ನಾದದ ನದಿಯೊಂದು


Team Udayavani, Mar 31, 2019, 6:00 AM IST

NADA

ಈಗ ಕೆಲವು ವರ್ಷಗಳಿಂದ ಸರಯೂ ನದಿಯ ತೀರದಲ್ಲೇ ಊರ್ಮಿಳೆ ಒಂದು ಸಣ್ಣ ಪರ್ಣಕುಟಿಯನ್ನು ನಿರ್ಮಿಸಿಕೊಂಡು, ಸನ್ಯಾಸಿನಿಯಂತೆ ವಾಸವಾಗಿದ್ದಳು. ರಾಮಚಂದ್ರನ ಆಜ್ಞೆ , ಲಕ್ಷ್ಮಣನ ಅಪೇಕ್ಷೆ : ದಿನವೂ ಅವಳಿಗೆ ಅರಮನೆಯಿಂದಲೇ ಊಟ ತರುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ, ಅವಳ ನಿತ್ಯ ಪೂಜೆಗೆ ಹೂಗಳನ್ನು, ನೈವೇದ್ಯಕ್ಕೆ ಹಣ್ಣುಗಳನ್ನು ಸಹ ಅರಮನೆಯ ಉದ್ಯಾನದಿಂದಲೇ ಕಳುಹಿಸಲಾಗುತ್ತಿತ್ತು. ಅವನ್ನು ತರುವ ಪರಿಚಾರಕಿಯರೊಡನೆ ಒಂದೆರಡು ಮಾತಾಡಿ ಊರ್ಮಿಳೆ ಅರಮನೆಯ ಸಮಾಚಾರವನ್ನು ತಿಳಿದುಕೊಳ್ಳುತ್ತಿದ್ದಳು.

ಹಾಗೆ ಅಲ್ಲವೆ, ಅವಳ ಅತ್ತೆ ಸುಮಿತ್ರೆ ತೀರಿಹೋದ ಸುದ್ದಿ ತಿಳಿದದ್ದು ! ಅರಮನೆಗೆ ಹೋಗಿ ತಾಯಿಯಂಥ ಆ ಮಹಾತಾಯಿಯನ್ನು ನೋಡುವ ಮನಸ್ಸಾದರೂ, ಊರ್ಮಿಳೆ ತಡೆದಿದ್ದಳು. ಆದರೆ, ಅವರ ನೆನಪಿನಲ್ಲಿ, ಹದಿಮೂರು ದಿನಗಳ ಕಾಲ ಕೇವಲ ಒಂದು ಹೊತ್ತು ಊಟ ಮಾಡಿದ್ದಳು. ಊರ್ಮಿಳೆ ಅರಮನೆಯನ್ನು ತೊರೆದೂ ತೊರೆಯದವಳಾಗಿದ್ದಳು.

ಅಂದು ಬೆಳಗ್ಗೆ ಅದೇಕೋ ಊರ್ಮಿಳೆಗೆ ಹೇಳಲಾರದ ತಳಮಳ. ಏನೇನೋ ಅಪಶಕುನಗಳು. ಧ್ಯಾನಕ್ಕೆ ಕುಳಿತರೂ ಮನಸ್ಸು ಒಂದೆಡೆ ನಿಲ್ಲದು. ಅದೇ ಹಳೆಯ ನೆನಪುಗಳು. ಎಂದೂ ಇಲ್ಲದೆ, ಇಂದೇಕೆ ಒತ್ತರಿಸಿ ಬರುತ್ತಿದ್ದವೋ? ಧ್ಯಾನ, ಪೂಜೆಗಳನ್ನು ಬಿಟ್ಟು ಊರ್ಮಿಳೆ ತನ್ನ ಬದುಕನ್ನು ಅವಲೋಕಿಸುತ್ತ ಕುಳಿತಳು.

