ಅರ್ಥ ಮತ್ತು ಆವರ್ತನೆ
Team Udayavani, Mar 26, 2017, 3:50 AM IST
ಈಚೆಗಷ್ಟೇ ಶಾಲೆಗೆ ಹೋಗಲು ಸುರುಮಾಡಿದ ನನ್ನ ಪುಟ್ಟ ಮೊಮ್ಮಗನೊಬ್ಬನಿಗೆ ಒಂದು ಸಮಸ್ಯೆ ಎದುರಾಯಿತು. ಅವನು “ಜನಗಣ ಮನ’ ಹೇಳಲು ಸುರುಮಾಡಿದರೆ ಅದು ಮುಗಿಯುತ್ತಲೇ ಇರಲಿಲ್ಲ! ಅರೇ, ಇದು ಯಾಕೆ ಮುಗಿಯುತ್ತಿಲ್ಲ, ಮುಗಿಯಬೇಕಲ್ಲ ಎನ್ನುವುದು ಸಮಸ್ಯೆ. ಏನಾಗುತ್ತಿತ್ತೆಂದರೆ, “ಜನಗಣ’ ಎಂಬ ಪದ ಹಾಡಿನ ಕೊನೆಯಲ್ಲಿ ಬಂದಾಗ ಅವನು ಮತ್ತೆ “ಜನಗಣ ಮನ’ಕ್ಕೆ ಹೋಗುತ್ತಿದ್ದ, ಎಂದರೆ ಹಾಡಿನ ಮೊದಲ ಸಾಲಿಗೆ. ಅದನ್ನು “ಜನಗಣ ಮಂಗಲದಾಯಕ’ ಎಂದು ಮುಂದುವರಿಸಿದರೆ ತಾನೆ ಅದು ಕೊನೆಗೊಳ್ಳುವುದು? “ಜನಗಣ’ ಹೀಗೆ ಮತ್ತೂಮ್ಮೆ ಬರುವುದು ಒಂದು ತಪ್ಪು ಸೂಚನೆಯಂತೆ ಕೆಲಸ ಮಾಡುತ್ತಿತ್ತು; ಅಲ್ಲದೆ “ಮನ’ ಮತ್ತು “ಮಂಗಲ’ ಎರಡೂ “ಮ’ಕಾರದಿಂದ ಆರಂಭವಾಗುವುದು ಈ ತಪ್ಪು ಸೂಚನೆಗೆ ಒತ್ತಾಸೆ ನೀಡುತ್ತಿದ್ದವು. ಮೊದಲ ಮತ್ತು ಕೊನೆಯ ಸಾಲುಗಳಲ್ಲಿರುವ ಹೋಲಿಕೆ ನೋಡಿದರೆ ನಿಮಗೇ ಗೊತ್ತಾಗುತ್ತದೆ:
ಜನಗಣ ಮನ ಅಧಿನಾಯಕ….
ಜನಗಣ ಮಂಗಲದಾಯಕ….
ಹೀಗೆ “ಜನಗಣ ಮಂಗಲ’ದ ಬದಲು “ಜನಗಣ ಮನ’ ಅಂದಾಗ ಈ ಹಾಡು ಎಂದೂ ಕೊನೆಗೊಳ್ಳುವುದಿಲ್ಲ! ಭಾರತದ ರಾಷ್ಟ್ರಗೀತೆಯನ್ನು ಹಾಡುವಾಗಿನ ನನ್ನ ಮೊಮ್ಮಗನ ಈ ಗೊಂದಲವನ್ನು ಬಹುಶಃ ಎಲ್ಲರೂ ಒಂದಲ್ಲ ಒಂದು ಸಲ ಅನುಭವಿಸಿರುತ್ತಾರೆ. ನನ್ನದೇ ಚಿಕ್ಕಂದಿನಲ್ಲಿ ನನ್ನ ಅಮ್ಮ ನನಗೆ ಶ್ರೀಕೃಷ್ಣಾಷ್ಟೋತ್ತರವನ್ನು ಬಾಯಿಪಾಠ ಮಾಡಿಸಿದ್ದಳು; ಅದನ್ನು ನಾನು ಪ್ರತಿದಿನ ಸಂಜೆ “ಕೈಕಾಲು ಮೋರೆ’ ತೊಳೆದು ಬಂದು ಹೇಳಬೇಕಿತ್ತು; ಆಗ ಕೆಲವೊಮ್ಮೆ (ಎಲ್ಲಿ ಎಂದು ಈಗ ನೆನಪಿಲ್ಲ) ಎಡವಟ್ಟಾಗುತ್ತಿತ್ತು. ಅದೇ ರೀತಿ ನಾನು ಪ್ರಭವ, ವಿಭವ ಮುಂತಾದ ಅರವತ್ತು ಸಂವತ್ಸರಗಳ ಹೆಸರುಗಳನ್ನೂ ಕ್ರಮಪ್ರಕಾರವಾಗಿ ಕಲಿತಿದ್ದೆ ; ಅವನ್ನು ಹೇಳುವಲ್ಲೂ ಇಂಥದೇ ಸಮಸ್ಯೆ ಕೆಲವು ಸಲ ಎದುರಾಗುತ್ತಿತ್ತು.
