ಮನೋಚರಿತ್ರಂ
Team Udayavani, Apr 2, 2017, 3:50 AM IST
ಕರ್ನಾಟಕದಂತಹ ಮುಂದುವರಿದ ರಾಜ್ಯದ ಜಿಲ್ಲಾಕೇಂದ್ರಗಳಲ್ಲಿ ಮನೋವೈದ್ಯರಿಲ್ಲ. ಇರುವ ಮನೋವೈದ್ಯರಿಗೂ “ವೈದ್ಯ’ನ ಪಟ್ಟ ಸಿಕ್ಕುವುದು ಬೇರೆಲ್ಲ ವೈದ್ಯರ ನಂತರವೇ. ಹಾಗಾಗಿ, ನಿಮ್ಹಾನ್ಸ್ ನ ಗರಡಿಯಲ್ಲಿ ಪಳಗಿಯೂ ಪ್ರತಿವರ್ಷ ಹೊರಬರುವ ಸುಮಾರು 30 ಮನೋವೈದ್ಯರಲ್ಲಿ ಬಹುಮಂದಿ ಅಮೆರಿಕ, ಆಸ್ಟ್ರೇಲಿಯಾಗಳಿಗೇಕೆ ಹೋಗುತ್ತಾರೆ ಎನ್ನುವುದಕ್ಕೆ ಕೇವಲ ದುಡ್ಡಿನ ಆಮಿಷವೊಂದು ಕಾರಣವಲ್ಲ…
ಎಂ.ಡಿ. ಕೋರ್ಸು ಸೇರುವ ಮೊದಲ ದಿನ. ಬೆಂಗಳೂರನ್ನು ಹೊಕ್ಕು ದಾರಿ ಕೇಳುತ್ತ “ನಿಮ್ಹಾನ್ಸ್’ಗೆ ದಾರಿ ತೋರಿಸಿ ಎಂದು ಕೇಳಿದ್ದೆವು. ಆಟೋದವರು ನಮ್ಮನ್ನು ಒಂದು “ಥರಾ’ ನೋಡಿ, ತಕ್ಷಣ “ನಿಮ್ಹಾನ್ಸ್’ ಕಡೆಗೆ ಕೈ ತೋರಿದ್ದರು. ಅಂತೂ ಹೊಸೂರು ರಸ್ತೆ, ಬೆಂಗಳೂರು-29ಕ್ಕೆ ಬಂದು ಸೇರಿಯಾಗಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ದೊಡ್ಡ ಕಟ್ಟಡಗಳು, ಹಸಿರು ಮರಗಿಡಗಳ ಮಧ್ಯೆ “ಕಾವೇರಿ’, “ಕಬಿನಿ’ – ಹಾಸ್ಟೆಲ್‌ಗಳು ನಿಮ್ಹಾನ್ಸ್ ಸಮುಚ್ಚಯವೆಂದೇ ಕರೆಯಬಹುದಾದ ಪೆವಿಲಿಯನ್‌ಗಳು, ವಾರ್ಡುಗಳು, ಹೊಸ ಬ್ಲಾಕ್‌ಗಳು, ಹೊರರೋಗಿಗಳ ದೊಡ್ಡ ವಿಭಾಗ. ಕ್ಯಾಂಪಸ್ಸಿನೊಳಗೆ ಅರ್ಧ ರಾತ್ರಿಯಲ್ಲಿಯೂ ಯಾವುದೇ ಭಯವಿಲ್ಲದೆ ಒಬ್ಬೊಬ್ಬರೇ ಓಡಾಡುವ ಹುಡುಗಿಯರು ! – “ನಿಮ್ಹಾನ್ಸ್’ ಆದ್ದರಿಂದ ಯಾರನ್ನಾದರೂ ಕೆಣಕಲೂ ಎಲ್ಲರಿಗೂ ಭಯವೇನೋ ಎಂದುಕೊಂಡಿದ್ದೆ.