ಬಾಲ್ಯದ ನೆನಪುಗಳು ಮಸುಕಾಗುವಷ್ಟು ವಯಸ್ಸಾಗಿತ್ತು ಅವಳಿಗೆ. ಅದೂ ಅಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೇ, ಅಕ್ಕ ಸೀತೆಯೊಡನೆ ಅವಳಿಗೂ, ತನ್ನ ಚಿಕ್ಕಪ್ಪನ ಮಕ್ಕಳಿಗೂ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದರು. “ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಇನ್ನು ನಿಮ್ಮ ಸುಖಕ್ಕೆ ಎಣೆಯುಂಟೆ?’ ಎಂದು ಗೆಳತಿಯರು ಹೇಳುವಾಗ ಇವಳಿಗೂ ರೋಮಾಂಚನವಾಗಿತ್ತು. ಲಕ್ಷ್ಮಣನನ್ನು ಕಂಡ ಕೂಡಲೇ ಮನಸೋತಿದ್ದಳು. ಲಕ್ಷ್ಮಣನೇನೋ ಸು#ರದ್ರೂಪಿಯೇ. ಆದರೆ, ಅವಳಾಗಿಯೇ ಮರುಳಾದಳ್ಳೋ ಅಥವಾ ಅವಳ ಗೆಳತಿಯರ ಮಾತು ಕೇಳಿ ಹಾಗಾಯಿತೋ ಎಂದು ಊರ್ಮಿಳೆಗೆ ಅಂದಿಗೂ ತಿಳಿದಿರಲಿಲ್ಲ. ಇಂದಿಗೂ ತಿಳಿದಿಲ್ಲ. ಅದಕ್ಕೇ ಇರಬೇಕು, ಮನಸ್ಸು ಮರ್ಕಟ ಎಂದು ತಿಳಿದವರು ಹೇಳುವುದು.

ತವರಿಗೆ ವಿದಾಯ ಹೇಳಿದಾಗಲೂ ಅವಳಿಗೆ ಹೆಚ್ಚು ದುಃಖವಾಗಿರಲಿಲ್ಲ. ಏಕೆಂದರೆ, ಅವಳ ಅಕ್ಕ ಸೀತೆ, ಮಾಂಡವಿ, ಶ್ರುತಕೀರ್ತಿಯರೆಲ್ಲರೂ ಮೊದಲಿನಂತೆ ಈಗಲೂ ಜೊತೆಯಲ್ಲಿರುವರು. ಅಲ್ಲದೆ, ತಂದೆಯಂತೇ ಪ್ರೀತಿಯಿಂದ ಕಾಣುವ ಮಹಾರಾಜ ದಶರಥ; ಮೂರು ಜನ ಅತ್ತೆಯರೂ ಕೂಡ ಅಕ್ಕರೆಯಿಂದಲೇ ಕಾಣುವರು. ಹೊಸದಾಂಪತ್ಯ. ಲಕ್ಷ್ಮಣನೂ ಅವಳನ್ನು ಅತ್ಯಂತ ಪ್ರೀತಿ-ಪ್ರೇಮಗಳಿಂದ ಕಾಣುತ್ತಿದ್ದ. ಅವಳ ಗೆಳತಿಯರ ಮಾತಿನಲ್ಲಿ ನಿಜವಿತ್ತು. ಲಕ್ಷ್ಮಣನಿಗೆ ಮುಂಗೋಪ ಹೆಚ್ಚು ಎನ್ನುವುದೊಂದನ್ನು ಬಿಟ್ಟರೆ, ಅಯೋಧ್ಯೆಯಲ್ಲಿ ಅವಳಿಗೆ ಯಾವ ತೊಂದರೆಯೂ ಇದ್ದಂತಿರಲಿಲ್ಲ. ರಾಜ್ಯವನ್ನು ಭಾಗ ಮಾಡಿ ತಮ್ಮ ಪಾಡಿಗೆ ತಾವು ಹೋಗಬೇಕೆಂದು ಊರ್ಮಿಳೆಗೆ ಎಂದೂ ಅನಿಸಿರಲಿಲ್ಲ. ಅನಿಸಿದ್ದರೂ ಅದು ಸಾಧ್ಯವಿಲ್ಲ ಎಂಬುದನ್ನು ಲಕ್ಷ್ಮಣನಲ್ಲಿ ರಾಮನ ಬಗ್ಗೆ ಇದ್ದ ಭಕ್ತಿ-ಗೌರವಗಳನ್ನು ಕಂಡು ಅರಿತಿದ್ದಳು.
ಆ ಸುಖ-ಸಂತೋಷಗಳೆಲ್ಲ ಕೆಲವು ವರ್ಷಗಳು ಮಾತ್ರ. ವನವಾಸ ಒದಗಿದ್ದು ಭಾವ ರಾಮನಿಗೆ.

