ಮಾರ್ಚ್ 8 ಮತ್ತು ಇತರ ಕತೆಗಳು
Team Udayavani, Mar 11, 2018, 8:15 AM IST
ಮೊನ್ನೆಯಷ್ಟೇ ಮಹಿಳಾ ದಿನಾಚರಣೆ ನಡೆಯಿತು. ಸರಕಾರಿ ಸಂಸ್ಥೆಗಳಲ್ಲಂತೂ ಇದನ್ನೊಂದು “ವಾರ್ಷಿಕ ಪೂಜಾ’ ಸಂಪ್ರದಾಯದಂತೆ ಆಯೋಜಿಸಲಾಯಿತು ಎಂದರೆ ಅಚ್ಚರಿ ಇಲ್ಲ. ಮೇಲಧಿಕಾರಿಗಳಿಂದ ಸುತ್ತೋಲೆ ಬಂದಿದೆ, ಆಚರಿಸದೇ ವಿಧಿಯಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಂದ ತೊಡಗಿ ಸ್ವಸಹಾಯ ಸಂಘಗಳ ಕಾರ್ಯಕರ್ತೆಯರವರೆಗೆ ಎಲ್ಲರೂ ಒಂದೇ ಬಣ್ಣದ ಸೀರೆ ಉಟ್ಟು ಮಹಿಳಾ ದಿನವನ್ನು ಸಂಭ್ರಮಿಸಿದರು. “ಯಾರನ್ನಾದರೂ ಭಾಷಣಕ್ಕೆ ಕರೆಯಲೇಬೇಕು ನೋಡಿ, ಮಾರ್ಚ್ 8 ಈ ಸಲ ಗುರುವಾರ ಬಂದಿದೆ. ಕೆಲಸದ ದಿನ. ಭಾಷಣಕ್ಕೆ ಯಾರೂ ಸಿಗುವುದಿಲ್ಲ. ಕೊಡುವ ಗೌರವಧನವೂ ಕಡಿಮೆ. ಹಾಗಾಗಿ, ಭಾಷಣಕ್ಕೆ ಜನ ಹುಡುಕುವುದೇ ದೊಡ್ಡ ಸಮಸ್ಯೆ’ ಎಂದು ಆಯೋಜಕರು ಪರಸ್ಪರ ಮಾತನಾಡಿಕೊಳ್ಳುತ್ತ “ಈ ಆಚರಣೆಗಳಾದರೂ ಯಾಕೆ ಬರುತ್ತದೋ’ ಎಂದು ಪರಿತಪಿಸಿದ್ದಿದೆ. ಅಂದ ಹಾಗೆ, ಇದಕ್ಕೂ ಒಂದಿಷ್ಟು ಅನುದಾನವನ್ನು ತೆಗೆದಿಟ್ಟಿರುವುದರಿಂದ ಸರಕಾರಿ ಅಧಿಕಾರಿಗಳಿಗೆ ಅದನ್ನು ಖರ್ಚು ಮಾಡದೇ ವಿಧಿಯಿಲ್ಲ ; ಅಕಾಡೆಮಿಗಳು ವಿಚಾರಗೋಷ್ಠಿಗಳನ್ನು ಆಯೋಜಿಸಿದ ಹಾಗೆ! ಖಾಸಗಿ ಸಂಸ್ಥೆಗಳಲ್ಲಿಯೂ ಒಂದೇ ಬಣ್ಣದ ಲಿಪ್‌ಸ್ಟಿಕ್, ಒಂದೇ ರೀತಿಯ ಸೀರೆ- ಹೀಗೆ ಮಹಿಳೆಯರು ಏಕತೆಯನ್ನು ಮೆರೆಯುವುದನ್ನು ಮೊನ್ನೆ ಕಂಡೆವು. ಮುಂಬಯಿಯ ಲೋಕಲ್ ಟ್ರೈನುಗಳಲ್ಲಿ ಒಂದೇ ಬಣ್ಣದ ಸೀರೆ ಉಟ್ಟ ಮಹಿಳೆಯರು “ನಾವೆಲ್ಲರೂ ಒಂದೇ’ ಎಂದು ಸಾರುತ್ತಿರುವುದನ್ನೂ ನೋಡಿಯಾಯಿತು. ಬಟ್ಟೆ ಗಿರಣಿಗಳಲ್ಲಿ ಕೆಲಸಕ್ಕೆ ಹೋಗುವ ತರುಣಿಯರು ಒಂದೇ ರೀತಿಯ ದುಪ್ಪಟ್ಟಾಗಳನ್ನು ಹೊದ್ದುಕೊಂಡು ತಮ್ಮ ಒಗ್ಗಟ್ಟನ್ನು ಮೆರೆದಿದ್ದಾರೆ ! ಮಹಿಳಾ ದಿನಾಚರಣೆಗೆ ನಾವು ಎಷ್ಟೊಂದು ಪರವಶರಾಗಿದ್ದೇವೆ ಎಂದರೆ ಎಲ್ಲೆಲ್ಲೂ “ಹ್ಯಾಪಿ ವಿಮನ್ಸ್ ಡೇ’ ಎಂದೋ “ಮಹಿಳಾ ದಿನಾಚರಣೆಯ ಶುಭಾಶಯಗಳು’ ಎಂದೋ ಸಂದೇಶಗಳು ವಾಟ್ಸಾಪ್ ಮೂಲಕ ವಿನಿಮಯಗೊಂಡಿವೆ.
