ಮಹಾನಗರದ ಬೀದಿಯಲ್ಲಿ ವಿಳಾಸವಿಲ್ಲದವರ ಜೊತೆ


Team Udayavani, Feb 9, 2020, 12:54 PM IST

edition-tdy-4

ಸಾಂಧರ್ಬಿಕ ಚಿತ್ರ

ಕಳೆದ ತಿಂಗಳು ಡೊಂಬಿವಲಿ ರೈಲ್ವೆ ಸ್ಟೇಷನ್ನಿನ ಪಕ್ಕದ ಬೀದಿಯಲ್ಲಿ ಏಳರ ಹರೆಯದ ಪುಟ್ಟ ಹುಡುಗಿ ಹಗ್ಗದ ಮೇಲೆ ಸಲೀಸಾಗಿ ನಡೆಯುತ್ತ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಳು. ಅವಳ ತಲೆಯ ಮೇಲೆ ಪ್ಲಾಸ್ಟಿಕ್‌ ಹೂವಿನ ಕುಂಡವನ್ನು ಇರಿಸಲಾಗಿತ್ತು. ಎರಡು ಕೈಯಲ್ಲಿ ಉದ್ದಗಿನ ಕೋಲನ್ನು ಅಡ್ಡವಾಗಿ ಹಿಡಿದುಕೊಂಡು ಮೊದಲು ಬರಿಗಾಲಿನಲ್ಲಿ ಹಗ್ಗದ ಮೇಲೆ ನಡೆದಳು.

ಆನಂತರ ಒಂದು ಕಾಲಿಗೆ ಚಪ್ಪಲಿ ಹಾಕಿಕೊಂಡು ಇನ್ನೊಂದು ಪಾದದಡಿ ಅಲ್ಯುಮಿನಿಯಂ ತಟ್ಟೆಯನ್ನಿರಿಸಿಕೊಂಡು ಎರಡು ಸುತ್ತು ಹೆಜ್ಜೆ ಇಟ್ಟಳು. ಮೂರನೆಯ ಸಲ ಕಣ್ಣಿಗೆ ಕಪ್ಪು ಕನ್ನಡಕ ಇಟ್ಟುಕೊಂಡಳು. ಕೊನೆಗೆ ಒಂದು ಕಬ್ಬಿಣದ ಚಕ್ರದೊಳಗಡೆ ತನ್ನೆರಡು ಪಾದಗಳನ್ನಿರಿಸಿ ಹಗ್ಗದ ಮೇಲೆ ಈ ಮೂಲೆಯಿಂದ ಆ ಮೂಲೆಯವರೆಗೆ ತಿರುಗಿಸಿದಳು. ಒಮ್ಮೆ ನಾಯಕ್‌ ನಹೀ ಕಲ್‌ ನಾಯಕ್‌  ಹ್ಞೂ ಮೆ ಮತ್ತೂಮ್ಮೆ ಮೆ ತೆರಿ ದುಷ್ಮನ್‌, ದುಷ್ಮನ್‌ ತೂ ಮೆರ, ಮೇ ತೋ ನಾಗಿನ್‌… ಹೀಗೆ ಟೇಪ್‌ರೆಕಾರ್ಡರ್‌ನಲ್ಲಿ ಹಾಡುಗಳು ಬದಲಾಗುತ್ತಲೇ ಇದ್ದವು. ಅಲ್ಲಿ ನಿಂತು ನೋಡುತ್ತಿದ್ದ ಕೆಲವರು ಅವಳತ್ತ ಹತ್ತು ರೂಪಾಯಿಯ ನೋಟುಗಳನ್ನು ಚಾಚುತ್ತಿದ್ದರು. ಆಯತಪ್ಪಿ ಬಿದ್ದು ಬಿಡುತ್ತಾಳ್ಳೋ ಎಂದು ನಾನು ಅವಳನ್ನೇ ಆತಂಕದಿಂದ ನೋಡುತ್ತಿದ್ದೆ. ಆದರೆ, ಅವಳು ನೋಟುಗಳನ್ನು ಸ್ವೀಕರಿಸುತ್ತಲೇ ಮುಂದೆ ಹೆಜ್ಜೆಯಿಡುತ್ತಿದ್ದಳು. ಸುಮಾರು ಅರ್ಧ ತಾಸಿನ ನಂತರ ಆ ಹುಡುಗಿ ಕೆಳಗಡೆ ಇಳಿದು ಬಂದಳು.