ಮೂರಾಬಟ್ಟೆಯಾಗಿದ್ದು ಮಾತ್ರ ಊರ್ಮಿಳೆಯ ಬದುಕು. ರಾಮ ಕಾಡಿಗೆ ಹೊರಟು ನಿಂತಾಗ, ಅಕ್ಕ ಸೀತೆಯೂ ಹೊರಟಳು. ರಾಮನಿಲ್ಲೆಡೆ ಲಕ್ಷ್ಮಣ. ಅವನೊಂದಿಗೆ ತಾನು ಎಂದು ಊರ್ಮಿಳೆಯೂ ಸಿದ್ಧವಾದಳು. ಅಂದು ಅಂತಃಪುರದಲ್ಲೆಲ್ಲ ಬಿಗುವಿನ ವಾತಾವರಣ ಮೂಡಿದ್ದು ಊರ್ಮಿಳೆಗೆ ಇನ್ನೂ ನೆನಪಿದೆ. ಸಖೀಯರ ನಡುವೆ ಗುಸುಗುಸು ಮಾತು. ಇವಳು ಕರೆದು ಕೇಳಿದ್ದಳು. ರಾಮ ಕಾಡಿಗೆ ಹೊರಟಿರುವುದನ್ನು ಕೇಳಿ ಲಕ್ಷ್ಮಣ, ಮಹಾರಾಜ ದಶರಥ- ಕೈಕೇಯಿಯರನ್ನು ತೀರಿಸಲು ಹೊರಟನಂತೆ! ರಾಮ ಅವನನ್ನು ತಡೆದು ತಿಳುವಳಿಕೆ ಹೇಳಿದನಂತೆ. ಬುದ್ಧಿ ಸ್ಥಿಮಿತಕ್ಕೆ ಬಂದ ಮೇಲೆ ತನ್ನ ನಿರ್ಧಾರಕ್ಕೆ ಹೇಸಿ, ಲಕ್ಷ್ಮಣ ತನ್ನ ತಲೆಯನ್ನೇ ಕಡಿದುಕೊಳ್ಳಲು ಮುಂದಾದನಂತೆ. ಆಗಲೂ ರಾಮ ತಡೆದು ಸಮಚಿತ್ತತೆಯನ್ನು ಬೋಧಿಸಿದನಂತೆ. ಈ ಅಂತೆಕಂತೆಗಳ ನಡುವೆ ಊರ್ಮಿಳೆ ಬೆಚ್ಚಿ , ತನ್ನ ಇಷ್ಟದೇವರುಗಳನ್ನೆಲ್ಲ ಪ್ರಾರ್ಥಿಸಿದ್ದಳು.