“ನಿಮ್ಹಾನ್ಸ್’ – National Institute of Mental Health and Neuro Sciences ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ ಇಂದು ವಿಶಾಲವಾಗಿ, ರಾಷ್ಟ್ರೀಯ- ಅಂತರರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ನಿಮ್ಹಾನ್ಸ್‌ನ ಬಗ್ಗೆ ಹೊರಗೆ ಅಂದರೆ ನಾವಿನ್ನೂ “ನಿಮ್ಹಾನ್ಸ್’ನವರಾಗದೇ ಇದ್ದಾಗ ಕೇಳುತ್ತಿದ್ದ ಜೋಕ್‌ಗಳು ಒಂದೆರಡಲ್ಲ. ಒಮ್ಮೆ ರೋಗಿಯೊಬ್ಬ ಅಲ್ಲಿಗೆ ಹೋದವರನ್ನು ಅಟ್ಟಿಸಿಕೊಂಡು ಬಂದನಂತೆ, ಇವರು ಭಯದಿಂದ ಓಡಿದರು, ಅವನೂ ಬಿಡಲಿಲ್ಲ, ಕಾಂಪೌಂಡು ಹಾರಿಯೂ ಅಟ್ಟಿಸಿಕೊಂಡು ಬಂದ, ಕೊನೆಗೂ ಇವರಿಗೆ ಸುಸ್ತಾಗಿ ಅವನ ಕೈಗೆ ಸಿಕ್ಕಿದೊಡನೆ, ಇವರು ಹೆದರಿ ಏನು ಮಾಡುತ್ತಾನೋ ಎಂದು ಹೆದರಿದರೆ, ಅವನು ಜೋರಾಗಿ ಕೈಯೆತ್ತಿ “ಔಟ್’ “ಔಟ್’ ಎಂದು ಕೂಗಿದನಂತೆ! ಅವನಾಡುತ್ತಿದ್ದುದು ಜೂಟಾಟ.-
ಮತ್ತೂಂದು ಬಾರಿ ನಿಮ್ಹಾನ್ಸ್ ವಾರ್ಡ್‌ನಲ್ಲಿ ಇಬ್ಬರು ರೋಗಿಗಳು- ಭ್ರಮೆಗೊಳಗಾದವರು ಮಾತನಾಡುತ್ತಿದ್ದರಂತೆ. ಒಬ್ಬನು ಹೇಳಿದ “”ನಿನ್ನೆ ನನ್ನ ಕನಸಿನಲ್ಲಿ ದೇವರು ಬಂದಿದ್ದ, ಅವನು ನೀನು ನಾಳೆ ಇಡೀ ಜಗತ್ತಿನ ಒಡೆಯನಾಗುತ್ತೀಯ” ಎಂದ. ಕೇಳುತ್ತಿದ್ದ ಇನ್ನೊಬ್ಬ ಕಣ್ಣರಳಿಸಿ ನಂತರ ಗಂಭೀರವಾಗಿ, “”ನಾನು ಹಾಗೆ ಹೇಳಿಲ್ಲವಲ್ಲ!” ಎಂದ.
“ಹುಡುಗಿ ಕೈ ಹಿಡಿದ್ರೆ ರೊಮಾನ್ಸ್, ಕೈ ಕೊಟ್ರೆ ನಿಮ್ಹಾನ್ಸ್’ ಎಂಬ ನಾಣ್ಣುಡಿಯಂತೂ ಪ್ರಖ್ಯಾತವೇ ಆಗಿತ್ತು. ಇಂತಹ “ನಿಮ್ಹಾನ್ಸ್’ನ ಬಗೆಗಿನ ಜೋಕ್‌ಗಳನ್ನು ಬೇಕಷ್ಟು ಕೇಳಿದ್ದರೂ, ನಿಮ್ಹಾನ್ಸ್‌ನ ನಿಜವಾದ ಅನುಭವ ಮನೋವೈದ್ಯಕೀಯಕ್ಕೆ ಕಾಲಿರಿಸಿದ ನಮಗೆ ಹಲವು ರೀತಿಯಲ್ಲಿ ಕಾದಿತ್ತು.
“ಓರಿಯಂಟೇಷನ್’ ಕ್ಲಾಸಿನ ಮೊದಲ ದಿನ ರೋಗಿಗಳಿಗೆ, ಅವರ ಕುಟುಂಬದವರಿಗೆ ಮಾಹಿತಿ ನೀಡುವ ಶಾಖೆ – Psychoeducationನ ಮುಖ್ಯಸ್ಥೆ ಡಾ. ಜಯಶ್ರೀ ನಿಮ್ಹಾನ್‌ನ ಹೊಸ ವೈದ್ಯರಿಗೆ ತರಗತಿ ತೆಗೆದುಕೊಂಡಿದ್ದರು. “”ಏಡ್ಸ್ ತಡೆಗಟ್ಟಲು ಮಾಡಬಹುದಾದ ಸುಲಭ ಉಪಾಯವೇನು?” ಪ್ರಶ್ನೆ ಕೇಳಿದ್ದರು. ತರಗತಿಯಲ್ಲಿ ಇದ್ದವರೆಲ್ಲರೂ ಪ್ರತಿಭಾನ್ವಿತ ವೈದ್ಯರು, ಎಂಬಿಬಿಎಸ್ ಮುಗಿಸಿ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಜಯಶಾಲಿಗಳಾದ, ಕೇಂದ್ರ ಸರ್ಕಾರವೇ ಅವರ ಸಂಪೂರ್ಣ ವೆಚ್ಚ ಭರಿಸಿ ತಯಾರು ಮಾಡುವ “ಜೀನಿಯಸ್’ ಗಳು! ಅಂಥವರಿಗೆ ಈ ಪ್ರಶ್ನೆಯ ಉತ್ತರ ಗೊತ್ತಿರದೆ ಇದ್ದೀತೆ? ಆದರೆ ಎಲ್ಲರೆದುರಿಗೆ ಎದ್ದು ನಿಂತು “ಕಾಂಡೋಮ್ ಬಳಕೆ’ ಎನ್ನಲು ಬುದ್ಧಿವಂತಿಕೆ- ತಿಳುವಳಿಕೆಗಳಷ್ಟೇ ಸಾಲದಷ್ಟೆ? ಯಾರೂ ಬಾಯಿ ಬಿಟ್ಟಿರಲಿಲ್ಲ ! ಜಯಶ್ರೀ ಮೇಡಂ ನಗುತ್ತ ಹೇಳಿದ್ದರು, “”ನಿಮ್ಮಂಥ ಕ್ರೀಮ್ ಆಫ್ ದಿ ಸೊಸೈಟಿ ಎನಿಸಿಕೊಂಡ ವೈದ್ಯರುಗಳೇ ಲೈಂಗಿಕತೆಯ ಬಗ್ಗೆ, ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟು ಸಂಕೋಚಪಟ್ಟರೆ, ನಿಮ್ಮ ಬಳಿ ಬರುವ ರೋಗಿಗಳು ಹೇಗೆ ಮನಸ್ಸು ಬಿಚ್ಚಿ ತಮ್ಮ ಖಾಸಗೀ ವಿಷಯಗಳ ಬಗ್ಗೆ ಮಾತನಾಡಿಯಾರು?”
