ನಮ್ಮೂರಿನಂಥ ಮಲೇಶ್ಯಾ
Team Udayavani, Mar 23, 2019, 12:05 PM IST
ಸಮಗ್ರ ಏಷ್ಯಾ ಖಂಡದ ಹೆಸರಿನದೇ ಒಂದು ತುಂಡು ಸೇರಿಸಿಕೊಂಡು ಕರೆಯಲ್ಪಡುವ ಎರಡು ರಾಷ್ಟ್ರಗಳು ಇಂಡೋನೇಷ್ಯಾ ಹಾಗೂ ಮಲೇಷ್ಯಾ. ಇವುಗಳ ಪೈಕಿ ಮಲೇಷ್ಯಾ ಸಂದರ್ಶಿಸಿ ಬರೋಣ ಎಂದು ಯೋಚನೆ ಹೊಳೆದಾಗ, ಆ ಬಗೆಗೆ ಯೋಜನೆಗಳು ರೂಪುಗೊಂಡವು. ಪತ್ನಿಯ ಜತೆ ಬೆಂಗಳೂರಿನಿಂದ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿದೆವು. ಅಲ್ಲಿನ ವಿಮಾನನಿಲ್ದಾಣದಿಂದ ಕೌಲಾಲಂಪುರ ನಗರಕ್ಕೆ ಪಯಣಿಸುತ್ತ ನಮ್ಮ ಟ್ಯಾಕ್ಸಿ ಸಾಗುತ್ತಿದ್ದಾಗ, ಇಕ್ಕೆಲಗಳಲ್ಲಿನ ಗುಡ್ಡ, ಕಾಡು, ಪೊದರು ಎಲ್ಲ ನಮ್ಮ ದೇಶದ ಥರಾನೇ ಕಾಣಿಸುತ್ತಿತ್ತು. ಸುಂದರ ಹಸಿರು ವಲಯದ ಮಧ್ಯೆ ನುಣುಪಾದ ಮಾರ್ಗ, ಸಂಕೇತ ದೀಪಗಳು. ಗೊಂದಲವಿಲ್ಲದೆ ಆರಾಮವಾಗಿ ವಾಹನ ಸಂಚಾರ, ಪಾದಚಾರಿಗಳ ಅನುಕೂಲ- ಇವೆಲ್ಲ ಗಮನಿಸುತ್ತ ಸಾಗಿದೆವು. ಕೆಲವೆಡೆ ರಸ್ತೆ ಅಗಲೀಕರಣ, ಮೇಲ್‌ಸೇತುವೆ ಇತ್ಯಾದಿ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದವು. ಅಲ್ಲೆಲ್ಲ ಅಳವಡಿಸಿದ ಫಲಕಗಳು ನನ್ನನ್ನು ಆಕರ್ಷಿಸಿದವು. “ಮುಂದಿನ ತಲೆಮಾರಿನ ಸೌಕರ್ಯಕ್ಕಾಗಿ ಒಂದಿಷ್ಟು ತೊಂದರೆಗಳನ್ನು ದಯವಿಟ್ಟು ಸಹಿಸಿಕೊಳ್ಳಿ’ ಎಂಬುದು ಅದರ ಕನ್ನಡಾನುವಾದ.
ಕೌಲಾಲಂಪುರ ಮಲೇಷ್ಯಾದ ರಾಜಧಾನಿ. ಇತರ ಮಹಾನಗರಗಳಂತೆ ತಲೆಯೆತ್ತಿ ಮುಗಿಲು ಚುಂಬಿಸುವ ಕಟ್ಟಡಗಳು, ಅಲ್ಲಿನ ಹೆಮ್ಮೆಯ ಸಂಕೇತವಾದ ಅವಳಿ ಬೃಹತ್ ಗೋಪುರಾಕೃತಿಯ ಕಟ್ಟಡಗಳು, ಸ್ವತ್ಛ ಬೀದಿ, ವಿದೇಶೀ ಆಗಂತುಕರನ್ನು ಸ್ವಾಗತಿಸುವ ಸುಸಜ್ಜಿತ ಲಾಡ್ಜ್ ಗಳು- ಇವೆಲ್ಲ ಅಚ್ಚುಕಟ್ಟು ನಮ್ಮನ್ನು