ಬಿರುಸಿನಲ್ಲೇ ಅಂತಃಪುರಕ್ಕೆ ಬಂದ ಲಕ್ಷ್ಮಣನಿಗೆ ನಯವಾಗಿ, ಅವರೊಂದಿಗೆ ತಾನೂ ವನವಾಸಕ್ಕೆ ಬರುತ್ತೇನೆ ಎಂದು ಊರ್ಮಿಳೆ ಕೇಳಿಕೊಂಡಳು. ಆದರೆ ಲಕ್ಷ್ಮಣ ಒಪ್ಪದೇ, ಅತ್ತೆ-ಮಾವನನ್ನು ನೋಡಿಕೊಳ್ಳುವ ಜವಾಬುದಾರಿ ಅವಳೆಂದು ಖಡಾಖಂಡಿತವಾಗಿ ನುಡಿದುಬಿಟ್ಟ. ಅವನ ಮುಂಗೋಪಕ್ಕೆ ಹೆದರಿ, ಊರ್ಮಿಳೆ ಮರುಮಾತಾಡುವ ಧೈರ್ಯ ಮಾಡದೆ, ಗಂಟಲಲ್ಲೇ ತನ್ನ ಮಾತುಗಳನ್ನು, ಹೃದಯದಲ್ಲಿ ತನ್ನ ಭಯ-ಪ್ರೀತಿಗಳನ್ನು ಅದುಮಿಟ್ಟುಕೊಂಡಳು. ಇವರ ಈ ನಿರ್ಧಾರವನ್ನು ತಿಳಿದ ಗುರು ವಸಿಷ್ಠರು ಲಕ್ಷ್ಮಣ ಕಾಡಿಗೆ ಹೊರಡುವ ಮೊದಲು ಇಬ್ಬರನ್ನೂ ತಮ್ಮ ಆಶ್ರಮಕ್ಕೆ ಕರೆದು, ಗೌಪ್ಯವಾಗಿ ಮಂತ್ರವೊಂದನ್ನು ಬೋಧಿಸಿದ್ದರು. ಆ ಮಂತ್ರದ ಪ್ರಭಾವದಿಂದ ನಡುವೆ ಹದಿನಾಲ್ಕು ವರ್ಷಗಳೇ ಸಾಗಿದರೂ, ಇಬ್ಬರಿಗೂ ಒಂದಿನಿತೂ ವಯಸ್ಸಾಗುವುದಿಲ್ಲ ಎಂದು ವಸಿಷ್ಠರು ಆಶ್ವಾಸನೆ ನೀಡಿದ್ದರು. ಸಂಸಾರದ, ರಾಜ್ಯದ ಸುಖಭೋಗಗಳನ್ನು ಕೂಡಿ ಅನುಭವಿಸಬೇಕಾದ ವಯಸ್ಸಿನಲ್ಲಿ ಈ ಅಗಲಿಕೆ ಒದಗಿತಲ್ಲ ಎಂದು ತಾಯಿ ಅರುಂಧತಿ ಇವಳಿಗೆ ಕುಂಕುಮಕೊಟ್ಟು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದರು.

ರಾಮ-ಸೀತೆಯರೊಂದಿಗೆ ಲಕ್ಷ್ಮಣ ಕಾಡಿಗೆ ಹೊರಟರೆ, ಇತ್ತ ಊರ್ಮಿಳೆಯ ವನವಾಸ ಆರಂಭವಾಯಿತು. ಕೆಲವೇ ದಿನಗಳಲ್ಲಿ ದಶರಥ ಮಹಾರಾಜ ತೀರಿಕೊಂಡ. ನಂತರದ ದಿನಗಳಲ್ಲಿ ಗುರು ವಸಿಷ್ಠರು ತಾಯಿ ಕೌಸಲೆ-ಸುಮಿತ್ರೆಯರಿಗೆ ಪ್ರವಚನ ನೀಡಲು ಆಗಾಗ ಬರುತ್ತಿದ್ದರು. ಕೈಕೇಯಿ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ, ರಾಮ ಬರುವವರೆಗೂ ಊರ ಹೊರಗಡೆ ವಾಸವಾಗಿರಲು ನಿರ್ಧರಿಸಿದ್ದಳು. ಊರ್ಮಿಳೆಯೂ ಸಹ ತನ್ನ ಅತ್ತೆಯೊಂದಿಗೆ ಆ ಪ್ರವಚನಗಳನ್ನು ಕೇಳುತ್ತಿದ್ದಳು. ಅದರ ಪ್ರಭಾವವೋ? ಅಥವಾ ಆ ಮಂತ್ರದ ಪರಿಣಾಮವೋ? ದೇಹಕ್ಕೆ ಮುಪ್ಪು ಬಾರದಿದ್ದರೂ ಊರ್ಮಿಳೆಯ ಆಸೆ, ಆಕಾಂಕ್ಷೆ, ಕನಸು, ಕಾಮನೆಗಳೆಲ್ಲ ಹಿಂಬದಿಗೆ ಸರಿದವು. ಅರಮನೆಯಲ್ಲೇ ಇದ್ದು ಎಲ್ಲವನ್ನು ತೊರೆದವಳಂತಾಗಿದ್ದಳು.