ಅಲ್ಲಿ ನೆಲದ ಮೇಲೆ ತುಂಡುಬಟ್ಟೆ ಹಾಸಿರುವಲ್ಲಿ ಇಪ್ಪತ್ತು ರೂಪಾಯಿ ಹಾಕಿ ನಾನು ಮುಂದೆ ನಡೆದೆ. ಆದರೆ, ಅವಳನ್ನು ಮಾತನಾಡಿಸುವ ಮನಸ್ಸಾಯಿತು. ಮತ್ತೆ ಹಿಂತಿರುಗಿ ಬಂದೆ. ಆ ಹುಡುಗಿ ತಟ್ಟೆ ಹಿಡಿದುಕೊಂಡು ಅಲ್ಲೆ ಎದುರುಗಿರುವ ಅಂಗಡಿ ಮುಂದೆ ನಿಂತಿದ್ದಳು. “ಅಷ್ಟು ಹೊತ್ತು ಹಗ್ಗದ ಮೇಲೆ ನಡೆದಿಯಲ್ಲಾ ಸುಸ್ತಾಗಿಲ್ಲವೆ?’ ಎಂದು ಕೇಳಿದೆ. ಅವಳು ಏನೂ ಉತ್ತರಿಸಲಿಲ್ಲ. ಬಾಡಿಹೋಗಿರುವ ಮುದ್ದುಮುಖದಲ್ಲಿರುವ ಪುಟ್ಟ ಕಂಗಳು ನನ್ನ ಹೆಗಲಲ್ಲಿ ಜೋತು ಬಿದ್ದಿರುವ ಬ್ಯಾಗಿನತ್ತಲೇ ದೃಷ್ಟಿ ನೆಟ್ಟಿತ್ತು. ಮತ್ತೆ ಇಪ್ಪತ್ತು ರೂಪಾಯಿ ಕೊಟ್ಟಾಗ ಹುಡುಗಿಯ ಗಮನ ನನ್ನತ್ತ ಹರಿಯಿತು. ನಾನು ಕೇಳಿದಕ್ಕೆಲ್ಲ ಉತ್ತರಿಸಲಾರಂಭಿಸಿದಳು. ಅಲ್ಲೇ ಪಕ್ಕದಲ್ಲಿದ್ದ ಅವಳ ಅಪ್ಪ-ಅಮ್ಮನನ್ನೂ ತೋರಿಸಿದಳು.

ಅವಳ ಹೆಸರು ಶುಭಾಷಿಣಿ. ಐದು ಮಂದಿ ಮಕ್ಕಳಲ್ಲಿ ಇವಳೇ ಹಿರಿಯವಳು. ಚಿಕ್ಕಂದಿನಿಂದಲೇ ಹಗ್ಗದ ಮೇಲೆ ನಡೆಯುವ ಕಲೆಯನ್ನು ಹೆತ್ತವರು ಹೇಳಿಕೊಟ್ಟಿದ್ದಾರೆ ಏನೂ ಭಯವಿಲ್ಲ ಎಂದು ಹೇಳುವಾಗಲೂ ಅವಳ ಮುಖದಲ್ಲಿ ಗೆಲುವು ಅಥವಾ ಹೆಮ್ಮೆಯಿರಲಿಲ್ಲಿಲ್ಲ. ಒಂದು ರೀತಿಯ ಗಾಂಭೀರ್ಯ ಇತ್ತು. ಹೆತ್ತವರ ಪ್ರೀತಿಯ ನೆರಳಿನಲ್ಲಿ ಹಾಯಾಗಿರಬೇಕಾದ ಎಳೆಯ ಜೀವ. ತನಗರಿವಿಲ್ಲದೆಯೇ ಇಡೀ ಸಂಸಾರಕ್ಕೆ ಆಧಾರವಾಗಿರುವ ಜೊತೆಗೆ ತನ್ನ ಖುಷಿ, ನಗು, ಮಕ್ಕಳಾಟಿಕೆಯನ್ನೆಲ್ಲ ಮರೆತಂತಿತ್ತು.