ಇನ್ನೂ ಮುಂದಿನ ಐದಾರು ವರ್ಷಗಳಲ್ಲಿ ಮಹಿಳಾ ದಿನಾಚರಣೆಗೆ ಹೊಸ ಆಯಾಮವೊಂದು ಬಂದರೆ ಅಚ್ಚರಿಯಿಲ್ಲ. ಮಹಿಳೆಯರಿಗೆ “ತಮ್ಮ ದಿನ’ ಎಂಬ ಅತಿಯಾದ ಅಭಿಮಾನ ಹುಟ್ಟಿ, ಆ ದಿನ ಹೊಸ ಸೀರೆಗಳನ್ನು ಕೊಳ್ಳಬಯಸುವವರು ಅಧಿಕವಾಗಿ ಜವಳಿ ಅಂಗಡಿಗಳಲ್ಲಿ ರಶ್ ಉಂಟಾಗಬಹುದು. ಜುಮುಕಿ, ಸರ, ಕಾಲ್ಗೆಜ್ಜೆಗಳನ್ನು “ಮಹಿಳಾ ದಿನಾಚರಣೆ’ಯಂದೇ ಖರೀದಿಸುವ ಹೊಸ ಟ್ರೆಂಡ್ ಬರಬಹುದು. ಮಹಿಳಾ ದಿನದ ಬಗ್ಗೆ ಉತ್ಕಟವಾದ ಅಭಿಮಾನ ಉಂಟಾಗಿ ಆ ದಿನ ಮಹಿಳೆಯರು ತಮ್ಮ ಪತಿದೇವರನ್ನು ಭಕ್ತಿ-ಗೌರವಗಳಿಂದ ನಮಿಸುವ ಸಂಪ್ರದಾಯ ಆರಂಭವಾದರೂ ಅಚ್ಚರಿಪಡಬೇಕಾಗಿಲ್ಲ.
ಚರಿತ್ರೆ ಮರೆತುಹೋಗಿದೆ !
ಮಾರ್ಚ್ 8ರಂದು ನಾವೆಲ್ಲ ಸಂಭ್ರಮಿಸುವ ಮಹಿಳಾ ದಿನಾಚರಣೆಗೆ ಒಂದು ಇತಿಹಾಸವಿದೆ ಎಂದು ಎಲ್ಲರಿಗೂ ತಿಳಿದಿದೆ. 1909ರಲ್ಲಿ ಅಮೆರಿಕದ ನ್ಯೂಯಾರ್ಕ್ ನಲ್ಲಿ ಜರಗಿದ ಮಹಿಳಾ ಸಮಾವೇಶದಲ್ಲಿ ಈ ದಿನಾಚರಣೆಯನ್ನು ಎಲ್ಲೆಡೆ ಆಚರಿಸುವ ಬಗ್ಗೆ ಐತಿಹಾಸಿಕ ನಿರ್ಧಾರವನ್ನು ತಳೆಯಲಾಯಿತು. ಇದರ ಆಶಯ ಅರ್ಥಪೂರ್ಣವಾದದ್ದೇ. ಪುರುಷರಿಗೆ- ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿ ಈ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಬಹುಶಃ ಇದರ ಚಾರಿತ್ರಿಕ ಮಹತ್ವವನ್ನು ಅರಿತ ಯಾರೂ ಕೂಡ ಈ ದಿನದ ಆಚರಣೆಯನ್ನು ವಿರೋಧಿಸಲಾರರು. ಒಂದು ವೇಳೆ ವಿರೋಧಿಸಿದರೆ ಅದು ಮಾನವೀಯತೆಯ ವಿರೋಧವೂ ಆಗುತ್ತದೆ !
ಆದರೆ !
