ಮಮ್ಮಾ… ವಾಟ್ಸ್ ಯುವರ್ ಪ್ರಾಬ್ಲೆಮ್?
Team Udayavani, Jan 26, 2020, 5:14 AM IST
ಮಗಳು ಹೆರಿಗೆಗೆಂದು ಜರ್ಮನಿಯಿಂದ ಬಂದಳು. ಬರುವಾಗ ಹೆತ್ತವರಿಗೆ ಒಂದು ಐಪ್ಯಾಡ್ ತಂದಿದ್ದಳು. ಹೆರಿಗೆಯಾಯಿತು. ಮೊಮ್ಮಗ ಹುಟ್ಟಿದ. ಆಸ್ಪತ್ರೆಗೆ ಎಲ್ಲ ಓಡಾಡಿದ್ದು ಮಗ ತೆಗೆದುಕೊಂಡ ಹೊಸ ಕಾರಿನಲ್ಲಿಯೇ. ಮಕ್ಕಳಿಬ್ಬರೂ ಸಮಾಲೋಚನೆ ಮಾಡಿ ಅಪ್ಪಅಮ್ಮಂದಿರಿಗೆ ವೀಸಾ ಕೊಡಿಸಿ, ದಂಪತಿಗಳು ಜರ್ಮನಿಗೆ ಆರು ತಿಂಗಳು ಹೋಗಿ ಬಂದಾಗಲಂತೂ ಧನ್ಯತೆಯುಕ್ಕಿ ಬಂತು.
ಮತ್ತೂಂದು ವರ್ಷದಲ್ಲಿ ಮಗನನ್ನು ಕಂಪೆನಿಯವರು ಅಮೆರಿಕಕ್ಕೆ ಕಳುಹಿಸಿದಾಗ ಹೆಮ್ಮೆಪಟ್ಟುಕೊಂಡದ್ದು ಸಹಜವಲ್ಲವೆ? ಹೋಗುವ ಮೊದಲು ಮದುವೆ ಮಾಡಿಕೋ ಎಂದು ಮಗನನ್ನು ಒತ್ತಾಯಿಸಿದರೆ ಹುಡುಗ “ಎರಡು-ಮೂರು ವರ್ಷಗಳ ಮಟ್ಟಿಗೆ ಮದುವೆಯ ವಿಚಾರ ತೆಗೆಯಬೇಡಿ’ಎಂದ. “”ಯಾಕೋ? ನೀನೇ ಯಾರನ್ನಾದರೂ ನೋಡಿಟ್ಟಿದ್ದೀಯಾ?” ಎಂದು ಕಳಕಳಿಯಿಂದ ವಿಚಾರಿಸಿದರೆ, “”ಛಿ, ಛಿ, ಇಲ್ಲಪ್ಪ. ನಿಮ್ಮನ್ನು ಕೇಳದೇ ಯಾರನ್ನೂ ಮದುವೆಯಾಗುವುದಿಲ್ಲ, ಚಿಂತಿಸಬೇಡಿ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ. ಆದರೂ ಹುಟ್ಟೂರಿನ ದೇವಸ್ಥಾನದಲ್ಲಿ ಅವನ ಹೆಸರಿನಲ್ಲಿ ಒಂದು ಕುಂಕುಮಾರ್ಚನೆ ಮಾಡಿ, ಅವನನ್ನು ಹರಸುವಂತೆ ದೇವರನ್ನು ಬೇಡಿ, ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿ ಅಮೆರಿಕಕ್ಕೆ ನಿಶ್ಚಿಂತೆಯಿಂದ ಕಳಿಸಿಕೊಟ್ಟರು.