ಈ ತರದ ಕೊನೆಗೊಳ್ಳದ ಆವರ್ತನೆ ನಾಯಿ ತನ್ನ ಬಾಲದ ಸುತ್ತ ಗಿರಕಿ ಹೊಡೆದ ಹಾಗೆ! ಇದನ್ನು ಹೇಗೆ ಮುಗಿಸುವುದೆಂದೇ ಗೊತ್ತಾಗದಿರುವುದು. ಈ ತರದ ಗಿರಕಿಯನ್ನು ಇಲ್ಲದೆ ಮಾಡುವುದು ಬಹಳ ಮುಖ್ಯ. ನನ್ನ ಯಾವುದೋ ಒಂದು ಕತೆಯಲ್ಲಿ ಒಬ್ಬ ಮನುಷ್ಯ ಹೀಗೆ ದಾರಿ ತಪ್ಪಿ ಊರಿನಿಂದ ಹೊರ ಬರುವುದು ಹೇಗೆಂದು ತಿಳಿಯದೆ ಕಷ್ಟಪಡುತ್ತಾನೆ. ಕಂಪ್ಯೂಟರ್ ಪರಭಾಷೆಯಲ್ಲಿ ಇದಕ್ಕೆ “ಅನಂತ ಸುರುಳಿ’ (infinite loop) ಎಂದು ಕರೆಯುತ್ತಾರೆ. ಪ್ರೋಗ್ರಾಮಿಂಗ್‌ನಲ್ಲಿ ಪ್ರತಿಯೊಂದನ್ನೂ ಹೆಜ್ಜೆ ಹೆಜ್ಜೆಯಾಗಿ ಬರೆಯಬೇಕು ತಾನೆ? ಮೊದಲು ಇದನ್ನು ಮಾಡು, ನಂತರ ಅದನ್ನು ಮಾಡು ಎಂದು ಮುಂತಾಗಿ. ಈಗ ಈ ಕೆಳಗಿನ ರೀತಿಯ ಸೂಚನೆಯಿದೆ ಎಂದಿಟ್ಟುಕೊಳ್ಳೋಣ:
If A, then B
If B, then A
ಇದೊಂದು ಅಬ್ಸರ್ಡ್ (ಅಸಂಗತ) ಪ್ರೋಗ್ರಾಮ್ ಆಗುತ್ತದೆ, ಯಾಕೆಂದರೆ, ಇದನ್ನು ಅನುಸರಿಸಿದರೆ ಕ್ರಿಯೆ ಎಂದೆಂದೂ ಮುಗಿಯುವುದಿಲ್ಲ. ಪ್ರೋಗ್ರಾಮ್ ಯಶಸ್ವಿಯಾಗಬೇಕಿದ್ದರೆ ಅದಕ್ಕೆ ಸರಿಯಾದ ಕೊನೆ ಬೇಕಾಗುತ್ತದೆ, ಇಲ್ಲದಿದ್ದರೆ ಅದಕ್ಕೆ ಅರ್ಥವಿಲ್ಲ. ಇದನ್ನು ಟರ್ಮಿನೇಶನ್ ಎನ್ನುತ್ತೇವೆ. ಟರ್ಮಿನೇಶನ್ ಇಲ್ಲದ ಪ್ರೋಗ್ರಾಮು ಒಡಕು ಗ್ರಾಮಫೋನಿನಂತೆ ಹೇಳಿದ್ದನ್ನೇ ಹೇಳುತ್ತ ಇರುತ್ತದೆ.