ಮೊದಲ ದಿನದ ರೋಗಿ ಮುಸ್ಲಿಂ ಹುಡುಗಿಯೊಬ್ಬಳನ್ನು ನೋಡುವಾಗಲೇ ನಮ್ಮ ಹಿಂದಿ ಭಾಷಾಜ್ಞಾನ ಎಷ್ಟು ನಿರರ್ಥಕ ಎಂಬುದು ಅರಿವಾದದ್ದು. ಹಿಂದಿಯಲ್ಲಿ “ರಾಷ್ಟ್ರಭಾಷಾ’ದವರೆಗೆ ಪರೀಕ್ಷೆಗಳನ್ನು ಫಸ್ಟ್ ಕ್ಲಾಸಿನಲ್ಲೇ ಪಾಸು ಮಾಡಿದ್ದ ನಾನು “”ಕಿವಿಯಲ್ಲಿ ಯಾರೋ ಮಾತನಾಡಿದಂತೆ ಆಗುತ್ತದೆಯೆ?” ಎಂಬುದನ್ನು ಹಿಂದಿಯಲ್ಲಿ “”ಕಿಸಿಕಾ ಧುನ್ ಸುನಾಯೀ ದೇತಾ ಹೇ ಕ್ಯಾ?” ಎಂದು ಕೇಳಿದಾಗ, ಆ ರೋಗಿ ಬೇರೆ ಭಾಷೆಯನ್ನೇ ಕೇಳಿದಂತೆ ಕಣ್ಣರಳಿಸಿದ್ದಳು. ಹಿಂದಿ, ತಮಿಳು, ಕನ್ನಡ, ಬಂಗಾಲಿ, ತೆಲುಗು ಸರಿಯಾಗಿ ಬಾರದಿದ್ದರೂ, ಮನೋವೈದ್ಯಕೀಯದಲ್ಲಿ ನಿಷ್ಣಾತರಾದ ಪ್ರೊಫೆಸರ್‌ಗಳು ಆದಷ್ಟು ಪರಿಣಾಮಕಾರಿ ಸಂವಹನದ ಮೂಲಕ ರೋಗಿಯ ಮನಸ್ಸನ್ನು ಬಿಚ್ಚಿಡುವುದನ್ನು ನೋಡಿ ನಾವು ಅಚ್ಚರಿಗೊಳ್ಳುತ್ತಿದ್ದೆವು.
ವೇಷಭೂಷಣ ಮುಖ್ಯವಲ್ಲ…
ನಿಮ್ಹಾನ್ಸ್‌ನ ತುಂಬೆಲ್ಲಾ ವಿಚಿತ್ರ ವೇಷಗಳನ್ನು ಧರಿಸಿದ ವಿವಿಧ ಶಾಖೆಗಳಿಗೆ ಸೇರಿದ ವಿದ್ಯಾರ್ಥಿ-ಪ್ರೊಫೆಸರ್‌ಗಳಿದ್ದಾರೆ. ಹೆಲ್ಮೆಟ್ ಮಾತ್ರ ಧರಿಸಿ, ಚಡ್ಡಿಯೊಂದರಲ್ಲೇ (ಕೆಲವೊಮ್ಮೆ ಅದೂ ಇಲ್ಲದೆ!) ಹಾಸ್ಟೆಲ್ ತುಂಬಾ ಓಡಾಡುವ ನ್ಯೂರಾಲಜಿ ರೆಸಿಡೆಂಟ್ ಕಥೆ, ಜುಟ್ಟು ಹಾಕಿಕೊಂಡು ಓಡಾಡುವ ಪ್ರೊಫೆಸರ್, ಪೂರ್ತಿ ಗಡ್ಡ ಬಿಟ್ಟು ತನ್ನೊಡನೆ ಮಾತನಾಡಲು ಬರುವವರಿಗೆ, “ನನ್ನ ಸಮಯ ಅಮೂಲ್ಯ. ನಿಮ್ಮ ಮಾತುಕತೆಯಿಂದ ಅದನ್ನು ಹಾಳು ಮಾಡಬೇಡಿ, ಅಗತ್ಯವಿರುವಷ್ಟೇ ಮಾತನಾಡಿ ಹಿಂದಿರುಗಿ’ ಎಂದು ಬೋರ್ಡು ತಗಲಿಸಿ, ಬಂದವರಲ್ಲಿ ಪಾಪಪ್ರಜ್ಞೆ ಉಂಟುಮಾಡುವ ಪ್ರೊಫೆಸರ್… ಹೀಗೆ ನಿಮ್ಹಾನ್ಸ್ ಲೋಕ ಮನೋವೈದ್ಯಕೀಯ ಲೋಕದಂತೆಯೇ ಬಣ್ಣ ಬಣ್ಣವಾಗಿತ್ತು. ವೈದ್ಯನ ಚಿಕಿತ್ಸೆ ನೀಡುವ ಪರಿಣತಿಯೊಂದೇ ಇಲ್ಲಿ ನಿಜವಾಗಿ ರೋಗಿಗೆ ಮುಖ್ಯ, ಆತನ ವೇಷಭೂಷಣಗಳಲ್ಲ ಎಂಬುದು ನಮಗೆ ಅರಿವಾದದ್ದೇ ಇಲ್ಲಿ.