ಮನಸ್ಸು ಬದಲಾಗದೆ ಎಂಥ ಆಚರಣೆ ನಡೆದರೂ ವ್ಯರ್ಥವೇ. ಅಲ್ಲದೆ, ಒಂದು ಚರಿತ್ರೆಯ ಘಟನೆ ಸಾರ್ವಕಾಲಿಕವಾದ ಋಜುತ್ವವನ್ನು ಹೊಂದಿರಬೇಕಾಗಿಲ್ಲ. ನಮ್ಮಲ್ಲಿ ಒಂದು ಸಂಪ್ರದಾಯವನ್ನು ಮೂರ್ಖತನದಿಂದ ಅನುಸರಿಸುವ ಬಗ್ಗೆ ಲಘುವಾಗಿ ಆಕ್ಷೇಪಿಸುವ ಕತೆಯೊಂದಿದೆ. ಇದು ಎಲ್ಲರಿಗೂ ಗೊತ್ತಿದ್ದದ್ದೇ. ಯಾರೋ ಹಿರಿಯರು ಪಿತೃಕಾರ್ಯ ನಡೆಸುವಾಗ ಬೆಕ್ಕು ಕಳ್ಳತನದಿಂದ ಬಂದು ಪಿಂಡವನ್ನು ಭಕ್ಷಿಸುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಕಟ್ಟಿಹಾಕುತ್ತಿದ್ದರಂತೆ. ಅವರ ಮುಂದಿನ ತಲೆಮಾರಿನವರು ಅದನ್ನು ಒಂದು ಸಂಪ್ರದಾಯವಾಗಿ ಅನುಸರಿಸಿದರು. ತಮ್ಮ ಮನೆಯಲ್ಲಿ ಬೆಕ್ಕು ಇಲ್ಲದಿದ್ದರೂ ಬೇರೆಯವರ ಮನೆಯಿಂದ ಒಂದು ಬೆಕ್ಕನ್ನು ತಂದು ಕಟ್ಟಿಹಾಕಲಾರಂಭಿಸಿದರು!
ಪ್ರತ್ಯೇಕವಾಗುವ ಅಪಾಯ
ನಮ್ಮಲ್ಲಿ “ಮೀಸಲಾತಿ’ಯ ಶಾಸನವಿದೆ. ಹಿಂದುಳಿದವರಿಗೆ ಅನುಕೂಲ ಮಾಡಿಕೊಡುವ ಸೌಲಭ್ಯವದು. ಇದರ ಚರಿತ್ರೆ ಸ್ವಾತಂತ್ರೊತ್ತರ ಕಾಲದಿಂದ ಆರಂಭವಾದದ್ದಲ್ಲ, ಬ್ರಿಟಿಶರ ಕಾಲದಲ್ಲಿಯೇ ಇದು ಇತ್ತು. ಭಾರತದಂಥ ದೇಶದಲ್ಲಿ ಕೆಲವರು ಜಾತಿಯ ಕಾರಣಕ್ಕಾಗಿ ವಿದ್ಯಾಭ್ಯಾಸ, ಉದ್ಯೋಗಗಳಂಥ ಅವಕಾಶ ಗಳಿಂದ ವಂಚಿತರಾಗುವುದನ್ನು ತಪ್ಪಿಸಲು ಮಾನವೀಯವಾದ ದೃಷ್ಟಿಕೋನದಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಈಗಲೂ ಈ ಅಸಮಾನತೆಯನ್ನು ಸರಿದೂಗಿಸಲು ಪೂರ್ಣವಾಗಿ ಸಾಧ್ಯವಾಗಿಲ್ಲ. ಹಾಗಾಗಿ, ಮೀಸಲಾತಿಯನ್ನು ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಇದರ ಕುರಿತು ರಚನಾತ್ಮಕವಾದ ವಿಮರ್ಶೆ ಇಲ್ಲಿಯವರೆಗೆ ನಡೆದಿದೆಯೆ? ಮೀಸಲಾತಿಯನ್ನು ಜಾರಿಗೆ ತಂದಾಗ ಚಾರಿತ್ರಿಕ ಸ್ಥಿತಿ ಹೇಗಿತ್ತು? ಸ್ವಾತಂತ್ರೊéàತ್ತರ ಕಾಲಘಟ್ಟದಲ್ಲಿ ಅದನ್ನು ಹೇಗೆ ಅಳವಡಿಸಲಾಯಿತು? ನಿಜವಾಗಿ ಈ ಸೌಲಭ್ಯ ಸಲ್ಲಬೇಕಾದವರಿಗೆ ಸಂದಿದೆಯೆ? ಮೀಸಲಾತಿ ಪಡೆದವರಿಂದ ಸಮಾಜಕ್ಕೆ ಮಹಣ್ತೀದ ಕೊಡುಗೆಗಳು ಸಂದಿವೆಯೆ? ಜ್ಞಾನ ಮತ್ತು ಕೌಶಲದ ವೃದ್ಧಿ ಆಗಿದೆಯೆ? ಆಗಿಲ್ಲವೆಂದಾದಲ್ಲಿ ಅದನ್ನು ಉತ್ತೇಜಿಸಲು ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು?
ನಮ್ಮಲ್ಲಿ ಪರ ಮತ್ತು ವಿರೋಧ ಎಂಬ ಎರಡು ಸರಳೀಕೃತವಾದ ಮತ್ತು ಭಾವನಾತ್ಮಕವಾದ ನಿಲುವುಗಳನ್ನಷ್ಟೇ ಹೊಂದಬೇಕಾದ ಅನಿವಾರ್ಯತೆಯನ್ನು ಸಮಾಜ ಸೃಷ್ಟಿಸಿದೆ. “ನೀನು ದೇವರನ್ನು ನಂಬುತ್ತೀಯೊ ಇಲ್ಲವೊ?’, “ನೀನು ಕಾಂಗ್ರೆಸೊÕ, ಬಿಜೆಪಿಯೊ?’, “ನೀನು ಮೀಸಲಾತಿಯ ಪರವೊ ವಿರೋಧಿಯೊ’, “ನೀನು ಮಹಿಳಾಪರವೋ ವಿರೋಧಿಯೊ’- ಇಂಥ ಪ್ರಶ್ನೆಗಳಿಗೆ ನೀವು ತಟಕ್ಕನೆ ಉತ್ತರ ಹೇಳಲೇಬೇಕು. ಆ… ಊ… ಅಂತ ತಡಕಾಡಿದರೆ ನಿಮ್ಮನ್ನು ಪ್ರಶ್ನೆ ಕೇಳದವರು ಅವರಿಗೆ ಬೇಕಾದ ಗುಂಪಿನಲ್ಲಿ ಸೇರಿಸಿಬಿಡುತ್ತಾರೆ. “ನೀನು ದೇವಾಲಯಕ್ಕೆ ಹೋಗುತ್ತಿಯೊ ಇಲ್ಲವೊ’ ಎಂಬ ಪ್ರಶ್ನೆಯನ್ನು ಯಾವ ಧರ್ಮದ ಮಂದಿಗೂ ಕೇಳಬಹುದು. ಒಂದೋ ಅವರು “ಹೌದು’ ಎನ್ನಬೇಕು ಅಥವಾ “ಇಲ್ಲ’ ಎನ್ನಬೇಕು. ಉತ್ತರಿಸಲು ತಡಕಾಡಿದರೆ ಸಂಪ್ರದಾಯವಾದಿಗಳು ನಿಮ್ಮನ್ನು ತತ್‌ಕ್ಷಣ ಸಂಪ್ರದಾಯ ವಿರೋಧಿ ಗುಂಪಿಗೆ ಸೇರಿಸುತ್ತಾರೆ. “ಧ್ಯಾನಮಾರ್ಗದ ಭಕ್ತಿಯೊಂದು ಎಲ್ಲ ಧರ್ಮಗಳಲ್ಲಿಯೂ ಇದೆ, ಅದರ ಮೂಲಕವೇ ನಾನು ನನ್ನ ದೇವರನ್ನು ಕಾಣುತ್ತೇನೆ’ ಎಂದು ವಿವರಿಸಿ ಹೇಳಲು ನೀವು ಬಯಸಿದರೆ, ಅದನ್ನು ಕೇಳುವ ತಾಳ್ಮೆ ಯಾರಿಗೂ ಇಲ್ಲ ! “ನಾನು ದೇವಾಲಯಕ್ಕೆ ಹೋಗುತ್ತೇನೆ, ಅಲ್ಲಿ ನನ್ನ ಮನಸ್ಸಿಗೆ ಶಾಂತಿ ಸಿಗುತ್ತದೆ’ ಎಂದೇನಾದರೂ ಹೇಳಿಬಿಟ್ಟರೆ ವಿಚಾರವಾದಿಗಳೆನಿಸಿಕೊಂಡವರು ನಿಮಗೆ “ಸಂಪ್ರದಾಯವಾದಿ’ ಎಂಬ ಹಣೆಪಟ್ಟಿಯನ್ನು ಕಟ್ಟಿಬಿಡುತ್ತಾರೆ.
ಹಾಗಿದ್ದರೆ, “ನೀನು ಮಹಿಳಾ ದಿನಾಚರಣೆಯ ಪರವೊ ವಿರೋಧವೊ’ ಎಂಬ ಪ್ರಶ್ನೆಯೊಂದು ಎದುರಾದರೆ ಉತ್ತರಿಸುವುದಾದರೂ ಹೇಗೆ? ಸೂಕ್ಷ್ಮವಾಗಿ ನೋಡಿದರೆ, ಮಹಿಳೆಯರಿಗೆಂದೇ ದಿನವೊಂದನ್ನು ಮೀಸಲಾಗಿರಿಸಿ ಆ ಮೂಲಕ ಅವರನ್ನು “ಪ್ರತ್ಯೇಕವಾಗಿ’ ಇಡುವಂಥ ಸಾಮಾಜಿಕ ಮನೋಸ್ಥಿತಿಯೊಂದು ಮುಂದಿನ ದಿನಗಳಲ್ಲಿ ಬೆಳೆದರೆ ಅದಕ್ಕೆ ಏನೆನ್ನಬೇಕು? “ಬಸ್ಸಿನಲ್ಲಿ ಮೊದಲಿನ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲು’ ಎಂಬ ಫಲಕವನ್ನು ಓದಿರುತ್ತೀರಿ, ಆ ನಿಯಮದ ಪಾಲನೆಯನ್ನೂ ಮಾಡಿರುತ್ತೀರಿ. ಇದರಿಂದ, ಉಳಿದ ಸೀಟುಗಳಲ್ಲಿ ಮಹಿಳೆಯರು ಕುಳಿತರೆ, “ನೀವೇಕೆ ಇಲ್ಲಿ ಕುಳಿತಿದ್ದೀರಿ, ನಿಮಗೆ ಅಲ್ಲಿ ಪ್ರತ್ಯೇಕ ಸೀಟುಗಳಿವೆ’ ಎಂದು ಆಕ್ಷೇಪಿಸುವಂಥ ಸ್ಥಿತಿಯನ್ನು ನಾವೇ ತಂದುಕೊಂಡ ಹಾಗೆ ಆಗಲಿಲ್ಲವೆ? ಮಹಿಳಾ ಮೀಸಲಾತಿ ಬೇಡವೆಂದಲ್ಲ. ಆದರೆ, ಪುರುಷರನ್ನೂ ಮಹಿಳೆಯರನ್ನೂ ಸಮಾನವಾಗಿ ಕಾಣುವಂಥ ಮನೋಭೂಮಿಕೆಯನ್ನು ಸಮಾಜದಲ್ಲಿ ಉಂಟುಮಾಡದೇ ಹೋದರೆ ಅಂಥ ಆಚರಣೆಗಳು, ಸಂಪ್ರದಾಯಗಳು ಮನಸ್ಸುಗಳ ನಡುವಿನ ಕಂದಕವನ್ನು ಅಧಿಕಗೊಳಿಸುತ್ತ ಹೋಗುತ್ತವೆ.