ಐರಿಶ್ ಲೇಖಕ ಸಾಮ್ಯುವೆಲ್ ಬೆಕೆಟ್ ((Samuel Becket) ಬರೆದ Waiting for Godot ನಾಟಕದಲ್ಲಿ ಅಂಥಾದ್ದೊಂದು ಪದ್ಯವಿದೆ. ಎರಡನೆಯ ಅಂಕದಲ್ಲಿ ವ್ಲಾಡಿಮರ್ ಹಾಡುವ ಪದ್ಯ ಇದು:
A dog came in the kitchen
And stole a crust of bread.
And then cook up with a laddle
And beat him till he was dead.
Then all the dogs came running
And dug the dog a tomb-
Then all the dogs came running
And dug the dog a tomb
And wrote upon the tombstone
For the eyes of dogs to come:
A dog came in the kitchen
And stole a crust of bread.
Then up the cook with a laddle
And beat him till he was dead.
Then all the dogs came running
And dug the dog a tomb-
(ನಾಯಿಯೊಂದು ಅಡುಗೆಮನೆಯೊಳಕ್ಕೆ ಬಂತು. ಅಡುಗೆಯವನು ಅದರ ತಲೆಗೆ ಸೌಟಿನಿಂದ ಬಡಿದು ಕೊಂದ. ಉಳಿದ ಎಲ್ಲಾ ನಾಯಿಗಳೂ ಓಡಿ ಬಂದು ಅದನ್ನು ಸಮಾಧಿ ಮಾಡಿದವು ಮತ್ತು ಸಮಾಯ ಮೇಲೆ ಹೀಗೆ ಬರೆದವು: “ನಾಯಿಯೊಂದು’ ಅಡಿಗೆಮನೆಯೊಳಕ್ಕೆ ಬಂತು. ಅಡಿಗೆಯವನು ಅದರ ತಲೆಗೆ ಸೌಟಿನಿಂದ ಬಡಿದು ಕೊಂದ. ಉಳಿದ ಎಲ್ಲಾ ನಾಯಿಗಳೂ ಓಡಿ ಬಂದು ಅದನ್ನು ಸಮಾಧಿ ಮಾಡಿದವು. ಮತ್ತು ಸಮಾಯ ಮೇಲೆ ಹೀಗೆ ಬರೆದವು: “ನಾಯಿಯೊಂದು’… ಇದೊಂದು ಕತೆಯೊಳಗಿನ ಕತೆಯಂತೆ ಹೀಗೆ ಮುಂದುವರಿಯುತ್ತದೆ ಎಂದು ಲೆಕ್ಕ. ಇದೊಂದು ಅಬ್ಸರ್ಡಿಟಿ. ನಾಯಿಗಳ ಕುರಿತಾಗಿ ಎಂದು ಅನಿಸಿದರೂ ಮನುಷ್ಯಜೀವನದ “ನಿರರ್ಥಕತೆ’ಯ ಸಂಕೇತ)
ಇನ್ನೊಂದು ರೀತಿಯ ಮರುಕಳಿಕೆಯನ್ನು ಈ ನಾಟಕದ ರಚನೆಯಲ್ಲಿ ನೋಡಬಹುದು. “ಎರಡಂಕಗಳ ಈ ದುರಂತ ಪ್ರಹಸನ’ದಲ್ಲಿ ಎರಡನೆಯ ಅಂಕ, ಕೆಲವೊಂದು ವ್ಯತ್ಯಾಸಗಳೊಂದಿಗೆ, ಮೊದಲನೆಯ ಅಂಕದ ಮರುಕಳಿಕೆಯೇ ಆಗಿದೆ. ಮೊದಲನೆಯ ಅಂಕದಲ್ಲಿ ವ್ಲಾಡಿಮರ್ (ದೀದಿ) ಮತ್ತು ಎಸ್ಟ್ರಗನ್ (ಗೋಗೋ) ಎಂಬ ಇಬ್ಬರು ಅಲೆಮಾರಿಗಳು ಗೋಡೋ ಎಂಬ ವ್ಯಕ್ತಿಗಾಗಿ ಕಾಯುತ್ತಿರುತ್ತಾರೆ. ಗೋಡೋ ಯಾರು, ಅವನಿಗೋಸ್ಕರ ಯಾಕೆ ಕಾಯಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ. ಸಮಯ ಕಳೆಯಲು ಅವರು ಏನೇನೋ ಮಾತನಾಡುತ್ತ, ಚೇಷ್ಟೆಗಳನ್ನು ಮಾಡುತ್ತ ಇರುತ್ತಾರೆ. ಕೊನೆಗೆ ಒಬ್ಬ ಹುಡುಗ ಬಂದು ಅವರಿಗೆ ಅನ್ನುತ್ತಾನೆ: ಗೋಡೋ ನಿಮಗೆ ತಿಳಿಸುವುದಕ್ಕೆ ಹೇಳಿದ್ದಾನೆ, ಅವನು ಬರುವುದಿಲ್ಲ, ಆದರೆ ನಾಳೆ ಖಂಡಿತ ಬರುತ್ತಾನೆ.