ಅವಳ ಮುಖದಲ್ಲಿ ಸಣ್ಣ ನಗುವನ್ನೂ ಕಂಡಿಲ್ಲ :  ಹೀಗೆ ಬೀದಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜೀವನೋಪಾಯಕ್ಕಾಗಿ ವ್ಯಾಪಾರಕ್ಕೆ ನಿಂತಿರುವವರಲ್ಲಿ ಮುದಿ ಜೀವಗಳನ್ನು ಕಂಡಾಗ ಮನಸ್ಸು ಆದ್ರಗೊಳ್ಳುತ್ತದೆ. ದೇಹದಲ್ಲಿ ಶಕ್ತಿ ಕುಂದಿ ಮುಖದಲ್ಲಿ ಲವಲವಿಕೆಯ ಕಳೆಯಿಲ್ಲದಿದ್ದರೂ ದುಡಿಮೆಯ ಛಲ ಮಾತ್ರ ಅವರಲ್ಲಿರುತ್ತದೆ. ಡೊಂಬಿವಲಿ ರೈಲ್ವೆ ನಿಲ್ದಾಣದ ಪಕ್ಕದ ಮೆಟ್ಟಿಲಿನ ಬದಿಯಲ್ಲಿ ಎಂಬತೈದರ ಹರೆಯದ ಮೌಶಿ (ವಯಸ್ಸಾದ ಎಲ್ಲರನ್ನೂ ಮೌಶಿ ಎಂದು ಕರೆಯುವುದು ಇಲ್ಲಿನ ಸಂಪ್ರದಾಯ) ಐದಾರು ವರ್ಷದಿಂದ ಹಣ್ಣು ಹಂಪಲುಗಳನ್ನು ಮಾರುತ್ತಿದ್ದಳು. ಅವಳ ಮುಖದಲ್ಲಿ ಒಂದು ಸಣ್ಣ ನಗುವನ್ನೂ ನಾನು ಯಾವತ್ತೂ ಕಂಡಿಲ್ಲ. ಹಣ್ಣು ಕೊಳ್ಳುವವರ ನಡುವೆ ಚೌಕಾಶಿಯೂ ಇಲ್ಲ. ಕೇಳಿದರೆ ಮಾತ್ರ ಹಣ್ಣಿನ ಬೆಲೆಯನುಸುರಿ ಸುಮ್ಮನಾಗುತ್ತಿದ್ದಳು. “ಐದೋ ಹತ್ತೋ ರೂಪಾಯಿ ಕಡಿಮೆ ಮಾಡು’ ಎಂದರೆ ಇಲ್ಲ ಎಂದಷ್ಟೇ ಉತ್ತರ. ಜನವರಿ ತಿಂಗಳಿನಿಂದ ಆಗಸ್ಟ್‌ ತಿಂಗಳವರೆಗೆ ಅವಳು ಹಲಸಿನಹಣ್ಣನ್ನೇ ಹೆಚ್ಚಾಗಿ ಮಾರುತ್ತಿದ್ದಳು. ದೊಡª ದೊಡª ಹಲಸನ್ನು ತುಂಡು ಮಾಡಿ ತಿರುಳನ್ನು ಬೇರ್ಪಡಿಸಿ ಒಪ್ಪವಾಗಿ ಇಡುತ್ತಿದ್ದಳು. ಬಿರುಬಿಸಿಲಿಗೆ ಕೆಂಪೇರಿದ ದುಂಡು ಮುಖ, ಬೆವರಿಗೆ ಒದ್ದೆಯಾದ ಕುಪ್ಪಸ, ಒಂದೇ ಭಂಗಿಯಲ್ಲಿ ಕೂತು ಊದಿಕೊಂಡ ಪಾದಗಳು. ಆದರೆ, ಅದ್ಯಾವುದೂ ಅವಳಿಗೆ ಕ್ಯಾರೇ ಇಲ್ಲ ಅನ್ನುವಂಥ ಭಾವ ಅವಳ ಮುಖದಲ್ಲಿರುತ್ತಿತ್ತು. ನಾಲ್ಕೈದು ತಿಂಗಳ ಹಿಂದೆ ರಸ್ತೆ ಬದಿಯ ಎಲ್ಲ ಅಂಗಡಿಗಳು ನೆಲಸಮವಾಗಿ ಅಗಲವಾದ ರಸ್ತೆ ನಿರ್ಮಾಣವಾಯ್ತು. ಇತರ ಬೀದಿ ವ್ಯಾಪಾರಿಗಳ ಅಂಗಡಿಗಳನ್ನೂ ತೆರವುಗೊಳಿಸಲಾಯಿತು. ಮೌಶಿಯೂ ಮರೆಯಾದಳು. ರೈಲು ನಿಲ್ದಾಣದಲ್ಲಿ ಅವಳಿರುತ್ತಿದ್ದ ಕಡೆಯಿಂದ ಮೆಟ್ಟಿಲೇರಿ ನಡೆವಾಗ ಈಗಲೂ ಮೌಶಿಯ ನೆನಪು ಕಣ್ಮುಂದೆ ಸುಳಿಯುತ್ತದೆ.