ಆ ಹದಿನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಅವಳಿಗೆ ಲಕ್ಷ್ಮಣನನ್ನು ಕಾಣಬೇಕೆಂದೆನಿಸಿರಲಿಲ್ಲ. ವನವಾಸ ಮುಗಿಸಿ ಅವರೆಲ್ಲ ಅಯೋಧ್ಯೆಗೆ ವಿಜಯಿಗಳಾಗಿ ಬರುತ್ತಿದ್ದಾರೆ ಎಂದು ನಗರಕ್ಕೆ ನಗರವೇ ಸಂಭ್ರಮಿಸು ತ್ತಿರುವಾಗಲೂ ಊರ್ಮಿಳೆ ಉದ್ರೇಕಕ್ಕೆ ಒಳಗಾಗಲಿಲ್ಲ. ಲಕ್ಷ್ಮಣನ ಆಗಮನದ ನಿರೀಕ್ಷೆಯಲ್ಲಿ ಅಂತಃಪುರವನ್ನು ಸಖೀಯರು ಸಿಂಗರಿಸುವಾಗ ತನಗೆ ಸಂಬಂಧವಿಲ್ಲದವಳಂತೆ ಊರ್ಮಿಳೆ ಕಿಟಕಿಯಿಂದ ಹೊರನೋಡುತ್ತಿದ್ದಳು. ಅವಳಿಗೆ ಅಲಂಕಾರ ಮಾಡುವಾಗಲೂ ಕೂಡ, ಯಾಂತ್ರಿಕವಾಗಿ ತನ್ನ ಸಖೀಯರೊಂದಿಗೆ ಸಹಕರಿಸಿದ್ದಳು. ಲಕ್ಷ್ಮಣನನ್ನು ಸ್ವಾಗತಿಸುವಾಗ, ಆರತಿಯ ಬೆಳಕನ್ನು ಹೀರುವಷ್ಟು ನಿಸ್ತೇಜ ಕಣ್ಣುಗಳಿಂದ ಆರತಿ ಬೆಳಗಿದ್ದಳು.

ಇವರನ್ನು ಏಕಾಂತವಾಗಿ ಬಿಟ್ಟು ಸಖೀಯರೆಲ್ಲ ತೆರಳಿದ ಮೇಲೆ, ಲಕ್ಷ್ಮಣ ಅವಳ ಕೈಗಳನ್ನು ಮೃದುವಾಗಿ ಹಿಡಿದು, ಪ್ರೀತಿಯಿಂದ “ಹೇಗಿದ್ದೀಯೆ ಊರ್ಮಿಳೆ?’ ಎಂದು ಕೇಳಿದ್ದ. ಯುದ್ಧದ ಗಾಯಗಳಿಂದ ಇನ್ನೂ ಮೋಹಕವಾಗಿ ಕಾಣುತ್ತಿದ್ದ ಅವನ ದೇಹದ ಮೇಲೆ ನಿರ್ಭಾವುಕವಾಗಿ ಕಣ್ಣಾಡಿಸಿದ ಊರ್ಮಿಳೆ, ತನ್ನ ಕೈಯನ್ನು ಅವನ ಕೈಯಿಂದ ಬಿಡಿಸಿಕೊಳ್ಳದೆ, “ಸದ್ಯ, ನಿಮ್ಮಣ್ಣನಂತೆ ನೀವೂ ಸಹ ನಿಮ್ಮ ಹೆಂಡತಿಯನ್ನು ಅಗ್ನಿಪರೀಕ್ಷೆಗೆ ತಳ್ಳಲಿಲ್ಲವಲ್ಲ’ ಎಂದಷ್ಟೇ ನುಡಿದಿದ್ದಳು. ಲಕ್ಷ್ಮಣನ ಕೋಪಕ್ಕೆ, ಬಿರುಸಿಗೆ, ಅಷ್ಟೇ ಏಕೆ, ಕೋಪಗೊಂಡು ಹೊಡೆದರೆ ಅದಕ್ಕೂ ಊರ್ಮಿಳೆ ತಯಾರಾಗಿದ್ದಳು. ಅವನು ಹೊಡೆದಿದ್ದರೆ ಪ್ರಾಯಶಃ ಒಳ್ಳೆಯದೇ ಆಗಿರುತ್ತಿತ್ತು. ಆಗಲಾದರೂ, ಅವಳಲ್ಲಿ ಹೆಪ್ಪುಗಟ್ಟಿದ್ದ ಭಾವನೆಗಳು ಕರಗಿ, ನೀರಾಗಿ ಹರಿದು ಮನಸ್ಸು ತಿಳಿಯಾಗುತ್ತಿತ್ತೇನೋ. ಆದರೆ, ಲಕ್ಷ್ಮಣ ಹಾಗೆ ಮಾಡಲಿಲ್ಲ. ಎರಡು ಕ್ಷಣ ಹಾಗೆಯೇ ಅವಳನ್ನು ನೋಡಿ ಹೊರ ನಡೆದುಬಿಟ್ಟ. ಇವಳ ಮೌನ ಅವನನ್ನೂ ಆವರಿಸಿತ್ತು.