ಮನೆಯಲ್ಲೀಗ ಇಬ್ಬರೇ ಉಳಿದರು. ಅಮೆರಿಕದಿಂದ ಮಗನ ಫೋನ್ ಬಂತು. “”ಊಟ ತಿಂಡಿ ಬಿಡಬೇಡ. ವಾರಕ್ಕೊಮ್ಮೆ ಎಣ್ಣೆನೀರು ಹಾಕ್ಕೊ. ಉಷ್ಣ ಆದೀತು. ಇವತ್ತು ಮನೇಲಿ ಪತ್ರೊಡೆ ಮಾಡಿದ್ದೆವು, ನಿನ್ನ ನೆನಪು ಬಹಳ ಆಯಿತು”. ಇವುಗಳ ಮಧ್ಯೆ ಅವನು ಹೇಳಿದ, “”ಹಣ ಕಳಿಸುತ್ತೇನೆ. ಮನೆಗೆ ಮಹಡಿ ಕಟ್ಟಿಸಿಕೊಳ್ಳಿ. ನನ್ನ ಫ್ರೆಂಡ್ ಒಬ್ಬ ಸಿವಿಲ್ ಎಂಜಿನಿಯರ್ ಇದ್ದಾನೆ. ನಿಮ್ಮ ಬಳಿ ಮಾತನಾಡಲು ಇವತ್ತು ನಾಳೆಯಾಗಿ ಬರುತ್ತಾನೆ”.
“ನಾಳೆ ಮದುವೆಯಾದರೆ ಅವರಿಗೇ ಒಂದು ಮನೆಯಾಗುತ್ತದೆ. ಈ ಮನೆ ಮಗಳಿಗಿರಲಿ, ಮೇಲಿನದ್ದು ಅವನಿಗಿರಲಿ’ ಎಂದು ದಂಪತಿಗಳಿಬ್ಬರೂ ಚರ್ಚಿಸಿ ಒಪ್ಪಿಗೆಯಿತ್ತರು. ಧೂಳು, ಸದ್ದು ಇದನ್ನೆಲ್ಲ ಸಹಿಸಿ ಮನೆಗೆ ಮಹಡಿ ಕಟ್ಟಿಸುವುದರಲ್ಲಿ ಭಾಗಿಯಾದರು. ಗೃಹಪ್ರವೇಶಕ್ಕೆ ಮಗನೂ, ಸಂಸಾರ ಸಮೇತ ಮಗಳೂ ಬಂದಿದ್ದರು.
ಮಗನ ಮದುವೆಯ ಪ್ರಸ್ತಾಪ ಬಂತು. ಮಗ ನಿರಾಸೆಗೊಳಿಸಲಿಲ್ಲ. “”ದೊಡ್ಡ ಮನೆತನದ ಹುಡುಗಿ ಬೇಡ. ನಮ್ಮ ಲೆವೆಲ್‌ನ ಹುಡುಗಿಯನ್ನೇ ನೋಡಿ. ಹುಡುಗಿ ಮಾತ್ರ ಕಲಿತಿರಲೇಬೇಕು. ಇಂಜಿನಿಯರ್ ಆದರೆ ಒಳ್ಳೆಯದು” ಎಂದು ಅವರ ಮನಸ್ಸಿನಲ್ಲಿ ಇದ್ದುದನ್ನೇ ಅವನೂ ಹೇಳಿದ. ಬಂದ ಜಾತಕಗಳನ್ನು ಜರಡಿ ಹಿಡಿದು, ಜಳ್ಳು ತೆಗೆದು, ಅಳೆದು ಸುರಿದು, ಅಪ್ಪ -ಅಮ್ಮ ಹುಡುಗಿಯ ಇಂಟರ್‌ವ್ಯೂ ಮಾಡಿ, ಹುಡುಗ-ಹುಡುಗಿಯರಿಗೆ ಖುದ್ದಾಗಿ ಮಾತನಾಡಲು ಅವಕಾಶ ಕೊಟ್ಟು, ಕೊನೆಗೂ ಮದುವೆಯಾಯಿತು. ಹನಿಮೂನಿಗೆ ಅವರು ಪಾತಾಳದಲ್ಲಿದ್ದ ಅಮೆರಿಕಕ್ಕೇ ಹಾರಿಹೋದರು. ಮಗಳು ಪುನಃ ಬಸುರಿ. ಅವರಿಬ್ಬರನ್ನೂ ಕರೆದುಕೊಂಡು ಹೋಗಲು ತುದಿಗಾಲಿನಲ್ಲಿ ನಿಂತಿದ್ದಳು. “”ನಾನು ಬರುವುದಿಲ್ಲ. ನನಗಲ್ಲಿ ಸಮಯ ಹೋಗುವುದಿಲ್ಲ. ಇಲ್ಲಾದರೆ ನನ್ನ ಗೆಳೆಯರಿದ್ದಾರೆ” ಎಂದು ಅಪ್ಪ ಹೋಗಲಿಲ್ಲ.