ಆಕರ್ಷಿಸಿತು. ಈ ರಾಜಧಾನಿ ನಗರದ ಒಂದು ಭಾಗ ಪುತ್ರಜಯ ಸರಕಾರೀ ಕಚೇರಿಗಳನ್ನು ಹೊಂದಿದ ಭಾಗ. ಇಲ್ಲಿ ನಮ್ಮನ್ನು ಕೈಬೀಸಿ ಕರೆದ ಎರಡು ಸಂಗತಿಗಳಿವೆ. ಒಂದು, ಜನನಿಬಿಡ ನಗರದ ಹೃದಯ ಭಾಗದಲ್ಲೇ ಅಲ್ಲಲ್ಲಿ ಹಸಿರು ಹೊದಿಕೆಯ ನಿತ್ಯ ಹರಿದ್ವರ್ಣದ ಅರಣ್ಯ (evergreen forest) ! ಹತ್ತುಹಲವು ಮಹಾನಗರಗಳಲ್ಲಿ ಸುತ್ತಾಡಿದ ನನಗೆ ಈ “ನಗರ ಕಾನನ’ದ ದೃಶ್ಯ ಆಪ್ಯಾಯಮಾನವಾಗಿ ಕಂಗೊಳಿಸಿತು. ಎರಡು, ಅದೇ ರೀತಿ ಸುತ್ತಾಡಲು ಕೌಲಾಲಂಪುರ ನಗರದ ಸುತ್ತ ಹಾಗೂ ಹೊರ ವಲಯಕ್ಕೆ ಹವಾನಿಯಂತ್ರಿತ, ಸ್ವತ್ಛ ಸಾರಿಗೆ ವ್ಯವಸ್ಥೆ. ಇದರಲ್ಲೇನಿದೆ ವಿಶೇಷ ಎಂದೆನಿಸಬಹುದು. ಮಲೇಷ್ಯಾದ “ರಿಗೇಟ್’ ನೋಟನ್ನು ಕೈಯಲ್ಲಿ ಹಿಡಿದು ಬಸ್ ಮೇಲೇರಿದ ನಮಗೆ ಆಶ್ಚರ್ಯ ಕಾದಿತ್ತು. “”ಸರ್, ಇದು ಫ್ರೀ ಬಸ್; ಸರಕಾರದ ವತಿಯಿಂದಲೇ ಜನತೆಗೊಂದು ಸೇವಾ ಸೌಲಭ್ಯದ ಸಾರಿಗೆ ವ್ಯವಸ್ಥೆ” ಎಂದುಬಿಟ್ಟ ವಾಹನ ಚಾಲಕ. “”ಹೌದೇ” ಎಂದು ಉಚಿತ ಬಸ್ಸಿನ ಪಯಣ ಖಚಿತಪಡಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿದ್ದೇ ಮಾಡಿದ್ದು. ಹಾಗಾಗಿ, ಕೇವಲ 2 ದಿನಗಳಲ್ಲಿ ಕೌಲಾಲಂಪುರದ ಅಂದ ಸವಿಯುವ ಸದವಕಾಶ ದೊರಕಿತ್ತು.
ಅಲ್ಲಿಂದ ಪೋರ್ಟ್ ಡಿಕ್ಸನ್‌ಗೆ ಸುಮಾರು ಒಂದು ತಾಸಿನ ಪ್ರಯಾಣ ಬೆಳೆಸಿ ಅಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಿದೆವು. ದ್ವಿತೀಯ ಮಹಾಯುದ್ಧದ ವೇಳೆ ಮಿತ್ರ ರಾಷ್ಟ್ರಗಳಿಗೂ ಅಕ್ಷಾಂಶ ರಾಷ್ಟ್ರಕೂಟದ ಜಪಾನ್‌ಗೂ ನಡೆದ ಭೀಕರ ಸಂಗ್ರಾಮದ ಕುರುಹುಗಳನ್ನು ಕಂಡೆವು. ಅಲ್ಲಿನ ಮಿಲಿಟರಿ ಮ್ಯೂಸಿಯಂ ಒಂದು ಇತಿಹಾಸದ ವಿಶ್ವಕೋಶದಂತೆ ತೆರೆದುಕೊಂಡಿತ್ತು.
