು ನೋಡುವವನನ್ನು ಪಿಜ್ಜಾ ಖರೀದಿಸುವಂತೆ ಮಾಡುವ ತಂತ್ರವಿದೆ. ಸರಳವಾಗಿ ಹೇಳುವುದೆಂದರೆ ಗೂಗಲ್‌ ಎಂಬುದು ಒಂದು ಅರ್ಥಕೋಶವೋ ನಿರ್ದಿಷ್ಟ ವಿಷಯವನ್ನು ವಿವರಿಸುವ ಅಥವಾ ವಿಶ್ಲೇಷಿಸುವ ವಿಶ್ವಕೋಶವಲ್ಲ. ಅದೊಂದು ಅಂಗಡಿ ಬೀದಿ! ಮಾಹಿತಿಯ ಹೆಸರಲ್ಲಿ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಟ್ಟ ಅಂಗಡಿ ಬೀದಿ.

ನೀವು ಏನನ್ನು ಹುಡುಕಿದರೂ ನಿಮ್ಮನ್ನು ಅಂಗಡಿಗೆ ಬೀದಿಗೇ ತಂದು ನಿಲ್ಲಿಸುವ ಕೌಶಲ ಗೂಗಲ್‌ಗೆ ಇದೆ. ಆರಂಭದಲ್ಲಿ ಯಾವುದೂ ಹೀಗಿರಲಿಲ್ಲ. ಅಂತರ್ಜಾಲದಲ್ಲಿ ಮನುಷ್ಯನಿಗೆ ಹೆಕ್ಕಿ ತೆಗೆಯಲಾಗದಷ್ಟು ಮಾಹಿತಿ ಇದೆ. ಅದಕ್ಕೆ ಸಹಾಯ ಮಾಡುವುದು ಹುಡುಕಾಟ ಯಂತ್ರದ ಕೆಲಸ ಎಂದು ಕಂಪೆನಿಯೂ ಭಾವಿಸಿತ್ತು. ಜನರೂ ಅದನ್ನು ನಂಬಿದ್ದರು. ಅದು ಹೆಚ್ಚು ಹೆಚ್ಚು ಬಳಕೆಯಾಗುತ್ತ ಹೋದಂತೆ ಕಂಪೆನಿ ಹುಡುಕಾಟ ಸೇವೆಯನ್ನು ಲಾಭದಾಯಕವನ್ನಾಗಿಸುವ ತಂತ್ರಗಳ ಬಗ್ಗೆ ಆಲೋಚಿಸತೊಡಗಿತು. ಅದರ ಪರಿಣಾಮ ಇಂದಿನ ಗೂಗಲ….

ಮುಖ ಪುಸ್ತಕದ ಉದ್ದೇಶ
ಫೇಸ್‌ಬುಕ್‌ನ ಉದ್ದೇಶ ಕೂಡಾ ಸರಳ. ಜನರ ಮಧ್ಯೆ ಸಂಪರ್ಕ ಕಲ್ಪಿಸುವುದು. ಕೇವಲ ಸಂಪರ್ಕ ಕಲ್ಪಿಸಿದರೆ ಸಾಕೇ. ಅವರು ನಿರಂತರವಾಗಿ ಸಂಪರ್ಕದಲ್ಲಿರಬೇಕು. ಇದಕ್ಕಾಗಿ ಅವರು ಮತ್ತೆ ಮತ್ತೆ ಫೇಸ್‌ಬುಕ್‌ ಸೇವೆಯನ್ನು ಬಳಸಬೇಕು. ಹೀಗೆ ಬಳಸುವುದಕ್ಕೆ ಹೊಸ ಹೊಸ ಕಾರಣಗಳು ಬೇಕು. ಅದಕ್ಕಾಗಿ ಫೋಟೋ ಹಂಚಿಕೊಳ್ಳುವುದು, ವಿಡಿಯೋ ಹಂಚಿಕೊಳ್ಳುವುದು ಹೀಗೆ ಅದು ವಿಸ್ತಾರಗೊಳ್ಳುತ್ತಲೇ ಹೋಯಿತು. ಖಾಸಗಿ ಬದುಕಿನ ಸಂಗತಿಗಳೆಲ್ಲವೂ ಜಗತ್ತಿಗೆ ಚೀರಿ ಹೇಳುವ ವೇದಿಕೆಯಾಯಿತು. ಆ ಮೂಲಕ ಫೇಸ್‌ಬುಕ್‌ ತನ್ನ ವ್ಯಾಪಾರದ ಮಾರ್ಗ ಕಂಡುಕೊಂಡಿತು.
ಗೂಗಲ…, ಫೇಸ್‌ಬುಕ್‌ ಅಥವಾ ಇಂಥ ಯಾವುದೇ ಸೇವೆಗಳು ಕೇವಲ ಅವುಗಳ ಮೂಲ ಪರಿಕಲ್ಪನೆಗೆ ಸೀಮಿತವಾಗಿ ಉಳಿದರೆ ಅವು ಹೆಚ್ಚು ಸಂಪಾದಿಸಿಕೊಡುವ ಸೇವೆಗಳಾಗುವುದಿಲ್ಲ. ಜನರು ಅವುಗಳನ್ನು ಹಚ್ಚಿಕೊಳ್ಳಬೇಕು. ಅವಿಲ್ಲದೆ ಬದುಕು ಸರಳವಾಗುವುದಿಲ್ಲ ಎಂಬ ಭಾವ ಹುಟ್ಟಬೇಕು. ಅರ್ಥಾತ್‌ ಈ ಸೇವೆಗಳನ್ನು ಬಳಸುವುದು ಒಂದು ಚಟವಾಗಬೇಕು. ಸಿಲಿಕಾನ್‌ ವ್ಯಾಲಿಯ ಎಲ್ಲಾ ಕಂಪೆನಿಗಳೂ ಯೋಚಿಸುವುದು ಇದನ್ನೇ. ಈ ಬಗೆಯ ಸೇವೆಗಳನ್ನು ರೂಪಿಸುವಾಗಲೇ ಅವೊಂದು ಚಟವಾಗುವಂತೆಯೇ ರೂಪಿಸಲಾಗುತ್ತದೆ.”