ಅಲ್ಲಿಯವರೆಗೆ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಶಿಸ್ತು- ಹೆದರಿಕೆಯಿಂದ ಸೀರೆ-ಚೂಡಿದಾರ್‌ಗಳೇ ರೋಗಿ ಒಪ್ಪತಕ್ಕ ವೈದ್ಯವೇಷಗಳೆಂದು ನಂಬಿದ್ದ ನನಗೆ ಹಳ್ಳಿಯಿಂದ ಬಂದ ರೋಗಿಯೂ ಸಸ್ಪೆಂಡರ್ಸ್ ಹಾಕಿಕೊಂಡು, ಬಾಬ್ ಮಾಡಿಕೊಂಡ “ಮೇಡಂ’ರನ್ನೇ ಕೇಳಿಕೊಂಡು, ಅವರ ಹತ್ತಿರವೇ ತೋರಿಸಿಕೊಳ್ಳಲು ಹಠ ಮಾಡುವುದನ್ನು ಕಂಡಾಗ ಬೆರಗಾಗಿತ್ತು. ಸಭ್ಯತೆಯನ್ನು ಮೀರದೆ ವೇಷಭೂಷಣದಲ್ಲಿಯೂ ಕ್ರಿಯಾಶೀಲತೆ ಸಾಧ್ಯ ಎಂಬುದೂ ಮನದಟ್ಟಾಗಿತ್ತು. ಅಷ್ಟೇ ಅಲ್ಲ, ದೈಹಿಕ ಚಹರೆ ಹೇಗೇ ಇರಲಿ, ಕಪ್ಪು-ಕುಳ್ಳು-ಬಿಳಿಕೂದಲು – ಬಿಳಿಮಿಶ್ರಿತ ಕಪ್ಪುಕೂದಲು, ಅತಿ ಎತ್ತರ, ದಪ್ಪ – ಹೀಗೆ, ತಾವು “ಯಾವ ಸುಂದರಾಂಗರಿಗೂ ಕಡಿಮೆ ಇಲ್ಲ’ ಎಂಬಂಥ body image ಈ ಪ್ರೊಫೆಸರ್‌ಗಳಿಗಿತ್ತು! ಸಹಜವಾಗಿ ಅವರನ್ನು ಪ್ರತಿದಿನ ನೋಡುತ್ತಿದ್ದ ನಮಗೆ ಅದೊಂದು ಪ್ರಾಯೋಗಿಕ ಮಾದರಿ.
ಈ ಪ್ರೊಫೆಸರ್‌ಗಳು ನಮ್ಮೊಂದಿಗೇ ಕೆಲಸ ಮಾಡುತ್ತಿದ್ದರು, ತಾವೂ ರೋಗಿಗಳನ್ನು ಪರೀಕ್ಷಿಸುತ್ತಿದ್ದರು, ಬೇರೆ ಕಡೆಯಂತೆ ನಾವು ಹೇಳಿದರೆ ನಂಬಿ ಸುಮ್ಮನಾಗುತ್ತಿರಲಿಲ್ಲ. ಓ.ಪಿ.ಡಿ. (ಹೊರರೋಗಿಗಳ ವಿಭಾಗ) ಸಂಜೆ 6ರವರೆಗೆ ನಡೆದರೆ, ತಾವೂ ನಮ್ಮ ಜೊತೆಯೇ 6 ರವರೆಗೆ ಇರುತ್ತಿದ್ದರು. ಬಂದೊಡನೆ ಹಾಜರಿ ಹಾಕುವ, Joining Letter ¯àvÜáÊÜ Leave Letter ನೀಡುವ ಯಾವ ಶಿಸ್ತಿನ ಪದ್ಧತಿಯೂ ಅಲ್ಲಿರಲಿಲ್ಲ. ಯಾವ ನಿಯಮಗಳೂ ಇರದ, ಅನ್ವಯವಾಗದ, ಎಷ್ಟು ಮಾಡಿದರೂ ಮುಗಿಯದ ಕೆಲಸ. ಈ ಪ್ರೊಫೆಸರ್‌ಗಳಿಗೆ ಭಯಂಕರ ಸಿಟ್ಟು ಬರುತ್ತಿದ್ದದ್ದು ಒಂದೇ ಒಂದು ಕಾರಣಕ್ಕೆ. ಅದೆಂದರೆ ರೋಗಿಯ ಆರೈಕೆಯಲ್ಲಿ ನಾವು ನಿರ್ಲಕ್ಷ್ಯ ಮಾಡಿದಾಗ – ರೋಗಿಗೆ ನಾವು ಅವಮಾನ/ತಮಾಷೆ ಮಾಡುತ್ತಿದ್ದೇವೆ ಎಂಬ ಅನಿಸಿಕೆ ಅವರಿಗುಂಟಾದಾಗ – ಅಥವಾ ರೋಗಿಯ ಲಕ್ಷಣವನ್ನು ಸರಿಯಾಗಿ ಗಮನಿಸದೆ ತಪ್ಪು ಡಯಾಗ್ನಸಿಸ್ ಕೊಟ್ಟಾಗ.