ಮಹಡಿಯ ಮನೆಯನ್ನೇನೋ ಕೆಲವು ತಿಂಗಳು ಬಾಡಿಗೆಗೆ ಕೊಟ್ಟಿದ್ದರು. ಆದರೆ, ಬಿಡಿಸಿಕೊಳ್ಳುವುದು ರೇಜಿಗೆಯಾಯಿತು. “”ಆ ಜುಜುಬಿ ಬಾಡಿಗೆಗೆ ಯಾಕೆ ಆಸೆ ಪಡುತ್ತೀರಿ? ಬೀಗ ಹಾಕಿಡಿ” ಎಂದ ಮಗ. ಈಗ ಅವನ ಹೆಂಡತಿಯೂ ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ.
“”ನನ್ನ ಮಗ ಅಂತ ಹೇಳುತ್ತಿಲ್ಲ. ಅವನ ಮನಸ್ಸು ಒಳ್ಳೆಯದು. ಚಿಕ್ಕವನಿರುವಾಗ ಇಷ್ಟು ಜವಾಬ್ದಾರಿ ತೆಗೆದುಕೊಳ್ಳಬಹುದು ಅಂತ ನಾವೇ ಎಣಿಸಿರಲಿಲ್ಲ. ಈಗ ನೋಡಿ, ಅವನ ಹೆಂಡತಿಯೂ ಬಸುರಿಯಂತೆ. ಮಾರ್ನಿಂಗ್ ಸಿಕ್‌ನೆಸ್. ಎಲ್ಲದಕ್ಕೂ ಏನು ಮಾಡಬೇಕೆಂದು ದಿನಾ ಅಮ್ಮನಿಗೆ ಫೋನ್ ಮಾಡಿ ಕೇಳುತ್ತಾನೆ” ಎಂದು ನೆರೆಹೊರೆಯವರೊಡನೆ ಹೆಮ್ಮೆಯಿಂದ ಹೇಳಿದರು. ಆರು ತಿಂಗಳು ಸೊಸೆಯ ಅಪ್ಪಅಮ್ಮಂದಿರು, ಆರು ತಿಂಗಳು ಇವರು ಎಂದು ಐದಾರು ಬಾರಿ ಅಮೆರಿಕೆಯ ಯಾತ್ರೆ ನಡೆಯಿತು.
ಒಂದು ದಿನ ಹೆಂಡತಿ ಹೇಳಿದಳು, “”ಇನ್ನು ನಾನು ಹೋಗುವುದಿಲ್ಲ. ಅಲ್ಲಿ ಮನೆಯ ಒಳಗಡೆಯೇ ಇರಬೇಕು. ಹೊರಗಡೆ ಹೋದರೆ ಒಬ್ಬರೂ ರಸ್ತೆಯಲ್ಲಿ ಕಾಣುವುದಿಲ್ಲ. ಮಾತನಾಡಲು ಒಂದು ಜನ ಸಿಕ್ಕುವುದಿಲ್ಲ. ನಾವೇನು ನರ್ಸ್ ಕೆಲಸ ಮಾಡುತ್ತಲೇ ಇರುವುದ?”
“”ನನಗೂ ಹಾಗೆಯೇ. ಇಪ್ಪತ್ತನಾಲ್ಕು ಗಂಟೆ ವಿಮಾನದಲ್ಲಿ ಕೂರುವುದೆಂದರೆ ಮಂಡಿನೋವು ಬೇರೆ. ಡಾಕ್ಟರರು ಡಯಾಬಿಟೀಸ್ ಇದೆ ಎಂದಿದ್ದಾರೆ” ಎಂದು ಪತಿಯೂ ಉತ್ತರಿಸಿದರು. ಮಹಡಿ ಮನೆಯಲ್ಲಿ ಇಬ್ಬರೇ ಒಬ್ಬರನ್ನೊಬ್ಬರು ಭೇಟಿಯಾಗುತ್ತ¤ ಮೌನವಾಗಿ ದಿನದೂಡತೊಡಗಿದರು.