ಒಂದೆಡೆ “ಪ್ಯಾನೆಲ್ ಡಿಸ್ಕಶನ್’ ನಡೆಯುತ್ತಿತ್ತು. ಒಂದು ಸಾಲಿನಲ್ಲಿ ಮಹಿಳೆಯರು, ಮತ್ತೂಂದು ಸಾಲಿನಲ್ಲಿ ಪುರುಷರು. ಒಬ್ಟಾಕೆ ಮಾತ್ರ ಈ ಎರಡು ಸಾಲುಗಳನ್ನು ಪ್ರತ್ಯೇಕವಾಗಿರಿಸಿದ್ದಕ್ಕೆ ಆಕ್ಷೇಪ ಎತ್ತಿದಳು. ಎರಡೂ ವರ್ಗದವರು ಸಭೆಯಲ್ಲಿ ಬೆರೆತು ಕುಳಿತುಕೊಳ್ಳುವ ಅವಕಾಶ ನೀಡಬೇಕೆಂದು ಕೋರಿದಳು. ಅವಳ ಕೋರಿಕೆಯನ್ನು ಪುರುಷರು ಹಾಸ್ಯಾಸ್ಪದವೆಂದು ಭಾವಿಸಿದರು. ಮಹಿಳೆಯರೂ ಕೂಡ ಪುರಸ್ಕರಿಸಲಿಲ್ಲ.
ಈಗ ಹೆಣ್ಣು ಉದ್ಯೋಗಕ್ಕೆ ಹೋಗುತ್ತಿದ್ದಾಳೆ, ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾಳೆ. ಆದರೆ, ಉದ್ಯೋಗಿಗಳಾದ ಮಹಿಳೆಯರ ಮೇಲೆ “ಡಬ್ಬಲ್ ಲೋಡ್’ ಬಿದ್ದಿದೆ. ಒಂದು, ಮನೆಗೆಲಸವನ್ನು ನಿರ್ವಹಿಸಬೇಕು- ಮಕ್ಕಳನ್ನು ಲಾಲಿಸಬೇಕು; ಎರಡು, ಕಚೇರಿಗೆ ಹೋಗಿ ಅಲ್ಲಿಯೂ ದುಡಿಯಬೇಕು. ಸಂಜೆ ಮನೆಗೆ ಬಂದು ಪಾತ್ರೆ ತೊಳೆಯುವಲ್ಲಿ ತಲ್ಲೀನಳಾದ ಹೆಂಡತಿಗೆ ಸಹಾಯ ಮಾಡಬೇಕಾದ ಗಂಡ ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಿರುತ್ತಾನೆ. ಪುರುಷ ಬದಲಾಗಿಲ್ಲ, ಮತ್ತು ಹೊಂದಿಕೊಂಡಿಲ್ಲ. ಬದಲಾಗಬೇಕಾದದ್ದು ಮತ್ತು ಹೊಂದಿಕೊಳ್ಳಬೇಕಾದದ್ದು ಮಹಿಳೆಯೇ!
ಹಾಗಾಗಿ, ಮೀಸಲಾತಿಯ ಸೌಲಭ್ಯಗಳು, ದಿನಾಚರಣೆಗಳು ಕೂಡ, “ನಿನಗೆ ಸೌಲಭ್ಯ ಕೊಟ್ಟಿದ್ದೇವೆ ನೋಡಮ್ಮ, ಹಾಗಾಗಿ, ಸ್ವಲ್ಪ ಹೊಂದಿಕೊಳ್ಳಬೇಕಮ್ಮ’ ಎಂದು ಪರ್ಯಾಯವಾಗಿ ಹೇಳುತ್ತಿರು ತ್ತವೆ. ಅವರ ಆಸ್ಮಿತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸುವ ಕೆಲಸವನ್ನೇ ಇವು ಮಾಡುತ್ತವೆ.