.
ಭಾರತದ ಹಿರಿಯ ನರರೋಗತಜ್ಞರಾದ ಪ್ರೊಫೆಸರ್ ಟ್ಯಾಲಿ ಹೇಳುತ್ತಿದ್ದರು, “”ನಿಮ್ಹಾನ್ಸ್ ಇಷ್ಟು ದೊಡ್ಡದಾಗುವ ಮೊದಲು, ಅಂದರೆ ತುಂಬಾ ಹಿಂದೆ, ನೀವಿನ್ನೂ ಮಕ್ಕಳಾಗಿದ್ದಾಗ, ರಸ್ತೆಯ ಆ ಬದಿ ಮನೋವೈದ್ಯಕೀಯ, ಈ ಬದಿ ನರರೋಗ ವಿಭಾಗ ಇದ್ದವು. ರೋಗಿ ತಾನೇ ತಾನು ಯಾವ ವಿಭಾಗಕ್ಕೆ ಸೇರಿದವನು ಎಂಬುದನ್ನು ನಿರ್ಧರಿಸಿಕೊಂಡು ಬರುತ್ತಿದ್ದ. ಆತನ ಡಯಾಗ್ನಾಸಿಸ್ ಸರಿ ಇರುತ್ತಿತ್ತು. ಅಕಸ್ಮಾತ್ ಆತನಿಗೆ ತಾನು ಯಾವ ವಿಭಾಗಕ್ಕೆ ಸೇರಿದ ರೋಗಿ ಎಂಬ ಗೊಂದಲವುಂಟಾಗಿ ಗೊತ್ತಾಗದೆ ಯಾವುದೋ ಒಂದು ವಿಭಾಗಕ್ಕೆ ಬಂದ ಎನ್ನಿ, ಅಷ್ಟೇ, ಯಾವ ಪ್ರೊಫೆಸರ್‌ಗೂ ಅದು ಬಿಡಿಸಲಾಗದ ಸಮಸ್ಯೆಯೇ ಆಗಿರುತ್ತಿತ್ತು. ಅದಕ್ಕೇ ರೋಗಿಯನ್ನು ನಿಮ್ಮ ಗುರು ಎಂದುಕೊಳ್ಳಿ. ನೋವಿನ ಬಗ್ಗೆ, ಲಕ್ಷಣಗಳ ಬಗ್ಗೆ ಬೋಧಿಸುವ, ಪಠ್ಯಪುಸ್ತಕದಲ್ಲಿ ಬರೆದದ್ದನ್ನು ನಿಜರೂಪದಲ್ಲಿ, ಭಿನ್ನ ಭಿನ್ನ ರೂಪಗಳಲ್ಲಿ ತೋರಿಸುವ ಒಬ್ಬ “ಪರಿಣತ’ ಎಂದು ಭಾವಿಸಿ. ಆತನನ್ನು ಎಂದೂ ನಿರ್ಲಕ್ಷಿಸಬೇಡಿ”.