ಒಂದು ದಿನ ದಂಪತಿಗಳಲ್ಲಿ ಒಬ್ಬರು ತೀರಿಕೊಂಡರು. ಚಿತೆಗೆ ಬೆಂಕಿ ಕೊಡಲು, ಸಪಿಂಡೀಕರಣ ಶ್ರಾದ್ಧ ನಡೆಸಲು ಮಗ ಅಮೆರಿಕದಿಂದ ಬಂದಿದ್ದ. ಎಲ್ಲ ಮುಗಿದ ಮೇಲೆ ಹೇಳಿದ, “”ಒಬ್ಬರೇ ಹೇಗಿರುತ್ತೀರಿ? ಅಲ್ಲಿಯ ಹವೆ ನಿಮಗೆ ಹಿಡಿಸಲ್ಲ. ಒಳ್ಳೆಯ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ. ಹೊತ್ತುಹೊತ್ತಿಗೆ ಆಹಾರ-ಔಷಧಿ ಕೊಡುತ್ತಾರೆ. ಡಾಕ್ಟರರ ವ್ಯವಸ್ಥೆಯೂ ಇದೆ. ನಿಯಮಿತವಾಗಿ ಚೆಕ್-ಅಪ್ ಆಗುತ್ತದೆ. ಖರ್ಚು ಎಷ್ಟಾದರೂ ಪರವಾಗಿಲ್ಲ. ತಿಂಗಳು ತಿಂಗಳೂ ಡಾಲರ್ಸ್ ಕಳಿಸುತ್ತೇನೆ”.
“ತಥಾಸ್ತು’ ಎನ್ನದೇ ಬೇರೆ ಗತಿಯಿಲ್ಲ. ಮಹಡಿ ಮನೆಗೆ ಬೀಗ ಜಡಿದು ಅವರು ವೃದ್ಧಾಶ್ರಮ ಸೇರಿದರು.
ಈಗ ಅವರಿಗೆ ಎಪ್ಪತ್ತೋ ಎಂಬತ್ತೋ! ಜೊತೆಗಾರ/ತಿ ಪಕ್ಕದಲ್ಲಿಲ್ಲ. ಮನಸ್ಸಿನ, ದೇಹದ ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಎರಡೋ ಮೂರೋ ವರ್ಷಕ್ಕೊಮ್ಮೆ ಮಗ ಹೆಂಡತಿ-ಮಕ್ಕಳ ಜೊತೆ ಬಂದರೂ ಹೆಂಡತಿಯ ತವರು ಮನೆಯಲ್ಲೇ ಇರುತ್ತಾನೆ. ಮಗಳು ಬಂದರೆ ತಾಯಿ ಅಥವಾ ತಂದೆ ಬದುಕಿಲ್ಲ ಎನ್ನುವ ನೆವವೊಡ್ಡಿ ಹೊಟೇಲಿನಲ್ಲಿ ಉಳಕೊಳ್ಳುತ್ತಾರೆ. “”ಮೊಮ್ಮಕ್ಕಳನ್ನು ಕರೆದುಕೊಂಡು ಬರಲಿಲ್ಲವೇ” ಎಂದರೆ, “”ಅವರಿಗೆ ನಮ್ಮ ತಾಯಿನಾಡಿನ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಡವೇ? ತಿರುಗಾಡಲು ಕರೆದುಕೊಂಡು ಹೋಗಿದ್ದಾರೆ/ಳೆ” ಎಂಬ ಉತ್ತರ. ಮರಳುವ ಮುನ್ನ ಒಮ್ಮೆ ಬಂದು ಭೇಟಿಯಾಗುತ್ತಾರೆ. ಒಬ್ಬರೇ ಬರುತ್ತಾರೆ. ವೃದ್ಧಾಶ್ರಮ ನಡೆಸುವವರನ್ನು ಕಂಡು, “”ಫೀಸು ಎಷ್ಟಾದರೂ ಪರವಾಗಿಲ್ಲ, ಕಳಿಸಿಕೊಡುತ್ತೇನೆ, ಚೆನ್ನಾಗಿ ನೋಡಿಕೊಳ್ಳಿ” ಎಂದು ವಿದಾಯ ಹೇಳುತ್ತಾರೆ.