ಎಲ್ಲರ ಮನಸ್ಸಿನಲ್ಲಿ ಹೂವಾಗಿ ಅರಳಿದವಳು:  ರಸ್ತೆ ಬದಿಯಲ್ಲಿ ಹಣ್ಣು, ತರಕಾರಿ ಮತ್ತು ಹೂವು ಮಾರುವವರಲ್ಲಿ ಮೌಶಿಯರೇ ಹೆಚ್ಚಾಗಿ ಕಾಣಸಿಗುತ್ತಾರೆ. ಮನೆಯಲ್ಲಿ ನಿತ್ಯ ಹಾಲು ಹಣ್ಣು ತರಕಾರಿಗಳು ಎಷ್ಟು ಅಗತ್ಯವೋ ಹಾಗೆಯೇ ದೇವರ ಪೂಜೆಗೆ ಹೂವು ಅಷ್ಟೇ ಮುಖ್ಯ. ಊರಿನಲ್ಲಾದರೆ ಪ್ರತಿದಿನ ದೇವರ ಪೂಜೆಗೆ ಬೇಕಾದ ಹೂವುಗಳನ್ನು ಮನೆಯಂಗಳದಲ್ಲಿಯೇ ಬೆಳೆಸಲಾಗುತ್ತದೆ. ಆದರೆ, ನಗರದಲ್ಲಿ ಇದು ಸಾಧ್ಯವಾಗದ ಮಾತು. ಇಲ್ಲಿ ರಸ್ತೆಯ ಒಂದೊಂದು ತಿರುವಿನಲ್ಲಿಯೂ ಹೂವಿನಂಗಡಿ ಇರುತ್ತದೆ. ವಿಳಾಸ ಕೊಟ್ಟರೆ ಸಂಜೆಯ ಹೊತ್ತಿಗೆ ನಾವು ಹೇಳಿದಷ್ಟು ಹೂವಿನ ಹಾರ ನಿತ್ಯ ನಮ್ಮ ಮನೆ ಬಾಗಿಲಿಗೆ ಕೊಟ್ಟು ಹೋಗುತ್ತಾರೆ. ತಿಂಗಳಿಗೊಮ್ಮೆ ಹಣ ಸಂದಾಯ ಮಾಡಿದರಾಯ್ತು. ಸುಮಾರು ಹತ್ತು ವರ್ಷದ ಹಿಂದೆ ಅರುವತ್ತು ದಾಟಿದ ಹೆಂಗಸು ನಮ್ಮ ಕಟ್ಟಡದಎದುರಿನ ಬೀದಿಯಲ್ಲಿ ಹೂವು ಮಾರಲು ಬಂದಳು. ಸ್ವಲ್ಪ ಉದ್ದದ ಮರದ ಮೇಜು, ಅದರ ಇಕ್ಕೆಲಗಳಲ್ಲಿ ಎರಡು ಕಂಬಗಳನ್ನು ನೆಟ್ಟು ದಾರಕಟ್ಟಿ, ಹೂವಿನ ಹಾರವನ್ನು ನೇತು ಹಾಕುತ್ತಿದ್ದಳು. ಬಣ್ಣಬಣ್ಣದ ಗೊಂಡೆ, ಸೇವಂತಿ, ಗುಲಾಬಿ ಹೂವುಗಳಿದ್ದರೂ ಅವಳಿಗೆ ಮುಡಿಯುವ ಮನಸ್ಸಿಲ್ಲ. ಹಿಂದೆ ಹಣೆಗೆ ನಿರಂತರ ಸಿಂಧೂರ ಹಚ್ಚಿಕೊಳ್ಳುತ್ತಿದ್ದಿರಬೇಕು. ಗೋದಿ ಬಣ್ಣದ ಅವಳ ಮುಖದಲ್ಲಿ ತಿಳಿ ಬಿಳಿ ಬಣ್ಣದ ದುಂಡಗಿನ ಮಚ್ಚೆ, ಹಣೆಯ ಮಧ್ಯದಲ್ಲಿ ಮಾಸದೆ ಉಳಿದಿತ್ತು.