ಊರ್ಮಿಳೆಯ ದಾಂಪತ್ಯ ಅಲ್ಲಿಗೇ ಮುಗಿದಿತ್ತು. ಸೀತೆ ಗರ್ಭಿಣಿಯಾದ ನಂತರ ಅವಳ ಆರೈಕೆಗೆಂದು ಊರ್ಮಿಳೆ ಸೀತೆಯ ಅರಮನೆಯಲ್ಲೇ  ವಾಸಿಸತೊಡಗಿದ್ದಳು. ಅವಳ ಸಖ್ಯದಲ್ಲಿ ಊರ್ಮಿಳೆಗೆ ನೆಮ್ಮದಿಯಿತ್ತು. ಸೀತೆಗೂ ಕೂಡ. ಆದರೆ, ಆ ನೆಮ್ಮದಿಯೂ ಹೆಚ್ಚು ಕಾಲ ಲಭ್ಯವಿರಲಿಲ್ಲ. ಯಾವನೋ ಅಗಸನ ಮಾತು ಕೇಳಿ ಭಾವ ರಾಮಚಂದ್ರ ಸೀತೆಯನ್ನು- ಅಂತಹ ಪರಿಸ್ಥಿತಿಯಲ್ಲೂ- ಕಾಡಿಗೆ ಅಟ್ಟಿದ್ದ. ಬಿಟ್ಟುಬಂದವನು ಲಕ್ಷ್ಮಣ. ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಊರ್ಮಿಳೆಗೆ ಅರಮನೆ ಬೇಡವಾಯಿತು. ಸೀತೆಯಿಲ್ಲದ ಅರಮನೆ ಬಂಧನದಂತೆ ಕಾಣತೊಡಗಿತ್ತು. ತನ್ನ ಅತ್ತೆಯಂದಿರಿಗೆ, ಗಂಡನಿಗೆ, ಭಾವ- ಮೈದುನರಿಗೆ, ತಂಗಿಯರಿಗೆ ಹೇಳಿ, ಈಗ ವಾಸವಿರುವ ಪರ್ಣಕುಟಿಗೆ ಬಂದು ನೆಲೆನಿಂತಳು.

ಸುದ್ದಿ ತಿಳಿದ ವಸಿಷ್ಠ – ಅರುಂಧತಿಯರು ಹಳಿತಪ್ಪಿದ ಊರ್ಮಿಳೆಯ ಸಂಸಾರವನ್ನು ಸರಿಮಾಡಲು ಇನ್ನಿಲ್ಲದ ಪ್ರಯತ್ನಪಟ್ಟರು. ಅಲ್ಲದೆ, ವಸಿಷ್ಠರಿಗೆ ಇದು ತಮ್ಮ ಮಂತ್ರ -ಪ್ರವಚನಗಳಿಂದಲೇ ಆದ ಪರಿಣಾಮವೆಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಯಾವ ಸಂಧಾನಕ್ಕೂ ಊರ್ಮಿಳೆ ಒಪ್ಪಲಿಲ್ಲ.

ಹಿರಿಯರೆಂದು ಅವರ ಮಾತುಗಳನ್ನು ಆಲಿಸಿದಳೇ ಹೊರತು, ಅದರಂತೆ ನಡೆಯುವ ಮನಸ್ಸು ಅವಳಲ್ಲಿರಲಿಲ್ಲ. ಒಂಟಿತನಕ್ಕೆ ಒಗ್ಗಿಹೋದ ಅವಳಿಗೆ ಈಗ ಯಾರ ಸಖ್ಯವೂ ಬೇಡವಾಗಿತ್ತು. ಭಾವನೆಗಳೆಲ್ಲ ಬತ್ತಿಹೋಗಿ ಅಪ್ರಾಪ್ತ ವೈರಾಗ್ಯ ಪ್ರಾಪ್ತಿಯಾಗಿತ್ತು.