ಎರಡನೆಯ ಅಂಕ ಮರುದಿನ ಸುರುವಾಗುವುದು. ಆಗಲೂ ದೀದಿ ಮತ್ತು ಗೋಗೋ ಗೋಡೋವಿಗಾಗಿ ಕಾಯುತ್ತ ಇರುತ್ತಾರೆ. ಎರಡನೆಯ ಅಂಕದ ಕೊನೆಯಲ್ಲೂ ಅದೇ ಹುಡುಗ ಬರುತ್ತಾನೆ. ಅದೇ ಸಂದೇಶ ನೀಡುತ್ತಾನೆ. ಗೋಡೋ ನಾಳೆ ಖಂಡಿತಾ ಬರುತ್ತಾನೆ ಎನ್ನುತ್ತಾನೆ. ಆದರೆ ನಿನ್ನೆ ತಾನು ಬಂದಿರಲಿಲ್ಲ ಎನ್ನುತ್ತಾನೆ. ನಾಳೆಯೂ ಹೀಗಾಗಬಹುದು ತಾನೆ? ನಾಟಕ ಅಲ್ಲಿಗೆ ಮುಗಿಯುತ್ತದೆ.
ಎರಡು ಮಹಾಯುದ್ಧಗಳ ಆಚೀಚಿನ ಕಾಲದಲ್ಲಿ ಯುರೋಪಿನಲ್ಲಿ, ಮುಖ್ಯವಾಗಿ ಫ್ರಾನ್ಸಿನಲ್ಲಿ ಪ್ರಚಾರಕ್ಕೆ ಬಂದ ಅಸ್ತಿತ್ವವಾದ ಮತ್ತು ಅದರದೇ ಒಂದು ಪರಿಣಾಮದಂತಿದ್ದ ಅಸಂಗತವಾದದ ಹಿನ್ನೆಲೆಯಲ್ಲಿ ಮೂಡಿಬಂದ ನಾಟಕ ಇದು. ದೈವೋತ್ತರ ಯುಗದಲ್ಲಿ ಮನುಷ್ಯನ ಜೀವನಕ್ಕೆ ಅರ್ಥವೇನು ಎಂಬ ಮೂಲಭೂತ ಪ್ರಶ್ನೆಯನ್ನು ಕೇಳುತ್ತದೆ. ದೇವರಿಲ್ಲದ ಮೇಲೆ ಮನುಷ್ಯ ಸರ್ವತಂತ್ರ ಸ್ವತಂತ್ರನಾಗುತ್ತಾನೆ. ಜಾನ್-ಪಾಲ್ ಸಾತೃìವಿನ (Jean-Paul Sartre) ಮಾತಿನಲ್ಲಿ ಹೇಳುವುದಾದರೆ, ಸ್ವಾತಂತ್ರ್ಯಕ್ಕೆ ಮನುಷ್ಯ “ಬದ್ಧ’ನಾಗುತ್ತಾನೆ. ಇದೊಂದು ವಿರೋಧಾಭಾಸವೇ ಸರಿ! ಮನುಷ್ಯನು ಸಂಪೂರ್ಣ ಸ್ವತಂತ್ರ ಎಂದ ಮೇಲೆ ಇನ್ನು ಬದ್ಧನಾಗಿರುವುದು ಎಂದರೇನು ಎನ್ನಬಹುದು. ಆದರೆ ಮನುಷ್ಯನ ಅಸ್ತಿತ್ವ ಹಾಗಿದೆ. ಈ ಸ್ವಾತಂತ್ರ್ಯ ನೀಡುವ ಆಯ್ಕೆಗಳನ್ನು ಚುನಾಯಿಸುವ ಮೂಲಕವೇ ಅವನಿಗೆ ನಿಜವಾದ ಅಸ್ತಿತ್ವ ಬರುವುದು. ಆದರೆ ಇಲ್ಲಿ ಬರುವ ಕಠೊರ ಪ್ರಶ್ನೆಯೆಂದರೆ, ಯಾವುದರ ಆಧಾರದ ಮೇಲೆ ಆತ ಆಯ್ಕೆಗಳನ್ನು