ಅವರು ಕಿಟಿಕಿಯ ಬಳಿ ಕೂತು ಮೌನವಾಗಿ ಹೊರಗೆ ನೋಡುತ್ತ ಕೂರುತ್ತಾರೆ. ಕಿಟಿಕಿಯ ಬಳಿ ಕಾಗೆಯೊಂದು ಬಂದು ಅವರು ತಿಂದುಳಿದ ಇಡ್ಲಿಯ ತುಂಡನ್ನೋ ಅನ್ನದ ಅಗುಳನ್ನೋ ಕುಕ್ಕಲು ಕಾಯುತ್ತಾ ಇರುತ್ತದೆ. ಅವರು ಯೋಚಿಸುತ್ತಾರೆ- ಎಲ್ಲಿ ತಪ್ಪಿದೆ? ತಾನು ಯಾರಿಗೂ ಕೆಟ್ಟದೆಣಿಸಿಲ್ಲ. ತನ್ನ ಕರ್ತವ್ಯಗಳನ್ನು ಹೊಟ್ಟೆಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕವಾಗಿ ಮಾಡಿದೆ. ಪಿತೃಗಳಿಗೆ ವರ್ಷಕ್ಕೊಮ್ಮೆ ಪಿಂಡ ಕೊಟ್ಟಿದ್ದೇನೆ. ಭಕ್ತಿಯಿಂದ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದೇನೆ. ನೆನಪಾಗುತ್ತದೆ- ಸೈಕಲ್ಲಿನಲ್ಲಿ ಬುತ್ತಿ ಕಟ್ಟಿಸಿಕೊಂಡು ಕಚೆೇರಿಗೆ ಹೋದದ್ದು, ಕಾಲೇಜಿನ ಫೀಸು ಕಟ್ಟಲು ಪರಿಚಯದವರ ಕೈಕಾಲು ಬಿದ್ದು ಬೇಡಿಕೊಂಡದ್ದು, ಮೊಮ್ಮಕ್ಕಳು ಹುಟ್ಟಿದಾಗ ಬಾಣಂತನ ಮಾಡಿದ್ದು ಎಲ್ಲ. ಶೂನ್ಯದಲ್ಲಿ ದೃಷ್ಟಿ ಕೀಲಿಸಿ ಕೂತಿದ್ದಾಗ ಮೂಡಿದ ನಿರ್ವಾತದಲ್ಲಿ ಮಕ್ಕಳು ಕೇಳುತ್ತಿದ್ದ ಪ್ರಶ್ನೆ ಮರುಕಳಿಸುತ್ತದೆ - “ಮಮ್ಮಾ… ವಾಟ್ಸ್ ಯುವರ್ ಪ್ರಾಬ್ಲೆಮ್?’ ಕುಂಕುಮಾರ್ಚನೆಯ ಕೆಂಪನೆಯ ಬಣ್ಣ ಕಣ್ಣೆದುರು. ಚೀರಿಡಬೇಕೆಂದೆನಿಸುತ್ತದೆ- “ಯೆಸ್ ಮೈ ಸನ್, ಎವೆರಿಥಿಂಗ್ ಈಸ್ ಅ ಪ್ರಾಬ್ಲೆಮ್. ಎವೆರಿಥಿಂಗ್. ಯಾವಾಗ ಬಿಡುಗಡೆಯೋ? ಅದನ್ನೇ ಕಾಯುತ್ತ ಇದ್ದೇನೆ’.
ಗೋಪಾಲಕೃಷ್ಣ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.