ಇದಕ್ಕೆ ಸರಿಯಾಗಿ ರೋಗಿಗಳೂ ನಮ್ಮನ್ನು ಪರೀಕ್ಷಿಸುವವರಂತೆಯೇ ವರ್ತಿಸುತ್ತಿದ್ದರು. ನಾವು ಎರಡು ಗಂಟೆ ಕೂತು, ನಮ್ಮ ಭಾಷಾಜ್ಞಾನ – ವೈದ್ಯಕೀಯ ಜ್ಞಾನ-ಸಭ್ಯತೆ ಎಲ್ಲವನ್ನೂ ಸೇರಿಸಿ ಕೇಳಿದ ಪ್ರಶ್ನೆಗಳಿಗೆಲ್ಲಾ “ಎರಡು ಲೈನ್’ ಉತ್ತರ ನೀಡುತ್ತಿದ್ದವರು. ಪ್ರೊಫೆಸರ್ ಬಂದು ಕೇಳಿದರೆ, ಒಂದು ಸಾಲಿನ ಪ್ರಶ್ನೆಗೆ ಮಾಹಿತಿಯ ಮಹಾಪೂರವನ್ನೇ (ಜೊತೆಗೆ ಕಣ್ಣೀರು ಕೂಡ) ಹರಿಸಿಬಿಡುತ್ತಿದ್ದರು. ನಮಗೆ ರೋಗಿಯ ಬಗ್ಗೆ ಗೌರವ ಬಿಡಿ, “ಇದೆಲ್ಲವನ್ನೂ ನಮಗೆ ಹೇಳಲು ಇವರಿಗೇನಾಗಿತ್ತು’ ಎಂದು ಕೋಪಗೊಳ್ಳುವಂತೆ ಮಾಡುತ್ತಿದ್ದರು. ಆಗ ಪ್ರೊಫೆಸರ್ ಹೇಳುತ್ತಿದ್ದರು “”ಸರಿಯಾದ ಉತ್ತರಗಳನ್ನು ಹೊರಡಿಸಲು ಸರಿಯಾದ ಪ್ರಶ್ನೆ ಕೇಳಬೇಕು, ಎರಡು ನಿಮಿಷಗಳಲ್ಲಿ ರೋಗಿಯೊಡನೆ ನಿಕಟ ಬಾಂಧವ್ಯವನ್ನು ಏರ್ಪಡಿಸಿಕೊಳ್ಳುವ ಕೌಶಲ ಕಲಿಯಬೇಕು. ರೋಗಿಯ ರೋಗ ಕಂಡುಹಿಡಿಯಲು ತುಂಬಾ ಮಾತಾಡಬೇಕು, ಬಹುಹೊತ್ತು ಆತನೊಡನೆ ಕಳೆಯಬೇಕು ಎಂಬುವುದು ನಿಜವಲ್ಲ. ಭಾರತದಲ್ಲಿಯೇ ನೀವು ಉಳಿಯುವುದಾದರೆ ಈ ಕೌಶಲವನ್ನು ಕಲಿಯದೆ, ನೀವು ಉಪಯುಕ್ತ ಮನೋವೈದ್ಯರಾಗಲು ಸಾಧ್ಯವಿಲ್ಲ”. ಅನುಭವವನ್ನು ಪರಿಣತಿಯೂ ಅವಲಂಬಿಸಿರುತ್ತದೆ ಎನ್ನುವುದೂ ನಿಜವೇ ಆಗಿತ್ತು. ಒಮ್ಮೆ ಪೆವಿಲಿಯನ್ ಒಂದರ ಮುಚ್ಚಿದ ವಾರ್ಡ್‌ಗಳಲ್ಲಿ ಬಹುಕಾಲವಿರುವ ರೋಗಿಗಳಲ್ಲಿ ಒಬ್ಬನಾದ ಪೀಟರ್‌ನನ್ನು ಕೇಸ್ ಕಾನ್ಫರೆನ್ಸ್‌ಗೆ ಎಂ.ಡಿ. ವಿದ್ಯಾರ್ಥಿಗಳಿಗೆ ಸಂದರ್ಶಿಸಲು ಹೇಳಿದ್ದರು. ಆಲ್ಬಿ ಎಂಬ ಬುದ್ಧಿವಂತ ಮಲಯಾಳಿ ತನ್ನ “ಸಿಂಬಲ್’ ಕನ್ನಡದಲ್ಲಿ ಅವನನ್ನು ಸಂದರ್ಶಿಸತೊಡಗಿದ. ಯಾವ ಲಕ್ಷಣವೂ ಸಿಗಲೇ ಇಲ್ಲ. ಪ್ರೊಫೆಸರ್ ನಗುತ್ತಲೇ ನೋಡುತ್ತಿದ್ದರು. ಪೀಟರ್ ಸ್ಕಿಜೋಫ್ರಿನಿಯಾದಿಂದ ನರಳುತ್ತಿದ್ದ. ಔಷಧಿಗಳಿಂದ ಅವನ ಲಕ್ಷಣಗಳು ನಿಯಂತ್ರಣದಲ್ಲಿದ್ದವು. ಡಬಲ್ ಬುಕ್ ಕೀಪಿಂಗ್ ಎಂಬ ಪ್ರಕ್ರಿಯೆಗೆ ಉತ್ತಮ ಉದಾಹರಣೆ ಆತ. ಅಂದರೆ ಭ್ರಮೆಗಳು ಇದ್ದರೂ, ಅವರು ವಾಸ್ತವದಲ್ಲಿಯೂ ಬದುಕುತ್ತಾರೆ. ತಾನು ರಾಜ ಎನ್ನುತ್ತಲೇ, ಬಸ್ಸಿಗೆ ದುಡ್ಡು ಕೊಟ್ಟು ಟಿಕೆಟ್ ಖರೀದಿಸುತ್ತಾರೆ. ಆಲ್ಬಿ ಸಂದರ್ಶನ ಮುಗಿಸಿದ. ಆಲ್ಬಿಯ ಎಲ್ಲಾ ಪ್ರಶ್ನೆಗೂ ಪೀಟರ್ ಸರಿಯಾದ ಉತ್ತರ ಕೊಟ್ಟ. ಸರಿ, ಆಲ್ಬಿ ಪರೀಕ್ಷೆ ಮುಗಿಸಿ, ಪೀಟರ್‌ನಿಗೆ ಥ್ಯಾಂಕ್ಯೂ ಎಂದು ಹೇಳಿ ವಾರ್ಡಿಗೆ ಹಿಂದಿರುಗಲು ಹೇಳಿದ. ಸ್ವಲ್ಪ ದೂರ ಹೋಗಿ ಹಿಂದಿರುಗಿದ ಪೀಟರ್. ಹೊರಗೆ ಮಳೆ ಬರುತ್ತಿತ್ತು. ಪೀಟರ್ ಪ್ರೊಫೆಸರ್ ಕಡೆ ತಿರುಗಿದ. ಮಳೆ ಕಡೆ ಕೈ ತೋರಿಸಿ ಹೇಳಿದ “”ಡಾಕ್ಟರ್, ನಿಮಗೆ ಗೊತ್ತಾ? ನಾನು ಬೇಕಾದರೆ ಈ ಮಳೆ ನಿಲ್ಲಿಸಿಬಿಡಬಲ್ಲೆ! ” ಪ್ರೊಫೆಸರ್ ನಗದೆ, ಗಂಭೀರವಾಗಿ ಹಸನ್ಮುಖರಾಗಿ ಹೇಳಿದ್ದರು “”ಹೌದು, ನನಗೆ ಗೊತ್ತಿದೆ ಪೀಟರ್, ನೀನು ವಾರ್ಡಿನಲ್ಲಿರು, ನಾನು ಆಮೇಲೆ ಬಂದು ಮಾತನಾಡುತ್ತೇನೆ”. ಆಲ್ಬಿಯ ಮುಖ ಪೆಚ್ಚಾಗಿತ್ತು!
.
ಮೈಸೂರಿನ ಮಹಾರಾಜರಿಂದ 100 ಎಕರೆ ಜಾಗದಲ್ಲಿ ಮಾನಸಿಕ ಆಸ್ಪತ್ರೆಯಾಗಿ ಆರಂಭವಾದ “ನಿಮ್ಹಾನ್ಸ್’ ಇಂದು ಬೆಳೆದು ನಿಂತಿರುವುದು ಸುಪ್ರಸಿದ್ಧ ಮಾನಸಿಕ ಆರೋಗ್ಯ ಸಂಸ್ಥೆಯಾಗಿ. ದಿವಾನ್ ಮಿರ್ಜಾ ಇಸ್ಮಾಯಿಲ್ ಮತ್ತು ಡಾ. ನರೋನ್ಹಾ ಇಬ್ಬರ ಸಸ್ಯಪ್ರೀತಿಯಿಂದಾಗಿ ಈ ಸಂಸ್ಥೆಯ ತುಂಬಾ ಅಪರೂಪದ, ಹೂ ತುಂಬಿದ, ಮನಸ್ಸು ಅರಳಿಸುವ ಗಿಡಮರಗಳಿವೆ. ಜೈಲು-ಅಡ್ಡಗೋಡೆಗಳ ಹೊರಗಿನ ಜನರ ಕಲ್ಪನೆಯ ಹುಚ್ಚಾಸ್ಪತ್ರೆಗಿಂತ ಭಿನ್ನವಾಗಿ ಮಾನಸಿಕ ಆರೋಗ್ಯ ಮರಳಿಸುವ, ಅದರ ಬಗೆಗೆ ಸಂಶೋಧಿಸುವ, ಮನಸ್ಸಿಗೆ ಪೂರಕವಾಗಿ ಮಿದುಳು-ನರವಿಜ್ಞಾನ – ಇತ್ಯಾದಿಯಾಗಿ ಸುಮಾರು 20ಕ್ಕೂ ಹೆಚ್ಚು ವಿಧದ ಮಿದುಳಿಗೆ ಸಂಬಂಧಿಸಿದ ಶಾಖೆಗಳು ಇಂದು ಇಲ್ಲಿವೆ. ಡಾ. ಗೋವಿಂದಸ್ವಾಮಿ ಎಂಬ ಅದ್ಭುತ ದೂರದೃಷ್ಟಿಯನ್ನುಳ್ಳ ಮಹಾನ್ ವ್ಯಕ್ತಿಯ ಕನಸಿನ ಫಲವಾಗಿ ಇಂದು ನಿಮ್ಹಾನ್ಸ್ ಅಂತರರಾಷ್ಟ್ರೀಯ ನರ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಭಾರತದಲ್ಲಿ ವೈದ್ಯರ ಸಂಖ್ಯೆಯೇ ಸಾಕಷ್ಟಿಲ್ಲ. ಮನೋವೈದ್ಯರ ಸಂಖ್ಯೆಯಂತೂ ಇನ್ನೂ ಕಡಿಮೆ. ಕರ್ನಾಟಕದಂತಹ ಮುಂದುವರೆದ ರಾಜ್ಯದಲ್ಲಿಯೂ ಹಲವು ಜಿಲ್ಲಾ ಕೇಂದ್ರಗಳಲ್ಲಿಯೂ ಮನೋವೈದ್ಯರಿಲ್ಲ. ಇರುವ ಮನೋವೈದ್ಯರಿಗೂ ವೈದ್ಯನ ಪಟ್ಟ ಸಿಕ್ಕುವುದು ಬೇರೆಲ್ಲಾ ವೈದ್ಯರ ನಂತರವೇ. ನಿಮ್ಹಾನ್ಸ್‌ನ ಗರಡಿಯಲ್ಲಿ ಪಳಗಿಯೂ ಪ್ರತಿವರ್ಷ ಹೊರಬರುವ ಸುಮಾರು ಮೂವತ್ತು ಮನೋವೈದ್ಯರಲ್ಲಿ ಶೇಕಡಾ 80 ಜನ ಯುಕೆ/ಆಸ್ಟ್ರೇಲಿಯಾಗೇಕೆ ಹೋಗುತ್ತಾರೆ ಎನ್ನುವುದಕ್ಕೆ ಕೇವಲ ದುಡ್ಡೊಂದೇ ಕಾರಣವಲ್ಲ.