ಮೊದಮೊದಲು ಪರಿಚಾರಕಿಯರೊಡನೆ ಲಕ್ಷ್ಮಣನೂ ಬರುತ್ತಿದ್ದ. ಇವಳೇ ಭೇಟಿಯಾಗಲು ನಿರಾಕರಿಸಿದ್ದಳು. ಆದರೆ, ಅವನು ಬರುವುದು ನಿಂತಾಗ ಅವನ ದಾರಿ ಕಾದಳು. ಕೆಲವು ದಿನ ಅವನ ಆಗಮನದ ನಿರೀಕ್ಷೆಯೇ ಇವಳ ಸಂಗಾತಿಯಾಗಿತ್ತು. ನಂತರ ಅವನ ನೆನಪಿನ ಸಾಂಗತ್ಯವಿತ್ತು. ಈಗ ಆ ನೆನಪುಗಳೂ ಮಸುಕಾಗಲು ಆರಂಭಿಸಿದ್ದವು. ಈಗಷ್ಟೇ ಕೆಲವು ತಿಂಗಳುಗಳ ಮುಂಚೆ, ಅಕ್ಕ ಸೀತೆಯನ್ನು ಭೂದೇವಿ ತನ್ನಲ್ಲಿಗೆ ಕರೆಸಿಕೊಂಡ ವಿಷಯವನ್ನು ಹೂವು-ಹಣ್ಣುಗಳೊಂದಿಗೆ ಬಂದಿದ್ದ ಗೆಳತಿ ಉಸುರಿದ್ದಳು. “ಅವಳೇ ಭಾಗ್ಯಶಾಲಿ’ ಎಂದು ಊರ್ಮಿಳೆ ನಿಟ್ಟುಸಿರು ಬಿಟ್ಟಿದ್ದಳು.

ತನ್ನ ಜೀವನವನ್ನು ಒಮ್ಮೆ ತಿರುವಿನೋಡಿದಾಗ ಊರ್ಮಿಳೆಗೆ ಲಕ್ಷ್ಮಣನ ಬಗ್ಗೆ ಮರುಕವುಂಟಾಯಿತು. ತನ್ನ ಭಾವನೆಗಳಿಗೆ ಅವನು ಸ್ಪಂದಿಸಲಿಲ್ಲ ಎಂದು ಹೇಳುವುದಕ್ಕೆ ಇವಳು ಎಂದೂ ತನ್ನ ಭಾವನೆಗಳನ್ನು ಬಿಚ್ಚಿ ಹೇಳಿದವಳೇ ಅಲ್ಲ. ಭಾವನೆಗಳ ವಿಚಾರದಲ್ಲಿ ಲಕ್ಷ್ಮಣ ಸ್ವಲ್ಪಮಂದಮತಿಯೇ ಆದರೂ, ಅವ್ಯಕ್ತ ಭಾವನೆಗಳಿಗೆ ಯಾರೇ ಆದರೂ ಹೇಗೆ ತಾನೇ ಸ್ಪಂದಿಸಿಯಾರು? ಎಷ್ಟೋ ವರ್ಷಗಳ ಹಿಂದೆ ವಸಿಷ್ಠ – ಅರುಂಧತಿಯರು ತಿಳಿಹೇಳಿದ್ದ ಮಾತುಗಳು ಇಂದು ಊರ್ಮಿಳೆಗೆ ಪೂರ್ಣವಾಗಿ ಅರ್ಥವಾಗುತ್ತಿತ್ತು. ಇರಲಿ. ಇಂದು ಬರುವ ಸೇವಕರೊಡನೆ ಹೇಳಿಕಳುಹಿಸಿದರಾಯಿತು. ಲಕ್ಷ್ಮಣ ಇಲ್ಲಿಗೆ ಬಂದರೂ ಸರಿಯೇ. ಇಲ್ಲವಾದರೆ, ನಾನೇ ಅರಮನೆಗೆ ಮರಳುತ್ತೇನೆ. ಕಳೆದು ಹೋದ ವರುಷಗಳು ದೊರೆಯದಿದ್ದರೂ, ಇನ್ನುಳಿದ ಬದುಕನ್ನಾದರೂ ಜೊತೆಯಾಗಿಯೇ ಕಳೆಯೋಣ’ ಎಂದು ಪರಿಚಾರಕಿಯ ಆಗಮನದ ನಿರೀಕ್ಷೆಯಲ್ಲಿ ಊರ್ಮಿಳೆ ಕಾದುಕುಳಿತಳು.