ಮಾಡಿಕೊಳ್ಳಬೇಕು ಎನ್ನುವುದು. ದತ್ತವಾದ ಯಾವ ಮೌಲ್ಯಗಳೂ ಇಲ್ಲವಲ್ಲ! ಬದುಕುವುದಕ್ಕಿರುವಷ್ಟೇ ಕಾರಣ ಆತ್ಮಹತ್ಯೆಗೂ ಇದೆ. ಇದು ಮನುಷ್ಯನನ್ನು ಅತಂತ್ರವಾಗಿಯೂ ಅನಾಥವಾಗಿಯೂ ಮಾಡಿದೆ. ಅಲ್ಬರ್ಟ್ ಕಮೂ (ಅlಚಿಛಿrಠಿ ಇಚಞus) ಇಂಥ ಬದುಕನ್ನು “ಸಿಸಿಫಸನ ಅವಸ್ಥೆ’ ಎಂಬ ರೂಪಕದ ಮೂಲಕ ಚಿತ್ರಿಸುತ್ತಾನೆ: ಮನುಷ್ಯರಿಗೋಸ್ಕರ ಬೆಂಕಿಯನ್ನು ಕದ್ದು ಕೊಟ್ಟ ದೈತ್ಯ ಸಿಸಿಫಸ್‌ಗೆ ದೇವರು ನೀಡುವ ಶಿಕ್ಷೆಯೆಂದರೆ ದೊಡ್ಡ ಬಂಡೆ ಕಲ್ಲನ್ನು ಬೆಟ್ಟದ ಮೇಲಕ್ಕೆ ಒಯ್ಯವುದು, ಅಲ್ಲಿಂದ ಉರುಳಿಸುವುದು, ಮತ್ತೆ ಪುನಃ ಮೇಲಕ್ಕೆ ಒಯ್ಯುವುದು, ಉರುಳಿಸುವುದು. ಮನುಷ್ಯನಿಗಾದರೆ ಸಾವಾದರೂ ಇದೆ ಎನ್ನಬಹುದು; ಆದರೆ ಸಾವೇ ಪರಿಹಾರವಾದರೆ, ಅದನ್ನು ಖುದ್ದಾಗಿ ಯಾಕೆ ಮಾಡಿಕೊಳ್ಳಬಾರದು? ಆ ಮೂಲಕ ನಿರರ್ಥಕ ಬದುಕನ್ನು ನಿಲ್ಲಿಸಬಹುದು. ಮನುಷ್ಯನ ಮಟ್ಟಿಗೆ ಈ ಸಾವು ಎನ್ನುವುದೇ ಬದುಕಿನ ನಿರರ್ಥಕತೆ ಮತ್ತು ತನ್ಮೂಲಕದ ಯಾಂತ್ರಿಕತೆಯ ಕಾರಣವೂ ಆಗಿದೆ. ಸಾವೆಂದರೆ ಕಂಪ್ಯೂಟರ್ “ಹಂಗ್’ (ತಟಸ್ಥ) ಆದ ಹಾಗೆ ! ಆದ್ದರಿಂದ ಅಲ್ಲಿಯೂ ಪರಿಹಾರವಿಲ್ಲ. ಹೀಗೆ ನಿರರ್ಥಕವೆಂದು ತಿಳಿದೂ ಮನುಷ್ಯ ಬದುಕುತ್ತಿದ್ದಾನಲ್ಲ, ಅದುವೇ ಅವನ “ಗ್ಲೋರಿ’ ಎನ್ನುತ್ತಾನೆ ಕಮೂ. ಸಂಪೂರ್ಣ ನಕಾರಾತ್ಮಕವಾದ ಈ ಫಿಲಾಸಫಿಯಲ್ಲಿ ಇಂಥ ಮಾತು ಸ್ವಲ್ಪ ಸಾಂತ್ವನ ಕೊಡುವಂಥದು.
ಕೆ. ವಿ. ತಿರುಮಲೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.