ಅವಳು ಕೌಟುಂಬಿಕ ಆವರಣದೊಂದಿಗೆ ಹೊರಬಂದು ಸಾಮಾಜಿಕ ಪರಿವೇಷದೊಳಗೆ ಹೊಂದಿಕೊಳ್ಳಬೇಕಾದರೆ ಸಾಕಷ್ಟು ಪ್ರಯತ್ನ ಮಾಡಬೇಕು; ಚೆಂದದ ಸೀರೆ ಉಡಬೇಕು, ಲಿಪ್‌ಸ್ಟಿಕ್ ಹಚ್ಚಬೇಕು, ಹೈಹೀಲ್ಡ್ ಚಪ್ಪಲ್ ಧರಿಸಬೇಕು… ಇತ್ಯಾದಿ. ಮಹಿಳಾ ದಿನಾಚರಣೆ ಇಂಥ “ಹೊಂದಾಣಿಕೆ’ಗಳನ್ನೇ ಉತ್ತೇಜಿಸುತ್ತಿದೆಯೇ ಎಂಬ ಅನುಮಾನ ಸಣ್ಣದಾಗಿ ಕಾಡಲಾರಂಭಿಸಿದೆ. “ಮಹಿಳೆಯರು ಕೂಡಾ ಕುಡಿಯಲಾರಂಭಿಸಿದ್ದಾರೆ’ ಎಂದು ಎಲ್ಲರೂ ಹುಬ್ಬೇರಿಸುತ್ತಾರೆ. “ಕುಡಿಯುವುದು’ ತಪ್ಪೇ. ಯಾರು ತಪ್ಪಲ್ಲವೆಂದು ಹೇಳಿದರು? ಆದರೆ, ಮಹಿಳೆ ಕುಡಿದಾಗ ತಪ್ಪು ಅನ್ನಿಸತೊಡಗಿದ್ದು ಪುರುಷರು ಕುಡಿದಾಗ ಯಾಕೆ “ಕ್ರೇಜ್’ ಅನ್ನಿಸಬೇಕು? ಕುಡಿಯುವುದರಿಂದ ಗರ್ಭಕೋಶಕ್ಕೆ ಹಾನಿಯಾಗಿ ಭವಿಷ್ಯದಲ್ಲಿ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ ಎಂಬುದು ಆಕ್ಷೇಪಿಸುವುದು ಮುಖ್ಯ ಕಾರಣವಾದರೆ ಅದೇ ಆಕ್ಷೇಪ ಪುರುಷನಿಗೂ ಆನ್ವಯವಾಗಬೇಕಲ್ಲ! ಮಗುವಾಗುವುದು ಅವಳೊಬ್ಬಳದೇ ಇಚ್ಛೆಯಲ್ಲವಷ್ಟೆ !
ತೆರೆದ ಬಯಲಲ್ಲಿ ಮೂತ್ರ ಮಾಡುವುದು ಸರಿಯಲ್ಲ, ಈಗಂತೂ ದೇಶದಲ್ಲಿ ಸ್ವತ್ಛತಾ ಆಂದೋಲನ ನಡೆಯುತ್ತಿ ರುವುದರಿಂದ ಇದು ತಪ್ಪು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಸ್ತೆಬದಿಯಲ್ಲಿ ಬಸ್ಸು ನಿಲ್ಲಿಸಿದಾಗ ಅದರಿಂದ ಇಳಿದು ಬರುವವರು ಗಂಡಸರೆಷ್ಟು , ಹೆಂಗಸರೆಷ್ಟು ಎಂಬುದನ್ನು ಒಮ್ಮೆ ಗಮನಿಸಿ. ಬಹುತೇಕಮಂದಿ ಗಂಡಸರು. ಮಹಿಳೆಯರಿದ್ದರೂ ಹಿರಿಹರೆಯದವರು ಮಾತ್ರ. ಪ್ರಯಾಣವೆಂದರೆ ಮಹಿಳೆಗೆ ಒಂದು ರೀತಿಯ ಸಂಕಟ. ಅವಳು ಆ ದಿನವಿಡೀ ನೀರು ಕುಡಿಯದೇ “ವ್ರತಪಾಲನೆ’ ಮಾಡಬೇಕು. ಒಂದು ಗುಟುಕು ನೀರು ಕುಡಿದರೂ ಮೂತ್ರಗೀತ್ರ ಬಂದು, ದಾರಿಯಲ್ಲಿ ಟಾಯ್ಲೆಟ್ ಸಿಗದೆ, ಸಿಕ್ಕಿದರೂ ಬಸ್ಸು ನಿಲ್ಲಿಸದಿದ್ದರೆ, ಬಸ್ಸು ನಿಲ್ಲಿಸಿ ದರೂ ಎಚ್ಚರವಾಗದಿದ್ದರೆ, ಎಚ್ಚರವಾಗಿ ಟಾಯ್ಲೆಟ್‌ಗೆ ಹೋದರೂ ಅದು ಕ್ಲೀನ್ ಇರದೆ ಮೂತ್ರ ಬಂದರೂ ಬಾರದಂತಾದರೆ… ಹೀಗೆ ಯೋಚನೆಗಳ ನಡುವೆ ಬಳಲಬೇಕಾಗುತ್ತದೆ. ಬಸ್ಸಿಳಿದು ಮೂತ್ರ ಮಾಡಲೆಂದು ಹೆಣ್ಣೊಬ್ಬಳು ನಡೆದು ಹೋಗುತ್ತಿದ್ದರೆ ಜನರೆಲ್ಲ ವಿಚಿತ್ರವಾಗಿ ಅವಳನ್ನೇ ನೋಡುತ್ತಿರುತ್ತಾರೆ. ಇದೊಂದು ಮನೋಸ್ಥಿತಿ. ಇದರಲ್ಲಿ ಬದಲಾವಣೆಯಾಗಿಲ್ಲ. ನಮ್ಮ ದಿನಾಚರಣೆಗಳು ಇದನ್ನು ಬದಲಾಯಿಸಲು ಸಮರ್ಥವಾಗದಿದ್ದರೆ ಯಾವ ಸಾರ್ಥಕತೆಯೂ ಇಲ್ಲ.