ಎಂದಿಗಿಂತ ತಡವಾಗಿ ಬಂದ ಗೆಳತಿಯ ಮುಖ ಮ್ಲಾನವಾಗಿತ್ತು. ಬೆಳಗ್ಗಿನ ಅಪಶಕುನಗಳಿಗೂ ಇವಳ ಚಹರೆಗೂ ಏನೋ ಸಂಬಂಧವಿರುವಂತೆ ಊರ್ಮಿಳೆಗೆ ಅನಿಸಿತು. ನಿಧಾನವಾಗಿ ಗೆಳತಿ ನುಡಿದಳು. ಹಿಂದಿನ ದಿನ ರಾಮಚಂದ್ರ ತನ್ನ ಮಕ್ಕಳಿಗೆ ಪಟ್ಟ ಕಟ್ಟಿ, ಸಂಜೆ ಸರಯೂ ನದಿಯಲ್ಲಿ ಮಿಂದು ಬರಲು ಹೋದವನು ಮರಳಲೇ ಇಲ್ಲವಂತೆ.

ಸರಯೂವಿನಲ್ಲೇ ಮುಳುಗಿದ ಎಂದು ಕೆಲವರು, ಹಿಮಾಲಯದ ಕಡೆ ನಡೆದು ಹೋದ ಎಂದು ಕೆಲವರು, ದಕ್ಷಿಣಾಭಿಮುಖವಾಗಿ ಹೋದ ಎಂದು ಇನ್ನು ಇತರರು ಏನೇನೋ ಚರ್ಚಿಸುತ್ತಿದ್ದರಂತೆ. ಇದನ್ನು ತಿಳಿದ ಲಕ್ಷ್ಮಣ, ತನ್ನ ಜವಾಬುದಾರಿಗಳನ್ನು ಭರತ-ಶತ್ರುಘ್ನರಿಗೆ ವಹಿಸಿ ಇಂದು ಬೆಳಗ್ಗೆ ತಪಸ್ಸಿಗೆ ಹೊರಟುಹೋದನಂತೆ.

ಊರ್ಮಿಳೆ ಶಿಲೆಯಂತೆ ಕೆಲಸಮಯ ಮಾತುಕತೆಯಿಲ್ಲದೆ, ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ ಕುಳಿತಳು. ನಂತರ ಇದ್ದಕ್ಕಿದ್ದಂತೆ ಎದ್ದು, ಉಟ್ಟ ಬಟ್ಟೆಯಲ್ಲಿಯೇ ತನ್ನ ಪರ್ಣಕುಟಿಯನ್ನು ತೊರೆದು ಅಯೋಧ್ಯೆಗೆ ವಿರುದ್ಧ ದಿಕ್ಕಿನಲ್ಲಿ ಸರಯೂ ನದಿಯ ದಂಡೆಯ ಮೇಲೆ ನಡೆಯುತ್ತ, ಒಮ್ಮೆಯೂ ಹಿಂದಿರುಗಿ ನೋಡದೆ, ಹೊರಟುಹೋದಳು. ಅವಳು ಮರಳುವಳೆಂದು ಸಂಜೆಯವರೆಗೂ ಕಾದ ಪರಿಚಾರಕಿಯರು ತಾವು ತಂದಿದ್ದ ಹೂವು ಹಣ್ಣುಗಳನ್ನು ತೆಗೆದುಕೊಂಡು ಮರಳಿ ಅಯೋಧ್ಯೆಗೆ ತೆರಳಿದರು.

– ಅಕ್ಷಯ್‌ ಸಿಂಹ ಕೆ.ಜೆ.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.