ಸ್ವಲ್ಪ ದಿನದಲ್ಲಿಯೇ ಸುತ್ತ ಮುತ್ತಲಿನ ಪರಿಸರದಲ್ಲಿರುವ ಎಲ್ಲರ ಜೊತೆಯೂ ಸ್ನೇಹವನ್ನು ಬೆಳೆಸಿಕೊಂಡಳು. ಅಲ್ಲಿ ಹೋಗಿ ಬರುವವರನ್ನೆಲ್ಲ ಕರೆದು ಮಾತನಾಡಿಸುತ್ತ, ಸುಖ ಕಷ್ಟ ವಿಚಾರಿಸುತ್ತಲೇ ರಾಶಿರಾಶಿ ಬಿಡಿ ಹೂವುಗಳೆಲ್ಲ ಹಾರವಾಗುತ್ತಿದ್ದವು. ಆದರೆ ಎಲ್ಲರ ಮನೆ ಬಾಗಿಲಿಗೆ ಹೂವು ತಲುಪಿಸುವ ವ್ಯವಸ್ಥೆ ಅವಳಲ್ಲಿ ಇರಲಿಲ್ಲ. ಅವಳ ಮೇಲಿನ ಅನುಕಂಪವೋ ಏನೋ! ನಿತ್ಯ ಹೋಗಿ ತಂದು ಬರುವುದು ಕಷ್ಟವಾದರೂ ಹೆಚ್ಚಿನವರು ಅವಳಿಂದಲೇ ಹೂವನ್ನು ಖರೀದಿಸಲಾರಂಭಿಸಿದ್ದರು. ನನ್ನ ಮನೆದೇವರಿಗೂ ಅವಳು ನೇಯ್ದ ಹೂವೇ ಖಾಯಂ ಆಯಿತು. ಸಂಜೆ ನಾನು ಹೋಗುವುದು ತಡವಾದರೆ ಅಲ್ಲೇ ಕಂಬದ ಬದಿಯಲ್ಲಿ ಹೂವಿನ ಹಾರವನ್ನು ತೈಲಿಯಲ್ಲಿ ಕಟ್ಟಿ ನೇತಾಡಿಸಿ ಇಡುತ್ತಿದ್ದಳು. ಅವಳಿಗೆ ನನ್ನ ಊರಿನ ಬಗ್ಗೆಯೂ ತಿಳಿಯುವ ಕುತೂಹಲ. “”ನೀನು ಊರಿನಿಂದ ತಂದು ಕೊಟ್ಟ ಬ್ರಾಹ್ಮಿ ಗಿಡ ಗ್ಯಾಲರಿ ತುಂಬ ಹರಡಿದೆ” ಎಂದು ವಾರಕ್ಕೊಮ್ಮೆಯಾದರೂ ಹೇಳದಿದ್ದರೆ ಅವಳಿಗೆ ಸಮಾಧಾನವಿಲ್ಲ. ಆದರೆ, ತನ್ನ ಅಂತರಾಳವನ್ನು ತೆರೆದಿಡುತ್ತಿದ್ದುದು ಅವಳ ಸಮವಯಸ್ಕರಲ್ಲಿ ಮಾತ್ರ. ಬೆನ್ನು ನೋವು, ನಿಂತು, ನಿಂತು ಕೈ ಕಾಲಿನ ಗಂಟು ನೋವು ಅದೆಲ್ಲ ಅವಳಾಡುವ ಮಾತಿನಲ್ಲಿಯೇ ವ್ಯಕ್ತವಾಗುತ್ತಿತ್ತು. ಅದೇನೇ ಆದರೂ ಬಗೆಬಗೆಯ ಕಂಪಿನ ಹೂವಿನೊಂದಿಗೆ ನಿತ್ಯವೂ ತಪ್ಪದೆ ಕಾಣಿಸಿಕೊಳ್ಳುತ್ತಿದ್ದಳು.