ಪುರುಷ-ಮಹಿಳೆಯರನ್ನು ಅಸಮಾನವಾಗಿ ಕಾಣುವುದು ಒಂದು ಸಾಮಾಜಿಕವಾದ “ಮನೋಸ್ಥಿತಿ’. ಶೀಲದ ಸಮಸ್ಯೆ ಮಹಿಳೆಯರಿಗಿರುವಷ್ಟು ಪುರುಷರಿಗಿಲ್ಲ. “ದುಶ್ಶೀಲೆ’ ಎಂದು ತೆಗಳುವುದು ಮಹಿಳೆಯರನ್ನೇ ಅಧಿಕ. ಪುರುಷನನ್ನು ಬೈಯುವಾಗಲೂ “ಇಂಥವಳ ಮಗ’ ಎಂದು ಆತನ ತಾಯಿಯ “ಶೀಲ’ವನ್ನು ಶಂಕಿಸುವ ಪದವನ್ನು ಬಳಸಲಾಗುತ್ತದೆ. ಇಂಥ ಶೀಲ ಶಂಕೆಯ ಮನೋಸ್ಥಿತಿ ನಿಸ್ತಂತುವಿನಂತೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತಿದೆ. ಇಂಥ ಮನೋಸ್ಥಿತಿಯನ್ನು ಪ್ರೇರೇಪಿಸುವ ಮೂಲ ಸಂಗತಿಗಳಾವುದು ಎಂಬ ಬಗ್ಗೆ ನಮ್ಮ ವೈಜ್ಞಾನಿಕ ನೆಲೆಯ ಚರ್ಚೆಗಳು ನಡೆದಿಲ್ಲ.
ಪುರುಷ-ಮಹಿಳೆ, ಅವರಿಬ್ಬರ ಜೈವಿಕ ಸ್ಥಿತಿ, ಲೈಂಗಿಕವಾದ ರಚನೆ- ಇತ್ಯಾದಿಗಳನ್ನು ನೋಡಿದಾಗ ಮಹಿಳೆಯರಲ್ಲಿರುವ ಯಾವುದೋ ಅಧಿಕ ಸಾಮರ್ಥ್ಯದ ಕುರಿತ ಮಾತ್ಸರ್ಯವೇ ಪುರುಷನನ್ನು ಡಾಮಿನೇಟ್ ಪ್ರವೃತ್ತಿ ಯವನನ್ನಾಗಿ ರೂಪಿಸಿರಬಹುದೆ ಎಂಬ ಪ್ರಶ್ನೆಯೊಂದು ಕಾಡುತ್ತದೆ. ಬೆಳಿಗ್ಗೆ ಬೇಗನೆ ಎದ್ದು, ಅಡುಗೆ ಮಾಡಿ, ಮಕ್ಕಳನ್ನು ಎಬ್ಬಿಸಿ, ಶಾಲೆಗೆ ಹೊರಡಿಸಿ, ಬಸ್ಸು ಹತ್ತಿ ಕಚೇರಿಗೆ ಬಂದು, ಬಾಸ್ ಹೇಳಿದಂತೆ ದುಡಿದು, ಸಂಜೆ ಹೊರಡುವಾಗ ಮನೆಗೆ ಬೇಕಾದ ವಸ್ತುಗಳನ್ನು ಒಯ್ದು, ಗಂಡನಿಗೂ-ಮಕ್ಕಳಿಗೂ ಚಹಾ-ತಿಂಡಿ ಕೊಟ್ಟು , ರಾತ್ರಿಯ ಅಡುಗೆ ತಯಾರಿ ಮಾಡಿ, ರಾತ್ರಿ ಎಲ್ಲರಿಗೂ ಬಡಿಸಿ, ಪಾತ್ರೆ ತೊಳೆದು, ಹಾಸುಗೆಯಲ್ಲಿ ಕಾಲಚಾಚಿ, ಸಂಗಾತಿಯ ಕಾತರಕ್ಕೂ ಸ್ಪಂದಿಸಿ, ಮರುದಿನ ಬೆಳಿಗ್ಗೆ ಬೇಗನೆ ಎದ್ದು… ಹೀಗೆ ಅವಳ ದಿನಚರಿ ವೃತ್ತಾಕಾರವಾಗಿ ಚಲಿಸುತ್ತಿರುತ್ತದೆ. ಇದು ಪುರುಷನಿಗಿಂತ ಅಧಿಕ ಸಾಮರ್ಥ್ಯವಲ್ಲದೆ ಇನ್ನೇನು?