ಹಾಗಿದ್ದರೆ, ಇವುಗಳು ಬದುಕನ್ನು ಹಸನಾಗಿಸಿರುವುದು ನಿಜವಲ್ಲವೇ? ನಿಜ. ಆದರೆ, ಇವೆಲ್ಲವೂ ವ್ಯಕ್ತಿಯ ಉತ್ಪಾದಕ ಕ್ಷಣಗಳನ್ನು ಮಾಹಿತಿಯ ಚಟಕ್ಕೆ ದಾಸನಾಗಿಸಿರುವುದೂ ನಿಜವೇ. ವಾಟ್ಸಾಪ್‌ ಮೂಲಕ ಕ್ಷಣಾರ್ಧದಲ್ಲಿ ಸಂಪರ್ಕಿಸಬೇಕಾದವರನ್ನು ಸಂಪರ್ಕಿಸಲು ಸಾಧ್ಯ. ಹಾಗೆಯೇ ಅದರ ಮೂಲಕ ನಿರಂತರವಾಗಿ ಸುಳ್ಳು ಸುದ್ದಿಗಳನ್ನೂ ಪಡೆಯುವ ಅವಕಾಶವೂ ತೆರೆದುಕೊಂಡಿತು. ಅಂದ ಹಾಗೆ ದಿನ 24 ಗಂಟೆಯೂ ನಾವು ನಮ್ಮ ಪ್ರೀತಿಪಾತ್ರರೊಂದಿಗೆ ನಿರಂತರವಾಗಿ ಸಂವಹಿಸದೆಯೂ ನಾವು ಬದುಕಿದ್ದೆವು. ಕೇವಲ 20 ವರ್ಷಗಳ ಹಿಂದೆ ಮೊಬೈಲ್‌ ಫೋನ್‌ ಇಲ್ಲದೆಯೂ ದೂರ ದೇಶಗಳಿಗೂ ನಾವು ಪ್ರವಾಸ ಕೈಗೊಳ್ಳುತ್ತಿದ್ದೆವು. ಪತ್ರದ ಮೂಲಕ ಸಂವಹಿಸಿಯೇ ನಮ್ಮ ಯೋಗಕ್ಷೇಮವನ್ನು ಪ್ರೀತಿಪಾತ್ರರಿಗೆ ತಿಳಿಸುತ್ತಿದ್ದೆವು. ಕಚೇರಿಯಲ್ಲಿ ಇರುವ ಹೊತ್ತಿನಲ್ಲಿ ಮನೆಗೆ ಮತ್ತೆ ಮತ್ತೆ ಫೋನಾಯಿಸಿ ಯೋಗಕ್ಷೇಮ ಅರಿಯದೆಯೂ ನಾವು ಕ್ಷೇಮವಾಗಿದ್ದೆವು. ಈಗಿನ ಉದ್ವಿಗ್ನತೆಯೂ ನಮಗಿರಲಿಲ್ಲ.