ಐದಾರು ತಿಂಗಳಿಗೊಮ್ಮೆ ಊರಿಗೆ ಹೋದರೂ ನಾಲ್ಕೇ ದಿನದಲ್ಲಿ ಮತ್ತೆ ಹಾಜರು. ಕಳೆದ ತಿಂಗಳು ಹೂವಿಗಾಗಿ ಬಂದ ಹೆಂಗಸಿನ ಜೊತೆ ತನ್ನ ಆರೋಗ್ಯದ ಕುರಿತು ಹೇಳಿಕೊಳ್ಳುತ್ತಿದ್ದಳು. ಮಾರನೆಯ ದಿನದಿಂದ ಅವಳು ಹೂವು ಮಾರಲು ಬರಲಿಲ್ಲ. ಅವಳಿರುವಾಗ ಹೂವು ಕಟ್ಟುವ ಅವಸರದಲ್ಲಿ ಕೆಳಗುದುರಿದ ಎಸಳುಗಳು ಕೂಡ ಒಣಗಿ ಬಣ್ಣ ಮಾಸಿತ್ತು. ಹೂವಿಡಲು ಉಪಯೋಗಿಸುತ್ತಿದ್ದ ಮೇಜು ಮತ್ತು ಕಂಬಗಳನ್ನು ಬದಿಗೆ ಸರಿಸಿ ಇಡಲಾಗಿತ್ತು. ಕೆಲವು ದಿನಗಳ ನಂತರವೂ ಅವಳ ಸುಳಿವಿರಲಿಲ್ಲ. ಅಲ್ಲೆ ಪಕ್ಕದಲ್ಲಿ ವಿಚಾರಿಸಿದೆ. ವಾಂತಿ ಬೇಧಿ ಜಾಸ್ತಿಯಯಿತೆಂದು ಆಸ್ಪತ್ರೆಗೆ ಸೇರಿದವಳು ಮತ್ತೆ ಮರಳಿ ಬರಲಿಲ್ಲವೆಂದು ತಿಳಿಯಿತು.