ಒಟ್ಟಾರೆಯಾಗಿ ಪುರುಷ-ಮಹಿಳೆಯರ ಸಮಾನತೆಯನ್ನು ಪ್ರತಿಪಾದಿಸುವಲ್ಲಿ ಪ್ರವೃತ್ತರಾಗಬೇಕೇ ವಿನಾ ಪ್ರತ್ಯೇಕವನ್ನು ಸಾಧಿಸುವ ಪ್ರಯತ್ನಗಳನ್ನು ಬೆಂಬಲಿಸಬಾರದು. ಮಹಿಳಾ ದಿನಾಚರಣೆಯ ಆಶಯ ಸರಿಯಾದದ್ದೇ. ಆದರೆ ಅದು ಮತ್ತೆ ಮಹಿಳೆಯರ ಸೌಂದರ್ಯವನ್ನು, ಕೋಮಲತೆಯನ್ನು ಆರಾಧಿಸುವ ದಿನವಾದರೆ ಅದಕ್ಕೆ ಏನೇನ್ನಬೇಕು?
“ಪುರುಷರಲ್ಲಿ ಗಾಂಭೀರ್ಯ ಸಹಜವಾದ ಗುಣ, ಪುರುಷ ಪುರುಷನ ಹಾಗೆಯೇ ಇರಬೇಕು’ ಎಂದು ಸ್ತ್ರೀವಾದಿ ಮಹಿಳೆಯೊಬ್ಬರು ಪರವಶರಾಗಿ ಅಭಿಮಾನದಿಂದ ಮಾತನಾಡು ವುದನ್ನು ಕೇಳಿದ್ದೇನೆ. ಅಷ್ಟೇ ಅಲ್ಲದೆ, ತಮ್ಮ ಹೆಸರಿನ ಜೊತೆಗೆ ಗಂಡನ ಹೆಸರನ್ನು ಅಭಿಮಾನದಿಂದ ಜೋಡಿಸಿಕೊಂಡಿದ್ದರು. ಹೊರಗೆ ದಿಟ್ಟತನದಿಂದ ವ್ಯವಹರಿಸುವ ಮಹಿಳೆಯರು ಕೂಡಾ ತನ್ನ ಗಂಡಂದಿರ ಮುಂದೆ ಬಾಗಿ ನಿಲ್ಲಲು ಇಷ್ಟಪಡುತ್ತಾರೆ, ತಮ್ಮ ಗಂಡ ಗಡಸು ಕಂಠದಿಂದ ತಮ್ಮನ್ನು ಗದರುವುದನ್ನು ಬಯಸುತ್ತಾರೆ. ಇಂಥವರು ಮುಂದಿನ ವರ್ಷಗಳಲ್ಲಿ ಮಾರ್ಚ್ 8ನ್ನು ಸಂಭ್ರಮಿಸಲು ಬಂಗಾರದ ಬಳೆ ಖರೀದಿಸಲು ಜ್ಯುವೆಲ್ಲರಿ ಅಂಗಡಿಗೆ ಹೋಗಲಾರರು ಎಂದು ಹೇಳುವುದು ಹೇಗೆ?
“ಪ್ರತ್ಯೇಕ’ವಾದ ಸೌಲಭ್ಯ ಬೇಕು ಎಂದು ವಾದಿಸುವುದು ಒಂದು ಹಂತದವರೆಗೆ ಸರಿ, ಆದರೆ, ಮುಂದೆ ಅದು ಪ್ರತ್ಯೇಕ ತಾವಾದವನ್ನೇ ಪ್ರತಿಪಾದಿಸುವ ಅಪಾಯವಿದೆ. ಮಹಿಳೆ, ಎಲ್ಲರೊಂದಿಗೆ ಸಮಾನವಾಗಿ ಬೆರೆಯುವಂಥ ಮನೋಸ್ಥಿತಿಯನ್ನು ಸಮಾಜದಲ್ಲಿ ಪ್ರೇರೇಪಿಸಬೇಕೇ ಹೊರತು ಅವಳಿಗಾಗಿ- ಪ್ರತ್ಯೇಕ ಸೀಟು, ಪ್ರತ್ಯೇಕ ಕೋಣೆ, ಪ್ರತ್ಯೇಕ ರೈಲು ಬೋಗಿ, ಪ್ರತ್ಯೇಕ ದಿನಗಳನ್ನು- ನೀಡುವುದರಿಂದ ಸಮಾನತೆಯನ್ನು ಸಾಧಿಸುವ ದಿನಗಳು ದೂರವೇ ಉಳಿಯುತ್ತವೆ.
ಚಾರುಲತಾ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.