ಮನೋವೈದ್ಯರು ತಮ್ಮ ರೋಗಿಗಳಂತೆಯೇ ಎಂದು ಭಾವಿಸುವ ಸಮಾಜಕ್ಕೆ ಮನೋವೈದ್ಯರು ಸ್ವಸ್ಥ ಮನಸ್ಸಿನ – ಕುತೂಹಲಕಾರಿ ವ್ಯಕ್ತಿತ್ವದವರು ಎಂಬುದಕ್ಕೆ ನಿಮ್ಹಾನ್ಸ್ ಸಾಕ್ಷಿ. ಸಾಹಿತ್ಯ, ಸಮಾಜ ಸೇವೆ, ಮಾಧ್ಯಮ, ಪರ್ವತಾರೋಹಣ, ಆಟ, ನೃತ್ಯ, ಚಿತ್ರ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಮನೋವೈದ್ಯರು ಇಲ್ಲಿದ್ದಾರೆ. ಹಾಗೆಯೇ ತನ್ನ ಅರವತ್ತು ವರ್ಷಗಳ ಸಂಭ್ರಮದಲ್ಲಿ ನಡೆದ ದೊಡ್ಡ ಅಂತರರಾಷ್ಟ್ರೀಯ ಸಮಾರಂಭದಲ್ಲಿ ಎಲ್ಲರಿಗಿಂತ ದೊಡ್ಡ ಚಪ್ಪಾಳೆ “ಪ್ರದೀಪ್’ಗೆ! ಯಾರು ಈ ಪ್ರದೀಪ್? ಆ್ಯಸ್ಪರ್ಗರ್ ಸಿಂಡ್ರೋಮ್ ಎಂಬ “ಆಟಿಸಂ’ ಕಾಯಿಲೆಯ ಅಸಾಧಾರಣ ಜ್ಞಾಪಕಶಕ್ತಿ ಹೊಂದಿರುವ “ಪ್ರದೀಪ್’ ನಿಮ್ಹಾನ್ಸ್‌ನ “ವೈದ್ಯಕೀಯ ದಾಖಲೆಗಳ’ ವಿಭಾಗದ ಸಿಬ್ಬಂದಿ. 1974ರಿಂದ ಇಂದಿನವರೆಗಿನ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನೂ ಕ್ರಮವಾಗಿ, ತನ್ನ ನೆನಪಿನ ಶಕ್ತಿಯಿಂದಲೇ ಹೆಸರಿಸಬಲ್ಲ ಪ್ರತಿಭಾವಂತ. ನಿಮ್ಹಾನ್ಸ್‌ನ ಎಲ್ಲಾ ವಿದ್ಯಾರ್ಥಿಗಳ ಸ್ನೇಹಿತ. ತಪ್ಪುಗಳನ್ನು ಕಂಡು ಹಿಡಿಯುವ “ಗುರು’ ಆಗಿರುವ ಪ್ರದೀಪ್‌ನ ಪ್ರತಿಭೆಗೆ ಎಲ್ಲರ ಒಮ್ಮತದ ಚಪ್ಪಾಳೆ ದೊರೆಯುತ್ತದೆ. “ಮೌನದಲ್ಲಿಯೂ ಮಾತಿದೆ, ಮಾತಿಗಿಂತ ಹೆಚ್ಚು ಅರ್ಥವಿದೆ’ ಎಂಬುದು ಇಲ್ಲಿನ ವೈದ್ಯ – ರೋಗಿ ಸಂವಾದ ತತ್ವ.
ಕೆ. ಎಸ್. ಪವಿತ್ರಾ , (ಮನೋರೋಗ ವೈದ್ಯೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.