ಸುಮಾರು ಹತ್ತು ವರ್ಷದಿಂದ ಅವಳೆಂದರೆ ನಮ್ಮ ಮನೆಯವಳೇ ಅನ್ನುವಷ್ಟು ಬಾಂಧವ್ಯ ಎಲ್ಲರಲ್ಲಿ ಬೆಳೆದಿತ್ತು. ಈಗ ಅದೇ ಜಾಗದಲ್ಲಿ ಮತ್ತೋರ್ವ ಮೌಶಿ ಅಲ್ಲಿ ಸೊಪ್ಪು ತರಕಾರಿ ಮಾರುತ್ತ ಕೂತಿದ್ದಾಳೆ. ಈ ನಗರಿಯಲ್ಲಿ ತುತ್ತು ಕೂಳಿಗಾಗಿ ಬೀದಿಗೆ ಬರುವವರಲ್ಲಿ ಇಳಿವಯಸ್ಸಿನ ವಿಧವೆಯರೇ ಹೆಚ್ಚು ಕಾಣ ಸಿಗುತ್ತಾರೆ. ನಗರದಲ್ಲಿ ಭಿಕ್ಷೆಗಾಗಿ ಹರಕುಬಟ್ಟೆ, ಮುರುಕು, ತಟ್ಟೆ ಹಿಡಿದುಕೊಂಡವರಲ್ಲಿ ವೃದ್ಧರ ಪಾಲು ಅರ್ಧದಷ್ಟಿದೆ. ಸಡಿಲಗೊಂಡು ಸುಕ್ಕುಗಟ್ಟಿರುವ ದೇಹ ಬಿರುಬಿಸಿಲಿಗೆ ಇನ್ನಷ್ಟು ಸುಟ್ಟುಕೊಳ್ಳುತ್ತಲೇ ಇರುತ್ತದೆ. ಅವರನ್ನು ನೋಡಿದಾಗಲೆಲ್ಲ “ಈ ಜೀವಗಳು ಒಂದಿಷ್ಟಾದರೂ ಸುಖವನ್ನು ಕಂಡಿದೆಯೋ ಇಲ್ಲವೋ!’ ಎಂಬ ಭಾವ ಕಾಡುವುದುಂಟು. “ಹೊಟ್ಟೆಗೆ ಊಟವಿದ್ದರೆ ಅದೇ ಸ್ವರ್ಗ, ಅದೇ ದೇವರು, ಅದೇ ಆಧ್ಯಾತ್ಮ’ ಎನ್ನುವ ಮಾತೊಂದಿದೆ. ಆದರೆ, ಹೊಟ್ಟೆಪಾಡಿಗಾಗಿ ಕೆಲವರಿಗೆ ಎಷ್ಟೆಲ್ಲ ಬವಣೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಭರವಸೆಯಲ್ಲಿ ಬದುಕಿದೆ ಎಂಬ ತತ್ವವನ್ನು ಇವರೆಲ್ಲ ಅರಿತಿರುವರೆಂಬುದು ದಿಟ. ಎಲ್ಲರ ಧ್ಯೇಯ ಒಂದೇ ಆದರೂ ಮಾರ್ಗ ಮಾತ್ರ ಬೇರೆ ಬೇರೆಯಾಗಿರುತ್ತದೆ.

 

-ಅನಿತಾ ಪಿ. ತಾಕೊಡೆ

ಟಾಪ್ ನ್ಯೂಸ್

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.