ಬಹುಧರ್ಮಗಳ ನೆಲೆ
ಮಲೇಷ್ಯಾ ಹಿಂದೂ, ಬೌದ್ಧ ಪರಂಪರೆಯನ್ನು ಉಳಿಸಿಕೊಂಡ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ. ಮಲಯಾ, ಚೀನೀ ಭಾಷಿಗರ ಜತೆ ತಮಿಳು ಜನತೆಯಲ್ಲಿ ಜತೆಯಾಗಿ ಬಾಳುವ ರಾಷ್ಟ್ರವದು. ಭಾರತದ ಬಗೆಗೆ ತುಂಬಾ ಸದ್ಭಾವನೆ ಬೆಳೆಸಿಕೊಂಡು, ವಿದೇಶಿಗರನ್ನು ಗೌರವ, ಆತ್ಮೀಯತೆಯಿಂದ ಕಾಣುವ ಮಾನಸಿಕತೆ ಅಲ್ಲಿದೆ. ಅಲ್ಲಿನ ಮುಸ್ಲಿಂ ಮಹಿಳೆಯರೂ ಬುರ್ಖಾ ಧರಿಸದೆ, ತಲೆಗೊಂದು ಸ್ಕಾರ್ಪ್ ಕಟ್ಟಿ , ಎಲ್ಲಾ ರಂಗಗಳಲ್ಲಿಯೂ ಗಂಡಸರಂತೆ ಶ್ರಮಜೀವನದಲ್ಲಿ ಸಹಭಾಗಿಗಳಾಗುತ್ತಾರೆ. ಸುಂದರ ವಿನ್ಯಾಸದ ಮಸೀದಿಗಳು, ತಮಿಳು ಶೈಲಿಯ ಹಿಂದೂ ದೇಗುಲಗಳು, ಲಾವೋತ್ಸೆ ಮತೀಯ ಪುರಾತನ ಮಂದಿರಗಳು- ಇವೆಲ್ಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ವಾಹನ ಚಾಲಕರೂ ಅವರ ರಾಷ್ಟ್ರದ ಬಗ್ಗೆ ಹೆಮ್ಮೆಯಿಂದ ದಾರಿಯುದ್ದಕ್ಕೂ ಮಾಹಿತಿ ಬಿತ್ತುತ್ತ ಸಾಗುತ್ತಾರೆ. ಓರ್ವ ಚೀನೀ ಮೂಲದ ಮಲೇಷಿಯನ್, ಹಿಂದೂ ಧರ್ಮ ಭಗವದ್ಗೀತೆಯ ಅಧ್ಯಯನ ಅನುಸಂಧಾನದ ಬಗೆಗೆ ವಿವರಿಸುವಾಗ ನಮ್ಮ ನೆಲದ ಅಧ್ಯಾತ್ಮಿಕ ಹಿರಿಮೆ ಅರಿವಾಯಿತು.
ಕೌಲಾಲಂಪುರದ ಹೊರ ವಲಯದಲ್ಲಿರುವ ಬಟೂಗುಹೆ ಪ್ರಕೃತಿಯ ಒಂದು ವಿಸ್ಮಯ. ಸಾವಿರಾರು ವರ್ಷಗಳ ಹಿಂದೆಯೇ ಅಲ್ಲಿ ಹಲವಾರು ಸಿದ್ಧ ಪುರುಷರು ತಪಸ್ಸು ಮಾಡುತ್ತಿದ್ದರಂತೆ. ಸುಮಾರು 104 ಮೆಟ್ಟಿಲೇರಿ, ಬೆಟ್ಟಹತ್ತಿ ಅಲ್ಲಿನ ಬೃಹದಾಕಾರದ ಗುಹೆಯೊಳಗೆ ಸಂಚರಿಸಿದೆವು. ಆ ಬೆಟ್ಟದ ಬುಡದಲ್ಲಿಯೂ ಹಲವಾರು ಹಿಂದೂ ಮಂದಿರಗಳು; ಮೇಲೇರಿದಾಗ ಗುಹೆಯ ವಿಶಾಲ ಹೃದಯದಲ್ಲಿ ಮುರುಗನ್ ಅರ್ಥಾತ್ ಸುಬ್ರಹ್ಮಣ್ಯ ದೇಗುಲ. ಅಲ್ಲಿಗೆ ನೂರಾರು ಮುಸ್ಲಿಂ ಬಂಧುಗಳೂ ಬೆಟ್ಟವೇರಿ ಬರುತ್ತಿದ್ದುದನ್ನು ಗಮನಿಸಿದೆ. ಹರಿಯುವ ನೀರ್ಝರಿ, ತಂಪು ಗುಹೆ, ಮೇಲೆ ಒಂದೆಡೆ ಸೂರ್ಯಕಿರಣಕ್ಕೆ ಬಾಯ್ದೆರು ನಿಂತ ವಿಸ್ಮಯದ ಕಿಂಡಿ- ಒಟ್ಟಿನಲ್ಲಿ ದೈವೀತರಂಗ ಮನದಲ್ಲಿ ಎಬ್ಬಿಸುವಂತಿತ್ತು ಆ ಪರಿಸರ. ಹೀಗೆ ಮಲೇಶಿಯಾ ಒಂದು ಪ್ರೇಕ್ಷಕರಿಗೆ ಮುದ ನೀಡುವ ಸುಂದರ ತಾಣ, ಪುಟ್ಟ ದೇಶ.
ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.