ಈಗಿನ ಸಮಸ್ಯೆ ಎಂದರೆ ಮಾಧ್ಯಮವೇ ಸಂದೇಶವಾಗಿಬಿಟ್ಟಿರುವುದು. ವಾಟ್ಸಾಪ್‌ ಇದೆ ಎಂಬ ಕಾರಣಕ್ಕೆ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಹೊರಡುತ್ತೇವೆಯೇ ಹೊರತು ಮಾಹಿತಿ ಇದೆ ಎಂಬ ಕಾರಣಕ್ಕೆ ನಾವು ವಾಟ್ಸಾಪ್‌ ಬಳಸುತ್ತಿಲ್ಲ. ಜ್ವರ ಬಂದರೆ ವೈದ್ಯರ ಬಳಿಗೆ ಹೋಗುತ್ತಿದ್ದೆವೇ ಹೊರತು ಜ್ವರದ ಸ್ವರೂಪದ ಬಗ್ಗೆ ಮಾಹಿತಿ ತಡಕಾಡಿ ನಮ್ಮಷ್ಟಕ್ಕೆ ನಾವು ಹೆದರುತ್ತಿರಲಿಲ್ಲ. ಕ್ಷಣಕ್ಷಣಕ್ಕೂ ರಿಂಗಣಿಸುವ ಫೋನುಗಳಿಲ್ಲದೆ ನಾವು ನಾಟಕ ನೋಡುತ್ತಿದ್ದೆವು, ಸಿನಿಮಾ ನೋಡುತ್ತಿದ್ದೆವು. ಆ ಹೊತ್ತಿನಲ್ಲಿ ಹೊರಗೆ ನಾವು ಕ್ಷಣಕ್ಷಣಕ್ಕೂ ತಿಳಿಯಲೇಬೇಕಾದ ಯಾವುದೂ ಸಂಭವಿಸುತ್ತಿರಲಿಲ್ಲ.

ನಮ್ಮಲ್ಲೊಂದು ಸ್ಮಾರ್ಟ್‌ಫೋನ್‌ ಇದೆ ಎಂಬ ಕಾರಣಕ್ಕೆ ನಾವು ನಿತ್ಯ ತೊಡಗಿಕೊಳ್ಳುವ ಕೆಲಸಗಳನ್ನೊಮ್ಮೆ ಪಟ್ಟಿ ಮಾಡಿದರೆ ಇದು ಅರ್ಥವಾಗುತ್ತದೆ. ಮನೆಯಲ್ಲೊಂದು ಕ್ಯಾಮೆರಾ ಇದ್ದರೆ ಮಗುವಿನ ಫೋಟೋ ತೆಗೆದಿಟ್ಟುಕೊಳ್ಳುತ್ತಿದ್ದೆವು. ಹೆಚ್ಚೆಂದರೆ, ಮನೆಗೆ ಬಂದವರಿಗೆ ಅದನ್ನು ತೋರಿಸುತ್ತಿದ್ದೆವು. ಇಲ್ಲವಾದರೆ ಮಗು ದೊಡ್ಡವನಾಗಿ ಅಥವಾ ದೊಡ್ಡವಳಾಗಿ ಬೆಳೆದಾಗ ಆತನಿಗೆ ಅಥವಾ ಆಕೆಗೆ ತಾನು ಹೀಗಿದ್ದೆ ಎಂದು ಅರಿಯಲು ಅದು ಬಳಕೆಯಾಗುತ್ತಿತ್ತು. ಆದರೆ, ಈಗ ಹಾಗಲ್ಲ. ಅದು ತಕ್ಷಣವೇ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂಗೆ ಏರಿ ಅದಕ್ಕೆ ಲೈಕುಗಳು ಬಂದು ಮಗುವಿನ ಖಾಸಗಿತನವೇ ಇಲ್ಲವಾಗುತ್ತದೆ. ಅಷ್ಟೇ ಏಕೆ, ಫೋಟೋ ತೆಗೆದು ಆನ್‌ಲೈನ್‌ಗೆ ಏರಿಸುವ ಗಡಿಬಿಡಿಯಲ್ಲಿ ಮಗುವಿನ ಜೊತೆಗೆ ಸಂತೋಷದ ಕ್ಷಣಗಳನ್ನು ಅನುಭವಿಸುವುದನ್ನೂ ನಾವು ಮರೆಯುತ್ತೇವೆ. ಚೆಂದದ ಅಡುಗೆಯನ್ನು ಸವಿಯುವ ಬದಲಿಗೆ ಅದರ ಹೊರನೋಟದ ಚಂದವನ್ನು ಫೋಟೋದಲ್ಲಿ ಹಂಚುವುದರಲ್ಲೇ ನಮ್ಮ ಸಂತೋಷ ಕೊನೆಗೊಳ್ಳುತ್ತದೆ.
ಇದು ನಿಜಕ್ಕೂ ಬೇಕೇ?

ವಿನಾಯಕ ರಾವ್‌

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.